SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಯೋಧ್ಯಾ ಪ್ರಕರಣ:  ಅಂತಿಮ ವಾದ ಮಂಡನೆ ಮುಕ್ತಾಯಕ್ಕೆ ಸುಪ್ರೀಂ ಪೀಠ ನಿರ್ದೇಶನ


15 ayodhya supreme
ಬುಧವಾರವೇ  ವಿಚಾರಣೆ ಮುಕ್ತಾಯ ಸಂಭವ

ನವದೆಹಲಿ:  ರಾಜಕೀಯವಾಗಿ ಅತಿಸೂಕ್ಷ್ಮವಾಗಿರುವ ಅಯೋಧ್ಯಾ ರಾಮಜನ್ಮಭೂಮಿಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಬುಧವಾರವೇ ಮುಕ್ತಾಯಗೊಳಿಸಲು ತಾನು ಬಯಸಿರುವುದಾಗಿ  2019 ಅಕ್ಟೋಬರ್ 15ರ ಮಂಗಳವಾರ ಹೇಳಿದ ಸುಪ್ರೀಂಕೊರ್ಟ್, ತಮ್ಮ ಅಂತಿಮ ವಾದಗಳನ್ನು 2019 ಅಕ್ಟೋಬರ್ 16ರ  ಬುಧವಾರ ಪರಿಸಮಾಪ್ತಿಗೊಳಿಸುವಂತೆ ಎಲ್ಲ ಕಕ್ಷಿದಾರರಿಗೂ ನಿರ್ದೇಶಿಸಿತು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ ಪ್ರಕರಣದ ವಿಚಾರಣೆಯನ್ನು ೩೯ ದಿನಗಳಿಂದ ನಡೆಸುತ್ತಿದ್ದು,  ಈ ಮೊದಲು ಅಕ್ಟೋಬರ್ ೧೮ರಂದು ವಾದಮಂಡನೆ ಪೂರ್ಣಗೊಳಿಸುವಂತೆ ಸೂಚಿಸಿತ್ತು.  ಬಳಿಕ ಈ ದಿನಾಂಕವನ್ನು ಹಿಂದೂಡಿದ ನ್ಯಾಯಾಲಯ ಅಕ್ಟೋಬರ್ ೧೭ರಂದು ವಾದ ಮಂಡನೆ ಪೂರ್ಣಗೊಳಿಸಲು ಗಡುವು ನೀಡಿತ್ತು. ಆದರೆ, ಮಂಗಳವಾರ ಸಿಜೆಐ ಗೊಗೋಯಿ ಅವರು ಪೀಠವು ಗುರುವಾರದ ಬದಲಿಗೆ ಬುಧವಾರವೇ ಎಲ್ಲ ವಾದಗಳನ್ನೂ ಪರಿಸಮಾಪ್ತಿಗೊಳೀಸಲು ಬಯಸಿದೆ ಎಂಬ ಇಂಗಿತ ವ್ಯಕ್ತ ಪಡಿಸಿದರು.

ಕಕ್ಷಿದಾರರಿಗೆ ಅಂತಿಮ ವಾದ ಮಂಡನೆಗೆ ಕಾಲ ಮಿತಿ ನಿಗದಿ ಪಡಿಸಿದ ಸುಪ್ರೀಂಕೋರ್ಟ್ ಪೀಠವು, ಅಂತಿಮ ವಾದ ಮಂಡನೆ ಹಾಗೂ ಉತ್ತರಗಳನ್ನು ನೀಡಲು  ಹಿಂದು ಮತ್ತು ಮುಸ್ಲಿಮ್ ಕಕ್ಷಿದಾರರಿಗೆ ಬುಧವಾರ ೫ ಗಂಟೆಯವರೆಗೂ ಕಾಲಾವಕಾಶ ನೀಡುವುದು ಎಂದು ಹೇಳಿತು. ನ್ಯಾಯಾಲಯವು ಮಂಗಳವಾರ ಕೂಡಾ ಸಂಜೆ ೫ ಗಂಟೆಯವರೆಗೂ ಕಲಾಪ ನಡೆಸಿತು.

ವಾದಮಂಡನೆಗಳು ಪೂರ್ಣಗೊಂಡರೆ ಪೀಠವು ತೀರ್ಪನ್ನು ಕಾಯ್ದಿರಿಸಲಿದೆ. ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಎಸ್ ಎ ನಜೀರ್ ಅವರನ್ನೂ ಒಳಗೊಂಡಿರುವ ಪೀಠವು, ಸಿಜೆಐ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಆ ದಿನದ ಒಳಗಾಗಿಯೇ ತೀರ್ಪು ನೀಡಬೇಕಾಗಿದೆ. ಸಿಜೆಐ ಅವರ ನಿವೃತ್ತಿಯ ಒಳಗಾಗಿ ತೀರ್ಪು ನೀಡದಿದ್ದರೆ, ಸಂಪೂರ್ಣ ವಿಷಯವನ್ನು ಪುನಃ ಹೊಸದಾಗಿ ಮೊದಲಿನಿಂದಲೇ ಆಲಿಸಬೇಕಾಗುತ್ತದೆ.

‘ಪೀಠಕ್ಕೆ ತೀರ್ಪು ಬರೆಯಲು ಕೇವಲ ನಾಲ್ಕು ವಾರಗಳು ಲಭಿಸುತ್ತವೆ. ಈ ಕಾಲಮಿತಿಯ ಒಳಗೆ ನ್ಯಾಯಾಲಯ ತೀರ್ಪು ನೀಡಿದರೆ ಅದು ’ಪವಾಡ’ವಾಗಲಿದೆ’ ಎಂದು ಸಿಜೆಐ ಅವರು ಈ ಹಿಂದೆ ಹೇಳಿದ್ದರು.

ದಶಕಗಳಷ್ಟು ಹಳೆಯದಾದ ಪ್ರಕರಣದ ವಿಚಾರಣೆಯನ್ನು ಪ್ರತಿದಿನ ವಾದ ಆಲಿಸುವ ಮೂಲಕ ನ್ಯಾಯಾಲಯವು ತ್ವರಿತಗೊಳಿಸಿತ್ತು. ನಿಗದಿತ ಗಡುವಿನ ಒಳಗಾಗಿ ತೀರ್ಪು ನೀಡಲು ಸಾಧ್ಯವಾಗುವಂತೆ ಇತರ ವಿಷಯಗಳಿಗಾಗಿ ಮೀಸಲಿಡಲಾಗಿದ್ದ ದಿನಗಳಲ್ಲೂ ಪೀಠವು ವಿಚಾರಣೆ ನಡೆಸಿತ್ತು.

ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ೨೦೧೦ರ ಸೆಪ್ಟೆಂಬರಿನಿಂದ ನಡೆಸುತ್ತಾ ಬಂದಿತ್ತು.

೧೯೯೨ರ ಡಿಸೆಂಬರ್ ೬ರವರೆಗೆ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವಿದ್ದ ಸ್ಥಳವೂ ಸೇರಿದಂತೆ ೨.೭೭ ಎಕರೆ ವಿವಾದಿತ ಭೂಮಿಯನ್ನು ಸಮಾನವಾಗಿ ವಿಭಜಿಸಿ ಕಕ್ಷಿದಾರರಾದ ನಿರ್ಮೋಹಿ ಅಖಾರ, ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ರಾಮಲಲ್ಲಾ ವಿರಾಜಮಾನ್ ಅವರಿಗೆ ಹಂಚಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು.

ವಿವಾದವನ್ನು ಸುಪ್ರೀಂಕೋರ್ಟಿನಿಂದಲೇ ನೇಮಕಗೊಂಡ ಸಂಧಾನಕಾರರ ಸಮಿತಿಯ ಮೂಲಕ ಇತ್ಯರ್ಥ ಪಡಿಸಲು ನಡೆದ ಪ್ರಕ್ರಿಯೆ ರಾಮಲಲ್ಲಾ ವಿರಾಜಮಾನ್ ಇನ್ನಷ್ಟು ಸಂಧಾನ ಇಲ್ಲ ಎಂದು ಪ್ರಕಟಿಸುವುದರೊಂದಿಗೆ ವಿಫಲಗೊಂಡಿತ್ತು. ಕೆಲವು ದಿನಗಳ ಬಳಿಕ ಸುಪ್ರೀಂಕೋರ್ಟಿನಿಂದ ನೇಮಕಗೊಂಡಿದ್ದ ಸಂಧನಕಾರರ ಸಮಿತಿಯು ಪುನಃ ಮುಂದಿಟ್ಟ ಆಹ್ವಾನವನ್ನೂ ಮಸೀದಿ ಪರ ವಾದಿಸುತ್ತಿದ್ದವರೂ ತಳ್ಳಿಹಾಕಿದ್ದರು.

ದಶಕಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ತೀರ್ಪು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯಾ ಆಡಳಿತವು ಡಿಸೆಂಬರ್ ೧೦ರವರೆಗೆ ಸೆಕ್ಷನ್ ೧೪೪ರ ಅಡಿಯಲ್ಲಿ ಕಟ್ಟು ನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದೆ.

October 15, 2019 - Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Flash News, General Knowledge, India, Nation, News, Spardha, supreme court, Temples, Temples, ದೇವಾಲಯಗಳು | , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ