SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ವಿಶ್ವದಲ್ಲೇ ಪ್ರಥಮ: ದೆಹಲಿ ನಿಲ್ದಾಣದಲ್ಲಿ ವಿಮಾನ ನಿರ್ವಹಣೆಗೆ ರೊಬೊಟಿಕ್ ಟ್ಯಾಕ್ಸಿ ಬೋಟ್

15 robotic taxi bot
ನವದೆಹಲಿ:
 ಪಯಾಣ ಮುಗಿಸಿ ಬಂದ ವಿಮಾನ ಮತ್ತು ಪಯಣ ಹೊರಡಲು ಸಜ್ಜಾಗಿ ರನ್ ವೇಗೆ ತೆರಳುವ ವಿಮಾನಗಳಲ್ಲಿ ಆಗುವ ಇಂಧನ ವ್ಯಯವನ್ನು ತಪ್ಪಿಸಲು ಪೈಲಟ್ ನಿರ್ದೇಶಿತ ಸೆಮಿ ರೊಬೋಟಿಕ್ ಟ್ಯಾಕ್ಸಿ ಬೋಟ್ ಎಂಬ ಹೆಸರಿನ ಟ್ರ್ಯಾಕ್ಟರ್ ಮಾದರಿಯ ಉಪಕರಣಗಳನ್ನು ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಏರ್ ಇಂಡಿಯಾ ಬಳಸಲು ಆರಂಭಿಸಿತು.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೊಬೋಟಿಕ್ ಟ್ಯಾಕ್ಸಿ ಬೋಟ್ ವ್ಯವಸ್ಥೆ ಮಾಡಲಾಗಿದ್ದು, ಇದು ಮೊದಲ ಬಾರಿಗೆ ಏರ್ ಬಸ್ – ೩೨೦ ದೆಹಲಿ- ಮುಂಬೈ ಎಐ ೬೬೫ ವಿಮಾನವನ್ನು  2019 ಅಕ್ಟೋಬರ್ 15ರ ಮಂಗಳವಾರ ರನ್ ವೇಗೆ ಎಳೆದು ತಂದು ನಿಲ್ಲಿಸಿತು.

ಸದ್ಯ ಏರ್ ಬಸ್ ವಿಮಾನಗಳಿಗೆ ಮಾತ್ರ ಈ ಸೇವೆ ಲಭ್ಯವಿದ್ದು ವಿಶ್ವದ ಯಾವುದೇ ಕಡೆಯಿಂದ ಬಂದ ಏರ್ ಬಸ್  ವಿಮಾನಗಳು ಇವುಗಳನ್ನು ಬಳಸಬಹುದು.

ಪಾರ್ಕಿಂಗ್ ಸ್ಥಳದಿಂದ ರನ್ ವೇಗೆ  ವಿಮಾನವನ್ನು ಎಳೆದು ತಂದು ನಿಲ್ಲಿಸುವ ಕೆಲಸವನ್ನು ಮಾತ್ರ ಸದ್ಯಕ್ಕೆ ಟ್ಯಾಕ್ಸಿ ಬೋಟ್‌ಗೆ ವಹಿಸಲಾಯಿತು.

ಏನಿದು ಟ್ಯಾಕ್ಸಿ ಬೋಟ್?

ಸಾಮಾನ್ಯವಾಗಿ ಬೇರೆಡೆಯಿಂದ ಬಂದು ನಿಂತ ವಾವನವನ್ನು ತುಸು ಆ ಕಡೆ ಅಥವಾ ಈ ಕಡೆಗೆ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್ ಬಳಸುತ್ತಾರೆ. ಆದರೆ ಟ್ಯಾಕ್ಸಿ ಬೋಟ್ ಹಾಗಲ್ಲ. ಇದು ಸೆಮಿ ರೊಬೊಟಿಕ್ ಮಾದರಿಯದ್ದು. ಹೆಚ್ಚು ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಪೈಲಟ್ ಸೂಚನೆ ಮೇರೆಗೆ ವಿಮಾನವನ್ನು ತೆಗೆದುಕೊಂಡು ಹೋಗಿ ಪಾರ್ಕಿಂಗ್ ಸ್ಥಳಕ್ಕೆ ಅಥವಾ ರನ್‌ವೇಗೆ  ತರುವ ಕೆಲಸವನ್ನು ಮಾಡಬಲ್ಲದು.

ವಿಮಾನದ ಎಂಜಿನ್ ಸಂಪೂರ್ಣ ಸ್ವಿಚ್ ಆಫ್ ಆಗಿದ್ದರೂ ಟ್ಯಾಕ್ಸಿ ಬೋಟ್ ಕಾರ್ಯನಿರ್ವಹಿಸುತ್ತದೆ. ಇದರಿಂದ ವಿಮಾನ ಇಳಿದ ಬಳಿಕ ರನ್ ವೇಗೆ  ಹೋಗುವಲ್ಲಿ ಅಥವಾ ರನ್‌ವೇಯಿಂದ ಪಾರ್ಕಿಂಗ್ ಜಾಗಕ್ಕೆ ಬರುವಲ್ಲಿ ಬೇಕಾಗುವ ಇಂಧನದ ಶೇ.೮೫ರಷ್ಟು ಉಳಿತಾಯವಾಗುತ್ತದೆ ಅಗಾಧ ಪ್ರಮಾಣದ ವಾಯುಮಾಲಿನ್ಯ ಕೂಡಾ ತಗ್ಗುತ್ತದೆ.

ಟ್ಯಾಕ್ಸಿಬೋಟ್ ವಿಮಾನದ ಮುಂದಿನ ಚಕ್ರವನ್ನು ಎತ್ತಿ ತನ್ನಲ್ಲಿ ಇಟ್ಟುಕೊಳ್ಳುತ್ತದೆ. ಈ ವೇಳೆ ಅದು ನಿಯಂತ್ರಣವನ್ನು ಪೈಲಟ್‌ಗೆ ವರ್ಗಾಯಿಸುತ್ತದೆ. ಟ್ಯಾಕ್ಸಿಬೋಟಿನಲ್ಲಿ ವಿಮಾನ ಇರುವ ಸಂದರ್ಭದಲ್ಲಿ ಟ್ರಾಫಿಕ್ ಕಂಟ್ರೋಲರ್, ವಿಮಾನ ನಿಲ್ದಾಣದ ನಿರ್ವಹಣೆಯವರಿಗೆ, ಪೈಲಟ್‌ಗೆ ಅದು ಸಂದೇಶಗಳನ್ನು ಕಳಿಸುತ್ತದೆ.

ವಾಯುಮಾಲಿನ್ಯವನ್ನು ನಿಗ್ರಹಿಸಲು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಇಂಧನವನ್ನು ಉಳಿಸುವ ನಿಟ್ಟಿನಲ್ಲಿ ನೆರವಾಗಲು ಏರ್ ಇಂಡಿಯಾ ಟ್ಯಾಕ್ಸಿ ಬೋಟ್‌ಗಳನ್ನು ವ್ಯವಸ್ಥೆ ಮಾಡಿದೆ.

‘ಪೈಲಟ್-ನಿಯಂತ್ರಿತ ಅರೆ-ರೊಬೊಟಿಕ್ ಯಂತ್ರಗಳು’ ವಿಮಾನಗಳನ್ನು ಪಾರ್ಕಿಂಗ್ ಸ್ಥಳದಿಂದ ರನ್‌ವೇಗೆ ಅವುಗಳ ಎಂಜಿನ್ ಸ್ವಿಚ್ ಆಫ್ ಆಗಿದ್ದರೂ ಎಳೆದು ತರುವುದರಿಂದ ವಿಮಾನದ ಇಂಧನ ವ್ಯಯ ತಪ್ಪುತ್ತದೆ.

ಕಾನ್ಪುರ ಐಐಟಿಯು ನಡೆಸಿದ ಅಧ್ಯಯನವು ಈ ಟ್ಯಾಕ್ಸಿ ಬೋಟ್‌ನಿಂದ ವಿಮಾನದ ವಾಯುಮಾಲಿನ್ಯ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದೆ.

ಇದನ್ನು ಬಳಸುವುದರಿಂದ ವಿಮಾನವು ರನ್ ವೇ ಪ್ರಾರಂಭದ ಹಂತವನ್ನು ತಲುಪಿದಾಗ ಮಾತ್ರ ಟೇಕ್-ಆಫ್ಗಾಗಿ ಇಗ್ನಿಷನ್ ಆನ್ ಆಗುತ್ತದೆ. ಈ ಬೋಟನ್ನು ವಿಮಾನ ನಿರ್ಗಮನಕ್ಕೆ ಮಾತ್ರ ಸಧ್ಯಕ್ಕೆ ಬಳಸಲಾಗುವುದು. ಇವುಗಳ ಬಳಕೆಯಿಂದ ವಿಮಾನವನ್ನು ರನ್ ವೇ ವರೆಗೆ ಓಡಿಸಲು ಬಳಕೆಯಾಗುವ ಇಂಧನದ ಶೇಕಡಾ ೮೦ರಷ್ಟು ಇಂಧನ ನಷ್ಟ ತಪ್ಪಿಸಲು ಸಾಧ್ಯ ಎಂಬುದು ಸಾಬೀತಾಗಿದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್- ಡಯಲ್) ಅಧಿಕಾರಿಗಳು ತಿಳಿಸಿದರು.

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ  ಟ್ಯಾಕ್ಸಿ ಬೋಟ್‌ನ್ನು ಹಾರಲು ಸಜ್ಜಾಗಿರುವ ಏಪ್ರನ್ ಪ್ರದೇಶದಲ್ಲಿ ನಿಂತಿರುವ ವಿಮಾನದ ಬಳಿಗೆ ಒಯ್ದು ವಿಮಾನಕ್ಕೆ ಜೋಡಿಸಲಾಗುತ್ತದೆ. ಟ್ಯಾಕ್ಸಿಬೋಟ್ ವಿಮಾನದ ಮೂಗಿನ ಚಕ್ರವನ್ನು ಹಿಡಿದು ಸ್ವಲ್ಪ ಎತ್ತುತ್ತದೆ. ಆಗ ವಿಮಾನದ ಪೈಲಟ್ ವಿಮಾನದ ಎಂಜಿನನ್ನು ಚಾಲನೆ ಮಾಡದೆಯೇ ರೊಬೋಟಿಕ್ ಟ್ಯಾಕ್ಸಿ ಬೋಟ್ ಮೂಲಕ ವಿಮಾನವನ್ನು ಟರ್ಮಿನಲ್ ಗೇಟ್‌ನಿಂದ ರನ್‌ವೇಗೆ ಓಡಿಸುತ್ತಾನೆ.  ವಿಮಾನ ಹಾರುವುದಕ್ಕೆ  ಸ್ವಲ್ಪ ಮುನ್ನ ಅಭ್ಯಾಸ ಮತ್ತು ತಾಂತ್ರಿಕ ತಪಾಸಣೆಗಳನ್ನು ಸಕ್ರಿಯಗೊಳಿಸುವ ಸಲುವಾಗಿ ವಿಮಾನದ ಎಂಜಿನನ್ನು ಚಾಲನೆಗೊಳಿಸಲಾಗುತ್ತದೆ ಎಂದು ಎಂದು ಡಯಲ್ ಅಧಿಕಾರಿ ವಿವರಿಸಿದರು.

ಹಾಲಿ ವ್ಯವಸ್ಥೆಯಲ್ಲಿ ಪ್ರಯಾಣಿಕರು ವಿಮಾನ ಏರಿದ ಬಳಿಕ ವಿಮಾನದ ಎಂಜಿನ್‌ಗಳು ಚಾಲನೆಗೊಳುತ್ತವೆ ಮತ್ತು ತನ್ನ ನಿಯೋಜಿತ ರನ್ ವೇ ತಲುಪುವವರೆಗೂ ಚಾಲನೆಯಲ್ಲಿಯೇ ಇರುತ್ತವೆ. ಹೀಗಾಗಿ ಅಷ್ಟು ಹೊತ್ತೂ ವಿಮಾನದ ಇಂಧನ ವ್ಯಯವಾಗುತ್ತಿರುತ್ತದೆ.

ವಿಮಾನವನ್ನು ಒಯ್ಯಲು ಬಳಸಲಾಗುವ ಈ ಟ್ಯಾಕ್ಸಿ ಬೋಟ್ ಗರಿಷ್ಠ ೨೩ ಗಂಟೆಗಳ ವೇಗವನ್ನು ಪಡೆಯಬಹುದು.

ಟ್ಯಾಕ್ಸಿ ಬೋಟ್ ಬಳಕೆಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಹಲವು ವಿಧದ ಅನುಕೂಲಗಳು ಲಭಿಸಲಿವೆ. ಟ್ಯಾಕ್ಸಿಬೋಟ್‌ಗಳು ಬೋರ್ಡಿಂಗ್ ಗೇಟುಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ಇದರ ಜೊತೆಗೆ ಇಂಗಾಲದ ಡೈ ಆಕ್ಸೈಡ್ ಮತ್ತು ಇತರ ಹಾನಿಕಾರಕ ಅನಿಲಗಳ ಹೊರಸೂಸುವಿಕೆ ಗಮನಾರ್ಹವಾಗಿ ತಗ್ಗುತ್ತದೆ. ಏಪ್ರನ್ ಪ್ರದೇಶದಲ್ಲಿ ಜೆಟ್ ಸ್ಫೋಟದ ಅಪಾಯವನ್ನೂ ಇದು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದರು.

ಟ್ಯಾಕ್ಸಿ ಬೋಟ್ ಬಳಕೆಯಿಂದ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಉಳಿತಾಯದ ಜೊತೆಗೆ ವಿಮಾನದ ಬ್ರೇಕ್‌ಗಳಿಗೆ ಆಗುವ ಹಾನಿ ಕಡಿಮೆಯಾಗುತ್ತದೆ. ವಿಮಾನವು ಬ್ರೇಕ್‌ಗಳನ್ನು ಅನ್ವಯಿಸಿದಾಗಲೆಲ್ಲಾ, ವಿಮಾನದ ಸಂಪೂರ್ಣ ತೂಕವು ಮೂಗಿನ ಚಕ್ರದಲ್ಲಿರುತ್ತದೆ. ಟ್ಯಾಕ್ಸಿ ಬೋಟ್ ಬಳಸಿದಾಗ ಸಂಪೂರ್ಣ ಒತ್ತಡವು  ಟ್ಯಾಕ್ಸಿ ಬೋಟ್ ಮೇಲೆ ಇರುತ್ತದೆ, ಇದರಿಂದ ಬ್ರೇಕ್ ಮೇಲಿನ ಹಾನಿ ಕಡಿಮೆಯಾಗುತ್ತದೆ ಎಂದು ಅವರು ನುಡಿದರು.

ಈ ಉಪಕ್ರಮವು ವಿಮಾನ ನಿಲ್ದಾಣ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಶಬ್ದ ಮಾಲಿನ್ಯ ಮತ್ತು ಇಂಧನ ಮಾಲಿನ್ಯವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಎಂದು ಅವರು ಹೇಳಿದರು.

ಟ್ಯಾಕ್ಸಿ ಬೋಟ್‌ಗಳ ಪ್ರಯೋಗವನ್ನು  ಕೆಎಸ್‌ಯು ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಸೆಪ್ಟೆಂಬರಿನಲ್ಲಿ ನಡೆಸಲಾಗಿತ್ತು. ಕೆಎಸ್‌ಯು ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಒದಗಿಸಿರುವ ಟ್ಯಾಕ್ಸಿ ಬೋಟ್‌ಗಳನ್ನು  ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಅಭಿವೃದ್ಧಿಪಡಿಸಿದೆ.

October 15, 2019 Posted by | Auto World, ಆಟೋ ಜಗತ್ತು, ಆರ್ಥಿಕ, ತಂತ್ರಜ್ಞಾನ, ಪೈಲಟ್, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, ಸಂಶೋಧನೆ, Commerce, Finance, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, Technology, World | , , , , , , | Leave a comment

ಅಯೋಧ್ಯಾ ಪ್ರಕರಣ:  ಅಂತಿಮ ವಾದ ಮಂಡನೆ ಮುಕ್ತಾಯಕ್ಕೆ ಸುಪ್ರೀಂ ಪೀಠ ನಿರ್ದೇಶನ

15 ayodhya supreme
ಬುಧವಾರವೇ  ವಿಚಾರಣೆ ಮುಕ್ತಾಯ ಸಂಭವ

ನವದೆಹಲಿ:  ರಾಜಕೀಯವಾಗಿ ಅತಿಸೂಕ್ಷ್ಮವಾಗಿರುವ ಅಯೋಧ್ಯಾ ರಾಮಜನ್ಮಭೂಮಿಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಬುಧವಾರವೇ ಮುಕ್ತಾಯಗೊಳಿಸಲು ತಾನು ಬಯಸಿರುವುದಾಗಿ  2019 ಅಕ್ಟೋಬರ್ 15ರ ಮಂಗಳವಾರ ಹೇಳಿದ ಸುಪ್ರೀಂಕೊರ್ಟ್, ತಮ್ಮ ಅಂತಿಮ ವಾದಗಳನ್ನು 2019 ಅಕ್ಟೋಬರ್ 16ರ  ಬುಧವಾರ ಪರಿಸಮಾಪ್ತಿಗೊಳಿಸುವಂತೆ ಎಲ್ಲ ಕಕ್ಷಿದಾರರಿಗೂ ನಿರ್ದೇಶಿಸಿತು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ ಪ್ರಕರಣದ ವಿಚಾರಣೆಯನ್ನು ೩೯ ದಿನಗಳಿಂದ ನಡೆಸುತ್ತಿದ್ದು,  ಈ ಮೊದಲು ಅಕ್ಟೋಬರ್ ೧೮ರಂದು ವಾದಮಂಡನೆ ಪೂರ್ಣಗೊಳಿಸುವಂತೆ ಸೂಚಿಸಿತ್ತು.  ಬಳಿಕ ಈ ದಿನಾಂಕವನ್ನು ಹಿಂದೂಡಿದ ನ್ಯಾಯಾಲಯ ಅಕ್ಟೋಬರ್ ೧೭ರಂದು ವಾದ ಮಂಡನೆ ಪೂರ್ಣಗೊಳಿಸಲು ಗಡುವು ನೀಡಿತ್ತು. ಆದರೆ, ಮಂಗಳವಾರ ಸಿಜೆಐ ಗೊಗೋಯಿ ಅವರು ಪೀಠವು ಗುರುವಾರದ ಬದಲಿಗೆ ಬುಧವಾರವೇ ಎಲ್ಲ ವಾದಗಳನ್ನೂ ಪರಿಸಮಾಪ್ತಿಗೊಳೀಸಲು ಬಯಸಿದೆ ಎಂಬ ಇಂಗಿತ ವ್ಯಕ್ತ ಪಡಿಸಿದರು.

ಕಕ್ಷಿದಾರರಿಗೆ ಅಂತಿಮ ವಾದ ಮಂಡನೆಗೆ ಕಾಲ ಮಿತಿ ನಿಗದಿ ಪಡಿಸಿದ ಸುಪ್ರೀಂಕೋರ್ಟ್ ಪೀಠವು, ಅಂತಿಮ ವಾದ ಮಂಡನೆ ಹಾಗೂ ಉತ್ತರಗಳನ್ನು ನೀಡಲು  ಹಿಂದು ಮತ್ತು ಮುಸ್ಲಿಮ್ ಕಕ್ಷಿದಾರರಿಗೆ ಬುಧವಾರ ೫ ಗಂಟೆಯವರೆಗೂ ಕಾಲಾವಕಾಶ ನೀಡುವುದು ಎಂದು ಹೇಳಿತು. ನ್ಯಾಯಾಲಯವು ಮಂಗಳವಾರ ಕೂಡಾ ಸಂಜೆ ೫ ಗಂಟೆಯವರೆಗೂ ಕಲಾಪ ನಡೆಸಿತು.

ವಾದಮಂಡನೆಗಳು ಪೂರ್ಣಗೊಂಡರೆ ಪೀಠವು ತೀರ್ಪನ್ನು ಕಾಯ್ದಿರಿಸಲಿದೆ. ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಎಸ್ ಎ ನಜೀರ್ ಅವರನ್ನೂ ಒಳಗೊಂಡಿರುವ ಪೀಠವು, ಸಿಜೆಐ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಆ ದಿನದ ಒಳಗಾಗಿಯೇ ತೀರ್ಪು ನೀಡಬೇಕಾಗಿದೆ. ಸಿಜೆಐ ಅವರ ನಿವೃತ್ತಿಯ ಒಳಗಾಗಿ ತೀರ್ಪು ನೀಡದಿದ್ದರೆ, ಸಂಪೂರ್ಣ ವಿಷಯವನ್ನು ಪುನಃ ಹೊಸದಾಗಿ ಮೊದಲಿನಿಂದಲೇ ಆಲಿಸಬೇಕಾಗುತ್ತದೆ.

‘ಪೀಠಕ್ಕೆ ತೀರ್ಪು ಬರೆಯಲು ಕೇವಲ ನಾಲ್ಕು ವಾರಗಳು ಲಭಿಸುತ್ತವೆ. ಈ ಕಾಲಮಿತಿಯ ಒಳಗೆ ನ್ಯಾಯಾಲಯ ತೀರ್ಪು ನೀಡಿದರೆ ಅದು ’ಪವಾಡ’ವಾಗಲಿದೆ’ ಎಂದು ಸಿಜೆಐ ಅವರು ಈ ಹಿಂದೆ ಹೇಳಿದ್ದರು.

ದಶಕಗಳಷ್ಟು ಹಳೆಯದಾದ ಪ್ರಕರಣದ ವಿಚಾರಣೆಯನ್ನು ಪ್ರತಿದಿನ ವಾದ ಆಲಿಸುವ ಮೂಲಕ ನ್ಯಾಯಾಲಯವು ತ್ವರಿತಗೊಳಿಸಿತ್ತು. ನಿಗದಿತ ಗಡುವಿನ ಒಳಗಾಗಿ ತೀರ್ಪು ನೀಡಲು ಸಾಧ್ಯವಾಗುವಂತೆ ಇತರ ವಿಷಯಗಳಿಗಾಗಿ ಮೀಸಲಿಡಲಾಗಿದ್ದ ದಿನಗಳಲ್ಲೂ ಪೀಠವು ವಿಚಾರಣೆ ನಡೆಸಿತ್ತು.

ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ೨೦೧೦ರ ಸೆಪ್ಟೆಂಬರಿನಿಂದ ನಡೆಸುತ್ತಾ ಬಂದಿತ್ತು.

೧೯೯೨ರ ಡಿಸೆಂಬರ್ ೬ರವರೆಗೆ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವಿದ್ದ ಸ್ಥಳವೂ ಸೇರಿದಂತೆ ೨.೭೭ ಎಕರೆ ವಿವಾದಿತ ಭೂಮಿಯನ್ನು ಸಮಾನವಾಗಿ ವಿಭಜಿಸಿ ಕಕ್ಷಿದಾರರಾದ ನಿರ್ಮೋಹಿ ಅಖಾರ, ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ರಾಮಲಲ್ಲಾ ವಿರಾಜಮಾನ್ ಅವರಿಗೆ ಹಂಚಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು.

ವಿವಾದವನ್ನು ಸುಪ್ರೀಂಕೋರ್ಟಿನಿಂದಲೇ ನೇಮಕಗೊಂಡ ಸಂಧಾನಕಾರರ ಸಮಿತಿಯ ಮೂಲಕ ಇತ್ಯರ್ಥ ಪಡಿಸಲು ನಡೆದ ಪ್ರಕ್ರಿಯೆ ರಾಮಲಲ್ಲಾ ವಿರಾಜಮಾನ್ ಇನ್ನಷ್ಟು ಸಂಧಾನ ಇಲ್ಲ ಎಂದು ಪ್ರಕಟಿಸುವುದರೊಂದಿಗೆ ವಿಫಲಗೊಂಡಿತ್ತು. ಕೆಲವು ದಿನಗಳ ಬಳಿಕ ಸುಪ್ರೀಂಕೋರ್ಟಿನಿಂದ ನೇಮಕಗೊಂಡಿದ್ದ ಸಂಧನಕಾರರ ಸಮಿತಿಯು ಪುನಃ ಮುಂದಿಟ್ಟ ಆಹ್ವಾನವನ್ನೂ ಮಸೀದಿ ಪರ ವಾದಿಸುತ್ತಿದ್ದವರೂ ತಳ್ಳಿಹಾಕಿದ್ದರು.

ದಶಕಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ತೀರ್ಪು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯಾ ಆಡಳಿತವು ಡಿಸೆಂಬರ್ ೧೦ರವರೆಗೆ ಸೆಕ್ಷನ್ ೧೪೪ರ ಅಡಿಯಲ್ಲಿ ಕಟ್ಟು ನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದೆ.

October 15, 2019 Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Flash News, General Knowledge, India, Nation, News, Spardha, supreme court, Temples, Temples, ದೇವಾಲಯಗಳು | , , , , , , , | Leave a comment

ಡಿಕೆಶಿಗೆ ಸದ್ಯಕ್ಕಿಲ್ಲ ಜಾಮೀನು, ದೆಹಲಿ ಹೈಕೋರ್ಟ್ ವಿಚಾರಣೆ ಅ.೧೭ಕ್ಕೆ ಮುಂದೂಡಿಕೆ

15 dk shivakumar
ಅ.೨೫ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದ ವಿಶೇಷ ನ್ಯಾಯಾಲಯ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಿಹಾರ್ ಸೆರೆಮನೆಯಲ್ಲಿ ಇರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್  ಅವರು ಜಾಮೀನು ಕೋರಿ ದೆಹಲಿ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಅಕ್ಟೋಬರ್ ೧೭ಕ್ಕೆ ಮುಂದೂಡಿಕೆಯಾಗಿದ್ದು, ವಿಶೇಷ ಜಾರಿ ನಿರ್ದೇಶನಾಲಯ ನ್ಯಾಯಾಲಯವೂ ಶಿವಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೨೫ರವರೆಗೆ ವಿಸ್ತರಿಸಿದೆ.

ಹೀಗಾಗಿ ಡಿಕೆ ಶಿವಕುಮಾರ್ ಅವರಿಗೆ 2019 ಅಕ್ಟೋಬರ್ 15ರ ಮಂಗಳವಾರವೂ ನ್ಯಾಯಾಲಯಗಳಲ್ಲಿ ಯಾವುದೇ ನಿರಾಳತೆ ಲಭಿಸಲಿಲ್ಲ.

ದೆಹಲಿ ಹೈಕೋರ್ಟಿನಲ್ಲಿ ಮಂಗಳವಾರ ಜಾಮೀನು ಕೋರಿಕೆ  ಅರ್ಜಿಗೆ ಸಂಬಂಧಿಸಿದಂತೆ ಶಿವಕುಮಾರ್ ಪರ ವಕೀಲರ ವಾದ ಮಂಡನೆ ಮುಕ್ತಾಯಗೊಂಡಿದ್ದು, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ ೧೭ಕ್ಕೆ ಮುಂದೂಡಿತು.

ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಲಯವು ಡಿಕೆಶಿ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೨೫ರವರೆಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರಕರಣ ತೀವ್ರ ಕುತೂಹಲ ಕೆರಳಿಸಿತ್ತು.

ದೆಹಲಿ ಹೈಕೋರ್ಟಿನಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆ ವೇಳೆ ಕಾಂಗ್ರೆಸ್ ನಾಯಕನ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ’ಡಿಕೆ ಶಿವಕುಮಾರ್ ೭ ಬಾರಿ ಶಾಸಕರಾಗಿದ್ದವರು. ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಅವರನ್ನು ಬಂಧಿಸುವುದಕ್ಕೂ ಮುನ್ನ ೪ ದಿನಗಳ ಕಾಲ ೩೫ ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿದೆ. ಬಳಿಕ ೪೫ ದಿನಗಳ ಕಾಲ ಕಸ್ಟಡಿಯಲ್ಲಿ ಇಡಲಾಗಿದೆ. ಇದು ಬಂಧಿಸುವಂತಹ ಪ್ರಕರಣವೇ ಅಲ್ಲ’ ಎಂದು ವಾದ ಮಂಡಿಸಿದರು.

ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ ಶಿವಕುಮಾರ್ ಅವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿತ್ತು ಎಂದೂ ಅವರು ವಾದಿಸಿದರು.

ಆದಾಯ ತೆರಿಗೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ೧೨೦ಬಿ ಶೆಡ್ಯೂಲಿನ ಅಡಿಯಲ್ಲಿ ಪ್ರಕರಣ ದಾಖಲಿಸಲು ಬರುವುದಿಲ್ಲ. ಆದಾಯ ತೆರಿಗೆ (ಐಟಿ) ಕಾಯ್ದೆಯಡಿಯಲ್ಲೂ ಅನವಶ್ಯಕವಾಗಿ ವಶಕ್ಕೆ ತೆಗೆದುಕೊಳ್ಳುವಂತಿಲ್ಲ’ ಎಂದು ಅಭಿಷೇಕ್ ಮನು ಸಿಂಘ್ವಿ ದೆಹಲಿ ಹೈಕೋರ್ಟಿನಲ್ಲಿ ವಾದ ಮಂಡಿಸಿದರು.

ದೆಹಲಿ ಹೈಕೋರ್ಟಿನಲ್ಲಿ ಮಧ್ಯಾಹ್ನ ೩.೩೦ಕ್ಕೆ ಆರಂಭವಾಗಬೇಕಿದ್ದ ಅರ್ಜಿಯ ವಿಚಾರಣೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರ್ಟಿಗೆ ಹಾಜರಾಗದ ಹಿನ್ನೆಲೆಯಲ್ಲಿ ಕೆಲ ಕಾಲ ಮುಂದೂಡಿಕೆಯಾಗಿತ್ತು. ಬಳಿಕ ಕಾಂಗ್ರೆಸ್ ನಾಯಕನ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಬದಲಿಗೆ ಕೆಲ ಕಾಲ ಸಿದ್ಧಾರ್ಥ ಲೂತ್ರ ವಾದ ಮಂಡಿಸಿದರು. ಸೋಮವಾರವೇ ನಡೆಯಬೇಕಿದ್ದ ಜಾಮೀನು ಅರ್ಜಿ ವಿಚಾರಣೆ ಸಹ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ಮುಂದೂಡಿಕೆಯಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ನ್ಯಾಯಾಲಯಕ್ಕೆ ಆಗಮಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಶಿವಕುಮಾರ್ ಪರ ವಾದ ಮಂಡಿಸಿದರು.

ಜಾಮೀನು ಅರ್ಜಿ ವಿಚಾರಣೆಯನ್ನು ನಾಲ್ಕು ದಿನ ಮುಂದೂಡುವಂತೆ 2019 ಅಕ್ಟೋಬರ್ 14ರ ಸೋಮವಾರ ಶಿವಕುಮಾರ್ ಪರ ವಕೀಲರು ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಯವರು ಕೇವಲ ಒಂದು ದಿನ ಮಾತ್ರ ಮುಂದೂಡಿ, ಮಂಗಳವಾರವೇ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಬೇಕು ಮತ್ತು ಗುರುವಾರ ಮತ್ತು ಶುಕ್ರವಾರ ಇ.ಡಿ ಪರ ವಕೀಲರು ವಾದ ಮಂಡಿಸಬೇಕು ಎಂದು ನಿರ್ದೇಶಿಸಿದ್ದರು.

ನ್ಯಾಯಾಂಗ ಬಂಧನ ವಿಸ್ತರಣೆ: ಈ ಮಧ್ಯೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಮಂಗಳವಾರ ವಿಶೇಷ ನ್ಯಾಯಾಲಯವು ಅಕ್ಟೋಬರ್ ೨೫ರವರೆಗೆ ವಿಸ್ತರಿಸಿತು.

ಡಿಕೆ ಶಿವಕುಮಾರ್ ನ್ಯಾಯಾಂಗ ಬಂಧನ ಮಂಗಳವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರೋಸ್ ಅವೆನ್ಯೂ ಕೋರ್ಟ್‌ಗೆ ಅವರನ್ನು ಹಾಜರುಪಡಿಸಿದ್ದರು.

ತಿಹಾರ್ ಜೈಲಿನ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಇ.ಡಿ. ಪರ ವಕೀಲರು ಮನವಿ ಮಾಡಿಕೊಂಡರು. ನ್ಯಾಯಾಧೀಶರು ಅಕ್ಟೋಬರ್ ೨೫ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ನೀಡಿದರು.

October 15, 2019 Posted by | ಆರ್ಥಿಕ, ಕರ್ನಾಟಕ, ಭಾರತ, ರಾಜ್ಯ, ರಾಷ್ಟ್ರೀಯ, Commerce, Finance, Flash News, General Knowledge, India, Nation, News, Politics, Spardha | , , , | Leave a comment

ಚಿದಂಬರಂ ಬಂಧನ: ಜಾರಿ ನಿರ್ದೇಶನಾಲಯಕ್ಕೆ ಕೋರ್ಟ್ ಅಸ್ತು

15 Chidambaram
ಬಹಿರಂಗವಾಗಿ ಅಲ್ಲ, ತಿಹಾರ್ ಜೈಲಿನಲ್ಲಿ ಪ್ರಶ್ನಿಸಿ, ಬಳಿಕ ಬಂಧನಕ್ಕೆ ಒಪ್ಪಿಗೆ

ನವದೆಹಲಿ: ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ತಿಹಾರ್ ಸೆರೆಮನೆಯಲ್ಲಿ ಒಂದು ಸುತ್ತು ಪ್ರಶ್ನಿಸಿದ ಬಳಿಕ ಬೇಕಿದ್ದರೆ ಬಂಧಿಸಬಹುದು ಮತ್ತು ವಶಕ್ಕೆ ಪಡೆದುಕೊಳ್ಳಬಹುದು ಎಂದು ದೆಹಲಿಯ ವಿಶೇಷ ನ್ಯಾಯಾಲಯವು 2019 ಅಕ್ಟೋಬರ್ 15ರ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿತು.

ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆಗಸ್ಟ್ ೨೧ರಂದು ಸಿಬಿಐಯಿಂದ ಬಂಧಿತರಾಗಿದ್ದ ಚಿದಂಬರಂ ಅವರು ಈಗಾಗಲೇ ರಾಜಧಾನಿ ದೆಹಲಿಯ ತಿಹಾರ್ ಕೇಂದ್ರೀಯ ಸೆರೆಮನೆಯಲ್ಲಿ ೪೦ ದಿನಗಳನ್ನು ಕಳೆದಿದ್ದಾರೆ.

ಜಾರಿ ನಿರ್ದೇಶನಾಲಯವು  ಈದಿನ  ನ್ಯಾಯಾಲಯದಲ್ಲಿ ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಬಂಧಿಸಲು ಮತ್ತು ತನಿಖೆಗೆ ಗುರಿಪಡಿಸಲು ಅನುಮತಿ ನೀಡುವಂತೆ ಕೋರಿತು.

ವಿಶೇಷ ಸಿಬಿಐ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಜಾರಿ ನಿರ್ದೇಶನಾಲಯದ ಎರಡೂ ಬೇಡಿಕೆಯನ್ನು ಒಪ್ಪಿದರು, ಆದರೆ  ’ಉಲ್ಟಾ ರೂಪದಲ್ಲಿ’.

‘ಸಂಸ್ಥೆಯು ಮೊದಲು ಅವರನ್ನು ತನಿಖೆಗೆ ಗುರಿ ಪಡಿಸಬೇಕು. ಒಮ್ಮೆ ಪ್ರಶ್ನಿಸಿದ ಬಳಿಕ ಬೇಕಿದ್ದರೆ ಅವರನ್ನು ಬಂಧಿಸಬಹುದು’ ಎಂದು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ತತ್ ಕ್ಷಣವೇ ಚಿದಂಬರಂ ಅವರನ್ನು ತತ್ ಕ್ಷಣವೇ ನ್ಯಾಯಾಲಯ ಸಮುಚ್ಚಯದ  ಪಕ್ಕದ ಕೊಠಡಿಯಲ್ಲಿ ೨೦ ನಿಮಿಷಗಳ ಕಾಲ ಪ್ರಶ್ನಿಸಬಹುದು ಎಂಬ ಸಲಹೆ ಮುಂದಿಟ್ಟರು.

‘ಅಷ್ಟೊಂದು ತರಾತುರಿ ಏಕೆ?’ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಸಾಲಿಸಿಟರ್ ಜನರಲ್ ಅವರ ಮನವಿಯನ್ನು ದೃಢವಾಗಿ ತಳ್ಳಿಹಾಕಿದರು.

‘ಸಂಸ್ಥೆಯು ಆರೋಪಿಯ ಘನತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು, ಅವರ ಘನತೆಗೆ ಚ್ಯುತಿ ಉಂಟಾಗಬಾರಾದು. ಸಾರ್ವಜನಿಕರ ಎದುರಲ್ಲಿ ಬಂಧಿಸುವುದು ತರವಲ್ಲ’ ಎಂದು ಹೇಳಿದ ಕುಹರ್ ಅವರು ತಿಹಾರ್ ಸೆರೆಮನೆಯಲ್ಲಿ ಪ್ರಶ್ನಿಸಿ, ಬಳಿಕ ಅಗತ್ಯವಿದ್ದಲ್ಲಿ ಬಂಧಿಸಲು ಅನುಮತಿ ನೀಡಿದರು.

ಚಿದಂಬರಂ ಬಂಧನದ ಅಗತ್ಯ ಏನು ಎಂಬುದಾಗಿ ವಿವರಿಸುವಂತೆ ನ್ಯಾಯಾಲಯ  ನೀಡಿದ ಆದೇಶದ ಪ್ರಕಾರ, ನ್ಯಾಯಾಲಯಕ್ಕೆ ವಿವರಣೆ ನೀಡಿದ ಜಾರಿ ನಿರ್ದೇಶನಾಲಯವು ತನ್ನ ಅಧಿಕಾರಿಗಳು  2019 ಅಕ್ಟೋಬರ್ 16ರ ಬುಧವಾರ ತಿಹಾರ್ ಸೆರೆಮನೆಗೆ ಹೋಗಿ ಚಿದಂಬರಂ ಅವರನ್ನು ಪ್ರಶ್ನಿಸುವರು ಮತ್ತು  ಬಳಿಕ ಬಂಧಿಸುವರು ಎಂದು ತಿಳಿಸಿತು.

ಕೇಂದ್ರೀಯ ತನಿಖಾ ದಳವು (ಸಿಬಿಐ) ತನಿಖೆ ನಡೆಸುತ್ತಿರುವ ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ.

ಚಿದಂಬರಂ ಅವರನ್ನು ಬಂಧಿಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡುವಂತೆ ಕೋರಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು  ಅಗತ್ಯ ಬಿದ್ದಲ್ಲಿ ಚಿದಂಬರಂ ಅವರನ್ನು ವಶದಲ್ಲಿ ಇಟ್ಟುಕೊಂಡು ತನಿಖೆ ನಡೆಸಬಹುದೆಂದು ಸ್ವತಃ ಸುಪ್ರೀಂಕೋರ್ಟ್ ಉಲ್ಲೇಖಿಸಿದೆ ಎಂದು ಹೇಳಿದರು.

ಚಿದಂಬರಂ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅದನ್ನು ತೀವ್ರವಾಗಿ ವಿರೋಧಿಸಿದರು. ಸಿಬಿಐ ಈಗಾಗಲೇ ಅವರನ್ನು ವಶಕ್ಕೆ ಪಡೆದಿದೆ ಮತ್ತು ಅದೇ ಅಪರಾಧಕ್ಕಾಗಿ ಅವರನ್ನು ಬಂಧಿಸಲು ಜಾರಿ ನಿರ್ದೇಶನಾಲಯಕ್ಕೆ ಯಾವುದೇ ನೆಲೆಯೂ ಇಲ್ಲ ಎಂದು ಸಿಬಲ್ ವಾದಿಸಿದರು.

ಮೊದಲ ಮಾಹಿತಿ ವರದಿಯನ್ನು (ಎಫ್‌ಐಆರ್) ಸಿಬಿಐ ದಾಖಲಿಸಿದೆ ಮತ್ತು ಇಸಿಐಆರ್‌ನ್ನು ಜಾರಿ ನಿರ್ದೇಶನಾಲಯವು (ಇಡಿ)  ಅದೇ ಹಣದ ವಹಿವಾಟಿಗೆ ಸಂಬಂಧಿಸಿದಂತೆ ದಾಖಲಿಸಿದೆ. ಅಪರಾಧಗಳು ಬೇರೆಯಾಗಿದ್ದರೂ ವಹಿವಾಟು ಒಂದೇ ಆಗಿರುವವರೆಗೂ ೧೫ ದಿನಗಳಿಗಿಂತ ಹೆಚ್ಚು ರಿಮಾಂಡ್ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.

ಪಾವತಿ ಮತ್ತು ವಿದೇಶೀ ಕಂಪೆನಿಗಳ ಬಗ್ಗೆ ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಈಗಾಗಲೇ ಕೋರಿದೆ. ಇದೇ ವಿಚಾರದಲಿ ಈಗ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇಡಿ) ಬಯಸುತ್ತಿದೆ ಎಂದು ಅವರು ವಾದಿಸಿದರು.

ಹಣ ವರ್ಗಾವಣೆ ಪ್ರತ್ಯೇಕ ಅಪರಾಧ ಎಂದು ಹೇಳಿದ ಮೆಹ್ತ ಚಿದಂಬರಂ ಅವರನ್ನು ಬಂಧಿಸಲು ಮತ್ತು ವಶಕ್ಕೆ ಪಡೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು.

ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಅವರು ಸ್ಥಾಪಿಸಿದ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಗೆ ೨೦೦೭ರಲ್ಲಿ ೩೦೫ ಕೋಟಿ ರೂಪಾಯಿಗಳಷ್ಟು ವಿದೇಶೀ ಹಣ ಪಡೆಯಲು ವಿದೇಶೀ ಹೂಡಿಕೆ ಅಭಿವೃದ್ದಿ ಮಂಡಳಿಯ ಅನುಮತಿ ಪಡೆಯುವಲ್ಲಿ ಅಕ್ರಮಗಳು ನಡೆದಿವೆ ಎಂದು ಸಿಬಿಐ ಆಪಾದಿಸಿದೆ. ಆಗ ಚಿದಂಬರಂ ಅವರು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು.

ವಿತ್ತ ಸಚಿವರ ಪುತ್ರ ಕಾರ್ತಿ ಚಿದಂಬರಂ ಅವರು ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯ ಅನುಮೋದನೆ ಪಡೆಯುವಲ್ಲಿ ಸಹಕರಿಸಿದ್ದರು ಎಂಬುದು ಸಿಬಿಐ ಆರೋಪವಾಗಿತ್ತು.

ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಸಿಬಿಐ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರಿಗೆ ವಿಧಿಸಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿತ್ತು.

ಸಿಬಿಐ ದಾಖಲಿಸಿದ್ದ ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಚಿದಂಬರಂ ಅವರನ್ನು ಅಕ್ಟೋಬರ್ ೧೭ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ವಿಶೇಷ ನ್ಯಾಯಾಲಯವು ಅಕ್ಟೋಬರ್ ೩ರಂದು ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೧೭ರವರೆಗೆ ವಿಸ್ತರಿಸಿತ್ತು.

೭೪ರ ಹರೆಯದ ಕಾಂಗ್ರೆಸ್ ನಾಯಕ ಸಿಬಿಐ ತನ್ನ ತನಿಖೆಯನ್ನು ಮುಗಿಸಿದ ಬಳಿಕ ಸೆಪ್ಟೆಂಬರ್ ೫ರಿಂದ ತಿಹಾರ್ ಸೆರೆಮನೆಯಲ್ಲಿದ್ದಾರೆ. ಆಗಸ್ಟ್ ೨೧ರಂದು ಅವರನ್ನು ಮೊತ್ತ ಮೊದಲಿಗೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

October 15, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, Commerce, Finance, Flash News, General Knowledge, India, Nation, News, Politics, Spardha | , , , | Leave a comment

ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್, ಪತ್ನಿ ಎಸ್ತರ್ ಸೇರಿ ಮೂವರಿಗೆ ನೊಬೆಲ್ ಪ್ರಶಸ್ತಿ

14 abhijit_banerjee,_esther_duflo_and_michael_kremer Noble award
ಸ್ಟಾಕ್‌ಹೋಮ್‌:
 ಜಾಗತಿಕ ಬಡತನ ನಿವಾರಣೆ ಕುರಿತ ಅಧ್ಯಯನಕ್ಕಾಗಿ ಭಾರತೀಯ ಮೂಲದ ಅಮೆರಿಕನ್ ಅರ್ಥ ಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಪತ್ನಿ ಎಸ್ತರ್ ಡ್ಯುಫ್ಲೋ ಹಾಗೂ ಮೈಕೆಲ್ ಕ್ರೇಮರ್ ಸೇರಿದಂತೆ ಮೂವರು 2019ರ ಸಾಲಿನ  ಪ್ರತಿಷ್ಠಿತ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾದರು. ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಇವರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಗಿದೆ ಪ್ರಶಸ್ತಿ ಸಮಿತಿಯು 2019ರ ಅಕ್ಟೋಬರ್ 14ರ ಸೋಮವಾರ ಪ್ರಕಟಿಸಿತು.

‘ಈ ವರ್ಷದ ಪ್ರಶಸ್ತಿ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ, ಅವರ ಹೊಸ ಪ್ರಯೋಗ ಆಧಾರಿತ ವಿಧಾನವು ಅಭಿವೃದ್ಧಿ ಅರ್ಥಶಾಸ್ತ್ರವನ್ನೇ ಮಾರ್ಪಡಿಸಿದೆ, ಇದು ಈಗ ಅಭಿವೃದ್ಧಿ ಹೊಂದುತ್ತಿರುವ ಸಂಶೋಧನಾ ಕ್ಷೇತ್ರವಾಗಿದೆ,” ಎಂದು ಈ ಸಂಬಂಧ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ನೊಬೆಲ್‌ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತು.

ಅಭಿಜಿತ್ ವಿನಾಯಕ ಬ್ಯಾನರ್ಜಿ ಮೂಲತಃ ಕೋಲ್ಕತಾದವರು. ಅವರು ಪ್ರಸ್ತುತ ಮೆಸ್ಯಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ಯಾನರ್ಜಿ ಅವರು 2003ರಲ್ಲಿ ಅಬ್ದುಲ್ ಲತೀಫ್ ಜಮೀಲ್ ಪವರ್ಟಿ ಆ್ಯಕ್ಷನ್ ಲ್ಯಾಬನ್ನು  ಪತ್ನಿ, ಅರ್ಥಶಾಸ್ತ್ರಜ್ಞೆ ಎಸ್ತರ್ ಡ್ಯುಫ್ಲೋ  ಹಾಗೂ ಸೆಂಧಿಲ್ ಮುಲ್ಲಯ್ಯನಾಥನ್ ಅವರ ಜೊತೆಗೆ ಸ್ಥಾಪನೆ ಮಾಡಿದ್ದರು. ಬ್ಯಾನರ್ಜಿ ಅವರು ಇಂದಿಗೂ ಇದರ ನಿರ್ದೇಶಕರಾಗಿದ್ದಾರೆ.

58 ವರ್ಷದ ಬ್ಯಾನರ್ಜಿ ಕೊಲ್ಕತ್ತಾ ವಿಶ್ವ ವಿದ್ಯಾಲಯ,  ದೆಹಲಿಯ ಜವಹರ್‌ಲಾಲ್‌ ನೆಹರೂ ವಿಶ್ವ ವಿದ್ಯಾಲಯಗಳಲ್ಲಿ (ಜೆನ್‌ಯು) ನಲ್ಲಿ ಉನ್ನತ ವ್ಯಾಸಾಂಗ ಮಾಡಿದ್ದು, 1988ರಲ್ಲಿ ಹಾರ್ವರ್ಡ್‌ ವಿಶ್ವ ವಿದ್ಯಾಲಯದಿಂದ  ಎಚ್‌.ಡಿ ಪದವಿ ಪಡೆದುಕೊಂಡಿದ್ದಾರೆ.

2015ರ ನಂತರದ ಅಭಿವೃದ್ಧಿ ಅಜೆಂಡಾಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಗಣ್ಯ ವ್ಯಕ್ತಿಗಳ ಉನ್ನತ ಮಟ್ಟದ ಸಮಿತಿಯಲ್ಲಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ ಮೊತ್ತ 6.51 ಕೋಟಿ ರೂಪಾಯಿಗಳನ್ನು ಒಳಗೊಂಡಿದ್ದು ಇದನ್ನು ಬ್ಯಾನರ್ಜಿ, ಡ್ಯುಫ್ಲೋ ಮತ್ತು ಕ್ರೇಮರ್‌ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.

ಸುಮಾರು 700 ಮಿಲಿಯನ್ (70 ಕೋಟಿ)ಜನರು ಈಗಲೂ ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಪ್ರತಿವರ್ಷ 5 ಮಿಲಿಯನ್ ಮಕ್ಕಳು ಐದನೇ ವರ್ಷದ ಹುಟ್ಟುಹಬ್ಬದ ಆಚರಣೆಗೂ ಮುನ್ನವೇ ಸಾವನ್ನಪ್ಪುತ್ತಿದ್ದಾರೆ. ಅದಕ್ಕೆ ಕಾರಣ ಅಗ್ಗದ ಹಾಗೂ ಸಾಧಾರಣ ಚಿಕಿತ್ಸೆ ಎಂಬುದಾಗಿ ಬ್ಯಾನರ್ಜಿ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದರು.

October 15, 2019 Posted by | Award, ಆರ್ಥಿಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, ಸಾಮಾಜಿಕ  ಮಾಧ್ಯಮ, Finance, Flash News, General Knowledge, India, Nation, News, Social Media, Spardha, World | | Leave a comment

ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿಗೆ ಪ್ರಧಾನಿ ಮೋದಿ ಅಭಿನಂದನೆ

14 narendra-modi
ನವದೆಹಲಿ:
 ಎಸ್ತರ್  ಡ್ಯುಫ್ಲೋ ಮತ್ತು ಮೈಕೆಲ್ ಕ್ರೇಮರ್ ಜೊತೆಗೆ ೨೦೧೯ರ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪಾರಿತೋಷಕಕ್ಕೆ ಭಾಜನರಾಗಿರುವ ಭಾರತೀಯ ಮೂಲಕ ಅಮೆರಿಕನ್ ಆರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು  2019 ಅಕ್ಟೋಬರ್ 14ರ ಸೋಮವಾರ ಅಭಿನಂದಿಸಿದರು.

‘ಅಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ಅರ್ಥಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕೊಡಲಾಗುವ ೨೦೧೯ರ ಸ್ವೆರ್ಗೆಸ್ ರಿಕ್ಸಬ್ಯಾಂಕ್ ಪ್ರಶಸ್ತಿಗೆ ಭಾಜನರಾದುದಕ್ಕಾಗಿ ಅಭಿಜಿತ್ ಬ್ಯಾನರ್ಜಿ ಅವರಿಗೆ ಅಭಿನಂದನೆಗಳು. ಬಡತನ ನಿವಾರಣೆಯ ಕ್ಷೇತ್ರಕ್ಕೆ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ’ ಎಂದು ಮೋದಿ ಟ್ವೀಟ್ ಮಾಡಿದರು.

ರಾಯಲ್ ಸ್ವೀಡಿಶ್ ಅಕಾಡೆಮಿಯ ಅತ್ಯುನ್ನತ ಪ್ರಶಸ್ತಿಗೆ ಭಾಜನರಾದ ಎಸ್ತರ್ ಡ್ಯುಫ್ಲೋ ಮತ್ತು ಮೈಕೆಲ್ ಕ್ರೇಮರ್ ಅವರನ್ನೂ ಪ್ರಧಾನಿ ಅಭಿನಂದಿಸಿದರು.

ಪ್ರಧಾನಿಯವರ ಹೊರತಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡ್ಯೂಫ್ಲೋ ಮತ್ತು ಮೈಕೆಲ್ ಕ್ರೇಮರ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದರು.

ಮುಂಬೈಯಲ್ಲಿ ಜನಿಸಿದ್ದ ೫೮ರ ಹರೆಯದ ಅಭಿಜಿತ್ ಬ್ಯಾನರ್ಜಿ ಅವರು ಪ್ರಸ್ತುತ ಅಮೆರಿಕದ ಮೆಸ್ಯಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿನ (ಎಂಐಟಿ) ಫೋರ್ಡ್ ಫೌಂಡೇಷನ್ ಇಂಟರ್ ನ್ಯಾಷನಲ್‌ನ ಅರ್ಥಶಾಸ್ರ್ರ ಪ್ರೊಫೆಸರ್ ಆಗಿದ್ದಾರೆ. ಅವರು ೧೯೮೮ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆಯುವುದಕ್ಕೆ ಮುನ್ನ ಕಲ್ಕತ್ತ ವಿಶ್ವ ವಿದ್ಯಾಲಯ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು.

October 15, 2019 Posted by | Award, ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, Finance, Flash News, General Knowledge, India, Nation, News, Spardha, World | | Leave a comment

೫೦ ಕಟ್ಟಾ ಭಯೋತ್ಪಾದಕರು, ಅತ್ಮಹತ್ಯಾ ಬಾಂಬರ್‌ಗಳಿಗೆ  ಬಾಲಾಕೋಟ್  ಜೆಇಎಂ ಶಿಬಿರದಲ್ಲಿ ತರಬೇತಿ

14 balakot-archive-image
ನವದೆಹಲಿ:
 ಆತ್ಮಹತ್ಯಾ ಬಾಂಬರ್‌ಗಳು ಸೇರಿದಂತೆ ೪೦-೫೦ ಮಂದಿ ಕಟ್ಟಾ ಭಯೋತ್ಪಾದಕರಿಗೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು  2019ರ ಅಕ್ಟೋಬರ್ 14ರ ಸೋಮವಾರ ವರದಿಯಾಯಿತು.

ಇದೇ ಭಯೋತ್ಪಾದಕ ಶಿಬಿರದ ಮೇಲೆ ಎಂಟು ತಿಂಗಳ  ಹಿಂದೆ  ಭಾರತೀಯ ವಾಯುಪಡೆ ವಿಮಾನಗಳು ವೈಮಾನಿಕ  ದಾಳಿ  ನಡೆಸಿದ್ದವು.

‘ಸುಮಾರು ೪೫-೫೦ ಆತ್ಮಹತ್ಯಾ ಬಾಂಬರ್‌ಗಳಿಗೆ ಪಾಕಿಸ್ತಾನದ ಬಾಲಾಕೋಟ್‌ನ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ  ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ’ ಎಂದು ಉನ್ನತ ಸರ್ಕಾರಿ ಮೂಲಗಳು  ತಿಳಿಸಿದವು.

ಬಾಲಾಕೋಟ್‌ನ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಚಟುವಟಿಕೆಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ ಮತ್ತು ಅಲ್ಲಿನ ಬೆಳವಣಿಗೆಗಳ ಬಗ್ಗೆ ಅರಿತುಕೊಳ್ಳ್ಳುವುದಕ್ಕಾಗಿ ತಾಂತ್ರಿಕ ಕಣ್ಗಾವಲನ್ನು ಹೆಚ್ಚಿಸಿದ್ದೇವೆ ಎಂದು ಮೂಲಗಳು ಹೇಳಿದವು.

ಈ ಉಗ್ರ ಶಿಬಿರದಲ್ಲಿ ತರಬೇತಿ ಪಡೆದ ಕೆಲವು ಭಯೋತ್ಪಾದಕರನ್ನು ಭಾರತೀಯ ಭದ್ರತಾ ನೆಲೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಲುವಾಗಿ ಕಾಶ್ಮೀರಕ್ಕೆ ಕಳುಹಿಸಲಾಗಿದೆ ಎಂದೂ ಮೂಲಗಳು ತಿಳಿಸಿದವು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತವು ರದ್ದು ಪಡಿಸಿದ ಬಳಿಕ ಕಣಿವೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಸಿಕೊಡುವ ಗುರಿ ಇಟ್ಟುಕೊಂಡು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವುದು ಪಾಕಿಸ್ತಾನದ ಯೋಜನೆಯಾಗಿದೆ ಎಂದು ಮೂಲಗಳು ಹೇಳಿದವು.

ಸೇನೆಯು ಕಟ್ಟೆಚ್ಚರದಲ್ಲಿದ್ದು, ಯಾವುದೇ ಭದ್ರತಾ ಸವಾಲಿನ ಜೊತೆ ’ಪರಿಣಾಮಕಾರಿ’ಯಾಗಿ ವ್ಯವಹರಿಸಲು ಅದಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿದವು.

ಭಾರತೀಯ ವಾಯುಪಡೆಯ ವೈಮಾನಿಕ ದಾಳಿಯಲ್ಲಿ ಧ್ವಂಸವಾಗಿದ್ದ ಬಾಲಾಕೋಟ್ ಭಯೋತ್ಪಾದಕ ಸಮುಚ್ಚಯವು ಮತ್ತೆ ’ಸಕ್ರಿಯಗೊಂಡಿದ್ದು’ ಸುಮಾರು ೫೦೦ ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಕಳೆದ ತಿಂಗಳು ಹೇಳಿದ್ದರು. ಕಳೆದ ಆರು ತಿಂಗಳುಗಳಿಂದ ಪಾಕ್ ಮೂಲದ ಭಯೋತ್ಪಾದಕರ ನುಸುಳುವಿಕೆ ಸ್ಥಗಿತಗೊಂಡಿತ್ತು ಎಂದೂ ಅವರು ನುಡಿದಿದ್ದರು.

‘ಬಾಲಾಕೋಟ್ ಶಿಬಿರವನ್ನು ಪಾಕಿಸ್ತಾನವು ತೀರಾ ಇತ್ತೀಚೆಗೆ ಮತ್ತೆ ಸಕ್ರಿಯಗೊಳಿಸಿದೆ. ಬಾಲಾಕೋಟ್ ಶಿಬಿರದ ಮೇಲೆ ದಾಳಿಯ ಪರಿಣಾಮವಾಗಿತ್ತು ಎಂಬುದನ್ನು ಇದು ಸಾಬೀತು ಪಡಿಸಿದೆ. ಅದು ಹಾನಿಗೊಂಡಿತ್ತು ಮತ್ತು ನಾಶಗೊಂಡಿತ್ತು. ಈ ಕಾರಣದಿಂದಲೇ ಅಲ್ಲಿದ್ದ ಜನರು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದರು. ಈಗ ಮತ್ತೆ ಅದು ಸಕ್ರಿಯಗೊಂಡಿದೆ’ ಎಂದು ರಾವತ್ ಅವರು ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಮಾತನಾಡುತ್ತಾ ಹೇಳಿದ್ದರು.

ಭಾರತೀಯ ವಾಯುಪಡೆಯು ಕೆಲವೊಂದು ಕ್ರಮಗಳನ್ನು ಕೈಗೊಂಡಿತ್ತು. ಈಗ ಅವರು (ಪಾಕಿಸ್ತಾನ) ಮತ್ತೆ ಅಲ್ಲಿಗೆ ಜನರನ್ನು ಮರಳಿ ಕರೆತರುತ್ತಿದ್ದಾರೆ ಎಂದು ಸೇನಾ ಮುಖ್ಯಸ್ಥರು  ಹೇಳಿದ್ದರು.

ಭಾರತೀಯ ವಾಯುಪಡೆಯ ವಿಮಾನಗಳ ತಂಡವೊಂದು ಬಾಲಾಕೋಟ್‌ನ ಭಯೋತ್ಪಾದಕರ ಉಡಾವಣಾ ಸ್ಥಳಗಳ ಮೇಲೆ ಫೆಬ್ರುವರಿ ೨೭ರಂದು ಸೂರ್‍ಯೋದಯಕ್ಕೂ ಮುನ್ನ ವೈಮಾನಿಕ ದಾಳಿ ನಡೆಸಿತ್ತು. ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಸುಮಾರು ೧೫ ದಿನಗಳ ಬಳಿಕ ಪ್ರತೀಕಾರದ ಕ್ರಮವಾಗಿ ಭಾರತ ಈ ಕಾರ್ಯಾಚರಣೆ ಕೈಗೊಂಡಿತ್ತು.

October 15, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Politics, Social Media, Spardha, Terror | , | Leave a comment

ಜಮ್ಮು – ಕಾಶ್ಮೀರದಲ್ಲಿ ಮತ್ತೆ ರಿಂಗಣಿಸಿದವು ಮೊಬೈಲ್ ಫೋನುಗಳು..

14 kashmir-phones
ಭಾವೋದ್ವೇಗದ ಕರೆ, ಶುಭಾಶಯ ವಿನಿಮಯದ ಹರ್ಷ, ಕಾಶ್ಮೀರಿಗಳಲ್ಲಿ ಖುಷಿಯ ಅಲೆ

ಶ್ರೀನಗರ:  ಎಲ್ಲೆಂದರಲ್ಲಿ ರಿಂಗಣಿಸುತ್ತಿದ್ದ ಮೊಬೈಲ್ ಫೋನುಗಳು, ಪರಸ್ಪರ ’ಮುಬಾರಕ್’ ವಿನಿಮಯ, ಉಭಯು ಕುಶಲೋಪರಿಯ ಖುಷಿ- ಇದು ಜಮ್ಮು ಮತ್ತು ಕಾಶ್ಮೀರದಲಿ  2019 ಅಕ್ಟೋಬರ್ 14ರ ಸೋಮವಾರ ಕಂಡು ಬಂದ ಖುಷಿಯ ಅಲೆಗಳ ದೃಶ್ಯ..

ಜಮ್ಮು  ಮತ್ತು ಕಾಶ್ಮೀರದಲ್ಲಿ ಸಂಪೂರ್ಣ ಸಂಪರ್ಕ ನಿರ್ಬಂಧ ಹೇರಿಕೆಯ ಸುಮಾರು ೭೦ ದಿನಗಳ ಬಳಿಕ ಸೋಮವಾರ ಪೋಸ್ಟ್ ಪೇಯ್ಡ್ ಮೊಬೈಲ್ ಫೋನುಗಳ ಸಂಪರ್ಕ ಪುನಾರಂಭಗೊಂಡಿದ್ದು ಕಾಶ್ಮೀರಿಗಳು ಖುಷಿಯೊಂದಿಗೆ ತಮ್ಮ ಆಪ್ರರೊಂದಿಗೆ ಮೊಬೈಲ್ ಮಾತುಕತೆ ನಡೆಸಿದ್ದು ಕಂಡು ಬಂತು.

ಸುಮಾರು ೭೦ ದಿನಗಳ ಸಂಪೂರ್ಣ ಸಂಪರ್ಕ ನಿರ್ಬಂಧದ ಬಳಿಕ ಮುಜಮ್ಮಿಲ್ ಅಹ್ಮದ್‌ಗೆ ಬಂದ ಮೊತ್ತ ಮೊದಲ ಕರೆ- ಆತನ ಅಜ್ಜಿಯದ್ದು. ಕಾನೂನು ವಿದ್ಯಾರ್ಥಿಯಾದ ಶಾ ತನ್ನ ಹೆತ್ತವರ ಜೊತೆ ನೆರೆಹೊರೆಯವರ ಸ್ಥಿರ ದೂರವಾಣಿ ಬಳಸಿ ಯಾವಾಗಾದರೂ ಒಮ್ಮೆ ಶೋಪಿಯಾನ್ ಜಿಲ್ಲೆಯ ಗೆಹೆಂಡ್‌ನಲ್ಲಿದ್ದ ತಮ್ಮ ಹೆತ್ತವರ ಜೊತೆ ಮಾತನಾಡುತ್ತಿದ್ದರು. ಆದರೆ ಅವರಿಗೆ ಅಜ್ಜಿಯ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ.

‘ಸೋಮವಾರದಿಂದ ಫೋನ್ ಲೈನುಗಳು ಪುನಃಸ್ಥಾಪನೆಗೊಳ್ಳಲಿವೆ ಎಂಬುದಾಗಿ ಹೇಳಿದ್ದರಿಂದ ನಾನು ರಾತ್ರಿ ೧೨ ಗಂಟೆ ಆಗುವುದನ್ನೇ ಕಾಯುತ್ತಿದ್ದೆ. ನನಗೆ ಯಾವಾಗಲೂ ನನ್ನ ಹೆತ್ತವರ ಆರೋಗ್ಯದ ಬಗ್ಗೆ ಚಿಂತೆಯಿತ್ತು. ಸ್ಥಿರ ದೂರವಾಣಿಯಲ್ಲಿ ಯಾವಾಗಾದರೂ ಒಮ್ಮೆ ಸಂಪರ್ಕ ಸಾಧ್ಯವಾಗುತ್ತಿದ್ದರೂ, ಹಲವಾರು ಅಡಚಣೆಗಳ ಕಾರಣ ಅದು ಅಷ್ಟೊಂದು ಉತ್ತಮ ಸಂವಹನ ಮಾಧ್ಯಮವಾಗಿರಲಿಲ್ಲ. ನಾನು ಹೆತ್ತವರ ಜೊತೆಗೆ ಕೆಲವು ಬಾರಿ ಮಾತನಾಡಿದ್ದರೂ, ಸ್ಥಿರ ದೂರವಾಣಿ ಇದ್ದ ಮನೆಗೆ ಬರುವುದು ಅಜ್ಜಿಗೆ ಕಷ್ಟವಾದ ಕಾರಣ ಅವರ ಜೊತೆಗೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಈದಿನ ಅಜ್ಜಿಯ ಸ್ವರ ಕೇಳಿದಾಗ ನನಗೆ ಅತ್ಯಂತ ಖುಷಿಯಾಯಿತು’ ಎಂದು ಶಾ ತಮ್ಮ ಸಂತಸ ಹಂಚಿಕೊಂಡರು.

ಶ್ರೀನಗರದ ಲಾಲ್ ಚೌಕಕ್ಕೆ ಸೋಮವಾರ ಹೊಸ ಜೀವಕಳೆ ಬಂದಿತ್ತು. ಜನರು ಎರಡು ತಿಂಗಳುಗಳ ಬಳಿಕ ಮೊಬೈಲು ಫೋನುಗಳಲ್ಲಿ ಮಾತನಾಡುತ್ತಾ ಖುಷಿಯೊಂದಿಗೆ ಚಟುವಟಿಕೆ ನಿರತರಾಗಿದ್ದರು. ಈದ್ ಸಂದರ್ಭದಲ್ಲಿ ಮಾತ್ರ ಕೇಳಿ ಬರುತ್ತಿದ್ದ ’ಮುಬಾರಕ್’ ಸೋಮವಾರ ಎಲ್ಲೆಡೆಯಲ್ಲೂ ಮಾರ್ದನಿಸಿತ್ತು.

ಪೋಸ್ಟ್ ಪೇಯ್ಡ್ ಮೊಬೈಲ್ ಸಂಪರ್ಕ ಹೊಂದಿದ್ದ ಹಲವರು ಸೋಮವಾರ ಕರೆಗಳನ್ನು ಮಾಡುವುದರಲ್ಲಿ ಮಗ್ನರಾಗಿದ್ದರೆ, ಪೋಸ್ಟ್ ಪೇಯ್ಡ್ ಸಂಪರ್ಕ ಇಲ್ಲದೇ ಇದ್ದವರು ಕರೆಗಳನ್ನು ಮಾಡುವ ಸಲುವಾಗಿ ಪೋಸ್ಟ್ ಪೇಯ್ಡ್ ಮೊಬೈಲ್ ಹೊಂದಿದ್ದವರನ್ನು ಸುತ್ತುಗಟ್ಟಿದ್ದರು.

ವಾಹನ ಚಲಾಯಿಸುತ್ತಿದ್ದವರೂ ಮೊಬೈಲುಗಳಲ್ಲಿ ಮಾತನಾಡುತ್ತಾ ವಾಹನಗಳನ್ನು ಚಲಾಯಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಇದೇ ವೇಳೆಗೆ ಸಂಚಾರಿ ಪೊಲೀಸರು ವಾಹನ ಚಲಾಯಿಸುತ್ತಾ ಮೊಬೈಲ್ ಕರೆ ಮಾಡುವವರಿಗೆ ನೋಟಿಸ್ ನೀಡಲು ಸಿದ್ಧತೆ ಆರಂಭಿಸಿದರು. ’ಇಷ್ಟರಲ್ಲೇ ನಮ್ಮ ಚಲನ್ ಬುಕ್ ಹೊರ ತೆಗೆಯುತ್ತೇವೆ’ ಎಂದು ಸಂಚಾರಿ ಪೊಲೀಸ್ ಒಬ್ಬರು ಮಾಧ್ಯಮದ ಜೊತೆಗೆ ಮಾತನಾಡುತ್ತಾ ಹೇಳಿದರು.

ಹಲವಾರು ಕರೆಗಳನ್ನು ಮಾಡಿದ ಅಂಗಡಿಕಾರನೊಬ್ಬ ’ಫೋನ್ ಲೈನುಗಳ ಪುನಃಸ್ಥಾಪನೆಯು ನಮಗೆ ಸಹಜ ಬದುಕು ಅಂದರೆ ಏನು ಮತ್ತು ಅದನ್ನು ಹೇಗೆ ಕಿತ್ತುಕೊಳ್ಳಬಹುದು ಎಂಬುದನ್ನು ಅರಿವಿಗೆ ತಂದಿತು’ ಎಂದು ಹೇಳಿದರು.

ಖುಷಿಯ ಫೋನ್ ಕರೆಗಳ ಮಧ್ಯೆ ಕೆಲವರು ಬಿಡುವಿಲ್ಲದಂತೆ ಸೇವಾದಾg ಕಂಪೆನಿಗಳಿಗೆ ಕರೆಗಳನ್ನು ಮಾಡುತ್ತಿದ್ದರು. ಫೋನು ಲೈನುಗಳ ಪುನಃಸ್ಥಾಪನೆಯಾದಾಗಲಷ್ಟೇ ಇಂಟರ್ ನೆಟ್ ಇಲ್ಲದ್ದರಿಂದ ತಾವು ಫೋನ್ ಬಿಲ್ಲುಗಳನ್ನೇ ಕಟ್ಟಿಲ್ಲ ಎಂಬುದು ಅವರ ಅರಿವಿಗೆ ಬಂದಿತ್ತು. ಹಲವರು ಪ್ರಾವಿಷನ್ ಸ್ಟೋರ್ ಮತ್ತು ಕಮ್ಯೂನಿಕೇಷನ್ ಸ್ಟೋರ್ ಗಳಿಗೆ ಧಾವಿಸಿ ಸೇವಾದಾರರಿಂದ ತಮ್ಮ ಫೋನುಗನ್ನು ಚಾರ್ಜ್ ಮಾಡಿಸಿಕೊಂಡರು.

ಕಣಿವೆಯಲ್ಲಿ ಒಟ್ಟು ೮೪ ಲಕ್ಷ ಫೋನ್ ಸಂಪರ್ಕಗಳಿವೆ. ಈ ಪೈಕಿ ೪೦ ಲಕ್ಷದಷ್ಟು ಪೋಸ್ಟ್ ಪೇಯ್ಡ್ ಮೊಬೈಲ್ ಫೋನುಗಳು ಸೋಮವಾರದಿಂದ ಪುನಾರಂಭವಾಗಲಿವೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ಶನಿವಾರ ಪ್ರಕಟಿಸಿತ್ತು.

ಮೊಬೈಲ್ ಇಂಟರ್ ನೆಟ್ ಮತ್ತು ವೆಬ್ ಸೇವೆಗಳು ಸಧ್ಯಕ್ಕೆ ಇನ್ನೂ ಚಾಲನೆಗೊಂಡಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸುವ ಕೇಂದ್ರ ಸರ್ಕಾರದ ಪ್ರಮುಖ ನಿರ್ಣಯವನ್ನು ಆಗಸ್ಟ್ ೫ರಂದು ಗೃಹ ಸಚಿವ ಅಮಿತ್ ಶಾ ಅವರು ಪ್ರಕಟಿಸುವುದರೊಂದಿಗೆ ಜಮ್ಮು ಮತ್ತು  ಕಾಶ್ಮೀರದಲ್ಲಿ ಫೋನ್ ಲೈನುಗಳನ್ನು ಸ್ಥಗಿತಗೊಳಿಸಲಾಗಿತ್ತು.

ಅಂದಿನಿಂದ ಕಾಶ್ಮೀರದ ಜನರು ಸಂಪರ್ಕ ಬ್ಲ್ಯಾಕ್ ಔಟ್ ಸ್ಥಿತಿಯಲ್ಲೇ ವಾಸವಾಗಿದ್ದರು. ಸ್ಥಿರ ದೂರವಾಣಿಗಳ ಪುನಃಸ್ಥಾಪನೆಯೊಂದಿಗೆ ಕಡಿಮೆಯಾಗಿದ್ದ ಸಂಪರ್ಕ ಬ್ಲ್ಯಾಕ್ ಔಟ್‌ನ ಕಾವು ಸೋಮವಾರ ಪೋಸ್ಟ್ ಪೇಯ್ಡ್ ಫೋನ್ ಲೈನುಗಳ ಪುನಾರಂಭದೊಂದಿಗೆ ಇನ್ನಷ್ಟು ಇಳಿಯಿತು.

October 15, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, News, Social Media, Spardha | | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ