SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಆರೇ ಕಾಲೋನಿ ಮರಗಳಿಗೆ ಕೊಡಲಿ: ಸೋಮವಾರ ಸುಪ್ರೀಂ ವಿಶೇಷ ವಿಚಾರಣೆ

06 aaray supreme court
ನವದೆಹಲಿ:
ಮುಂಬೈ ಮೆಟ್ರೋ ೩ನೇ ಹಂತದ ಕಾಮಗಾರಿಗಾಗಿ ಉತ್ತರ ಮುಂಬೈಯ ಆರೇ ಕಾಲೋನಿಯಲ್ಲಿ ನಡೆಸಲಾಗುತ್ತಿರುವ ಸಹಸ್ರಾರು ಮರಗಳ ಮಾರಣಹೋಮವನ್ನು  ಭಾನುವಾರ ಸ್ವ ಇಚ್ಛೆಯಿಂದ ಗಮನಕ್ಕೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್  2019 ಅಕ್ಟೋಬರ್ 07ರ ಸೋಮವಾರ ಪ್ರಕರಣದ ವಿಶೇಷ ವಿಚಾರಣೆ ನಡೆಸುವುದಾಗಿ 2019 ಅಕ್ಟೋಬರ್ 06ರ ಭಾನುವಾರ ಪ್ರಕಟಿಸಿತು.

ಗ್ರೇಟರ್ ನೋಯ್ಡಾದ ಲಾಯ್ಡ್ ಕಾನೂನು ಕಾಲೇಜಿನ  ವಿದ್ಯಾರ್ಥಿ  ರಿಶವ್ ರಂಜನ್ ಮತ್ತು ಇತರರ ಗುಂಪು ಸಲ್ಲಿಸಿದ ಪತ್ರವನ್ನು ಪರಿಗಣನೆಗೆ ತೆಗೆದುಕೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಪ್ರಕರಣದ ವಿಚಾರಣೆಗೆ ವಿಶೇಷ ಪೀಠವನ್ನು ರಚಿಸಿ ಸೋಮವಾರ ಬೆಳಗ್ಗೆ 10 ಗಂಟೆಗೆ ಪೀಠವು ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ವೆಬ್ ಸೈಟಿನಲ್ಲಿ ಪ್ರಕಟಿಸಿದರು.

ಕಾನೂನು ವಿದ್ಯಾರ್ಥಿಗಳ ಗುಂಪೊಂದು ಸಲ್ಲಿಸಿದ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಖಟ್ಲೆಯಾಗಿ ಸುಪ್ರೀಂಕೋರ್ಟ್  ಮಾರ್ಪಾಡು ಮಾಡಿತು.

ವಿಶೇಷ ನ್ಯಾಯಪೀಠವು  ಆರೇ ಕಾಲೋನಿಯ ಪ್ರತಿನಿಧಿಗಳು ಮತ್ತು ಮುಂಬೈನ ಮೆಟ್ರೋ ಅಧಿಕಾರಿಗಳ ವಾದ-ಪ್ರತಿವಾದ ಆಲಿಸಲಿದೆ. ಬಳಿಕ ಮುಂಬೈ ಹೈಕೋರ್ಟ್​​ನ ಮತ್ತೊಮ್ಮೆ ಪರಿಶೀಲಿಸಲಿದೆ ಎನ್ನಲಾಯಿತು.

ಮೆಟ್ರೋ ಕಾಮಗಾರಿಗಾಗಿ ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಆರೆ ಕಾಲೋನಿಯ 38  ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈ ನ್ಯಾಯಲಯವೇ ಪ್ರತಿಭಟನಕಾರರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದಲ್ಲದೆ  55 ಮಂದಿಯನ್ನು ವಶಕ್ಕೆ ಪಡೆದಿದ್ದರು.

ಆರೇ ಕಾಲೋನಿಯಲ್ಲಿ ಮರ ಕಡಿಯುವುದರ ವಿರುದ್ಧ ನಡೆದ ಪ್ರತಿಭಟನೆಯ ಕಾಲದಲ್ಲಿ ಬಂಧಿತರಾದ ೨೯ ಮಂದಿ ಪರಿಸರವಾದಿಗಳಿಗೆ ಸ್ಥಳೀಯ ನ್ಯಾಯಾಯವು ಈದಿನ  ಶರತ್ತಿನ ಜಾಮೀನು ಮಂಜೂರು ಮಾಡಿತು.  ಮತ್ತೆ ಪ್ರತಿಭಟನೆಗೆ ಇಳಿಯದಂತೆ ಬಂಧಿತರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತಾ ನಿರ್ದೇಶಿಸಿತು.

ಇದೇ ವೇಳೆಗೆ ಮುಂಬೈ ಮೆಟ್ರೋ ೩ನೇ ಹಂತದ ಕಾಮಗಾರಿಗಾಗಿ ಮರಗಳನ್ನು ಕಡಿಯುವುದು ಅನಿವಾರ್ಯ ಎಂಬು ಮುಂಬೈ ಮೆಟ್ರೋ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಪ್ರತಿಪಾದಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಯಿತು.

ಮುಂಬೈ ಮೆಟ್ರೋ ಆರೇ ಕಾಲೋನಿಯ  2,500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಉದ್ದೇಶಿಸಿತ್ತು. ಆದರೆ, ಇದನ್ನು ವಿರೋಧಿಸಿದ್ದ ಪಡಿಸರವಾದಿಗಳು ಹಾಗೂ ಸ್ಥಳೀಯರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು  ಅಕ್ಟೋಬರ್ 4ರ ಶುಕ್ರವಾರ  ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್ ಅರ್ಜಿಯನ್ನೇ ವಜಾಗೊಳಿಸಿತ್ತು. ಬೆನ್ನಲ್ಲೇ ಅದೇ ದಿನ ನಡುರಾತ್ರಿಯಲ್ಲಿ ಅಧಿಕಾರಿಗಳು ಮರ ಕಡಿಯುವ ಕೆಲಸಕ್ಕೆ ಮುಂದಾಗಿದ್ದರು.  ಈ ಸಂದರ್ಭದಲ್ಲಿ ಇದನ್ನು ವಿರೋಧಿಸಿ ಸ್ಥಳೀಯರು ಸಹ ಬೀದಿಗಿಳಿದ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

ಮರ ಕಡಿಯುವುದರ ವಿರುದ್ದ  ಪ್ರತಿಭಟನೆ ನಡೆಸುತ್ತಿರುವವರಲ್ಲಿ 38 ಮಂದಿಯನ್ನು ಬಂಧಿಸಲಾಗಿದ್ದು, 55 ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿದ್ದವು.. ಪರಿಸರ ಹೋರಾಟಗಾರರ ಬಂಧನಕ್ಕೆ ಕಾಂಗ್ರೆಸ್​ ಸೇರಿದಂತೆ ವಿರೋಧ ಪಕ್ಷಗಳು ಮತ್ತು ಶಿವಸೇನೆಯ  ಆದಿತ್ಯ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದ ಸೋರು ಬಥೇನಾ ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು, “ಆರೇ ಕಾಲೋನಿಯ  ಮೆಟ್ರೋ ಡಿಪೋದಲ್ಲಿ ಮರಗಳನ್ನು ಅಕ್ರಮವಾಗಿ ಕತ್ತರಿಸಲಾಗುತ್ತಿದೆ. ಕಾನೂನಿನ ಪ್ರಕಾರ ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ ನೀಡಿದರೂ ಸಹ 15 ದಿನಗಳ ನಂತರವೇ ಅದನ್ನು ಕಡಿಯಬೇಕು. ಆದರೆ, ಈ ಕುರಿತು ಹೈಕೋರ್ಟ್ ವೆಬ್​ಸೈಟಿನಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಅನುಮತಿ ಪತ್ರವನ್ನು ಅಪ್ಲೋಡ್ ಮಾಡಲಾಗಿದೆ. ರಾತ್ರಿಯೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ದಯವಿಟ್ಟು ಈ ಅಕ್ರಮ ಹಾಗೂ ಕಾನೂನು ಬಾಹಿರ ಕೃತ್ಯವನ್ನು ನಿಲ್ಲಿಸಿ” ಎಂದು ಬರೆದಿದ್ದರು.

October 6, 2019 Posted by | ಭಾರತ, ವಿಶ್ವ/ ಜಗತ್ತು, ಸುಪ್ರೀಂಕೋರ್ಟ್, Flash News, General Knowledge, Health, India, News, Politics, Social Media, Spardha, supreme court, World | , , , , , , | 1 Comment

ಪ್ಯಾರಿಸ್‌ನಲ್ಲಿ ‘ರಫೇಲ್’ ಯುದ್ಧ ವಿಮಾನಕ್ಕೆ  ರಕ್ಷಣಾ  ಸಚಿವ  ರಾಜನಾಥ್ ಸಿಂಗ್ ’ಆಯುಧ ಪೂಜೆ’

06 rajanath singh
ನವದೆಹಲಿ:
  ಮೊದಲ ಕಂತಿನ ರಫೇಲ್ ಯುದ್ಧ ವಿಮಾನಗಳನ್ನು ಸ್ವೀಕರಿಸುವ ಸಲುವಾಗಿ ಫ್ರಾನ್ಸಿಗೆ ತೆರಳಲ್ಲು ಸಜ್ಜಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ಯಾರಿಸ್ಸಿನಲ್ಲಿ ಮೊದಲ ಬಟವಾಡೆಗೆ ಮುನ್ನ 2019ರ  ಅಕ್ಟೋಬರ್ ೮ರ ಮಂಗಳವಾರ   ’ರಫೇಲ್‌ಗೆ ಶಸ್ತ್ರ ಪೂಜೆ’ (ಆಯುಧ ಪೂಜೆ) ನೆರವೇರಿಸಲಿದ್ದಾರೆ. ಭಾರತದಲ್ಲಿ ಇದೇ ಸಂದರ್ಭದಲ್ಲಿ ಕಾಕತಾಳೀಯವಾಗಿ  ‘ದಸರಾ’ ಸಂಭ್ರಮಾಚರಣೆ ನಡೆಯುತ್ತಿದೆ.

ಹಿಂದೂ ಸಂಪ್ರದಾಯದ ಪ್ರಕಾರ ಯೋಧರು ತಮ್ಮ ಶಸ್ತ್ರಾಸ್ತಗಳು ಮತ್ತು ಆಯುಧಗಳಿಗೆ  ದಸರಾ ಹಬ್ಬ ಆಚರಣೆಯ ಸಂದರ್ಭದಲ್ಲೇ  ’ಶಸ್ತ್ರ ಪೂಜೆ’ಯನ್ನು ನೆರವೇರಿಸುತ್ತಾರೆ.

‘ಗೃಹ ಸಚಿವರಾಗಿದ್ದ ದಿನಗಳಲ್ಲಿ ರಾಜನಾಥ್ ಸಿಂಗ್ ಅವರು ಪ್ರತಿ ದಸರಾ ಹಬ್ಬದ ಸಂದರ್ಭದಲ್ಲಿ ’ಶಸ್ತ್ರ ಪೂಜೆ’ಯನ್ನು ನೆರವೇರಿಸುತ್ತಿದ್ದರು. ಈಗ, ರಕ್ಷಣಾ ಸಚಿವರಾಗಿ ಕೂಡಾ ಅವರು ತಮ್ಮ ಸಂಪ್ರದಾಯವನ್ನು ಮುಂದುವರೆಸುವರು’ ಎಂದು ರಾಜನಾಥ್ ಸಿಂಗ್ ಅವರಿಗೆ ನಿಕಟವಾಗಿರುವ ರಕ್ಷಣಾ ಅಧಿಕಾರಿಗಳು ಹೇಳಿದರು.

ಸಚಿವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿ ಮಾಡುವರು ಮತ್ತು ನಂತರ ಬೋರ್ಡೆಯಕ್ಸ್‌ಗೆ ಭಾರತಕ್ಕಾಗಿ ನಿರ್ಮಿಸಿದ ಮೊದಲ ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸಲು ತೆರಳುವರು.

ಫ್ರಾನ್ಸಿನ ಉನ್ನತ ಸೇನಾ ಅಧಿಕಾರಿ ಮತ್ತು ರಫೇಲ್ ನಿರ್ಮಾಪಕ ಕಂಪೆನಿ ಡಸ್ಸಾಲ್ಟ್ ಏವಿಯೇಷನ್‌ನ ಹಿರಿಯ ಅಧಿಕಾರಿಗಳು ’ರಫೇಲ್ ಹಸ್ತಾಂತರ’ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತವು ೨೦೧೬ರ ಸೆಪ್ಟೆಂಬರಿನಲ್ಲಿ ೫೯,೦೦೦ ಕೋಟಿ ರೂಪಾಯಿ ಮೌಲ್ಯದ  ೩೬ ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸಿನಿಂದ ಖರೀದಿಸುವ ಸಲುವಾಗಿ ಒಪ್ಪಂದ ಮಾಡಿಕೊಂಡಿತ್ತು.

ಭಾರತೀಯ ವಾಯುಪಡೆಗೆ ರಫೇಲ್ ಔಪಚಾರಿಕ ಸೇರ್ಪಡೆ ಅಕ್ಟೋಬರ್ ೮ರಂದು ಆಗಲಿದ್ದರೂ, ಮೊದಲ ಕಂತಿನ ನಾಲ್ಕು ರಫೇಲ್ ವಿಮಾನಗಳು ತಮ್ಮ ನೆಲೆಯಿಂದ ಮುಂದಿನ ಏಪ್ರಿಲ್- ಮೇ ಅವಧಿಯಲ್ಲಿ ಭಾರತಕ್ಕೆ ತಲುಪಲಿವೆ. ೨೦೨೨ರ ಸೆಪ್ಟೆಂಬರ್ ವೇಳೆಗೆ ಎಲ್ಲ ೩೬ ಯುದ್ಧ ವಿಮಾನಗಳೂ  ಭಾರತಕ್ಕೆ ಆಗಮಿಸಲಿವೆ. ಬಲಾಢ್ಯ ವಾಯುಪಡೆ ನಿರ್ಮಿಸುವ ಸುದೀರ್ಘ ಹಾದಿಯಲ್ಲಿ ಇದೊಂದು ಪುಟ್ಟ ಹೆಜ್ಜೆಯಾಗಲಿದೆ.

ಭಾರತೀಯ ವಾಯುಪಡೆಯು ಈಗಾಗಲೇ ರಫೇಲ್ ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಅಗತ್ಯ ಮೂಲಸವಲತ್ತು, ಪೈಲಟ್‌ಗಳಿಗೆ ತರಬೇತಿ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಎರಡು ರಫೇಲ್ ಸ್ಕ್ವಾಡ್ರನ್‌ಗಳು ಹರಿಯಾಣದ ಅಂಬಾಲ ಮತ್ತು ಪಶ್ಚಿಮ ಬಂಗಾಳದ ಹಸಿಮರಾದಲಿ ನೆಲೆ ನಿಲ್ಲಲಿವೆ. ಇವು ಪಶ್ಚಿಮ ಮತ್ತು ಪೂರ್ವ ರಂಗಗಳಿಗೆ ರಕ್ಷಣೆ ಒದಗಿಲಿವೆ. ರಶ್ಯಾದ ಸುಖೋಯಿ -೩೦ ಯುದ್ಧ ವಿಮಾನಗಳ ಬಳಿಕ ಕಳೆದ ೨೨ ವರ್ಷಗಳ ಅವಧಿಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗುತ್ತಿರುವ ಮೊದಲ ಆಮದು ಯುದ್ಧ ವಿಮಾನವಾಗಿದೆ ರಫೇಲ್. ೧೯೯೭ರ ಜೂನ್ ತಿಂಗಳಲ್ಲಿ  ಭಾರತೀಯ ವಾಯುಪಡೆಗೆ  ಮೊದಲ ಸು-೩೦ ಸೇರ್ಪಡೆಯಾಗಿತ್ತು.

ಇಸ್ರೇಲಿ ಹೆಲ್ಮೆಟ್ ಸಹಿತವಾದ ಡಿಸ್‌ಪ್ಲೇಗಳು, ರಾಡಾರ್ ಎಚ್ಚರಿಕೆ ಸ್ವೀಕೃತಿ ವ್ಯವಸ್ಥೆ,  ಲೋ ಬ್ಯಾಂಡ್ ಜಾಮರ್‌ಗಳು, ೧೦ ಗಂಟೆಗಳ ಹಾರಾಟ ಮಾಹಿತಿ ದಾಖಲೀಕರಣ, ಇನ್ ಫ್ರಾ- ರೆಡ್ ಶೋಧ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ಮತ್ತಿತರ ಸವಲತ್ತುಗಳನ್ನು ರಫೇಲ್ ಹೊಂದಿರುತ್ತದೆ.

ಯುದ್ಧ ವಿಮಾನದ ದರಗಳು, ಭ್ರಷ್ಟಾಚಾರ ಆರೋಪ ಸೇರಿದಂತೆ  ಹಲವಾರು ಪ್ರಶ್ನೆಗಳನ್ನು ರಫೇಲ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಎತ್ತಿತ್ತು. ಆದರೆ ಸರ್ಕಾರವು ಎಲ್ಲ ಆರೋಪಗಳನ್ನೂ ತಿರಸ್ಕರಿಸಿತ್ತು.

October 6, 2019 Posted by | ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, culture, Festival, Finance, Flash News, India, Nation, News, Politics, Spardha, World | , , , , , | Leave a comment

ಫರೂಖ್ ಮತ್ತು ಒಮರ್ ಅಬ್ದುಲ್ಲ ಭೇಟಿ ಮಾಡಿದ ಎನ್‌ಸಿ ನಿಯೋಗ

06 farooq-abdullah delegation
ಸೋಮವಾರ  ಪಿಡಿಪಿ ನಿಯೋಗದಿಂದ  ಮೆಹಬೂಬಾ ಮುಫ್ತಿ ಭೇಟಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಿನ ಬಳಿಕ ಮೊದಲ ರಾಜಕೀಯ ಬೆಳವಣಿಗೆಯಲ್ಲಿ ನ್ಯಾಷನಲ್ ಕಾನ್ಫರೆನ್ಸಿನ ೧೫ ಸದಸ್ಯರ ನಿಯೋಗವೊಂದು ಶ್ರೀನಗರದಲ್ಲಿ ಬಂಧನದಲ್ಲಿರುವ ಪಕ್ಷದ ನಾಯಕರಾದ ಫರೂಕ್ ಅಬ್ದುಲ್ಲ  ಮತು ಒಮರ್ ಅಬ್ದುಲ್ಲ ಅವರನ್ನು 2019 ಅಕ್ಟೋಬರ್  06ರ ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿತು.

ಈಮಧ್ಯೆ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ನಿಯೋಗಕ್ಕೆ ಪಕ್ಷದ ಬಂಧಿತ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು 2019 ಅಕ್ಟೋಬರ್ 07ರ ಸೋಮವಾರ ಭೇಟಿ ಮಾಡಲು ಭಾನುವಾರ ಅನುಮತಿ ನೀಡಿತು.

ನ್ಯಾಷನಲ್ ಕಾನ್ಫರೆನ್ಸ್ ನಿಯೋಗವು ಉಭಯ ನಾಯಕರ ಜೊತೆಗಿನ ಪ್ರತ್ಯೇಕ ಮಾತುಕತೆಗಳಲ್ಲಿ ರಾಜ್ಯದಲ್ಲಿನ ಬೆಳವಣಿಗೆಗಳು ಮತ್ತು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಗ್ಗೆ ಚರ್ಚಿಸಿತು. ನಾಯಕರನ್ನು ಭೇಟಿ ಮಾಡಲು ನಿಯೋಗಕ್ಕೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಅನುಮತಿ ನೀಡಿತ್ತು.

ಪಕ್ಷದ ಜಮ್ಮು ಪ್ರಾಂತೀಯ ಮುಖ್ಯಸ್ಥ ದೇವಿಂದರ್ ಸಿಂಗ್ ರಾಣಾ ನೇತೃತ್ವದ ನಿಯೋಗವು ಮೊದಲು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರನ್ನು ಹರಿ ನಿವಾಸದಲ್ಲಿ ಭೇಟಿ ಮಾಡಿ ಸುಮಾರು ೩೦ ನಿಮಿಸಗಳಿಗಿಂತ ಸ್ವಲ್ಪ ಕಡಿಮೆಕಾಲ ಮಾತುಕತೆ ನಡೆಸಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿರುವುದಾಗಿ ಕೇಂದ್ರ ಸರ್ಕಾರವು ಪ್ರಕಟಿಸಿದ ಆಗಸ್ಟ್ ೫ನೇ ದಿನಾಂಕದಿಂದ ಬಂಧನದಲ್ಲಿರುವ ಒಮರ್ ಅಬ್ದುಲ್ಲ ಅವರನ್ನು ಮೊದಲಿಗೆ ಭೇಟಿ ಮಾಡಿತು. ಒಮರ್ ಅವರು ನಿಯೋಗದಲ್ಲಿ ಬಂದ ಪಕ್ಷ ನಾಯಕರ ಜೊತೆಗೆ ಸೆಲ್ಫಿ ತೆಗೆದುಕೊಂಡ ದೃಶ್ಯ ಕಾಣಿಸಿತು ಎಂದು ವರದಿಗಳು ತಿಳಿಸಿದವು.

ನಿಯೋಗವು ಬಳಿಕ ಫರೂಕ್ ಅಬ್ದುಲ್ಲ ನಿವಾಸಕ್ಕೆ ತೆರಳಿತು.

ಭೇಟಿಯ ಬಳಿಕ ನಿಯೋಗದ ಮುಖ್ಯಸ್ಥ ರಾಣಾ ಅವರು ವರದಿಗಾರರ ಜೊತೆ ಮಾತನಾಡುತ್ತಾ ’ಯಾವುದೇ ರಾಜಕೀಯ ಪ್ರಕ್ರಿಯೆ ಆರಂಭಗೊಳ್ಳಲು ಮೊದಲು ಪಕ್ಷ ನಾಯಕರ ಬಿಡುಗಡೆ ಆಗಬೇಕು’ ಎಂದು ಹೇಳಿದರು.

‘ಬೆಳವಣಿಗೆಗಳ ಬಗ್ಗೆ ಅದರಲ್ಲೂ ನಿರ್ದಿಷ್ಟವಾಗಿ ಜನರನ್ನು ನಿರ್ಬಂಧಗಳಿಗೆ ಗುರಿಪಡಿಸಿದ ಬಗ್ಗೆ ಬೇಸರವಿದೆ ಮತ್ತು ನಾವು ಒಂದು ಪಕ್ಷವಾಗಿ ರಾಜಕೀಯ ಪ್ರಕ್ರಿಯೆ ಆರಂಭಿಸಲು ಮತ್ತು ಜಮ್ಮು-ಕಾಶ್ಮೀರದಲಿ ಪ್ರಜಾಪ್ರಭುತ್ವಕ್ಕೆ ಪುನಃಶ್ಚೇತನ ನೀಡಲು ಅಪರಾಧ ದಾಖಲೆಗಳಿಲ್ಲದ ಎಲ್ಲೆಡೆಯಲ್ಲಿನ ಮುಖ್ಯ ಪ್ರವಾಹದ ಮತ್ತು ಇತರ ಎಲ್ಲ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದ ಬಂಧಿತರನ್ನು ಮೊದಲ ಬಿಡುಗಡೆ ಮಾಡಬೇಕು ಮತ್ತು ಜಮ್ಮು ಮತ್ತು ಕಾಶ್ಮೀರಜ ಜನರ ಹೃದಯ ಮತ್ತು ಮನಸ್ಸುಗಳನ್ನು ಗೆಲ್ಲಬೇಕು’ ಎಂದು ರಾಣಾ ಹೇಳಿದರು.

ಇತಿಹಾಸ, ಪರಂಪರೆ ಮತ್ತು ಉನ್ನತ ದಾಖಲೆಯನ್ನು ಹೊಂದಿರುವ ತಮ್ಮ ಪಕ್ಷವು ಜನರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಮತ್ತು ಕೋಮು ಸೌಹಾರ್ದ, ಸಹೋದರತ್ವ, ಏಕತೆಗಾಗಿ ದುಡಿಯಬೇಕು ಮತ್ತು ರಾಜ್ಯದ ಜಾತ್ಯತೀತ ವರ್ಚಸ್ಸು ಇನ್ನಷ್ಟು ಹೊಳೆಯುವಂತೆ ಮಾಡಬೇಕು ಎಂಬ ಸರ್ವಾನುಮತದ ಅಭಿಪ್ರಾಯವನ್ನು ಹೊಂದಿದೆ ಎಂದು ಅವರು ನುಡಿದರು.

ಬ್ಲಾಕ್ ಅಭಿವೃದ್ಧಿ ಸಮಿತಿ ಚುನಾವಣೆಗಳಲ್ಲಿ ಪಕ್ಷವು ಪಾಲ್ಗೊಳ್ಳುವ ಬಗೆಗಿನ ಪ್ರಶ್ನೆಗೆ ’ನೋಡಿ, ರಾಜ್ಯದಲ್ಲಿ ಸಂಪೂರ್ಣ ಸ್ಥಗಿತತೆಯ ಸ್ಥಿತಿ ಇದೆ. ರಾಜಕೀಯ ಪ್ರಕ್ರಿಯೆ ಆರಂಭವಾಗಲು ಈ ಸದಸ್ಯರನ್ನು ಮೊದಲು ಬಿಡುಗಡೆ ಮಾಡಬೇಕು’ ಎಂದು ಅವರು ಉತ್ತರಿಸಿದರು.

‘ಜಮ್ಮುವಿನಲ್ಲಿ ರಾಜಕೀಯ ನಾಯಕರ ಮೇಲಿನ ನಿರ್ಬಂಧಗಳನ್ನು ರದ್ದು ಪಡಿಸಿದ ಬಳಿಕ ನಾವು ಸಭೆಯೊಂದನ್ನು ನಡೆಸಿ ರಾಜ್ಯಪಾಲ (ಎಸ್ ಪಿ ಮಲಿಕ್) ಅವರನ್ನು ಭೇಟಿಮಾಡಿ ಪಕ್ಷದ ಅಧ್ಯಕ್ಷ ಮತು ಉಪಾಧ್ಯಕ್ಷರನ್ನು ಭೇಟಿ ಮಾಡಿ ಮಾತನಾಡಲು ಅವರ ಅನುಮತಿ ಕೋರಲು ನಿರ್ಧರಿಸಿದೆವು’ ಎಂದು ರಾಣಾ ಹೇಳಿದರು.

‘ಅವರಿಬ್ಬರೂ ಚೆನ್ನಾಗಿದ್ದಾರೆ ಮತ್ತು ಅತ್ಯಂತ ಸ್ಫೂರ್ತಿಯಿಂದ ಇರುವುದು ನಮಗೆ ಸಂತಸ ಉಂಟು ಮಾಡಿದೆ. ಏನಿದ್ದರೂ, ಬೆಳವಣಿಗೆಗಳ ಬಗ್ಗೆ, ನಿರ್ದಿಷ್ಟವಾಗಿ ಜನರ ಮೇಲಿನ ನಿರ್ಬಂಧಗಳ ಬಗ್ಗೆ ಅವರಿಗೆ ನೋವಾಗಿದೆ ಮತ್ತು ದುಖವಾಗಿದೆ’ ಎಂದು ಅವರು ನುಡಿದರು.

ಮುಂಬರುವ ಬ್ಲಾಕ್ ಅಭಿವೃದ್ಧಿ ಮಂಡಳಿ (ಬಿಡಿಸಿ) ಚುನಾವಣೆಗಳ ವಿಚಾರದಲಿ ಪಕ್ಷದ ನಿಲುವು ಏನು ಎಂಬ ಪ್ರಶ್ನೆಗೆ ’ರಾಜ್ಯದಲ್ಲಿ ಯಾವುದೇ ರಾಜಕೀಯ ಪ್ರಕ್ರಿಯೆ ಆರಂಭವಾಗಲು, ಮುಖ್ಯ ಪ್ರವಾಹದ ರಾಜಕೀಯ ನಾಯಕರನ್ನು ಮೊದಲ ಬಿಡುಗಡೆ ಮಾಡಬೇಕು’ ಎಂದು ರಾಣಾ ನುಡಿದರು.

‘ನ್ಯಾಷನಲ್ ಕಾನ್ಫರೆನ್ಸಿನ ವಿಚಾರದಲ್ಲಿ, ಬಿಡಿಸಿ ಚುನಾವಣೆಗಳಲ್ಲಿ ಅಸ್ತಿತ್ವದಲ್ಲಿ ಇರುವ ೩೮೦ ಪಂಚಾಯತುಗಳಲ್ಲಿ ಸ್ಪರ್ಧಿಸಲು ನಾವು ಬಯಸಿದರೂ, ಜನಾದೇಶಕ್ಕೆ ಪಕ್ಷದ ಅಧ್ಯಕ್ಷರು ಸಹಿ ಮಾಡಬೇಕು, ಆದರೆ ದುರದೃಷ್ಟಕರವಾಗಿ ಅವರು ಪಿಎಸ್‌ಎ ಅಡಿಯಲಿ ಬಂಧನದಲಿ ಇದ್ದಾರೆ’ ಎಂದು ರಾಣಾ ಹೇಳಿದರು.

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು  ಉಪಾಧ್ಯಕ್ಷರು ಸೇರಿದಂತೆ ಪಕ್ಷದ ನಾಯಕರನ್ನು ಬಿಡುಗಡ ಮಾಡಿದ ಬಳಿಕ ಮುಂದಿನ ಕ್ರಮದ ಬಗ್ಗೆ ಪಕ್ಷದ ಕಾರ್‍ಯಕಾರಿ ಸಮಿತಿಯು ನಿರ್ಧರಿಸಲಿದೆ ಎಂದು ಎನ್ ಸಿ ನಾಯಕ ನುಡಿದರು.

‘ಅವರನ್ನು ಬಿಡುಗಡೆ ಮಾಡಲಿ, ಆಗ ಪಕ್ಷದ ಕಾರ್‍ಯಕಾರಿ ಸಮಿತಿಯು ಸಭೆ ಸೇರಿ ಚರ್ಚಿಸಿ ಭವಿಷ್ಯಕ್ಕಾಗಿ ತಂತ್ರವನ್ನು ರೂಪಿಸುತ್ತೇವೆ’ ಎಂದು ಅವರು ಹೇಳಿದರು.

October 6, 2019 Posted by | ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, Commerce, Flash News, General Knowledge, India, Nation, News, Spardha, Terror, World | , , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ