SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಜಮ್ಮು – ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ

31 J&K and Ladakh union territariesಇತಿಹಾಸದ ಗರ್ಭ ಸೇರಿದ ಜಮ್ಮು ಮತ್ತು ಕಾಶ್ಮೀರ ರಾಜ್ಯ

ನವದೆಹಲಿ: ಇದುವರೆಗೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವು, ರಾಷ್ಟ್ರೀಯ ಏಕತಾ ದಿನವಾಗಿ ಆಚರಣೆಗೊಳ್ಳುತ್ತಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್‌ಅವರ ೧೪೪ನೇ ಜನ್ಮದಿನವಾದ 2019 ಅಕ್ಟೋಬರ್ 31ರ ಗುರುವಾರ ಇತಿಹಾಸದ ಗರ್ಭವನ್ನು ಸೇರಿದ್ದು, ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಜನ್ಮ ತಳೆದವು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ಸಂಸತ್ತು 2019 ಆಗಸ್ಟ್ ೫ರಂದು ರದ್ದು ಪಡಿಸಿದ ೮೬ ದಿನಗಳ ಬಳಿಕ, 2019 ಅಕ್ಟೋಬರ್ ೩೦ರ ಬುಧವಾರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಅಸ್ತಿತ್ವವನ್ನು ಕಳೆದುಕೊಂಡು, ನೂತನ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು.

ಆರ್.ಕೆ. ಮಾಥುರ್ ಅವರು ಲಡಾಖ್ ಕೇಂದ್ರಾಡಳಿತ ಪ್ರದೇಶದ  ಮೊದಲ ಲೆಫ್ಟಿನೆಂಟ್‌ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಗೃಹ ಸಚಿವಾಲಯವು ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು “ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ’  ಹಾಗೂ ‘ಲಡಾಖ್ ಕೇಂದ್ರಾಡಳಿತ ಪ್ರದೇಶ’ ಎಂಬುದಾಗಿ ಬದಲಾಯಿಸಲಾಗಿದೆ ಮತ್ತು ‘ಶಾಶ್ವತ ನಿವಾಸಿಗಳು ಅಥವಾ ಆನುವಂಶಿಕ ರಾಜ್ಯ’ ವಿಷಯಗಳನ್ನು ಕೈಬಿಡಲಾಗಿದೆ’ ಎಂದು ಘೋಷಿಸಲಾಯಿತು.

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಪುದುಚೆರಿಯಂತಹ ಶಾಸಕಾಂಗ, ಚುನಾಯಿತ ಶಾಸನಸಭೆ ಮತ್ತು ಮುಖ್ಯಮಂತ್ರಿಯನ್ನು ಹೊಂದಿರುತ್ತದೆ. ಇನ್ನೊಂದೆಡೆಯಲ್ಲಿ  ಲಡಾಖ್ ಕೇಂದ್ರಾಡಳಿತ ಪ್ರದೇಶವು ಶಾಸನಸಭೆರಹಿತವಾದ ಚಂಡೀಗಢ ಮಾದರಿಯ ಕೇಂದ್ರಾಡಳಿತ ಪ್ರದೇಶವಾಗಿರುತ್ತದೆ. ಇದು ಎರಡು ಗುಡ್ಡಗಾಡು ಅಭಿವೃದ್ಧಿ ಮಂಡಳಿಗಳನ್ನು ಹೊಂದಿರುತ್ತದೆ.

ಜಮ್ಮು ಮತ್ತು ಕಾಶ್ಮೀರ ಮರುಸಂಘಟನಾ ಕಾಯ್ದೆ, ೨೦೧೯ರ ಅಡಿಯಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಾಗಿ ಆಡಳಿತವನ್ನು ಲೆಫ್ಟಿನೆಂಟ್ ಗವರ್ನರುಗಳು (ಎಲ್-ಜಿ) ವಹಿಸಿಕೊಂಡರು.

ಗಿರೀಶ್‌ಚಂದ್ರ ಮುರ್ಮು (ಜಿಸಿ ಮುರ್ಮು) ಅವರು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿ  ಶ್ರೀನಗರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೀತಾ ಮಿತ್ತಲ್‌ ಅವರಿಂದ ಮಧ್ಯಾಹ್ನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಗೃಹ ಸಚಿವಾಲಯದ ಅಧಿಸೂಚನೆಯ ಬಳಿಕ, ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಮತ್ತು ರಣಬೀರ್ ದಂಡ ಸಂಹಿತೆ ಅಸ್ತಿತ್ವ ಕಳೆದುಕೊಂಡಿತು. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವಿದ್ದ ಪ್ರದೇಶದಲ್ಲಿ ಕೇಂದ್ರ ಕಾನೂನುಗಳನ್ನು ಅನ್ವಯಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಅಧಿಸೂಚನೆಯು ಪ್ರಕಟಿಸಿತು.

‘ ರಾಜ್ಯ ಕಾನೂನುಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಮತ್ತು ಕೇಂದ್ರ ಪ್ರಾಂತ್ಯದ ಲಡಾಖ್‌ಗೆ ’ಶಾಶ್ವತ ನಿವಾಸಿಗಳು’ ಅಥವಾ ’ಆನುವಂಶಿಕ ರಾಜ್ಯ ವಿಷಯಗಳು’ …, ಎಲ್ಲೆಲ್ಲಿ ಅನ್ವಯಿಸಲ್ಪಡುತ್ತದೆಯೋ ಅಲ್ಲೆಲ್ಲ ಇವುಗಳನ್ನು ಬಿಟ್ಟು ಬಿಡಲಾಗಿದೆ’ ಎಂದು ಗೃಹ ಸಚಿವಾಲಯದ ಅಧಿಸೂಚನೆ ಹೇಳಿತು.

“ಜಮ್ಮು ಮತ್ತು ಕಾಶ್ಮೀರ ರಾಜ್ಯ” ಅಥವಾ “ಜಮ್ಮು ಮತ್ತು ಕಾಶ್ಮೀರ” ಅಥವಾ “ರಾಜ್ಯ” ದ ಬಗ್ಗೆ ಯಾವುದೇ ರೀತಿಯ ಪದಗಳ ಉಲ್ಲೇಖಗಳನ್ನು ಅಕ್ಟೋಬರ್ ೩೧ ರಿಂದ “ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ” ಅಥವಾ “ಲಡಾಖ್ ಕೇಂದ್ರಾಡಳಿತ  ಪ್ರದೇಶ” ಎಂಬುದಾಗಿ (ಯಾವುದು ಅನ್ವಯವಾಗುತ್ತದೆಯೋ ಅದು) ಬದಲಾಯಿಸಲಾಗಿದೆ ಎಂದು ಅಧಿಸೂಚನೆ ಹೇಳಿತು.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶಾಸನಸಭೆ ಅಥವಾ ಶಾಸಕಾಂಗವನ್ನು  ಕೇಂದ್ರಾಡಳಿತ ಪ್ರದೇಶದ ಶಾಸನಸಭೆ ಅಥವಾ ಶಾಸಕಾಂಗ ಎಂಬುದಾಗಿ ಉಲ್ಲೇಖಿಸಲಾಗುತ್ತದೆ ಎಂದು ಅಧಿಸೂಚನೆ ತಿಳಿಸಿತು.

ಆಗಸ್ಟ್ ೫ ಮತ್ತು ಅಕ್ಟೋಬರ್ ೩೧ ರ ನಡುವಣ ಅವಧಿಯಲ್ಲಿ ಹೊರಡಿಸಲಾದ  ಯಾವುದೇ ಅಧಿಸೂಚನೆ ಅಥವಾ ಆದೇಶ, ನಿಯಮ ಅಥವಾ ನೇಮಕಾತಿ ಸೇರಿದಂತೆ ಯಾವುದೇ ಕ್ರಮಗಳ  ವಿರುದ್ಧ ಯಾವುದೇ ಮೊಕದ್ದಮೆ ಹೂಡಲಾಗದು ಅಥವಾ ಅವುಗಳನ್ನು  ನಿರ್ವಹಿಸಲಾಗದು,  ಏಕೆಂದರೆ ಇವುಗಳನ್ನು ಅಧಿಸೂಚನೆಯ ಅಡಿಯಲ್ಲಿ ಕೈಗೊಳ್ಳಲಾದ ಕಾನೂನುಬದ್ಧವಾದ  ಕ್ರಮಗಳು ಎಂದು ಪರಿಗಣಿಸಲಾಗುವುದು ಎಂದು ಅಧಿಸೂಚನೆ ಹೇಳಿತು..

ಅಕ್ಟೋಬರ್ ೩೧ರವರೆಗೆ, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸಂವಿಧಾನ ಆಥವಾ ಆಗ ಜಾರಿಯಲ್ಲಿದ್ದ ಇತರ ಕಾನೂನುಗಳ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ವ್ಯಕ್ತಿಗಳನ್ನು ಭಾರತೀಯ ಸಂವಿಧಾನ ಮತ್ತು ಕಾನೂನುಗಳ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ವ್ಯಕ್ತಿಗಳೆಂದು ಪರಿಗಣಿಸಲಾಗುವುದು ಎಂದೂ ಅಧಿಸೂಚನೆ ಹೇಳಿತು.

October 31, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha | , , , | Leave a comment

೩೭೦ನೇ ವಿಧಿ ರದ್ದು ಮೂಲಕ ಸರ್ದಾರ್ ಪಟೇಲ್ ಕನಸು ನನಸು: ಪ್ರಧಾನಿ ಮೋದಿ

31 pm modi at kevadiaಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುತ್ತಿದ್ದ ‘ಕೃತಕ’ ಗೋಡೆ ಇದೀಗ ನಾಶ

ನವದೆಹಲಿ/ ಕೇವಡಿಯಾ: ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದ ಇತರ ಭಾಗಳಿಂದ ಪ್ರತ್ಯೇಕಿಸುವ ’ಕೃತಕಗೋಡೆಯನ್ನು’ ಸೃಷ್ಟಿಸಿತ್ತು; ಆಗಸ್ಟ್ ೫ರಂದು ಅದನ್ನು ರದ್ದು ಪಡಿಸುವ ಮೂಲಕ ಸರ್ದಾರ್ ಪಟೇಲ್‌ಅವರು ಕಂಡಿದ್ದ ಭಾರತವನ್ನು ಏಕೀಕರಣ ಮಾಡುವ ಕನಸಿನ ಯೋಜನೆಯನ್ನು ಈಡೇರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಅಕ್ಟೋಬರ್ 31ರ ಗುರುವಾರ ಹೇಳಿದರು.

ಪ್ರಧಾನಿಯವರು ಗುಜರಾತಿನ ಕೇವಡಿಯಾದಲ್ಲಿ ಭಾರತದ ಮೊದಲ ಗೃಹ ಸಚಿವರ ೧೪೪ನೇ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸುವ ಸಲುವಾಗಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸರ್ದಾರ್ ಪಟೇಲರ ೧೪೪ನೇ ಜನ್ಮದಿನದಂದು ಪ್ರಧಾನಿ ಮೋದಿಯವರು ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಏಕತಾ ಪ್ರತಿಮೆಯನ್ನು ಕಳೆದ ವರ್ಷ ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ನಿರ್ಮಿಸಿ ಉದ್ಘಾಟಿಸಲಾಗಿತ್ತು.  ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವು ೨೦೧೪ರಿಂದೀಚೆಗೆ ಸರ್ದಾರ್ ಪಟೇಲ್‌ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ‘ರಾಜಕೀಯ ಸ್ಥಿರತೆಯ ಮತ್ತು ಅಭಿವೃದ್ಧಿಯ ಹೊಸ ಯುಗ’ ಉದಯಿಸಿದ್ದು, ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಮತು ಅಭಿವೃದ್ಧಿ ಮಂಡಳಿ (ಬಿಡಿಸಿ) ಚುನಾವಣೆಗಳು ಇತ್ತೀಚೆಗೆ ನಡೆದವು ಎಂದು ಮೋದಿ ಹೇಳಿದರು.

‘ಹೊಸ ಹೆದ್ದಾರಿಗಳು, ರೈಲ್ವೇ ಮಾರ್ಗಗಳು, ಹೊಸ ಆಸ್ಪತ್ರೆಗಳು, ಹೊಸ ಕಾಲೇಜುಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳ ಜನರನ್ನು ಹೊಸ ಎತ್ತರಕ್ಕೆ ಒಯ್ಯಲಿವೆ’ ಎಂದು ಪ್ರಧಾನಿ, ಒಂದೇ ಏಟಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಅಧಿಕೃತವಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮವು ಬುಧವಾರ ಮಧ್ಯರಾತ್ರಿ ಅನುಷ್ಠಾನಗೊಂಡ ಕೆಲವೇ ಗಂಟೆಗಳ ಬಳಿಕ ಹೇಳಿದರು.

೩೭೦ನೇ ವಿಧಿ ಇದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಲ್ಲಿ ೪೦,೦೦೦ಕ್ಕೂ ಹೆಚ್ಚು ಜನರು ಭಯೋತ್ಪಾದನೆಗೆ ಬಲಿಯಾಗಿ ಪ್ರಾಣತೆತ್ತಿದ್ದಾರೆ. ಮುಗ್ಧ ಜನರ ಇಂತಹ ಸಾವನ್ನು ರಾಷ್ಟ್ರ ಎಷ್ಟು ಸಮಯದವರೆಗೆ ನೋಡಬೇಕು? ಈಗ ಗೋಡೆಯನ್ನು ಕೆಡವಿ ಹಾಕಲಾಗಿದೆ ಮತ್ತು ಸರ್ದಾರ್ ಪಟೇಲರ ಕನಸು ನನಸಾಗಿದೆ’ ಎಂದು ೧೮೨ ಮೀಟರ್‌ಎತ್ತರದ ಏಕತಾ ಪ್ರತಿಮೆಯ ಬುಡದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನುಡಿದರು.

ಭಯೋತ್ಪಾದನೆಯ ಮಹಾದ್ವಾರ ಬಂದ್: ಅಮಿತ್ ಶಾ

ಸಂವಿಧಾನದ ೩೭೦ ಮತ್ತು ೩೫ಎ ವಿಧಿಗಳನ್ನು ರದ್ದು ಪಡಿಸುವ ಮೂಲಕ ದೇಶದಲ್ಲಿದ್ದ ಭಯೋತ್ಪಾದನೆಯ ಮಹಾದ್ವಾರಗಳನ್ನು ಪ್ರಧಾನಿ ಮೋದಿ ಮುಚ್ಚಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನವದೆಹಲಿಯಲ್ಲಿ ಹೇಳಿದರು.

ಭಾರತದ ಮೊತ್ತ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಮಿತ್ ಶಾ ಅವರು ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರ ರಾಜ್ಯವು ಹಿಂದಿನ ದಿನ ನಡುರಾತ್ರಿ ರದ್ದಾಗಿ, ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದ ಕೆಲವೇ ಗಂಟೆಗಳ ಬಳಿಕ  ಈ ಮಾತುಗಳನ್ನು ಹೇಳಿದ ಅಮಿತ್ ಶಾ ಅವರು ‘ಸ್ವಾತಂತ್ರ್ಯ ಲಭಿಸಿದ ಬಳಿಕ  ೫೫೦ ರಾಜಪ್ರಭುತ್ವದ ಪ್ರಾಂತ್ಯಗಳಾಗಿ ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ನಾವು ಇಂದು ನಕ್ಷೆಯಲ್ಲಿ ನೋಡುತ್ತಿರುವ ಸಂಯುಕ್ತ ಭಾರತ ಸೃಷ್ಟಿಯಾದದ್ದು ಕೇವಲ ಸರ್ದಾರ್ ಪಟೇಲರ ಪ್ರಯತ್ನಗಳ ಫಲವಾಗಿ’  ಎಂದು ಗೃಹ ಸಚಿವರು ಹೇಳಿದರು.

‘ಸರ್ದಾರ್ ಪಟೇಲ್ ಅವರು ೫೫೦ ಪ್ರಾಂತ್ಯಗಳನ್ನು ಒಗ್ಗೂಡಿಸಿ ಭಾರತದ ಏಕತೆಯನ್ನು ಸಾಧಿಸಿದರು. ಆದರೆ ಜಮ್ಮು ಮತ್ತು ಕಾಶ್ಮೀರವನ್ನು ದೇಶದಲ್ಲಿ ಸೇರ್ಪಡೆ ಮಾಡಲಾಗಲಿಲ್ಲ ಎಂಬ ವಿಷಾದ ಅವರದಾಗಿತ್ತು. ಜಮ್ಮು ಮತ್ತು ಕಾಶ್ಮೀರ ಭಾರತದಲ್ಲಿ ವಿಲೀನಗೊಂಡಿತು, ಆದರೆ ೩೭೦ ಮತ್ತು ೩೫ಎ ವಿಧಿಗಳಿಂದಾಗಿ ಅದು ನಮಗೆ ಸಮಸ್ಯೆಯಾಗಿ ಉಳಿಯಿತು’ ಎಂದು ಶಾ ಹೇಳಿದರು.

೭೦ ವರ್ಷಗಳ ಕಾಲ ಯಾರೊಬ್ಬರೂ ಈ ವಿಧಿಗಳ ಬಗ್ಗೆ ಯೋಚಿಸಲಿಲ್ಲ. ಆದರೆ ೨೦೧೯ರಲ್ಲಿ, ಜನರು ಅಧಿಕಾರದ ಸೂತ್ರವನ್ನು ಪ್ರಧಾನಿ ಮೋದಿಯವರಿಗೆ ಕೊಟ್ಟರು ಮತ್ತು ಆಗಸ್ಟ್ ೫ರಂದು ಸಂಸತ್ತು ೩೭೦ ಮತ್ತು ೩೫ಎ ವಿಧಿಗಳನ್ನು ರದ್ದು ಪಡಿಸಿ ಸರ್ದಾರ್ ಪಟೇಲ್ (ವಲ್ಲಭಭಾಯಿ ಪಟೇಲ್) ಅವರ ಕನಸನ್ನು ನನಸು ಮಾಡಿತು ಎಂದು ಗೃಹ ಸಚಿವರು ನುಡಿದರು.

ಮೋದಿ ಸರ್ಕಾರವು ೨೦೧೪ರಿಂದ ಅಕ್ಟೋಬರ್ ೩೧ನ್ನು ರಾಷ್ಟ್ರೀಯಏಕತಾ ದಿನವಾಗಿ ಆಚರಿಸುತ್ತಿದೆ. ಏಕತಾ ದಿನದ ಅಂಗವಾಗಿ ನವದೆಹಲಿಯಲ್ಲಿ ನಡೆಸಲಾದ ಬೃಹತ್ ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಮಾಜಿಯೋಧರು, ಹಿರಿಯ ನಾಗರಿಕರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರು. ಮೆರವಣಿಗೆಯು ಇಂಡಿಯಾಗೇಟಿನಲ್ಲಿರುವ ಅಮರ ಜವಾನ್ ಜ್ಯೋತಿಯಲ್ಲಿ ಸಮಾಪ್ತಿಗೊಂಡಿತು.

October 31, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Prime Minister, Spardha, World | | Leave a comment

ಮುಗಿಯದ ಹಗ್ಗ-ಜಗ್ಗಾಟ, ಕಾಂಗ್ರೆಸ್, ಎನ್‌ಸಿಪಿ ಜೊತೆಗೂ ಶಿವಸೇನೆ ಮಾತುಕತೆ

31 shivsena legislature parte meetಶಾಸಕರ ನಾಯಕರಾಗಿ ಏಕನಾಥ ಶಿಂಧೆ ಆಯ್ಕೆ, ಸರ್ಕಾರ ರಚನೆಗೆ ಫಡ್ನವಿಸ್ ಸಿದ್ಧತೆ

ನವದೆಹಲಿ/ ಮುಂಬೈ: ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಕೇಸರಿ ಮೈತ್ರಿಕೂಟದ ಬಿಕ್ಕಟ್ಟು ಬಗೆಹರಿಯದೇ ಇದ್ದರೂ, ನವೆಂಬರ್ ೪-೫ರ ವೇಳೆಗೆ ವಾಂಖೇಡೆ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಬಿಜೆಪಿ ಸಿದ್ಧತೆ ಆರಂಭಿಸಿತು. ಆದರೆ ಶಿವಸೇನೆ- ಬಿಜೆಪಿ ಮಧ್ಯೆ ಹಗ್ಗ ಜಗ್ಗಾಟ ಮುಂದುವರೆದಿದ್ದು, ಸೇನೆಯು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂ ಮಾತುಕತೆ ನಡೆಸಿತು.ಶಿವಸೇನೆಯ ಸಂಜಯ ರಾವತ್ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ಶಿವಸೇನೆಯು ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಕುರಿತ ತನ್ನ ಪಟ್ಟನ್ನು ಸಡಿಲಿಸಿದೆ ಎಂಬ ವರದಿಗಳ ಮಧ್ಯೆಯೇ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ’ಶಿವ ಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಶಾಸಕರ ಸಭೆಯಲ್ಲಿ ಘೋಷಿಸುವ ಮೂಲಕ ತಾನಿನ್ನೂ ಪಟ್ಟು ಸಡಿಲಿಸಿಲ್ಲ ಎಂದು ಸುಳಿವು ನೀಡಿದರು.

ಪಕ್ಷವು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಇನ್ನೂ ಮಾತುಕತೆ ನಡೆಸುತ್ತಿದೆ ಮತ್ತು ಶಿವಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸಿದೆ. ನಾವು ಯಾವುದಕ್ಕೆ ಬದ್ಧರಾಗಿದ್ದೇವೋ ಅದನ್ನೇ ಕೇಳುತ್ತಿದ್ದೇವೆ’ ಎಂದು ಠಾಕ್ರೆ ಹೇಳಿದರು.

೫೦:೫೦ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಬಿಜೆಪಿ ಭರವಸೆ ಕೊಟ್ಟಿಲ್ಲ ಎಂಬುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿರುವುದಕ್ಕೆ ಭ್ರಮನಿರಸನ ವ್ಯಕ್ತ ಪಡಿಸಿದ ಉದ್ಧವ್ ’ಅಮಿತ್ ಶಾ ಮತ್ತು ತಮ್ಮ ಮಧ್ಯೆ ಯಾವುದಕ್ಕೆ ಬದ್ಧತೆ ವ್ಯಕ್ತ ಪಡಿಸಲಾಗಿತ್ತು ಎಂದು ಫಡ್ನವಿಸ್ ಅವರು ಮೊದಲು ಸ್ಪಷ್ಟ ಪಡಿಸಿಕೊಳ್ಳಲಿ’ ಎಂದು ಹೇಳಿದರು.

ಅಧಿಕಾರದ ಹಗ್ಗ ಜಗ್ಗಾಟದ ನಡುವೆಯೇ ಫಡ್ನವಿಸ್ ಅವರು ಈದಿನ ಹಲವಾರು ಪಕ್ಷಗಳ ಶಾಸಕರು ಮತ್ತು ಪಕ್ಷೇತರ ಶಾಸಕರ ಜೊತೆ ಸಭೆ ನಡೆಸಿ ವಿವಿಧ ವಿಷಯಗಳನ್ನು ಚರ್ಚಿಸಿದರು. ಎಲ್ಲ ಶಾಸಕರೂ ಫಡ್ನವಿಸ್ ನಾಯಕತ್ವಕ್ಕೆ ದೃಢ ಬೆಂಬಲ ವ್ಯಕ್ತ ಪಡಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಈ ಮಧ್ಯೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಈದಿನ ನಡೆದ ಮೊದಲ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವಸೇನಾ ಶಾಸಕರು ರಾಜ್ಯ ಸಚಿವ ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದರು.

ಬಿಜೆಪಿ-ಶಿವಸೇನಾ ಮೈತ್ರಿ ಸರ್ಕಾರದಿಂದ ಸಧ್ಯಕ್ಕೆ ೨೯ರ ಹರೆಯದ ಠಾಕ್ರೆ ಕುಡಿ ಹೊರಗುಳಿಯಬೇಕು ಎಂಬ ಸೂತ್ರಕ್ಕೆ ಆದಿತ್ಯ ಠಾಕ್ರೆ ಮತ್ತು ಅವರ ತಂದೆ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತೀರ್‍ಮಾನಿಸಿದ ಬಳಿಕ ಸೇನಾ ಶಾಸಕರು ಶಿಂಧೆ ಅವರನ್ನು ತಮ್ಮ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಿದರು.

ಠಾಕ್ರೆ ಕುಟುಂಬದಿಂದ ಮೊತ್ತ ಮೊದಲಿಗರಾಗಿ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸುತ್ತಿರುವ ಆದಿತ್ಯ ಠಾಕ್ರೆ ಅವರು ತಾವು ಸಧ್ಯಕ್ಕೆ ಸರ್ಕಾರದ ಭಾಗವಾಗಿ ಇರಲು ಬಯಸುವುದಿಲ್ಲ ಎಂಬುದಾಗಿ ಪಕ್ಷ ನಾಯಕರಿಗೆ ಹೇಳಿದ್ದು ಅದಕ್ಕೆ  ಉದ್ಧವ್ ಠಾಕ್ರೆ ಒಪ್ಪಿದ್ದಾರೆ ಎಂದು ಹಿರಿಯ ಸೇನಾ ನಾಯಕರು ಹೇಳಿದರು.

’ಆದಿತ್ಯ ಅವರು ಸರ್ಕಾರಕ್ಕೆ ಸೇರ್ಪಡೆಯಾಗುವ ಮುನ್ನ ಒಂದು ಅಥವಾ ಎರಡು ವರ್ಷಗಳ ಕಾಲ ಶಾಸಕಾಂಗ ಕಲಾಪಗಳನ್ನು  ಮತ್ತು ಆಡಳಿತದ ಪ್ರಕ್ರಿಯೆಯನ್ನು ಕಲಿತುಕೊಳ್ಳಬೇಕು ಎಂಬುದು ಉದ್ಧವ್ ಜಿ ಅವರ ಅಭಿಪ್ರಾಯವಾಗಿದೆ’ ಎಂದು ಹಿರಿಯ ಸೇನಾ ನಾಯಕ ನುಡಿದರು.

ಆದಿತ್ಯ ಠಾಕ್ರೆ ಅವರು ಸರ್ಕಾರ ಸೇರ್ಪಡೆಯಿಂದ ಹಿಂದೆ ಸರಿದಿರುವ ಕಾರಣ ಪಕ್ಷದ ಇಬ್ಬರು ಹಿರಿಯರು ಹಾಗೂ ಹಾಲಿ ಸರ್ಕಾರದಲ್ಲಿ ಸಚಿವರಾಗಿರುವ ಏಕನಾಥ ಶಿಂಧೆ ಅಥವಾ ಸುಭಾಶ್ ದೇಸಾಯಿ ಅವರಲ್ಲಿ ಯಾರಾದರೂ ಒಬ್ಬರು ಸರ್ಕಾರವನ್ನು ಸೇರಬಹುದು ಎಂದು ಉದ್ಧವ್ ಅವರು ನಿರೀಕ್ಷಿಸಿದರು.

ಆದಿತ್ಯ ಠಾಕ್ರೆ ಅವರ ನಿರ್ಧಾರವು ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜೊತೆಗಿನ ನೂತನ ಸರ್ಕಾರದಲ್ಲಿ ಸಚಿವ ಸ್ಥಾನಗಳಿಗಾಗಿ ನಡಸುವ ಸೇನಾ ಮಾತುಕತೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಪುತ್ರ ಆದಿತ್ಯ ಬಿಜೆಪಿ-ಶಿವಸೇನಾ ಸರ್ಕಾರದಲ್ಲಿ ಸಧ್ಯಕ್ಕೆ ಪಾಲ್ಗೊಳ್ಳದ ಕಾರಣ ಉಪಮುಖ್ಯಮಂತ್ರಿ ಸ್ಥಾನವನ್ನು ಉದ್ಧವ್ ಅವರು ಈಗ ಬಯಸದೇ ಇರಬಹುದು ಎಂದು ಹಿರಿಯ ಸೇನಾ ನಾಯಕ ನುಡಿದರು.

ಎರಡು ಮಿತ್ರ ಪಕ್ಷಗಳ  ಮಧ್ಯೆ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಮಾತುಕತೆ ನಡೆದಿದ್ದು, ಬಿಜೆಪಿಯು ಶಿವಸೇನೆಗೆ ೨೦೧೪ರ ಸರ್ಕಾರದಲ್ಲಿ ನೀಡಲಾಗಿದ್ದ ೧೩ ಸ್ಥಾನಗಳಲ್ಲದೆ ಎರಡು ಅಥವಾ ಮೂರು ಸ್ಥಾನಗಳನ್ನು ಮಂತ್ರಿಮಂಡಲದಲ್ಲಿ ನೀಡುವ ಇಂಗಿತ ವ್ಯಕ್ತ ಪಡಿಸಿದೆ. ಶಿವಸೇನೆಯು ಉಪಮುಖ್ಯಮಂತ್ರಿ ಸ್ಥಾನವನ್ನು ಬಯಸದೇ ಇದ್ದರೆ ಇನ್ನೂ ಒಂದು ಸಂಪುಟ ಸ್ಥಾನವನ್ನು ನೀಡಬಹುದು. ಆದರೆ ಸೇನೆಯು ಇನ್ನೂ ಹೆಚ್ಚಿನ ಸ್ಥಾನಗಳನ್ನು ಬಯಸುತ್ತಿದೆ.

ಹೊರಹೋಗುತ್ತಿರುವ ಸರ್ಕಾರದಲ್ಲಿ ಬಿಜೆಪಿಯ ೨೭ ಸಚಿವರನ್ನು ಹೊಂದಿದರೆ, ಶಿವಸೇನೆಯು ೧೩ ಮತ್ತು ಇತರ ಸಣ್ಣ ಮಿತ್ರ ಪಕ್ಷಗಳು ೩ ಮಂತ್ರಿಗಳನ್ನು ಹೊಂದಿದ್ದವು.

ಮುಖ್ಯಮಂತ್ರಿ ಸ್ಥಾನವು ಮಾತುಕತೆಯ ವಿಷಯವೇಅಲ್ಲ ಎಂಬುದಾಗಿ ಬಿಜೆಪಿ ಸ್ಪಷ್ಟ ಪಡಿಸಿದೆ. ಅದೇ ರೀತಿ ಗೃಹ, ಹಣಕಾಸು, ಕಂದಾಯ ಮತ್ತು ನಗರಾಭಿವೃದ್ಧಿ ಖಾತೆಗಳಂತಹ ಮಹತ್ವದ ಖಾತೆಗಳೂ ಮಾತುಕತೆಯ ವಿಷಯವಲ್ಲ ಎಂದು ಬಿಜೆಪಿ ಸ್ಪಷ್ಟ ಪಡಿಸಿದೆ.

ವಸತಿ, ಕೃಷಿ ಇಲಾಖೆಗಳು ಸೇರಿದಂತೆ ಇತರ ಖಾತೆಗಳನ್ನು ಸೇನೆಗೆ ಕೊಡಲು ಬಿಜೆಪಿ ಮುಂದೆ ಬಂದಿದೆ.

ಮಾತುಕತೆಗಳು ಸಂಪುಟದ ರೂಪವನ್ನು ಸ್ಪಷ್ಟಗೊಳಿಸಬಹುದು ಮತ್ತು ಮುಂದಿನ ವಾರದ ಆದಿಯಲ್ಲಿ ನೂತನ ಸರ್ಕಾರ ರಚನೆಯಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ೨೪ರಂದು ಮತಗಳ ಎಣಿಕೆಯ ಬಳಿಕ ಕೇಸರಿ ಮೈತ್ರಿಕೂಟ ಪುನರಾಯ್ಕೆಗೊಂಡ ಬಳಿಕ ಉಭಯ ಪಕ್ಷಗಳು ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತೀವ್ರ ತಿಕ್ಕಾಟ ನಡೆಸಿವೆ.

೨೮೮ ಸದಸ್ಯ ಬಲದ ವಿಧಾನಸಭೆಯಲಿ ಬಿಜೆಪಿಯು ೧೦೫ ಸ್ಥಾನಗಳನ್ನು ಗೆದ್ದಿದ್ದರೆ, ಶಿವಸೇನೆಯು ೫೬ ಸ್ಥಾನಗಳನ್ನು ಗೆದ್ದಿದೆ. ವಿರೋಧಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು ೫೪ ಸ್ಥಾನಗಳನ್ನು ಗೆದ್ದಿದ್ದರೆ ಅದರ ಮಿತ್ರ ಪಕ್ಷ ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿದೆ. ಉಭಯ ಮೈತ್ರಿಕೂಟಗಳಲ್ಲೂ ಇರುವ ಪಕ್ಷೇತರರು ಮತ್ತು ಸಣ್ಣಪಕ್ಷಗಳು ಒಟ್ಠಾಗಿ ೨೯ ಸ್ಥಾನಬಲ ಹೊಂದಿವೆ.

ಲೋಕಸಭಾ ಚುನಾವಣೆಗೆ ಮುನ್ನ ಫೆಬ್ರುವರಿಯಲ್ಲಿ ನಿರ್ಧರಿಸಲಾಗಿದ್ದ ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಆಧಾರದಲ್ಲಿ ಮಾತುಕತೆ ನಡೆಯಬೇಕು ಎಂದು ಸೇನೆಯು ಪಟ್ಟು ಹಿಡಿಯಲು ಆರಂಭಿಸುವುದರೊಂದಿಗೆ ಸರ್ಕಾರ ರಚನೆ ಪ್ರಕ್ರಿಯೆ ನಿಧಾನಗೊಂಡಿದೆ.

ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಯಾವುದೇ ನಿರ್ಧರವೂ ಆಗಿಲ್ಲ ಎಂಬುದಾಗಿ ಹೇಳಿ, ಅದನ್ನು ಹಂಚಿಕೊಳ್ಳುವ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ.

ನಿರೀಕ್ಷೆಯಿಂತೆಯೇ, ಶಿವಸೇನೆಯು ತನ್ನ ಪಟ್ಟನ್ನು ಸಡಿಲಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್ ಬಲ್ ಹೇಳಿದ್ದಾರೆ. ’ಶಿವಸೇನೆಯ ತನ್ನ ಸದಸ್ಯರ ಸ್ಥೈರ್‍ಯವನ್ನು ಬಲಪಡಿಸುವ ಸಲುವಾಗಿ ಬಿಗಿಭಾಷೆಯನ್ನು ಪ್ರಯೋಗಿಸುತ್ತಿದೆ. ಆದರೆ ಬಿಜೆಪಿ ತನ್ನ ನಿಲುವನ್ನು ಬಿಗಿಗೊಳಿಸಿದ ಬಳಿಕ ಅಂತಿಮವಾಗಿ ತನ್ನ ನಿಲುವನ್ನು ಮೆದುಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ. ಪಕ್ಷವು ಕಳೆದ ಐದು ವರ್ಷಗಳಿಂದ ಹೀಗೆಯೇ ಮಾಡುತ್ತಾ ಬಂದಿದೆ’ ಎಂದು ಪ್ರಕಾಶ್ ಬಲ್ ಹೇಳಿದರು.

October 31, 2019 Posted by | ರಾಷ್ಟ್ರೀಯ, ವಿಶ್ವ/ ಜಗತ್ತು, Flash News, India, Nation, News, Politics, Spardha | , , | Leave a comment

ಪಾಕ್ ಪ್ಯಾಸೆಂಜರ್ ರೈಲಿನಲ್ಲಿ ಗ್ಯಾಸ್ ಸ್ಟವ್ ಸ್ಫೋಟ: ಕನಿಷ್ಠ ೭೩ ಸಾವು

31 pak train fire tragedyಪ್ರಯಾಣಿಕರು ಅಡುಗೆ ಮಾಡುತ್ತಿದ್ದಾಗ ಸಂಭವಿಸಿದ ಭೀಕರ ದುರಂತ

ಇಸ್ಲಾಮಾಬಾದ್: ಕೇಂದ್ರ ಪಾಕಿಸ್ತಾನದ ಪ್ಯಾಸೆಂಜರ್ ರೈಲುಗಾಡಿಯೊಂದಕ್ಕೆ 2019 ಅಕ್ಟೋಬರ್  31ರ ಗುರುವಾರ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಕನಿಷ್ಠ ೭೩ ಮಂದಿ ಸುಟ್ಟು ಕರಕಲಾಗಿದ್ದು, ಇತರ ೪೦ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಪ್ರಾಂತೀಯ ಸಚಿವರು ತಿಳಿಸಿದರು.

ಬೋಗಿಗಳಲ್ಲಿ ಧಗಧಗಿಸುತ್ತಿದ್ದ ಬೆಂಕಿಯ ಕೆನ್ನಾಲಗೆ ಹಾಗೂ ರೈಲುಬೋಗಿಗಳ ಒಳಗಿನಿಂದ ಪ್ರಯಾಣಕರ ಹಾಹಾಕಾರ, ಕಿರಿಚಾಟ ಕೇಳುತ್ತಿದ್ದ ಭೀಕರ ದೃಶ್ಯಗಳನ್ನು ಟೆಲಿವಿಷನ್‌ಗಳು ಪ್ರಸಾರ ಮಾಡಿದವು. ಪಂಜಾಬ್ ಪ್ರಾಂತದ ರಹೀಮ್ ಯಾರ್ ಖಾನ್ ಜಿಲ್ಲೆಯ ಸಮೀಪ ಈ ದುರಂತ ಸಂಭವಿಸಿತು.

’ನಮಗೆ ಬಂದಿರುವ ವರದಿಗಳ ಪ್ರಕಾರ ೬೫ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ’ ಎಂದು ಪ್ರಾಂತೀಯ ಆರೋಗ್ಯ ಸಚಿವೆ ಡಾ. ಯಾಸ್ಮೀನ್ ರಶೀದ್ ಹೇಳಿದರು.

ಗಾಯಾಳುಗಳನ್ನು ಸಮೀಪದ ಬಹವಾಲ್ಪುರ ಮತ್ತು ಆಸುಪಾಸಿನ ಆಸ್ಪತ್ರೆಗಳಿಗೆ ಒಯ್ಯಲಾಗಿದೆ ಎಂದು ಆಕೆ ನುಡಿದರು. ಕೇವಲ ೧೮ ಶವಗಳು ಗುರುತಿಸುವ ಸ್ಥಿತಿಯಲ್ಲಿದ್ದು, ಉಳಿದ ಶವಗಳು ಗುರುತಿಸಲೂ ಸಾಧ್ಯವಾಗದಷ್ಟು ಕರಟಿಹೋಗಿವೆ ಎಂದು ಅವರು ಹೇಳಿದರು.

’ಭಯಾನಕ.. ಪ್ರಯಾಣಿಕರು ಒಯ್ದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದರಿಂದ ಸಂಭವಿಸಿದ ಈ ದುರಂತ ಭಯಾನಕ’ ಎಂದು ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ ಟ್ವೀಟ್ ಮಾಡಿದರು.

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಾಗ ಕೆಲವು ಪ್ರಯಾಣಿಕರು ಬೆಳಗಿನ ಉಪಾಹಾರ ಸಿದ್ಧ ಪಡಿಸುವುದರಲ್ಲಿ ತಲ್ಲೀನರಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು.

ದುರಂತಕ್ಕೆ ಈಡಾಗಿರುವ ರೈಲು ಪಾಕಿಸ್ತಾನದ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸೇವೆ ಒದಗಿಸುತ್ತಿದ್ದ ’ತೇಝಗಮ್’. ಇದು ಇಸ್ಲಾಮಾಬಾದ್ ಸಮೀಪದ ರಾವಲ್ಪಿಂಡಿ ಮತ್ತು ದಕ್ಷಿಣದ ಬಂದರು ನಗರ ಕರಾಚಿ ಮಧ್ಯೆ ಸಂಚರಿಸುತ್ತದೆ.

ರೈಲುಗಾಡಿಯಿಂದ ಬೇರ್ಪಡಿಸಲಾದ ಮೂರು ಬೋಗಿಗಳು ಧಗಧಗನೆ ಉರಿಯುತ್ತಿದ್ದುದನ್ನು ನೂರಾರು ಮಂದಿ ಗುಂಪುಗೂಡಿ ವೀಕ್ಷಿಸುತ್ತಿದ್ದ ದೃಶಗಳನ್ನೂ ಟಿವಿಗಳು ಪ್ರಸಾರ ಮಾಡಿದವು.

ಪಾಕಿಸ್ತಾನದಲ್ಲಿ ದಶಕಗಳ ಕಾಲದ ಭ್ರಷ್ಟಾಚಾರ, ಅಸಮರ್ಪಕ ನಿರ್ವಹಣೆ ಮತ್ತು ಹೂಡಿಕೆ ಕೊರತೆಯ ಪರಿಣಾಮವಾಗಿ ರೈಲು ಅಪಘಾತಗಳು ಸಂಭವಿಸುವುದು ಮಾಮೂಲಾಗಿದೆ.

ಜುಲೈ ತಿಂಗಳಲ್ಲಿ ಇದೇ ಜಿಲ್ಲೆಯಲ್ಲಿ ಪೂರ್ವದ ಲಾಹೋರ್ ನಗರದಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲುಗಾಡಿಯು ಕ್ರಾಸಿಂಗ್ ಸಲುವಾಗಿ ನಿಂತಿದ್ದ ಗೂಡ್ಸ್ ಗಾಡಿಗೆ ಅಪ್ಪಳಿಸಿದ ಪರಿಣಾಮವಾಗಿ ೨೩ ಪ್ರಯಾಣಿಕರು ಸಾವನ್ನಪ್ಪಿದ್ದರು.

ಕಾವಲುರಹಿತ ಕ್ರಾಸಿಂಗ್ ಗಳಲ್ಲಂತೂ ದುರಂತಗಳು ಅತೀ ಸಾಮಾನ್ಯವಾಗಿವೆ.

ಕಳೆದ ವರ್ಷ ಇಸ್ಲಾಮಿಕ್ ಕಲ್ಯಾಣ ರಾಷ್ಟ್ರ ನಿರ್ಮಾಣದ ಭರವಸೆ ಮೇರೆಗೆ ಚುನಾಯಿತರಾದ ಪ್ರಧಾನಿ ಇಮ್ರಾನ್ ಖಾನ್ ಅವರು ಆರ್ಥಿಕ ಹಿಂಜರಿಕೆ ಪರಿಣಾಮವಾಗಿ ಮಿತವ್ಯಯಕ್ಕೆ ಮೊರೆಹೊಕ್ಕಿದ್ದು ಮೂಲಸವಲತ್ತು ಮತ್ತು ಸಾಮಾಜಿಕ ಕಾರ್‍ಯಕ್ರಮಗಳಲ್ಲಿ ಹೂಡಿಕೆ ಯತ್ನಗಳಿಗೆ ಅಡ್ಡಿಯಾಗಿದೆ.

ಗ್ರಾಮೀಣ ಪಂಜಾಬ್ ಕಳೆದ ಹಲವಾರು ವರ್ಷಗಳಿಂದ ಭೀಕರ ಅಪಘಾತಗಳಿಗೆ ಸಾಕ್ಷಿಯಾಗಿದೆ. ಇವುಗಳಲ್ಲಿ ೨೦೧೭ರಲ್ಲಿ ಸಂಭವಿಸಿದ ತೈಲ ಟ್ಯಾಂಕರ್ ಸ್ಫೋಟವೂ ಸೇರಿದೆ. ಈ ದುರಂತದಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಕರಾಚಿಯಿಂದ ಲಾಹೋರಿಗೆ ಸುಮಾರು ೫೦,೦೦೦ ಲೀಟರ್ ಇಂಧನವನ್ನು ಒಯ್ಯುತ್ತಿದ್ದ ಟ್ಯಾಂಕರ್ ಕೇಂದ್ರ ಪಂಜಾಬ್ ಪ್ರಾಂತದ ಮುಖ್ಯ ಹೆದ್ದಾರಿಯಲ್ಲಿ ಸ್ಫೋಟಗೊಂಡ ಪರಿಣಾಮವಾಗಿ ಈ ದುರಂತ ಸಂಭವಿಸಿತ್ತು.

ಚಾಲಕ ಮತ್ತು ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಟಾಂಕರಿನಿಂದ ಸೋರಿಕೆಯಾಗುತ್ತಿದ್ದ ತೈಲವನ್ನು ಸಂಗ್ರಹಿಸಲು ಸಮೀಪದ ಹಳ್ಳಿಯೊಂದರ ಜನರು ಗುಂಪುಗೂಡಿದ್ದಾಗ ಟ್ಯಾಂಕರ್ ಸ್ಫೋಟಿಸಿ ಬೆಂಕಿಯ ಜ್ವಾಲೆಗಳ ಮಧ್ಯೆ ಅವರು ಸಿಕ್ಕಿಹಾಕಿಕೊಂಡಿದ್ದರು.

October 31, 2019 Posted by | Accidents, ಪಾಕಿಸ್ತಾನ, ವಿಶ್ವ/ ಜಗತ್ತು, Flash News, General Knowledge, News, Pakistan, Spardha, World | | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ