SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮುಂಬೈಯ ಬಹುತೇಕ ಭಾಗ ೨೦೫೦ ರ ವೇಳೆಗೆ ಸಮುದ್ರಕ್ಕೆ ಆಪೋಶನ?

30 mumbai-Artboard
ವಿಶ್ವದ ಹಲವು ದೊಡ್ಡ ಕರಾವಳಿ ನಗರಗಳೂ ಅಪಾಯದಲ್ಲಿ; ಉಪಗ್ರಹ
ಮಾಹಿತಿ ಆಧಾರಿತ ಹೊಸ ಸಂಶೋಧನಾ ವರದಿಯ ಎಚ್ಚರಿಕೆ

ನ್ಯೂಯಾರ್ಕ್:  ಹೊಸ ಸಂಶೋಧನೆಗಳ ಪ್ರಕಾರ, ಏರುತ್ತಿರುವ ಸಮುದ್ರಗಳು ೨೦೫೦ ರ ವೇಳೆಗೆ ಮುಂಬೈ ಸೇರಿದಂತೆ ವಿಶ್ವದ ಕೆಲವು ದೊಡ್ಡ ಕರಾವಳಿ ನಗರಗಳನ್ನು ಆಪೋಶನ ತೆಗೆದುಕೊಂಡು ಹಿಂದೆ ಯೋಚಿಸಿದ್ದುದಕ್ಕಿಂತ ಮೂರು ಪಟ್ಟು ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಅಪಾಯವಿದೆ ಎಂದು ಹೊಸ ಸಂಶೋಧನಾ ವರದಿಯೊಂದು ಎಚ್ಚರಿಕೆ ನೀಡಿತು.

ನಿಯತಕಾಲಿಕ ಒಂದರಲ್ಲಿ 2019 ಅಕ್ಟೋಬರ್ 29ರ ಮಂಗಳವಾರ ಪ್ರಕಟವಾದ ಸಂಶೋಧನಾ ಪ್ರಬಂಧದ ಲೇಖಕರು ಹಿಂದಿನ ಕಲ್ಪಿತ ಅಂಕಿಸಂಖ್ಯೆಗಳ ಬದಲಿಗೆ ಉಪಗ್ರಹ ಮಾಹಿತಿಯನ್ನು ಆಧರಿಸಿ ಭೂ ಎತ್ತರವನ್ನು ಲೆಕ್ಕಾಚಾರ ಮಾಡುವ ಹೆಚ್ಚು ನಿಖರವಾದ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದು, ವಿಶಾಲ ಪ್ರದೇಶಗಳಲ್ಲಿ ಸಮುದ್ರ ಮಟ್ಟಏರಿಕೆಯ ಪರಿಣಾಮಗಳನ್ನು ಅಂದಾಜು ಮಾಡುವ ಪ್ರಮಾಣಿತ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ವರದಿ ಹೇಳಿತು.

ಹೊಸ ಸಂಶೋಧನೆಯ ಪ್ರಕಾರ ಸುಮಾರು ೧೫೦ ಮಿಲಿಯನ್ (೧೫ ಕೋಟಿ) ಜನರು ಈಗ ವಾಸಿಸುತ್ತಿರುವ ಭೂಪ್ರದೇಶವು ಪ್ರಸ್ತುತ ಶತಮಾನದ ಮಧ್ಯಾವಧಿಯ ವೇಳೆಗೆ ಹೆಚ್ಚಿನ ಉಬ್ಬರವಿಳಿತದ ರೇಖೆಗಿಂತ ಕೆಳಗಿರುತ್ತದೆ. ಅಂದರೆ ಅಷ್ಟೂ ಮಂದಿ ನೀರಿನಡಿ ಮುಳುಗಡೆಯಾಗುವ ಪ್ರದೇಶದಲ್ಲಿ ವಾಸವಾಗಿದ್ದಾರೆ ಎಂದು ವರದಿ ಹೇಳಿತು.

ದಕ್ಷಿಣ ವಿಯೆಟ್ನಾಂ ಸಂಪೂರ್ಣ ಕಣ್ಮರೆ: ವಿಯೆಟ್ನಾಂನಲ್ಲಿ ಸುಮಾರು ೨೦ ದಶಲಕ್ಷಕ್ಕೂ (೨ ಕೋಟಿ) ಹೆಚ್ಚು ಜನರು, ಅಂದರೆ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನರು ಮುಳುಗಡೆ ವ್ಯಾಪ್ತಿಯಲ್ಲಿರುವ ಭೂಮಿಯಲ್ಲಿ ವಾಸಿಸುತ್ತಿದ್ದಾರೆ.

ನ್ಯೂಜೆರ್ಸಿ ಮೂಲದ ’ಕ್ಲೈಮೇಟ್ ಸೆಂಟ್ರಲ್’ ಎಂಬ ವಿಜ್ಞಾನ ಸಂಸ್ಥೆಯ ‘ನೇಚರ್ ಕಮ್ಯುನಿಕೇಷನ್ಸ್ ಜರ್ನಲ್’ ಪ್ರಕಟಿಸಿರುವ ಈ ಸಂಶೋಧನೆಯ ಪ್ರಕಾರ, ವಿಯೆಟ್ನಾಮಿನ ಆರ್ಥಿಕ ಕೇಂದ್ರವಾದ ಹೋ ಚಿ ಮಿನ್ಹ್ ನಗರ ಬಹುಪಾಲು ಕಣ್ಮರೆಯಾಗುತ್ತದೆ. ಭವಿಷ್ಯದ ಜನಸಂಖ್ಯೆಯ ಬೆಳವಣಿಗೆ ಅಥವಾ ಕರಾವಳಿ ಸವೆತಕ್ಕೆ ಕಳೆದುಹೋಗುವ ಭೂಮಿಯ ವಿವರಗಳನ್ನು ಈ ವರದಿ ನೀಡಿಲ್ಲ.

ಉಪಗ್ರಹಗಳನ್ನು ಬಳಸುವ ಪ್ರಮಾಣಿತ ಎತ್ತರದ ಮಾಪನಗಳು ನಿಜವಾದ ನೆಲದ ಮಟ್ಟವನ್ನು ಮರಗಳು ಅಥವಾ ಕಟ್ಟಡಗಳ ಮೇಲ್ಭಾಗದಿಂದ ಪ್ರತ್ಯೇಕಿಸಲು ಹೆಣಗಾಡುತ್ತವೆ ಈ ಕಾರಣಕ್ಕಾಗಿ ತಾವು ಮತ್ತು ಕ್ಲೈಮೇಟ್ ಸೆಂಟ್ರಲ್‌ನ  ಮುಖ್ಯಕಾರ್ಯನಿರ್ವಾಹಕ ಬೆಂಜಮಿನ್ ಸ್ಟ್ರಾಸ್‌ಕೃತಕ ಲೆಕ್ಕಾಚಾರದ ತಪ್ಪಿನ ಪ್ರಮಾಣವನ್ನು ನಿರ್ಧರಿಸಲು ಮತ್ತು ಅದನ್ನು ಸರಿಪಡಿಸಲು  ಬುದ್ಧಿಮತ್ತೆಯನ್ನು ಬಳಸಿರುವುದಾಗಿ ಎಂದು ಹವಾಮಾನ ಕೇಂದ್ರದ ಸಂಶೋಧಕ ಮತ್ತು ಸಂಶೋಧನಾ ಪ್ರಬಂಧದ ಲೇಖಕರಲ್ಲಿ ಒಬ್ಬರಾದ ಸ್ಕಾಟ್ ಎ. ಕುಲ್ಪ್ ಹೇಳಿದರು.

ಥೈಲ್ಯಾಂಡಿನಲ್ಲಿ  ಶೇಕಡಾ ೧೦ ಕ್ಕಿಂತ ಹೆಚ್ಚು ಜನರು  ೨೦೫೦ ರ ಹೊತ್ತಿಗೆ ಮುಳುಗಡೆಯಾಗುವ  ಭೂಮಿಯಲ್ಲಿ ಪ್ರಸ್ತುತ ವಾಸಿಸುತ್ತಿದ್ದಾರೆ, ಹಿಂದಿನ ಅಂದಾಜಿನ  ಪ್ರಕಾರ ಕೇವಲ ಶೇಕಡಾ ೧ರಷ್ಟು ಜನರು ಮಾತ್ರ ಮುಳುಗಡೆ ಪ್ರದೇಶದಲ್ಲಿ ಇದ್ದಾರೆ ಎಂದು ಭಾವಿಸಲಾಗಿತ್ತು. ದೇಶದ ರಾಜಕೀಯ ಮತ್ತು ವಾಣಿಜ್ಯ ರಾಜಧಾನಿ ಬ್ಯಾಂಕಾಕ್ ವಿಶೇಷವಾಗಿ ಈ ಅಪಾಯದ ವ್ಯಾಪ್ತಿಯಲ್ಲಿದೆ.

ಹವಾಮಾನ ಬದಲಾವಣೆಯು ನಗರಗಳ ಮೇಲೆ ಅನೇಕ ವಿಧಗಳಲ್ಲಿ ಒತ್ತಡವನ್ನುಂಟು ಮಾಡುತ್ತದೆ ಎಂದು ಬ್ಯಾಂಕಾಕ್ ನಿವಾಸಿ ಮತ್ತು ವಿಶ್ವಸಂಸ್ಥೆಯ ವಿಪತ್ತು ಅಪಾಯ ಇಳಿಕೆ ಅಧಿಕಾರಿ ಲೊರೆಟ್ಟಾ ಹೈಬರ್ ಗಿರಾರ್ಡೆಟ್ ಹೇಳಿದರು.  ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹೆಚ್ಚಿನ ಸ್ಥಳಗಳು ಪ್ರವಾಹಗಳಿಗೆ ಬಲಿಯಾಗುತ್ತಿವೆ. ಇದು ಬಡರೈತರನ್ನು ಅವರ ನೆಲದಿಂದ ಹೊರದಬ್ಬಿ ಅವರು ನಗರಗಳಲ್ಲಿ ಕೆಲಸ ಅರಸುವಂತೆ ಮಾಡುತ್ತದೆ.

‘ಇದೊಂದು  ಭೀಕರ ಸೂತ್ರವಾಗಿದೆ’ ಎಂದು ಲೊರೆಟ್ಟಾ ನುಡಿದರು.

ಏಷ್ಯಾದ ಪ್ರಮುಖ ಆರ್ಥಿಕ ಯಂತ್ರಗಳಲ್ಲಿ ಒಂದಾದ ಶಾಂಘೈಯಲ್ಲಿ, ನಗರದ ಹೃದಯಭಾಗ ಮತ್ತು ಅದರ ಸುತ್ತುಮತ್ತಲಿನ ಇತರ  ಅನೇಕ ನಗರಗಳನ್ನು ನೀರು ಆಪೋಶನ ತೆಗೆದುಕೊಳ್ಳುವ ಅಪಾಯವಿದೆ.

ಅಧ್ಯಯನದ  ಅಂಕಿಸಂಖ್ಯೆಗಳು  ಆ ಪ್ರದೇಶಗಳ ಅಂತ್ಯವನ್ನು ಉಚ್ಚರಿಸಬೇಕಾಗಿಲ್ಲ.  ಹೊಸ ದತ್ತಾಂಶವು ೧೧೦ ದಶಲಕ್ಷ ಜನರು ಈಗಾಗಲೇ ಹೆಚ್ಚಿನ ಉಬ್ಬರವಿಳಿತದ ರೇಖೆಯ ಕೆಳಗಿರುವ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತೋರಿಸುತ್ತಿದೆ,  ಇದು ಸಮುದ್ರ ತಡೆಗೋಡೆಯಂತ ರಕ್ಷಣಾತ್ಮಕ ಕ್ರಮಗಳ ಅಗತ್ಯವನ್ನು ಸೂಚಿಸುತ್ತದೆ. ಅಂತಹ ರಕ್ಷಣಾತ್ಮಕ ಕ್ರಮಗಳಿಗಾಗಿ ಈ  ನಗರಗಳು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಬೇಕು, ಮತು ಅವರು ಅದನ್ನು ಅತ್ಯಂತ ತ್ವರಿತವಾಗಿ ಮಾಡಬೇಕು ಎಂದು ಸ್ಟ್ರಾಸ್ ಸಲಹೆ ಮಾಡಿದರು.

ಆದರೆ ಆ ಹೂಡಿಕೆಗಳು ಕೂಡಾ ಎಷ್ಟರ ಮಟ್ಟಿಗೆ ಉಪಯುಕ್ತವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ನುಡಿದ ಅವರು ೨೦೦೫ ರಲಿ ಕತ್ರಿನಾ ಚಂಡಮಾರುತ ಬೀಸಿದಾಗ ಸಮುದ್ರ ಮಟ್ಟಕ್ಕಿಂತ ಕೆಳಗಿದ್ದ  ನ್ಯೂಓರ್ಲಿಯನ್ಸ್ ನಗರವು  ನಾಶವಾದುದನ್ನು ಸ್ಟ್ರಾಸ್ ಉದಾಹರಿಸಿದರು. ಅಲ್ಲಿ ಸಾಕಷ್ಟು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೂ ವಿನಾಶ ತಪ್ಪಿಸಲಾಗಲಿಲ್ಲ ಎಂದು ಅವರು ನುಡಿದರು .

ಮುಂಬೈ ಮುಳುಗಡೆ ಭೀತಿ:  ಹೊಸ ಅಧ್ಯಯನದ ಪ್ರಕಾರ ಭಾರತದ ವಾಣಿಜ್ಯ ರಾಜಧಾನಿ ಮತ್ತು ವಿಶ್ವದ ಅತಿದೊಡ್ಡ ನಗರಗಳಲ್ಲಿ ಒಂದಾದ ಮುಂಬೈಯ ಹೆಚ್ಚಿನ ಭಾಗವು ನಾಶವಾಗುವ ಅಪಾಯದಲ್ಲಿದೆ.  ಒಂದು ಕಾಲದಲ್ಲಿ ದ್ವೀಪಗಳ ಸರಣಿಯಾಗಿದ್ದ ನಗರದ ಐತಿಹಾಸಿಕ  ಕೆಳಪಟ್ಟಣ ವಿಶೇಷವಾಗಿ ದುರ್ಬಲ ಸ್ಥಳವಾಗಿದೆ.

ಒಟ್ಟಾರೆಯಾಗಿ, ಹೆಚ್ಚಿನ ನಾಗರಿಕರು ಆಂತರಿಕವಾಗಿ ಸ್ಥಳಾಂತರಗೊಳ್ಳಲು ದೇಶಗಳು ಈಗ ತಯಾರಿ ಪ್ರಾರಂಭಿಸಬೇಕು ಎಂದು ಸಂಶೋಧನೆ ತೋರಿಸುತ್ತದೆ  ಎಂದು ವಲಸೆ ಮತ್ತು ಅಭಿವೃದ್ಧಿಯ ಬಗ್ಗೆ ಕ್ರಮಗಳನ್ನು ಸಂಘಟಿಸುವ ಅಂತರ ಸರ್ಕಾರೀ  ಗುಂಪಿನ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್‌ನ ಡೀನಾ ಅಯೋನೆಸ್ಕೊ ಹೇಳಿದ್ದಾರೆ.

‘ನಾವು ಎಚ್ಚರಿಕೆಯ ಗಂಟೆಗಳನ್ನು ರಿಂಗಣಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅಯೋನೆಸ್ಕೊ ಹೇಳಿದರು. ’ಅದು ಬರುತ್ತಿದೆ ಎಂದು ನಮಗೆ ತಿಳಿದಿದೆ. ಈ ಪ್ರಮಾಣದಲ್ಲಿ ಜನರು ಸ್ಥಳಾಂತರ ಮಾಡಬೇಕಾಗಿ ಬಂದಿರುವ ಆಧುನಿಕ ಪೂರ್ವನಿದರ್ಶನಗಳಿಲ್ಲ’  ಎಂದು ಅವರು ಹೇಳಿದರು.

ಸಾಂಸ್ಕೃತಿಕ ಪರಂಪರೆಯ ಕಣ್ಮರೆಯು ತನ್ನದೇ ಆದ ಮಾದರಿಯ ವಿನಾಶವನ್ನು ತರಬಹುದು. ಕ್ರಿ.ಪೂ ೩೩೦ ರ ಸುಮಾರಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಸ್ಥಾಪಿಸಿದ ಈಜಿಪ್ಟಿನ ಅಲೆಕ್ಸಾಂಡ್ರಿಯಾ ಏರುತ್ತಿರುವ ಕಡಲ ನೀರಿನಲ್ಲಿ ಕಳೆದುಹೋಗಬಹುದು.

ಇತರ ಸ್ಥಳಗಳಲ್ಲಿ, ಏರುತ್ತಿರುವ ಸಮುದ್ರಗಳಿಂದ ಉಂಟಾಗುವ ವಲಸೆ ಪ್ರಾದೇಶಿಕ ಘರ್ಷಣೆಯನ್ನು ಪ್ರಚೋದಿಸಬಹುದು ಅಥವಾ ವಲಸೆ ಘರ್ಷಣೆಗಳನ್ನು ಉಲ್ಬಣಗೊಳಿಸಬಹುದು.

ಇರಾಕಿನ ಎರಡನೇ ಅತಿದೊಡ್ಡ ನಗರವಾದ ಬಸ್ರಾ ೨೦೫೦ ರ ಹೊತ್ತಿಗೆ ಬಹುತೇಕ ನೀರೊಳಗಿರಬಹುದು. ಅದು ಸಂಭವಿಸಿದಲ್ಲಿ, ಪರಿಣಾಮಗಳು ಇರಾಕಿನ ಗಡಿಯಾಚೆಯಲ್ಲೂ ಪ್ರತಿಫಲಿಸಬಹುದು ಎಂದು ಇರಾಕ್ ಸಮರಕಾಲದಲ್ಲಿ ಅಮೆರಿಕದ ಕೇಂದ್ರ ಕಮಾಂಡ್ ಮುಖ್ಯಸ್ಥರಾಗಿದ್ದ ಮೆರೈನ್ ಕಾರ್ಪ್ಸ್‌ನ ನಿವೃತ್ತ ಲೆಫ್ಟಿನೆಂಟ್ ಜನರಲ್ ಜಾನ್ ಕ್ಯಾಸ್ಟೆಲ್ಲಾವ್ ಹೇಳಿದರು.

ಏರುತ್ತಿರುವ ಸಮುದ್ರದ ನೀರಿಗೆ ನಷ್ಟವಾಗುವ ಭೂಮಿಯ ಪ್ರಮಾಣ ಇನ್ನಷ್ಟು ಹೆಚ್ಚಿದರೆ ಈ ಪ್ರದೇಶದಲ್ಲಿ ಮತ್ತಷ್ಟು ಸಾಮಾಜಿಕ ಮತು ರಾಜಕೀಯ ಅಸ್ಥಿರತೆ ಉಂಟಾಗಬಹುದು. ಸಶಸ್ತ್ರ ಸಂಘರ್ಷ ಮತ್ತು ಭಯೋತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಈಗ ಹವಾಮಾನ ಮತ್ತು ಭದ್ರತಾ ಕೇಂದ್ರದ ಸಲಹಾ ಮಂಡಳಿಯಲ್ಲಿರುವ ಕ್ಯಾಸ್ಟೆಲ್ಲಾವ್ ನುಡಿದರು.

‘ಆದ್ದರಿಂದ ಇದು ಪರಿಸರ ಸಮಸ್ಯೆಗಿಂತ ಹೆಚ್ಚು ಆತಂಕಕಾರಿಯಾದ ವಿಷಯ ಮತ್ತು ಮಾನವೀಯ ಭದ್ರತೆ ಹಾಗೂ ಸಂಭವನೀಯ ಸೇನಾ ಸಮಸ್ಯೆ ಕೂಡಾ’ ಎಂದು ಎಂದು ಅವರು ಹೇಳಿದರು.

October 30, 2019 Posted by | ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, World | , | Leave a comment

ಪೆಹ್ಲುಖಾನ್ ವಿರುದ್ಧದ ಪ್ರಕರಣ ರದ್ದು ಪಡಿಸಿದ ರಾಜಸ್ಥಾನ ಹೈಕೋರ್ಟ್

30 court order
ಹತ್ಯೆಗಾಗಿ ಜಾನುವಾರು ಕಳ್ಳಸಾಗಣೆ ಆರೋಪದ ಪ್ರಕರಣ

ಜೈಪುರ: ೨೦೧೭ರಲ್ಲಿ ಹತ್ಯೆಯ ಸಲುವಾಗಿ ಗೋವುಗಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಗುಂಪು ಹಲ್ಲೆಗೆ ಗುರಿಯಾಗಿ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದ ಪೆಹ್ಲುಖಾನ್, ಅವರ ಇಬ್ಬರು ಪುತ್ರರು ಮತ್ತು ಟ್ರಕ್ ಚಾಲಕನ ವಿರುದ್ಧ ದಾಖಲಿಸಲಾಗಿದ್ದ ಜಾನುವಾರು ಕಳ್ಳಸಾಗಣೆ ಪ್ರಕರಣವನ್ನು ರಾಜಸ್ಥಾನ ಹೈಕೋರ್ಟ್  2019 ಅಕ್ಟೋಬರ್ 30ರ  ಬುಧವಾರ ರದ್ದು ಪಡಿಸಿತು.

ನ್ಯಾಯಮೂರ್ತಿ ಪಂಕಜ್ ಭಂಡಾರಿ ಅವರ ಏಕಸದಸ್ಯ ಪೀಠವು ಹತ್ಯೆಯ ಸಲುವಾಗಿ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿತ್ತು ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂಬುದಾಗಿ ಹೇಳಿ ರಾಜಸ್ಥಾನ ಗೋಜಾತಿಯ ಪ್ರಾಣಿಗಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ನಾಲ್ವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣ ಮತ್ತು ದೋಷಾರೋಪ ಪಟ್ಟಿಯನ್ನು ರದ್ದು ಪಡಿಸಿತು.

ಟ್ರಕ್ ಚಾಲಕ ಖಾನ್ ಮೊಹಮ್ಮದ್ ಮತ್ತು ಪೆಹ್ಲುಖಾನ್ ಅವರ ಇಬ್ಬರು ಪುತ್ರರು ರಾಜಸ್ಥಾನ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಗೋವುಗಳನ್ನು ಅಕ್ರಮ ಉದ್ದೇಶಗಳಿಗಾಗಿ ಸಾಗಿಸಲಾಗುತ್ತಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವೂ ಇಲ್ಲವಾದ್ದರಿಂದ ಈ ಕ್ರಿಮಿನಲ್ ಪ್ರಕರಣವು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಆರೋಪಿಗಳ ಪರವಾಗಿ ಹಾಜರಾಗಿದ್ದ ವಕೀಲ ಕಪಿಲ್ ಗುಪ್ತ ಅವರು ವಾದಿಸಿದ್ದರು.

ಅವರು ಒಯ್ಯುತ್ತಿದ್ದ ಹಸುಗಳು ಹಾಲು ನೀಡುತ್ತಿದ್ದ ಹಸುಗಳು ಮತ್ತು ಅವುಗಳ ಕರುಗಳು ಕೇವಲ ಒಂದು ತಿಂಗಳು ಪ್ರಾಯದ ಕರುಗಳಾಗಿದ್ದವು ಎಂಬುದನ್ನು ವೈದ್ಯಕೀಯ ತಜ್ಞರ ವರದಿಗಳು ಸಾಬೀತು ಪಡಿಸಿವೆ ಎಂದೂ ಗುಪ್ತ ವಾದಿಸಿದ್ದರು.

ಸ್ಥಳೀಯ ಜಾನುವಾರು ಮಾರುಕಟ್ಟೆಯಿಂದ ಹಸುಗಳನ್ನು ಖರೀದಿಸಿದ್ದಕ್ಕೆ ಸಂಬಂಧಿಸಿದ ರಸೀತಿಗಳು ಇದ್ದು, ಇವುಗಳು ಅವರು ಪಶುಸಂಗೋಪನೆ ಸಲುವಾಗಿ ಜಾನುವಾರುಗಳನ್ನು ಖರೀದಿಸಿದ್ದರು ಎಂಬ ವಾಸ್ತವಾಂಶವನ್ನು ಸಾಬೀತು ಪಡಿಸಿವೆ ಎಂದು ವಕೀಲರು ಪ್ರತಿಪಾದಿಸಿದ್ದರು.

ತೀರ್ಪಿನ ಬಳಿಕ ದೂರವಾಣಿ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ ಪೆಹ್ಲು ಖಾನ್ ಅವರ ಪುತ್ರ ಇರ್ಷಾದ್ ಅವರು ’ನನ್ನ ಹಾಗೂ ನನ್ನ ಸಹೋದರನ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಮತ್ತು ದೋಷಾರೋಪ ಪಟ್ಟಿಯನ್ನು ರದ್ದು ಪಡಿಸಿ ಹೈಕೋರ್ಟ್ ನೀಡಿರುವ ತೀರ್ಪಿನಿಂದ ನಮಗೆ ಅತ್ಯಂತ ಸಂತಸವಾಗಿದೆ. ನಾವು ದನಗಳನ್ನು ಕೊಲ್ಲುವ ಸಲುವಾಗಿ ಒಯ್ಯುತ್ತಿರಲಿಲ್ಲ, ಆದರೆ ನಮ್ಮ ಮೇಲೆ ಹಲ್ಲೆ ನಡೆಯಿತು. ಈದಿನ ನಮಗೆ ನ್ಯಾಯ ಲಭಿಸಿದೆ’ ಎಂದು ಹೇಳಿದರು.

೫೫ರ ಹರೆಯದ ಪೆಹ್ಲುಖಾನ್ ಮತ್ತು ಅವರ ಇಬ್ಬರು ಪುತ್ರರು ಹಾಗೂ ಇತರ ಕೆಲವು ೨೦೧೭ರ ಏಪ್ರಿಲ್ ೧ರಂದು ದನಗಳನ್ನು ಸಾಗಿಸುತ್ತಿದ್ದಾಗ ಆಳ್ವಾರ್ ಜಿಲ್ಲೆಯ ಬಹ್ರೋರಿನಲ್ಲಿ ತಡೆದಿದ್ದ ಗುಂಪು ತೀವ್ರ ಹಲ್ಲೆ ನಡೆಸಿತ್ತು ಎಂದು ಆಪಾದಿಸಲಾಗಿತ್ತು.

ಗೋರಕ್ಷಕರೆಂದು ಹೇಳಿಕೊಂಡ ಗುಂಪಿನ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಪೆಹ್ಲುಖಾನ್ ಏಪ್ರಿಲ್ ೩ರಂದು ತೀವ್ರಗಾಯಗಳ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

October 30, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , , | Leave a comment

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವಿಸ್ ಆಯ್ಕೆ

30 devendra fadnavis
ಸರ್ಕಾರ ರಚನೆಯತ್ತ ಮೊದಲ ಹೆಜ್ಜೆ, ಶಿವಸೇನೆ ಜೊತೆ ಮಾತುಕತೆಗೆ ಗಡುವು

ಮುಂಬೈ: ಮಹಾರಾಷ್ಟ್ರದ ಪಕ್ಷ ಶಾಸಕಾಗ ನಾಯಕರಾಗಿ ದೇವೇಂದ್ರ ಫಡ್ನವಿಸ್ ಅವರನ್ನು ಪುನರಾಯ್ಕೆ ಮಾಡುವುದರೊಂದಿಗೆ 2019 ಅಕ್ಟೊಬರ್ 30ರ ಬುಧವಾರ ಭಾರತೀಯ ಜನತಾ ಪಕ್ಷವು ಸರ್ಕಾರ ರಚನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿತು. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಫಡ್ನವಿಸ್ ಅವರು ಶಿವಸೇನೆ ಜೊತೆಗೆ ೨-೩ ದಿನಗಳಲ್ಲಿ ಮಾತುಕತೆ ಪೂರ್ಣಗೊಳಿಸುವುದಾಗಿ ಪ್ರಕಟಿಸಿದರು.

ಬಿಜೆಪಿಯ ಎಲ್ಲ ೧೦೫ ಮಂದಿ ಶಾಸಕರೂ ದಕ್ಷಿಣ ಮುಂಬೈಯ ವಿಧಾನಭವನದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಹಾಜರಿದ್ದರು. ಕೇಂದ್ರ ಸಚಿವ ನರೇಂದ್ರ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ ರೈ ಖನ್ನಾ ಅವರು ಕೇಂದ್ರ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಮ್ಮ ಮೇಲೆ ವಿಶ್ವಾಸ ಇಟ್ಟದ್ದಕ್ಕಾಗಿ ಮತ್ತು ರಾಜ್ಯದ ಸೇವೆ ಸಲ್ಲಿಸಲು ಇನ್ನೊಂದು ಅವಕಾಶ ನೀಡಿದ್ದಕ್ಕಾಗಿ ಫಡ್ನವಿಸ್ ಅವರು ಶಾಸಕರಿಗೆ ಧನ್ಯವಾದ ಅರ್ಪಿಸಿದರು. ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೂ ಈ ಸಂದರ್ಭದಲ್ಲಿ ಫಡ್ನವಿಸ್ ಧನ್ಯವಾದ ಸಲ್ಲಿಸಿದರು. ಮಹಾರಾಷ್ಟ್ರದಲ್ಲಿ ಜನಾದೇಶ ಲಭಿಸಿರುವುದು ’ಮಹಾ ಮೈತ್ರಿ’ಗೆ, ಆದ್ದರಿಂದ ಎರಡು-ಮೂರು ದಿನಗಳಲ್ಲಿ ಶಿವಸೇನೆಯ ಜೊತೆಗೆ ಮಾತುಕತೆ ಪೂರ್ಣಗೊಳಿಸಲಾಗುವುದು ಎಂದು ಅವರು ನುಡಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಫಡ್ನವಿಸ್ ಹೆಸರನ್ನು ಸೂಚಿಸಿದರು. ಪಕ್ಷದ ಹಿರಿಯ ನಾಯಕ ಸುಧೀರ್ ಮುಗಂತಿವಾರ್, ಹರಿಬಾಬು ಬಗಡೆ, ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಮಂಗಲೋರಾಭಟ್  ಲೋಧಾ ಅವರು ಅದನ್ನು ಅನುಮೋದಿಸಿದರು.

ಚುನಾವಣಾ ಫಲಿತಾಂಶ ಬಂದ ದಿನದಿಂದಲೇ ಶಿವಸೇನೆಯು ಬಿಜೆಪಿಯ ಜೊತೆಗೆ ೫೦-೫೦ ಅಧಿಕಾರ ಹಂಚಿಕೆ ಸೂತ್ರದ ಅನುಷ್ಠಾನಕ್ಕಾಗಿ ಪಟ್ಟು ಹಿಡಿದಿದ್ದು  ಉಭಯ ಪಕ್ಷಗಳೂ ಮುಖ್ಯಮಂತ್ರಿ ಸ್ಥಾನವನ್ನೂ ತಲಾ ಎರಡೂವರೆ ವರ್ಷಗಳಂತೆ ಹಂಚಿಕೊಳ್ಳಬೇಕು ಎಂದು ಆಗ್ರಹಿಸುತ್ತಿದೆ.

‘ಬಿಜೆಪಿಯು ಎಂದೂ ೫೦-೫೦ ಸೂತ್ರವನ್ನು ಒಪ್ಪಿಲ್ಲ ಮತ್ತು ತಾವು ಐದು ವರ್ಷಗಳ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿರುವುದಾಗಿ’ ಹೇಳುವ ಮೂಲಕ ಫಡ್ನವಿಸ್ ಅವರು ಮಂಗಳವಾರ ತಮ್ಮ ನಿಲುವನ್ನು ಬಿಗಿಗೊಳಿಸಿದ್ದರು.

ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣಾ ಸಮರದ ಕಾಲದಲ್ಲಿ ಬಿಜೆಪಿ ಮತ್ತು ಶಿವಸೇನೆ ಜಂಟಿ ಹೋರಾಟಕ್ಕಾಗಿ ಮೈತ್ರಿ ಮಾಡಿಕೊಳ್ಳುವಾಗ ಸ್ಥಾನ ಹಂಚಿಕೆ ಸೂತ್ರವನ್ನು ಒಪ್ಪಿಕೊಳ್ಳಲಾಗಿತ್ತು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪ್ರತಿಪಾದಿಸಿದ್ದರು.

ಫಡ್ನವಿಸ್ ಹೇಳಿಕೆಯ ಬಳಿಕ ಮಂಗಳವಾರ ಸಂಜೆ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ಜೊತೆಗೆ ನಡೆಸಲು ಉದ್ದೇಶಿಸಲಾಗಿದ್ದ ಸಭೆಯನ್ನು ಠಾಕ್ರೆ ರದ್ದು ಪಡಿಸಿದ್ದರು. ಫಡ್ನವಿಸ್ ಅವರ ಹೇಳಿಕೆಯ ಬಳಿಕ ಮಾತುಕತೆಯಾಡಲು ಯಾವ ವಿಚಾರವೂ ಉಳಿದಿಲ್ಲ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದರು.

ಮಿತ್ರ ಪಕ್ಷ ಬಿಜೆಪಿಯ ವಿರುದ್ಧ ನಿರಂತರ ದಾಳಿ ನಡೆಸುತ್ತಿದ್ದ ರಾವತ್ ಅವರು ’ಏನಾಗುತ್ತದೋ ಅದು ಆಗುತ್ತದೆ, ಅದು ಮಹಾರಾಷ್ಟ್ರದ ಹಣೆಬರಹ’  ಎಂದು ಬುಧವಾರ ಹೇಳಿಕೆ ನೀಡಿದ್ದರು.

‘ಬುಧವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಭೆ ನಡೆಯಲಿದೆ. ನನಗೆ ಬಿಜೆಪಿ ಸಭೆಯ ಬಗ್ಗೆ ಗೊತ್ತಿಲ್ಲ. ಆದರೆ ಈದಿನ ಶಿವಸೇನೆಯು ತನ್ನ ಶಾಸಕರ ಜೊತೆಗೆ ಯಾವುದೇ ಸಭೆಯನ್ನೂ ಇಟ್ಟುಕೊಂಡಿಲ್ಲ.  ಪಕ್ಷದ ಸಭೆ ಮತ್ತು ಅದರ ಶಾಸಕಾಂಗ ಪಕ್ಷ ನಾಯಕನ ಆಯ್ಕೆಗೆ ಎಲ್ಲರೂ ಕರೆ ನೀಡಬೇಕು’ ಎಂದು ರಾವತ್ ಅವರನ್ನು ಉಲ್ಲೇಖಿಸಿ ಬುಧವಾರ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.

ಈ ಮಧ್ಯೆ, ಸಚಿವರ ಸಂಖ್ಯೆ ಬಗ್ಗೆ ಉಭಯ ಪಕ್ಷಗಳ ಮಧ್ಯೆ ಅನೌಪಚಾರಿಕ ಮಾತುಕತೆ ಆರಂಭವಾಗಿದೆ ಎಂದು ಬಿಜೆಪಿ ಮತ್ತು ಶಿವಸೇನಾ ಶಿಬಿರಗಳ ಒಳಗಿನ ಮೂಲಗಳು ಮಾಹಿತಿ ನೀಡಿದವು.

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಬಿಜೆಪಿಯ ದೃಢವಾಗಿ ನಿಂತಿದೆ. ಆದ್ದರಿಂದ ಈಗ ಶಿವಸೇನೆಯು ಸರ್ಕಾರದಲ್ಲಿ ಸಮಾನ ಸಂಖ್ಯೆಯ ಸಚಿವ ಹುದ್ದೆಗಳು ಮತ್ತು ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿದೆ ಎಂದು ವಿದ್ಯಮಾನಗಳ ಬಗ್ಗೆ ಅರಿವು ಹೊಂದಿರುವ ಸೇನಾ ನಾಯಕರೊಬ್ಬರು ಹೇಳಿದರು.

ಬಿಜೆಪಿ ಮತ್ತು ಶಿವಸೇನೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವಾಗಿ ಹೋರಾಡಿವೆ. ೨೮೮ ಸದಸ್ಯಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ೧೦೫ ಸ್ಥಾನಗಳನ್ನು ಗೆದರೆ, ಶಿವಸೇನೆಯು ೫೬ ಸ್ಥಾನಗಳನ್ನು ಗೆದ್ದಿತ್ತು.

October 30, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , | Leave a comment

ಶಿವಸೇನೆಗೆ ‘ ’ಪಕ್ಷೇತರ ಬಲ, ೬ ಸದಸ್ಯರ ಬೆಂಬಲ

30 shiv sena ind mla gavit
ಮುಂಬೈ
: ಮಹಾರಾಷ್ಟ್ರದಲ್ಲಿ ಬಿಜೆಪಿಯ ಜೊತೆಗೆ  ‘ಕದನಕ್ಕೆ’ ಇಳಿದಿರುವ ಶಿವಸೇನೆಗೆ 2019 ಅಕ್ಟೋಬರ್ 30ರ ಬುಧವಾರ ಇನ್ನೊಬ್ಬ ಪಕ್ಷೇತರ ಸದಸ್ಯ ಬೆಂಬಲನೀಡಿದ್ದು, ಶಿವಸೇನೆಗೆ ಬೆಂಬಲ ನೀಡಿರುವ ಪಕ್ಷೇತರರ ಬಲ ೬ಕ್ಕೆ ಏರಿತು. ಇದರಿಂದಾಗಿ ೫೬ ಸದಸ್ಯರನ್ನು ಹೊಂದಿರುವ ಶಿವಸೇನೆಯ ಬಲ ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ೬೨ಕ್ಕೇ ಏರಿತು.

ಬಿಜೆಪಿ ಶಾಸಕಾಂಗ ಪಕ್ಷವು ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಸೇನೆಯನ್ನು ಬೆಂಬಲಿಸಿದ ಪಕ್ಷೇತರರ ಸಂಖ್ಯೆ ೬ಕ್ಕೆ ಏರಿತು ಎಂದು ಮೂಲಗಳು ಹೇಳಿದವು.

ಧುಲೆ ಜಿಲ್ಲೆಯ ಸಕ್ರಿ ಕ್ಷೇತ್ರದಿಂದ ಗೆದ್ದಿರುವ ಪಕ್ಷೇತರ ಶಾಸಕಿ ಮಂಜುಳಾ ಗವಿಟ್ ಅವರು ಶಿವಸೇನೆಗೆ ಬೆಂಬಲ ನೀಡಿರುವ ೬ನೇ ಪಕ್ಷೇತರ ಶಾಸಕರಾಗಿದ್ದಾರೆ. ಇದಕ್ಕೆ ಮುನ್ನ ಅವರು ಬಿಜೆಪಿಯಲ್ಲಿ ಇದ್ದರು. ೧೩ಮಂದಿ ಪಕ್ಷೇತರರ ಪೈಕಿ ೫ ಮಂದಿ ಪಕ್ಷೇತರ ಶಾಸಕರು ಈ ಮುನ್ನ ಶಿವಸೇನೆಗೆ ಬೆಂಬಲ ಘೋಷಿಸಿದ್ದರು.

ಎನ್‌ಸಿಪಿ ಬೆಂಬಲಿತ ಪಕ್ಷೇತರ ಶಾಸಕ ಶಂಕರರಾವ್ ಗಡಾಖ್ ಅಕ್ಟೋಬರ್ 28ರ ಸೋಮವಾರ  ಉದ್ಧವ್ ಠಾಕ್ರೆ ಜೊತೆ ಮಾತುಕತೆ ಬಳಿಕ ಸೇನೆಗೆ ಬೆಂಬಲ ಘೋಷಿಸಿದ್ದರು.

October 30, 2019 Posted by | ಭಾರತ, ರಾಷ್ಟ್ರೀಯ, Flash News, India, Nation, News, Politics, Spardha | | Leave a comment

ಭ್ರಷ್ಟರನ್ನು ಮಟ್ಟಹಾಕಿದ್ದ ನ್ಯಾಯಮೂರ್ತಿ ಎನ್.ವೆಂಕಟಾಚಲ ನಿಧನ

30 justice n venkatachala
ಬೆಂಗಳೂರು
: ಭ್ರಷ್ಟರನ್ನು ಮಟ್ಟ ಹಾಕುವಲ್ಲಿ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಜನಪರವಾಗಿ ಬಳಸಿ, ‘ಲೋಕಾಯುಕ್ತರು ಹೀಗೂ ಕೆಲಸ ಮಾಡಬಹುದು’ ಎಂದು ಸಾಧಿಸಿ ತೋರಿಸಿದ್ದ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಅವರು 2019 ಅಕ್ಟೋಬರ್ 30ರ (90) ಬುಧವಾರ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಅಗಲಿದರು..

ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ನಂತರವೇ ಸರ್ಕಾರಿ ಅಧಿಕಾರಿಗಳಲ್ಲಿ ಲೋಕಾಯುಕ್ತ ಭಯವನ್ನು ಉಂಟು ಮಾಡಿತು. ಲೋಕಾಯುಕ್ತ ಸಂಸ್ಥೆಯಿಂದ ತಮ್ಮ ನೋವುಗಳಿಗೆ ಪರಿಹಾರ ಸಿಗುತ್ತದೆ ಎಂಬ ಭಾವನೆ ಜನರಲ್ಲಿಯೂ ಬಂದಿತ್ತು.

‘ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರ ಹಿಂಭಾಗದ  ಲಕ್ಷ್ಮಿ ದೇವಾಲಯದ ಬಳಿಯ ತಮ್ಮ ನಿವಾಸದಲ್ಲಿದ್ದ ಅವರಿಗೆ ಬೆಳಿಗ್ಗೆ 5.45ಕ್ಕೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಒಬ್ಬ ಪುತ್ರ ಮತ್ತು ಪುತ್ರಿ ಸದ್ಯ ಅಮೆರಿಕದಲ್ಲಿದ್ದು ಅವರು ಬಂದ ನಂತರ 2019 ಅಕ್ಟೋಬರ್ 31ರ ಗುರುವಾರ ಅಂತ್ಯಕ್ರಿಯೆ ‌ನಡೆಯಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿದವು.

ಹೆಂಡತಿ ಅನುಶ್ರೀಯಾ, ಪುತ್ರರಾದ ಶೇಷಾಚಲ, ವೇದಾಚಲ (ಇಬ್ಬರೂ ವಕೀಲರು) ಮತ್ತು ಅರ್ಜುನಾಚಲ (ಸಾಫ್ಟ್‌ವೇರ್ ಡೆವಲಪರ್) ಮತ್ತು ಮಗಳು ಅರುಣಾಚಲ (ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರು) ಇದ್ದಾರೆ. ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೊಮ್ಮಗ ವರುಣ್ ತಿಳಿಸಿದರು.

ಪರಿಚಯ: ನಂಜೇಗೌಡ ವೆಂಕಟಾಚಲ ಅವರು ಜುಲೈ 3, 1930ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮಿಟ್ಟೂರಿನ ಕೃಷಿ ಕುಟುಂಬದಲ್ಲಿ ಜನಿಸಿದರು‌.

ಮುಳಬಾಗಿಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪೂರೈಸಿದರು. ಕೋಲಾರದಲ್ಲಿ ಪ್ರೌಢಶಾಲೆ ಮತ್ತು ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಮತ್ತು ಕಾನೂನು ಪದವಿ ಪಡೆದರು.

ಸನ್ನದು: ಮೈಸೂರು (ಈಗ ಕರ್ನಾಟಕ) ಹೈಕೋರ್ಟಿನಲ್ಲಿ ನವೆಂಬರ್ 16, 1965ರಂದು ವಕೀಲರಾಗಿ ಸನ್ನದು ನೋಂದಣಿ ಮಾಡಿಸಿದರು.

ವೃತ್ತಿ ಜೀವನ: ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಸಿವಿಲ್, ಕ್ರಿಮಿನಲ್ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಹೆಚ್ಚಿನ ಪರಿಣತಿ ಪಡೆದುಕೊಂಡರು. 1963ರಿಂದ 1973ರವರೆಗೆ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿದ್ದರು‌. 1973ರಿಂದ 1977ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸಲಹೆಗಾರರೂ ಆಗಿದ್ದರು.

ಹೈಕೋರ್ಟ್ ನ್ಯಾಯಮೂರ್ತಿ: ನವೆಂಬರ್ 28, 1977ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 1992ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಸುಪ್ರೀಂಕೋರ್ಟ್‌ಗೆ ಪದೋನ್ನತಿ: ಜುಲೈ 1, 1992ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿ, ಜುಲೈ 2, 1995ರಂದು ನಿವೃತ್ತರಾದರು.

ಕರ್ನಾಟಕ ಲೋಕಾಯುಕ್ತ: ಜುಲೈ 2, 2001ರಂದು ಕರ್ನಾಟಕ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಅವರು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಈ ಕಾರಣಕ್ಕಾಗಿಯೇ ಜನಮಾನಸದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದರು. ಇವರ ಕಾರ್ಯಶೈಲಿಯ ಕುರಿತಂತೆ ‘ಲಂಚ ಸಾಮ್ರಾಜ್ಯ’ ಎಂಬ ಚಲನಚಿತ್ರವನ್ನೂ ನಿರ್ಮಿಸಲಾಗಿತ್ತು.

‘ಬ್ರಿಟನ್‌ನಲ್ಲಿ ಅನುಸರಿಸುತ್ತಿರುವ ಭ್ರಷ್ಟಾಚಾರ ತಡೆ ಕಾನೂನನ್ನು ಭಾರತದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ಮಾತ್ರ ಪ್ರಧಾನಿ ಕಚೇರಿಯಿಂದ ಹಿಡಿದು ಕೆಳಹಂತದವರೆಗಿನ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸಾಧ್ಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಆಗಾಗ ಹೇಳುತ್ತಿದ್ದರು.

`ಬ್ರಿಟನ್‌ನಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗುವ ಪ್ರಧಾನಿಯನ್ನೂ ಸ್ವತಂತ್ರ ತನಿಖಾ ಸಂಸ್ಥೆಗಳು ತನಿಖೆಗೊಳಪಡಿಸಲು ಅವಕಾಶವಿದೆ. ಅಲ್ಲದೆ, ಪ್ರತ್ಯೇಕ ನ್ಯಾಯಾಲಯಗಳು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸುತ್ತವೆ. ಇದರಿಂದ ಯಾರ ವಿರುದ್ಧವೇ ಆಗಲಿ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಈ ಕಾನೂನಿನ ಪ್ರಕಾರ ಲಂಚ ಸ್ವೀಕಾರಕ್ಕೆ ಪ್ರಚೋದಿಸುವುದು, ಆಹ್ವಾನಿಸುವುದು ಹಾಗೂ ಲಂಚ ಸ್ವೀಕರಿಸುವುದು ಕೂಡ ಅಪರಾಧ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ತಡೆಗೆ ಇಂತಹ ಕಾನೂನು ಸಹಕಾರಿಯಾಗಲಿದೆ’ ಎಂಬುದು ಅವರ ನಿಲುವಾಗಿತ್ತು.

October 30, 2019 Posted by | ಕರ್ನಾಟಕ, ಬೆಂಗಳೂರು, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, Spardha | | Leave a comment

ಭಯೋತ್ಪಾದನೆ ವಿರುದ್ಧ ಹೋರಾಟ:  ಭಾರತಕ್ಕೆ ಯುರೋಪ್ ಸಂಸದರ ಬೆಂಬಲ

30 eu law makers at kashmir
ಶ್ರೀನಗರ
: ಜಾಗತಿಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಐರೋಪ್ಯ ಒಕ್ಕೂಟದ ಸಂಸದರ ತಂಡ  2019 ಅಕ್ಟೋಬರ್ 30ರ ಬುಧವಾರ ಹೇಳಿತು.

ಜಮ್ಮು–ಕಾಶ್ಮೀರಕ್ಕೆ ಈದಿನ ಭೇಟಿ ನೀಡಿದ ಬಳಿಕ ಆಯ್ದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ತಂಡದ ಸದಸ್ಯರು, ‘ನಾವು ಸುದೀರ್ಘ ವರ್ಷಗಳ ಹೋರಾಟದ ಬಳಿಕ ಶಾಂತಿ ನೆಲೆಸಿದ ಯುರೋಪ್‌ಗೆ ಸೇರಿದವರು. ಭಾರತವು ವಿಶ್ವದಲ್ಲೇ ಅತ್ಯಂತ ಶಾಂತಿಯುತ ರಾಷ್ಟ್ರವಾಗುವುದನ್ನು ಕಾಣಲು ನಾವು ಬಯಸುತ್ತೇವೆ. ಇದಕ್ಕಾಗಿ ನಾವು ಜಾಗತಿಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದ ಪರ ನಿಲ್ಲಲಿದ್ದೇವೆ. ಈ ಭೇಟಿಯು ಇಲ್ಲಿನ ವಾಸ್ತವದ ಅರಿವು ಮೂಡಿಸಿದೆ’ ಎಂದು ಹೇಳಿದರು.

‘ನಾವು ಭಾರತದ ನಾಗರಿಕರು ದೇಶದ ಇತರ ಎಲ್ಲ ನಾಗರಿಕರಂತೆ ಇರಲು ಬಯಸುತ್ತೇವೆ. ದೇಶದ ಇತರ ಪ್ರದೇಶಗಳಂತೆಯೇ ನಮ್ಮಲ್ಲೂ ಅಭಿವೃದ್ಧಿಯಾಗುವುದನ್ನು ಆಶಿಸುತ್ತೇವೆ ಎಂಬುದಾಗಿ ಸ್ಥಳೀಯರು ನಮ್ಮ ಬಳಿ ಹೇಳಿದ್ದಾರೆ’ ಎಂದು ಸಂಸದರೊಬ್ಬರು ತಿಳಿಸಿದರು.

ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ರದ್ದತಿಯು ಭಾರತದ ಆಂತರಿಕ ವಿಚಾರ ಎಂದೂ ತಂಡ ಹೇಳಿತು.

ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದ ಸಂಸದರ ನಿಯೋಗವನ್ನು ಬಿಗಿ ಭದ್ರತೆಯಲ್ಲಿ ದಾಲ್‌ ಸರೋವರ ಸೇರಿದಂತೆ ಹಲವು ಪ್ರದೇಶಗಳಿಗೆ ಕರೆದೊಯ್ಯಲಾಯಿತು.

October 30, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ