SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಈ ವರ್ಷದ ದೀಪಾವಳಿಗೆ ರಾಕೆಟ್ ಅಥವಾ ಬಾಂಬ್ ಇಲ್ಲ, ೨ ಪಟಾಕಿ ಮಾತ್ರ….!


22 Diwali
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕಟ್ಟು ನಿಟ್ಟಿನ ನಿಷೇಧ

ನವದೆಹಲಿ: ಎರಡು ಮಾದರಿಯ ಪಟಾಕಿಗಳು ಮಾತ್ರವೇ ಕಾನೂನುಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸುವುದರೊಂದಿಗೆ ಪ್ರಸ್ತುತ ವರ್ಷದ ದೀಪಾವಳಿ ಸದ್ದು ಗದ್ದಲವಿಲ್ಲದೆ ದೀಪಾವಳಿಯಾಗಲಿದೆ. ’ಅನರ್’ ಮತ್ತು ಫುಲ್ಜಾರಿ’ಗಳ ಹಸಿರು ಆವೃತ್ತಿ ಮಾತ್ರವೇ ಕಾನೂನು ಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸಿರುವುದರಿಂದ ಇವೆರಡೂ ಪಟಾಕಿಗಳೂ ಈ ಬಾರಿ ಸದ್ದು ಮಾಡದೆ ’ಮೌನ’ ಆಗಲಿವೆ. ಉಳಿದ ರಾಕೆಟ್‌ಗಳು, ಬಾಂಬುಗಳು ಮತ್ತು ಸದ್ದು ಮಾಡುವ ಇತರ ಎಲ್ಲ  ಪಟಾಕಿಗಳೂ ಈ ಬಾರಿ ನಿಷೇಧಕ್ಕೆ ಒಳಗಾದವು..

ಈ ವಿಚಾರವನ್ನು ದೆಹಲಿಯಲ್ಲಿ 2019 ಅಕ್ಟೋಬರ್ 22ರ ಮಂಗಳವಾರ ಸ್ಪಷ್ಟ ಪಡಿಸಿರುವ ಪೊಲೀಸರು ’ಪಟಾಕಿ ಖರೀದಿಗೆ ಮುನ್ನ ಪ್ರತಿಯೊಬ್ಬರೂ ಅಧಿಕೃತ ಮುದ್ರೆಯನ್ನು ಗಮನಿಸಿಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.

ಅಧಿಕೃತ ಮುದ್ರೆಯು ಕ್ಯೂಆರ್ ಕೋಡ್‌ನ್ನು (ಸ್ಪೆಷಲ್ ಕ್ವಿಕ್ ರೆಸ್ಪಾನ್ಸ್  ಕೋಡ್) ಅಥವಾ ಹಸಿರು ಲಾಂಛನವನ್ನು ಹೊಂದಿರುತ್ತದೆ. ೫೦ ’ಫುಲ್ಜಾರಿಗಳು’ ಅಥವಾ ಐದು ’ಅನರ್’ಗಳು ಇರುವ ಒಂದು ಪೊಟ್ಟಣಕ್ಕೆ ೨೫೦ ರೂಪಾಯಿ ಬೆಲೆ ಇರುತ್ತದೆ. ಇವು ಎರಡು ಬಣ್ಣಗಳಲ್ಲಿ ಬರುತ್ತವೆ.

‘ಹಸಿರು ಪಟಾಕಿಗಳಿಗೆ (ಪರಿಸರ ಮಿತ್ರ ಪಟಾಕಿಗಳು) ಮಾತ್ರವೇ ಅನುಮತಿ ನೀಡಲಾಗಿದೆ. ಇವುಗಳನ್ನು ಮಾರುವ ಮಾರಾಟಗಾರರ ತಪಾಸಣೆಗೆ ನಾವು ತಂಡಗಳನ್ನು ರಚಿಸಿದ್ದೇವೆ. ಯಾರಾದರೂ ಬೇರೆ ಮಾದರಿಯ ಪಟಾಕಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ದೆಹಲಿ ಪೊಲೀಸರ ವಕ್ತಾರ ಎಂಎಸ್ ರಾಂಧವ ಹೇಳಿದರು.

ಹಸಿರು ಪಟಾಕಿಗಳು ಎಂಬುದಾಗಿ ಕರೆಯಲಾಗಿರುವ ಈ ಪಟಾಕಿಗಳು ಶೇಕಡಾ ೩೦ರಷ್ಟು ಕಡಿಮೆ ವಾಯುಮಾಲಿನ್ಯ ಉಂಟು ಮಾಡುತ್ತವೆ ಎಂದು ಸರ್ಕಾರವು ಪ್ರತಿಪಾದಿಸಿದೆ. ಚಳಿಗಾಲ ಬರುತ್ತಿರುವಂತೆಯೇ ದೆಹಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ.

ಕಳೆದ ಒಂದು ವಾರದಲ್ಲಿ ದೆಹಲಿಯಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಕ್ಷೀಣಿಸಿತ್ತು. ಗಾಳಿಯ ದಿಕ್ಕು ವಾಯವ್ಯದ ಕಡೆಗೆ ತಿರುಗುವುದರೊಂದಿಗೆ ನೆರೆಯ ರಾಜ್ಯಗಳ ಸುಡುವ ಕಳೆಯ ಹೊಗೆ ರಾಜಧಾನಿಯತ್ತ ಬರಲು ಆರಂಭವಾಗಿತ್ತು..

‘ಹಸಿರು ಪಟಾಕಿಗಳನ್ನು ಕಳೆದ ವರ್ಷವೇ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ದೀಪಾವಳಿಗೆ ಮುನ್ನ ಸಾಕಾಗುವಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗಿರಲಿಲ್ಲ’ ಎಂದು ಸರ್ಕಾರಿ ಮೂಲಗಳು ತಿಳಿಸಿದವು.

ಈ ಪಟಾಕಿಗಳು ಶೇಕಡಾ ೨೫ರಿಂದ ೩೦ರಷ್ಟು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ. ಹಾಗೆಯೇ ಶೇಕಡಾ ೫೦ರಷ್ಟು ಕಡಿಮೆ ಸಲ್ಫರ್ ಡೈಯಾಕ್ಸೈಡ್ ಬಿಡುಗಡೆ ಮಾಡುತ್ತವೆ ಎಂದು ಆಗ ಪರಿಸರ ಖಾತೆಯನ್ನು ಹೊಂದಿದ್ದ ಕೇಂದ್ರ ಸಚಿವ ಹರ್ಷವರ್ಧನ್ ಹೇಳಿದ್ದರು.

ಮಾಲಿನ್ಯ ಮಟ್ಟವನ್ನು ಅತ್ಯಂತ ಕಡಿಮೆಗೊಳಿಸುವ ಪಟಾಕಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಟಾಕಿಗಳಿಗೂ ಅವಕಾಶ ನೀಡಲಾಗುವುದಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಕಳೆದ ವರ್ಷ ಕಟ್ಟುನಿಟ್ಟಿನ ಆದೇಶ ನೀಡಿದ ಬಳಿಕ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಈ ಹಸಿರು ಪಟಾಕಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.

ಪಟಾಕಿಗಳನ್ನು ದೇಶಾದ್ಯಂತ ನಿಷೇಧಿಸುವಂತೆ ಸಲ್ಲಿಕೆಯಾದ ಹಲವಾರು ಅರ್ಜಿಗಳ ವಿಚಾರಣೆಯ ಬಳಿಕ ಸುಪ್ರೀಂಕೋರ್ಟ್ ಪಟಾಕಿ ನಿಷೇಧದ ಈ ಆದೇಶವನ್ನು ಹೊರಡಿಸಿತ್ತು.

೨೦೧೬ರಲ್ಲಿ ಮೂವರು ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಿತ್ತು.

೨೦೧೭ರ ಸೆಪ್ಟೆಂಬರಿನಲ್ಲಿ ನ್ಯಾಯಾಲಯವು ತಾತ್ಕಾಲಿಕವಾಗಿ ನಿಷೇಧವನ್ನು ಅಮಾನತು ಗೊಳಿಸಿದರೂ, ಒಂದು ತಿಂಗಳ ಬಳಿಕ ಪಟಾಕಿಗಳನ್ನು ನಿಷೇಧಿಸಿ ಕಟ್ಟು ನಿಟ್ಟಿನ ಆದೇಶ ನೀಡಿತ್ತು.

ರಾಜಧಾನಿ ದೆಹಲಿಯಲ್ಲಂತೂ ಸುಪ್ರೀಂಕೋರ್ಟ್ ಆದೇಶ ಈ ಬಾರಿ ಕಟ್ಟು ನಿಟ್ಟಾಗಿ ಜಾರಿಯಾಗಲಿದೆ ಎಂದು ಪೊಲೀಸರು ಸ್ಪಷ್ಟ ಪಡಿಸಿದರು.

October 22, 2019 - Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Entertrainment, Festival, Flash News, General Knowledge, Health, India, Nation, News, Spardha, supreme court | , , , , , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ