SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಈ ವರ್ಷದ ದೀಪಾವಳಿಗೆ ರಾಕೆಟ್ ಅಥವಾ ಬಾಂಬ್ ಇಲ್ಲ, ೨ ಪಟಾಕಿ ಮಾತ್ರ….!

22 Diwali
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕಟ್ಟು ನಿಟ್ಟಿನ ನಿಷೇಧ

ನವದೆಹಲಿ: ಎರಡು ಮಾದರಿಯ ಪಟಾಕಿಗಳು ಮಾತ್ರವೇ ಕಾನೂನುಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸುವುದರೊಂದಿಗೆ ಪ್ರಸ್ತುತ ವರ್ಷದ ದೀಪಾವಳಿ ಸದ್ದು ಗದ್ದಲವಿಲ್ಲದೆ ದೀಪಾವಳಿಯಾಗಲಿದೆ. ’ಅನರ್’ ಮತ್ತು ಫುಲ್ಜಾರಿ’ಗಳ ಹಸಿರು ಆವೃತ್ತಿ ಮಾತ್ರವೇ ಕಾನೂನು ಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸಿರುವುದರಿಂದ ಇವೆರಡೂ ಪಟಾಕಿಗಳೂ ಈ ಬಾರಿ ಸದ್ದು ಮಾಡದೆ ’ಮೌನ’ ಆಗಲಿವೆ. ಉಳಿದ ರಾಕೆಟ್‌ಗಳು, ಬಾಂಬುಗಳು ಮತ್ತು ಸದ್ದು ಮಾಡುವ ಇತರ ಎಲ್ಲ  ಪಟಾಕಿಗಳೂ ಈ ಬಾರಿ ನಿಷೇಧಕ್ಕೆ ಒಳಗಾದವು..

ಈ ವಿಚಾರವನ್ನು ದೆಹಲಿಯಲ್ಲಿ 2019 ಅಕ್ಟೋಬರ್ 22ರ ಮಂಗಳವಾರ ಸ್ಪಷ್ಟ ಪಡಿಸಿರುವ ಪೊಲೀಸರು ’ಪಟಾಕಿ ಖರೀದಿಗೆ ಮುನ್ನ ಪ್ರತಿಯೊಬ್ಬರೂ ಅಧಿಕೃತ ಮುದ್ರೆಯನ್ನು ಗಮನಿಸಿಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.

ಅಧಿಕೃತ ಮುದ್ರೆಯು ಕ್ಯೂಆರ್ ಕೋಡ್‌ನ್ನು (ಸ್ಪೆಷಲ್ ಕ್ವಿಕ್ ರೆಸ್ಪಾನ್ಸ್  ಕೋಡ್) ಅಥವಾ ಹಸಿರು ಲಾಂಛನವನ್ನು ಹೊಂದಿರುತ್ತದೆ. ೫೦ ’ಫುಲ್ಜಾರಿಗಳು’ ಅಥವಾ ಐದು ’ಅನರ್’ಗಳು ಇರುವ ಒಂದು ಪೊಟ್ಟಣಕ್ಕೆ ೨೫೦ ರೂಪಾಯಿ ಬೆಲೆ ಇರುತ್ತದೆ. ಇವು ಎರಡು ಬಣ್ಣಗಳಲ್ಲಿ ಬರುತ್ತವೆ.

‘ಹಸಿರು ಪಟಾಕಿಗಳಿಗೆ (ಪರಿಸರ ಮಿತ್ರ ಪಟಾಕಿಗಳು) ಮಾತ್ರವೇ ಅನುಮತಿ ನೀಡಲಾಗಿದೆ. ಇವುಗಳನ್ನು ಮಾರುವ ಮಾರಾಟಗಾರರ ತಪಾಸಣೆಗೆ ನಾವು ತಂಡಗಳನ್ನು ರಚಿಸಿದ್ದೇವೆ. ಯಾರಾದರೂ ಬೇರೆ ಮಾದರಿಯ ಪಟಾಕಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ದೆಹಲಿ ಪೊಲೀಸರ ವಕ್ತಾರ ಎಂಎಸ್ ರಾಂಧವ ಹೇಳಿದರು.

ಹಸಿರು ಪಟಾಕಿಗಳು ಎಂಬುದಾಗಿ ಕರೆಯಲಾಗಿರುವ ಈ ಪಟಾಕಿಗಳು ಶೇಕಡಾ ೩೦ರಷ್ಟು ಕಡಿಮೆ ವಾಯುಮಾಲಿನ್ಯ ಉಂಟು ಮಾಡುತ್ತವೆ ಎಂದು ಸರ್ಕಾರವು ಪ್ರತಿಪಾದಿಸಿದೆ. ಚಳಿಗಾಲ ಬರುತ್ತಿರುವಂತೆಯೇ ದೆಹಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ.

ಕಳೆದ ಒಂದು ವಾರದಲ್ಲಿ ದೆಹಲಿಯಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಕ್ಷೀಣಿಸಿತ್ತು. ಗಾಳಿಯ ದಿಕ್ಕು ವಾಯವ್ಯದ ಕಡೆಗೆ ತಿರುಗುವುದರೊಂದಿಗೆ ನೆರೆಯ ರಾಜ್ಯಗಳ ಸುಡುವ ಕಳೆಯ ಹೊಗೆ ರಾಜಧಾನಿಯತ್ತ ಬರಲು ಆರಂಭವಾಗಿತ್ತು..

‘ಹಸಿರು ಪಟಾಕಿಗಳನ್ನು ಕಳೆದ ವರ್ಷವೇ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ದೀಪಾವಳಿಗೆ ಮುನ್ನ ಸಾಕಾಗುವಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗಿರಲಿಲ್ಲ’ ಎಂದು ಸರ್ಕಾರಿ ಮೂಲಗಳು ತಿಳಿಸಿದವು.

ಈ ಪಟಾಕಿಗಳು ಶೇಕಡಾ ೨೫ರಿಂದ ೩೦ರಷ್ಟು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ. ಹಾಗೆಯೇ ಶೇಕಡಾ ೫೦ರಷ್ಟು ಕಡಿಮೆ ಸಲ್ಫರ್ ಡೈಯಾಕ್ಸೈಡ್ ಬಿಡುಗಡೆ ಮಾಡುತ್ತವೆ ಎಂದು ಆಗ ಪರಿಸರ ಖಾತೆಯನ್ನು ಹೊಂದಿದ್ದ ಕೇಂದ್ರ ಸಚಿವ ಹರ್ಷವರ್ಧನ್ ಹೇಳಿದ್ದರು.

ಮಾಲಿನ್ಯ ಮಟ್ಟವನ್ನು ಅತ್ಯಂತ ಕಡಿಮೆಗೊಳಿಸುವ ಪಟಾಕಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಟಾಕಿಗಳಿಗೂ ಅವಕಾಶ ನೀಡಲಾಗುವುದಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಕಳೆದ ವರ್ಷ ಕಟ್ಟುನಿಟ್ಟಿನ ಆದೇಶ ನೀಡಿದ ಬಳಿಕ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಈ ಹಸಿರು ಪಟಾಕಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.

ಪಟಾಕಿಗಳನ್ನು ದೇಶಾದ್ಯಂತ ನಿಷೇಧಿಸುವಂತೆ ಸಲ್ಲಿಕೆಯಾದ ಹಲವಾರು ಅರ್ಜಿಗಳ ವಿಚಾರಣೆಯ ಬಳಿಕ ಸುಪ್ರೀಂಕೋರ್ಟ್ ಪಟಾಕಿ ನಿಷೇಧದ ಈ ಆದೇಶವನ್ನು ಹೊರಡಿಸಿತ್ತು.

೨೦೧೬ರಲ್ಲಿ ಮೂವರು ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಿತ್ತು.

೨೦೧೭ರ ಸೆಪ್ಟೆಂಬರಿನಲ್ಲಿ ನ್ಯಾಯಾಲಯವು ತಾತ್ಕಾಲಿಕವಾಗಿ ನಿಷೇಧವನ್ನು ಅಮಾನತು ಗೊಳಿಸಿದರೂ, ಒಂದು ತಿಂಗಳ ಬಳಿಕ ಪಟಾಕಿಗಳನ್ನು ನಿಷೇಧಿಸಿ ಕಟ್ಟು ನಿಟ್ಟಿನ ಆದೇಶ ನೀಡಿತ್ತು.

ರಾಜಧಾನಿ ದೆಹಲಿಯಲ್ಲಂತೂ ಸುಪ್ರೀಂಕೋರ್ಟ್ ಆದೇಶ ಈ ಬಾರಿ ಕಟ್ಟು ನಿಟ್ಟಾಗಿ ಜಾರಿಯಾಗಲಿದೆ ಎಂದು ಪೊಲೀಸರು ಸ್ಪಷ್ಟ ಪಡಿಸಿದರು.

October 22, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Entertrainment, Festival, Flash News, General Knowledge, Health, India, Nation, News, Spardha, supreme court | , , , , , , , , , , , | Leave a comment

ಜಮ್ಮು-ಕಾಶ್ಮೀರ: ಪಾಕ್ ನುಸುಳುವಿಕೆ ಯತ್ನ ಭಗ್ನ, ೩ ಭಯೋತ್ಪಾದಕರ ಹತ್ಯೆ

22 infltration bid foiled ಒಬ್ಬ ಸೇನಾ ಅಧಿಕಾರಿ ಹುತಾತ್ಮ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನೌಶೇರಾ ವಿಭಾಗದಲ್ಲಿ ಭಯೋತ್ಪಾದಕರನ್ನು ಭಾರತಕ್ಕೆ ನುಸುಳುವಂತೆ ಮಾಡುವ ಪಾಕಿಸ್ತಾನಿ ಸೇನೆಯ ಯತ್ನವನ್ನು ಭಾರತೀಯ ಸೇನೆಯು 2019 ಅಕ್ಟೋಬರ್ 22ರ ಮಂಗಳವಾರ ಭಗ್ನಗೊಳಿಸಿದ್ದು, ಮೂವರು ಭಯೋತ್ಪಾದಕರನ್ನು ಸದೆ ಬಡಿಯಿತು. ಈ ಸಂದರ್ಭದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕಿರಿಯ ಅಧಿಕಾರಿಯೊಬ್ಬರು (ಜ್ಯೂನಿಯರ್ ಕಮಿಷನ್ಡ್ ಆಫೀಸರ್- ಜೆಸಿಒ) ಹುತಾತ್ಮರಾದರು.

ಸುದ್ದಿ ಮೂಲಗಳ ಪ್ರಕಾರ ಪಾಕಿಸ್ತಾನಿ ಸೇನೆಯ ಬೆಂಬಲದೊಂದಿಗೆ ಸಶಸ್ತ್ರ ಭಯೋತ್ಪಾದಕರ ತಂಡವೊಂದು ನಿಯಂತ್ರಣ ರೇಖೆಯನ್ನು ದಾಟಿ ಸುಮಾರು ೪೦೦ ಮೀಟರುಗಳಷ್ಟು ಭಾರತೀಯ ಪ್ರದೇಶದೊಳಕ್ಕೆ ನುಸುಳಿತ್ತು. ಅಷ್ಟರಲ್ಲಿ ಭಾರತೀಯ ಸೇನೆ ಅವರನ್ನು ಅಡ್ಡ ಗಟ್ಟಿತು. ತೀವ್ರ ಗುಂಡಿನ ಹಾರಾಟ ನಡೆದು ಮೂವರು ಭಯೋತ್ಪಾದಕರನ್ನು ಕೊಂದು ಹಾಕುವ ಮೂಲಕ ಪಾಕ್ ಸೇನೆ ಬೆಂಬಲಿತ ಅತಿಕ್ರಮಣ ಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿತು.

ಮೂವರು ಭಯೋತ್ಪಾದಕರ ಹೆಣಗಳು ಉರುಳುತ್ತಿದ್ದಂತೆಯೇ ಉಳಿದ ನುಸುಳುಕೋರರು ರಕ್ಷಣೆಗಾಗಿ ಹಿಂದಕ್ಕೆ ಓಡಿದರು ಎಂದು ಸುದ್ದಿ ಮೂಲಗಳು ಹೇಳಿದವು.

ಭಾರತೀಯ ಸೇನೆಯ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಫಿರಂಗಿದಾಳಿ ನಡೆಸಿ ನಾಲ್ಕು ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಸಂಭವಿಸಿದ ಮೊದಲ ಘರ್ಷಣೆ ಇದಾಗಿದೆ.

ಪಾಕಿಸ್ತಾನಿ ಸೇನೆಯು ತಂಗ್‌ಧರ್ ವಿಭಾಗದಲ್ಲಿ ನುಸುಳುಕೋರರಿಗೆ ನೆರವಾಗುವ ಸಲುವಾಗಿ ಕದನವಿರಾಮ ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಈ ದಾಳಿಯನ್ನು ನಡೆಸಿತ್ತು.

ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಕೂಡಾ ಪಾಕಿಸ್ತಾನವು ಈದಿನ ಕದನವಿರಾಮವನ್ನು ಉಲ್ಲಂಘಿಸಿತ್ತು.

ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಲಾಕೋಟ್‌ನಲ್ಲಿ ಈದಿನ ಬೆಳಗ್ಗೆ ೧೧.೩೦ರ ವೇಳೆಗೆ ಕದನ ವಿರಾಮವನ್ನು ಉಲ್ಲಂಘಿಸಿತ್ತು.

October 22, 2019 Posted by | ಪಾಕಿಸ್ತಾನ, ಬೆಂಗಳೂರು, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Pakistan, Politics, Spardha, supreme court | | Leave a comment

ವಿಲೀನ ವಿರೋಧಿಸಿ ಬ್ಯಾಂಕ್ ಮುಷ್ಕರ: ಸೇವೆಗಳು ಅಸ್ತವ್ಯಸ್ತ

22 Bank-employees
ಬೆಂಗಳೂರು/
ನವದೆಹಲಿ: ಹತ್ತು ಸರ್ಕಾರಿ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕುಗಳಲ್ಲಿ ವಿಲೀನಗೊಳಿಸುವ ಸರ್ಕಾರದ ಉಪಕ್ರಮವನ್ನು ವಿರೋಧಿಸಿ ಸರ್ಕಾರಿ ಮತ್ತು ಖಾಸಗಿ ವಲಯಗಳ ಬ್ಯಾಂಕುಗಳ ನೌಕರರು ಮುಷ್ಕರ ನಡೆಸಿದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದೇಶಾದ್ಯಂತ 2019 ಅಕ್ಟೋಬರ್ 22ರ ಮಂಗಳವಾರ ಬ್ಯಾಂಕ್ ಸೇವೆಗಳು ಅಸ್ತವ್ಯಸ್ತಗೊಂಡವು.

ಬ್ಯಾಂಕ್ ಕಚೇರಿಯ ಸೇವೆಗಳ ಜೊತೆಗೆ ಹಲವೆಡೆಗಳಲ್ಲಿ ಎಟಿಎಂ ಸೇವೆಗಳೂ ಲಭಿಸದೆ ಸಾರ್ವಜನಿಕರು ಪರದಾಡಿದರು.

“ಬ್ಯಾಂಕುಗಳ ವಿಲೀನದ ಬಳಿಕ ನಾವು ನಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರದ ಈ ಕ್ರಮವು ನಿರುದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ನೌಕರರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ” ಎಂದು ಬಿಹಾರ ಬ್ಯಾಂಕ್ ಆಫ್ ಬರೋಡಾದ ಪ್ರಧಾನ ಕಾರ್ಯದರ್ಶಿ ಜಿಯಾನ್ ಲಾಲ್ ಹೇಳಿದರು.

“ನಮ್ಮ ಗ್ರಾಹಕರಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ವಿಲೀನಗೊಳಿಸುವ ಈ ಕ್ರಮವು ಕಾರ್ಪೊರೇಟ್‌ಗಳಿಗೆ ಮಾತ್ರ ಅನುಕೂಲ ಮಾಡುತ್ತದೆ ಮತ್ತು ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು.

“ನಾವು ಬ್ಯಾಂಕುಗಳು ಲಾಭ ಗಳಿಸಲು ಬುಡ ಮಟ್ಟದಲ್ಲಿ ಕೆಲಸ ಮಾಡಿದ್ದೇವೆ. ವಿಲೀನವು ಸರಿಯಾದ ಕ್ರಮವಲ್ಲ. ಸಾರ್ವಜನಿಕರಿಗೆ ನೈಜ ಚಿತ್ರವನ್ನು ತೋರಿಸಲಾಗುತ್ತಿಲ್ಲ’ ಎಂದು ಪಾಟ್ನಾದ ಇನ್ನೊಬ್ಬ ಬ್ಯಾಂಕ್ ನೌಕರ ಹೇಳಿದರು.

“ವಿಲೀನದ ನಿರ್ಧಾರ ತೆಗೆದುಕೊಳ್ಳುವ ಮೊದಲು, ನಮ್ಮೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಅವರು ಕಾರ್ಪೊರೇಟ್ ಸಂಸ್ಥೆಗಳಿಂದ ವಸೂಲಾದ ಸಾಲಗಳನ್ನು (ಎನ್‌ಪಿಎ) ವಸೂಲಿ ಮಾಡುತ್ತಿಲ್ಲ. ಆದರೆ ನಮ್ಮ ಸಂಬಳವನ್ನು ಕಡಿತಗೊಳಿಸಿ ಬ್ಯಾಂಕುಗಳನ್ನು ವಿಲೀನಗೊಳಿಸುತ್ತಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಭವಿಷ್ಯದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಿದ್ದೇವೆ “ಎಂದು ಬೆಂಗಳೂರಿನ ಪ್ರತಿಭಟನಾಕಾರ ದೀಪಿಕಾ ದಾಸ್ ಚರೋಬಾರ್ತಿ ಹೇಳಿದರು.

ಸಾರ್ವಜನಿಕ ವಲಯದ ೧೦ ಬ್ಯಾಂಕುಗಳನ್ನು ವಿಲೀನಗೊಳಿಸಿ ಕೇವಲ ನಾಲ್ಕು ಬ್ಯಾಂಕುಗಳನ್ನಾಗಿ ಮಾಡುವುದನ್ನು ವಿರೋಧಿಸಿ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದರು.

ಠೇವಣಿಗಳ ಮೇಲಿನ ಬಡ್ಡಿದರ ಕುಸಿತ ನಿವಾರಣೆ, ಉದ್ಯೋಗ ಭದ್ರತೆ, ಕೆಟ್ಟ ಸಾಲಗಳ ವಸೂಲಿ ಮತ್ತು ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

October 22, 2019 Posted by | ಆರ್ಥಿಕ, ಕರ್ನಾಟಕ, ಬೆಂಗಳೂರು, ಭಾರತ, ರಾಜ್ಯ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Spardha | , , , | Leave a comment

ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂಗೆ ಸುಪ್ರೀಂ ಜಾಮೀನು

22 chidambaram bail
ಸಿಬಿಐ ವಾದ ತಿರಸ್ಕರಿಸಿದ ನ್ಯಾಯಾಲಯ, ಇಡಿ ಬಂಧನ ಮುಂದುವರಿಕೆ

ನವದೆಹಲಿ: ಕೇಂದ್ರೀಯ ತನಿಖಾ ದಳವು (ಸಿಬಿಐ) ತನಿಖೆ ನಡೆಸಿರುವ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ  ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ 2019 ಅಕ್ಟೋಬರ್ 22ರ ಮಂಗಳವಾರ ಶರತ್ತಿನ ಜಾಮೀನು ಮಂಜೂರು ಮಾಡಿತು. ೬೧ ದಿನಗಳ ಹಿಂದೆ ಆಗಸ್ಟ್ ೨೧ರಂದು ಸಿಬಿಐಯಿಂದ ಬಂಧಿತರಾದ ೭೪ರ ಹರೆಯದ ಕಾಂಗ್ರೆಸ್ ನಾಯಕನಿಗೆ ಇದರೊಂದಿಗೆ ಅಲ್ಪ ನಿರಾಳತೆ ಲಭಿಸಿದಂತಾಯಿತು.

ಏನಿದ್ದರೂ, ಚಿದಂಬರಂ ಅವರು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸೆರೆಮನೆಯಿಂದ ಹೊರಕ್ಕೆ ಬರುವಂತಿಲ್ಲ. ಜಾರಿ ನಿರ್ದೇಶನಾಲಯವು (ಇಡಿ) ಕೂಡಾ ಐಎನ್‌ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಬಂಧಿಸಿ ತನ್ನ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದು, ಅಕ್ಟೋಬರ್ ೨೪ರವರೆಗೆ ತನ್ನ ವಶದಲ್ಲಿ ಇಟ್ಟುಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯವು ಅನುಮತಿ ನೀಡಿತ್ತು.

ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ದ್ವಿಸದಸ್ಯ ಸುಪ್ರೀಂಕೋರ್ಟ್ ಪೀಠವು ಮಾಜಿ ಗೃಹ ಹಾಗೂ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟಿನ ಸೆಪ್ಟೆಂಬರ್ ೩೦ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ, ಒಂದು ಲಕ್ಷ ರೂಪಾಯಿಗಳ ಜಾಮೀನು ಬಾಂಡ್ ಮತ್ತು ಎರಡು ಖಾತರಿಗಳನ್ನು ಒದಗಿಸುವಂತೆ ಚಿದಂಬರಂ ಅವರಿಗೆ ನಿರ್ದೇಶನ ನೀಡಿತು. ಅವರು ತಮ್ಮ ಪಾಸ್ ಪೋರ್ಟ್‌ನ್ನು ಇನ್ನೂ ನ್ಯಾಯಾಲಯಕ್ಕೆ ಒಪ್ಪಿಸಿಲ್ಲವಾದರೆ ಅದನ್ನು ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಸುಪ್ರೀಂಪೀಠವು ಸೂಚಿಸಿತು.

ಮಾಜಿ ಸಚಿವ ಚಿದಂಬರಂ ಅವರು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ನೆಲೆಯಲ್ಲಿ ಜಾಮೀನು ನಿರಾಕರಿಸಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಪೀಠವು ಮೇಲ್ಮನವಿ ವಿಚಾರಣೆ ಬಳಿಕ ತಳ್ಳಿಹಾಕಿತು.

ಬೇರೆ ಯಾವುದೇ ಪ್ರಕರಣದಲ್ಲಿ ಬಂಧಿಸಿಲ್ಲವಾದರೆ ಚಿದಂಬರಂ ಅವರನ್ನು ಅಧಿಕಾರಿಗಳು ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿ ಆರ್. ಭಾನುಮತಿ ಹೇಳಿದರು.

ಪ್ರಸ್ತುತ ಜಾರಿ ನಿರ್ದೇಶನಾಲಯದ ವಶದಲ್ಲಿ ಇರುವ ಮಾಜಿ ಸಚಿವರನ್ನು ತನಿಖಾ ಸಂಸ್ಥೆಯು ಈ ತಿಂಗಳ ಆದಿಯಲ್ಲಿ, ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರ ಪ್ರಕರಣದ ಮೇಲ್ಮನವಿಯು ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರುವುದಕ್ಕೆ ಸ್ವಲ್ಪ ಮುನ್ನ ಬಂಧಿಸಿತ್ತು.

ಐಎನ್‌ಎಕ್ಸ್ ಮೀಡಿಯಾ ಸಮೂಹಕ್ಕೆ ೩೦೫ ಕೋಟಿ ರೂಪಾಯಿಗಳ ವಿದೇಶೀ ಹೂಡಿಕೆ ಪಡೆಯಲು ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯು (ಎಫ್‌ಐಪಿಬಿ) ನೀಡಿದ್ದ ಅನುಮತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಆ ಅವಧಿಯಲ್ಲಿ ಚಿದಂಬರಂ ಅವರು ವಿತ್ತ ಸಚಿವರಾಗಿದ್ದರು.

ಪಿ. ಚಿದಂಬರಂ ಅವರು ತಮ್ಮ ಕಚೇರಿಯಲ್ಲಿ ಐಎನ್‌ಎಕ್ಸ್ ಮೀಡಿಯಾದ ಸಹ ಸಂಸ್ಥಾಪಕರಾದ ಇಂದ್ರಾಣಿ ಮುಖರ್ಜಿಯಾ ಮತ್ತು ಪ್ರತಿಮ್ (ಪೀಟರ್) ಮುಖರ್ಜಿಯಾ ಅವರನ್ನು ೨೦೦೭ರ ಏಪ್ರಿಲ್/ ಮೇ ಅವಧಿಯಲ್ಲಿ ಭೇಟಿ ಮಾಡಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್) ಆಪಾದಿಸಿದೆ. ಈ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ’ಸಾಗರದಾಚೆಯ ಪಾವತಿಗೆ ಸಂಬಂಧಿಸಿದಂತೆ ಅಕ್ರಮ ಹಣ ಪಾವತಿ ಮಾಡುವಂತೆ (ಮತು)  ಮತ್ತು ತಮ್ಮ ಪುತ್ರನ ವ್ಯಾಪಾರ ಹಿತಾಸಕ್ತಿಗಳನ್ನು ನೋಡಿಕೊಳ್ಳುವಂತೆ ಅವರಿಗೆ ಸೂಚಿಸಿದರು’ ಎಂದು ಸಿಬಿಐ ಆಪಾದಿಸಿದೆ. ಚಿದಂಬರಂ ಅವರು ಈ ಆರೋಪವನ್ನು ತಳ್ಳಿಹಾಕಿ, ಇಂತಹ ಸಭೆ ನಡೆದೇ ಇಲ್ಲ ಎಂದು ನಿರಾಕರಿಸಿದ್ದರು.

ಸಿಬಿಐ ಆಕ್ಷೇಪಕ್ಕೆ ನಕಾರ: ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಿದ ತನ್ನ ಆದೇಶದಲ್ಲಿ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ದ್ವಿಸದಸ್ಯ ಪೀಠವು, ೭೪ರ ಹರೆಯದ ಕಾಂಗ್ರೆಸ್ ನಾಯಕ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಅಥವಾ ರಾಷ್ಟ್ರ ಬಿಟ್ಟು ವಿದೇಶಕ್ಕೆ ಹಾರಬಹುದು ಎಂಬುದಾಗಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಮುಂದಿಟ್ಟ ವಾದವನ್ನು ತಿರಸ್ಕರಿಸಿತು.

ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರ ಬಳಸಿದ ’ವಿದೇಶಕ್ಕೆ ಹಾರಬಹುದಾದ ಅಪಾಯ’ ಇಲ್ಲ ಎಂಬುದಾಗಿ ಹೇಳಿದ ನ್ಯಾಯಮೂರ್ತಿ ಆರ್. ಭಾನುಮತಿ ಅವರು ‘ವಿಧಿಸಲಾಗಿರುವ ಶರತ್ತುಗಳ ಹಿನ್ನೆಲೆಯಲ್ಲಿ ಅವರು ’ತನಿಖೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಇಲ್ಲ’ ಎಂದು ಹೇಳಿದರು.

ಮೇಲ್ಮನವಿದಾರರು ತಮ್ಮ ಪಾಸ್ ಪೋರ್ಟನ್ನು ಒಪ್ಪಿಸಿರುವಾಗ ಮತ್ತು ಅವರ ವಿರುದ್ಧ ’ಲುಕ್ ಔಟ್ ನೋಟಿಸ್’ ಜಾರಿಯಾಗಿರುವಾಗ  ಅವರು ವಿದೇಶಕ್ಕೆ ಪರಾರಿಯಾಗುವ ಅಪಾಯ ಇಲ್ಲ ಎಂಬುದಾಗಿ ಮೇಲ್ಮನವಿದಾರರ ಪರವಾಗಿ ಹಾಜರಾದ ಹಿರಿಯ ವಕೀಲರು ಸಲ್ಲಿಸಿದ ಅಹವಾಲಿನಲ್ಲಿ ಅರ್ಹತೆ ಇದೆ ಎಂಬುದನ್ನು ನಾವು ಗಮನಿಸಿದ್ದೇವೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿತು.

ಕೆಲವು ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿಯಾಗಿರುವ ಹಿನ್ನೆಲೆಯಲ್ಲಿ, ಆರ್ಥಿಕ ಅಪರಾಧಿಗಳು ’ಪರಾರಿಯಾಗುವ ಸಾಧ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಅಂತಹವರ ಜೊತೆಗೆ ವ್ಯವಹರಿಸಬೇಕಾಗುತ್ತದೆಎಂಬ ತುಷಾರ ಮೆಹ್ತ ಅವರ ವಾದವನ್ನು ಅಂಗೀಕರಿಸಲು ತನಗೆ ಸಾಧ್ಯವಾಗುತ್ತಿಲ್ಲ’ ಎಂದು ನ್ಯಾಯಾಲಯ ಹೇಳಿತು.

ಹಿರಿಯ ವಕೀಲರು ಹಾಗೂ ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ಆರ್ಶದೀಪ್ ಸಿಂಗ್ ಜೊತೆಗೆ ಚಿದಂಬರಂ ಅವರನ್ನು ಪ್ರತಿನಿಧಿಸಿದ್ದರು.

ಸಿಬಿಐ ದಾಖಲಿಸಿರುವ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲಿ ತಮ್ಮ ತಂದೆಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದಕ್ಕೆ ಪ್ರತಿಕ್ರಿಯಿಸಿರುವ ಕಾರ್ತಿ ಚಿದಂಬರಂ ಅವರು ಲ್ಯಾಟಿನ್ ಭಾಷೆಯಲ್ಲಿ ’ವೆರಿಟಾಸ್ ವಲೆಬಿಟ್, ಎಟಸಿ ಲೆಂಟೆ’ ಅಂದರೆ ’ತಡವಾಗಿಯಾದರೂ ಸತ್ಯವು ಜಯಿಸುತ್ತದೆ’ ಟ್ವೀಟ್ ಮಾಡಿದರು.

ಸುಮಾರು ೨೫ ಮಂದಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಮಾಜಿ ಗೃಹ ಹಾಗೂ ವಿತ್ತ ಸಚಿವರನ್ನು ಬಂಧನದಲ್ಲಿಯೇ ಇರಿಸಿಕೊಳ್ಳಬೇಕಾದ ಅಗತ್ಯ ಇದೆ ಎಂಬ ಸಿಬಿಐ ವಾದವನ್ನು ಕೂಡಾ ಸುಪ್ರೀಂಕೋರ್ಟ್ ತಿರಸ್ಕರಿಸಿತು. ಇದು ಸಿಬಿಐ ಮುಂದಿಟ್ಟಿರುವ ಕೊನೆ ಕ್ಷಣದ ವಾದ ಎಂದು ನ್ಯಾಯಮೂರ್ತಿ ತಮ್ಮ ತೀರ್ಪಿನಲ್ಲಿ ಬಣ್ಣಿಸಿದರು.

‘ಸಿಬಿಐ ನ್ಯಾಯಾಲಯಗಳಲ್ಲಿ ಆರು ರಿಮಾಂಡ್ ಅರ್ಜಿಗಳನ್ನು ಸಲ್ಲಿಸಿದೆ, ಆದರೆ ಯಾವುದರಲ್ಲೂ ಚಿದಂಬರಂ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಸೊಲ್ಲು ಕೂಡಾ ಇಲ್ಲ’ ಎಂದು ಸುಪ್ರೀಂಕೋರ್ಟ್ ಬೊಟ್ಟು ಮಾಡಿತು.

ಚಿದಂಬರಂ ಅವರ ಜಾಮೀನು ಕೋರಿಕೆ ಅರ್ಜಿಯನ್ನು ಸೆಪ್ಟೆಂಬರ್ ೩೦ರಂದು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಕಾಂಗ್ರೆಸ್ ನಾಯಕ ದೇಶದಿಂದ ಪರಾರಿಯಾಗಬಹುದು ಎಂಬ ವಾದವನ್ನು ತಿರಸ್ಕರಿಸಿತ್ತು. ಆದರೆ ಚಿದಂಬರಂ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ವಾದವನ್ನು ಎತ್ತಿ ಹಿಡಿದಿತ್ತು.

ಹೈಕೋರ್ಟ್ ತೀರ್ಪು ಆರೋಪಗಳ ಸ್ವರೂಪ ಮತ್ತು ಅರ್ಹತೆ ಬಗ್ಗೆ ಮುಖ್ಯವಾಗಿ ಗಮನ ಕೇಂದ್ರೀಕರಿಸಿದೆ, ಆದರೆ ಜಾಮೀನು ಮಂಜೂರು ಮಾಡಲು ಅಥವಾ ನಿರಾಕರಿಸಲು ಅನುಸರಿಸಬೇಕಾದ ತತ್ವಗಳನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

October 22, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Commerce, Finance, Flash News, General Knowledge, India, Nation, News, Politics, Spardha, supreme court | , , , | Leave a comment

ಜಮ್ಮು-ಕಾಶ್ಮೀರದ ಮೊದಲ ಲೆಫ್ಟಿನೆಂಟ್ ಗವರ್ನರ್ ಸತ್ಯಪಾಲ್ ಮಲಿಕ್?

22 satyapal_malik
ನವದೆಹಲಿ
: ಜಮ್ಮು ಮತು ಕಾಶ್ಮೀರ ರಾಜ್ಯದ ಪ್ರಸ್ತುತ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಅಕ್ಟೋಬರ್ ೩೧ರಂದು ರಾಜ್ಯವು ಕೇಂದ್ರಾಡಳಿತ ಪ್ರದೇಶವಾಗಿ  ವರ್ಗಿಕರಿಸಲ್ಪಟ್ಟ ಬಳಿಕ ’ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ’ದ ಮೊದಲ ಲೆಫ್ಟಿನೆಂಟ್ ಗವರ್ನರ್  (ಎಲ್ ಜಿ) ಆಗಿ ನೇಮಕಗೊಳ್ಳುವ ಸಾಧ್ಯತೆಗಳು ಉಜ್ವಲವಾಗಿವೆ.

‘ಉನ್ನತ ಹುದ್ದೆಗೆ ಇತರ ಹೆಸರುಗಳನ್ನು ಕೂಡಾ ಪರಿಶೀಲಿಸಲಾಗುತ್ತಿದೆ. ಆದರೆ ಮಲಿಕ್ ಅವರ ಹೆಸರು ಮುಂಚೂಣಿಯಲ್ಲಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ’ ಎಂದು ಸರ್ಕಾರಿ ಮೂಲವೊಂದು 2019 ಅಕ್ಟೋಬರ್ 22ರ ಮಂಗಳವಾರ ಸುದ್ದಿ ಸಂಸ್ಥೆಗೆ ತಿಳಿಸಿತು.

‘ಪ್ರಸ್ತುತ ಸ್ಥಿತಿಯಲ್ಲಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ರಾಜ್ಯವನ್ನು ಚೆನ್ನಾಗಿ ಮುನ್ನಡೆಸುತ್ತಿರುವ ಮಲಿಕ್ ಅವರು ಲಭ್ಯವಿರುವ ಅತ್ಯುತ್ತಮ ಆಯ್ಕೆ ಎಂಬುದು ಸರ್ಕಾರದ ಭಾವನೆಯಾಗಿದೆ’ ಎಂದು ಮೂಲಗಳು ಹೇಳಿದವು.

ಏನಿದ್ದರೂ, ಈದಿನ  ಮಲಿಕ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯೊಂದು ಅಂತಿಮ ಕ್ಷಣದಲ್ಲಿ ಅವರು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಳ್ಳುವ ಸಾಧ್ಯತೆಯನ್ನು ತಪ್ಪಿಸಬಹುದೇ ಎಂಬ ಅನುಮಾನವನ್ನು ಕೂಡಾ ಹುಟ್ಟು ಹಾಕಿದೆ.

‘ದೇಶದಲ್ಲಿ ರಾಜ್ಯಪಾಲರ (ಗವರ್ನರ್) ಸ್ಥಾನವು ಅತ್ಯಂತ ದುರ್ಬಲವಾದುದಾಗಿದೆ. ಏಕೆಂದರೆ ಅವರಿಗೆ ಪತ್ರಿಕಾಗೋಷ್ಠಿ ನಡೆಸುವ ಅಥವಾ ಮನಃತುಂಬಿ ಮಾತನಾಡುವ ಹಕ್ಕು ಇಲ್ಲ’ ಎಂಬುದಾಗಿ ಮಲಿಕ್ ಅವರು ವಿವಾದಾತ್ಮಕ ಹೇಳಿಕೆ ನೀಡಿದರು.

‘ರಾಜ್ಯಪಾಲರ ಹುದ್ದೆ ಅತ್ಯಂತ ದುರ್ಬಲವಾದುದಾಗಿದೆ. ಅವರಿಗೆ ಪತ್ರಿಕಾಗೋಷ್ಠಿ ನಡೆಸುವ ಅಥವಾ ಮನಃತುಂಬಿ ಮಾತನಾಡುವ ಹಕ್ಕು ಇಲ್ಲ. ನನ್ನ ಮಾತುಗಳು ದೆಹಲಿಯಲ್ಲಿ ಯಾರನ್ನಾದರೂ ನೋಯಿಸಲಾರದು ಎಂಬ ಆಶಯ ನನ್ನದು’ ಎಂದು ಮಲಿಕ್ ಅವರು ರಿಯಾಸಿ ಜಿಲ್ಲೆಯ ಕತ್ರಾ ಪಟ್ಟಣದಲ್ಲಿ ಮಾತಾ ವೈಷ್ಣೋದೇವಿ ವಿಶ್ವ ವಿದ್ಯಾಲಯದ ೭ನೇ ಘಟಿಕೋತ್ಸವದಲ್ಲಿ ಮಾತನಾಡುತ್ತಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಸಂದರ್ಭದಲ್ಲಿ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದ್ದು ಈ ನಿರ್ಣಯವು ಅಕ್ಟೋಬರ್ ೩೧ರಂದು ಜಾರಿಗೆ ಬರಲಿದೆ. ನೂತನ ಲೆಫ್ಟಿನೆಂಟ್ ಗವರ್ನರ್ (ಎಲ್ ಜಿ) ಅವರ ಪ್ರಮಾಣ ವಚನ ಸಮಾರಂಭವು ಅದೇ ದಿನ ನಡೆಯುವ ಸಾಧ್ಯತೆಗಳಿವೆ.

ರಾಜ್ಯಪಾಲರ ನೆರವಿಗಾಗಿ ನೇಮಿಸಲಾಗಿರುವ ಐವರು ಸಲಹೆಗಾರರನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಡೆ ಎಂಬ ವಿಚಾರ ಇನ್ನೂ ಸರ್ಕಾರದ ಪರಿಶೀಲನೆಯಲ್ಲಿ ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾದೊಡನೆಯೇ ಕೇಂದ್ರ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಮೂಲಕ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯಮೇಲೆ ನೇರ ನಿಯಂತ್ರಣವನ್ನು ಹೊಂದುತ್ತದೆ ಮತ್ತು ಪ್ರದೇಶವು ಚುನಾಯಿತ ಸರ್ಕಾರದ ಆಡಳಿತಕ್ಕೆ ಒಳಪಡುತ್ತದೆ. ಲೆಫ್ಟಿನೆಂಟ್ ಗವರ್ನರ್ ಅವರು ನಿಯಂತ್ರಣ ಹೊಂದಿರುವ ದೆಹಲಿಗೆ ವ್ಯತಿರಿಕ್ತವಾಗಿ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಎಲ್ಲ ಹಕ್ಕುಗಳು ಚುನಾಯಿತ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸರ್ಕಾರದ್ದಾಗಲಿದೆ.

October 22, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , | Leave a comment

ಬಿಜೆಪಿ ನೇತೃತ್ವದ  ಎನ್ ಡಿಎಗೆ ಪ್ರಚಂಡ ವಿಜಯ: ಮತಗಟ್ಟೆ ಸಮೀಕ್ಷೆಗಳ ಭವಿಷ್ಯ

21 BJP-Flags
ಮಹಾರಾಷ್ಟ್ರ, ಹರಿಯಾಣ: ಶೇ.೬೦-೬೫ ಮತದಾನ

ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ  2019 ಅಕ್ಟೋಬರ್ 21ರ ಸೋಮವಾರ ನಡೆದ ಚುನಾವಣೆಯಲ್ಲಿ ಶೇಕಡಾ ೬೦ರಿಂದ ೬೫ರಷ್ಟು ಮತದಾನವಾಗಿದ್ದು, ಮತದಾನ ಮುಗಿಯುತ್ತಿದ್ದಂತೆಯೇ ಪ್ರಕಟಗೊಂಡಿರುವ ವಿವಿಧ ಮತದಾನೋತ್ತರ ಸಮೀಕ್ಷೆಗಳು ಉಭಯ ರಾಜ್ಯಗಳಲ್ಲೂ ದೀಪಾವಳಿಯ ಕೊಡುಗೆಯಾಗಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಪ್ರಚಂಡ ವಿಜಯದ ಭವಿಷ್ಯ ನುಡಿದವು.

ಸಂಜೆ ೬.೩೦ರ ವೇಳೆಗೆ ಬಂದ ವರದಿಯಂತೆ ಮಹಾರಾಷ್ಟ್ರದಲ್ಲಿ ಶೇಕಡಾ ೬೦.೫ರಷ್ಟು ಮತ್ತು ಹರಿಯಾಣದಲ್ಲಿ ಶೇಕಡಾ ೬೫ರಷ್ಟು ಮತದಾನವಾಯಿತು. ಬಿರುಮಳೆಯ ಪರಿಣಾಮವಾಗಿ ಉಭಯ ರಾಜ್ಯಗಳ ವಿಧಾನಸಭೆಗಳಲ್ಲದೆ, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಉಪಚುನಾವಣೆಗಳಲ್ಲಿ ಮಂದಗತಿಯ ಮತದಾನ ನಡೆಯಿತು ಎಂದು ವರದಿಗಳು ಹೇಳಿದವು.  ಮತಗಳ ಎಣಿಕೆ ಅಕ್ಟೋಬರ್ ೨೪ರ ಗುರುವಾರ ನಡೆಯಲಿದೆ.

ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ಪ್ರಕಟಗೊಂಡ ಬಹುತೇಕ ಮತಗಟ್ಟೆ ಸಮೀಪದ ಸಮೀಕ್ಷೆಗಳು ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟಕ್ಕೆ ಪ್ರಚಂಡ ವಿಜಯದ ಭವಿಷ್ಯ ನುಡಿದವು.

ಟೈಮ್ಸ್  ನೌ ಮತದಾನೋತ್ತರ ಸಮೀಕ್ಷೆಯು ಮಹಾರಾಷ್ಟ್ರ ವಿಧಾನಸಭೆಯ ೨೮೮ ಸ್ಥಾನಗಳ ಪೈಕಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಒಟ್ಟು ೨೩೦ ಸ್ಥಾನಗಳು ಲಭಿಸುವ ಭವಿಷ್ಯ ನುಡಿಯಿತು. ಅದರ ಪ್ರಕಾರ ಕಾಂಗ್ರೆಸ್ -ಎನ್‌ಸಿಪಿ ಮೈತ್ರಿಕೂಟಕ್ಕೆ ಕೇವಲ ೪೮ ಸ್ಥಾನಗಳು ಲಭಿಸಲಿವೆ. ಹರಿಯಾಣದಲ್ಲಿ ಬಿಜೆಪಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರಿಗೆ ಎರಡನೇ ಅವಧಿಗೆ ಅಧಿಕಾರ ಪ್ರಾಪ್ತಿಯ ಸಾಧ್ಯತೆ ದಟ್ಟವಾಯಿತು.

ಬಿಜೆಪಿಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ೩೭೦ನೇ ವಿಧಿ ರದ್ದು ಪಡಿಸಿದ ವಿಚಾರ ಮತ್ತು ರಾಷ್ಟ್ರೀಯ ಭದ್ರತೆಗೆ ಒತ್ತು ನೀಡಿ ಉಭಯ ರಾಜ್ಯಗಳಲ್ಲೂ ತುರುಸಿನ ಪ್ರಚಾರ ನಡೆಸಿತ್ತು.  ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉಭಯ ರಾಜ್ಯಗಳಲ್ಲೂ ಬಿರುಸಿನ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ದುರ್ಬಲ ಪ್ರಚಾರವನ್ನು ನಡೆಸಿತ್ತು. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಲವು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡದ್ದು ಬಿಟ್ಟರೆ, ಕಾಂಗ್ರೆಸ್ ಪಕ್ಷದ ಬೇರೆ ಯಾರೇ ಪ್ರಮುಖ ನಾಯಕರು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಸೋನಿಯಾ ಗಾಂಧಿಯವರು ಹರಿಯಾಣದ ಮಹೇಂದ್ರಗಢದಲ್ಲಿ ನಿಗದಿತವಾಗಿದ್ದ ಏಕೈಕ ಪ್ರಚಾರಸಭೆಯಲ್ಲೂ ಪಾಲ್ಗೊಳ್ಳಲಿಲ್ಲ.

ಮತದಾನ ಮುಕ್ತಾಯದ ಬೆನ್ನಲ್ಲೇ ಬಹುತೇಕ ಸಂಸ್ಥೆಗಳು ತಮ್ಮ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದ್ದು, ದೀಪಾವಳಿ ಹಬ್ಬದ ಸಡಗರ ಆರಂಭವಾಗುವುದಕ್ಕೂ ಮುನ್ನವೇ ಬಿಜೆಪಿಯಲ್ಲಿ ಸಡಗರವನ್ನು ಹುಟ್ಟು ಹಾಕಿತು. ಬಹುತೇಕ ಎಲ್ಲ ಸಮೀಕ್ಷೆಗಳೂ ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ರಾಜ್ಯಗಳಲ್ಲೂ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಪ್ರಚಂಡ ವಿಜಯ ಪ್ರಾಪ್ತವಾಗುವ ಬಗ್ಗೆ ಸರ್ವಾನುಮತದ ಭವಿಷ್ಯ ನುಡಿದವು.

ಆರು ಮತಗಟ್ಟೆ ಸಮೀಪದ ಸಮೀಕ್ಷೆಗಳ ಪ್ರಕಾರ ಮಹಾರಾಷ್ಟ್ರದ ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟವು ಸರಾಸರಿ ೨೧೩ ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ – ಎನ್‌ಸಿಪಿ ಮೈತ್ರಿಕೂಟವು ಕೇವಲ ೬೧ ಸ್ಥಾನಗಳನ್ನು ಪಡೆಯಲಿದೆ. ಇತರೆ ಪಕ್ಷಗಳಾದ ಎಐಎಂಐಎಂ ಮತ್ತು ವಿಬಿಎ ೧೪ ಕ್ಷೇತ್ರಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹರಿಯಾಣದ ೯೦ ಸದಸ್ಯಬಲದ ವಿಧಾನಸಭೆಯಲ್ಲಿ ಸಮೀಕ್ಷಾ ಫಲಿತಾಂಶದ ಪ್ರಕಾರ ಬಿಜೆಪಿ ೬೩ ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ ೧೬ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಯಾವ ಸಮೀಕ್ಷೆ ಏನು ಹೇಳುತ್ತದೆ?

ಮಹಾರಾಷ್ಟ್ರ ಚುನಾವಣೋತ್ತರ ಸಮೀಕ್ಷಾ ಭವಿಷ್ಯ:

ಟೈಮ್ಸ್ ನೌ ಸಮೀಕ್ಷೆ: ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ೨೩೦ ಸ್ಥಾನ, ಕಾಂಗ್ರೆಸ್ ಮತ್ತು ಎನ್‌ಸಿಪಿಗೆ ೪೮ ಸ್ಥಾನ, ಇತರರಿಗೆ ೧೦ ಸ್ಥಾನ.

ಇಂಡಿಯಾ ಟುಡೇ, ಆಕ್ಸಿಸ್ ಪೋಲ್:  ಬಿಜೆಪಿ-ಶಿವಸೇನಾ ಮೈತ್ರಿ ಕೂಟಕ್ಕೆ ೧೬೬ರಿಂದ ೧೯೪ ಸ್ಥಾನ, ಕಾಂಗ್ರೆಸ್+ಎನ್ ಸಿಪಿ ೭೨-೯೦ ಹಾಗೂ ಇತರ ಪಕ್ಷಗಳಿಗೆ  ೨೨-೩೪ ಸ್ಥಾನ.

ಸಿಎನ್‌ಎನ್ ನ್ಯೂಸ್ ೧೮: ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ೨೪೩, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ೪೧, ಇತರರಿಗೆ ೪.

ದಿ ರಿಪಬ್ಲಿಕನ್ – ಜನ್ ಕಿ ಬಾತ್: ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ೨೨೩, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ೫೪, ಇತರರಿಗೆ ೧೧.

ಎಬಿಪಿ ನ್ಯೂಸ್: ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ೨೦೪, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ೬೯, ಇತರರಿಗೆ ೧೫.

ನ್ಯೂಸ್- ೧೮- ಐಪಿಎಸ್-ಒಎಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ೨೦೧೪ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಈ ಬಾರಿ ಶಿವಸೇನೆ ಈ ಬಾರಿ ಅತಿಹೆಚ್ಚಿನ ಮತ ಪಡೆಯಲಿದೆ. ೨೦೧೪ರಲ್ಲಿ ೬೩ ಕ್ಷೇತ್ರಗಳಲ್ಲಿ ಗೆದ್ದ ಶಿವಸೇನೆ ಈ ಬಾರಿ ೧೦೨ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿ ಕೂಡ ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಪಡೆಯಲಿದೆ. ೨೦೧೪ರಲ್ಲಿ ೧೨೨ ಸ್ಥಾನಗಳಲ್ಲಿ ಗೆದ್ದ ಬಿಜೆಪಿ, ಈ ಬಾರಿ ೧೪೪ ಅಂದರೆ ಅರ್ಧದಷ್ಟು ಕ್ಷೇತ್ರಗಳಲ್ಲಿ ಗೆಲುವು ನಿರೀಕ್ಷಿಸಬಹುದಾಗಿದೆ

ಹರಿಯಾಣದಲ್ಲಿ ಮತ್ತೆ ಅರಳಲಿದೆ ಕಮಲ:

ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಯಲ್ಲಿ  ೫೨ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಟೈಮ್ಸ್ ನೌ ಹೇಳಿತು.

ಕಾಂಗ್ರೆಸ್ ಪಕ್ಷ ೧೯ ಸ್ಥಾನ, ಇತರರು ೦೯ ಸ್ಥಾನಗಳಲ್ಲಿ, ಜೆಜೆಪಿ-೦೯ ಸ್ಥಾನ ಹಾಗೂ ಐಎನ್ ಎಲ್ ಡಿ ೦೧ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿತು.

ಸಿಎನ್ ಎನ್ ಮತ್ತು ನ್ಯೂಸ್ ೧೮ ಪ್ರಕಾರ ಬಿಜೆಪಿ ೭೫ ಸ್ಥಾನ, ಕಾಂಗ್ರೆಸ್ ೧೦, ಜೆಜೆಪಿ ಮತ್ತು ಐಎನ್‌ಎಲ್‌ಡಿ ಶೂನ್ಯ ಸಾಧನೆ ಮಾಡಲಿವೆ.

ದಿ ರಿಪಬ್ಲಿಕನ್ – ಜನ್ ಕಿ ಬಾತ್ ಪ್ರಕಾರ ಬಿಜೆಪಿ ೨೫-೬೩ ಸ್ಥಾನ, ಜೆಜೆಪಿ ೫-೯ ಸ್ಥಾನ ಗೆಲ್ಲಲಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸರ್ಕಾರವನ್ನು ಅಧಿಕಾರದಿಂದ ಇಳಿಸಲು ಕಾಂಗ್ರೆಸ್ – ಎನ್‌ಸಿಪಿ ಮೈತ್ರಿಕೂಟ ಬಯಸಿದ್ದರೆ, ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್ ಮತ್ತು ಜೆಜೆಪಿ ಜೊತೆಗೆ ಅಧಿಕಾರಕ್ಕಾಗಿ ಹೋರಾಟ ನಡೆಸಿದೆ.

ಪ್ರಚಾರ ಸಮರದಲ್ಲಿ ಬಿಜೆಪಿಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿ ರದ್ದು ವಿಚಾರದ ಮೇಲೆ ಬೆಳಕು ಚೆಲ್ಲಿ ರಾಷ್ಟ್ರೀಯತೆ ಮತ್ತು ಭ್ರಷ್ಟಾಚಾರ ನಿಗ್ರಹಕ್ಕೆ ಒತ್ತು ಕೊಟ್ಟರೆ, ವಿರೋಧಿ ಕಾಂಗ್ರೆಸ್ ಪಕ್ಷವು ಬಿಜೆಪಿ ಆಡಳಿತದಲ್ಲಿ ಆರ್ಥಿಕ ಹಿನ್ನಡೆಯಾಗಿರುವುದನ್ನೇ ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನೋಟು ಅಮಾನ್ಯೀಕರಣ ಮತ್ತು  ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಉಪಕ್ರಮಗಳ ವೈಫಲ್ಯದ ಪರಿಣಾಮವಾಗಿ ದೇಶವು ಆರ್ಥಿಕ ಹಿನ್ನಡೆ ಮತ್ತು ನಿರುದ್ಯೋಗದ ಸಂಕಷ್ಟಕ್ಕೆ ಗುರಿಯಾಗಿದೆ ಎಂದು ಬಿಜೆಪಿ ವಿರುದ್ಧ ಟೀಕಾಸ್ತ್ರ ಹೂಡಿದ್ದರು.

October 22, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Flash News, India, Nation, News, Politics, Prime Minister, Spardha | , , | Leave a comment

ತ್ರಿವಳಿ ತಲಾಖ್ ನಿಷೇಧ ಕಾಯ್ದೆ: ಸುಪ್ರೀಂ ಕೋರ್ಟಿಗೆ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ

21 triple talaq
ನವದೆಹಲಿ:
ಮುಸ್ಲಿಮರ ವಿವಾಹ ವಿಚ್ಛೇದನಕ್ಕೆ ಅಸ್ತಿತ್ವದಲ್ಲಿದ್ದ ತ್ರಿವಳಿ ತಲಾಖ್ ಪ್ರಕ್ರಿಯೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ರೂಪಿಸಿದ ಹೊಸ ಕಾಯ್ದೆಯನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂ ಕೋರ್ಟ್ ಮೊರೆ ಹೊಕ್ಕಿತು.

ಕೇಂದ್ರ ರೂಪಿಸಿರುವ ಮುಸ್ಲಿಮ್ ಮಹಿಳಾ ವಿವಾಹ ಹಕ್ಕು ರಕ್ಷಣಾ ಕಾಯ್ದೆಯ ಪ್ರಕಾರ ಮೂರು ಬಾರಿ ತಲಾಖ್ ಹೇಳಿ ವಿವಾಯ ವಿಚ್ಛೇದನ ನೀಡುವುದು ಅಕ್ರಮವಾಗಿದೆ. ಹಾಗೆ ಮಾಡಿದರೆ ಪತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಂಸತ್ತಿನ ಅನುಮೋದನೆಯೊಂದಿಗೆ ಇದೇ ಆಗಸ್ಟ್​ನಿಂದ ಈ ಕಾನೂನು ಜಾರಿಗೆ ಬಂದಿತ್ತು.

October 22, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, News, Spardha | | Leave a comment

ಕರ್ತಾರ​ಪುರ ಕಾರಿಡಾರ್ ಯೋಜನೆ: ಪಾಕ್ ಜೊತೆ ಒಪ್ಪಂದಕ್ಕೆ ಭಾರತ ಸಿದ್ಧ; ಸೇವಾ ಶುಲ್ಕ ವಾಪಸಿಗೆ ಮನವಿ

21 kartarpur corridar
ನವದೆಹಲಿ
: ಕರ್ತಾರಪುರ ಸಾಹಿಬ್ ಕಾರಿಡಾರ್ ಯೋಜನೆ ಸಂಬಂಧ ಪಾಕಿಸ್ತಾನದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಭಾರತ ಸರ್ಕಾರ 2019 ಅಕ್ಟೋಬರ್ 21ರ  ಸೋಮವಾರ ಹೇಳಿದೆ.

ಈ ಸಂಬಂಧ ಪತ್ರಿಕಾ ಪ್ರಕರಣೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ,ಗುರುದ್ವಾರದ ಕರ್ತಾರ​ಪುರ ಸಾಹಿಬ್​ಗೆ ವೀಸಾ ಮುಕ್ತ ಪ್ರವೇಶವನ್ನು ನೀಡಬೇಕು ಎಂಬ ಯಾತ್ರಾರ್ಥಿಗಳ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ನವೆಂಬರ್ 12ರ ಮೊದಲು ಕಾರಿಡಾರನ್ನು ಕಾರ್ಯಗತಗೊಳಿಸಲು ಅಕ್ಟೋಬರ್ 23ರಂದು ಒಪ್ಪಂದಕ್ಕೆ ಸಹಿ ಮಾಡಲು ಭಾರತ ಸಿದ್ಧವಿದೆ ಎಂದು ತಿಳಿಸಿತು.

ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಳ್ಳಲಾಗಿದೆ. ಯಾತ್ರಾರ್ಥಿಗಳಿಗೆ ವಿಧಿಸುವ ಸೇವಾ ಶುಲ್ಕ 20  ಡಾಲರನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಮತ್ತೊಮ್ಮೆ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ. ತಿದ್ದುಪಡಿ ಒಪ್ಪಂದಕ್ಕೆ ಯಾವುದೇ ಸಮಯದಲ್ಲಿ ಸಹಿ ಮಾಡಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿತು.

ಹೇಳಿಕೆಯಲ್ಲಿ ಪಾಕಿಸ್ತಾನದ ಸೇವಾ ಶುಲ್ಕ ಪ್ರಸ್ತಾವನೆಗೆ ವಿದೇಶಾಂಗ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಸೇವಾ ಶುಲ್ಕವನ್ನು ಹಿಂಪಡೆಯುವಂತೆ ಭಾರತ ಸರ್ಕಾರ ಮನವಿ ಮಾಡಿತ್ತು.

October 22, 2019 Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Pakistan, Spardha, World | , , , | Leave a comment

ಸಂತ ರವಿದಾಸ ದೇಗುಲ ಅದೇ ಸ್ಥಳದಲ್ಲಿ ಮರುನಿರ್ಮಾಣ: ಸುಪ್ರೀಂಕೋರ್ಟ್ ಆದೇಶ

21 Ravidas mandir reconstruction Supreme-Court-Order
ನವದೆಹಲಿ
: ಸಂತ ರವಿದಾಸ ದೇಗುಲವನ್ನು ಮರುನಿರ್ಮಾಣ ಮಾಡುವಂತೆ ಸುಪ್ರೀಂಕೋರ್ಟ್2019 ಅಕ್ಟೋಬರ್ 21ರ ಸೋಮವಾರ ಆದೇಶ ನೀಡಿತು. ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ಆಗಸ್ಟ್​ನಲ್ಲಿ ಒಡೆದು ಹಾಕಲಾಗಿದ್ದ ಸಂತ ರವಿದಾಸ ದೇಗುಲವನ್ನು ಅದೇ ಜಾಗದಲ್ಲಿ ಮರುನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಬಳಿಕ ಸುಪ್ರೀಂಕೋರ್ಟ್ ಈ ಆದೇಶ ನೀಡಿತು.

ದಕ್ಷಿಣ ದೆಹಲಿಯ ತುಘ್ಲಕ್ ಬಾದಿನಲ್ಲಿದ್ದ ಸಂತ ರವಿದಾಸ ದೇಗುಲವನ್ನು ಒಡೆದುಹಾಕಿದ್ದರಿಂದ ಭಕ್ತಾದಿಗಳ ಪ್ರತಿಭಟನೆ ಕಾಡ್ಗಿಚ್ಚಿನಂತೆ ಎಲ್ಲೆಡೆ ವ್ಯಾಪಿಸಿತ್ತು. ಶಾಂತಿ ಮತ್ತು ಸೌಹಾರ್ದತೆ ದೃಷ್ಟಿಯಿಂದ ಅದೇ ಸ್ಥಳದಲ್ಲಿ ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ ಒಪ್ಪಿಕೊಂಡಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದರು..

ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ 400 ಚದರ ಅಡಿ ದುಪ್ಪಟ್ಟು ಜಾಗವನ್ನು ಹಂಚಿಕೆ ಮಾಡಿದೆ. ಮರುನಿರ್ಮಾಣವಾದ ದೇಗುಲ ನಿರ್ವಹಣೆಗಾಗಿ ಭಕ್ತಾದಿಗಳ ಸಮಿತಿ ರಚನೆಯ ಪ್ರಸ್ತಾವನೆಯನ್ನು ಕೂಡ ಸರ್ಕಾರ ಮಾಡಿದೆ ಎಂದು ನ್ಯಾಯಾಲಯಕ್ಕೆಕೆ.ಕೆ.ವೇಣುಗೋಪಾಲ್ ತಿಳಿಸಿದರು.

ದೆಹಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಆಗಸ್ಟ್​ 10ರಂದು 500 ವರ್ಷ ಇತಿಹಾಸವಿರುವ ರವಿದಾಸ ದೇವಾಲಯವನ್ನು ನೆಲಸಮ ಮಾಡಿತ್ತು. ಇದರಿಂದ ಕೆರಳಿದ ಪಂಜಾಬ್​ ಮತ್ತು ದೆಹಲಿಯ ಹಲವು ರಾಜಕೀಯ ಪಕ್ಷಗಳು ಮತ್ತು ದಲಿತ ಸಮುದಾಯದ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ದಲಿತ ಹಕ್ಕುಗಳ ಹೋರಾಟಗಾರರು ಮತ್ತು ಬೆಂಬಲಿಗರು ಭಾರತ್​ ಬಂದ್​ಗೂ ಕರೆ ನೀಡಿದ್ದರು.

ದೇಗುಲವನ್ನು ತುಘ್ಲಕ್ ​ಬಾದ್​ ರಸ್ತೆಯಲ್ಲಿ ಅಥವಾ ಬೇರೆ ಸ್ಥಳದಲ್ಲಿ ಮರುನಿರ್ಮಾಣ ಮಾಡಬೇಕು ಎಂದು ಹಲವು ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು. ದೆಹಲಿ ಸಾಮಾಜಿಕ ನ್ಯಾಯ ಸಚಿವ ರಾಜೇಂದ್ರ ಪಾಲ್ ಗೌತಮ್, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ ಸಮುದಾಯದ ಆಧ್ಯಾತ್ಮಿಕ ಗುರುಗಳು ದೆಹಲಿಯಲ್ಲಿ ಸೇರಿ, ಪ್ರತಿಭಟನೆಗೆ ದೊಡ್ಡ ಆಯಾಮ ನೀಡಿದ್ದರು.

October 22, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Flash News, General Knowledge, India, Nation, News, Spardha, supreme court, Temples, ದೇವಾಲಯಗಳು | , , , , , , , | Leave a comment

ಆದೇಶ ಪಾಲಿಸದ 32 ಕಂಪೆನಿ ಅಧಿಕಾರಿಗಳಿಗೆ ಸುಪ್ರೀಂ ಜಾಮೀನು ರಹಿತ ವಾರೆಂಟ್

21 supreme court 1
ನವದೆಹಲಿ:
ಮುಂಬೈ ಮೂಲದ 32 ಕಂಪೆನಿಗಳ ನಿರ್ವಾಹಕ ನಿರ್ದೇಶಕರಿಗೆ ಬಂಧನದ ಭೀತಿ ಎದುರಾಯಿತು. ತನ್ನ ಆದೇಶವನ್ನು ಪಾಲಿಸದ ಈ 32 ಕಂಪನಿಗಳ ಉನ್ನತಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿತು.

ಮೂರು ವರ್ಷಗಳ ಹಿಂದೆ ನೀಡಿದ ಆದೇಶವನ್ನು ಇವರು ಪಾಲಿಸಿಲ್ಲ ಎಂಬುದು ಕಾರಣ. ಮುಂಬೈ ಮೂಲದ ಕಂಪನಿಗಳಾದ ಅಕ್ಷರ್ ಮರ್ಸಾಂಟೈಲ್, ಬೀಟಾ ಟ್ರೇಡಿಂಗ್, ವಿನಯ್ ಮರ್ಸಾಂಟೈಲ್, ಅನೂಪ್ ಮಲ್ಟಿಟ್ರೇಡ್, ಅನ್​ಶುಲ್ ಮೆರ್ಸಾಂಟೈಲ್, ಎವರ್​ಫ್ರೇಮ್ ಟ್ರೇಡಿಂಗ್, ಹೈಝೋನ್ ಟ್ರೇಡಿಂಗ್, ಇನಾರ್ಬಿಟ್ ಟ್ರೇಡಿಂಗ್, ಲಕ್ಷ್ ಮರ್ಸಾಂಟೈಲ್, ಮ್ಯಾಜಿನೋಟ್ ಟ್ರೇಡಿಂಗ್, ಮಾಂಟ್ರಿಯಲ್ ಟ್ರೇಡಿಂಗ್, ನ್ಯೂಟ್ರೀ ಮರ್ಸಾಂಟೈಲ್, ಸರ್ವೇಶ್ವರ ಟ್ರೇಡಿಂಗ್ ಮೊದಲಾದ ಕಂಪನಿಗಳು ಸುಪ್ರೀಂ ಕೆಂಗಣ್ಣಿಗೆ ಗುರಿಯಾದವು.

2016ರಲ್ಲಿ ಪ್ರಕರಣವೊಂದರ ಸಂಬಂಧ ಈ 32 ಕಂಪನಿಗಳು ಷೇರು ಪೇಟೆ ನಿಯಂತ್ರಣ ಸಂಸ್ಥೆಯಾದ ಸೆಬಿಗೆ ತಲಾ 5 ಲಕ್ಷ ದಂಡ ಕಟ್ಟುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಮೂರು ವರ್ಷಗಳಾದರೂ ಕಂಪನಿಗಳಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೆಬಿ 2017ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾ| ರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ಸುಪ್ರೀಂಕೋರ್ಟ್  ನ್ಯಾಯಪೀಠ ಈಗ ಈ ಕಂಪನಿಗಳ ಅಧಿಕಾರಿಗಳಿಗೆ ಜಾಮೀನುರಹಿತ ವಾರೆಂಟ್ ಹೊರಡಿಸಿತು.

ಏನಿದು ಪ್ರಕರಣ?

ಬ್ಯಾಂಕ್ ಆಫ್ ರಾಜಸ್ಥಾನ ಸಂಸ್ಥೆಯ ಮಾಜಿ ಪ್ರವರ್ತಕರಾದ ಟಯಾಲ್ ಕುಟುಂಬ ಮತ್ತಿತರ ಸಂಸ್ಥೆಗಳು ವಂಚನೆ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೆಬಿ 2013ರಲ್ಲಿ ಪ್ರವೀಣ್ ಟಯಾಲ್, ಅವರ ಕುಟುಂಬ ಸದಸ್ಯರಾದ ಸಂಯಜ್ ಟಯಾಲ್, ನವೀನ್ ಟಯಾಲ್, ಸೌರಭ್ ಟಯಾಲ್ ಸೇರಿದಂತೆ ಈ ವಂಚನೆಯಲ್ಲಿ ಷಾಮೀಲಾದ ಹಲವು ಸಂಸ್ಥೆಗಳಿಗೆ ತಲಾ 5 ಲಕ್ಷ ರೂ ದಂಡ ಕಟ್ಟುವಂತೆ ಆದೇಶಿಸಲಾಗಿತ್ತು.

ಸುಪ್ರೀಂ ಕೋರ್ಟ್ 2016ರಲ್ಲಿ ಈ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿತು. ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರವೂ ಹಲವು ಕಂಪನಿಗಳು ದಂಡ ಕಟ್ಟಲು ಆಸಕ್ತಿ ತೋರಲಿಲ್ಲ. ಕೋರ್ಟ್ ನೋಟೀಸ್ ಅನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದಾಗಲೂ 32 ಕಂಪನಿಗಳು 5 ಲಕ್ಷ ರೂ ಕಟ್ಟಲು ಮುಂದೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಸೆಬಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತು. ಈಗ ಸುಪ್ರೀಂಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

October 22, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Commerce, Finance, Flash News, General Knowledge, Nation, News, Spardha, supreme court | | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ