SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ್ದ ಪಾಕ್ ವಾಯುಪಡೆ

17 spice-jet-paksitan
ಸೆಪ್ಟೆಂಬರಿನಲ್ಲಿ ಘಟಿಸಿದ ಘಟನೆ ತಡವಾಗಿ ಬೆಳಕಿಗೆ

ನವದೆಹಲಿ: ದೆಹಲಿಯಿಂದ ಆಫ್ಘಾನಿಸ್ಥಾನದ ಕಾಬೂಲಿಗೆ  ೧೨೦ ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಪಾಕ್ ವಾಯುಪಡೆ  ಸೆಪ್ಟೆಂಬರ್ ೨೩ರಂದು ಅಡ್ಡಗಟ್ಟಿದ್ದ ಪ್ರಕರಣದ ತಡವಾಗಿ 2019 ಅಕ್ಟೋಬರ್  17ರ ಗುರುವಾರ ಬೆಳಕಿಗೆ ಬಂದಿತು.

ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಅದನ್ನು ಪಾಕಿಸ್ತಾನದ ಗಡಿ ದಾಟುವವರೆಗೆ ಅದನ್ನು ಹಿಂಬಾಲಿಸಿದ್ದವು ಎಂದು ಮಾಧ್ಯಮವೊಂದು ವರದಿ ಮಾಡಿತು.

ಸ್ಪೈಸ್ ಜೆಟ್ ಸಂಸ್ಥೆಯ ’ಬೋಯಿಂಗ್ ೭೩೭’ ವಿಮಾನದ ’ಕರೆ ಸಂಕೇತ’ (ಕಾಲ್ ಸೈನ್) ವಿಚಾರದಲ್ಲಿ ಆದ ಗೊಂದಲದಿಂದಾಗಿ ಪಾಕ್ ವಾಯುಪಡೆ ತುರ್ತಾಗಿ ತನ್ನ ಯುದ್ಧ ವಿಮಾನಗಳನ್ನು ನಿಯೋಜಿಸಿತು ಎಂದು ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕರ ಕಚೇರಿ (ಡಿಜಿಸಿಎ) ಅಧಿಕಾರಿಗಳು ಹೇಳಿದರು.

ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕ್ ವಾಯುಪಡೆಯ ಅತ್ಯಾಧುನಿಕ ಎಫ್-೧೬ ಯುದ್ಧವಿಮಾನಗಳು ಹಾರಾಟದ ಎತ್ತರ ತಗ್ಗಿಸುವಂತೆ ಸೂಚಿಸಿದವು. ನಂತರ ಸ್ಪೈಸ್ ಜೆಟ್ ವಿಮಾನದ ಪೈಲಟ್, ಇದು ವಾಣಿಜ್ಯ ವಿಮಾನ ಎಂದು ಪಾಕ್ ವಾಯುಪಡೆಯ ಪೈಲಟ್‌ಗಳಿಗೆ ಸ್ಪಷ್ಟಪಡಿಸಿದರು ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು.

ಸ್ಪೈಸ್ ಜೆಟ್ ಪೈಲಟ್ ಸ್ಪಷ್ಟನೆಯ ಬಳಿಕ ವಿಮಾನಕ್ಕೆ ಹಾರಾಟ ಮುಂದುವರೆಸಲು ಪಾಕಿಸ್ತಾನ ಅನುಮತಿ ನೀಡಿತು. ಅಷ್ಟೇ ಅಲ್ಲ ವಿಮಾನವು ಪಾಕಿಸ್ತಾನದ ಗಡಿ ದಾಟುವವರೆಗೂ ಅದನ್ನು ಸುತ್ತುವರೆದಿತ್ತು ಎಂದು ಸುದ್ದಿ ಮೂಲಗಳು ಹೇಳಿವೆ. ಏನಿದ್ದರೂ ಈ ಘಟನೆಯ ಬಗ್ಗೆ ಸ್ಪೈಸ್ ಜೆಟ್  ಈವರೆಗೆ ಏನ್ನೂ ಹೇಳಿಲ್ಲ.

‘ಪ್ರತಿ ವಿಮಾನಯಾನ ಸಂಸ್ಥೆಗೂ ಒಂದು ಸಂಕೇತ (ಕೋಡ್) ಇರುತ್ತದೆ. ಸ್ಪೈಸ್ ಜೆಟ್‌ಗೆ ’ಎಸ್ಜಿ’ ಎಂಬ ಸಂಕೇತ ಇದೆ. ಇದನ್ನು ಪಾಕಿಸ್ತಾನದ ವಿಮಾನಯಾನ ನಿಯಂತ್ರಣ ಅಧಿಕಾರಿಗಳು ’ಐಎ’ ಎಂದು ತಪ್ಪಾಗಿ ಅರ್ಥೈಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿಯೇ ಐಎ ಎನ್ನುವುದನ್ನು ಇಂಡಿಯನ್ ಏರ್ ಫೋರ್ಸ್ ಎಂದು ತಪ್ಪಾಗಿ ಭಾವಿಸಿ ಪಾಕಿಸ್ತಾನದ ವಾಯುಪಡೆಗೆ ಸೂಚನೆ ರವಾನೆಯಾಗಿರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳ ಹೇಳಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.

ವಿಷಯವು ಅತ್ಯಂತ ಸೂಕ್ಷ್ಮ ಸ್ವರೂಪದ್ದಾದ ಕಾರಣ ಹೆಚ್ಚಿನ ವಿವರಗಳನ್ನು ನೀಡಲು ಡಿಜಿಸಿಎ ಅಧಿಕಾರಿಗಳು ನಿರಾಕರಿಸಿದರು.

ಫೆಬ್ರುವರಿ ೨೬ರಂದು ಭಾರತದ ವಾಯುಪಡೆ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿದ ಬಳಿಕ ಪಾಕಿಸ್ತಾನವು ಭಾರತಕ್ಕೆ ತನ್ನ ವಾಯುಮಾರ್ಗ ಬಳಸದಂತೆ ನಿಷೇಧ ಹೇರಿತ್ತು. ಆದರೆ ಜುಲೈ ತಿಂಗಳಲ್ಲಿ ತನ್ನ ವಾಯುಮಾರ್ಗವನ್ನು ಭಾಗಶಃ ತೆರೆದಿತ್ತು

ವಾಯುಮಾರ್ಗ ನಿರ್ಬಂಧಗಳ ಪರಿಣಾಮವಾಗಿ ತಮ್ಮ ರಾಷ್ಟವು ೫೦ ಮಿಲಿಯನ್ (೫ ಕೋಟಿ) ಡಾಲರ್‌ನಷ್ಟು ನಷ್ಟ ಅನುಭವಿಸಿತು ಎಂದು ಕೆಲವು ದಿನಗಳ ಬಳಿಕ ಪಾಕಿಸ್ತಾನದ ವಿಮಾನಯಾನ ಸಚಿವರು ಹೇಳಿದ್ದರು.

ಕಳೆದ ತಿಂಗಳು ಪಾಕಿಸ್ತಾನವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಪ್ರವಾಸಕ್ಕೆ ತನ್ನ ವಾಯುಮಾರ್ಗ ಬಳಸಲು ನಿರಾಕರಿಸಿತು. ಇದೇ ರೀತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಐಸ್ ಲ್ಯಾಂಡ್ ಪಯಣ ಕಾಲದಲ್ಲೂ ತನ್ನ ವಾಯುಮಾರ್ಗ ಬಳಸಲು ಅನುಮತಿ ನಿರಾಕರಿಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಭಾರತದ ಇತ್ತೀಚಿನ ಕ್ರಮವನ್ನು ವಿರೋಧಿಸಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಯವರ ವಿಮಾನ ಪಾಕಿಸ್ತಾನದ ವಾಯುಮಾರ್ಗ ಮೂಲಕ ಸಾಗದಂತೆ ನಿರ್ಬಂಧಿಸಲಾಯಿತು ಎಂದು  ಪಾಕ್ ವಿದೇಶಾಂಗ ಸಚಿವ ಮೆಹಮೂದ್ ಖುರೇಶಿ ಹೇಳಿದ್ದರು.

ಪಾಕಿಸ್ತಾನದ ನಿರ್ಧಾರಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಷಾದ ವ್ಯಕ್ತ ಪಡಿಸಿತ್ತು. ವಿವಿಐಪಿಗಳ ವಿಶೇಷ ವಿಮಾನ ಹಾರಾಟಕ್ಕೆ ಯಾವುದೇ ರಾಷ್ಟ್ರ ಸಾಮಾನ್ಯವಾಗಿ ತನ್ನ ಅನುಮತಿಯನ್ನು ನೀಡುತ್ತದೆ.

‘ಅಂತಾರಾಷ್ಟ್ರೀಯ ಪದ್ಧತಿಯಿಂದ ವಿಮುಖವಾಗುವ ತನ್ನ ನಿರ್ಣಯವನ್ನು ಪಾಕಿಸ್ತಾನ ಪರಿಶೀಲಿಸಿಕೊಳ್ಳಬೇಕು ಮತ್ತು ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳಲು ಕಾರಣಗಳನ್ನು ತಪ್ಪಾಗಿ ಊಹಿಸಿಕೊಳ್ಳುವ ತನ್ನ ಹಳೆಯ ಚಾಳಿಯನ್ನು ಮರುಪರಿಶೀಲನೆ ಮಾಡಿಕೊಳ್ಳಬೇಕು’ ಎಂದು ವಕ್ತಾರ ರವೀಶ್ ಕುಮಾರ್ ಹೇಳಿದ್ದರು.

October 17, 2019 Posted by | Auto World, ಆಟೋ ಜಗತ್ತು, ಪಾಕಿಸ್ತಾನ, ಪೈಲಟ್, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Space, Spardha | , , | Leave a comment

ಅಯೋಧ್ಯಾ ಇತ್ಯರ್ಥ ಪ್ರಸ್ತಾಪ: ದೃಢ ಪಡಿಸಿದ ಸುನ್ನಿ ವಕ್ಫ್ ಮಂಡಳಿ ವಕೀಲ ರಿಜ್ವಿ

17 sc ayodhya sunni wakf board
ನವದೆಹಲಿ
: ರಾಜಕೀಯ ಮತ್ತು ಧಾರ್ಮಿಕವಾಗಿ ಅತ್ಯಂತ ಸೂಕ್ಷ್ಮವಾಗಿರುವ ಅಯೋಧ್ಯಾ ರಾಮ ಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಮುಸ್ಲಿಂ ಕಕ್ಷಿದಾರರಲ್ಲಿ ಒಂದಾದ ಸುನ್ನಿ ವಕ್ಫ್ ಮಂಡಳಿಯ ವಕೀಲ ಶಾಹಿದ್ ರಿಜ್ವಿ ಅವರು ಸುಪ್ರೀಂಕೋರ್ಟಿನಿಂದ ನೇಮಕಗೊಂಡಿದ್ದ ತ್ರಿಸದಸ್ಯ ಸಂಧಾನ ಸಮಿತಿಯ ಮೂಲಕ ಹಿಂದೂಗಳಿಗೆ 2019 ಅಕ್ಟೋಬರ್ 16ರ ಬುಧವಾರ ರಾಜಿ ಪ್ರಸ್ತಾವ ಸಲ್ಲಿಸಿರುವುದನ್ನು 2019 ಅಕ್ಟೋಬರ್ 17ರ ಗುರುವಾರ ದೃಡ ಪಡಿಸಿದರು.

ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದವನ್ನು ಬಗೆಹರಿಸಲು ಸುಪ್ರೀಂಕೋರ್ಟ್ ಪೀಠವು ನೇಮಕ ಮಾಡಿದ್ದ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಇಬ್ರಾಹಿಂ ಕಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಂಧಾನ ಸಮಿತಿಯ ಮೊಹರಾದ ಲಕೋಟೆಯಲ್ಲಿ ತನ್ನ ’ಇತ್ಯರ್ಥ ಪ್ರಸ್ತಾಪ’ ಒಳಗೊಂಡ ವರದಿಯನ್ನು ಹಿಂದಿನ ದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠಕ್ಕೆ ಸಲ್ಲಿಸಿತ್ತು. ಆಧ್ಯಾತ್ನಿಕ ಗುರು ಶ್ರೀ ಶ್ರೀ ರವಿಶಂಕರ ಮತ್ತು ಖ್ಯಾತ ಸಂಧಾನಕಾರ ವಕೀಲ ಶ್ರೀರಾಮ ಪಂಚು ಅವರು ಸಂಧಾನ ಸಮಿತಿಯ ಇತರ ಇಬ್ಬರು ಸದಸ್ಯರಾಗಿದ್ದಾರೆ.

ಈ ಸಂಧಾನ ಪ್ರಸ್ತಾಪವು ಕೆಲವು ಹಿಂದೂಗಳು ಮತ್ತು ಮುಸ್ಲಿಮರ ನಡುವಣ  ‘ಒಂದು ರೀತಿಯ ಇತ್ಯರ್ಥ’ ಎಂಬುದಾಗಿ ಮೂಲಗಳು ತಿಳಿಸಿದವು.

‘ನ್ಯಾಯಾಲಯದ ಹೊರಗೆ, ಸಂಧಾನ ಸಮಿತಿಯ ಮುಂದೆ, ಕಕ್ಷಿದಾರರು ತಮ್ಮ ಸಲಹೆಗಳನ್ನು ಮುಂದಿಟ್ಟಿದ್ದಾರೆ. ನಾನು ಈಗ ಅವುಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಒಳ್ಳೆಯದು ಎಂದಿಗೂ ತಡವಾಗುವುದಿಲ್ಲ, ನೀವು ಕೆಲಸಗಳನ್ನು ಮಾಡಲು ಬಯಸಿದರೆ ಕೊನೆಯ ಕ್ಷಣದಲ್ಲಿಯೂ ಸಹ ನೀವು ಅವುಗಳನ್ನು ಮಾಡಬಹುದು’ ಎಂದು ಸುನ್ನಿ ವಕ್ಫ್ ಮಂಡಳಿಯ ಪರ ವಕೀಲ ಶಾಹಿದ್ ರಿಜ್ವಿ ಮಾಧ್ಯಮ ಒಂದರ ಜೊತೆಗೆ ಮಾತನಾಡುತ್ತಾ ತಿಳಿಸಿದರು.

ಸಿಜೆಐ ರಂಜನ್ ಗೊಗೋಯಿ  ನೇತೃತ್ವದ ಸುಪ್ರೀಂಕೋರ್ಟಿನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಸುದೀರ್ಘವಾದ ೪೦ ದಿನಗಳ ವಿಚಾರಣೆಯ ಬಳಿಕ ಬುಧವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಗುರುವಾರ ಬೆಳಗ್ಗೆ ನ್ಯಾಯಪೀಠವು ತನ್ನ ಕೊಠಡಿಯೊಳಗೆ ತ್ರಿಸದಸ್ಯ ಸಂಧಾನ ಸಮಿತಿ ಸಲ್ಲಿಸಿದ ವರದಿಯ ಬಗ್ಗೆ ತನ್ನ ಕಲಾಪವನ್ನು ಕೈಗೆತ್ತಿಕೊಂಡಿದೆ. ಆದರೆ ಯಾವುದೇ ಕಕ್ಷಿದಾರರಿಗೂ ಇದರಲ್ಲಿ ಪಾಲೊಳ್ಳಲು ಅವಕಾಶ ಇಲ್ಲ.

ಭೂ ವಿವಾದ ಪ್ರಕರಣವು ಸಿವಿಲ್ ಪ್ರಕರಣವಾಗಿದ್ದು ಮತ್ತು ಕ್ರಿಮಿನಲ್ ವಿಷಯವಲ್ಲವಾದ್ದರಿಂದ, ತೀರ್ಪು ಪ್ರಕಟವಾಗುವುದಕ್ಕೆ ಮುನ್ನ ಯಾವುದೇ ಸಮಯದಲ್ಲಿ ಇತ್ಯರ್ಥಕ್ಕೆ ಬರಲು ಅವಕಾಶವಿದೆ. ಮುಖ್ಯ ನ್ಯಾಯಮೂರ್ತಿ ಗೊಗೋಯಿ ಅವರು ನವೆಂಬರ್ ೧೭ರಂದು ತಾವು ನಿವೃತ್ತರಾಗುವ ಮುನ್ನ ತೀರ್ಪು ನೀಡುವ ನಿರೀಕ್ಷೆ ಇದೆ.

ಸುನ್ನಿ ವಕ್ಫ್ ಮಂಡಳಿ, ನಿರ್ವಾಣಿ ಅಖಾರ, ನಿರ್ಮೋಹಿ ಅಖಾರ, ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ ಮತ್ತು ಇತರ ಕೆಲವು ಹಿಂದೂ ಕಕ್ಷಿದಾರರು ದಶಕಗಳಿಂದ ಕಗ್ಗಂಟಾಗಿರುವ ಭೂ ವಿವಾದವನ್ನು ಬಗೆಹರಿಸುವುದರ ಪರವಾಗಿವೆ ಎಂದು ಸಂಧಾನ ಸಮಿತಿಯ ಆಪ್ತ ಮೂಲಗಳು ತಿಳಿಸಿವೆ.

ಆದಾಗ್ಯೂ, ಎರಡು ಪ್ರಮುಖ ಪಕ್ಷಗಳಾದ ವಿಶ್ವ ಹಿಂದೂ ಪರಿಷದ್ (ವಿಎಚ್ ಪಿ) ಬೆಂಬಲಿತ ರಾಮ ಜನ್ಮಭೂಮಿ ನ್ಯಾಸ್,  ಮತ್ತು ರಾಮಲಲ್ಲಾ ವಿರಾಜ್‌ಮಾನ್ ಈ ಸಂಧಾನ ಪ್ರಕ್ರಿಯೆಯಲ್ಲಿ ಭಾಗಿಗಳಾಗಿಲ್ಲ. ರಾಮಲಲ್ಲಾ ವಿರಾಜಮಾನ್ ಹೂಡಿರುವ ಈ ಖಟ್ಲೆಯಲ್ಲಿ ರಾಮ ಜನ್ಮಭೂಮಿ ನ್ಯಾಸ್ ಕೂಡಾ ಪ್ರಮುಖ ಫಿರ್ಯಾದಿಗಳಲ್ಲಿ ಒಂದಾಗಿದೆ. ಇದಲ್ಲದೆ ಮೇಲ್ಮನವಿ ಸಲ್ಲಿಸಿದ ಇತರ ಆರು ಮುಸ್ಲಿಮ್ ಕಕ್ಷಿದಾರರೂ ಈ ಇತ್ಯರ್ಥ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ ಈ ’ಇತ್ಯರ್ಥ ಪ್ರಸ್ತಾವ’ ಒಂದು  ‘ಭಾಗಶಃ  ಪ್ರಕ್ರಿಯೆ’ಯಾಗಿದೆ.

ದೇವಾಲಯಗಳನ್ನು ನೆಲಸಮಗೊಳಿಸಿ ಬಳಿಕ ನಿರ್ಮಿಸಲಾಗಿರುವ ಮತ್ತು ೧೯೪೭ ರಂತೆ ಅಸ್ತಿತ್ವದಲ್ಲಿರುವ ಯಾವುದೇ ಮಸೀದಿ ಅಥವಾ ಇತರ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲು ಅವಕಾಶ ಇರುವ ೧೯೯೧ರ ಪೂಜಾ ಸ್ಥಳಗಳ ಕಾಯ್ದೆಯ ವಿಧಿಗಳ ಅಡಿಯಲ್ಲಿ ಅಯೋಧ್ಯಾ ವಿವಾದವನ್ನು ಇತ್ಯರ್ಥ ಪಡಿಸುವಂತೆ ಕಕ್ಷಿದಾರರು ನ್ಯಾಯಾಲಯವನ್ನು ಕೋರಿದ್ದಾರೆ. ಆದರೆ, ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಈ ಕಾಯ್ದೆಯು ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿದೆ.

ಮುಸ್ಲಿಮ್ ಪಕ್ಷಗಳು ಪ್ರಶ್ನಾರ್ಹವಾದ ಭೂಮಿಯನ್ನು ಸರ್ಕಾರವನ್ನು ಸ್ವಾಧೀನ ಪಡಿಸಿಕೊಳ್ಳಬಹುದು ಎಂದು ಸೂಚಿಸಿವೆ ಮತ್ತು ವಕ್ಫ್ ಮಂಡಳಿಯು ಭಾರತೀಯ ಪ್ರಾಕ್ತನ ಸಮೀಕ್ಷೆಯ (ಎಎಸ್‌ಐ) ಮಸೀದಿಗಳ ಆಯ್ದ ಪಟ್ಟಿಯನ್ನು ಸಲ್ಲಿಸಿ ಅವುಗಳನ್ನು  ಪ್ರಾರ್ಥನೆಗಾಗಿ ಮುಸ್ಲಿಮರಿಗೆ ಲಭ್ಯವಾಗುವಂತೆ ಮಾಡಬಹುದು ಎಂಬ ಸಲಹೆ ’ಇತ್ಯರ್ಥ ಪ್ರಸ್ತಾವ’ದಲ್ಲಿ ಇದೆ ಎನ್ನಲಾಯಿತು.

October 17, 2019 Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, News, Spardha, Temples, Temples, ದೇವಾಲಯಗಳು | | Leave a comment

ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪಿ. ಕೃಷ್ಣಭಟ್ ಮುಂಬಡ್ತಿ: ಕೊಲಿಜಿಯಂ ಮರುಶಿಫಾರಸು

17 judge p krishna bhat
ಪ್ರಕಿಯೆ ತ್ವರಿತಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಸೂಚನೆ

ನವದೆಹಲಿ: ಕರ್ನಾಟಕದ ಜಿಲ್ಲಾ ನ್ಯಾಯಾಧೀಶ ಪಿ. ಕೃಷ್ಣಭಟ್ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು.  ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರು ಮಾಡಿದ್ದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕಳೆದ ೪೪ ತಿಂಗಳುಗಳಿಂದ ಅವರ ಬಡ್ತಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ತಡೆ ಹಿಡಿದಿತ್ತು.

ಜಿಲ್ಲಾ ನ್ಯಾಯಾಧೀಶರ ವಿರುದ್ಧದ ಕಿರುಕುಳ ಆರೋಪವನ್ನು ಹಾಗೂ ಆ ಬಗ್ಗೆ ತನಿಖೆ ನಡೆಸಬೇಕೆಂಬ ಕೇಂದ್ರದ ಸಲಹೆಯನ್ನು ಕೊಲಿಜಿಯಂ  2019 ಅಕ್ಟೋಬರ್ 17ರ ಗುರುವಾರ ತಳ್ಳಿಹಾಕಿತು.

ವಿಷಯವನ್ನು ಕೊಲಿಜಿಯಂಗೆ ಒಪ್ಪಿಸದೆ ಜಿಲ್ಲಾ ನ್ಯಾಯಾಧೀಶ ಪಿ. ಕೃಷ್ಣಭಟ್ ವಿರುದ್ಧ ತನಿಖೆಯನ್ನು  ನಡೆಸುವಂತೆ  ಕೋರುವ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ  ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಜೆ. ಚೆಲಮೇಶ್ವರ ಅವರು ಕೇಂದ್ರದ ಕಾನೂನು ಸಚಿವಾಲಯವನ್ನು ತರಾಟೆಗೆ ತೆಗೆದುಕೊಳ್ಳುವುದರೊಂದಿಗೆ ಈ ಪ್ರಕರಣವು ನ್ಯಾಯಾಂಗ ಮತ್ತು ಸರ್ಕಾರದ  ನಡುವೆ ಘರ್ಷಣೆಗೆ ಕಾರಣವಾಗಿತ್ತು.

ನ್ಯಾಯಮೂರ್ತಿ ಚೆಲಮೇಶ್ವರ ಅವರು ೨೦೧೮ರಲ್ಲಿ ಬರೆದಿದ್ದ ಪತ್ರಕ್ಕೆ ಪ್ರತಿಯಾಗಿ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಅವರಿಗೆ ಪತ್ರ ಬರೆದು ಮಹಿಳಾ ನ್ಯಾಯಾಂಗ ಅಧಿಕಾರಿಯ ದೂರನ್ನು ಸಮರ್ಪಕವಾಗಿ ನಿಭಾಯಿಸಲಾಗಿಲ್ಲ ಎಂದು ಸೂಚಿಸಿದ್ದರು.

ಏನಿದ್ದರೂ, ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಈಗ ಕೃಷ್ಣಭಟ್ ಅವರಿಗೆ ಬಡ್ತಿ ನೀಡುವುದರ ಪರ ಒಲವು ವ್ಯಕ್ತ ಪಡಿಸಿದ್ದು, ಬಡ್ತಿ ನೀಡುವಂತೆ  ಹಿಂದೆ ಮಾಡಿದ್ದ ತನ್ನ ಶಿಫಾರಸನ್ನು ಪುನರುಚ್ಚರಿಸುವ ಮೂಲಕ ಸರ್ಕಾರದ ಆಕ್ಷೇಪವನ್ನು  ತಳ್ಳಿಹಾಕಿತು..

೨೦೧೬ರ ಆಗಸ್ಟ್ ತಿಂಗಳಲ್ಲಿ ಮಾಡಲಾಗಿದ್ದ ಮೂಲ ಶಿಫಾರಸಿನ ಪ್ರಕಾರವೇ ಪಿ. ಕೃಷ್ಣಭಟ್ ಅವರ ನೇಮಕಾತಿ ಪ್ರಕ್ರಿಯೆಯನು ತ್ವರಿತಗೊಳಿಸುವಂತೆ ಕೊಲಿಜಿಯಂ ಗುರುವಾರ ಬಿಡುಗಡೆ ಮಾಡಲಾದ ತನ್ನ ಹೇಳಿಕೆಯಲ್ಲಿ ಸರ್ಕಾರಕ್ಕೆ ಸೂಚಿಸಿತು..

ರಾಜ್ಯದ ಅತ್ಯಂತ ಹಿರಿಯ ನ್ಯಾಯಾಂಗ ಅಧಿಕಾರಿಗಳಲ್ಲಿ ಒಬ್ಬರಾದ ಕೃಷ್ಣ ಭಟ್ ಅವರಿಗೆ ಬಡ್ತಿ ನೀಡಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕರ್ನಾಟಕ ಹೈಕೋರ್ಟ್ ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್ ಕೊಲಿಜಿಯಂ ಅದನ್ನು ಅನುಮೋದಿಸಿತ್ತು.

ಆದರೆ ಮಹಳಾ ನ್ಯಾಯಾಂಗ ಅಧಿಕಾರಿ ಕಳುಹಿಸಿದ್ದ ಹೊಸ ದೂರನ್ನು ಆಧರಿಸಿ ಭಟ್ ವಿರುದ್ಧ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಅವರಿಗೆ ಕೇಂದ್ರ ಸರ್ಕಾರ ಪತ್ರ ಬರೆದಿತ್ತು.

ಕರ್ನಾಟಕ ಹೈಕೋರ್ಟಿನ ಆಗಿನ ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರು ಹಿಂದಿನ ಸಿಜೆಐ ಟಿಎಸ್. ಠಾಕೂರ್ ನೀಡಿದ್ದ ನಿರ್ದೇಶನದ ಮೇರೆಗೆ ತನಿಖೆ ನಡೆಸಿ ಮಹಿಳಾ ನ್ಯಾಯಾಂಗ ಅಧಿಕಾರಿಯ ದೂರು ಬುಡರಹಿತವಾದದ್ದು ಎಂಬ ತೀರ್ಮಾನಕ್ಕೆ ಬಂದಿದ್ದುದರ ಹೊರತಾಗಿಯೂ ಕೇಂದ್ರ ಸರ್ಕಾರ ಮರು ತನಿಖೆಯ ನಿರ್ದೇಶನ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರು ತಮ್ಮ ವರದಿಯಲ್ಲಿ ಆರೋಪಗಳನ್ನು ’ಅಸಮರ್ಪಕ ಮತ್ತು ಸೃಷ್ಟಿತ’ ಎಂಬುದಾಗಿ ಬಣ್ಣಿಸಿದ್ದಲ್ಲದೆ, ಭಟ್ ಅವರಿಗೆ ಮಸಿಬಳಿಯುವ ಮತ್ತು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅವರ ನೇಮಕಾತಿಯನ್ನು ತಡೆಗಟ್ಟುವ ಸಲುವಾಗಿ ದೂರು ನೀಡಲಾಗಿತ್ತು ಎಂದು ತಿಳಿಸಿದ್ದರು

October 17, 2019 Posted by | ಕರ್ನಾಟಕ, ಭಾರತ, ರಾಜ್ಯ, ರಾಷ್ಟ್ರೀಯ, ಸುಪ್ರೀಂಕೋರ್ಟ್, Finance, Flash News, India, Nation, News, Spardha | , | Leave a comment

ಐಎನ್ ಎಕ್ಸ್ ಮೀಡಿಯಾ ಪ್ರಕರಣ:  ಇಡಿಯಿಂದ ಅ.೨೪ರವರೆಗೆ ಚಿದು ತನಿಖೆ: ಕೋರ್ಟ್ ಅಸ್ತು

17 chidambaram
ನವದೆಹಲಿ
:  ಐಎನ್‌ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಅಕ್ಟೋಬರ್ ೨೪ರವರೆಗೆ ವಶದಲ್ಲಿ ಇಟ್ಟುಕೊಂಡು ತನಿಖೆ ನಡೆಸಲು 2019 ಅಕ್ಟೋಬರ್ 17ರ ಗುರುವಾರ ಅನುಮತಿ ನೀಡಿದ ದೆಹಲಿ ನ್ಯಾಯಾಲಯವು ಅಲ್ಲಿಯವರೆಗೆ ಕಾಂಗ್ರೆಸ್ ನಾಯಕನನ್ನು ಜಾರಿ ನಿರ್ದೇಶನಾಲಯದ (ಇಡಿ) ವಶಕ್ಕೆ ಒಪ್ಪಿಸಿತು.

ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಚಿದಂಬರಂ ಅವರನ್ನು ಪ್ರಶ್ನಿಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದರು ಮತ್ತು  ಜಾರಿ ನಿರ್ದೇಶನಾಲಯದ ವಶದಲ್ಲಿ ಇರುವಾಗ ಮನೆಯಲ್ಲೇ ತಯಾರು ಮಾಡಿದ ಆಹಾರ ನೀಡಲು, ಪಾಶ್ಚಾತ್ಯ ಶೌಚಾಲಯ ಬಳಕೆ ಮಾಡಲು ಮತ್ತು ಔಷಧಗಳನ್ನು ಪಡೆಯಲು ಅವಕಾಶ ನೀಡಿದರು.

ತನಿಖಾ ಸಂಸ್ಥೆಯು ೭೪ರ ಹರೆಯದ ಹಿರಿಯ ಕಾಂಗ್ರೆಸ್ ನಾಯಕನನ್ನು ತನಿಖೆಯ ಸಲುವಾಗಿ ೧೪ ದಿನಗಳ ಕಾಲ ತನ್ನ ವಶಕ್ಕೆ ಒಪ್ಪಿಸುವಂತೆ ಕೋರಿತ್ತು.

ನ್ಯಾಯಾಲಯವು ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ದಾಖಲಿಸಿದ ಪ್ರಕರಣದಲ್ಲಿ ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ಕೂಡಾ ಅಕ್ಟೋಬರ್ ೨೪ರವರೆಗೆ ವಿಸ್ತರಿಸಿತು.

ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ಐಎನ್‌ಎಕ್ಸ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ತನ್ನ ಮುಂದೆ ಹಾಜರು ಪಡಿಸಲು ನ್ಯಾಯಾಲಯವು ಬುಧವಾರ ವಾರಂಟ್ ಹೊರಡಿಸಿತ್ತು.

ನ್ಯಾಯಾಲಯದ ನಿರ್ದೇಶನದ ಮೇರೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಬೆಳಗ್ಗೆ ಚಿದಂಬರಂ ಅವರನ್ನು ತಿಹಾರ್ ಸೆರೆಮನೆಯಲ್ಲಿ ಕೆಲಕಾಲ ಪ್ರಶ್ನಿಸಿ ಬಳಿಕ ಬಂಧಿಸಿದ್ದರು.

October 17, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Spardha | | Leave a comment

ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ: ಡಿಕೆಶಿ ಜಾಮೀನು ಅರ್ಜಿ, ಆದೇಶ ಕಾಯ್ದಿರಿಸಿದ ದೆಹಲಿ ಹೈಕೋರ್ಟ್

17 dk shivakumar
ನವದೆಹಲಿ
:  ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ರಾಜ್ಯದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ದೆಹಲಿ ಹೈಕೋರ್ಟ್  2019 ಅಕ್ಟೋಬರ್ 17ರ ಗುರುವಾರ ಕಾಯ್ದಿರಿಸಿತು.

ಉಭಯ ಕಡೆಯ ವಕೀಲರಿಂದ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ಅವರು ಜಾಮೀನು ಅರ್ಜಿ ಕುರಿತ ತೀರ್ಪನ್ನು ಕಾಯ್ದಿರಿಸಿದರು.

ಶಿವಕುಮಾರ್ ಅವರ ಜಾಮೀನು ಕೋರಿಕೆ ಅರ್ಜಿ ಮೇಲೆ ನಡೆದ ವಿಚಾರಣೆಯಲ್ಲಿ ಜಾರಿ ನಿರ್ದೇನಾಲಯದ (ಇಡಿ) ಪರವಾಗಿ ವಾದ ಮಂಡಿಸಿದ ವಕೀಲ ಕೆ.ಎಂ ನಟರಾಜ್ ಅವರು ಈ ಪ್ರಕರಣ ಗಂಭೀರವಾದುದಾಗಿದ್ದು, ಜಾಮೀನು ಸಿಕ್ಕಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಪ್ರಕರಣ ಗಂಭೀರವಾಗಿದೆ, ಶಿವಕುಮಾರ್ ಅವರು ಅಕ್ರಮ ಆಸ್ತಿ ಗಳಿಕೆಯಲ್ಲಿ ವಿಶ್ವದಾಖಲೆ ಮಾಡಿದ್ದಾರೆ ಎಂದು ವಾದ ಮಂಡಿಸಿದ ನಟರಾಜ್, ಪ್ರಕರಣದ ಹಲವು ಆಯಾಮಗಳ ಕುರಿತಾದ ವಿವರಗಳನ್ನು ನ್ಯಾಯಮೂರ್ತಿಗಳ ಮುಂದೆ ತೆರೆದಿಟ್ಟರು. ಇದು ದೇಶದ ಆರ್ಥಿಕತೆಗೆ ಹೊಡೆತ ನೀಡಿದ ಪ್ರಕರಣವಾಗಿದ್ದು ಇದರಲ್ಲಿ ಆಳವಾದ ಷಡ್ಯಂತ್ರ ನಡೆದಿದೆ ಎಂದು ಅವರು ಹೇಳಿದರು.

ಪಿಎಂಎಲ್‌ಎ ಪ್ರಕರಣದಲ್ಲಿ ಬಂಧಿತನಾಗಿದ್ದ ಹಸನ್ ಅಲಿ ಖಾನ್ ಪ್ರಕರಣವನ್ನು ಉಲ್ಲೇಖಿಸಿದ ಇಡಿ ಪರ ವಕೀಲರು ’ಪಿಎಂಎಎಲ್ ಕಾಯಿದೆಯಡಿಯಲ್ಲಿ ಹಸನ್ ಅಲಿಗೆ ಜಾಮೀನು ನಿರಾಕರಣೆ ಮಾಡಲಾಗಿದೆ. ಇದೇ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿರುವ ಪಿ. ಚಿದಂಬರಂ ಅವರಿಗೂ ಜಾಮೀನು ನಿರಾಕರಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರಿಗೂ ಜಾಮೀನು ನೀಡಬಾರದು’ ಎಂದು ಮನವಿ ಮಾಡಿದರು.

ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಡಿಕೆಶಿ ಬಳಿ ೩೦೦ ಕಡೆಗಳಲ್ಲಿ ಆಸ್ತಿ ಇರುವುದು ಪತ್ತೆಯಾಗಿದೆ. ಆದರೆ ಇದಕ್ಕೆ ಸೂಕ್ತವಾದ ದಾಖಲೆಗಳು ಇಲ್ಲ. ಕೃಷಿಯಿಂದ ಆಸ್ತಿ ಸಂಪಾದನೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಕೃಷಿಯಿಂದ ಇಷ್ಟು ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ವಕೀಲರು, ಕಳೆದ ೨೦ ವರ್ಷಗಳಲ್ಲಿ ಕೃಷಿಯಿಂದ ಗಳಿಕೆಯಾದ ಆದಾಯ ೧.೩೭ ಕೋಟಿ ಮಾತ್ರ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಶಿವಕುಮಾರ್  ಬಳಿ ಇರುವ ಕೋಟಿ ಕೋಟಿ ಹಣಕ್ಕೆ ದಾಖಲೆಗಳು ಇಲ್ಲ. ತನಿಖೆ ಸಂದರ್ಭದಲ್ಲಿ ಕೋಟಿ ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ . ದಾಳಿಯ ಸಂದರ್ಭದಲ್ಲಿ ಡಿಕೆಶಿ ಬಳಿ ನಿಷೇಧಿಸಲಾಗಿದ್ದ  ಹಾಗೂ ಹೊಸ ನೋಟುಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಹಣದ ವರ್ಗಾವಣೆ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದೆ. ಯಾವುದೇ ಮೂಲ ಇಲ್ಲದೆ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಹೇಳಿದ ವಕೀಲ ನಟರಾಜ್, ಸಾಕ್ಷಗಳನ್ನು ತಿರುಚುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಕೋರಿದರು.

ಡಿಕೆ ಶಿವಕುಮಾರ್ ಪರವಾಗಿ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ  ಅವರು ಜಾಮೀನು ನೀಡುವಂತೆ ಮನವಿ ಮಾಡಿದರು.

ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ಪೀಠದ ಮುಂದೆ ವಿಚಾರಣೆ ಆರಂಭವಾದಾಗ ಡಿಕೆ ಶಿವಕುಮಾರ್ ಪರ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಹಾಜರಿದ್ದರು. ಆದರೆ, ಇ.ಡಿ. ಪರ ವಕೀಲರಾದ ಕೆ.ಎಂ. ನಟರಾಜ್ ವಾದ ಮಂಡನೆಗೆ ಬಂದಿರಲಿಲ್ಲ. ಆಗ ಕಿರಿಯ ವಕೀಲರು, ನಮ್ಮ ಹಿರಿಯ ವಕೀಲರಾದ ಕೆ.ಎಂ. ನಟರಾಜ್, ಅಮಿತ್ ಮಹಾಜನ್ ಅವರು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ಇದ್ದಾರೆ. ಹೀಗಾಗಿ ಅವರು ಬಂದಿಲ್ಲ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.

ಇದರಿಂದ ಸಿಟ್ಟಾದ ನ್ಯಾಯಮೂರ್ತಿಗಳು, ನ್ಯಾಯಾಲಯವನ್ನು ನಿಮ್ಮಿಷ್ಟ ಬಂದಂತೆ ಪರಿಗಣಿಸಬೇಡಿ. ಈಗಾಗಲೇ ಸಾಕಷ್ಟು ಸಮಯ ಕೊಟ್ಟಿದ್ದೇವೆ. ಹೇಳಿದ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಿಲ್ಲ ಎಂದರೆ ಹೇಗೆ. ಕೋರ್ಟ್ ಜೊತೆ ಆಟ ಆಡಬೇಡಿ. ೩.೩೦ಕ್ಕೆ ಸಮಯ ನಿಗದಿ ಮಾಡಿದ್ದರೂ ಏಕೆ ಬರಲಿಲ್ಲ? ಎಂದು ತರಾಟೆಗೆ ತೆಗೆದುಕೊಂಡು, ಎರಡು ದಿನದಲ್ಲಿ ಲಿಖಿತ ರೂಪದಲ್ಲಿ ವಾದ ಸಲ್ಲಿಸಲು ಇ.ಡಿ.ಗೆ ನೋಟಿಸ್ ನೀಡಿ, ತೀರ್ಪನ್ನು ಕಾಯ್ದಿರಿಸಿದರು.

ಇದಾದ ಬಳಿಕ  ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಪರ ವಕೀಲ ನಟರಾಜ್ ಆಗಮಿಸಿದರು. ವಾದ ಮಂಡನೆ ಮಾಡುವುದಾಗಿ ನ್ಯಾಯಮೂರ್ತಿಗೆ ನ್ಯಾಯಾಲಯ ಸಿಬ್ಬಂದಿ ಮೂಲಕ ಹೇಳಿಕಳುಹಿಸಿದರು. ಆಗ ಉಭಯ ಕಡೆಯ ವಕೀಲರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಮಾತನಾಡಿದ ನ್ಯಾಯಮೂರ್ತಿಯವರು ಮತ್ತೆ ವಿಚಾರಣೆ ಮುಂದುವರೆಸಲು ಒಪ್ಪಿಗೆ ಸೂಚಿಸಿದರು.

ವಿಚಾರಣೆ ಆರಂಭವಾದಾಗ ನಟರಾಜ್ ಅವರು ನ್ಯಾಯಾಲಯ ಮತ್ತು ಪ್ರತಿವಾದಿಯ ಕ್ಷಮೆ ಕೇಳಿ, ವಾದ ಮಂಡನೆ ಆರಂಭಿಸಿದರು.

ಆದಾಯ ತೆರಿಗೆ ಇಲಾಖೆ ನೀಡಿದ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ವಿಚಾರಣೆ ಮಾಡುತ್ತಿದೆ. ಡಿಕೆಶಿ ಅವರಿಗೆ ಸೇರಿದ ೮.೫೯ ಕೋಟಿ ರೂ. ಸಿಕ್ಕಿದೆ. ದೆಹಲಿಯ ೩ ಜಾಗದಲ್ಲಿ ೮.೫೯ ಕೋಟಿ ಸಿಕ್ಕಿದೆ. ಈ ಹಣದ ಬಗ್ಗೆ ಡಿಕೆಶಿ ಬಳಿ ಮಾಹಿತಿ ಇಲ್ಲ. ಐಟಿ ದೂರಿನ ಮೇಲೆ ಇಡಿ ತನಿಖೆ ಮಾಡುತ್ತಿದೆ ಎಂದು ಹೇಳಿದರು.

ಹಣ ಸಿಕ್ಕಿದ ಬಗ್ಗೆ ತನಿಖಾಧಿಕಾರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಶಿವಕುಮಾರ್ ಅವರು ಈ ಬಗ್ಗೆ ಸಮರ್ಪಕ ಉತ್ತರ ನೀಡಿಲ್ಲ. ಈ ಹಣ ಫ್ಲಾಟ್ ಮಾಲೀಕ ಶರ್ಮಾರದ್ದಾ? ಡಿಕೆಶಿ ಅವರಿಗೆ ಸೇರಿದ್ದಾ? ಎಂಬುದನ್ನು ತಿಳಿಯಬೇಕಾಗಿದೆ. ಇದು ತೆರಿಗೆ ವಂಚನೆ ಪ್ರಕರಣ ಮಾತ್ರವಲ್ಲ. ಸಚಿವರಾಗಿದ್ದರಿಂದ ಬೇರೇನೋ ನಡೆದಿರಬೇಕು. ೧೯೮೯ರಿಂದಲೇ ಶಾಸಕರಾಗಿರುವ ಶಿವಕುಮಾರ್ ಅವರು ಏನಾದರೂ ವ್ಯವಹಾರ ಮಾಡಿರಬೇಕು ಎಂದು ಕೆ.ಎಂ.ನಟರಾಜ್ ವಾದಿಸಿದರು.

ಈವರೆಗೆ ೧೨ ಮಂದಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಲಾಗಿದೆ. ಯಾರನ್ನೂ ಆರೋಪಿ ಅಂತ ಮಾಡಿಲ್ಲ. ಡಿಕೆ ಶಿವಕುಮಾರ್ ಹೇಳಿಕೆ ದಾಖಲಿಸಿಕೊಂಡ ಬಳಿಕವೇ ಬಂಧನ ಮಾಡಲಾಗಿದೆ. ೧೨ ಅಲ್ಲ ೧೪ ಜನರಿಗೆ ಸಮನ್ಸ್ ನೀಡಿ ವಿಚಾರಣೆ ಮಾಡುತ್ತಿದ್ದೇವೆ. ಡಿಕೆಶಿ, ಆಪ್ತರ ೩೧೭ ಬ್ಯಾಂಕ್ ಖಾತೆಗಳಿವೆ. ಅಷ್ಟೂ ಖಾತೆಗಳಿಂದ ಹಣ ವರ್ಗಾವಣೆ ಆಗಿದೆ. ಇದು ಅಕ್ರಮ ಹಣ ವರ್ಗಾವಣೆ ಎಂದು ನಟರಾಜ್ ವಿವರಿಸಿದರು.

ಶಿವಕುಮಾರ್ ಅವರು ಕೆಲವು ಆಸ್ತಿಗಳನ್ನು ಹೊಂದಿದ್ದಾರೆ. ಶಿವಕುಮಾರ್ ೨೪, ಸುರೇಶ್ ೨೭, ತಾಯಿ ಬಳಿ ೩೮ ಆಸ್ತಿ ಇದೆ. ಎಲ್ಲಕ್ಕೂ ಕೃಷಿಯೇ ಆದಾಯದ ಮೂಲ ಅಂತಿದ್ದಾರೆ. ಸುರೇಶ್ ಅವರು ಆಯೋಗದ ಮುಂದೆಯೂ ಘೋಷಿಸಿಕೊಂಡಿದ್ದಾರೆ. ಗೌರಮ್ಮ ಅವರಿಗೆ ೩೮ ಆಸ್ತಿ ಹೇಗೆ ಬಂತೆಂದೇ ಗೊತ್ತಿಲ್ಲ. ಶಿವಕುಮಾರ್ ಕೂಡ ೨೪ ಆಸ್ತಿ ಬಗ್ಗೆ ಘೋಷಿಸಿದ್ದಾರೆ. ಆಯೋಗ, ಐಟಿಯಲ್ಲಿ ಘೋಷಿಸಿಕೊಂಡಿದ್ದಾರೆ. ತಂದೆಯಿಂದ ಆಸ್ತಿ ಬಂತು ಎನ್ನುತ್ತಿದ್ದಾರೆ. ಆದರೆ ಅದಕ್ಕೆ ಯಾವುದೇ ಪುರಾವೆಗಳಿಲ್ಲ. ವಿಷಯ ಇರುವುದು ’ಆದಾಯದ ಮೂಲ’ದಲ್ಲಿ. ಬಹುತೇಕ ಆಸ್ತಿ ಹಣ ಕೊಟ್ಟು ಖರೀದಿಸಿದ್ದಾರೆ. ಡಿಕೆಶಿ ಮಗಳು ಈಗಷ್ಟೇ ಪದವಿ ಮುಗಿಸಿದ್ದಾರೆ. ಆಕೆ ಹೆಸರಿನಲ್ಲಿ ೧೦೮ ಕೋಟಿ ಇದೆ. ಅದರಲ್ಲಿ ಆಕೆಗೆ ೮೦ ಕೋಟಿ ಸಾಲ ಇದೆ. ೪೦ ಕೋಟಿ ರೂ. ಬ್ಯಾಂಕ್ ಸಾಲ ಇದೆ. ೪೦ ಕೋಟಿ ಅನಾಮಿಕ ಮೂಲದಿಂದ ಸಾಲ ಎನ್ನಲಾಗಿದೆ. ಸಾಲ ಕೊಟ್ಟವರ ಬಗ್ಗೆ ಮಾಹಿತಿಯೇ ಇಲ್ಲ. ಅವರ ಹೆಸರುಗಳು ಗೊತ್ತಿಲ್ಲ  ಎಂದು  ನಟರಾಜ್ ಹೇಳಿದರು.

ಒಟ್ಟು ಆ ಕುಟುಂಬದಲ್ಲಿ ೩೦೦ ಆಸ್ತಿಗಳಿವೆ. ಮೊದಲು ಕೃಷಿ ಆದಾಯ ಎಂದು ಹೇಳಿದರು. ಆದರೆ ಬೇರೆ ಆಸ್ತಿಗಳು ಬಂದಿದ್ದು ಹೇಗೆ? ಇಷ್ಟು ಆದಾಯದಿಂದ ಇಷ್ಟು ಆಸ್ತಿ ಸಾಧ್ಯವಿಲ್ಲ ಎಂದು ಅವರು ನುಡಿದರು.

ಬಳಿಕ ಇಡಿ ಅಧಿಕಾರಿಗಳಾದ ಮೋನಿಕಾ ಶರ್ಮಾ ಮತ್ತು ಸೌರಬ್ ಮೆಹ್ತಾ ಅವರು ನ್ಯಾಯಮೂರ್ತಿಯವರಿಗೆ ಗೌಪ್ಯವಾಗಿ ಶಿವಕುಮಾರ್ ಅವರ ಒಟ್ಟಾರೆ ಆಸ್ತಿಗಳ ನಕ್ಷೆ ತೋರಿಸಿ, ಸುಮಾರು ೭ ನಿಮಿಷಗಳ ಕಾಲ ವಿವರಣೆ ನೀಡಿದರು.

ಬಳಿಕ ವಾದ ಆರಂಭಿಸಿದ ಸಿಂಘ್ವಿ, ಕರ್ನಾಟಕದಲ್ಲಿ ಶಾಸಕರ ಖರೀದಿ ನಡೆಯುತ್ತಿತ್ತು. ಡಿಕೆ ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಶಾಸಕರ ಖರೀದಿ ತಡೆದರು. ಪಕ್ಷದ ಪರವಾಗಿ ಬಂಡೆಯಂತೆ ನಿಂತಿದ್ದರು. ಹಾಗಾಗಿ ಡಿಕೆಶಿ ಮೇಲೆ ಆರೋಪ ಮಾಡಲಾಗುತ್ತಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಬರೆದವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ಕೆ.ಎಂ. ನಟರಾಜ್ ಕೂಡ ಇದನ್ನು ಒಪ್ಪುತ್ತಾರೆ. ಈ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಬರೆದ ಇಡಿ ಬಗ್ಗೆ ಸಿಂಘ್ವಿ ವ್ಯಂಗ್ಯ ಮಾಡಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಜಾಮೀನು ಅರ್ಜಿ ತೀರ್ಪನ್ನು ಕಾಯ್ದಿರಿಸಿದರು.

October 17, 2019 Posted by | ಆರ್ಥಿಕ, ಕರ್ನಾಟಕ, ಭಾರತ, ರಾಜ್ಯ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Spardha | | Leave a comment

ಸೌದಿ ಅರೇಬಿಯಾ: ಭಾರೀ ವಾಹನಕ್ಕೆ ಬಸ್ ಡಿಕ್ಕಿ; 35 ವಿದೇಶೀಯರ ಸಾವು

17 saudi-arabia-bus-crash spardha web
ಮೃತರಲ್ಲಿ ಬಹುತೇಕ ಮಂದಿ ಅರಬ್ ಮತ್ತು ಏಷ್ಯಾದ ಯಾತ್ರಿಕರು

ರಿಯಾದ್: ಮುಸ್ಲಿಂ ಪವಿತ್ರ ನಗರ ಮದೀನಾ ಬಳಿ ಖಾಸಗಿ ಬಸ್ಸೊಂದು ಭಾರೀ ವಾಹನವೊಂದಕ್ಕೆ (ಎಕ್ಸಕಾವೇಟರ್)  ಡಿಕ್ಕಿ ಹೊಡೆದ ಪರಿಣಾಮ 35 ವಿದೇಶಿಯರು 2019 ಅಕ್ಟೋಬರ್ 16ರ ಬುಧವಾರ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಸೌದಿ ಸರ್ಕಾರಿ ಮಾಧ್ಯಮ ತಿಳಿಸಿತು.

ಪಶ್ಚಿಮ ಸೌದಿ ಅರೇಬಿಯಾ ನಗರದ ಬಳಿ “ಖಾಸಗಿ ಚಾರ್ಟರ್ಡ್ ಬಸ್  ಮತ್ತು ಭಾರೀ ವಾಹನ (ಲೋಡರ್)” ನಡುವೆ ಡಿಕ್ಕಿ ಸಂಭವಿಸಿದೆ ಎಂದು ಮದೀನಾ ಪೊಲೀಸರ ವಕ್ತಾರರು ಅಧಿಕೃತ ಸೌದಿ ಪತ್ರಿಕಾ ಸಂಸ್ಥೆಗೆ ತಿಳಿಸಿದ್ದಾರೆ.

ಅಪಘಾತದಲ್ಲಿ ಸಿಕ್ಕಿಹಾಕಿಕೊಂಡವರು ಅರಬ್ ಮತ್ತು ಏಷ್ಯಾದ ಯಾತ್ರಿಕರು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದ ಬೆಂಕಿಯಿಂದ ಧಗದಗಿಸುತ್ತಿದ್ದ ಬಸ್ಸಿನ ಚಿತ್ರಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.

ಗಾಯಾಳುಗಳನ್ನು ಅಲ್-ಹಮ್ನಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಧಿಕಾರಿಗಳು ತನಿಖೆ  ಪ್ರಾರಂಭಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ 2018ರ ಏಪ್ರಿಲ್ ತಿಂಗಳಲ್ಲಿ ಇಂಧನ ಟ್ಯಾಂಕರಿಗೆ ಬಸ್ಸೊಂದು  ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಬ್ರಿಟಿಷ್ ಯಾತ್ರಿಕರು ಸಾವನ್ನಪ್ಪಿ ೧೨ ಮಂದಿ ಗಾಯಗೊಂಡಿದ್ದರು. ಆ ಬಳಿಕ ಸಂಭವಿಸಿದ ಭಾರೀ ದುರಂತ ಇದಾಗಿದೆ. ಬಸ್ ಪ್ರಯಾಣಕರು ಪವಿತ್ರ ನಗರವಾದ ಮೆಕ್ಕಾಗೆ ಹೊರಟಿದ್ದರು.

2017ರ  ಜನವರಿ ತಿಂಗಳಲ್ಲಿ, ಮೆಕ್ಕಾಗೆ ತೀರ್ಥಯಾತ್ರೆ ಮಾಡಿದ ನಂತರ ಮದೀನಾಕ್ಕೆ ತೆರಳುತ್ತಿದ್ದಾಗ ಎರಡು ತಿಂಗಳ ಮಗು ಸೇರಿದಂತೆ ಆರು ಮಂದಿ ಬ್ರಿಟಿಷರು ಮಿನಿ ಬಸ್‌ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ತೈಲ-ಅವಲಂಬಿತ ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ಪ್ರಯತ್ನಗಳ ಭಾಗವಾಗಿ, ಅಲ್ಟ್ರಾ-ಕನ್ಸರ್ವೇಟಿವ್ ಸಾಮ್ರಾಜ್ಯವು ವರ್ಷಪೂರ್ತಿ ಲಕ್ಷಾಂತರ ಮಂದಿ ಯಾತ್ರಿಕರೂ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸಿ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸಲು ಬಯಸಿದ್ದು ಆ ನಿಟ್ಟಿನಲ್ಲಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ.

ಕಳೆದ ತಿಂಗಳಿನವರೆಗೆ  ದೇಶವು ಮುಸ್ಲಿಂ ಯಾತ್ರಿಕರು, ವಿದೇಶಿ ಕಾರ್ಮಿಕರು ಮತ್ತು ಇತ್ತೀಚೆಗೆ ಕ್ರೀಡಾಕೂಟ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರಿಗೆ ಮಾತ್ರ ವೀಸಾಗಳನ್ನು ನೀಡಿತು. ಆದರೆ ತೈಲ-ನಂತರದ ಯುಗಕ್ಕೆ ಅತಿದೊಡ್ಡ ಅರಬ್ ಆರ್ಥಿಕತೆಯನ್ನು ಸಿದ್ಧಪಡಿಸುವ ಯತ್ನಗಳ ಭಾಗವಾಗಿ ಪ್ರವಾಸಿಗರಿಗೆ ಈಗ ಭೇಟಿ ನೀಡಲು ಅವಕಾಶ ಒದಗಿಸಿದೆ..

2015ರ ಸೆಪ್ಟೆಂಬರಿನಲ್ಲಿ  ಹಜ್ ವಾರ್ಷಿಕ ತೀರ್ಥಯಾತ್ರೆ ಕಾಲದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ನೂರಾರು ಇರಾನಿಯನ್ನರು ಸೇರಿದಂತೆ ೨,೩೦೦ ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.

ಅದೇ ತಿಂಗಳ ಆದಿಯಲ್ಲಿ  ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಅಂಗಳಕ್ಕೆ ನಿರ್ಮಾಣದ ಕ್ರೇನ್ ಉರುಳಿಬಿದ್ದು ೧೦೦ ಮಂದಿ ಮೃತರಾಗಿದ್ದರು.

October 17, 2019 Posted by | Accidents, ವಿಶ್ವ/ ಜಗತ್ತು, Flash News, General Knowledge, News, Spardha | | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ