SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕರ್ತಾರಪುರ ಕಾರಿಡಾರ್ ಉದ್ಘಾಟನೆ:  ಪಾಕ್  ಆಹ್ವಾನಕ್ಕೆ ಮನಮೋಹನ್ ಸಿಂಗ್‌ ತಿರಸ್ಕಾರ


01 manmohan-kartarpur
ನವದೆಹಲಿ
: ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕರ್ತಾರಪುರ ಕಾರಿಡಾರ್ ಉದ್ಘಾಟನಾ ಸಮಾರಂಬಕ್ಕೆ ಪಾಕಿಸ್ತಾನ ನೀಡಿದ ಆಹ್ವಾನವನ್ನು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್  ಅವರು ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು 2019 ಅಕ್ಟೋಬರ್ 01ರ ಮಂಗಳವಾರ ದೃಢಪಡಿಸಿದವು.

ನವೆಂಬರ್ 9ಕ್ಕೆ ನಿಗದಿಯಾದ ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲು ತಮ್ಮ ರಾಷ್ಟ್ರವು ತೀರ್ಮಾನಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ವಿಡಿಯೋ ಸಂದೇಶ ಒಂದರಲ್ಲಿ  2019 ಸೆಪ್ಟೆಂಬರ್ 30ರ  ಸೋಮವಾರ ತಿಳಿಸಿದ್ದರು.

‘ಕರ್ತಾರಪುರ ಕಾರಿಡಾರ್ ಉದ್ಘಾಟನೆಯು ದೊಡ್ಡ ಕಾರ್ಯಕ್ರಮವಾಗಿದ್ದು, ಪಾಕಿಸ್ತಾನವು ಇದಕ್ಕಾಗಿ ದೊಡ್ಡ ಪ್ರಮಾಣದ ಸಿದ್ಧತೆ ನಡೆಸುತ್ತಿದೆ. ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಮಂತ್ರಿಸಲು ನಾವು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಔಪಚಾರಿಕ ಪತ್ರವನ್ನು ಅವರಿಗೆ ಕಳುಹಿಸಲಿದ್ದೇವೆ. ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಗಾಗಿ ಕರ್ತಾರಪುರಕ್ಕೆ ಆಗಮಿಸುವ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ನಮಗೆ ಅತ್ಯಂತ ಸಂತಸವಿದೆ’ ಎಂದು ಖುರೇಶಿ ವಿಡಿಯೋದಲ್ಲಿ ತಿಳಿಸಿದ್ದರು.

ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಿದೆ. ಈ ಕಾರಿಡಾರ್ ಭಾರತದ ಸಿಖ್ ಯಾತ್ರಾರ್ಥಿಗಳಿಗೆ ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಗುರುನಾನಕ್ ಅವರ ಅಂತಿಮ ವಿಶ್ರಾಂತಿ ತಾಣಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ಖುರೇಶಿ ವಿಡಿಯೋದಲ್ಲಿ ಹೇಳಿದ್ದರು.

ಪಾಕಿಸ್ತಾನದ ಕರ್ತಾರಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರ ಮತ್ತು ಭಾರತದ ಗುರುದಾಸಪುರ ಜಿಲ್ಲೆಯಲ್ಲಿ ಇರುವ ಡೇರಾ ಬಾಬಾ ನಾನಕ್ ಮಂದಿರವನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಾಣಕಾರ್ಯ ಪೂರೈಸುವುದರೊಂದಿಗೆ ಭಾರತದ ಸಿಖ್ ಯಾತ್ರಿಕರಿಗೆ ವೀಸಾಮುಕ್ತ ಪಯಣಕ್ಕೆ ಅವಕಾಶ ಲಭಿಸಲಿದೆ.

ಇದರೊಂದಿಗೆ ೧೫೨೨ರಲ್ಲಿ ಸಿಖ್ ಪಂಥದ ಸ್ಥಾಪಕ ಗುರು ನಾನಕ್ ದೇವ್ ಅವರು ಸ್ಥಾಪಿಸಿದ ಪ್ರಮುಖ ತಾಣವಾದ ಕರ್ತಾರಪುರ ಸಾಹಿಬ್ ಗೆ ಭೇಟಿ ನೀಡಲು ಅನುಮತಿ ಕೋರಿದರೆ ಸಾಕಾಗುತ್ತದೆ.

ಆದರೆ, ಪಾಕಿಸ್ತಾನವು ಕರ್ತಾರಪುರ ಕಾರಿಡಾರ್ ಮೂಲಕ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಯಾತ್ರಿಗಳಿಗೆ ೨೦ ಅಮೆರಿಕನ್ ಡಾಲರುಗಳನ್ನು ಸೇವಾ ಶುಲ್ಕವಾಗಿ ವಿಧಿಸಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತವು ಪಾಕಿಸ್ತಾನಕ್ಕೆ ಸೂಚಿಸಿದೆ.

ಮೊದಲಿಗೆ ಭಾರತದಿಂದ ಬರುವ ೫,೦೦೦ ಮಂದಿ ಯಾತ್ರಾರ್ಥಿಗಳಿಗೆ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್ ಭೇಟಿಗೆ ಅವಕಾಶ ನೀಡಲಾಗುವುದು. ಮುಂದಕ್ಕೆ ಪ್ರತಿದಿನ ೧೦,೦೦೦ ಯಾತ್ರಿಕರಿಗೆ ಭೇಟಿ ಅವಕಾಶ ಲಭಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತದ ಕಡೆಯಿಂದ ಗುರುದ್ವಾರ ದರ್ಬಾರ್ ಸಾಹಿಬ್‌ವರೆಗೆ ತನ್ನ ನೆಲದಲ್ಲಿ ಯಾತ್ರಿಕರಿಗೆ ಸಾಗಲು ಅನುಕೂಲವಾಗುವಂತೆ ಪಾಕಿಸ್ತಾನವು ಕಾರಿಡಾರ್ ನಿರ್ಮಾಣ ಮಾಡುತ್ತಿದ್ದು ಗುರುದಾಸಪುರದ ಡೇರಾ ಬಾಬಾ ನಾನಕ್‌ನಿಂದ ಗಡಿಯವರೆಗೆ ಭಾರತವು ಕಾರಿಡಾರ್ ನಿರ್ಮಾಣ ಮಾಡುತ್ತಿದೆ.

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ -೩೫೪ರಿಂದ ಕಾರಿಡಾರ್‌ವರೆಗೆ ನಾಲ್ಕು ಪಥಗಳ  ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಇದಲ್ಲದೆ ಪ್ರಯಾಣಿಕ ಟರ್ಮಿನಲ್‌ನ್ನು ಕೂಡಾ ನಿರ್ಮಿಸಲಾಗುತ್ತಿದೆ.

October 1, 2019 - Posted by | ಪಾಕಿಸ್ತಾನ, ಪ್ರಧಾನಿ, ರಾಷ್ಟ್ರೀಯ, ವಿಶ್ವ/ ಜಗತ್ತು, culture, Flash News, General Knowledge, India, Nation, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Pakistan, Politics, Prime Minister, Spardha, Temples, World | , , , , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ