SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಡಿಕೆ ಶಿವಕುಮಾರ್‌ಗೆ ದೆಹಲಿ ಹೈಕೋರ್ಟ್ ಶರತ್ತಿನ ಜಾಮೀನು


23 dk shivakumar೪೮ ದಿನಗಳ ಸೆರೆವಾಸದ ಬಳಿಕ ಲಭಿಸಿದ ನಿರಾಳತೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇಡಿ) ಒಂದೂವರೆ ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿ ತಿಹಾರ್ ಸೆರೆಮನೆ ಸೇರಿದ್ದ ಕರ್ನಾಟಕದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ  ದೆಹಲಿ ಹೈಕೋರ್ಟ್ 2019 ಅಕ್ಟೋಬರ್ 23ರ ಬುಧವಾರ ಶರತ್ತಿನ ಜಾಮೀನು ಮಂಜೂರು ಮಾಡಿತು. ಇದರೊಂದಿಗೆ ಬಂಧನಕ್ಕೆ ಒಳಗಾದ ೪೮ ದಿನಗಳ ಬಳಿಕ ೫೭ರ ಹರೆಯದ ಕಾಂಗ್ರೆಸ್ ನಾಯಕನಿಗೆ ನಿರಾಳತೆ ಲಭಿಸಿತು.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ಐಪಿಸಿ ಸೆಕ್ಷನ್ ೧೨೦ ಬಿ ಬಗ್ಗೆ ವಿವರಣೆ ನೀಡಿ ತೀರ್ಪನ್ನು ಪ್ರಕಟಿಸಿದರು. ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಕುರಿತು ವಾದ, ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ತಮ್ಮ ತೀರ್ಪನ್ನು 2019 ಅಕ್ಟೋಬರ್ 23ರ ಬುಧವಾರಕ್ಕೆ ಕಾಯ್ದಿರಿಸಿದ್ದರು.

ತಿಹಾರ್ ಜೈಲು ವಾಸ ಅನುಭವಿಸುತ್ತಿದ್ದ ಶಿವಕುಮಾರ್ ಅವರ ಆರೋಗ್ಯ ಸ್ಥಿತಿ ಗಮನಿಸಿ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ಏಕಸದಸ್ಯ ಪೀಠ  ಜಾಮೀನು ಮಂಜೂರು ಮಾಡಿತು. ಇದರ ಜೊತೆಗೆ ೨೫ ಲಕ್ಷ  ರೂಪಾಯಿ ಮೌಲ್ಯದ ಎರಡು ಬಾಂಡುಗಳನ್ನು ಒದಗಿಸಬೇಕು, ಪಾಸ್ ಪೋರ್ಟ್‌ನ್ನು ಒಪ್ಪಿಸಬೇಕು ಮತ್ತು ವಿಚಾರಣೆಗೆ ಸಹರಿಸಬೇಕು ಎಂಬ ಶರತ್ತುಗಳನ್ನು ವಿಧಿಸಿತು.

ಕಾಂಗ್ರೆಸ್ ನಾಯಕ ವಿದೇಶಕ್ಕೆ ಪರಾರಿಯಾಗಬಹುದು ಎಂಬುದನ್ನು ತೋರಿಸುವಂತಹ ಯಾವುದೇ ಸಾಕ್ಷ್ಯಧಾರವೂ ಇಲ್ಲವಾದ್ದರಿಂದ ಅವರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಜಾಮೀನು ಮಂಜೂರು ಮಾಡುತ್ತಾ ನ್ಯಾಯಮೂರ್ತಿ ಸುರೇಶ್ ಕೈಟ್ ಹೇಳಿದರು.

ದಾಖಲೆಗಳು ತನಿಖಾ ಸಂಸ್ಥೆಯ ಬಳಿ ಇರುವುದರಿಂದ ಶಿವಕುಮಾರ್ ಅವರು ಸಾಕ್ಷ್ಯಾಧಾರ ನಾಶಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಳಿದರು.

ಶಿವಕುಮಾರ್ ಅವರು ಅಧಿಕಾರದಲ್ಲಿ ಇಲ್ಲ ಮತ್ತು ಅವರು ಅಥವಾ ಅವರ ಕುಟುಂಬ ಸದಸ್ಯರು  ಅಥವಾ ನಿಕಟವರ್ತಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬುದನ್ನು ತೋರಿಸುವಂತಹ ಯಾವುದೇ ಪುರಾವೆ ಇಲ್ಲ ಎಂದೂ ಪೀಠ ಹೇಳಿತು.

ಆದಾಗ್ಯೂ, ಶಿವಕುಮಾರ್ ಅವರನ್ನು ೨೫ಲಕ್ಷ ರೂಪಾಯಿಗಳ ಬಾಂಡ್ ಮತ್ತು ಎರಡು ಖಾತರಿಗಳನ್ನು ಹಾಜರು ಪಡಿಸಿದ ಬಳಿಕ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.

ಶಿವಕುಮಾರ್ ಅವರು ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರ ಹೋಗುವಂತಿಲ್ಲ, ತನಿಖೆಗೆ ಲಭ್ಯರಿರಬೇಕು/ ಸಹಕರಿಸಬೇಕು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದೂ ಹೈಕೋರ್ಟ್ ಜಾಮೀನು ಮಂಜೂರು ಮಾಡುತ್ತಾ ಶರತ್ತುಗಳನ್ನು ವಿಧಿಸಿತು.

ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯವು ತನಿಖೆಗಾಗಿ ದೆಹಲಿಗೆ ಕರೆಸಿಕೊಂಡು ನಾಲ್ಕು ದಿನಗಳ ಬಳಿಕ ಸೆಪ್ಟೆಂಬರ್ ೩ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಬಂಧಿಸಿತ್ತು. ಜಾರಿ ನಿರ್ದೇಶನಾಲಯ ತನಿಖೆಯ ಬಳಿಕ ಅವರನ್ನು ತಿಹಾರ್ ಸೆರೆಮನೆಯಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ತಮಗೆ ಜಾರಿ ನಿರ್ದೇಶನಾಲಯದ (ಇಡಿ) ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಅವರು ದೆಹಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಶಿವಕುಮಾರ್ ಅವರು ಪ್ರಭಾವಶಾಲಿ ವ್ಯಕ್ತಿಯಾಗಿದ್ದು, ಬಿಡುಗಡೆಯಾದರೆ ಸಾಕ್ಷ್ಯದಲ್ಲಿ ಕೈಯಾಡಿಸುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬುದಾಗಿ ವಾದಿಸುವ ಮೂಲಕ ಜಾರಿ ನಿರ್ದೇಶನಾಲಯವು ಅವರಿಗೆ ಜಾಮೀನು ಮಂಜೂರು ಮಾಡಲು ತೀವ್ರ ವಿರೋಧ ವ್ಯಕ್ತ ಪಡಿಸಿತ್ತು.

ಕರ್ನಾಟಕದಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವಕುಮಾರ್ ಅವರ ವಿರುದ್ಧ ನವದೆಹಲಿಯ ಕರ್ನಾಟಕ ಭವನದ ನೌಕರ ಹನುಮಂತಯ್ಯ ಮತ್ತು ಇತರರ ಜೊತೆಗೆ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್ ಎ) ಕಾಯ್ದೆಯ ಅಡಿಯಲ್ಲಿ ವಿವಿಧ ಅಪರಾಧ ಎಸಗಿದ ಆರೋಪಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು.

ಜಾರಿ ನಿರ್ದೇಶನಾಲಯದಿಂದ ಸೆಪ್ಟೆಂಬರ್ ೩ರಂದು ಬಂಧಿತರಾದ ಒಂದೂವರೆ ತಿಂಗಳ ಸೆರೆ ವಾಸದ ಬಳಿಕೆ ಡಿಕೆ ಶಿವಕುಮಾರ್ ಬಂಧಮುಕ್ತಿಯ ಆದೇಶವನ್ನು ಪಡೆದರು.

ಪ್ರಕರಣದ ಹಿನ್ನೆಲೆ:

ಆದಾಯ ತೆರಿಗೆ ಇಲಖೆಯು ಕಳೆದ ವರ್ಷ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿದ್ದ ಕೋಟ್ಯಂತರ ರೂಪಾಯಿಗಳ ಹವಾಲಾ ವಹಿವಾಟು ಮತ್ತು ತೆರಿಗೆ ವಂಚನೆ ಆರೋಪದ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ಆಧರಿಸಿ ಜಾರಿ ನಿರ್ದೇಶನಾಲಯವು ಹಣ ವಗಾವಣೆ ಪ್ರಕರಣವನ್ನು ದಾಖಲಿಸಿತ್ತು.

ಶಿವಕುಮಾರ್ ಮತ್ತು ಅವರ ನಿಕಟವರ್ತಿ ಎಸ್‌ಕೆ ಶರ್ಮ ಅವರು ಭಾರೀ ಮೊತ್ತದ ಲೆಕ್ಕರಹಿತ ಹಣವನ್ನು ಇತರ ಮೂವರು ಆರೋಪಿಗಳ ನೆರವಿನೊಂದಿಗೆ ನಿಯಮಿತವಾಗಿ ಹವಾಲಾ ಜಾಲದ ಮೂಲ ಕಳುಹಿಸುತ್ತಿದ್ದರು ಎಂದು ಆದಾಯ ತೆರಿಗೆ ಇಲಾಖೆ ತನ್ನ ದೋಷಾರೋಪ ಪಟ್ಟಿಯಲ್ಲಿ ಆಪಾದಿಸಿತ್ತು.

೨೦೧೭ರ ನಿರ್ಣಾಯಕ ರಾಜ್ಯಸಭಾ ಚುನಾವಣೆಗೆ ಮುನ್ನ ಗುಜರಾತಿನ ಶಾಸಕರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಆಶ್ರಯ ಒದಗಿಸುವಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಇದೇ ವೇಳೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶಿವಕುಮಾರ್ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆದಾಳಿ ನಡೆಸಿದ್ದರು.

ಈ ದಾಳಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ೮.೮೨ ಕೋಟಿ ರೂಪಾಯಿಗಳ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡಿದ್ದರು.

 

ಮುಖ್ಯಾಂಶಗಳು:

* ಡಿಕೆ ಶಿವಕುಮಾರ್‌ಗೆ ಶರತ್ತಿನ ಜಾಮೀನು ನೀಡಿದ ದೆಹಲಿ ಹೈಕೋರ್ಟ್

* ಅನಾರೋಗ್ಯದ ಕಾರಣ ನೀಡಿ ಜಾಮೀನು ಮಂಜೂರು

* ವಿದೇಶಕ್ಕೆ ಪಲಾಯನ ಮಾಡುವ ಸಾಧ್ಯತೆ ಇಲ್ಲ

* ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ಪಡೆಯಬೇಕು

* ೨೫ ಲಕ್ಷ ರೂಪಾಯಿ ಬಾಂಡ್ ನೀಡಬೇಕು

* ಸಾಕ್ಷ್ಯ ನಾಶಕ್ಕೆ ಪುರಾವೆ ಇಲ್ಲ

* ಡಿ.ಕೆ. ಶಿವಕುಮಾರ್ ಪಾಸ್ ಪೋರ್ಟ್‌ನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು.

 

ತಿಹಾರ್ ಜೈಲಿನಲ್ಲಿ ಭೇಟಿಯಾಗಿದ್ದ ಸೋನಿಯಾ, ಎಚ್ಡಿಕೆ

ಈ ಮಧ್ಯೆ, ತಿಹಾರ್ ಸೆರೆಮನೆಯಲ್ಲಿದ್ದ ಕರ್ನಾಟಕ ಮೈತ್ರಿಸರ್ಕಾರದ ಪ್ರಮುಖ ’ಸಂಕಷ್ಟ ನಿವಾರಕ’ರಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿದ್ದರು.

ಈ ಮಧ್ಯೆ, ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸುಪ್ರೀಂಕೋರ್ಟಿಗೆ ಮನವಿ ತತ್ ಕ್ಷಣವೇ ಮನವಿ ಸಲ್ಲಿಸಿದ್ದು, ಮೇಲ್ಮನವಿಯು 2019 ಅಕ್ಟೋಬರ್ 24ರ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದವು.

October 23, 2019 - Posted by | ಆರ್ಥಿಕ, ಭಾರತ, ರಾಜ್ಯ, ರಾಷ್ಟ್ರೀಯ, ಸುಪ್ರೀಂಕೋರ್ಟ್, Finance, Flash News, General Knowledge, India, Nation, News, Politics, Social Media, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ