SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಜಮ್ಮು-ಕಾಶ್ಮೀರದ ಕುಲಗಮ್​ ಜಿಲ್ಲೆಯಲ್ಲಿ ಉಗ್ರರ ದಾಳಿ: 5 ಕಾಶ್ಮೀರೇತರ ಕಾರ್ಮಿಕರ ಹತ್ಯೆ

29 Kashmir labourers killed
ಜಮ್ಮು
: ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಅತಿಯಾಗಿದ್ದು, 2019 ಅಕ್ಟೋಬರ್ 29ರ ಮಂಗಳವಾರ ಸಂಜೆ ಜಮ್ಮು ಕಾಶ್ಮೀರದ ಕುಲಗಮ್  ಜಿಲ್ಲೆಯಲ್ಲಿ ಉಗ್ರರ ದಾಳಿಗೆ 5 ಮಂದಿ ಕಾಶ್ಮೀರೇತರ ಕಾರ್ಮಿಕರು ಸಾವನ್ನಪ್ಪಿದರು.  ದಾಳಿಯಲ್ಲಿ ಓರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದರು.

ಗಾಯಾಳುವನ್ನು ಪಶ್ಚಿಮ ಬಂಗಾಳ ಮೂಲದ ದಿನಗೂಲಿ ಕಾರ್ಮಿಕ ಜಹುರುದ್ದೀನ್​ ಎಂದು ಗುರುತಿಸಲಾಗಿದ್ದು, ದಾಳಿ ನಡೆದಾಗ ಈತ ಕತ್ರಾಸು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಯಿತು.

ಐರೋಪ್ಯ  ಒಕ್ಕೂಟದ ಶಾಸನಕರ್ತರ ತಂಡವು ಜಮ್ಮು ಕಾಶ್ಮೀರಕ್ಕೆ ಆಗಮಿಸಿದ ದಿನವೇ ಉಗ್ರರ ದಾಳಿಗಳು ನಡೆದವು. ಈದಿನ ಸಂಜೆ ಪುಲ್ವಾಮಾದಲ್ಲಿ ಪರೀಕ್ಷಾ ಕೇಂದ್ರದ ಹೊರಗೆ ಉಗ್ರರು ಭದ್ರತಾ ಪಡೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ.

ಜಮ್ಮು ಕಾಶ್ಮೀರದಲ್ಲಿ ಆಗಸ್ಟ್​  5ರಂದು 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಅಂದಿನಿಂದ ಉಗ್ರರು ಲಾರಿ ಚಾಲಕರು, ಕಾರ್ಮಿಕರು ಮತ್ತು ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಅದರಲ್ಲೂ ಹೊರರಾಜ್ಯಗಳಿಂದ ಕಣಿವೆಗೆ ಬಂದಿರುವ ಕಾಶ್ಮೀರೇತರರ ಮೇಲೆ ದಾಳಿ ನಡೆಸುತ್ತಿದ್ಧಾರೆ.

ಹಿಂದಿನ ದಿನ  ಉಗ್ರರು ಉಧಮ್​ಪುರ ಜಿಲ್ಲೆ ಮೂಲದ ಟ್ರಕ್​ ಚಾಲಕನನ್ನು ಅನಂತ​ನಾಗ್​ ಜಿಲ್ಲೆಯಲ್ಲಿ ಹತ್ಯೆ ಮಾಡಿದ್ದರು. ಅ.24ರಂದು ಉಗ್ರರು ಶೋಪಿಯಾನ್​ ಜಿಲ್ಲೆಯಲ್ಲಿ ಇಬ್ಬರು ಕಾಶ್ಮೀರೇತರ ಟ್ರಕ್​ ಚಾಲಕರನ್ನು ಕೊಂದಿದ್ದರು.

October 29, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | , , , | Leave a comment

ಜಮ್ಮುವಿನಲ್ಲಿ ಟ್ರಕ್​ ಚಾಲಕನ ಹತ್ಯೆ:  ಉಗ್ರನ ಸದೆಬಡಿದ ಸೇನೆ

29 terrorist-killed
ಜಮ್ಮು
:  ದಕ್ಷಿಣ ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಬಿಜ್​​ಬಿಹರಾ ಪ್ರದೇಶದಲ್ಲಿ 2019 ಅಕ್ಟೋಬರ್ 28ರ ಸೋಮವಾರ ಸಂಜೆ ಟ್ರಕ್​ ಚಾಲಕನನ್ನು ಹತ್ಯೆ ಮಾಡಿದ್ದ ಉಗ್ರನನ್ನು 2019 ಅಕ್ಟೋಬರ್ 29ರ ಮಂಗಳವಾರ  ನಡೆದ ಗುಂಡಿನ ಘರ್ಷಣೆಯಲ್ಲಿ ಸದೆಬಡಿಯಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದರು.

ಹತ್ಯೆಯಾದ ಉಗ್ರನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಬಂದೂಕುಧಾರಿಯಾಗಿದ್ದ ಉಗ್ರರು ಇಬ್ಬರು ಟ್ರಕ್ ಚಾಲಕರನ್ನು ಗುರಿಯಾಗಿಸಿದ್ದರು. ಅವರಲ್ಲಿ ಉಧಮ್​ಪುರದ ನಾರಾಯಣ್​ ದತ್​ ಉಗ್ರರ ದಾಳಿಗೆ ಬಲಿಯಾಗಿದ್ದು, ಮತ್ತೊಬ್ಬ ಟ್ರಕ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ.

ಕಾಶ್ಮೀರೇತರರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದು, ಕಳೆದೆರಡು ವಾರದಲ್ಲಿ ಉಗ್ರರ ದಾಳಿಗೆ ಒಟ್ಟು 6 ಟ್ರಕ್​ ಚಾಲಕರು ಬಲಿಯಾಗಿದ್ದಾರೆ. ಹಿಂದಿನ ದಿನ ಘಟನೆ ನಡೆದ ಬಳಿಕ ಸ್ಥಳದಲ್ಲಿ ಪೊಲೀಸರು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಓರ್ವ ಉಗ್ರನನ್ನು ಹೊಡೆದುರುಳಿಸಲಾಯಿತು.

ನಾರಾಯಣ್​ ಸೋಮವಾರ ಸ್ಥಳೀಯ ಮಾರ್ಕೆಟ್​ನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಹಣ್ಣಿನ ಮಾರ್ಕೆಟ್ಟಿಗೆ  ಸೇಬು ಹಣ್ಣುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಉಗ್ರರು ಆತನನ್ನು ಹತ್ಯೆ ಮಾಡಿದ್ದರು.

ಹತ್ಯೆಯಾದ ಟ್ರಕ್​ ಚಾಲಕ ನಾರಾಯಣ್ ದತ್​ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಚಾಲಕನ ಮೃತದೇಹವನ್ನು ಅವರ ಮನೆಗೆ ಕಳುಹಿಸಲಾಗಿತ್ತು.

October 29, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | , | Leave a comment

ಚಿಕ್ಕಮಗಳೂರಿನ ಇಬ್ಬರು ಸೇರಿ ಒಟ್ಟು ಮೂವರು ನಕ್ಸಲರ ಹತ್ಯೆ

29 maoist-encounter kerala
ಪಾಲಕ್ಕಾಡ್
: ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರು ನಕ್ಸಲರನ್ನು ಗುಂಡಿನ ಘರ್ಷಣೆಯಲ್ಲಿ  ಕೊಂದ ಘಟನೆ ಕೇರಳದ ಪಾಲಕ್ಕಡ್ ಜಿಲ್ಲೆಯ ಮಂಜಕಟ್ಟಿ ಬೆಟ್ಟದಲ್ಲಿ ಘಟಿಸಿತು. ಗುಂಡಿನ ದಾಳಿಯಲ್ಲಿ ಹತರಾದ ನಕ್ಸಲರನ್ನು ಕೇರಳದಲ್ಲಿ ಸಿಪಿಐ (ಮಾಕ್ರ್ಸಿಸ್ಟ್) ಪಕ್ಷದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿದಳಂ ತಂಡದ ಸದಸ್ಯರಾದ ಶ್ರೀಮತಿ, ಎ.ಎಸ್.ಸುರೇಶ್ ಹಾಗೂ ಕಾರ್ತಿ ಎಂದು ಗುರುತಿಸಲಾಗಿದೆ..

ನಕ್ಸಲ್ ನಿಗ್ರಹ ಪಡೆ ಮತ್ತು ಥಂಡರ್ ಬೋಲ್ಟ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಗುಂಡಿನ ಘರ್ಷಣೆ ನಡೆಸಲಾಯಿತು. ನಾಲ್ವರು ನಕ್ಸಲರು ಪರಾರಿಯಾಗಿದ್ದಾರೆಂದು ತಿಳಿದುಬಂದಿತು.

ಘಟನೆಯಲ್ಲಿ ಮೃತರಾದವರಲ್ಲಿ ಇಬ್ಬರು ರಾಜ್ಯದ ಚಿಕ್ಕಮಗಳೂರಿನವರು ಎಂದು ಹೇಳಲಾಯಿತು. ಶ್ರೀಮತಿ ಮತ್ತು ಸುರೇಶ್ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು ಹಲವಾರು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಮತ್ತೋರ್ವ ನಕ್ಸಲ್ ಕಾರ್ತಿ ತಮಿಳುನಾಡು ಮೂಲದವನು ಎಂದು ಹೇಳಲಾಯಿತು. ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದ ಶ್ರೀಮತಿ 2008ರಿಂದ ನಕ್ಸಲ್ ಚಟುವಟಿಕೆಯಲ್ಲಿದ್ದು, ಆಕೆಯ ಮೇಲೆ 12 ಪ್ರಕರಣಗಳು ದಾಖಲಾಗಿದ್ದವು. ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾಗಿದ್ದು, 2004ರಲ್ಲಿ ನಕ್ಸಲ್ ಗುಂಪಿಗೆ ಸೇರಿದ್ದ.

ಪಾಲಕ್ಕಾಡಿನಲ್ಲಿ 2019 ಅಕ್ಟೋಬರ್ 28ರ ಸೋಮವಾರ ಗುಂಡೇಟಿಗೆ ಬಲಿಯಾದ ಸುರೇಶ್ ಮೇಲೆ 21 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ವರದಿಯಾಯಿತು. ಮಲೆನಾಡಿನಲ್ಲಿ ನಕ್ಸಲ್ ಚಳವಳಿ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಾಗಿ, ನಕ್ಸಲ್ ಚಳವಳಿಯಲ್ಲಿದ್ದ ಸದಸ್ಯರು ಪೊಲೀಸರ ಗುಂಡಿಗೆ ಬಲಿಯಾಗಿದ್ದರಿಂದ ಹಾಗೂ ಕೆಲವು ನಕ್ಸಲರು ಸರ್ಕಾರದ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಮುಖ್ಯವಾಹಿನಿಗೆ ಬಂದಿದ್ದರಿಂದ ಅಳಿದುಳಿದ ನಕ್ಸಲರು ಮಲೆನಾಡಿನಿಂದ ಹೊರ ರಾಜ್ಯಗಳ ನಕ್ಸಲ್ ಗುಂಪು ಸೇರಲಾರಂಭಿಸಿದ್ದರು.

ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುರೇಶ್ ಹಾಗೂ ಶೃಂಗೇರಿ ತಾಲೂಕಿ ಶ್ರೀಮತಿ ಕೂಡ ಕೇರಳ ರಾಜ್ಯದಲ್ಲಿನ ನಕ್ಸಲ್ ಗುಂಪು ಸೇರಿದ್ದರೆಂದು ಹೇಳಲಾಗಿದ್ದು, ಕಳೆದ ಎರಡು ವರ್ಷಗಳಿಂದ ಇವರು ಕೇರಳದಲ್ಲಿ ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದರೆಂದು ಹೇಳಲಾಗಿದೆ.

October 29, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | | Leave a comment

ತಮಿಳು ನಟ, ಮಿಮಿಕ್ರಿ ಕಲಾವಿದ ಮಾನೋ ಅಪಘಾತದಿಂದ ನಿಧನ

29 Mano-Actor
ಚೆನ್ನೈ
: ತಮಿಳು ನಟ, ಹೆಸರಾಂತ ಮಿಮಿಕ್ರಿ ಕಲಾವಿದ ಮತ್ತು ಟಿವಿ ನಿರೂಪಕ ಮಾನೋ  2019 ಅಕ್ಟೋಬರ್ 29ರ ಮಂಗಳವಾರ ರಸ್ತೆ ಅಪಘಾತಕ್ಕೆ ಬಲಿಯಾದರು.

ಮಾನೋ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಅಪ್ಪಳಿಸಿದ ಪರಿಣಾಮ ಮಾನೋ ಅವರು ಸ್ಥಳದಲ್ಲೇ ಮೃತರಾದರು. ಮಾನೋ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ರಾಮಚಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದೆ.

2010ರಲ್ಲಿ ತೆರೆಕಂಡಿದ್ದ ತಮಿಳು ಚಿತ್ರ ಪುಝಲ್ ನಲ್ಲಿ ಗಮನಾರ್ಹ ನಟನೆಯನ್ನು ಮಾಡಿದ್ದರು. ಬಳಿಕ ಅವರು ಟಿವಿ ನಿರೂಪಕರಾಗಿ, ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ, ಡ್ಯಾನ್ಸರ್ ಮತ್ತು ಮಿಮಿಕ್ರಿ ಕಲಾವಿದರಾಗಿಯೂ ಗಮನ ಸೆಳೆದಿದ್ದರು.

October 29, 2019 Posted by | Accidents, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha | | Leave a comment

ನಿಮಗೆ ಗೊತ್ತಾ? ಇದು ಸಾಮಾನ್ಯ ನಾಯಿಯಲ್ಲ..!

29 dog that helped to kill bagdadi 1
ವಾಷಿಂಗ್ಟನ್:
ನಿಮಗೆ ಗೊತ್ತಾ ? ಈ ಚಿತ್ರದಲ್ಲಿಇರುವುದು ಸಾಮಾನ್ಯ ನಾಯಿಯಲ್ಲ. ಈ ನಾಯಿಯ ಚಿತ್ರ ಟ್ವಿಟ್ಟರಿನಲ್ಲಿ ಲಕ್ಷಾಂತರ ಮಂದಿಯ ಗಮನ ಸೆಳೆದಿದೆ.  ಈ ನಾಯಿಯ ಚಿತ್ರವಿದ್ದ ಟ್ವೀಟ್‌ಗೆ 37 ಸಾವಿರ ಮಂದಿ ಕಾಮೆಂಟ್ ಬರೆದಿದ್ದಾರೆ, 91 ಸಾವಿರ ಮಂದಿ ಇದನ್ನು ರಿಟ್ವೀಟ್ ಮಾಡಿದ್ದಾರೆ, 3.8 ಲಕ್ಷ ಮಂದಿ ‘ಲೈಕ್’ ಕೊಟ್ಟಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿ ಈ  ಟ್ವೀಟ್ ಜನರ ಗಮನ ಸೆಳೆದಿದೆ.

ಈ ನಾಯಿಯ ಚಿತ್ರ ಟ್ವಿಟ್ಟರಿನಲ್ಲಿ ‘ವೈರಲ್’ ಆಗುತ್ತಿದ್ದಂತೆಯೇ ಹಲವು ತಮ್ಮ ಮನೆಗಳಲ್ಲಿನ ನಾಯಿಗಳ ಚಿತ್ರವನ್ನೂ ಇದೇ ರೀತಿಯಾಗಿ ಬರೆದು ಟ್ವೀಟ್ ಮಾಡುತ್ತಿದ್ದಾರೆ.

ಈ ನಾಯಿಯ ಚಿತ್ರವನ್ನು ಮೊತ್ತ ಮೊದಲಿಗೆ ಟ್ವೀಟ್ ಮಾಡಿದವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

‘ಈ ನಾಯಿಯ ಹೆಸರನ್ನು ಹೇಳಲು ಸಾಧ್ಯವಿಲ್ಲ. ಆದರೆ ಇದು ಅತ್ಯದ್ಭುತ ಶ್ವಾನ. ವಿಶ್ವಕ್ಕೆ ಇದು ಕೊಟ್ಟಿರುವ ಕೊಡುಗೆ ಮಹತ್ತರವಾದದ್ದು’ ಎಂದು ಟ್ರಂಪ್ ಅವರು ಟ್ವೀಟ್ ಮಾಡಿದ ಬೆನ್ನಲ್ಲೇ  ಟ್ವೀಟಿಗರು ಇದನ್ನು ರಿಟ್ವೀಟ್, ಲೈಕ್ ಮಾಡುವ ಮೂಲಕ ಮತ್ತು ಅದರ ಬಗ್ಗೆ ಕಾಮೆಂಟ್ ಬರೆಯುವ ಮೂಲಕ ಅದನ್ನು ವೈರಲ್ ಮಾಡಿದರು.

ಹೌದು, ಟ್ರಂಪ್ ಹೇಳಿರುವಂತೆ ಇದು ಸಾಮಾನ್ಯ ನಾಯಿಯಲ್ಲ. ಅಕ್ಟೋಬರ್ 26ರ ಶನಿವಾರ ಅಮೆರಿಕದ ಸಿರಿಯಾದಲ್ಲಿ ಕುಖ್ಯಾತ ಐಸಿಸ್ ಉಗ್ರ ಸಂಘಟನೆಯ ಸ್ಥಾಪಕ ಅಬುಬಕರ್‌ ಅಲ್ ಬಾಗ್ದಾದಿ ಹತ್ಯೆ ಕಾರ್ಯಾಚರಣೆ ನಡೆಸಿದರಲ್ಲ,  ಆ ಕಾರ್ಯಾಚರಣೆಯಲ್ಲಿ ಈ ನಾಯಿ ಪಾಲ್ಗೊಂಡಿತ್ತು. ಪಾಲ್ಗೊಂಡಿತ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಅಮೆರಿಕದ ಯೋಧರ ಕೈಯಿಂದ ತಪ್ಪಿಸಿಕೊಳ್ಳಲು ಸುರಂಗದೊಳಕ್ಕೆ ನುಗ್ಗಿದ್ದ ಬಗ್ದಾದಿಯನ್ನು ಬೆನ್ನಟ್ಟಿ ಸುರಂಗದ ಇನ್ನೊಂದು ಬದಿಯಿಂದ ತಪ್ಪಿಸಿಕೊಂಡು ಪರಾರಿಯಾಗದಂತೆ ತಡೆದಿತ್ತು.

ಒಂದೆಡೆ ನಾಯಿಯ ಆರ್ಭಟ, ಮತ್ತೊಂದೆಡೆ ಮುನ್ನುಗ್ಗಿ ಬರುತ್ತಿದ್ದ ಅಮೆರಿಕದ ಯೋಧರು ಮಧ್ಯೆ ಸಿಕ್ಕಿಹಾಕಿಕೊಂಡ ಬಾಗ್ದಾದಿ  ತಾನು ಧರಿಸಿದ ಉಡುಪಿಗೇ ಕಟ್ಟಿಕೊಂಡಿದ್ದ ಬಾಂಬ್ ಸ್ಫೋಟಿಸಿ ತಾನು ಸಾಯುವುದರ ಜೊತೆಗೆ ತನ್ನ ಮೂವರು ಮಕ್ಕಳನ್ನೂ ಬಲಿತೆಗೆದುಕೊಂಡಿದ್ದ.

ಸ್ಫೋಟದಲ್ಲಿ ಈ ನಾಯಿ ಕೂಡಾ ಗಾಯಗೊಂಡಿತ್ತು. ಆದರೆ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದು ಪುನಃ ಸೇನೆಯ ಸೇವೆಗೆ ಸಜ್ಜಾಗಿದೆ. ಪ್ರತಿಷ್ಠಿತ ಡೆಲ್ಟಾ ತುಕಡಿಯ ಈ ಶ್ವಾನದ ಹೆಸರನ್ನು ಭದ್ರತೆಯ ದೃಷ್ಟಿಯಿಂದ ಹೇಳಲು ಸಾಧ್ಯವಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.

ಕೆಲವೇ ಗಂಟೆಗಳಲ್ಲಿ ಈ ಟ್ವೀಟ್ ವಿಶ್ವಾದ್ಯಂತ ವೈರಲ್ ಆಯಿತು.

ಕಾಯ್ಲಾ ಮುಲ್ಲರ್’ ಹೆಸರಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಈ  ನಾಯಿಯ  ಚಿತ್ರ ಮತ್ತು ವಿವರವನ್ನು ಸೇನಾ ಕಚೇರಿ ಗೌಪ್ಯವಾಗಿ ಇರಿಸಿತ್ತು. ಆದರೆ ಜನರು ನಾಯಿಯ ಕುರಿತು ತಿಳಿದುಕೊಳ್ಳಲು ಹೆಚ್ಚು ಆಸಕ್ತರಾಗಿದ್ದರಿಂದ ಅಮೇರಿಕಾದ ಅಧ್ಯಕ್ಷ ಟ್ರಂಪ್ ವಿವರವನ್ನು ಬಹಿರಂಗಪಡಿಸಿದರು.

ಇದು ಬೆಲ್ಜಿಯನ್ ಮಾಲಿನೊಯ್ಸ್ ತಳಿಯ ಶ್ವಾನವಾಗಿದ್ದುಇದರ ಹೆಸರನ್ನು ಬಹಿರಂಗಪಡಿಸಿದರೆ ಸೇನಾ ತುಕುಡಿಯ ಇತರ ಸದಸ್ಯರು ಗುರುತು ಕೂಡ ಪತ್ತೆಯಾಗುವ ಹಿನ್ನೆಲೆಯಲ್ಲಿ ಇದರ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.

ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ನಾಯಕ ಅಬುಬಕರ್‌ ಅಲ್ ಬಾಗ್ದಾದಿಯನ್ನು ಬೆನ್ನಟ್ಟಿ, ಸುರಂಗವೊಂದರಲ್ಲಿ ಅವನು ಹಿಂದೆ ಬರದಂತೆ ಧೈರ್ಯದಿಂದ ಅಡ್ಡಗಟ್ಟಿದ್ದ ಅಮೆರಿಕ ಸೇನೆಯ ಈ ಪ್ರತಿಷ್ಠಿತ ಡೆಲ್ಟಾ ತುಕಡಿಯ ನಾಯಿ ಇದೀಗ ವಿಶ್ವದ ಕಣ್ಮಣಿಯಾಗಿದೆ.

ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾಯಿಯ ಚಿತ್ರ ಟ್ವೀಟ್ ಮಾಡಿ, ‘ಶಹಬ್ಬಾಸ್’ ಎಂದು ಬೆನ್ನುತಟ್ಟಿದ್ದಾರೆ. ‘ದಾಳಿ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದ ನಾಯಿಯ ಚಿತ್ರ ಪತ್ತೆಹಚ್ಚಿದ್ದೇವೆ (ಅದರ ಹೆಸರು ತಿಳಿಸಲು ಆಗದು)’ ಎಂದು ಟ್ರಂಪ್‌ ಒಕ್ಕಣೆ ಬರೆದರು.

ಟ್ರಂಪ್ ಅವರ ಈ ಟ್ವೀಟ್‌ಗೆ 37 ಸಾವಿರ ಮಂದಿ ಕಾಮೆಂಟ್, 91 ಸಾವಿರ ಮಂದಿ ರಿಟ್ವೀಟ್ ಮಾಡಿದ್ದಾರೆ, 3.8 ಲಕ್ಷ ಮಂದಿ ಲೈಕ್ ಕೊಟ್ಟಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿ ಟ್ರಂಪ್ ಅವರ ಟ್ವೀಟ್ ಜನರ ಗಮನ ಸೆಳೆಯಿತು.

‘ಅಮೆರಿಕ ಸೇನೆಯ 75ನೇ ರೇಂಜರ್‌ ರೆಜಿಮೆಂಟ್‌ನ ಡೆಲ್ಟಾ ಫೋರ್ಸ್‌ನ ಆಯ್ದ ಕೆಲ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ನಮ್ಮ ನಾಯಿ, ಸುಂದರ ನಾಯಿ, ಬುದ್ಧಿವಂತ ನಾಯಿ ಗಾಯಗೊಂಡಿತ್ತು. ಅದನ್ನು ವಾಪಸ್ ಕರೆತರಲಾಗಿದೆ’ ಎಂಬ ಟ್ರಂಪ್ ಹೇಳಿಕೆಯನ್ನು ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿತ್ತು.

ಕಾರ್ಯಾಚರಣೆಯ ನಂತರ ದಾಳಿ ನಡೆಸಿದ್ದ ನಾಯಿಯ ಚಿತ್ರ ಮತ್ತು ವಿವರವನ್ನು ಅಮೆರಿಕದ ಸೇನಾ ಕಚೇರಿ ಗೌಪ್ಯವಾಗಿ ಇರಿಸಿತ್ತು. ಆದರೆ ದೇಶದ ಅರ್ಧದಷ್ಟು ಮನೆಗಳಲ್ಲಿ ನಾಯಿ ಸಾಕಿರುವ ಶ್ವಾನಪ್ರಿಯ ದೇಶ ಅಮೆರಿಕ. ಜನರ ಆಸಕ್ತಿ ಎದುರು ಈ ಗೌಪ್ಯತೆ ಹೆಚ್ಚು ಕಾಲ ಉಳಿಯಲಿಲ್ಲ. ಟ್ರಂಪ್ ಅವರು ಬೆಲ್ಜಿಯನ್ ಮಾಲಿನೊಯ್ಸ್‌ ತಳಿಯ ನಾಯಿಯ ಚಿತ್ರ ಟ್ವೀಟ್ ಮಾಡುವುದರೊಂದಿಗೆ ಜನರ ನಿರೀಕ್ಷೆ ತಣಿಸಿದರು.

ಈ ಟ್ವೀಟ್‌ ಸಹ ಟ್ರಂಪ್ ಅವರ ವಿರುದ್ಧ ಮಂಡಿಸಲಾಗಿರುವ ಆರೋಪಗಳ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆಗೆ, ಟೀಕೆ, ಸಮರ್ಥನೆ, ವಾದ ಮತ್ತು ಪ್ರತಿವಾದಗಳಿಗೆ ಗುರಿಯಾಯಿತು. ಕೆಲವರಂತೂ ‘ಟ್ರಂಪ್ ಎಂದೂ ನಾಯಿ ಸಾಕಿಲ್ಲ. ಏಕೆಂದರೆ ಅವರಿಗೆ ತನ್ನನ್ನು ಹೊರತುಪಡಿಸಿ ಬೇರೆ ಯಾವುದನ್ನೂ, ಯಾರನ್ನೂ ಪ್ರೀತಿಸಲು ಬರಲ್ಲ’ ಎಂದು ವ್ಯಂಗ್ಯವಾಡಿದರು.

ನಾಯಿಯ ಹೆಸರನ್ನೇಕೆ ಟ್ರಂಪ್ ಉಲ್ಲೇಖಿಸಿಲ್ಲ ಎಂಬ ಬಗ್ಗೆಯೂ ವಾಷಿಂಗ್ಟನ್‌ ಪೋಸ್ಟ್‌ ಬೆಳಕು ಚೆಲ್ಲಿತು. ‘ನಾಯಿಯ ಹೆಸರು ಬಹಿರಂಗಪಡಿಸಿದರೆ ಅದರಿಂದ ಸೇನಾ ತುಕಡಿಯ ಇತರ ಸದಸ್ಯರ ಗುರುತು ಪತ್ತೆಯಾಗುವ ಅಪಾಯವಿದೆ’ ಎಂದು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿದ ಪೋಸ್ಟ್ ವರದಿ ತಿಳಿಸಿತು.

ಬಾಗ್ದಾದಿಯ ಬೇಟೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಈ ನಾಯಿಯು ಅಮೆರಿಕದ ಸೇನಾ ಇತಿಹಾಸದ ಪುಟಗಳಲ್ಲಿ ದಾಖಲಾಗುವುದು ಖಚಿತ. 2011ರಲ್ಲಿ ಅಮೆರಿಕ ನೌಕಾಪಡೆಯ ಸೀಲ್ ಕಮಾಂಡೊಗಳು ಒಸಾಮಾ ಬಿನ್‌ ಲಾಡೆನ್‌ನನ್ನು ಪತ್ತೆಹಚ್ಚಿ ಕೊಲ್ಲಲು ನೆರವಾಗಿದ್ದು ಸಹ ಇದೇ ತಳಿಯ ಕೈರೊ. ಅಮೆರಿಕ ಸೇನೆಯಲ್ಲಿ ನಾಯಿಯ ತಳಿಗಳು ಹಲವು ವರ್ಷಗಳಿಂದ ಸೇವೆಯಲ್ಲಿವೆ.

ಈ ಕಾರ್ಯಾಚರಣೆಯಲ್ಲಿ ಧೈರ್ಯದಿಂದ ಪಾಲ್ಗೊಂಡು ಗಾಯಗೊಂಡಿರುವ ನಾಯಿಗೆ ‘ಪರ್ಪಲ್ ಹಾರ್ಟ್‌’ ಅಥವಾ ‘ವೇಲೊರ್ ಮೆಡಲ್’ (ಅಮೆರಿಕ ಸೇನೆಯ ಶೌರ್ಯ ಪ್ರಶಸ್ತಿ) ಸಿಗುವುದಿಲ್ಲ. ನಾಯಿಗಳಿಗೆ ಶೌರ್ಯ ಪುರಸ್ಕಾರ ನೀಡಿದರೆ ಮನುಷ್ಯರ ಸೇವೆಯನ್ನು ಅವಗಣಿಸಿದಂತೆ ಆಗುತ್ತದೆ ಎಂಬ  ಆಕ್ಷೇಪದ  ಹಿನ್ನೆಲೆಯಲ್ಲಿ ಅಮೆರಿಕವು ನಾಯಿಗಳನ್ನು ಪುರಸ್ಕರಿಸುವುದರಿಂದ ಹಿಂದೆ ಸರಿದಿದೆ.

October 29, 2019 Posted by | ಭಯೋತ್ಪಾದಕ, ವಿಶ್ವ/ ಜಗತ್ತು, Flash News, General Knowledge, News, Spardha, Terror, World | | Leave a comment

ಕುಸಿದ ಪೇದೆಯ ನೆರವಿಗೆ ಧಾವಿಸಿದ ರಾಷ್ಟ್ರಪತಿ ಕೋವಿಂದ್, ಸಚಿವೆ ನಿರ್ಮಲಾ

29 kovind with woman police constatble
ನವದೆಹಲಿ:
ರಾಷ್ಟ್ರೀಯ ಸಿಎಸ್‌ಆರ್  ಚೊಚ್ಚಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ  ರಾಮನಾಥ ಕೋವಿಂದ್  ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾರಂಭದ ವೇಳೆಯಲ್ಲಿ ಕುಸಿದು ಬಿದ್ದ ಮಹಿಳಾ ಪೊಲೀಸ್ ಪೇದೆ ಒಬ್ಬರ ನೆರವಿಗೆ ಧಾವಿಸಿದ ಘಟನೆ 2019 ಅಕ್ಟೋಬರ್ 29ರ ಮಂಗಳವಾರ ಘಟಿಸಿತು.

ಸಮಾರಂಭದಲ್ಲಿ ದೆಹಲಿ ಪೊಲೀಸ್  ಮಹಿಳಾ ಪೇದೆ ವಿಜ್ಞಾನ ಭವನದಲ್ಲಿ ವೇದಿಕೆ  ಮುಂದೆ ನಿಂತಿದ್ದರು.

ರಾಷ್ಟ್ರಗೀತೆ ನುಡಿಸುವಾಗ, ಹಠಾತ್ತನೆ ಮಹಿಳಾ ಪೇದೆಯ  ಪಾದ ತಿರುಚಿ ಆಕೆ ಕುಸಿದು ಬಿದ್ದರು.ಮತ್ತು ಕಾರ್ಪೆಟ್ ಮೇಲೆ ಕುಳಿತುಕೊಂಡರು.

ರಾಷ್ಟ್ರಗೀತೆ ಮುಗಿದ ಕೂಡಲೇ ಕೋವಿಂದ್ ಅವರು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂತು  ಮತ್ತು  ಬಳಿಕ ಭದ್ರತಾ ಸಿಬ್ಬಂದಿಯೊಂದಿಗೆ ವೇದಿಕೆಯಿಂದ ಕೆಳಗಿಳಿದು ಕುಸಿದು ಕುಳಿತಿದ್ದ ಮಹಿಳಾ ಪೇದೆಯತ್ತ ನೆರವಿಗಾಗಿ ಧಾವಿಸಿದರು.  ಅವರೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಪೇದೆಯ ಬಳಿಗೆ ಬಂದರು.

ಮಹಿಳಾ ಪೇದೆಯೊಂದಿಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದ  ಕೋವಿಂದ್  ಆಕೆಗೆ  ಕುಡಿಯಲು ನೀರಿನ ಬಾಟಲ್ ನೀಡಿದರು.

ರಾಷ್ಟ್ರಗೀತೆಯ ನಂತರ ರಾಷ್ಟ್ರಪತಿಯವರು  ಸ್ಥಳದಿಂದ ನಿರ್ಗಮಿಸುವುದು ವಾಡಿಕೆ.

ಕೋವಿಂದ್  ಅವರು ವೇದಿಕೆಯಿಂದ ಕೆಳಗಿಳಿದು ಮಹಿಳಾ ಪೊಲೀಸ್ ಪೇದೆಯ ಸ್ವಾಸ್ಥ್ಯ ವಿಚಾರಿಸಿ ನೀರು ಕೊಟ್ಟು ಅಲ್ಲಿಂದ ತೆರಳುತ್ತಿದ್ದಂತೆಯೇ  ಅವರ ಸೌಜನ್ಯಕ್ಕಾಗಿ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿದರು.

ರಾಷ್ಟ್ರಪತಿಯವರ ಜೊತೆಗೆ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ನಿರ್ಮಲಾ ಸೀತಾರಾಮನ್,  ಉಪಸಚಿವ ಠಾಕೂರ್ ಮತ್ತು ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಇಂಜೆಟಿ ಶ್ರೀನಿವಾಸ್ ಅವರೂ ವೇದಿಕೆಯಲ್ಲಿ ಇದ್ದರು.

October 29, 2019 Posted by | ರಾಷ್ಟ್ರೀಯ, Flash News, General Knowledge, India, Nation, News, Spardha | | Leave a comment

ಶರದ್ ಅರವಿಂದ ಬೋಬ್ಡೆ ಮುಂದಿನ ಭಾರತದ ಮುಖ್ಯ ನ್ಯಾಯಮೂರ್ತಿ

29 SA-bobde Supreme-Court
ನವದೆಹಲಿ
: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶರದ್  ಅರವಿಂದ ಬೋಬ್ಡೆ ಅವರನ್ನು 2019 ಅಕ್ಟೋಬರ್ 29ರ ಮಂಗಳವಾರ ನೇಮಕ ಮಾಡಲಾಗಿದ್ದು, 2019 ನವೆಂಬರ್ 18 ರಂದು ಮುಖ್ಯ ನ್ಯಾಯಮೂರ್ತಿಯಾಗಿ ಬೋಬ್ಡೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ನ್ಯಾಯಮೂರ್ತಿ ಅರವಿಂದ ಬೋಬ್ಡೆ ಅವರ ಹೆಸರನ್ನು ಉನ್ನತ ಹುದ್ದೆಗೆ ಶಿಫಾರಸು ಮಾಡಿದ್ದು, ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.

ನವೆಂಬರ್ 17ರಂದು ಹಾಲಿ ಸಿಜೆಐ ರಂಜನ್ ಗೊಗೋಯಿ ನಿವೃತ್ತರಾಗುತ್ತಿದ್ದಾರೆ. ನ್ಯಾಯಮೂರ್ತಿ ಬೋಬ್ಡೆ ಅವರು 47ನೇ  ಸಿಜೆಐ ಆಗಲಿದ್ದಾರೆ. ನ್ಯಾಯಮೂರ್ತಿ ಬೋಬ್ಡೆ ಅವರು 2021 ಏಪ್ರಿಲ್ 23ರಂದು ನಿವೃತ್ತರಾಗಲಿದ್ದಾರೆ.

ಶರದ್ ಅರವಿಂದ್ ಬೋಬ್ಡೆ: ಶರದ್ ಅರವಿಂದ ಬೋಬ್ಡೆ ಅವರು ಮಹಾರಾಷ್ಟ್ರದ ನಾಗಪುರದಲ್ಲಿ 1956 ಏಪ್ರಿಲ್ 24ರಂದು ಜನಿಸಿದ್ದರು ನಾಗಪುರ  ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ಅವರು, ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 2000 ಮಾರ್ಚ್ 29ರಂದು ಬಾಂಬೆ ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದರು2013 ಏಪ್ರಿಲ್  ತಿಂಗಳಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

ಅಯೋಧ್ಯಾ ಪ್ರಕರಣ, ಬಿಸಿಸಿಐ ಪ್ರಕರಣ, ಪಟಾಕಿ ನಿಷೇಧ ಪ್ರಕರಣ ಮುಂತಾದ ಪ್ರಕರಣಗಳನ್ನು ಬೋಬ್ಡೆ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿತ್ತು.

ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ತಮ್ಮ ಉತ್ತರಾಧಿಕಾರಿಯಾಗಿ ಬೋಬ್ಡೆ ಅವರ ಹೆಸರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

October 29, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, News, Spardha, supreme court | , , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ