SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆ ದುರ್ಬಲಗೊಳಿಸಿದ್ದ ತೀರ್ಪು ರದ್ದು ಪಡಿಸಿದ ಸುಪ್ರೀಂ

01 sc st act supreme court
ನವದೆಹಲಿ
: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯ ವಿಧಿಗಳನ್ನು ವಸ್ತುಶಃ ದುರ್ಬಲಗೊಳಿಸಿದ್ದ ೨೦೧೮ ಮಾರ್ಚ್ ೨೦ರ ತನ್ನ ಆದೇಶವನ್ನು ಸುಪ್ರೀಂಕೋರ್ಟ್ 2019 ಅಕ್ಟೋಬರ್ 01ರ ಮಂಗಳವಾರ ಹಿಂತೆಗೆದುಕೊಂಡಿತು.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಂಆರ್ ಶಾ ಮತ್ತು ಬಿಆರ್ ಗವಾಯಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಹೋರಾಟ ರಾಷ್ಟ್ರದಲ್ಲಿ ಇನ್ನೂ ಮುಗಿದಿಲ್ಲ ಎಂದು ಹೇಳಿತು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜನರು ಈಗಲೂ ಅಸ್ಪೃಶ್ಯತೆ, ದೂಷಣೆ ಹಾಗೂ ಸಾಮಾಜಿಕ ಬಹಿಷ್ಕಾರದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪೀಠವು ಅಭಿಪ್ರಾಯಪಟ್ಟಿತು.

ಸಂವಿಧಾನವು ೧೫ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರಿಗೆ ರಕ್ಷಣೆಯನ್ನು ಒದಗಿಸುತ್ತದೆ. ಆದರೆ  ಸಾಮಾಜಿಕ ದೂಷಣೆ ಮತ್ತು ತಾರತಮ್ಯವನ್ನು ಅವರು ಇನ್ನೂ ಎದುರಿಸಬೇಕಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯ ದುರ್ಬಳಕೆ ಮತ್ತು  ತಪ್ಪು ಪ್ರಕರಣಗಳನ್ನು ಹೂಡುವ ಬಗ್ಗೆ ಪ್ರಸ್ತಾಪಿಸಿದ ಪೀಠವು ’ಇದು ಜಾತಿ ವ್ಯವಸ್ಥೆಯಿಂದ ಆದದ್ದಲ್ಲ, ಮಾನವ ವೈಫಲ್ಯದಿಂದ ಆದದ್ದು’ ಎಂದು ಹೇಳಿತು.

ಕಳೆದ ವರ್ಷ ಮಾರ್ಚ್ ೨೦ರಂದು ದ್ವಿಸದಸ್ಯ ಪೀಠವು ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಸೆಪ್ಟೆಂಬರ್ ೧೮ರ ವಿಚಾರಣೆ ಕಾಲದಲ್ಲಿ ಟೀಕಿಸಿ,  ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ತೀರ್ಪು ನೀಡಬಹುದೇ ಎಂದು ಪ್ರಶ್ನಿಸಿತ್ತು.

ಕಾನೂನಿನ ವಿಧಿಗಳಿಗೆ ಸಂಬಂಧಿಸಿದಂತೆ  ’ಸಮಾನತೆ ತರುವ ಸಲುವಾಗಿ’ ತಾನು ಕೆಲವು ನಿರ್ದೇಶನಗಳನ್ನು ನೀಡಬಹುದು ಎಂಬ ಇಂಗಿತ ವ್ಯಕ್ತ ಪಡಿಸಿದ್ದ ಪೀಠ, ’ಸ್ವಾತಂತ್ರ್ಯ ಲಭಿಸಿದ ೭೦ಕ್ಕೂ ಹೆಚ್ಚು ವರ್ಷಗಳ ಬಳಿಕವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರು ತಾರತಮ್ಯ ಮತ್ತು ಅಸ್ಪೃಶ್ಯತೆಗಳಿಗೆ ಗುರಿಯಾಗುತ್ತಿದ್ದಾರೆ’ ಎಂದು ಹೇಳಿತ್ತು.

ತೋಟಿಗಳ ಮೂಲಕ ಚರಂಡಿಗಳನ್ನು ಸ್ವಚ್ಛಗೊಳಿಸುವ ಸ್ಥಿತಿ ಮತ್ತು ಇಂತಹ ಕೆಲಸಗಳನ್ನು ಮಾಡುವಾಗ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜನರು ಸಾವನ್ನಪ್ಪುವ ಪರಿಸ್ಥಿತಿ ಬಗ್ಗೆ ಗಂಭೀರ ಅಭಿಪ್ರಾಯ ವ್ಯಕ್ತ ಪಡಿಸಿದ್ದ ಪೀಠ, ’ಜಗತ್ತಿನಲ್ಲಿ ಎಲ್ಲೂ ಜನರನ್ನು ’ಸಾಯಲು ಗ್ಯಾಸ್ ಚೇಂಬರುಗಳಿಗೆ’ ಕಳುಹಿಸುವ ಕ್ರಮ ಇಲ್ಲ’ ಎಂದು ಹೇಳಿತ್ತು.

‘ಇದು ಸಂವಿಧಾನದ ಆಶಯಕ್ಕೆ ವಿರುದ್ಧ. ಕೇವಲ ಕಾನೂನಿನ ದುರುಪಯೋಗವಾಗಿದೆ ಎಂಬ ಕಾರಣಕ್ಕೆ ಶಾಸನ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಆದೇಶ ನೀಡಬಹುದೇ? ಜಾತಿಯ ಆಧಾರದಲ್ಲಿ ನೀವು ಯಾರಾದರೂ ವ್ಯಕ್ತಿಯನ್ನು ಸಂಶಯಿಸಬಹುದೇ. ಸಾಮಾನ್ಯ ವರ್ಗದ ವ್ಯಕ್ತಿ ಕೂಡಾ ತಪ್ಪು ಎಫ್‌ಐಆರ್ ದಾಖಲಿಸಬಹುದು’ ಎಂದು ಪೀಠ ಹೇಳಿತ್ತು.

‘ಸ್ವಾತಂತ್ರ್ಯ ಲಭಿಸಿ ೭೦ಕ್ಕೂ ಹೆಚ್ಚು ವರ್ಷಗಳಾಗಿವೆ, ಆದರೂ ಸರ್ಕಾರಕ್ಕೆ ಪರಿಶಿಷ್ಟ ಜಾತಿ/ಪರಿಶಿಷ್ಟ ಜನರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅವರನ್ನು ಈಗಲೂ ತಾರತಮ್ಯ ಮತ್ತು ಅಸ್ಪೃಶ್ಯತೆಗೆ ಗುರಿಪಡಿಸಲಾಗುತ್ತಿದೆ’ ಎಂದು ಪೀಠವು ಕೇಂದ್ರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ ಹೇಳಿತ್ತು.

ಆಪಾದನೆಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲು ಯೋಗ್ಯವೇ? ಅಥವಾ ಆರೋಪಗಳು ಸುಳ್ಳು ಹಾಗೂ ದುರುದ್ದೇಶಪೂರಿತವಾದವುಗಳೇ ಎಂಬುದಾಗಿ ಪರಿಶೀಲಿಸಲು ಡಿಎಸ್‌ಪಿ ಶ್ರೇಣಿಯ ಅಧಿಕಾರಿಯು ಪ್ರಾಥಮಿಕ ತನಿಖೆ ನಡೆಸಬಹುದು ಎಂಬುದಾಗಿ ೨೦೧೮ರಲ್ಲಿ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪನ್ನೂ ಪೀಠ ಟೀಕಿಸಿತ್ತು.

೨೦೧೮ರ ತೀರ್ಪು ಸಂವಿಧಾನಕ್ಕೆ ಪೂರಕವಾಗಿಲ್ಲ ಎಂದು ವೇಣುಗೋಪಾಲ್ ಅವರು ಹೇಳಿದ್ದರು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯಲ್ಲಿ ಇದ್ಧ ಬಂಧನ ಅವಕಾಶಕ್ಕೆ ಸಂಬಂಧಿಸಿದ ವಿಧಿಗಳನ್ನು ವಸ್ತುಶಃ ದುರ್ಬಲಗೊಳಿಸಿದ್ದ  ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ೧೩ ತಿಂಗಳುಗಳ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸೆಪ್ಟೆಂಬರ್ ೧೩ರಂದು ಪೀಠವು ಕೇಂದ್ರದ ಮನವಿ ಮೇರೆಗೆ ತ್ರಿಸದಸ್ಯ ಪೀಠಕ್ಕೆ ವಹಿಸಿತ್ತು.

ಸುಪ್ರೀಂಕೋರ್ಟ್ ೨೦೧೮ರ ಮಾರ್ಚ್ ೨೦ರಂದು ನೀಡಿದ್ದ ತೀರ್ಪು ದೇಶಾದ್ಯಂತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ವಿವಿಧ ಸಂಘಟನೆಗಳ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ತೀರ್ಪಿನ ಪರಿಣಾಮಗಳನ್ನು ತಟಸ್ಥಗೊಳಿಸಲು ಸರ್ಕಾರವು ಸಂಸತ್ತಿನಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ, ೨೦೧೮ನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕಾಗಿ ಬಂದಿತ್ತು.

ಸದರಿ ತೀರ್ಪಿನಲ್ಲಿ ದ್ವಿಸದಸ್ಯ ಪೀಠವು ಕಠಿಣವಾದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಕಾಯ್ದೆಯನ್ನು ಸರ್ಕಾರಿ ನೌಕರರು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಯದ್ವಾತದ್ವ ದುರುಪಯೋಗ ಮಾಡಲಾಗುತ್ತಿದ್ದುದನ್ನು ಉಲ್ಲೇಖಿಸಿತ್ತು ಮತ್ತು ಕಾನೂನಿನ ಅಡಿಯಲ್ಲಿ ದೂರು ದಾಖಲಾದ ತತ್ ಕ್ಷಣವೇ ಬಂಧಿಸಬೇಕಾಗಿಲ್ಲ ಎಂದು ಹೇಳಿತ್ತು.  ಹಲವಾರು ಸಂದರ್ಭಗಳಲ್ಲಿ ಮುಗ್ಧ ನಾಗರಿಕರನ್ನು ಆರೋಪಿಗಳಾಗಿ ಹೆಸರಿಸಲಾಗುತ್ತದೆ ಮತ್ತು ಸರ್ಕಾರಿ ನೌಕರರನ್ನು ತಮ್ಮ ಕರ್ತವ್ಯ ನಿರ್ವಹಿಸದಂತೆ ತಡೆಯಲಾಗುತ್ತದೆ. ಇದು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ರೂಪಿಸುವಾಗ ಎಂದಿಗೂ ಶಾಸನ ಸಭೆಯ ಉದ್ದೇಶವಾಗಿರಲಿಲ್ಲ ಎಂದು ಪೀಠ ಹೇಳಿತ್ತು.

ಮೇಲ್ನೋಟಕ್ಕೆ ಆರೋಪ ಸಾಬೀತಾಗುವಂತೆ ಇಲ್ಲದೇ ಇದ್ದಲ್ಲಿ, ಬಂಧನದ ವಿರುದ್ಧ ಜಾಮೀನು ನೀಡದೇ ಇರುವುದಕ್ಕೆ ಯಾವದೇ ನಿಷೇಧವೂ ಇಲ್ಲ ಎಂದು ಹೇಳಿದ್ದ ತೀರ್ಪು, ಈ ಹಿನ್ನೆಲೆಯಲ್ಲಿ ಆರೋಪದ ಸಾಚಾತನ ಬಗ್ಗೆ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲಿಸ್ ಶ್ರೇಣಿಯ ಅಧಿಕಾರಿಯ ಪ್ರಾಥಮಿಕ ತನಿಖೆ ಹಾಗೂ ಅನುಮೋದನೆಯ ಬಳಿಕ ಮಾತ್ರವೇ ಕಾಯ್ದೆಯ ಅಡಿಯಲ್ಲಿ ಆರೋಪಿಯನ್ನು ಬಂಧಿಸಬಹುದು ಎಂದು ಹೇಳಿತ್ತು.

October 1, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, News, Politics, Spardha, supreme court | , , , , , | Leave a comment

ಪಶ್ಚಿಮ ಬಂಗಾಳದಲ್ಲೂ ಎನ್.ಆರ್.ಸಿ. ಅನುಷ್ಠಾನ: ದೀದಿ ನಾಡಿನಲ್ಲಿ ಅಮಿತ್ ಶಾ ಘೋಷಣೆ

01 amit shah kolkata
ಕೋಲ್ಕತ:
ಅಸ್ಸಾಮಿನಲ್ಲಿ ಅನುಷ್ಠಾನಗೊಳಿಸಿರುವ ರೀತಿಯಲ್ಲೇ ಪಶ್ಚಿಮ ಬಂಗಾಳದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಜಾರಿ ಮಾಡಲಾಗುವುದು ಮತ್ತು ಪ್ರತಿಯೊಬ್ಬ ಅಕ್ರಮ ವಲಸಿಗನನ್ನೂ ದೇಶದಿಂದ ಹೊರಕ್ಕೆ ಅಟ್ಟಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು  2019 ಅಕ್ಟೋಬರ್ 01ರ ಮಂಗಳವಾರ  ಕೋಲ್ಕತದಲ್ಲಿ ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರಚಂಡ ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರಿದ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ಗೃಹಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಶ್ಚಿಮ ಬಂಗಾಳಕ್ಕೆ ಇದೇ ಮೊದಲ ಭೇಟಿ ನೀಡಿರುವ ಅಮಿತ್ ಶಾ, ಕೋಲ್ಕತದ ನೇತಾಜಿ ಕ್ರೀಡಾಂಗಣದಲ್ಲಿ ಎನ್‌ಆರ್‌ಸಿ ಜಾಗರಣ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.

ಪಶ್ಚಿಮಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪ್ರತಿಯೊಬ್ಬ ವಲಸಿಗರನ್ನು ಹೊರಹಾಕಲಾಗುವುದು ಎಂದು ಶಾ ಹೇಳಿದರು. ಆದರೆ ರಾಜ್ಯದಲ್ಲಿ ಎನ್.ಆರ್.ಸಿ.ಯನ್ನು ಜಾರಿಗೊಳಿಸುವ ಮೊದಲು ಹಿಂದೂ, ಸಿಖ್, ಜೈನ್ ಮತ್ತು ಬೌದ್ಧ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂಬ ಮಾಹಿತಿಯನ್ನೂ ಸಹ ಅಮಿತ್ ಶಾ ಇದೇ ಸಂದರ್ಭದಲ್ಲಿ ನೀಡಿದರು.

ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಎನ್.ಆರ್.ಸಿ. ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ, ಆದರೆ ಪ್ರತಿಯೊಬ್ಬ ಅಕ್ರಮ ವಲಸಿಗನನ್ನೂ ಈ ದೇಶದಿಂದ ಹೊರಹಾಕಲಾಗುವುದು ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತಿದ್ದೇನೆ ಎಂದು ಅಮಿತ್ ಶಾ ಘೋಷಿಸಿದರು.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರ್ಕಾರ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದ ಮಮತಾ ಬ್ಯಾನರ್ಜಿ ಅವರು ಅಕ್ರಮ ವಲಸಿಗರ ಗಡೀಪಾರಿಗೆ ಆಗ್ರಹಿಸಿದ್ದರು ಎಂಬ ವಿಚಾರವನ್ನು ಅಮಿತ್ ಶಾ ನೆನಪಿಸಿಕೊಂಡರು.

‘ನಾನಿವತ್ತು ನಿಮಗೆ ಭರವಸೆಯನ್ನು ನೀಡುತ್ತಿದ್ದೇನೆ, ಕೇಂದ್ರ ಸರ್ಕಾರ ನಿಮ್ಮನ್ನು ಈ ದೇಶದಿಂದ ಹೊರ ಹಾಕುವುದಿಲ್ಲ. ಈ ರೀತಿಯ ಯಾವುದೇ ಗಾಳಿಸುದ್ದಿಗಳನ್ನು ನಂಬಬೇಡಿ’ ಎಂದು ಅಮಿತ್ ಶಾ ಅವರು ಹಿಂದೂ, ಸಿಖ್, ಜೈನ್, ಬೌದ್ಧ ಹಾಗೂ ಕ್ರಿಶ್ಚಿಯನ್ ನಿರಾಶ್ರಿತರಿಗೆ ಅಭಯ ನೀಡಿದರು.

ಎನ್.ಆರ್.ಸಿ.ಯನ್ನು ಅಸ್ಸಾಮಿನಲ್ಲಿ ಜಾರಿಗೊಳಿಸಿದ ಬಳಿಕ ಕೇಂದ್ರ ಸರ್ಕಾರವು ಇದನ್ನು ಪಶ್ಚಿಮಬಂಗಾಳದ ಅಕ್ರಮ ವಲಸಿಗರ ವಿರುದ್ಧ ಬಳಸಲಿದೆ ಎಂಬ ಸುದ್ದಿಗಳಿಂದ ಪಶ್ಚಿಮ ಬಂಗಾಲದ ಜನರು ಗಾಬರಿಗೊಳಗಾಗಿದ್ದಾರೆ ಮತ್ತು ಈ ವಿಚಾರವಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ನಡುವೆ ಕೆಲಸಮಯಗಳಿಂದ ತಿಕ್ಕಾಟ ನಡೆಯುತ್ತಲೇ ಇದೆ.

ಬಾಂಗ್ಲಾದೇಶದಿಂದ ಲಕ್ಷಾಂತರ ಜನರು ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಅಂದಾಜು ಇದೆ. ಇವರಲ್ಲಿ ಬಹುತೇಕರು ಅಸ್ಸಾಮ್ ಮತ್ತು ಪಶ್ಚಿಮ ಬಂಗಾಳದಲ್ಲಿ ನೆಲಸಿದ್ದಾರೆ. ದೇಶದ ವಿವಿಧೆಡೆಯೂ ಇವರು ಪಸರಿಸಿದ್ದಾರೆ. ಕರ್ನಾಟಕದಲ್ಲೂ ಇವರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಅಕ್ರಮ ಬಾಂಗ್ಲಾದೇಶೀ ವಲಸಿಗರು ದೇಶದ್ರೋಹಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆಂಬ ಆರೋಪಗಳೂ ಇವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶೀ ವಲಸಿಗರ ಸಮಸ್ಯೆಯು ಹಲವು ಕಡೆ ಚುನಾವಣಾ ಚರ್ಚೆಯ ವಿಷಯವಾಗಿದೆ.

October 1, 2019 Posted by | ಪ್ರಧಾನಿ, ರಾಷ್ಟ್ರೀಯ, Flash News, General Knowledge, India, Nation, News, Prime Minister, Spardha | , | Leave a comment

ಬಿಜೆಪಿ ವಶಕ್ಕೆ ಬಿಬಿಎಂಪಿ:  ಗೌತಮ್ ಮೇಯರ್, ರಾಮಮೋಹನ್ ಉಪಮೇಯರ್

01 bbmp mayor and deputy mayor
ಬೆಂಗಳೂರು
: ಭಾರಿ ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ 2019 ಅಕ್ಟೋಬರ್ 01ರ ಮಂಗಳವಾರ  ನಡೆದು ಬಿಜೆಪಿಯ ಅಭ್ಯರ್ಥಿ ಎಂ ಗೌತಮ್ ಕುಮಾರ್ ಅವರು ನೂತನ ಮೇಯರ್ ಆಗಿಯೂ, ರಾಮಮೋಹನ್  ಅವರು  ಉಪಮೇಯರ್ ಆಗಿಯೂ ಆಯ್ಕೆಯಾದರು.

129 ಮತ ಪಡೆಯುವ ಮೂಲಕ ಗೌತಮ್ ಕುಮಾರ್ ಸರಳ ಬಹುಮತ ಪಡೆದು ಆಯ್ಕೆಯಾದರು. ಅವರ ವಿರುದ್ಧ 110 ಮತಗಳು ಚಲಾವಣೆಗೊಂಡವು. ಕಾಂಗ್ರೆಸ್ ನ ಸತ್ಯನಾರಾಯಣ ಅವರ ಪರ 112 ಮತಗಳು ಚಲಾವಣೆಯಾದವು. ಹೀಗಾಗಿ ಮುಂದಿನ ಒಂದು ವರ್ಷಗಳ ಕಾಲ ಗೌತಮ್ ಕುಮಾರ್ ಮೇಯರ್ ಆಗಿ ಅಧಿಕಾರ ನಡೆಸಲಿದ್ದಾರೆ.

ಬಿಬಿಎಂಪಿಯ ಉಪಮೇಯರ್ ಪಟ್ಟವೂ ಬಿಜೆಪಿ ಪಾಲಾಯಿತು. ಬೊಮ್ಮನಹಳ್ಳಿ ವಾರ್ಡಿನ ಬಿಜೆಪಿ ಸದಸ್ಯ ರಾಮಮೋಹನ್ ಅವರು ಉಪಮೇಯರ್ ಆಗಿ ಆಯ್ಕೆಯಾದರು. ರಾಮಮೋಹನ್ ಅವರ ಪರ 129 ಮತಗಳು ಮತ್ತು ವಿರುದ್ಧ 108 ಮತಗಳು ಚಲಾವಣೆಗೊಂಡವು. ಇವರ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ನ ಗಂಗಮ್ಮ ಪರ 116 ಮತಗಳು ಚಲಾವಣೆಗೊಂಡರೆ ವಿರುದ್ಧವಾಗಿ 120 ಮತಗಳು ಚಲಾವಣೆಯಾದವು.

ಮೇಯರ್ ಸ್ಪರ್ಧೆಗೆ ಅಂತಿಮವಾಗಿ ಬಿಜೆಪಿಯಿಂದ ಜೋಗುಪಾಳ್ಯ ವಾರ್ಡ್ ನ ಗೌತಮ್ ಕುಮಾರ್ ಮತ್ತು ಕಾಂಗ್ರೆಸ್ ನಿಂದ ದತ್ತಾತ್ರೇಯ ವಾರ್ಡ್ ಕಾರ್ಪೋರೇಟರ್ ಸತ್ಯನಾರಾಯಣ ಕಣದಲ್ಲಿದ್ದರು.

ಬಿಜೆಪಿಯಿಂದ ಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪದ್ಮನಾಭ ರೆಡ್ಡಿ ನಾಮಪತ್ರ ಹಿಂಪಡೆದ ಕಾರಣ ಅಂತಿಮವಾಗಿ ಇಬ್ಬರು ಮಾತ್ರ ಕಣದಲ್ಲಿ ಉಳಿದರು.

ಕೆಲವು ಸದಸ್ಯರು ಗೈರಾದ ಕಾರಣ ಬಿಬಿಎಂಪಿ ಸಂಖ್ಯಾಬಲ 249ಕ್ಕೆ ಇಳಿದಿದ್ದು, ಬಿಜೆಪಿ 124, ಕಾಂಗ್ರೆಸ್ 100 ಜೆಡಿಎಸ್ 18 ಮತ್ತು ಇತರೆ 7 ಸದಸ್ಯರ ಸಂಖ್ಯಾಬಲ ಹೊಂದಿದೆ. ಮೇಯರ್ ಸ್ಥಾನಕ್ಕೆ ಮ್ಯಾಜಿಕ್ ನಂಬರ್ 125 ಆಗಿತ್ತು.

ಬಿಬಿಎಂಪಿಯ ಕೌನ್ಸಿಲ್ ಕಟ್ಟಡದಲ್ಲಿ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

October 1, 2019 Posted by | ಕರ್ನಾಟಕ, ಬಿಬಿಎಂಪಿ, ಬೆಂಗಳೂರು, BBMP, Bengaluru, Bangalore,, Flash News, News, Politics, Spardha | , | Leave a comment

ಕರ್ತಾರಪುರ ಕಾರಿಡಾರ್ ಉದ್ಘಾಟನೆ:  ಪಾಕ್  ಆಹ್ವಾನಕ್ಕೆ ಮನಮೋಹನ್ ಸಿಂಗ್‌ ತಿರಸ್ಕಾರ

01 manmohan-kartarpur
ನವದೆಹಲಿ
: ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕರ್ತಾರಪುರ ಕಾರಿಡಾರ್ ಉದ್ಘಾಟನಾ ಸಮಾರಂಬಕ್ಕೆ ಪಾಕಿಸ್ತಾನ ನೀಡಿದ ಆಹ್ವಾನವನ್ನು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್  ಅವರು ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು 2019 ಅಕ್ಟೋಬರ್ 01ರ ಮಂಗಳವಾರ ದೃಢಪಡಿಸಿದವು.

ನವೆಂಬರ್ 9ಕ್ಕೆ ನಿಗದಿಯಾದ ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲು ತಮ್ಮ ರಾಷ್ಟ್ರವು ತೀರ್ಮಾನಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ವಿಡಿಯೋ ಸಂದೇಶ ಒಂದರಲ್ಲಿ  2019 ಸೆಪ್ಟೆಂಬರ್ 30ರ  ಸೋಮವಾರ ತಿಳಿಸಿದ್ದರು.

‘ಕರ್ತಾರಪುರ ಕಾರಿಡಾರ್ ಉದ್ಘಾಟನೆಯು ದೊಡ್ಡ ಕಾರ್ಯಕ್ರಮವಾಗಿದ್ದು, ಪಾಕಿಸ್ತಾನವು ಇದಕ್ಕಾಗಿ ದೊಡ್ಡ ಪ್ರಮಾಣದ ಸಿದ್ಧತೆ ನಡೆಸುತ್ತಿದೆ. ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಮಂತ್ರಿಸಲು ನಾವು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಔಪಚಾರಿಕ ಪತ್ರವನ್ನು ಅವರಿಗೆ ಕಳುಹಿಸಲಿದ್ದೇವೆ. ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಗಾಗಿ ಕರ್ತಾರಪುರಕ್ಕೆ ಆಗಮಿಸುವ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ನಮಗೆ ಅತ್ಯಂತ ಸಂತಸವಿದೆ’ ಎಂದು ಖುರೇಶಿ ವಿಡಿಯೋದಲ್ಲಿ ತಿಳಿಸಿದ್ದರು.

ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಿದೆ. ಈ ಕಾರಿಡಾರ್ ಭಾರತದ ಸಿಖ್ ಯಾತ್ರಾರ್ಥಿಗಳಿಗೆ ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಗುರುನಾನಕ್ ಅವರ ಅಂತಿಮ ವಿಶ್ರಾಂತಿ ತಾಣಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ಖುರೇಶಿ ವಿಡಿಯೋದಲ್ಲಿ ಹೇಳಿದ್ದರು.

ಪಾಕಿಸ್ತಾನದ ಕರ್ತಾರಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರ ಮತ್ತು ಭಾರತದ ಗುರುದಾಸಪುರ ಜಿಲ್ಲೆಯಲ್ಲಿ ಇರುವ ಡೇರಾ ಬಾಬಾ ನಾನಕ್ ಮಂದಿರವನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಾಣಕಾರ್ಯ ಪೂರೈಸುವುದರೊಂದಿಗೆ ಭಾರತದ ಸಿಖ್ ಯಾತ್ರಿಕರಿಗೆ ವೀಸಾಮುಕ್ತ ಪಯಣಕ್ಕೆ ಅವಕಾಶ ಲಭಿಸಲಿದೆ.

ಇದರೊಂದಿಗೆ ೧೫೨೨ರಲ್ಲಿ ಸಿಖ್ ಪಂಥದ ಸ್ಥಾಪಕ ಗುರು ನಾನಕ್ ದೇವ್ ಅವರು ಸ್ಥಾಪಿಸಿದ ಪ್ರಮುಖ ತಾಣವಾದ ಕರ್ತಾರಪುರ ಸಾಹಿಬ್ ಗೆ ಭೇಟಿ ನೀಡಲು ಅನುಮತಿ ಕೋರಿದರೆ ಸಾಕಾಗುತ್ತದೆ.

ಆದರೆ, ಪಾಕಿಸ್ತಾನವು ಕರ್ತಾರಪುರ ಕಾರಿಡಾರ್ ಮೂಲಕ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಯಾತ್ರಿಗಳಿಗೆ ೨೦ ಅಮೆರಿಕನ್ ಡಾಲರುಗಳನ್ನು ಸೇವಾ ಶುಲ್ಕವಾಗಿ ವಿಧಿಸಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತವು ಪಾಕಿಸ್ತಾನಕ್ಕೆ ಸೂಚಿಸಿದೆ.

ಮೊದಲಿಗೆ ಭಾರತದಿಂದ ಬರುವ ೫,೦೦೦ ಮಂದಿ ಯಾತ್ರಾರ್ಥಿಗಳಿಗೆ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್ ಭೇಟಿಗೆ ಅವಕಾಶ ನೀಡಲಾಗುವುದು. ಮುಂದಕ್ಕೆ ಪ್ರತಿದಿನ ೧೦,೦೦೦ ಯಾತ್ರಿಕರಿಗೆ ಭೇಟಿ ಅವಕಾಶ ಲಭಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತದ ಕಡೆಯಿಂದ ಗುರುದ್ವಾರ ದರ್ಬಾರ್ ಸಾಹಿಬ್‌ವರೆಗೆ ತನ್ನ ನೆಲದಲ್ಲಿ ಯಾತ್ರಿಕರಿಗೆ ಸಾಗಲು ಅನುಕೂಲವಾಗುವಂತೆ ಪಾಕಿಸ್ತಾನವು ಕಾರಿಡಾರ್ ನಿರ್ಮಾಣ ಮಾಡುತ್ತಿದ್ದು ಗುರುದಾಸಪುರದ ಡೇರಾ ಬಾಬಾ ನಾನಕ್‌ನಿಂದ ಗಡಿಯವರೆಗೆ ಭಾರತವು ಕಾರಿಡಾರ್ ನಿರ್ಮಾಣ ಮಾಡುತ್ತಿದೆ.

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ -೩೫೪ರಿಂದ ಕಾರಿಡಾರ್‌ವರೆಗೆ ನಾಲ್ಕು ಪಥಗಳ  ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಇದಲ್ಲದೆ ಪ್ರಯಾಣಿಕ ಟರ್ಮಿನಲ್‌ನ್ನು ಕೂಡಾ ನಿರ್ಮಿಸಲಾಗುತ್ತಿದೆ.

October 1, 2019 Posted by | ಪಾಕಿಸ್ತಾನ, ಪ್ರಧಾನಿ, ರಾಷ್ಟ್ರೀಯ, ವಿಶ್ವ/ ಜಗತ್ತು, culture, Flash News, General Knowledge, India, Nation, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Pakistan, Politics, Prime Minister, Spardha, Temples, World | , , , , , , , , , , | Leave a comment

ಸಂಧಾನಯತ್ನದಲ್ಲಿ ರಾಮಲಲ್ಲಾ ಇಲ್ಲ: ಸುಪ್ರೀಂಗೆ ವಕೀಲರ ಸ್ಪಷ್ಟನೆ

ಅಯೋಧ್ಯೆ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣ

30 ayodhya ramalalla sc
ನವದೆಹಲಿ
: ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದದ ಪ್ರಕರಣದ ವಿಚಾರಣೆಯ ಜೊತೆಗೇ ಪುನರಾಂಭಗೊಂಡಿರುವ ಸಂಧಾನ ಮಾತುಕತೆ ಯತ್ನದಲ್ಲಿ ಪ್ರಕರಣದ ಪ್ರಮುಖ ಕಕ್ಷಿದಾರರಲ್ಲಿ ಒಬ್ಬರಾಗಿರುವ ರಾಮಲಲ್ಲಾ ವಿರಾಜಮಾನ್ ಪಾಲ್ಗೊಳ್ಳುವುದಿಲ್ಲ ಎಂದು ರಾಮಲಲ್ಲಾ ಪರ ಹಾಜರಾದ ಹಿರಿಯ ವಕೀಲ ಸಿಎಸ್ ವೈದ್ಯನಾಥನ್ ಅವರು 2019 ಸೆಪ್ಟೆಂಬರ್ 30ರ ಸೋಮವಾರ ಸುಪ್ರಿಂಕೋರ್ಟಿನ ಪಂಚ ಸದಸ್ಯ ಸಂವಿಧಾನಪೀಠಕ್ಕೆ ತಿಳಿಸಿದರು.

ಮುಸ್ಲಿಂ ಕಕ್ಷಿದಾರರ ಮನವಿ ಮೇರೆಗೆ ಭೂ ವಿವಾದಕ್ಕೆ ಸಂಧಾನದ ಇತ್ಯರ್ಥ ಸಲುವಾಗಿ ನ್ಯಾಯಾಲಯ ಕಲಾಪಕ್ಕೆ ಪರ್‍ಯಾಯವಾಗಿ ಸಂಧಾನ ಮಾತುಕತೆ ಯತ್ನವನ್ನೂ ನಡೆಸಲು ಸುಪ್ರೀಂಕೋಟ್ ಅನುಮತಿ ನೀಡಿದ ಕೆಲವು ದಿನಗಳ ಬಳಿಕ ರಾಮಲಲ್ಲಾ ಪರ ವಕೀಲರು ಈ ಸ್ಪಷ್ಟನೆಯನ್ನು ನ್ಯಾಯಾಲಯಕ್ಕೆ ನೀಡಿದರು.

ಪರ್‍ಯಾಯವಾಗಿ ಸಂಧಾನಯತ್ನ ನಡೆದರೂ, ಕೋರ್ಟ್ ವಿಚಾರಣೆಯ ಪ್ರಕ್ರಿಯೆಯಲ್ಲಿ ವಾದ ಮಂಡನೆಗಳು ಅಕ್ಟೋಬರ್ ೧೮ರ ವೇಳೆಗೆ ಮುಗಿಯಬೇಕು ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತ್ತು. ವಿಚಾರಣೆ ಮತ್ತು ಸಂಧಾನಯತ್ನ ಎರಡೂ ಏಕಕಾಲಕ್ಕೆ ನಡೆಯುತ್ತವೆ ಎಂದು ಪೀಠ ತಿಳಿಸಿತ್ತು.

ಅಯೋಧ್ಯೆಯ ವಿವಾದಿತ ಭೂಮಿಯನ್ನು ಪ್ರಕರಣದ ಮೂವರು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ ಲಲ್ಲಾ ವಿರಾಜಮಾನ ಅವರಿಗೆ ಸಮಾನವಾಗಿ ಹಂಚಬೇಕು ಎಂಬುದಾಗಿ ೨೦೧೦ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಒಟ್ಟು ೧೪ ಮೇಲ್ಮನವಿಗಳು ಸುಪ್ರೀಂಕೋಟಿಗೆ ಸಲ್ಲಿಕೆಯಾಗಿದ್ದವು.

ಕಳೆದ ತಿಂಗಳು ವಿಚಾರಣೆ ಕಾಲದಲ್ಲಿ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಅವರು ’ಭಗವಾನ್ ಶೀರಾಮನ ಜನ್ಮಸ್ಥಾನವು ಸ್ವತಃ ದೇವತೆಯಾಗಿರುವುದರಿಂದ ಅದರ ಮೇಲೆ ಜಂಟಿ ಸ್ವಾಮ್ಯ ಸಾಧ್ಯವಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಜಂಟಿ ಸ್ವಾಮ್ಯದಿಂದ ಹಾನಿಯಾಗುತ್ತದೆ ಮತ್ತು ದೇವತೆಯ ವಿಭಜನೆ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು.

ಸೋಮವಾರ ವಿಚಾರಣೆ ಕಾಲದಲ್ಲಿ ಯಾವುದೇ ಸಂಧಾನಯತ್ನದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯನ್ನು ವೈದ್ಯನಾಥನ್ ಅವರು ತಳ್ಳಿ ಹಾಕಿದರು. ಹಲವಾರ ಸುತ್ತಿನ ಸಂಧಾನಗಳು ನಡೆಯುತ್ತಿವೆ ಎಂಬ ಬಗೆಗಿನ ಹಲವಾರು ವರದಿಗಳ ಹಿನ್ನೆಲೆಯಲ್ಲಿ ನಾನು ನಮ್ಮ ನಿಲುವನ್ನು ಸ್ಪಷ್ಟ ಪಡಿಸುತ್ತಿದ್ದೇನೆ. ’ರಾಮಲಲ್ಲಾ ಕಡೆಯಿಂದ ಯಾರು ಕೂಡಾ ಯಾವುದೇ ಸಂಧಾನದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಅವರು ನುಡಿದರು.

ಸಂಧಾನ ಯೋಜನೆಗೆ ಹಿಂದು ಕಕ್ಷಿದಾರರಿಂದ ಕಡಿಮೆ ಪ್ರಮಾಣದ ಬೆಂಬಲ ವ್ಯಕ್ತವಾಗಿದ್ದು, ಅವರು ಸ್ವತಃ ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಲಿ ಎಂದು ಬಯಸಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನಪೀಠವು ಈ ವರ್ಷ ಆಗಸ್ಟ್ ತಿಂಗಳಿಂದ ತ್ವರಿತಗತಿಯಲ್ಲಿ ದಶಕಗಳಷ್ಟು ಹಳೆಯದಾದ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇದಕ್ಕೆ ಮುನ್ನ ಸುಪ್ರೀಂಕೋರ್ಟ್ ನೇಮಿಸಿದ್ದ ಸಂಧಾನ ಸಮಿತಿಯ ಕಕ್ಷಿದಾರರ ಮಧ್ಯೆ ಸಹಮತದ ಮೂಲಕ ಸೌಹಾರ್ದಯುತ ಇತ್ಯರ್ಥ ಕಂಡುಕೊಳ್ಳಲು ನಡೆಸಿದ್ದ ಯತ್ನ ವಿಫಲಗೊಂಡಿತ್ತು.

ಅಯೋಧ್ಯೆಯ ಸಂತರ ಸಮಿತಿಯೊಂದು ಈಗಾಗಲೇ ಮುಸ್ಲಿಮರ ಗುಂಪೊಂದು ಪುನಾರಂಭಿಸಿರುವ ಹೊಸ ಸಂಧಾನ ಯತ್ನದಿಂದ ದೂರ ಸರಿದಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಅದಕ್ಕೂ ಮುನ್ನ ತನ್ನ ತೀರ್ಪು ನೀಡುವ ಬಗೆಗೆ ಪೀಠವು ಸುಳಿವು ನೀಡಿದೆ.

October 1, 2019 Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, culture, Flash News, General Knowledge, India, Nation, News, Spardha, supreme court, Temples, Temples, ದೇವಾಲಯಗಳು | , , , , , , , , , , | Leave a comment

ಪಿ ಚಿದಂಬರಂ ಜಾಮೀನು ಅರ್ಜಿ: ದೆಹಲಿ ಹೈಕೋರ್ಟ್ ತಿರಸ್ಕಾರ

೪೦ ದಿನವಾದರೂ ಸಿಗಲಿಲ್ಲ ನಿರಾಳತೆ

30 p chidambaramನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್  2019 ಸೆಪ್ಟೆಂಬರ್ 30ರ ಸೋಮವಾರ ತಿರಸ್ಕರಿಸಿತು.

೭೪ರ ಹರೆಯದ ಚಿದಂಬರಂ ಅವರನ್ನು ಕೇಂದ್ರೀಯ ತನಿಖಾ ದಳವು ೪೦ ದಿನಗಳ ಹಿಂದೆ ರಾಷ್ಟ್ರೀಯ ರಾಜಧಾನಿ ದೆಹಲಿಯ ಅವರ ಜೋರ್ ಬಾಗ್ ನಿವಾಸದಲ್ಲಿ ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. ಸುಮಾರು ೧೪ ದಿನಗಳ ಕಾಲ ಸಿಬಿಐ ವಶದಲ್ಲಿ ತನಿಖೆ ನಡೆಸಿದ ಬಳಿಕ ಅವರನ್ನು ತಿಹಾರ್ ಸೆರೆಮನೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಕಳೆದ ೨೫ ದಿನಗಳಿಂದ ಚಿದಂಬರಂ ಅವರು ತಿಹಾರ್ ಸೆರೆಮನೆಯಲ್ಲಿ ಇದ್ದಾರೆ.

ಚಿದಂಬರಂ ಬಿಡುಗಡೆಯ ವಿರುದ್ಧ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಚಿದಂಬರಂ ಅವರು ವಿದೇಶಕ್ಕೆ ಹಾರುವ ಅಪಾಯವಿದೆ  ಎಂದು ಹೇಳಿದರು. ಚಿದಂಬರಂ ಅವರು ಗಂಭೀರವಾದ ಅಪರಾಧದಲ್ಲಿ ಆರೋಪಿಯಾಗಿರುವ ಕಾರಣ ಮತ್ತು ಶಿಕ್ಷೆಗೆ ಗುರಿಯಾಗಬಹುದಾದ ಕಾರಣ ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಗಳಿವೆ. ವಿದೇಶದಲ್ಲಿ ಅನಿರ್ದಿಷ್ಟ ಕಾಲ ಬದುಕುವಷ್ಟು ಹಣ ಅವರ ಬಳಿ ಇದೆ ಎಂದು ಮೆಹ್ತ ವಾದಿಸಿದರು.

ನ್ಯಾಯಮೂರ್ತಿ ಸುರೇಶ ಕುಮಾರ್ ಕೈಟ್ ಅವರು ತಮ್ಮ ತೀರ್ಪಿನಲ್ಲಿ ಈ ವಾದವನ್ನು ಅಂಗೀಕರಿಸಲಿಲ್ಲ. ’ಚಿದಂಬರಂ ಅವರು ಪರಾರಿಯಾಗಬಹುದಾದ ಅಪಾಯವಿದೆ ಎಂಬುದಕ್ಕೆ ಅಥವಾ ಅವರು ಸಾಕ್ಷ್ಯಾಧಾರದಲ್ಲಿ ಕೈಯಾಡಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಆದರೆ ಕಾಂಗ್ರೆಸ್ ನಾಯಕ ಸಂಸತ್ ಸದಸ್ಯರಾಗಿದ್ದು ಪ್ರಭಾವಶಾಲಿಯಾದ ವ್ಯಕ್ತಿಯಾಗಿದ್ದಾರೆ’ ಎಂದು ನ್ಯಾಯಮೂರ್ತಿ ಹೇಳಿದರು.

‘ತನಿಖೆಯು ಮುಂದುವರೆದ ಹಂತದಲ್ಲಿದೆ. ಈ ಹಂತದಲ್ಲಿ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬುದನ್ನು ತಳ್ಳಿಹಾಕಲಾಗದು’ ಎಂದು ನ್ಯಾಯಮೂರ್ತಿ ನುಡಿದರು.

ಐಎನ್‌ಎಕ್ಸ್ ಮೀಡಿಯಾ ಕಂಪೆನಿಗೆ ೨೦೦೭ರಲ್ಲಿ ೩೦೫ ಕೋಟಿ ರೂಪಾಯಿಗಳಷ್ಟು ಮೊತ್ತದ ವಿದೇಶೀ ಹೂಡಿಕೆ ಸ್ವೀಕರಿಸಲು ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯ ಒಪ್ಪಿಗೆ ದೊರಕಿಸಿಕೊಡುವಲ್ಲಿ ನಡೆದ ಅಕ್ರಮ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಆಗ ಚಿದಂಬರಂ ಅವರು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರದಲಿ ವಿತ್ತ ಸಚಿವರಾಗಿದ್ದರು.

ಹೈಕೋರ್ಟ್ ನ್ಯಾಯಮೂರ್ತಿ ಸುರೇಶ ಕುಮಾರ್ ಕೈಟ್ ಅವರ ಮುಂದೆ ನಡೆದ ವಿಚಾರಣಾ ಕಲಾಪದಲ್ಲಿ ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಪ್ರತಿನಿಧಿಸಿದ ಮೆಹ್ತ, ’ಐಎನ್‌ಎಕ್ಸ್ ಮೀಡಿಯಾ ಸಮೂಹದ ಸಹ ಸಂಸ್ಥಾಪಕರಾದ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಅವರು ೨೦೦೭-೦೮ರಲ್ಲಿ ಚಿದಂಬರಂ ಅವರನ್ನು ಭೇಟಿ ಮಾಡಿದ್ದಕ್ಕೆ ಮತ್ತು ಮಾಜಿ ಸಚಿವರು ತಮ್ಮ ಪುತ್ರನ ವ್ಯವಹಾರ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವಂತೆ ಅವರಿಗೆ ಸೂಚಿಸಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳು ಇವೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಚಿದಂಬರಂ ವಿರುದ್ಧದ ಸಿಬಿಐ ಪ್ರಕರಣದಲ್ಲಿ ಪ್ರಮುಖವಾಗಿರುವ ಈ ಆಪಾದನೆಯನ್ನು ಕಾಂಗ್ರೆಸ್ ನಾಯಕರೂ, ಚಿದಂಬರಂ ವಕೀಲರ ತಂಡದ ಮುಖ್ಯಸ್ಥರೂ ಆದ ಕಪಿಲ್ ಸಿಬಲ್  ನಿರಾಕರಿಸಿದ್ದಾರೆ. ಚಿದಂಬರಂ ಅವರು ಎಂದೂ ಇಂದ್ರಾಣಿ ಮುಖರ್ಜಿಯನ್ನು ಭೇಟಿ ಮಾಡಿಯೇ ಇಲ್ಲ ಎಂದು ಸಿಬಲ್ ನ್ಯಾಯಾಲಯಕ್ಕೆ ಕಳೆದವಾರ ತಿಳಿಸಿದ್ದರು.

ಏನಿದ್ದರೂ, ಐಎನ್‌ಎಕ್ಸ್ ಮೀಡಿಯಾ ಸಮೂಹದ ಪ್ರತಿನಿಧಿಗಳು ಮತ್ತು ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಸಂಸ್ಥೆಗಳ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಮಿಂಚಂಚೆಗಳು (ಇ-ಮೇಲ್) ಹರಿದಾಡಿರುವುದಕ್ಕೆ ಸಿಬಿಐ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಸಿಬಿಐ ಪ್ರತಿಪಾದಿಸಿತ್ತು.

October 1, 2019 Posted by | ಭಾರತ, ರಾಷ್ಟ್ರೀಯ, Flash News, India, Nation, News, Politics, Prime Minister, Spardha | , | Leave a comment

ಪ್ರವಾಹದ ಮಧ್ಯೆ ಸಿಲುಕಿದ  ಬಿಹಾರ ಉಪಮುಖ್ಯಮಂತ್ರಿ  ಸುಶೀಲ್ ಮೋದಿ, ಕುಟುಂಬ

30 Sushil-Modi-Rescued-by-NDRF
ಪಾಟ್ನಾ
: ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸುರಿದ ಸತತ ಮಳೆಯಿಂದ ಉಂಟಾದ ಪ್ರವಾಹದ ಮಧ್ಯೆ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮತ್ತು ಅವರ ಕುಟುಂಬ ಸದಸ್ಯರು ಮನೆಯಲ್ಲಿಯೇ ಸಿಕ್ಕಿಹಾಕಿಕೊಂಡ ಘಟನೆ ಘಟಿಸಿದ್ದು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ 2019 ಸೆಪ್ಟೆಂಬರ್  30ರ ಸೋಮವಾರ ಅವರನ್ನು ರಕ್ಷಿಸಿದರು.

ಸುಶೀಲ್ ಮೋದಿ ಮತ್ತು ಅವರ ಕುಟುಂಬ ಸದಸ್ಯರು ತಮಗೆ ಬೇಕಾದ ಕೆಲವು ವಸ್ತುಗಳೊಂದಿಗೆ ಎನ್‌ಡಿಆರ್‌ಎಫ್ ಸಿಬ್ಬಂದಿ ನೆರವಿನೊಂದಿಗೆ ಜಲಾವೃತಗೊಂಡಿದ್ದ ತಮ್ಮ ಮನೆಯಿಂದ ಪಾರಾಗಿ ಬಂದಿದ್ದಾರೆ ಎಂದು ವರದಿಗಳು ಹೇಳಿದವು.

ರಾಜ್ಯದಲ್ಲಿ ನಾಲ್ಕು ದಿನಗಳಿಂದ ಸುರಿದ ಜಡಿಮಳೆಗೆ ಕನಿಷ್ಠ ೨೮ ಜನ ಬಲಿಯಾಗಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಜಡಿಮಳೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

October 1, 2019 Posted by | ರಾಷ್ಟ್ರೀಯ, Flash News, General Knowledge, India, Nation, Spardha | | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ