SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಬಿಜೆಪಿಗೆ ‘ಮಹಾ’  ಆಘಾತ: ಸಿಗಲಿಲ್ಲ ನಿರೀಕ್ಷಿತ ‘ಪ್ರಚಂಡ’ ಬಹುಮತ

24 modi amith shah
ಮಹಾರಾಷ್ಟ್ರದಲ್ಲಿ ಸರಳ ಬಹುಮತ, ಅತಂತ್ರ ಹರಿಯಾಣದಲ್ಲಿ ಸರ್ಕಾರ ರಚನೆಗೆ ತಂತ್ರ

ನವದೆಹಲಿ: ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ-೨ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ಬಳಿಕ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಉದಯಿಸಿ, ಸರ್ಕಾರ ರಚನೆಯ ಘೋಷಣೆ ಮಾಡಿದ್ದರೂ, ನಿರೀಕ್ಷೆಗಳಿಗೆ ವಿರುದ್ಧವಾಗಿ ಸ್ಥಾನಗಳ ನಷ್ಟದ ಭಾರೀ ಆಘಾತವನ್ನು 2019 ಅಕ್ಟೋಬರ್ 24ರ ಗುರುವಾರ ಅನುಭವಿಸಿತು.

ಮಹಾರಾಷ್ಟ್ರದಲ್ಲಿ ೨೮೮ ಸ್ಥಾನಗಳ ಪೈಕಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟ ೧೬೨ ಸ್ಥಾನಗಳೊಂದಿಗೆ ಬಹುಮತ ಪಡೆದರೂ, ೨೦೧೪ಕ್ಕೆ ಹೋಲಿಸಿದರೆ ಮೈತ್ರಿಕೂಟ ೨೩ ಸ್ಥಾನಗಳ ನಷ್ಟ ಅನುಭವಿಸಿತು. ೯೦ ಸದಸ್ಯಬಲದ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರೂಪುಗೊಂಡಿದ್ದು, ೪೦ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ ಬಿಜೆಪಿ ೭ ಸ್ಥಾನಗಳ ನಷ್ಟ ಅನುಭವಿಸಿತು.

ಉಭಯ ರಾಜ್ಯಗಳಲ್ಲೂ ವಿರೋಧಿ ಕಾಂಗ್ರೆಸ್ ಚೇತರಿಸಿಕೊಂಡಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ೧೨ ಸ್ಥಾನಗಳ ಹೆಚ್ಚುವರಿ ಗಳಿಕೆಯೊಂದಿಗೆ 104  ಸ್ಥಾನಗಳನ್ನು ಗೆದ್ದಿವೆ. ಹರಿಯಾಣದಲ್ಲಿ ೧೬ ಹೆಚ್ಚುವರಿ ಸ್ಥಾನಗಳಿಕೆಯೊಂದಿಗೆ ೩೧ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಮಹಾರಾಷ್ಟ್ರದಲ್ಲಿ ಇತರರು ೩೧ ಸ್ಥಾನಗಳನ್ನು ಗೆದ್ದರೆ, ಹರಿಯಾಣದಲ್ಲಿ ೧೯ ಮಂದಿ ಇತರರು ಗೆದ್ದಿದ್ದು ಈ ಪೈಕಿ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಶ್ಯಂತ್ ’ಕಿಂಗ್ ಮೇಕರ್’ ಸ್ಥಾನಕ್ಕೆ ಏರಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಹಣಾಹಣಿಗೆ ಇಳಿದಿದ್ದು, ಬೆಂಬಲಕ್ಕಾಗಿ ದುಶ್ಯಂತ್ ಕಡೆಗೆ ನೋಡುವಂತಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಸರ್ಕಾರ ರಚನೆಗೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಬಳಿ ಹಕ್ಕು ಮಂಡಿಸಿ, ಏಕೈಕ ದೊಡ್ಡ ಪಕ್ಷವಾಗಿರುವ ನೆಲೆಯಲ್ಲಿ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಕೋರಿದರು.

ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಸಾಧನೆಗಾಗಿ ಮಹಾರಾಷ್ಟ್ರ ಮತ್ತು ಹರಿಯಣದ ಮುಖ್ಯಮಂತ್ರಿಗಳನ್ನು ಅಭಿನಂದಿಸಿ ಪಕ್ಷಕ್ಕೆ ಮತ್ತೊಮ್ಮೆ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.

ಮಹಾರಾಷ್ಟ್ರದಲ್ಲಿ ೨೨೦ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿ ಇಟ್ಟುಕೊಂಡಿದ್ದ ಬಿಜೆಪಿ-ಶಿವಸೇನಾ ಮೈತ್ರಿಕೂಟ ತನ್ನ ಗುರಿ ತಲುಪುವಲ್ಲಿ ಮುಗ್ಗರಿಸಿತು. ಆದರೆ ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತವನ್ನು ಪಡೆಯಿತು. ಆದರೆ ಬಿಜೆಪಿಯ ಸ್ಥಾನ ನಷ್ಟದ ಲಾಭ ಪಡೆಯಲು ಹೆಜ್ಜೆ ಮುಂದಿಟ್ಟಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ಅಧಿಕಾರ ಹಂಚಿಕೆಯಲ್ಲಿ  ೫೦:೫೦ ಸೂತ್ರದ ಪಾಲನೆಯಾಗಬೇಕು’ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದರು. ಸರ್ಕಾರ ರಚನೆಗೆ ತಮಗೆ ಅವಸರವಿಲ್ಲ ಎಂಬುದಾಗಿ ಹೇಳುವ ಮೂಲಕ ಬಿಜೆಪಿಯು ತರಾತುರಿಯಲ್ಲಿ ಸರ್ಕಾರ ರಚಿಸದಂತೆ ತಡೆಯುವ ನಿಟ್ಟಿನಲ್ಲಿ ಅವರು ಕಾಲಿಟ್ಟರು.

ಇತ್ತ ೯೦ ಸ್ಥಾನಗಳಿಗೂ ಸ್ಪರ್ಧಿಸಿದ್ದ ಹರಿಯಾಣದಲ್ಲಿ ಕೇವಲ ೪೦ ಸ್ಥಾನ ಗೆಲ್ಲಲು ಸಮರ್ಥವಾಗಿರುವ ಬಿಜೆಪಿಗೆ ಬಹುಮತದ ಅಂಚಿಗೆ ಬರಲು ಅಸಾಧ್ಯವಾದ್ದರಿಂದ ಸರ್ಕಾರ ರಚನೆ ಅಷ್ಟೊಂದು ಸುಲಭವಲ್ಲ. ೯೦ ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ೪೬ ಸ್ಥಾನಗಳು ಬೇಕಾಗಿವೆ.

ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುತ್ತಿದ್ದಂತೆಯೇ  ಮ್ಯಾಜಿಕ್ ಸಂಖ್ಯೆ ೪೬ ತಲುಪಲು ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಶುರುವಾಯಿತು. ರಾಜ್ಯದಲ್ಲಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ವಿರುದ್ಧ ಪ್ರಚಾರ ಸಮರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕ ಭೂಪೀಂದರ್ ಹೂಡಾ ಅವರು ಬಿಜೆಪಿಯು ಅಧಿಕಾರಕ್ಕೆ ಮರಳದಂತೆ ತಡೆಯಲು ಕೈಜೋಡಿಸುವಂತೆ ಇತರ ಪಕ್ಷಗಳು ಮತ್ತು ಪಕ್ಷೇತರರಿಗೆ ಕ್ಷಿಪ್ರ ಮನವಿ ಮಾಡಿದರು.

ಬಿಜೆಪಿಯು ಸರ್ಕಾರ ರಚನೆಯ ಹಕ್ಕು ಮಂಡನೆಯ ಸುಳಿವನ್ನು ನೀಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರು ತಮ್ಮ ಟ್ವೀಟ್‌ಗಳಲ್ಲಿ ಈ ಇಂಗಿತ ವ್ಯಕ್ತ ಪಡಿಸುವುದರ ಜೊತೆಗೆ ಮನೋಹರಲಾಲ್ ಖಟ್ಟರ್ ಮೊದಲಿಗರಾಗಿ ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

‘ಹರಿಯಾಣದಲ್ಲಿ ಮನೋಹರಲಾಲ್ ಖಟ್ಟರ್ ಅವರ ಸರ್ಕಾರವು ಜನರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿನ (ನರೇಂದ್ರ) ಮೋದಿ ನಾಯಕತ್ವದ ಅಡಿಯಲ್ಲಿ ಸರ್ವ ಪ್ರಯತ್ನ ಮಾಡಿದೆ. ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿರುವುದಕ್ಕಾಗಿ ಮತ್ತು ಇನ್ನೊಮ್ಮೆ ಅವರ ಸೇವೆ ಸಲ್ಲಿಸಲು ಅವಕಾಶ ನೀಡಿರುವುದಕ್ಕಾಗಿ ನಾನು ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಶಾ ತಮ್ಮ ಟ್ವೀಟಿನಲ್ಲಿ  ತಿಳಿಸಿದರು.

ಕೆಲವೇ ನಿಮಿಷಗಳಲ್ಲಿ ಇದಕ್ಕೆ ಬೆಂಬಲವಾಗಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ’ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ಹರಿಯಾಣದ ಜನತೆಗೆ ಧನ್ಯವಾದ ಅರ್ಪಿಸುವೆ. ಇದೇ ಉತ್ಸಾಹ ಮತ್ತು ಸಮರ್ಪಣಾ ಭಾವದೊಂದಿಗೆ ನಾವು ಕೆಲಸ ಮುಂದುವರೆಸುತ್ತೇವೆ. ನಮ್ಮ ಅಭಿವೃದ್ಧಿ ಕಾರ್‍ಯಸೂಚಿಯನ್ನು ಜನತೆಯ ಬಳಿಗೆ ಒಯ್ಯಲು ವಿಶೇಷವಾಗಿ ಶ್ರಮಿಸಿದ ಹರಿಯಾಣದ ಬಿಜೆಪಿ ಕಾರ್‍ಯಕರ್ತರಿಗೂ ನನ್ನ ವಂದನೆಗಳು ಸಲ್ಲುತ್ತವೆ’ ಎಂದು ಬರೆದರು.

ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ಕಡೆ ಗೆದ್ದಿರುವ ಕೆಲವು ಬಂಡಾಯ ಶಾಸಕರ ಜೊತೆಗೆ ಬಿಜೆಪಿಯ ಸಂಪರ್ಕ ಸಾಧಿಸಿದೆ ಎನ್ನಲಾಯಿತು. ಹರಿಯಾಣದಲ್ಲಿ ಬಂಡಾಯ ಶಾಸಕರು ಮತ್ತು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಮುಂದಿನ  ಸರ್ಕಾರ ರಚಿಸಲು  ಬಿಜೆಪಿ ಮುಂದಾಗಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಧ್ಯಮ ಒಂದಕ್ಕೆ ತಿಳಿಸಿದರು.

ಪಕ್ಷದ ತಂತ್ರದ ಬಗ್ಗೆ ಬಿಜೆಪಿ ನಾಯಕ ವಿವರಿಸಲಿಲ್ಲ. ಆದರೆ ಇಂಡಿಯನ್ ನ್ಯಾಷನಲ್ ಲೋಕದಳದ ಅಭಯ್ ಸಿಂಗ್ ಚೌಟಾಲರಂತಹ ಕೆಲವರು ಜನನಾಯಕ ಜನತಾ ಪಕ್ಷದ ಪ್ರತಿಸ್ಪರ್ಧಿ ದುಶ್ಯಂತ ಚೌಟಾಲ ’ಕಿಂಗ್ ಮೇಕರ್’ ಆಗದಂತೆ ತಡೆಯಲು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಹರಿಯಾಣ ಸಮೀಕ್ಷೆ ಲೆಕ್ಕಾಚಾರ ತಪ್ಪಾಗಿದ್ದು ಹೇಗೆ?

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಮತಎಣಿಕೆಯ ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ಫಲಿತಾಂಶ ಎಲ್ಲರಿಗೂ ಅಚ್ಚರಿ ತಂದಿತು. ೨೦೧೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರಿಯಾಣದ ಹತ್ತೂ ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಲ್ಲದೇ ಇಂಡಿಯಾ ಟುಡೇ, ಆಕ್ಸಿಸ್ ಹೊರತು ಪಡಿಸಿ ಇತರ ಎಲ್ಲಾ ಮತದಾನೋತ್ತರ ಸಮೀಕ್ಷೆಗಳೂ ೯೦ ಸದಸ್ಯಬಲದ ಹರಿಯಾಣದಲ್ಲಿ ಬಿಜೆಪಿ ೭೦ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಮಹಾರಾಷ್ಟ್ರದಲ್ಲೂ ಬಿಜೆಪಿ-ಶಿವಸೇನಾ ಮೈತ್ರಿಕೂಟದ ಬಲ ೨೦೦ರ ಗಡಿ ದಾಟಬಹುದು ಎಂದು ಹೇಳಿದ್ದವು.

ಆದರೆ ಇದೀಗ ಹರಿಯಾಣ ಅತಂತ್ರ ವಿಧಾನಸಭೆಯಾದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟದಕ್ಕೆ ಸರಳ ಬಹುಮತವಷ್ಟೇ ಲಭಿಸಿದೆ.

ಬಿಜೆಪಿ ೪೦ ಸ್ಥಾನಗಳಲ್ಲಿ, ಕಾಂಗ್ರೆಸ್ ೩೧ ಹಾಗೂ ಜೆಜೆಪಿ ೧೨ ಸ್ಥಾನಗಳಲ್ಲಿ ಜಯ ಸಾಧಿಸುವತ್ತ ಹೆಜ್ಜೆ ಇಟ್ಟವು. ಶೇ.೪೦ರಷ್ಟು ಮತಎಣಿಕೆ ಮುಕ್ತಾಯಗೊಂಡಾಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲಾ ಸಮೀಕ್ಷೆಗಳ ಲೆಕ್ಕಚಾರ ತಲೆಕೆಳಗಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿತು. ಅದಕ್ಕೆ ಮುಖ್ಯ ಕಾರಣ ಬಹುತೇಕ ಸಮೀಕ್ಷೆಗಳು ೨೦೧೯ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನೇ ನೂತನ ಮಾನದಂಡವಾಗಿ ಪರಿಗಣಿಸಿದ್ದು ಎಂದು ಇದೀಗ ವಿಶ್ಲೇಷಿಸಲಾಗಿದೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಬಿಜೆಪಿ ಶೇ.೫೮ರಷ್ಟು ಮತ ಪಡೆದಿತ್ತು. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಶೇ.೩೬ಕ್ಕೆ ಕುಸಿತ ಕಂಡಿದೆ. ೨೦೧೪ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಕೇವಲ ಶೇ.೨-೩ರಷ್ಟು ಮತಗಳನ್ನಷ್ಟೇ ಹೆಚ್ಚು ಪಡೆದಿದೆ. ಆದರೆ ೨೦೧೯ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ.೨೦ರಷ್ಟು ಭಾರೀ ನಷ್ಟ ಅನುಭವಿಸಿದೆ.

ಮಹಾರಾಷ್ಟ್ರದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಬಿಜೆಪಿಗೆ ಸೋಲು:

ಮಹಾರಾಷ್ಟ್ರದ ಕೊಲ್ಹಾಪುರದ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು ಅನುಭವಿಸಿದೆ. ಅಲ್ಲದೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರವಾಹ ಪೀಡಿತ ಕ್ಷೇತ್ರಗಳಲ್ಲಿ ಬಿಜೆಪಿ ಪರಾಜಯಗೊಂಡಿದೆ. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ೧೨೨ ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ನೂರು ಸ್ಥಾನಗಳಲ್ಲಷ್ಟೇ ಗೆಲುವು ಪಡೆಯಲು ಯಶಸ್ವಿಯಾಗಿದೆ. ಚುನಾವಣೋತ್ತರ ಮತ್ತು ಮತದಾನೋತ್ತರ ಸಮೀಕ್ಷೆಗಳೆಲ್ಲವೂ ಮಹಾರಾಷ್ಟ್ರದಲ್ಲಿ ಬಿಜೆಪಿಯೇ ೧೫೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು.

ಆದರೆ ಈ ಬಾರಿ ಬಿಜೆಪಿ 105 ಸ್ಥಾನಗಳಲ್ಲಿ ಶಿವಸೇನಾ 56, ಕಾಂಗ್ರೆಸ್ 44, ಎನ್ ಸಿಪಿ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದವು. ಈ ಮೂಲಕ ಕೇವಲ ಬಿಜೆಪಿ ಏಕಾಂಗಿಯಾಗಿಯೇ ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ಭವಿಷ್ಯ ಹುಸಿಯಾಯಿತು.

ಯಾರಿಗೆ ಎಷ್ಟು ಸ್ಥಾನ

ಮಹಾರಾಷ್ಟ್ರ    ಒಟ್ಟು ಸ್ಥಾನ 288  ಮ್ಯಾಜಿಕ್ ಸಂಖ್ಯೆ 145

ಪಕ್ಷ                           ಗೆಲುವು                                                        2014ರ ಸ್ಥಾನ

ಬಿಜೆಪಿ+                     162 (ಬಿಜೆಪಿ 103+ ಶಿವಸೇನಾ 54)                     185

ಕಾಂಗ್ರೆಸ್ +                  98  (ಕಾಂಗ್ರೆಸ್ 44+ ಎನ್‌ಸಿಪಿ 54)                      83

ಇತರರು                       22                                                                    20

 

ಹರಿಯಾಣ  ಒಟ್ಟು ಸ್ಥಾನ 90  ಮ್ಯಾಜಿಕ್ ಸಂಖ್ಯೆ  46

ಪಕ್ಷ                     ಗೆಲುವು                                                              2014ರ ಸ್ಥಾನ

ಬಿಜೆಪಿ                      40                                                                         47

ಕಾಂಗ್ರೆಸ್                   31                                                                        15

ಜೆಜೆಪಿ                       10                                                                         –

ಇತರರು                     9                                                                        28

October 24, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Prime Minister, Spardha | , | Leave a comment

ಶಿವಸೇನೆಗೆ ಸರ್ಕಾರದಲ್ಲಿ ೫೦:೫೦ ಪಾಲು: ಬಿಜೆಪಿಗೆ ಉದ್ಧವ್ ಠಾಕ್ರೆ ಸಂದೇಶ

24 Uddhav-Thackeray
ಮುಂಬೈ:
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿದ್ದಂತೆಯೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚನೆ ಸುಲಭವಲ್ಲ ಎಂಬ ಸಂದೇಶವನ್ನು 2019 ಅಕ್ಟೋಬರ್ 24ರ ಗುರುವಾರ ರವಾನಿಸಿದರು.

ಮಹಾರಾಷ್ಟ್ರ ಚುನಾವಣೆಗಳಲ್ಲಿ ಕಿರಿಯ ಪಾಲುದಾರನಾಗಲು ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ಶಿವಸೇನಾ ಮುಖ್ಯಸ್ಥ, ಸರ್ಕಾರ ರಚನೆಯ ವಿಚಾರದಲ್ಲಿ ತನ್ನ ನಡೆಯನ್ನು ಶಿವಸೇನೆ ಒಪ್ಪಿಕೊಳ್ಳುತ್ತದೆ ಎಂದು ಬಿಜೆಪಿ ತೀರ್ಮಾನಿಸಬೇಕಾಗಿಲ್ಲ, ಇದು ಚರ್ಚಿಸಬೇಕಾದ ವಿಷಯ ಎಂದು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಉದ್ಧವ್, ಫೆಬ್ರುವರಿಯಲ್ಲಿ ಉಭಯ ಪಕ್ಷಗಳೂ ೫೦:೫೦ ಅಧಿಕಾರ ಹಂಚಿಕೆಯನ್ನು ಒಪ್ಪಿಕೊಂಡಿದ್ದವು ಎಂಬ ವಿಚಾರನ್ನು ನಿರ್ದಿಷ್ಟವಾಗಿ ನೆನಪಿಸಿದರು. ಆದರೆ ಹಲವಾರು ಬಾರಿ ಇದನ್ನೂ ನೆನಪಿಸಿದರೂ ಬಿಜೆಪಿ ತನ್ನ ವಚನವನ್ನು ಪಾಲಿಸದೆ ೧೬೪ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಶಿವಸೇನೆ ೧೨೪ ಅಭ್ಯರ್ಥಿಗಳನ್ನೂ ಮಾತ್ರ ಕಣಕ್ಕೆ ಇಳಿಸಿತ್ತು.

ಬಿಜೆಪಿಯು ೧೦೩ ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಉದಯಿಸಿದ್ದರೂ, ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನೆಯನ್ನು ಸರ್ಕಾರ ರಚನೆಗಾಗಿ ನೆಚ್ಚಿಕೊಳ್ಳಲೇಬೇಕಾಗಿದೆ. ಈ ಅವಕಾಶವನ್ನು ಠಾಕ್ರೆ ಅತ್ಯಂತ ಕ್ಷಿಪ್ರವಾಗಿ ಬಳಸಿಕೊಂಡಿದ್ದಾರೆ.

‘ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಅತ್ಯಂತ ಮಹತ್ವದ ಪ್ರಶ್ನೆ’ ಎಂದು ಉದ್ಧವ್ ಠಾಕ್ರೆ ಹೇಳಿದರು.

ಲೋಕಸಭಾ ಚುನಾವಣೆಗೆ ಮುನ್ನ ೫೦:೫೦ ಸೂತ್ರವನ್ನು ಒಪ್ಪಿಕೊಳ್ಳಲಾಗಿತ್ತು ಎಂಬುದು ನೆನಪಿರಲಿ. ಇದರ ಪ್ರಕಾರ ಸ್ಥಾನ ಹಂಚಿಕೆ ಸೂತ್ರ ೧೪೪:೧೪೪. ಬಿಜೆಪಿಯ ಚಂದ್ರಕಾಂತ ಪಾಟೀಲ್ ಅವರು ಶಿವಸೇನೆಯ ತನ್ನ ಸ್ಥಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಕೆಲವು ಸ್ಥಾನಗಳಿಗೆ ಒಪ್ಪಿಕೊಂಡಿದ್ದೆ. ಆದರೆ ಈಗ ಅವರು ಅಡಚಣೆಗಳನ್ನು ಎದುರಿಸಲು ಹೋಗುವುದಾದಲ್ಲಿ ನಾನು ಅವರನ್ನು ಅರ್ಥ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಏಕೆಂದರೆ ನನಗೆ ನನ್ನ ಪಕ್ಷವನ್ನು ಮುನ್ನಡೆಸಬೇಕಾಗಿದೆ ಎಂದು ಠಾಕ್ರೆ ನುಡಿದರು.

ಬಿಜೆಪಿಯ ಸ್ಥಾನ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಸೂತ್ರವನ್ನು ಪಕ್ಷವು ಒಪ್ಪಿಕೊಳ್ಳಬೇಕಾಗಿ ಬಂದ ಬಳಿಕ ೫೦:೫೦ ಸೂತ್ರದ ಬಗ್ಗೆ ಮಾತನಾಡುವುದನ್ನು ಸ್ಥಗಿತಗೊಳಿಸಿದ್ದ ಠಾಕ್ರೆ, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮತ್ತೆ ಮತ್ತೆ ಫೆಬ್ರುವರಿಯಲ್ಲಿ ಮಾತುಕತೆ ನಡೆಸಲಾಗಿದ್ದ ’ವ್ಯವಸ್ಥೆ’ ಬಗ್ಗೆ ಮಾತನಾಡಿದರು. ಮತ್ತು ತಮ್ಮ ಪಕ್ಷಕ್ಕೆ ಅಧಿಕ ಲಾಭ ಗಳಿಸಬೇಕೆಂಬುದು ತಮ್ಮ ಉದ್ದೇಶ ಎಂದು ಹೇಳಿದರು.

ಸರ್ಕಾರ ರಚನೆಗೆ ನನಗೆ ಅವಸರವಿಲ್ಲ ಎಂದೂ ಅವರು ಒತ್ತಿ ಹೇಳಿದರು.

‘ಈಗ ಫಲಿತಾಂಶಗಳು ಬಂದಿವೆ. ಶೀಘ್ರವೇ ನಾವು ಬಿಜೆಪಿಯ ದೆಹಲಿ ನಾಯಕರ ಜೊತೆ ಚರ್ಚೆಗೆ ಕೂರುತ್ತೇವೆ. ಅಮಿತ್ ಭಾಯಿ ಬರುತ್ತಾರೆ. ನಿರ್ಧರಿಸಲಾಗಿದ್ದ ಸೂತ್ರವನ್ನು ಆಧರಿಸಿ ನಾವು ಜನರ ಮುಂದೆ ಪಾರದರ್ಶಕವಾಗಿ ಹೋಗುತ್ತೇವೆ’ ಎಂಬುದಾಗಿ ಹೇಳುವ ಮೂಲಕ ಮಾತುಕತೆಗಳಿಗೆ ನಿಯಮಗಳ ಅಡಿಗಟ್ಟನ್ನು ಅವರು ಸಿದ್ಧ ಪಡಿಸಿದರು. ’ಯಾವುದನ್ನು ಒಪ್ಪಿದ್ದೇವೋ ಅದಕ್ಕೆ ಅಂಟಿಕೊಳ್ಳಬೇಕು’ ಎಂದೂ ಉದ್ಧವ್ ನುಡಿದರು.

ಸೇನಾ ನಾಯಕ ಈ ತಿಂಗಳ ಆದಿಯಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ’ಸೇನೆಯು ಮಹಾರಾಷ್ಟ್ರಕ್ಕಾಗಿ ಮೈತ್ರಿಯಲ್ಲಿ ರಾಜಿ ಮಾಡಿಕೊಂಡಿದೆ’ ಎಂದು ಹೇಳಿದ್ದರು.

‘ನಾವು ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದೇವೆ, ಏಕೆಂದರೆ (ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ) ಫಡ್ನಿವಿಸ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ತಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಕೋರಿದ್ದರು. ನಾನು ಅದನ್ನು ಪರಿಗಣಿಸಿದ್ದೆ’ ಎಂದು ಉದ್ಧವ್ ಸಂದರ್ಶನ ಒಂದರಲ್ಲಿ ತಿಳಿಸಿದ್ದರು.

ಮುಖ್ಯಮಂತ್ರಿ ಸ್ಥಾನವು ಚರ್ಚಾರ್ಹ ಅಲ್ಲ ಎಂಬುದಾಗಿ ಬಿಜೆಪಿ ನಾಯಕರು ಸೂಚಿಸಿದ್ದಾರೆ ಮತ್ತು ಸೇನಾ ಮುಖ್ಯಸ್ಥರು ಫೆಬ್ರುವರಿ ಸೂತ್ರದ ಪ್ರಕಾರ ಉಪಮುಖ್ಯಮಂತ್ರಿ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ.

ಶಿವಸೇನೆಯಲ್ಲಿ ಯಾರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದಾಗಿ ಉದ್ಧವ್ ಠಾಕ್ರೆ ಸ್ಪಷ್ಟ ಪಡಿಸಿಲ್ಲ. ಹೊಸದಾಗಿ ಚುನಾಯಿತರಾದ ಶಾಸಕರು ವಿಷಯವನ್ನು ಇತ್ಯರ್ಥ ಪಡಿಸುವರು ಎಂದು ಠಾಕ್ರೆ ಹೇಳಿದರು.

October 24, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , , , , | Leave a comment

ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ ಭಾರತ- ಪಾಕ್ ಸಹಿ

24 kartarpur corridar agreement signed
ನವದೆಹಲಿ:
ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್ ದೇವ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದ ಸ್ಥಳದಲ್ಲಿ ನಿರ್ಮಿಸಲಾದ ಗುರುದ್ವಾರವನ್ನು ಸಂದರ್ಶನಕ್ಕೆ  ಭಾರತೀಯ ಯಾತ್ರಾರ್ಥಿಗಳಿಗೆ ಅವಕಾಶ ನೀಡುವ ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ  ಭಾರತ ಮತ್ತು ಪಾಕಿಸ್ತಾನ 2019 ಅಕ್ಟೋಬರ್ 24ರ ಗುರುವಾರ ಗಡಿಯಲ್ಲಿನ ‘ಶೂನ್ಯ ರೇಖೆ’ ಯಲ್ಲಿ ಸಹಿ ಮಾಡಿದವು. ಉಭಯ ರಾಷ್ಟ್ರಗಳ  ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದಕ್ಕೆ ಸಹಿ ಹಾಕಲು ಅಕ್ಟೋಬರ್ ೨೩ ರ ದಿನಾಂಕವನ್ನು ಭಾರತವು ಸೋಮವಾರ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನದ ಕಡೆಯ “ಆಡಳಿತಾತ್ಮಕ ಸಮಸ್ಯೆಗಳ’ ಕಾರಣ ಈ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ವಹಿಸಿದ್ದರು.

“ಕರ್ತಾರಪುರ ಸಾಹಿಬ್  ತಲುಪಲು ಕರ್ತಾರಪುರ ಕಾರಿಡಾರ್ ತೆರೆಯುವ ಬಗೆಗಿನ ಐತಿಹಾಸಿಕ ಪಾಕಿಸ್ತಾನ- ಭಾರತ ಒಪ್ಪಂದಕ್ಕೆ ಸಹಿ ಹಾಕಲು  ತೆರಳುತ್ತಿರುವೆ.  ನವೆಂಬರ್ ೯ ರಂದು ಪಾಕಿಸ್ತಾನದ ನರೋವಾಲದಲ್ಲಿ  ಕರ್ತಾರಪುರ ಸಾಹಿಬ್ ಕಾರಿಡಾರನ್ನು ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ ”ಎಂದು ಶೂನ್ಯ ರೇಖೆಯತ್ತ ಹೊರಡುವ ಮುನ್ನ ಫೈಸಲ್ ಟ್ವೀಟ್ ಮಾಡಿದ್ದರು.

ಗುರುನಾನಕ್ ದೇವ್‌ಅವರ ೫೫೦ ನೇ ಜನ್ಮದಿನಾಚರಣೆಗೆ ಮುನ್ನ ಮುನ್ನ ಕಾರಿಡಾರ್ ಕಾರ್ಯಗತಕ್ಕಾಗಿ ಭಾರತ ಮತ್ತು ಪಾಕಿಸ್ತಾನ  ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಕಾರಿಡಾರ್ ಅನುಕೂಲಕರವಾಗಲಿದೆ. ೧೫೨೨ ರಲ್ಲಿ ಸಿಖ್ ಪಂಥದ  ಸಂಸ್ಥಾಪಕ ಗುರುನಾನಕ್ ದೇವ್‌ಅವರು ಸ್ಥಾಪಿಸಿದ ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಯಾತ್ರಿಕರು ಅನುಮತಿ ಪಡೆದರೆ ಸಾಕಾಗುತ್ತದೆ. ವೀಸಾದ ಅಗತ್ಯ ಬೀಳುವುದಿಲ್ಲ.

ಏನಿದು ಕಾರಿಡಾರ್?

ಪಂಜಾಬಿನ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ತಲುಪಲು ಸಿದ್ಧ ಪಡಿಸಲಾಗಿರುವ ನೂತನ ಪ್ರವೇಶ ಮಾರ್ಗವಾಗಿದೆ ಈ ಕರ್ತಾರಪುರ ಕಾರಿಡಾರ್.

ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ಧತೆಯ ಪರಿಣಾಮವಾಗಿ ಭಾರತೀಯ ಯಾತ್ರಾರ್ಥಿಗಳಿಗೆ ಈ ದರ್ಬಾರ್ ಸಾಹಿಬ್‌ಗೆ ಪ್ರವೇಶ ಪಡೆಯುವುದು ಈವರೆಗೆ ದುಸ್ತರವಾಗಿತ್ತು.

೧೯೪೭ರಲ್ಲಿ ಭಾರತವನ್ನು ಬಿಟಿಷರಿಂದ ವಿಭಜಿಸಲ್ಪಟ್ಟ ಪಂಜಾಬಿನಲ್ಲಿ ಸಿಖ್ ಪಂಥವು ಶತಕಗಳಷ್ಟು ಹಿಂದೆಯೇ ಜನ್ಮತಾಳಿತ್ತು. ೧೬ನೇ ಶತಮಾನದಲ್ಲಿ ಸಿಖ್ ಪಂಥದ ಸಂಸ್ಥಾಪಕ ಗುರು ನಾನಕ್ ದೇವ್ ಅವರು ನಿರ್ಮಿಸಿದ್ದು ಎಂಬುದಾಗಿ ನಂಬಲಾದ ಕರ್ತಾರಪುರದ ಈ ಗುರುದ್ವಾರವು ಭಾರತದ ಗಡಿಯಿಂದ ಸುಮಾರು ೪ ಕಿಮೀ ದೂರದಲ್ಲಿ (೨.೫ ಮೈಲು) ಪಾಕಿಸ್ತಾನದ ಭೂಪ್ರದೇಶದಲ್ಲಿದೆ.

ಈ ವಾರಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರಪುರ ಗುರುದ್ವಾರವು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಗುರುದ್ವಾರವಾಗಿದ್ದು, ತಮ್ಮ ರಾಷ್ಟ್ರವು ವಿಶ್ವಾದ್ಯಂತದ ಸಿಕ್ಖರಿಗೆ ಈ ಗುರುದ್ವಾರ ದರ್ಶನಕ್ಕೆ ತನ್ನ ದ್ವಾರಗಳನ್ನು ತೆರೆಯುತ್ತಿದೆ ಎಂದು ಹೇಳಿದ್ದರು.

ನವೆಂಬರ್ ೧೦ರಂದು ಸಾರ್ವಜನಿಕರಿಗೆ ಮುಕ್ತವಾಗಲಿರುವ ಕಾರಿಡಾರ್ ಭಾರತ-ಪಾಕ್ ಗಡಿಯಿಂದ ನೇರವಾಗಿ ಗುರುದ್ವಾರವನ್ನು ಸಂಪರ್ಕಿಸುತ್ತದೆ.

ಕಾರಿಡಾರ್‌ಗೆ ಸಂಬಂಧಿಸಿದ ವಿವರಗಳನ್ನು ಅಂತಿಮಗೊಳಿಸುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಒಂದು ವರ್ಷದ ಹಿಂದೆ ಪ್ರಕಟಿಸಿದ ಬಳಿಕ ಈ ಪ್ರಕ್ರಿಯೆ ಹಲವಾರು ಕಾರಣಗಳಿಂದಾಗಿ ಉದ್ದಕ್ಕೆ ಎಳೆಯಲ್ಪಟ್ಟಿತ್ತು.

ಕಾರಿಡಾರ್ ಬಗ್ಗೆ ನಮಗೇನು ಗೊತ್ತಿದೆ?

ಕಾರಿಡಾರ್ ಪ್ರಸ್ತುತ ನಿರ್ಮಾಣದ ಕೊನೆಯ ಹಂತದಲ್ಲಿದ್ದು ನವೆಂಬರ್ ಆರಂಭದಲ್ಲಿ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

ನೂರಾರು ಮಂದಿ ಕಾರ್ಮಿಕರು ಈಗಲೂ  ೪೨ ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಗುರುದ್ವಾರ ಮತ್ತು ಅದರ ವಿಸ್ತರಣಾ ಕಾರ್‍ಯಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್‍ಯದಲ್ಲಿ ಮಗ್ನರಾಗಿದ್ದಾರೆ.

ಸಂದರ್ಶಕರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಗಡಿ ಮತ್ತು ಗುರುದ್ವಾರದ ಮಧ್ಯೆ ಹರಿಯುವ ರಾವಿ ನದಿಗೆ ಅಡ್ಡಲಾಗಿ ಒಂದು ಸೇತುವೆ ನಿರ್ಮಾಣ ಕೂಡಾ ಈ ಕಾರಿಡಾರ್ ಯೋಜನೆಯಲ್ಲಿ ಸೇರಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದ ಬಳಿಕ ಗುರುದ್ವಾರದ ಸುತ್ತ ಮುತ್ತ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಕಾಮಗಾರಿಗಳೂ ಆರಂಭಗೊಂಡಿದ್ದವು.

ಗುರುದ್ವಾರದ ವಿಸ್ತರಣೆ, ನೂತನ ಸವಲತ್ತುಗಳ ಪಟ್ಟಿಯಲ್ಲಿ ನೂತನ ಪ್ರಾಂಗಣ, ವಸ್ತುಸಂಗ್ರಹಾಲಯ, ಗ್ರಂಥಾಲಯ, ವಸತಿ ನಿಲಯಗಳು (ಡಾರ್ಮೆಟ್ರಿಗಳು), ಲಾಕರ್ ಕೊಠಡಿಗಳು, ವಲಸೆ ಕೇಂದ್ರ ಮತ್ತು ಪ್ರವಾಹದ ಸಂದರ್ಭದಲ್ಲಿ ಗುರುದ್ವಾರ ರಕ್ಷಣೆಗಾಗಿ ಒಂದು ಒಡ್ಡು ನಿರ್ಮಾಣ ಕೂಡಾ ಸೇರಿವೆ.

ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಕಾರಿಡಾರ್ ಮೂಲಕ ತೆರಳಲು ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಅಥವಾ ವೀಸಾದ ಅಗತ್ಯವಿಲ್ಲ, ಆದರೆ ಅಲ್ಲಿಗೆ ಹೋಗುವುದಕ್ಕೆ ಮುನ್ನ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ಪ್ರಕ್ರಿಯೆಯ ಪೂರ್ಣ ಮಾಹಿತಿಗಳನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ, ಆದರೆ ಪ್ರವಾಸಿಗರು ಅನುಮತಿಗಾಗಿ ಅಂತರ್ಜಾಲದ (ಆನ್ ಲೈನ್) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ, ಮತ್ತು ಅದಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಸರ್ಕಾರಗಳು ಮಂಜೂರಾತಿ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

೧೯೯೮ರಿಂದಲೇ ಮಾತುಕತೆ

ಭಾರತದಲ್ಲಿನ ಸಿಖ್ ಸಮುದಾಯವು ಕಾರಿಡಾರ್ ಮೂಲಕ ಗುರುದ್ವಾರ ಸಂದರ್ಶನಕ್ಕೆ ವ್ಯವಸ್ಥೆ ಬೇಕು ಎಂದು ದೀರ್ಘ ಕಾಲದ ಹಿಂದೆಯೇ ಬೇಡಿಕೆ ಇಟ್ಟಿತ್ತು. ಗುರುದ್ವಾರಕ್ಕೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಭಾರತದ ಹಿಂದಿನ ಸರ್ಕಾರಗಳು ಪ್ರಾಥಮಿಕ ಮಾತುಕತೆಗಳನ್ನೂ ಆರಂಭಿಸಿದ್ದವು.

೧೯೯೮ರಲ್ಲಿ ಈ ನಿಟ್ಟಿನ ಮೊದಲ ಮಾತುಕತೆ ನಡೆದಿತ್ತು. ಬಳಿಕ ೨೦೦೪ರಲ್ಲಿ ಮತ್ತು ೨೦೦೮ರಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಈ ಮಾತುಕತೆಗಳಿಂದ ಸ್ಪಷ್ಟವಾದ ತೀರ್ಮಾನ ಸಾಧ್ಯವಾಗಿರಲಿಲ್ಲ.

ವಿಭಜನೆಯ ಬಳಿಕ ಭಾರತೀಯರಿಗೆ ಗುರುದ್ವಾರಕ್ಕೆ ಸೀಮಿತ ಪ್ರವೇಶದ ಅವಕಾಶವಿತ್ತು. ಭೇಟಿಗೆ ವೀಸಾ ಪಡೆಯುವುದೇ ದೊಡ್ಡ ಹೋರಾಟವಾಗುತ್ತಿತ್ತು.

ಕರ್ತಾರಪುರದಲ್ಲಿ ಪ್ರಸ್ತುತ ಇರುವ ಗುರುದ್ವಾರವನ್ನು ಮೂಲ ಗುರುದ್ವಾರವು ಪ್ರವಾಹದಲ್ಲಿ ನಾಶವಾದ ಬಳಿಕ ೧೯೨೫ರಲ್ಲಿ ನಿರ್ಮಿಸಲಾಗಿತ್ತು. ಬಳಿಕ ಪಾಕಿಸ್ತಾನಿ ಸರ್ಕಾರವು ೨೦೦೪ರಲ್ಲಿ ಅದನ್ನು ಪುನರ್ ನಿರ್ಮಿಸಿತ್ತು.

ಗುರುನಾನಕ್ ಅವರು ತಮ್ಮ ಜೀವನದ ಕೊನೆಯ ೧೮ ವರ್ಷಗಳನ್ನು ಕಳೆದುದರ ನೆನಪಿಗಾಗಿ ಇಲ್ಲಿ ಗುರುದ್ವಾರವನ್ನು ನಿರ್ಮಿಸಲಾಗಿತ್ತು.

ಗುರು ನಾನಕ್ ದೇವ್ ಅವರ ಜನ್ಮಸ್ಥಾನದ ಬಳಿಕ ಪಾಕಿಸ್ತಾನದಲ್ಲಿನ ಈ ಗುರುದ್ವಾರವು ಸಿಕ್ಖರ ಪಾಲಿನ ಎರಡನೇ ಪವಿತ್ರ ಸ್ಥಳ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

October 24, 2019 Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು, World | , , , , , , , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ