SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ ಭಾರತ- ಪಾಕ್ ಸಹಿ


24 kartarpur corridar agreement signed
ನವದೆಹಲಿ:
ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್ ದೇವ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದ ಸ್ಥಳದಲ್ಲಿ ನಿರ್ಮಿಸಲಾದ ಗುರುದ್ವಾರವನ್ನು ಸಂದರ್ಶನಕ್ಕೆ  ಭಾರತೀಯ ಯಾತ್ರಾರ್ಥಿಗಳಿಗೆ ಅವಕಾಶ ನೀಡುವ ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ  ಭಾರತ ಮತ್ತು ಪಾಕಿಸ್ತಾನ 2019 ಅಕ್ಟೋಬರ್ 24ರ ಗುರುವಾರ ಗಡಿಯಲ್ಲಿನ ‘ಶೂನ್ಯ ರೇಖೆ’ ಯಲ್ಲಿ ಸಹಿ ಮಾಡಿದವು. ಉಭಯ ರಾಷ್ಟ್ರಗಳ  ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದಕ್ಕೆ ಸಹಿ ಹಾಕಲು ಅಕ್ಟೋಬರ್ ೨೩ ರ ದಿನಾಂಕವನ್ನು ಭಾರತವು ಸೋಮವಾರ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನದ ಕಡೆಯ “ಆಡಳಿತಾತ್ಮಕ ಸಮಸ್ಯೆಗಳ’ ಕಾರಣ ಈ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ವಹಿಸಿದ್ದರು.

“ಕರ್ತಾರಪುರ ಸಾಹಿಬ್  ತಲುಪಲು ಕರ್ತಾರಪುರ ಕಾರಿಡಾರ್ ತೆರೆಯುವ ಬಗೆಗಿನ ಐತಿಹಾಸಿಕ ಪಾಕಿಸ್ತಾನ- ಭಾರತ ಒಪ್ಪಂದಕ್ಕೆ ಸಹಿ ಹಾಕಲು  ತೆರಳುತ್ತಿರುವೆ.  ನವೆಂಬರ್ ೯ ರಂದು ಪಾಕಿಸ್ತಾನದ ನರೋವಾಲದಲ್ಲಿ  ಕರ್ತಾರಪುರ ಸಾಹಿಬ್ ಕಾರಿಡಾರನ್ನು ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ ”ಎಂದು ಶೂನ್ಯ ರೇಖೆಯತ್ತ ಹೊರಡುವ ಮುನ್ನ ಫೈಸಲ್ ಟ್ವೀಟ್ ಮಾಡಿದ್ದರು.

ಗುರುನಾನಕ್ ದೇವ್‌ಅವರ ೫೫೦ ನೇ ಜನ್ಮದಿನಾಚರಣೆಗೆ ಮುನ್ನ ಮುನ್ನ ಕಾರಿಡಾರ್ ಕಾರ್ಯಗತಕ್ಕಾಗಿ ಭಾರತ ಮತ್ತು ಪಾಕಿಸ್ತಾನ  ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಕಾರಿಡಾರ್ ಅನುಕೂಲಕರವಾಗಲಿದೆ. ೧೫೨೨ ರಲ್ಲಿ ಸಿಖ್ ಪಂಥದ  ಸಂಸ್ಥಾಪಕ ಗುರುನಾನಕ್ ದೇವ್‌ಅವರು ಸ್ಥಾಪಿಸಿದ ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಯಾತ್ರಿಕರು ಅನುಮತಿ ಪಡೆದರೆ ಸಾಕಾಗುತ್ತದೆ. ವೀಸಾದ ಅಗತ್ಯ ಬೀಳುವುದಿಲ್ಲ.

ಏನಿದು ಕಾರಿಡಾರ್?

ಪಂಜಾಬಿನ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ತಲುಪಲು ಸಿದ್ಧ ಪಡಿಸಲಾಗಿರುವ ನೂತನ ಪ್ರವೇಶ ಮಾರ್ಗವಾಗಿದೆ ಈ ಕರ್ತಾರಪುರ ಕಾರಿಡಾರ್.

ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ಧತೆಯ ಪರಿಣಾಮವಾಗಿ ಭಾರತೀಯ ಯಾತ್ರಾರ್ಥಿಗಳಿಗೆ ಈ ದರ್ಬಾರ್ ಸಾಹಿಬ್‌ಗೆ ಪ್ರವೇಶ ಪಡೆಯುವುದು ಈವರೆಗೆ ದುಸ್ತರವಾಗಿತ್ತು.

೧೯೪೭ರಲ್ಲಿ ಭಾರತವನ್ನು ಬಿಟಿಷರಿಂದ ವಿಭಜಿಸಲ್ಪಟ್ಟ ಪಂಜಾಬಿನಲ್ಲಿ ಸಿಖ್ ಪಂಥವು ಶತಕಗಳಷ್ಟು ಹಿಂದೆಯೇ ಜನ್ಮತಾಳಿತ್ತು. ೧೬ನೇ ಶತಮಾನದಲ್ಲಿ ಸಿಖ್ ಪಂಥದ ಸಂಸ್ಥಾಪಕ ಗುರು ನಾನಕ್ ದೇವ್ ಅವರು ನಿರ್ಮಿಸಿದ್ದು ಎಂಬುದಾಗಿ ನಂಬಲಾದ ಕರ್ತಾರಪುರದ ಈ ಗುರುದ್ವಾರವು ಭಾರತದ ಗಡಿಯಿಂದ ಸುಮಾರು ೪ ಕಿಮೀ ದೂರದಲ್ಲಿ (೨.೫ ಮೈಲು) ಪಾಕಿಸ್ತಾನದ ಭೂಪ್ರದೇಶದಲ್ಲಿದೆ.

ಈ ವಾರಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರಪುರ ಗುರುದ್ವಾರವು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಗುರುದ್ವಾರವಾಗಿದ್ದು, ತಮ್ಮ ರಾಷ್ಟ್ರವು ವಿಶ್ವಾದ್ಯಂತದ ಸಿಕ್ಖರಿಗೆ ಈ ಗುರುದ್ವಾರ ದರ್ಶನಕ್ಕೆ ತನ್ನ ದ್ವಾರಗಳನ್ನು ತೆರೆಯುತ್ತಿದೆ ಎಂದು ಹೇಳಿದ್ದರು.

ನವೆಂಬರ್ ೧೦ರಂದು ಸಾರ್ವಜನಿಕರಿಗೆ ಮುಕ್ತವಾಗಲಿರುವ ಕಾರಿಡಾರ್ ಭಾರತ-ಪಾಕ್ ಗಡಿಯಿಂದ ನೇರವಾಗಿ ಗುರುದ್ವಾರವನ್ನು ಸಂಪರ್ಕಿಸುತ್ತದೆ.

ಕಾರಿಡಾರ್‌ಗೆ ಸಂಬಂಧಿಸಿದ ವಿವರಗಳನ್ನು ಅಂತಿಮಗೊಳಿಸುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಒಂದು ವರ್ಷದ ಹಿಂದೆ ಪ್ರಕಟಿಸಿದ ಬಳಿಕ ಈ ಪ್ರಕ್ರಿಯೆ ಹಲವಾರು ಕಾರಣಗಳಿಂದಾಗಿ ಉದ್ದಕ್ಕೆ ಎಳೆಯಲ್ಪಟ್ಟಿತ್ತು.

ಕಾರಿಡಾರ್ ಬಗ್ಗೆ ನಮಗೇನು ಗೊತ್ತಿದೆ?

ಕಾರಿಡಾರ್ ಪ್ರಸ್ತುತ ನಿರ್ಮಾಣದ ಕೊನೆಯ ಹಂತದಲ್ಲಿದ್ದು ನವೆಂಬರ್ ಆರಂಭದಲ್ಲಿ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

ನೂರಾರು ಮಂದಿ ಕಾರ್ಮಿಕರು ಈಗಲೂ  ೪೨ ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಗುರುದ್ವಾರ ಮತ್ತು ಅದರ ವಿಸ್ತರಣಾ ಕಾರ್‍ಯಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್‍ಯದಲ್ಲಿ ಮಗ್ನರಾಗಿದ್ದಾರೆ.

ಸಂದರ್ಶಕರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಗಡಿ ಮತ್ತು ಗುರುದ್ವಾರದ ಮಧ್ಯೆ ಹರಿಯುವ ರಾವಿ ನದಿಗೆ ಅಡ್ಡಲಾಗಿ ಒಂದು ಸೇತುವೆ ನಿರ್ಮಾಣ ಕೂಡಾ ಈ ಕಾರಿಡಾರ್ ಯೋಜನೆಯಲ್ಲಿ ಸೇರಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದ ಬಳಿಕ ಗುರುದ್ವಾರದ ಸುತ್ತ ಮುತ್ತ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಕಾಮಗಾರಿಗಳೂ ಆರಂಭಗೊಂಡಿದ್ದವು.

ಗುರುದ್ವಾರದ ವಿಸ್ತರಣೆ, ನೂತನ ಸವಲತ್ತುಗಳ ಪಟ್ಟಿಯಲ್ಲಿ ನೂತನ ಪ್ರಾಂಗಣ, ವಸ್ತುಸಂಗ್ರಹಾಲಯ, ಗ್ರಂಥಾಲಯ, ವಸತಿ ನಿಲಯಗಳು (ಡಾರ್ಮೆಟ್ರಿಗಳು), ಲಾಕರ್ ಕೊಠಡಿಗಳು, ವಲಸೆ ಕೇಂದ್ರ ಮತ್ತು ಪ್ರವಾಹದ ಸಂದರ್ಭದಲ್ಲಿ ಗುರುದ್ವಾರ ರಕ್ಷಣೆಗಾಗಿ ಒಂದು ಒಡ್ಡು ನಿರ್ಮಾಣ ಕೂಡಾ ಸೇರಿವೆ.

ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಕಾರಿಡಾರ್ ಮೂಲಕ ತೆರಳಲು ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಅಥವಾ ವೀಸಾದ ಅಗತ್ಯವಿಲ್ಲ, ಆದರೆ ಅಲ್ಲಿಗೆ ಹೋಗುವುದಕ್ಕೆ ಮುನ್ನ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ಪ್ರಕ್ರಿಯೆಯ ಪೂರ್ಣ ಮಾಹಿತಿಗಳನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ, ಆದರೆ ಪ್ರವಾಸಿಗರು ಅನುಮತಿಗಾಗಿ ಅಂತರ್ಜಾಲದ (ಆನ್ ಲೈನ್) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ, ಮತ್ತು ಅದಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಸರ್ಕಾರಗಳು ಮಂಜೂರಾತಿ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

೧೯೯೮ರಿಂದಲೇ ಮಾತುಕತೆ

ಭಾರತದಲ್ಲಿನ ಸಿಖ್ ಸಮುದಾಯವು ಕಾರಿಡಾರ್ ಮೂಲಕ ಗುರುದ್ವಾರ ಸಂದರ್ಶನಕ್ಕೆ ವ್ಯವಸ್ಥೆ ಬೇಕು ಎಂದು ದೀರ್ಘ ಕಾಲದ ಹಿಂದೆಯೇ ಬೇಡಿಕೆ ಇಟ್ಟಿತ್ತು. ಗುರುದ್ವಾರಕ್ಕೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಭಾರತದ ಹಿಂದಿನ ಸರ್ಕಾರಗಳು ಪ್ರಾಥಮಿಕ ಮಾತುಕತೆಗಳನ್ನೂ ಆರಂಭಿಸಿದ್ದವು.

೧೯೯೮ರಲ್ಲಿ ಈ ನಿಟ್ಟಿನ ಮೊದಲ ಮಾತುಕತೆ ನಡೆದಿತ್ತು. ಬಳಿಕ ೨೦೦೪ರಲ್ಲಿ ಮತ್ತು ೨೦೦೮ರಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಈ ಮಾತುಕತೆಗಳಿಂದ ಸ್ಪಷ್ಟವಾದ ತೀರ್ಮಾನ ಸಾಧ್ಯವಾಗಿರಲಿಲ್ಲ.

ವಿಭಜನೆಯ ಬಳಿಕ ಭಾರತೀಯರಿಗೆ ಗುರುದ್ವಾರಕ್ಕೆ ಸೀಮಿತ ಪ್ರವೇಶದ ಅವಕಾಶವಿತ್ತು. ಭೇಟಿಗೆ ವೀಸಾ ಪಡೆಯುವುದೇ ದೊಡ್ಡ ಹೋರಾಟವಾಗುತ್ತಿತ್ತು.

ಕರ್ತಾರಪುರದಲ್ಲಿ ಪ್ರಸ್ತುತ ಇರುವ ಗುರುದ್ವಾರವನ್ನು ಮೂಲ ಗುರುದ್ವಾರವು ಪ್ರವಾಹದಲ್ಲಿ ನಾಶವಾದ ಬಳಿಕ ೧೯೨೫ರಲ್ಲಿ ನಿರ್ಮಿಸಲಾಗಿತ್ತು. ಬಳಿಕ ಪಾಕಿಸ್ತಾನಿ ಸರ್ಕಾರವು ೨೦೦೪ರಲ್ಲಿ ಅದನ್ನು ಪುನರ್ ನಿರ್ಮಿಸಿತ್ತು.

ಗುರುನಾನಕ್ ಅವರು ತಮ್ಮ ಜೀವನದ ಕೊನೆಯ ೧೮ ವರ್ಷಗಳನ್ನು ಕಳೆದುದರ ನೆನಪಿಗಾಗಿ ಇಲ್ಲಿ ಗುರುದ್ವಾರವನ್ನು ನಿರ್ಮಿಸಲಾಗಿತ್ತು.

ಗುರು ನಾನಕ್ ದೇವ್ ಅವರ ಜನ್ಮಸ್ಥಾನದ ಬಳಿಕ ಪಾಕಿಸ್ತಾನದಲ್ಲಿನ ಈ ಗುರುದ್ವಾರವು ಸಿಕ್ಖರ ಪಾಲಿನ ಎರಡನೇ ಪವಿತ್ರ ಸ್ಥಳ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

October 24, 2019 - Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು, World | , , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ