SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

೫.೪ ಲಕ್ಷ ಹಣತೆಗಳ ಬೆಳಕಿನಲ್ಲಿ ಅಯೋಧ್ಯೆ ಝಗಮಗ, ಹೊಸ ವಿಶ್ವದಾಖಲೆ ಸೃಷ್ಟಿ

This slideshow requires JavaScript.

ದೀಪೋತ್ಸವಕ್ಕೆ ಸಾಕ್ಷಿಯಾದ ಸಿಎಂ ಯೋಗಿ ಆದಿತ್ಯನಾಥ್

ನವದೆಹಲಿ/ ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿನ ’ರಾಮ್ ಕಿ ಪೈದಿ’2019 ಅಕ್ಟೋಬರ್ 26ರ  ಶನಿವಾರ ಬೆಳಕಿನ ಹಬ್ಬವಾದ ’ದೀಪೋತ್ಸವ’ದಲ್ಲಿ ೫ ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳ ದೀಪಗಳ ಬೆಳಕಿನಲ್ಲಿ ಝಗಮಗಿಸಿತು. ಇದರೊಂದಿಗೆ ಹೊಸ ವಿಶ್ವದಾಖಲೆಯೂ ಸೃಷ್ಟಿಯಾಯಿತು.

ರಾಜ್ಯದ ಬಿಜೆಪಿ ಸರ್ಕಾರವು ಆಯೋಜಿಸಿದ ದೀಪೋತ್ಸವದ ಅಂಗವಾಗಿ ಅಯೋಧ್ಯೆಯನ್ನು ಝಗಮಗಿಸುವಂತೆ ಮಾಡಿದ ಈ ಸಂಭ್ರಮಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಕ್ಷಿಯಾದರು.

ಈ ವರ್ಷದ ದೀಪೋತ್ಸವದಲ್ಲಿ ಫಿಜಿಯ ಸಚಿವೆ ವೀಣಾ ಭಟ್ನಾಗರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮೊದಲ ಹಣತೆಯನ್ನು ಬೆಳಗಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ರಾಜ್ಯ ಸರ್ಕಾರದ ಹಲವಾರು ಸಚಿವರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಲಕ್ಷ ದೀಪೋತ್ಸವ’ವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ರಾಮ್ ಕಿ ಪೈದಿಯಲ್ಲಿ ಜಮಾಯಿಸಿದ್ದರು.

ಭಾರತೀಯ ಮೂಲದವರಾದ ಫಿಜಿಯ ಮಹಿಳೆಯರು, ಮಕ್ಕಳು ಮತ್ತು ದಾರಿದ್ರ್ಯ ನಿವಾರಣಾ ಸಹಾಯಕ ಸಚಿವೆ ವೀಣಾ ಭಟ್ನಾಗರ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶುಕ್ರವಾರ ಸಂಜೆಯೇ ಲಕ್ನೋ ತಲುಪಿದ್ದರು. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದರು.

೨೦೧೭ರ ಮಾರ್ಚ್ ತಿಂಗಳಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದ ೭ ತಿಂಗಳ ಬಳಿಕ, ಯೋಗಿ ಆದಿತ್ಯನಾಥ್ ಸರ್ಕಾರವು ೨೦೧೭ರ ಅಕ್ಟೋಬರಿನಲ್ಲಿ ಮೊತ್ತ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಆಚರಿಸಿತ್ತು. ಕಳೆದ ವರ್ಷವೂ ದೀಪೋತ್ಸವ ನಡೆದಿತ್ತು. ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜುಂಗ್-ಸೂಕ್ ಅವರು ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಳೆದ ವರ್ಷ ೩೦೦,೧೫೨ ಹಣತೆಗಳನ್ನು ಬೆಳಗುವ ಮೂಲಕ ವಿಶ್ವದಾಖಲೆ ಸ್ಥಾಪಿಸಲಾಗಿತ್ತು. ಈ ವರ್ಷ ಈ ದಾಖಲೆಯನ್ನು ಮುರಿದು ಹೊಸ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸುವ ಸಲುವಾಗಿ ಜಿಲ್ಲಾ ಆಡಳಿತವು ೫,೫೧,೦೦೦ ಮಣ್ಣಿನ ಹಣತೆಗಳನ್ನು ಬೆಳಗುವ ಕಾರ್‍ಯಕ್ರಮ ಹಮ್ಮಿಕೊಂಡಿತ್ತು.

ಯೋಜನೆಯ ಪ್ರಕಾರ ರಾಮ್ ಕಿ ಪೈದಿಯಲ್ಲಿ ಸುಮಾರು ೪ ಲಕ್ಷ ಮತ್ತು ದೇಗುಲ ನಗರಿಯ ಇತರ ಕಡೆಗಳಲ್ಲಿ ಉಳಿದ ಹಣತೆಗಳನ್ನು ಬೆಳಗಲಾಯಿತು.

ದೀಪೋತ್ಸವವನ್ನು ದಾಖಲಿಸಿಕೊಳ್ಳಲು ಗಿನ್ನೆಸ್ ವಿಶ್ವದಾಖಲೆಯ ತಂಡವೊಂದು ಕೂಡಾ ಅಯೋಧ್ಯೆಗೆ ಆಗಮಿಸಿತ್ತು.

ಹಣತೆಗಳನ್ನು ಬೆಳಗುವುದಕ್ಕೆ ಮುನ್ನ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಶ್ರೀರಾಮನ ಟ್ಯಾಬ್ಲೋ ಮೆರವಣಿಗೆಯನ್ನೂ ನಡೆಸಲಾಯಿತು.

ಮಧ್ಯಪ್ರದೇಶ, ಜಾರ್ಖಂಡ್ ಮತ್ತು ರಾಜಸ್ಥಾನದಂತಹ ವಿವಿಧ ರಾಜ್ಯಗಳ ಕಲಾವಿದರು ದೀಪೋತ್ಸವಕ್ಕಾಗಿ ಶ್ರೀರಾಮ, ಶ್ರೀಕೃಷ್ಣ ಮತ್ತು ಹನುಮಾನ್ ವೇಷಗಳನ್ನು ಧರಿಸಿ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳ ಮೂಲಕ ಸಂಭ್ರಮಕ್ಕೆ ಕಳೆಗಟ್ಟಿದರು.

‘ಇಲ್ಲಿಗೆ ಬಂದಿರುವುದಕ್ಕೆ ಅತ್ಯಂತ ಖುಷಿಯಾಗುತ್ತಿದೆ. ಇದೊಂದು ಮಹಾನ್ ಅನುಭವ. ನಮಗೆ ಇಲ್ಲಿ ಹಲವಾರು ಮಂದಿಯನ್ನು ವಿವಿಧ ರಾಜ್ಯಗಳ ಕಲಾವಿದರನ್ನು ಭೇಟಿ ಮಾಡಲು ಸಾಧ್ಯವಾಯಿತು’ ಎಂದು ಕಲಾವಿದರೊಬ್ಬರು ಸುದ್ದಿ ಸಂಸ್ಥೆಯ ಬಳಿ ಮಾತನಾಡುತ್ತಾ ಹೇಳಿದರು.

ಅಮೋಘ ದೀಪೋತ್ಸವ ಸಂಭ್ರಮಕ್ಕಾಗಿ ಪ್ರದೇಶದ ನಿವಾಸಿಗಳಲ್ಲದೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸಿದ್ದರು.

‘ನಾವು ಇಲ್ಲಿಗೆ ಮಧ್ಯಪ್ರದೇಶದ ನೇಪಾನಗರದಿಂದ ಬಂದಿದ್ದೇವೆ. ದೀಪೋತ್ಸವದಲ್ಲಿ ಪಾಲ್ಗೊಂಡಿರುವುದು ನಮ್ಮಗೆ ಗೌರವದ ಸಂಗತಿಯಾಗಿದೆ. ನಾವು ಇಲ್ಲಿ ಭಗೋರಿಯಾ ಜಾನಪದ ನೃತ್ಯವನ್ನು ಪ್ರದರ್ಶಿಸುತ್ತಿದ್ದೇವೆ’ ಎಂದು ನೇಪಾನಗರ ಮೂಲಕ ನೃತ್ಯ ತಂಡದ ಅಧ್ಯಕ್ಷ ಮುಖೇಶ ದರ್ಬಾರ್ ಹೇಳಿದರು.

ಅಯೋಧ್ಯೆಯಲ್ಲಿ ಮೂರು ದಿನಗಳ ದೀಪೋತ್ಸವ ಸಂಭ್ರಮ ಗುರುವಾರ ಆರಂಭವಾಗಿತ್ತು. ಎರಡನೇ ದಿನ ಗುಪ್ತರ ಘಾಟ್ ಮತ್ತು ಭಜನಾಸ್ಥಳದಲ್ಲಿ ಹಲವಾರು ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂಡೋನೇಷ್ಯ ಮತ್ತು ನೇಪಾಳದ ಕಲಾವಿದರು ರಾಮಲೀಲಾ ಪ್ರದರ್ಶಿಸಿದರು.

ಬಿಹಾರದ ಜಾನಪದ ಗೀತೆಗಳೂ ಮತ್ತು ಛತ್ತಿಸ್ ಗಢದ ಜಾನಪದ ನೃತ್ಯ ಎರಡನೇ ದಿನದ ಪ್ರಮುಖ ಆಕರ್ಷಣೆಗಳಾಗಿದ್ದವು.

ದೀಪಾವಳಿಯ ದಿನವಾದ ಭಾನುವಾರ ರಾಮಕೋಟ್ ಪ್ರದೇಶದಲ್ಲಿನ ಎಲ್ಲ ದೇವಾಲಯಗಳು ಮತ್ತು ರಾಮಜನ್ಮಭೂಮಿ-ಬಾಬರಿ ಮಸೀದಿ ಆವರಣದ ಸುತ್ತಮುತ್ತಣ ಮನೆಗಳಲ್ಲಿ ಸಂತರು ೧,೫೦,೦೦ ಹಣತೆಗಳನ್ನು ಬೆಳಗಲಿದ್ದಾರೆ.

ರಾಮ ಜನ್ಮಭೂಮಿ ನ್ಯಾಸವು ವಿವಾದಿತ ನಿವೇಶನ ಮತ್ತು ಸುತ್ತಮುತ್ತಣ ಜಾಗದಲ್ಲಿ ದೀಪಾವಳಿಯಂದು ಹಣತೆ ಬೆಳಗಲು ಅನುಮತಿ ನೀಡುವಂತೆ ಫೈಜಾಬಾದ್ ವಿಭಾಗದ ಡಿವಿಷನಲ್ ಕಮೀಷನರ್ ಅವರ ಬಳಿ ಅನುಮತಿ ಕೋರಿತ್ತು. ಆದರೆ ಅದಕ್ಕೆ ಅನುಮತಿ ನಿರಾಕರಿಸಲಾಗಿತ್ತು.

October 26, 2019 Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, culture, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು | , , , , , , , | Leave a comment

ಸಿಎಂ ಹುದ್ದೆ: ಲಿಖಿತ ಭರವಸೆ ಶಿವಸೇನೆ ಪಟ್ಟು, ‘ಮಹಾ’ಸರ್ಕಾರ ರಚನೆ ಇನ್ನೂ ಕಗ್ಗಂಟು

26 uddhav with mlasಬಿಜೆಪಿ ಶಾಸಕಾಂಗ ಪಕ್ಷದ ಸಭೆ ಅಕ್ಟೋಬರ್ ೩೦ಕ್ಕೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸರಳ ಬಹುಮತ ಪಡೆದಿದ್ದರೂ, ಶಿವಸೇನೆಯು ೫೦:೫೦ ಸೂತ್ರದಂತೆ ಅಧಿಕಾರ ಹಂಚಿಕೆಗೆ ಬಿಗಿಪಟ್ಟು ಹಿಡಿದ ಪರಿಣಾಮವಾಗಿ ಸರ್ಕಾರ ರಚನೆ 2019 ಅಕ್ಟೋಬರ್ 26ರ  ಶನಿವಾರವೂ ಕಗ್ಗಂಟಾಗಿಯೇ ಮುಂದುವರೆಯಿತು. ಈ ಮಧ್ಯೆ ಬಿಜೆಪಿಯು ಶಾಸಕಾಂಗ ಪಕ್ಷದ ಸಭೆಯನ್ನು ದೀಪಾವಳಿ ಹಬ್ಬ ಮುಗಿದ ಬಳಿಕ ಅಕ್ಟೋಬರ್ ೩೦ರಂದು ನಡೆಸಲು ತೀರ್ಮಾನಿಸಿತು. ಹೀಗಾಗಿ ’ಮಹಾಸರ್ಕಾರ ರಚನೆ’ಯ ಕಗ್ಗಂಟು ಇನ್ನೂ ೪ ದಿನ ವಿಸ್ತರಿಸಿದಂತಾಯಿತು.

೫೦:೫೦ ಸೂತ್ರದ ಪ್ರಕಾರ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಬಗ್ಗೆ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯಬೇಕು ಎಂದು ಶಿವಸೇನಾ ಶಾಸಕರು 2019 ಅಕ್ಟೋಬರ್ 26ರ  ಶನಿವಾರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಗ್ರಹಿಸಿದರು. ಆದರೆ ಅಂತಿಮ ನಿರ್ಧಾರವನ್ನು ಠಾಕ್ರೆ ಅವರಿಗೆ ವಹಿಸಿದರು.

ಶಿವಸೇನೆಯ ಕೆಲವು ಶಾಸಕರು ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಬೇಕು ಎಂಬ ಪ್ರಸ್ತಾಪವನ್ನು ಬೆಂಬಲಿಸಿದರು, ಆದಾಗ್ಯೂ ಸರ್ಕಾರ ರಚನೆ ಕುರಿತ ಅಂತಿಮ ನಿರ್ಧಾರವನ್ನು ಉದ್ಧವ್ ಠಾಕ್ರೆಯವರಿಗೆ ಬಿಟ್ಟರು ಎಂದು ವರದಿಗಳು ತಿಳಿಸಿದವು.

ಚುನಾವಣೆಯಲ್ಲಿ ಗೆದ್ದಿರುವ ೫೬ ಮಂದಿ ಶಿವಸೇನಾ ಶಾಸಕರು ಶನಿವಾರ ಮುಂಬೈಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಅವರ ಮಾತೋಶ್ರೀ ನಿವಾಸದಲ್ಲಿ ಭೇಟಿ ಮಾಡಿದರು ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರದ ಸಮಾನ ಹಂಚಿಕೆ  ಒಪ್ಪಂದವನ್ನು ಗೌರವಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯುವಂತೆ ಆಗ್ರಹಿಸಿದರು. ಈ ವರ್ಷ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಕಾಲದಲ್ಲಿ ಮೈತ್ರಿಕೂಟವು ಒಪ್ಪಿಕೊಳ್ಳಲಾಗಿತ್ತು ಎನ್ನಲಾಗಿರುವ ’ಮಹಾರಾಷ್ಟ್ರದಲ್ಲಿ ಅಧಿಕಾರದ ಸಮಾನ ಹಂಚಿಕೆ ಒಪ್ಪಂದ’ಕ್ಕೆ ಬದ್ಧವಾಗುವಂತೆ ಬಿಜೆಪಿಯನ್ನು ಆಗ್ರಹಿಸಬೇಕು ಎಂದು ಅವರು ಹೇಳಿದರು.

ಬಿಜೆಪಿಯು ಒಪ್ಪಂದವನ್ನು ಗೌರವಿಸದೆ, ಅಕ್ಟೋಬರ್ ೨೧ರಂದು ನಡೆದ ಚುನಾವಣೆಯಲ್ಲಿ ವಿಧಾನಸಭೆಯ ೨೮೮ ಸ್ಥಾನಗಳ ಪೈಕಿ ಹೆಚ್ಚಿನ ಸ್ಥಾನಗಳಿಗೆ ಸ್ಪರ್ಧಿಸಿ, ಶಿವಸೇನೆಗೆ ಕೇವಲ ೧೨೪ ಸ್ಥಾನಗಳನ್ನು ಹೋರಾಟಕ್ಕಾಗಿ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯಬೇಕಾದ ಅಗತ್ಯ ಬಂದಿದೆ ಎಂದು ಸೇನಾ ಸಂಸತ್ ಸದಸ್ಯರು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಥಾಣೆಯ ಓವಾಲ-ಮಜಿವಾಡದ ಪಕ್ಷದ ಶಾಸಕ ಪ್ರತಾಪ್ ಸರ್ನಾಯಕ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಸಮಾನವಾಗಿ ಹಂಚಿಕೊಳ್ಳುವ ಬಗ್ಗೆ ಬಿಜೆಪಿ ಲಿಖಿತ ಭರವಸೆ ನೀಡದ ಹೊರತು ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗುವುದಿಲ್ಲ ಎಂದು ನುಡಿದರು.

‘ಅಂತಿಮ ನಿರ್ಧಾರ ಕೈಗೊಳ್ಳಲು ಉದ್ಧವ್ ಜಿ ಅವರಿಗೆ ಪೂರ್ಣ ಅಧಿಕಾರ ನೀಡಲು ಎಲ್ಲ ಶಾಸಕರು ನಿರ್ಧರಿಸಿದರು. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವುದು ಸೇರಿದಂತೆ ೫೦:೫೦ ಅಧಿಕಾರ ಹಂಚಿಕೆ ಒಪ್ಪಂದವನ್ನು ಬಿಜೆಪಿಯ ವರಿಷ್ಠ ನಾಯಕತ್ವವು ಗೌರವಿಸಬೇಕು ಎಂದು ಸಭೆ ನಿರ್ಧರಿಸಿತು. ನಾವು ಬಿಜೆಪಿಯಿಂದ ಲಿಖಿತ ಭರವಸೆಯನ್ನು ಬಯಸುತ್ತೇವೆ’ ಎಂದು ಸರ್ನಾಯಕ್ ಹೇಳಿದರು.

ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕು ಎಂಬುದಾಗಿ ನಾವು ಬಯಸಿದ್ದರೂ, ಉನ್ನತ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಗುಹಗರ್ ಶಾಸಕ ಭಾಸ್ಕರ ಜಾಧವ್ ಹೇಳಿದರು.

ಶಿವಸೇನೆಯು ತಾನು ಸ್ಪರ್ಧಿಸಿದ್ದ ೧೨೪ ಸ್ಥಾನಗಳ ಪೈಕಿ ೫೬ ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯು ತಾನು ಸ್ಪರ್ಧಿಸಿದ್ದ ೧೬೪ ಸ್ಥಾನಗಳ ಪೈಕಿ ೧೦೫ ಸ್ಥಾನಗಳನ್ನು ಜಯಿಸಿದೆ.

ಸುದ್ದಿ ಸಂಸ್ಥೆಯ ವರದಿ ಪ್ರಕಾರ ಪಕ್ಷದ ಕೆಲವು ಶಾಸಕರು ಉದ್ಧವ್ ಠಾಕ್ರೆಯ ಅವರ ಪುತ್ರ ಆದಿತ್ಯ ಠಾಕ್ರೆಯವರು ಮುಖ್ಯಮಂತ್ರಿಯಾಗುವುದನ್ನು ತಾವು ಬಯಸಿರುವುದಾಗಿ ಹೇಳಿದರು.

‘ಆದಿತ್ಯ ಠಾಕ್ರೆ ಅವರು ಮುಂದಿನ ಮುಖ್ಯಮಂತ್ರಿಯಾಗುವುದನ್ನು ನಾವು ನೋಡಬಯಸಿದ್ದೇವೆ. ಆದರೆ ಉದ್ಧವ್ ಜಿ ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಪ್ರತಾಪ್ ಸರ್ನಾಯಕ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯು ವರದಿ ಮಾಡಿತು.

ಆದಿತ್ಯ ಠಾಕ್ರೆ ಅವರು ಠಾಕ್ರೆ ಕುಟುಂಬದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಮೊತ್ತ ಮೊದಲ ವ್ಯಕ್ತಿಯಾಗಿದ್ದು, ಚುನಾವಣೆಗೆ ಮುಂಚೆ ಉಪ ಮುಖ್ಯಮಂತ್ರಿ ಸ್ಥಾನದ ಸಂಭಾವ್ಯ ಅಭ್ಯರ್ಥಿ ಎಂಬುದಾಗಿ ಚುನಾವಣೆಗೆ ಮುನ್ನ ವ್ಯಾಪಕವಾಗಿ ಭಾವಿಸಲಾಗಿತ್ತು.

ಶಿವಸೇನೆಯು ತಮ್ಮನ್ನು ಸಂಪರ್ಕಿಸಿದರೆ ಮುಖ್ಯಮಂತ್ರಿ ಹುದ್ದೆಗೆ ಅವರ ಹಕ್ಕು ಪ್ರತಿಪಾದನೆಯನ್ನು  ಪಕ್ಷದ ವರಿಷ್ಠ ಮಂಡಳಿಯು ಪರಿಗಣಿಸುವುದು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರೊಬ್ಬರು ಶನಿವಾರ ಹೇಳುವ ಮೂಲಕ ಚುನಾವಣಾ ನಂತರದ ಬೆಳವಣಿಗೆಗಳಿಗೆ ಹೊಸ ಆಯಾಮ ನೀಡಿದ್ದರು.

‘ನಮಗೆ ವಿರೋಧ ಪಕ್ಷದ ಪಾತ್ರವನ್ನು ವಹಿಸಲಾಗಿದೆ ಮತ್ತು ನಾವು ಅದನ್ನು ಮಾಡುತ್ತೇವೆ. ಆದರೆ, ಏನಾದರೂ ಪರ್‍ಯಾಯ ಬಗ್ಗೆ ಚರ್ಚಿಸಬೇಕಾಗಿದ್ದರೆ, ಆಗ ಶಿವಸೇನೆಯು ನಮ್ಮ ಬಳಿಗೆ ಬರಬೇಕು. ಇಲ್ಲಿಯವರೆಗೆ ಅವರು ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ವಿಜಯ್ ವಡೆಟ್ಟಿವಾರ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಮಹಾರಾಷ್ಟ್ರ ಬಿಜೆಪಿಯು ತನ್ನ ಸದನ ನಾಯಕನ ಆಯ್ಕೆಗಾಗಿ, ತನ್ನ ನೂತನ ಚುನಾಯಿತ ಶಾಸಕರ ಸಭೆಯನ್ನು ದೀಪಾವಳಿ ಹಬ್ಬದ ಬಳಿಕ ಅಕ್ಟೋಬರ್ ೩೦ಕ್ಕೆ ಸಮಾವೇಶಗೊಳಿಸಿದೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಕಾಂತ  ಪಾಟೀಲ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.

October 26, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , | Leave a comment

ಹರಿಯಾಣ: ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಆಹ್ವಾನ

26 governor, khatter, choutla othersಇಂದು ಎಂಎಲ್ ಖಟ್ಟರ್, ದುಷ್ಯಂತ ಚೌಟಾಲ ಪ್ರಮಾಣವಚನ

ನವದೆಹಲಿ: ಹರಿಯಾಣ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್‍ಯ ಅವರು ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಶನಿವಾರ ಆಹ್ವಾನ ನೀಡಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕಾಂಗ ನಾಯಕ ಮನೋಹರ ಲಾಲ್ ಖಟ್ಟರ್ ಮುಖ್ಯಮಂತ್ರಿಯಾಗಿಯೂ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಷ್ಯಂತ ಚೌಟಾಲ ಅವರು ಉಪಮುಖ್ಯಮಂತ್ರಿಯಾಗಿಯೂ 2019 ಅಕ್ಟೋಬರ್ 27ರ ಭಾನುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ಪಕ್ಷದ (ಜೆಜೆಪಿ) ಬೆಂಬಲದೊಂದಿಗೆ ಬಿಜೆಪಿಯು ರಾಜ್ಯದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ ಬಳಿಕ ಈ ಸ್ವತಃ ಖಟ್ಟರ್ ಅವರು 2019 ಅಕ್ಟೋಬರ್ 26ರ  ಶನಿವಾರ ಈ ವಿಚಾರವನ್ನು ಪ್ರಕಟಿಸಿದರು.

‘ಹರಿಯಾಣ ರಾಜ್ಯಪಾಲರು ಭಾನುವಾರ ಸರ್ಕಾರ ರಚಿಸುವಂತೆ ನಮಗೆ ಆಹ್ವಾನ ನೀಡಿದ್ದಾರೆ’ ಎಂದು ಖಟ್ಟರ್ ನುಡಿದರು. ದೀಪಾವಳಿ ಹಬ್ಬದ ದಿನವಾದ ಭಾನುವಾರ ಮಧ್ಯಾಹ್ನ ೨.೧೫ ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಅವರು ನುಡಿದರು.

‘ಚೌಟಾಲ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವರು. ಬಿಜೆಪಿಯ ೪೦, ಜೆಜೆಪಿಯ ೧೦ ಮತ್ತು ೭ ಮಂದಿ ಪಕ್ಷೇತರರು ಸೇರಿದಂತೆ ೫೭ ಶಾಸಕರು ಹರಿಯಾಣದಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಎದುರು ಹಕ್ಕು ಪ್ರತಿಪಾದನೆ ಮಾಡಿದ್ದಾರೆ’ ಎಂದು ಖಟ್ಟರ್ ಹೇಳಿದರು.

‘ರಾಜ್ಯಪಾಲರು ಇದನ್ನು ಅಂಗೀಕರಿಸಿದ್ದು, ಭಾನುವಾರ ಸರ್ಕಾರ ರಚಿಸುವಂತೆ ನಮ್ಮನ್ನು ಆಹ್ವಾನಿಸಿದರು’ ಎಂದ ಖಟ್ಟರ್ ನುಡಿದರು.

ಇದಕ್ಕೆ ಮುನ್ನ ಖಟ್ಟರ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ರಾಜ್ಯಪಾಲರಿಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು.   ರಾಜ್ಯಪಾಲ ಆರ್‍ಯ ಅವರು ರಾಜೀನಾಮೆಗಳನ್ನು ಅಂಗೀಕರಿಸಿದರು ಮತ್ತು ನೂತನ ಸರ್ಕಾರವು ಅಧಿಕಾರ ವಹಿಸಿಕೊಳ್ಳುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಖಟ್ಟರ್ ಅವರಿಗೆ ಸೂಚಿಸಿದರು.

ಕೆಲವು ಸಚಿವರು ಭಾನುವಾರ ಪ್ರಮಾಣ ವಚನ ಸ್ವೀಕರಿಸುವರು ಎಂದು ಖಟ್ಟರ್ ಹೇಳಿದರು. ಆದರೆ ಪ್ರಮಾಣ ವಚನ ಸ್ವೀಕರಿಸುವವರ ಸಂಖ್ಯೆಯನ್ನು ಅವರು ತಿಳಿಸಲಿಲ್ಲ.

೯೦ ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಕನಿಷ್ಠ ೪೬ ಶಾಸಕರ ಬೆಂಬಲ ಬೇಕಾಗುತ್ತದೆ.

ಇದಕ್ಕೆ ಮುನ್ನ ಶನಿವಾರ ಬೆಳಗ್ಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮನೋಹರಲಾಲ್ ಖಟ್ಟರ್ ಅವರನ್ನು ಪಕ್ಷದ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಲಾಯಿತು.

ಇತ್ತೀಚೆಗೆ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೪೦ ಸ್ಥಾನಗಳನ್ನು ಗೆದ್ದು ಸರಳ ಬಹುಮತಕ್ಕೆ ೬ ಸ್ಥಾನಗಳ ಕೊರತೆ ಅನುಭವಿಸಿತ್ತು. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ೪೭ ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅದಕ್ಕೆ ೭ ಸ್ಥಾನಗಳು ನಷ್ಟವಾಗಿದ್ದವು.

೧೦ ಸ್ಥಾನಗಳನ್ನು ಗೆದ್ದಿರುವ ಜೆಜೆಪಿಯು ಬೆಂಬಲ ನೀಡುವ ಮೂಲಕ ಈ ಕೊರತೆಯನ್ನು ನೀಗಿಸಿ ಖಟ್ಟರ್ ಅವರಿಗೆ ಮುಖ್ಯಮಂತ್ರಿಯಾಗಿ ಮರಳಿ ಬರಲು ನೆರವಾಯಿತು. ದಿವಂಗತ ಉಪ ಪ್ರಧಾನಿ ಚೌಧರಿ ದೇವಿಲಾಲ್ ಅವರ ಮರಿಮೊಮ್ಮಗ ದುಷ್ಯಂತ ಚೌಟಾಲ ಅವರು ಹರಿಯಾಣದಲ್ಲಿ ಸ್ಥಿರ ಸರ್ಕಾರ ನೀಡುವ ದೃಷ್ಟಿಯಿಂದ ಮೈತ್ರಿಕೂಟ ಅನಿವಾರ್‍ಯವಾಗಿದೆ ಎಂದು ತಮ್ಮ ಪಕ್ಷವು ನಂಬಿದೆ ಎಂದು ಹೇಳಿದ್ದರು.

ಶನಿವಾರ ಬೆಳಗ್ಗೆ ಮನೋಹರ ಲಾಲ್ ಖಟ್ಟರ್ ಅವರನ್ನು ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಇದರೊಂದಿಗೆ ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಖಟ್ಟರ್ ಅವರಿಗೆ ಒದಗಿ ಬಂದಿತು. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಖಟ್ಟರ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸುವ  ಸಲುವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.

ಇದಕ್ಕೂ ಮುನ್ನ ಶುಕ್ರವಾರ ಜನನಾಯಕ ಜನತಾ ಪಕ್ಷದ (ಜೆಜೆಪಿ) ಬೆಂಬಲ ಪಡೆಯುವ ನಿಟ್ಟಿನಲ್ಲಿ ದುಷ್ಯಂತ ಚೌಟಾಲ ಜೊತೆಗೆ ಮಾತುಕತೆ ನಡೆಸಿ ಯಶಸ್ವಿಯಾಗಿರುವ ಬಗ್ಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಖಟ್ಟರ್ ಹಾಗೂ ಚೌಟಾಲ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ರಾತ್ರಿ ಪ್ರಕಟಿಸಿದ್ದರು.

ಈ ಮಧ್ಯೆ ವಿವಾದಾತ್ಮಕ ಶಾಸಕ ಗೋಪಾಲ್ ಕಂಡಾ ಅವರ ಬೆಂಬಲವನ್ನು ಹರಿಯಾಣ ಬಿಜೆಪಿ ಸರ್ಕಾರ ಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಶನಿವಾರ ಸ್ಪಪ್ಟ ಪಡಿಸಿದ್ದರು.

October 26, 2019 Posted by | ಭಾರತ, ರಾಷ್ಟ್ರೀಯ, BBMP, Flash News, General Knowledge, India, Nation, News, Spardha | , , | Leave a comment

ಶ್ರೀನಗರ:  ಕೇಂದ್ರೀಯ ಮೀಸಲು ಭದ್ರತಾ ಪಡೆಯ ಮೇಲೆ ಗ್ರೆನೇಡ್,  6 ಸೈನಿಕರಿಗೆ ಗಾಯ

26 kashmir grenade attack
ನವದೆಹಲಿ
: ಜಮ್ಮು-ಕಾಶ್ಮೀರದ ಶ್ರೀನಗರದ ಕರಣ್ ನಗರದಲ್ಲಿ 2019 ಅಕ್ಟೋಬರ್ 26ರ  ಶನಿವಾರ ಸಂಜೆ ಉಗ್ರರು ಕೇಂದ್ರೀಯಮೀಸಲು ಪಡೆಯ (ಸಿಆರ್​ಪಿಎಫ್​) ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ ಆರು ಸೈನಿಕರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.

ಸಿಆರ್​ಪಿಎಫ್​ನ 144ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಂಜೆ 6.50ರ ಸಮಯದಲ್ಲಿ ಚೆಕ್​ಪಾಯಿಂಟ್​ ಬಳಿ ಸಿಆರ್​ಪಿಎಫ್​ ತಂಡದ ಮೇಲೆ ಈ ದಾಳಿ ನಡೆಯಿತು. ಗ್ರೆನೇಡ್ ಸ್ಫೋಟದಿಂದ ಸುತ್ತಮುತ್ತಲ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಉಗ್ರರ ದಾಳಿಗೆ ಭದ್ರತಾ ಪಡೆಯ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

October 26, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, Nation, News, Pakistan, Spardha | , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ