SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಲಭಿಸಿತು ಸ್ವಿಸ್ ಬ್ಯಾಂಕ್ ಖಾತೆದಾರರ ಪಟ್ಟಿ

07 swiss bank list reached indian govt paryaya web
ನವದೆಹಲಿ:
 ಭಾರತ ಹಾಗೂ ಸ್ವಿಜರ್ಲೆಂಡ್ ನಡುವಿನ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದದ ಅಡಿಯಲ್ಲಿ ಭಾರತದ ನಿವಾಸಿಗಳು ಸ್ವಿಜರ್ಲೆಂಡ್​ನ ಖಾಸಗಿ ಬ್ಯಾಂಕುಗಳಲ್ಲಿ ಹೊಂದಿರುವ ಹಣಕಾಸು ಖಾತೆಗಳ ವಿವರವನ್ನು ಪಡೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ  ಕೊನೆಗೂ ಸಫಲವಾಗಿದ್ದು, ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿಯ ಮೊದಲ ಕಂತು ಕೇಂದ್ರದ ಕೈಸೇರಿದೆ ಎಂದು ಸುದ್ದಿ ಮೂಲಗಳು 2019 ಅಕ್ಟೋಬರ್ 07ರ ಸೋಮವಾರ  ತಿಳಿಸಿದವು.

ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಎನ್ ಡಿಎ ಸರ್ಕಾರ ದೀರ್ಘ ಕಾಲದಿಂದ ನಡೆಸಿದ್ದ ಯತ್ನಗಳಿಗೆ ಯಶಸ್ಸು ಸಿಕ್ಕಿದಂತಾಯಿತು.ವಿದೇಶಿ ಬ್ಯಾಂಕ್​ಗಳಲ್ಲಿ ಸಂಗ್ರಹಿಸಲಾಗಿರುವ ಭಾರತದ ಕಪ್ಪು ಹಣವನ್ನು ಮರಳಿ ದೇಶಕ್ಕೆ ಹಿಂದಿರುಗಿಸುವ ಕೇಂದ್ರ ಸರ್ಕಾರದ ನಿರಂತರ ಹೋರಾಟದಲ್ಲಿ ಇದು ಮಹತ್ವದ ಮೈಲುಗಲ್ಲಾಗಿದೆ ಎಂದು ಹೇಳಲಾಯಿತು. ಪ್ರಸ್ತುತ ನೀಡಲಾಗಿರುವ ಪಟ್ಟಿಯಲ್ಲಿ ರಾಜಕಾರಣಿಗಳು, ವ್ಯವಹಾರಸ್ಥರು ಸೇರಿದಂತೆ ಹಲವಾರು ಗಣ್ಯರ ಹೆಸರು ಇದೆ ಎನ್ನಲಾಯಿತು.

ಎಇಒಐ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಜರ್ಲೆಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ತಮ್ಮ ದೇಶದಲ್ಲಿನ ಭಾರತೀಯರ ಹಣಕಾಸು ಖಾತೆಗಳ ಮಾಹಿತಿಯನ್ನು ಭಾರತದೊಂದಿಗೆ ವಿನಿಮಯ ಮಾಡಿಕೊಂಡಿತು. ಈ ರೀತಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾದ  75 ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಮೂಲಗಳು ಹೇಳಿದವು.

ಅಂತಾರಾಷ್ಟ್ರೀಯ ಎಇಒಐ ಮಾನದಂಡಗಳ ಅಡಿಯಲ್ಲಿ ಭಾರತ ಸರ್ಕಾರ ಸ್ವಿಜರ್ಲೆಂಡ್​ನಿಂದ ಭಾರತೀಯರ ಹಣಕಾಸು ಮಾಹಿತಿಯನ್ನು ಪಡೆಯುತ್ತಿರುವುದು ಇದೇ ಮೊದಲ ಬಾರಿ. ಸ್ವಿಜರ್ಲೆಂಡ್​ನಲ್ಲಿ ಈವರೆಗೆ ಚಾಲ್ತಿಯಲ್ಲಿರುವ ಹಾಗೂ 2018ಕ್ಕಿಂತ ಮುಂಚಿತವಾಗಿ ಮುಚ್ಚಲಾಗಿರುವ ಎಲ್ಲಾ ಹಣಕಾಸು ಖಾತೆಗಳ ವಿವರವನ್ನೂ ಆ ದೇಶ ಭಾರತ ಸರ್ಕಾರಕ್ಕೆ ನೀಡಿತು. ಮುಂದಿನ ಮಾಹಿತಿ ವಿನಿಮಯ 2020 ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಯಿತು.

October 7, 2019 Posted by | ಆರ್ಥಿಕ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Finance, Flash News, General Knowledge, India, Nation, News, Prime Minister, Spardha, World | , , , , , , | Leave a comment

ಆರೇ ಕಾಲೋನಿ: ಮುಂಬೈ ಮೆಟ್ರೋ ಕಡಿದಾಗಿದೆ 2,141 ಮರ..!

07 aarey-2
ಇಷ್ಟರಲ್ಲೇ ಶುರು ತೆರವು ಜಾಗದಲ್ಲಿ ನಿರ್ಮಾಣ ಚಟುವಟಿಕೆ

ಮುಂಬೈ:  ನಗರದ ’ಹಸಿರು ಶ್ವಾಸಕೋಶ’ದಲ್ಲಿ ಹೆಚ್ಚಿನ ಮರಗಳನ್ನು ಕಡಿಯುವುದನ್ನು ಸುಪ್ರೀಂ ಕೋರ್ಟ್ ತಡೆಹಿಡಿದ ಕೆಲವೇ ಗಂಟೆಗಳ ನಂತರ, ಉತ್ತರ ಮುಂಬೈನ ಆರೇ ಕಾಲೋನಿಯಲ್ಲಿ ೨,೧೪೧ ಮರಗಳನ್ನು ಕಾರ್ ಶೆಡ್ ನಿರ್ಮಾಣಕ್ಕಾಗಿ ಈಗಾಗಲೇ ಕತ್ತರಿಸಲಾಗಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ (ಎಂಎಂಆರ್ ಸಿ)  2019 ಅಕ್ಟೋಬರ್ 07ರ ಸೋಮವಾರ ಪ್ರಕಟಿಸಿತು .

ಸುಪ್ರೀಂ ಕೋರ್ಟ್ ಯಾವುದೇ ಹೆಚ್ಚಿನ ನಿರ್ದೇಶನಗಳನ್ನು ನೀಡುವವರೆಗೂ ಈ ಸ್ಥಳದಲ್ಲಿ ಭವಿಷ್ಯದ ಮರ ಕಡಿಯುವಿಕೆಯನ್ನು ಕೈಗೊಳ್ಳಲಾಗುವುದಿಲ್ಲ . ಆದರೆ ಮರವನ್ನು ತೆರವುಗೊಳಿಸಿದ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು ಎಂದು ಎಂಎಂಆರ್ ಸಿ ಪ್ರಕಟಣೆ ತಿಳಿಸಿತು.

ಎಂಎಂಆರ್ ಸಿ  ಹೇಳಿಕೆಯು “ಯಥಾಸ್ಥಿತಿ (ಉಳಿಸಿಕೊಳ್ಳಬೇಕು) … ಎಂಬ ಸುಪ್ರೀಂಕೋರ್ಟ್ ಆದೇಶವು  ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ಮಾತ್ರ” ಎಂಬುದಾಗಿ ರಾಜ್ಯ ಸರ್ಕಾರವು ವ್ಯಕ್ತ ಪಡಿಸಿದ  ಅಭಿಪ್ರಾಯಕ್ಕೆ ಅನುಗುಣವಾಗಿರುವುದನ್ನು ದೃಢಪಡಿಸಿತು.

ಈದಿನದ  ವಿಚಾರಣೆಯ ಸಮಯದಲ್ಲಿ, ಮರಗಳನ್ನು ಕಡಿಯುವುದರ ವಿರುದ್ಧದ ಅರ್ಜಿಯನ್ನು ಆಲಿಸಿದ ವಿಶೇಷ ಸುಪ್ರೀಂ ಕೋರ್ಟ್ ಪೀಠವು ಆರೇ ಪ್ರದೇಶವು “ಯಾವುದೇ   ಅಭಿವೃದ್ಧಿ ರಹಿತ ವಲಯ”  ಎಂದು  ಹೇಳಿತ್ತು. ಅರ್ಜಿದಾರರು ಹೇಳಿದಂತೆ  ಪರಿಸರ ಸೂಕ್ಷ್ಮ ವಲಯವಲ್ಲ ಎಂದು ಅದು ಅಭಿಪ್ರಾಯಪಟ್ಟಿತ್ತು. ’ಯಾವುದೇ ಅಭಿವೃದ್ಧಿ ರಹಿತ  ವಲಯ’ದಲ್ಲಿ ನಿರ್ಮಾಣ ಚಟುವಟಿಕೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ.

ಮೂಲ ಯೋಜನೆ ಪ್ರಕಾರ ೨,೬೪೬ ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು.  ಆದರೆ ಈದಿನ, ಮಹಾರಾಷ್ಟ್ರ ಸರ್ಕಾರವು  “ಕತ್ತರಿಸಬೇಕಾದದ್ದನ್ನು ಈಗಾಗಲೇ ಮಾಡಲಾಗಿದೆ”,  ಈಗಾಗಲೇ ತೆರವುಗೊಳಿಸಿದ ಪ್ರದೇಶದಲ್ಲಿ ಶೆಡ್ ಅನ್ನು ನಿರ್ಮಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಆರೇ  ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಎಂಎಂಆರ್ ಸಿ ಎಲ್  ಮರಗಳನ್ನು ಕಡಿಯಲು ಪ್ರಾರಂಭಿಸಿತ್ತು ಮತ್ತು  ಪರಿಸರ ಕಾರ್ಯಕರ್ತರ  ಮತ್ತು ಸ್ಥಳೀಯ ನಿವಾಸಿಗಳ ತೀವ್ರ ವಿರೋಧದ ನಡುವೆಯೂ ಹಸಿರು ವಲಯದಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡುವ ಮುಂಬೈ ಮಹಾನಗರ ಪಾಲಿಕೆಯ ನಿರ್ಧಾರವನ್ನು ರದ್ದುಗೊಳಿಸಲು ನಿರಾಕರಿಸಿತು.

ಎಂಎಂಆರ್ ಸಿ ಎಲ್  ನಡೆಸಿದ ನಡುರಾತ್ರಿಯ  ಕಾರ್ಯಾಚರಣೆಯು ತೀವ್ರ ಕೋಪತಾಪದ ಪ್ರತಿಭಟನೆಗೆ ಕಾರಣವಾಯಿತು. ಮರಗಳನ್ನು ಕಡಿಯುವಾಗ ಪೊಲೀಸ್ ಸಿಬ್ಬಂದಿಗೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಆರೋಪದಲ್ಲಿ  ೨೯ ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು.

ಈಗಾಗಲೇ ೨೩,೮೪೬ ಮರಗಳನ್ನು ನೆಟ್ಟಿದೆ ಮತ್ತು ಹೆಚ್ಚುವರಿಯಾಗಿ ೨೫,೦೦೦ ಸಸಿಗಳನ್ನು ತನ್ನ ಹಸಿರು ಉಪಕ್ರಮಗಳ ಭಾಗವಾಗಿ ವಿತರಿಸಿದೆ ಎಂದು  ತನ್ನ ಕಾರ್ಯಾಚರಣೆಗೆ ಸಮರ್ಥನೆಯಾಗಿ ಎಂಎಂಆರ್ ಸಿಎಲ್   ಪ್ರತಿಪಾದಿಸಿದೆ.

ಕಾನೂನು ಮತ್ತು ಇತರ ಅಡೆತಡೆಗಳ ಕಾರಣದಿಂದಾಗಿ ಈಗಾಗಲೇ ೬ ತಿಂಗಳಿಗಿಂತ ಹೆಚ್ಚು ವಿಳಂಬವಾಗಿದೆ. ಆದರೂ ಗಡುವಿನ ಒಳಗಾಗಿ ಕೆಲಸವನ್ನು ಪೂರೈಸುವ ನಿರೀಕ್ಷೆ ನಮ್ಮದು’ ಎಂದು  ಎಂಎಂಆರ್ ಎಲ್  ಹೇಳಿಕೆ ತಿಳಿಸಿದೆ.

October 7, 2019 Posted by | ಆರ್ಥಿಕ, ತಂತ್ರಜ್ಞಾನ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Flash News, General Knowledge, Health, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha, supreme court, Technology | , , , , , , , , , , , | Leave a comment

ಅಮೆರಿಕದ ವಿಲಿಯಂ ಕೈಲಿನ್, ಗ್ರೆಗ್ ಸೆಮೆನ್ಜಾ,ಬ್ರಿಟನ್ನಿನ ಪೀಟರ್ ರಾಟ್ಕ್ಲಿಫ್ ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

SWEDEN-NOBEL-MEDICINE
ಸ್ಟಾಕ್ ಹೋಮ್:
ಆಮ್ಲಜನಕದ ಲಭ್ಯತೆಯನ್ನು ಜೀವಕೋಶಗಳು ಹೇಗೆ ಗ್ರಹಿಸುತ್ತವೆ ಮತ್ತು ಅದಕ್ಕೆ  ಹೊಂದಿಕೊಳ್ಳುತ್ತವೆ ಎಂಬ ವಿಷಯದ ಕುರಿತ ಆವಿಷ್ಕಾರಗಳಿಗಾಗಿ ಅಮೆರಿಕದ ಸಂಶೋಧಕರಾದ ವಿಲಿಯಂ ಕೈಲಿನ್ ಹಾಗೂ ಗ್ರೆಗ್ ಸೆಮೆನ್ಜಾ ಮತ್ತು ಬ್ರಿಟನ್‌ನ ಪೀಟರ್ ರಾಟ್‌ಕ್ಲಿಫ್  ಅವರು ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ನೊಬೆಲ್ ಸಂಸ್ಥೆಯು 2019ರ ಅಕ್ಟೋಬರ್ 07ರ ಸೋಮವಾರ ಪ್ರಕಟಿಸಿತು..

“ಆಮ್ಲಜನಕದ ಮಟ್ಟವು ಜೀವಕೋಶಗಳ ಚಯಾಪಚಯ ಮತ್ತು ಶಾರೀರಿಕ ಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಮ್ಮ ತಿಳುವಳಿಕೆಗೆ ಅವರು ಆಧಾರವನ್ನು ಸ್ಥಾಪಿಸಿದ್ದಾರೆ” ಎಂದು ತೀರ್ಪುಗಾರರು ಹೇಳಿದರು, ಅವರ ಆವಿಷ್ಕಾರಗಳು “ರಕ್ತಹೀನತೆ, ಕ್ಯಾನ್ಸರ್ ಮತ್ತು ಇತರ ಅನೇಕ ಕಾಯಿಲೆಗಳ ವಿರುದ್ಧ ಹೋರಾಡಲು ಹೊಸ ತಂತ್ರಗಳನ್ನು ನೀಡುವಲ್ಲಿ ದಾರಿ ಮಾಡಿಕೊಟ್ಟಿದೆ” ಎಂದು ಅವರು ನುಡಿದರು.

ನೊಬೆಲ್ ಪಾರಿತೋಷಕದಲ್ಲಿ 9 ಮಿಲಿಯನ್ ಕ್ರೊನೋರ್ (ಸುಮಾರು 65 ಕೋಟಿ ರೂಪಾಯಿ) ನಗದು ಹಣ ಒಳಗೊಂಡಿರುತ್ತದೆ. ಈ 65 ಕೋಟಿ ಹಣವನ್ನು ಮೂವರು ವಿಜ್ಞಾನಿಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಕರೋಲಿಂಸ್ಕಾ ಇನ್ಸ್​ಟಿಟ್ಯೂಟ್ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

1901ರಿಂದಲೂ ವೈದ್ಯಕೀಯ ಅಥವಾ ಫಿಸಿಯೋಲಜಿ ವಿಭಾಗದಲ್ಲಿ ಈ ವರ್ಷದ್ದೂ ಸೇರಿ ಒಟ್ಟು 110 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಇವತ್ತು ಪ್ರಾರಂಭವಾಗಿರುವ ನೊಬೆಲ್ ಪ್ರಶಸ್ತಿ ಘೋಷಣೆ ಅ. 14ರವರೆಗೂ ಮುಂದುವರಿಯಲಿದೆ. ಅ. 12 ಮತ್ತು 13 ಹೊರತುಪಡಿಸಿ ಈ ಅವಧಿಯಲ್ಲಿ ಬರುವ ಎಲ್ಲಾ ದಿನಗಳಲ್ಲೂ ನೊಬೆಲ್ ಪ್ರಶಸ್ತಿ ಘೋಷಣೆಯಾಗಲಿದೆ.

ನೊಬೆಲ್ ಪ್ರಶಸ್ತಿ ಪ್ರಕಟವಾಗುವ ದಿನ ಮತ್ತು ವಿಭಾಗ:
ಅ. 7: ವೈದ್ಯಕೀಯ
ಅ. 8: ಭೌತಶಾಸ್ತ್ರ
ಅ. 9: ರಸಾಯನಶಾಸ್ತ್ರ
ಅ. 10: ಸಾಹಿತ್ಯ
ಅ. 11: ಶಾಂತಿ
ಅ. 14: ಅರ್ಥಶಾಸ್ತ್ರ

ನೊಬೆಲ್ ಪ್ರಶಸ್ತಿ ಬಗ್ಗೆ ಗೊತ್ತಾ?
19ನೇ ಶತಮಾನದ ಅಂತ್ಯದವರೆಗೂ ಬದುಕಿದ್ದ ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ, ಎಂಜಿನಿಯರ್, ಸಂಶೋಧಕ ಆಲ್​ಫ್ರೆಡ್  ನೊಬೆಲ್ ಅವರ ಸ್ಮರಣಾರ್ಥ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ತಾವು ಸಾಯುವ ಮುನ್ನ ಆಲ್​ಫ್ರೆಡ್ ನೊಬೆಲ್ ಅವರು ಫಿಸಿಯಾಲಜಿ, ಕೆಮಿಸ್ಟ್ರಿ, ಲಿಟರೇಚರ್, ಪೀಸ್ ಮತ್ತು ಫಿಸಿಕ್ಸ್ ವಿಭಾಗದಲ್ಲಿ ಪ್ರಶಸ್ತಿ ನೀಡಬೇಕೆಂದು ವಿಲ್ ಬರೆದಿದ್ದರು. ಅದರಂತೆ ಸ್ವೀಡನ್ ಮತ್ತು ನಾರ್ವೆ ದೇಶದ ಸಂಸ್ಥೆಗಳು 1901ರಿಂದ ಜಗತ್ತಿನ ವಿಜ್ಞಾನಿಗಳನ್ನು ಗುರುತಿಸಿ ನೊಬೆಲ್ ಪಾರಿತೋಷಕಗಳ ನೀಡುತ್ತಾ ಬಂದಿವೆ. 1969ರಿಂದ ಅರ್ಥಶಾಸ್ತ್ರಜ್ಞರಿಗೂ ನೊಬೆಲ್ ಪ್ರಶಸ್ತಿ ನೀಡುವ ಪರಿಪಾಠ ಶುರುವಾಯಿತು.

ನೊಬೆಲ್ ಪ್ರಶಸ್ತಿಯನ್ನು ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಭಾರತ ಸಂಜಾತ ಬ್ರಿಟಿಷರಾದ ರೊನಾಲ್ಡ್ ರಾಸ್ ಮತ್ತು ರುಡ್ಯಾರ್ಡ್ ಕಿಪ್ಲಿಂಗ್ ಸೇರಿದಂತೆ ಒಟ್ಟು 10 ಭಾರತೀಯರು ನೊಬೆಲ್ ಪಾರಿತೋಷಕ ಪಡೆದಿದ್ದಾರೆ. ರಬೀಂದ್ರನಾಥ್ ಟಾಗೂರ್, ಸಿ.ವಿ. ರಾಮನ್, ಮದರ್ ತೆರೇಸಾ, ಅಮರ್ಥ್ಯ ಸೇನ್, ಹರ್​ಗೋವಿಂದ್ ಖುರಾನ, ಎಸ್. ಚಂದ್ರಶೇಖರ್ ಅವರು ಪ್ರಮುಖರು. 2014ರಲ್ಲಿ ಕೈಲಾಶ್ ಸತ್ಯಾರ್ಥಿ ಅವರು ಶಾಂತಿ ನೊಬೆಲ್ ಪಡೆದುಕೊಂಡಿದ್ದರು.

October 7, 2019 Posted by | Award, ಸಂಶೋಧನೆ, Flash News, General Knowledge, Health, Science, Spardha, Technology, World | , , | Leave a comment

ಆರೇ ಕಾಲೋನಿ ಮರಗಳಿಗೆ ‘ಸುಪ್ರೀಂ ‘ ರಕ್ಷಣೆ, ಯಥಾಸ್ಥಿತಿಗೆ ಆದೇಶ

07 arrey-SC spardha web
ಮುಂದಿನ ವಿಚಾರಣೆ ಅಕ್ಟೋಬರ್ ೨೧ಕ್ಕೆ

ನವದೆಹಲಿ: ಹಸಿರು ಕಾರ್ಯಕರ್ತರಿಗೆ ಕೆಲವು ಒಳ್ಳೆಯ ಸುದ್ದಿಯೊಂದರಲ್ಲಿ, ಸುಪ್ರೀಂ ಕೋರ್ಟ್ 2019 ಅಕ್ಟೋಬರ್  07ರ ಸೋಮವಾರ ಮುಂಬೈಯ ಆರೇ ಕಾಲೋನಿಯಲ್ಲಿ ಮೆಟ್ರೊ ಕಾರ್  ಶೆಡ್ ಸ್ಥಾಪಿಸಲು ಮರಗಳನ್ನು ಕಡಿಯುವುದನ್ನು ತಡೆ ನೀಡಿ, ಯಥಾಸ್ಥಿತಿ ಪಾಲನೆಗೆ ಆದೇಶ ನೀಡಿತು.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠವು ವಿಷಯವನ್ನು  ಸಮಗ್ರವಾಗಿ ಪರಿಶೀಲಿಸಬೇಕಾಗಿದೆ ಎಂದು ಹೇಳಿ, ವಿಷಯವನ್ನು ಅಕ್ಟೋಬರ್ ೨೧ ರಂದು ತನ್ನ ಅರಣ್ಯ ಪೀಠದ ಮುಂದೆ ವಿಚಾರಣೆಗೆ  ನಿಗದಿ ಪಡಿಸಿತು.  “ಈಗ ಏನನ್ನೂ ಕತ್ತರಿಸಬೇಡಿ” ಎಂದು ನ್ಯಾಯಪೀಠ   ನಿರ್ದೇಶಿಸಿತು.

ಮರಗಳ ನಾಶವನ್ನು  ಪ್ರತಿಭಟಿಸಿದ್ದಕ್ಕಾಗಿ  ಯಾರಾದರೂ ಇನ್ನೂ ಬಂಧನದಲ್ಲಿದ್ದರೆ, ವೈಯಕ್ತಿಕ ಬಾಂಡ್‌ಗಳ ಮೇಲೆ  ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆಜ್ಞಾಪಿಸಿತು.  ಆರೇಯಲ್ಲಿ ಮರ ಕಡಿಯುವುದನ್ನು ವಿರೋಧಿಸಿ ಬಂಧನಕ್ಕೊಳಗಾದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ವಿಚಾರಣೆಯ ವೇಳೆ ಮಹಾರಾಷ್ಟ್ರ ಸರ್ಕಾರವು ನ್ಯಾಯಪೀಠಕ್ಕೆ ತಿಳಿಸಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು  ತಮಗೆ ಎಲ್ಲಾ ದಾಖಲೆಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿ,  ಪ್ರಕರಣವು ತೀರ್ಮಾನವಾಗುವವರೆಗೂ ಆರೇಯಲ್ಲಿ ಏನನ್ನೂ ಕಡಿಯುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಆರೇ  ಅರಣ್ಯವನ್ನು ರಾಜ್ಯ ಸರ್ಕಾರವು  “ವರ್ಗೀಕರಿಸದ ಅರಣ್ಯ” ಎಂದು ಪರಿಗಣಿಸಿದೆ ಮತ್ತು ಅಲ್ಲಿ ಮರಗಳನ್ನು ಕಡಿಯುವುದು ಕಾನೂನುಬಾಹಿರ ಎಂದು ಸಾರ್ವಜನಿಕ ಹಿತಾಸಕ್ತಿ ಖಟ್ಲೆಯ ( ಪಿಐಎಲ್) ಅರ್ಜಿದಾರರು ನ್ಯಾಯಪೀಠಕ್ಕೆ ತಿಳಿಸಿದರು.

ಆದರೆ, ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಅವಲೋಕಿಸಿದ ನಂತರ, ನ್ಯಾಯಪೀಠವು ಆರೆ ಪ್ರದೇಶವು ಅಭಿವೃದ್ಧಿಯಿಲ್ಲದ ವಲಯವಾಗಿದೆ ಮತ್ತು ಅರ್ಜಿದಾರರು ಹೇಳಿದಂತೆ  ಪರಿಸರ ಸೂಕ್ಷ್ಮ ವಲಯವಲ್ಲ ಎಂದು ಅಭಿಪ್ರಾಯಪಟ್ಟಿತು.

ಮರಗಳನ್ನು ಕಡಿಯುವುದನ್ನು ತಡೆಹಿಡಿಯಬೇಕೆಂದು ಕೋರಿ ಕಾನೂನು ವಿದ್ಯಾರ್ಥಿ ರಿಶವ್ ರಂಜನ್ ಅವರು  ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಬರೆದ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಖಟ್ಲೆಯಾಗಿ (ಪಿಐಎಲ್) ಆಗಿ ನೋಂದಾಯಿಸಲು ಸುಪ್ರೀಂ ಕೋರ್ಟ್ 2019 ಅಕ್ಟೋಬರ್ 06ರ ಭಾನುವಾರ ನಿರ್ಧರಿಸಿತ್ತು.  ವಿಶೇಷ ನ್ಯಾಯಪೀಠವನ್ನು ರಚಿಸುವ ಮೂಲಕ ತುರ್ತು ವಿಚಾರಣೆಯನ್ನು ನಡೆಸುವ ಬಗ್ಗೆ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ನೋಟಿಸ್  ಪ್ರಕಟಿಸಲಾಗಿತ್ತು

ಅಕ್ಟೋಬರ್ ೪ ರಂದು ಬಾಂಬೆ ಹೈಕೋರ್ಟ್ ಆರೇ ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು  ಮತ್ತು ಹಸಿರು ವಲಯದಲ್ಲಿ ೨,೬೦೦ ಕ್ಕೂ ಹೆಚ್ಚು ಮರಗಳನ್ನು ಕಡಿಯಲು ನಿರಾಕರಿಸಿ,  ಮೆಟ್ರೊ ಕಾರ್ ಶೆಡ್ ಸ್ಥಾಪಿಸಲು ಅನುಮತಿ ನೀಡುವ ಮುಂಬೈ ಮಹಾನಗರ ಪಾಲಿಕೆಯ ನಿರ್ಧಾರವನ್ನು ರದ್ದುಗೊಳಿಸಬೇಕೆಂಬ ಮನವಿಯನ್ನು ತಿರಸ್ಕರಿಸಿತ್ತು.

ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ  ಮುಂಬೈ ಮೆಟ್ರೋ  ರೈಲು ನಿಗಮವು ಮರಗಳನ್ನು ಕಡಿಯಲು ಪ್ರಾರಂಭಿಸಿತು ಮತ್ತು ಅಂದಾಜಿನ ಪ್ರಕಾರ ಈಗಾಗಲೇ ೧,೦೦೦ ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿತು.

ಸುಪ್ರೀಂಕೋರ್ಟೆಗೆ ಬರೆದ ಪತ್ರದಲ್ಲಿ ಕಾನೂನು ವಿದ್ಯಾರ್ಥಿ  ರಿಶವ್ ರಂಜನ್ ಅವರು , “ನಾವು ನಿಮಗೆ ಈ ಪತ್ರವನ್ನು ಬರೆಯುತ್ತಿರುವಂತೆಯೇ ಮುಂಬೈ ಅಧಿಕಾರಿಗಳು ಮಿಥಿ ನದಿ ತೀರಕ್ಕೆ ಸಮೀಪವಿರುವ ಮರಗಳನ್ನು ತೆರವುಗೊಳಿಸುವ ಮೂಲಕ ಮುಂಬೈನ ಶ್ವಾಸಕೋಶವನ್ನು ಅಂದರೆ ಆರೇ ಅರಣ್ಯ ನಾಶವನ್ನು  ಮುಂದುವರೆಸಿದ್ದಾರೆ. ಸುದ್ದಿ ವರದಿಗಳ ಪ್ರಕಾರ ೧,೫೦೦ ಮರಗಳನ್ನು ಈಗಾಗಲೇ ಅಧಿಕಾರಿಗಳು ತೆರವುಗೊಳಿಸಿದ್ದಾರೆ”  ಎಂದು ತಿಳಿಸಿದ್ದರು.

‘ಇದಲ್ಲದೆ, ನಮ್ಮ ಸ್ನೇಹಿತರನ್ನು ಜೈಲಿನಲ್ಲಿ ಇರಿಸಲಾಗಿದೆ, ಅವರು ಗ್ರೇಟರ್ ಮುಂಬೈ ಮುನಿಸಿಪಲ್  ಕಾರ್ಪೊರೇಷನ್  (ಎಂಸಿಜಿಎಂ)  ಮುಂಬೈ ಮೆಟ್ರೋ ರೈಲು ನಿಗಮದ  (ಎಂಎಂಆರ್ ಸಿ) ಕ್ರಮಗಳ ವಿರುದ್ಧ ಶಾಂತಿಯುತ ಜನ ಜಾಗೃತಿ ನಡೆಸುತ್ತಿದ್ದಾಗ   ಅವರನ್ನು ಬಂಧಿಸಲಾಗಿದೆ ‘  ಎಂದು ರಿಶವ್ ಬರೆದಿದ್ದರು.

‘ಸರಿಯಾದ ಮೇಲ್ಮನವಿ ಅರ್ಜಿಯನ್ನು ತಯಾರಿಸಲು ಸಮಯವಿಲ್ಲದ ಕಾರಣ ಮತ್ತು ಗಂಭೀರ ಪರಿಸರ ಕಾಳಜಿಗಳಿಗಾಗಿ ನಿಂತಿರುವ ಜವಾಬ್ದಾರಿಯುತ ನಾಗರಿಕರಾಗಿರುವ ಈ ಯುವ ಕಾರ್ಯಕರ್ತರನ್ನು ರಕ್ಷಿಸುವ ಸಲುವಾಗಿ  ತಾಂತ್ರಿಕತೆಗಳನ್ನು ಗಮನಿಸದೆ  ಪ್ರಕರಣದ ಮಹತ್ವ ಗಮನಿಸಿ ನ್ಯಾಯಾಲಯವು ಎಪಿಸ್ಟೊಲರಿ ನ್ಯಾಯವ್ಯಾಪ್ತಿಯನ್ನು ಚಲಾಯಿಸಬೇಕು ಎಂದು ವಿದ್ಯಾರ್ಥಿ ಸುಪ್ರೀಂ ಕೋರ್ಟ್‌ಗೆ ವಿನಂತಿಸಿದ್ದರು.

ಮರ ಕಡಿಯುವಿಕೆಯ ವಿರುದ್ಧ “ಶಾಂತಿಯುತ  ಜನಜಾಗೃತಿಯಲ್ಲಿ ನಡೆಸುತ್ತಿದ್ದ  ೨೯ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ್ದರಿಂದ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಮೆಟ್ಟಿಲೇರಿದ್ದಾರೆ ಎಂದು ಎಂದು ಪತ್ರ ಹೇಳಿತ್ತು.

’ಸಾರ್ವಜನಿಕ ಸೇವಕನ ಮೇಲೆ ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು  ಹಲ್ಲೆ ನಡೆಸಲಾಗಿದೆ’ ಎಂದು  ವಿದ್ಯಾರ್ಥಿ-ಕಾರ್ಯಕರ್ತರನ್ನು ನಿಂದಿಸಿ ಅವರ ಮೇಲೆ ಕೈ ಮಾಡಿದ ಪೊಲೀಸರು ಐಪಿಸಿ ಅಡಿಯಲ್ಲಿ ’ಕಾನೂನುಬಾಹಿರ ಸಭೆ’ ನಡೆಸಿದ  ಅಪರಾಧಗಳಿಗಾಗಿ ಅವರನ್ನು ಬಂಧಿಸಿದೆ ಎಂದೂ ಅವರು ತಿಳಿಸಿದ್ದರು.

ಪತ್ರದ ಪ್ರಕಾರ, ಆರೆ ಅರಣ್ಯವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿದೆ ಮತ್ತು ಐದು ಲಕ್ಷ ಮರಗಳನ್ನು ಹೊಂದಿದೆ.

ಮುಂಬೈ ಮೆಟ್ರೋ -೩ ಯೋಜನೆಗಾಗಿ ಮತ್ತು ನಿರ್ದಿಷ್ಟವಾಗಿ ಕಾರ್ ಶೆಡ್ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲು ಪ್ರಸ್ತಾಪಿಸಲಾಗಿತ್ತು, ಮತ್ತು ಆರೇ ಪ್ರದೇಶವನ್ನು ಅರಣ್ಯವೆಂದು ಗುರುತಿಸಲು ಅಥವಾ ಅದನ್ನು ಪರಿಸರ ಸೂಕ್ಷ್ಮ ವಿಷಯವೆಂದು ಘೋಷಿಸಲು ನ್ಯಾಯವ್ಯಾಪ್ತಿಯ ಮಿತಿಗಳಿಂದಾಗಿ ಹೈಕೋರ್ಟ್ ನಿರಾಕರಿಸಿದೆ ಎಂದು  ಪತ್ರ ತಿಳಿಸಿತ್ತು.

ಪೊಲೀಸರು ಶನಿವಾರ ಆರೇಯಲ್ಲಿ ಅಪರಾಧ ದಂಡ ಸಂಹಿತೆಯ ಸೆಕ್ಷನ್ ೧೪೪ ಅಡಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಿ, ಗುಂಪುಗೂಡುವಿಕೆಯನ್ನು  ನಿರ್ಬಂಧಿಸಿದ್ದರು. ಪ್ರದೇಶವನ್ನು ಸುತ್ತುವರಿದ ಪೊಲೀಸರು  ಘರ್ಷಣೆಯ ನಂತರ ಇಪ್ಪತ್ತೊಂಬತ್ತು ಕಾರ್ಯಕರ್ತರನ್ನು ಬಂಧಿಸಿದ್ದರು. ನಂತರ ಅವರನ್ನು ಭಾನುವಾರ ಬಿಡುಗಡೆ ಮಾಡಲಾಗಿತ್ತು.

ಈ ಕ್ರಮವು  ಆಡಳಿತಾರೂಢ  ಮೈತ್ರಿಕೂಟದ ಮಿತ್ರ ಪಕ್ಷಗಳಾದ  ಶಿವಸೇನೆ ಮತ್ತು ಬಿಜೆಪಿ ನಡುವಿನ ಒಳಜಗಳಕ್ಕೂ ಹೇತುವಾಗಿದೆ. ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ‘ಶೀಘ್ರದಲ್ಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಮತ್ತುಮರಗಳ ಕೊಲೆಗಡುಕರಿಗೆ  ಪಾಠ ಕಲಿಸುತ್ತದೆ’ ಎಂದು ಹೇಳಿದ್ದರು.

ಯುವಸೇನಾ ಮುಖ್ಯಸ್ಥ ಮತ್ತು ಚುನಾವಣಾ ಕಣಕ್ಕೆ ಇದೇ ಮೊದಲ ಬಾರಿಗೆ ಪ್ರವೇಶಿಸಿದ  ಆದಿತ್ಯ  ಠಾಕ್ರೆ ಆದಿತ್ಯ ಠಾಕ್ರೆ  ಪರಿಸರ ಕಾರ್ಯಕರ್ತರನ್ನು ಬೆಂಬಲಿಸಿದ್ದರು..

“ಹೊಸತರ ನಿರ್ಮಾಣಕ್ಕಾಗಿ ಕೆಲವೊಂದು  ವಿನಾಶ ಅನಿವಾರ್ಯ” ಎಂದು ಮುಂಬೈ ಮೆಟ್ರೋ ಮುಖ್ಯಸ್ಥೇ ಸ್ಥ ಅಶ್ವಿನಿ ಭಿಡೆ ಭಾನುವಾರ  ಟ್ವೀಟ್ ಮಾಡಿದ್ದರು.

October 7, 2019 Posted by | ಆರ್ಥಿಕ, ತಂತ್ರಜ್ಞಾನ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Finance, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha, supreme court, Technology | , , , , , , , , , , , | 1 Comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ