SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಫಿರಂಗಿದಾಳಿ

20 indian army attack on pok terror camps
೪ ಭಯೋತ್ಪಾದಕ ಶಿಬಿರಗಳು ಧ್ವಂಸ, ೬-೧೦ ಪಾಕ್ ಸೈನಿಕರು, ಅಷ್ಟೇ ಸಂಖ್ಯೆ ಉಗ್ರರ ಸಾವು

ನವದೆಹಲಿ: ಜನ ಸಾಮಾನ್ಯರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ ಪಾಕಿಸ್ತಾನದ ಕ್ರಮಕ್ಕೆ ಪ್ರತಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದ ತಂಗ್‌ಧರ್ ವಿಭಾಗದಲ್ಲಿ ಉಗ್ರ ನೆಲೆಗಳ ಮೇಲೆ  2019 ಅಕ್ಟೋಬರ್ 20ರ ಭಾನುವಾರ ಫಿರಂಗಿದಾಳಿ ನಡೆಸಿದ ಭಾರತೀಯ ಸೇನೆ ಪಾಕ್ ಆಕ್ರಮಿತ ಪ್ರದೇಶದ ನೀಲಂ ಕಣಿವೆಯಲ್ಲಿ ಕನಿಷ್ಠ ೪ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದೆ. ದಾಳಿಯಲ್ಲಿ ಹಲವು ಭಯೋತ್ಪಾದಕರ ಜೊತೆಗೆ ಕನಿಷ್ಠ ೬-೧೦ ಪಾಕಿಸ್ತಾನಿ ಸೈನಿಕರು ಮತ್ತು ಅಷ್ಟೇ ಸಂಖ್ಯೆಯ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಕಟಿಸಿದರು.

ಸಾವು ನೋವುಗಳ ಬಗ್ಗೆ ಇನ್ನೂ ವರದಿಗಳ ಬರುತ್ತಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಭಾರತದ ಒಳಕ್ಕೆ ಭಯೋತ್ಪಾದಕರಿಗೆ ನುಸುಳಲು ಪಾಕಿಸ್ತಾನಿ ಸೇನೆ ನೀಡುತ್ತಿದ್ದ ಬೆಂಬಲವನ್ನು ನಿಷ್ಕ್ರಿಯಗೊಳಿಲು ಭಾರತೀಯ ಸೇನೆ ಈ ಪ್ರತೀಕಾರದ ಕ್ರಮ ಕೈಗೊಂಡಿತು ಎಂದು ರಾವತ್ ತಿಳಿಸಿದರು.

ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲು ಭಾರತೀಯ ಸೇನೆಯು ಫಿರಂಗಿಗಳನ್ನು ಬಳಸಿದ್ದು, ಲಷ್ಕರ್-ಇ-ತೊಯ್ಬಾ (ಎಲ್ ಇಟಿ), ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಶ್-ಇ-ಮೊಹಮ್ಮದ್ (ಜೆಇಎಂ) ಇತ್ಯಾದಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಿದ್ದ ನೀಲಂ ಕಣಿವೆಯ ೪ ಭಯೋತ್ಪಾದಕ ಶಿಬಿರಗಳನ್ನು ನಾಶ ಪಡಿಸಿತು.

ಭಾರತೀಯ ಸೇನೆಯ ಪ್ರತೀಕಾರದ ದಾಳಿಯಲ್ಲಿ ಪಾಕಿಸ್ತಾನದ ಕನಿಷ್ಠ ೬-೧೦ಮಂದಿ ಸೈನಿಕರು ಮತ್ತು ಅಷ್ಟೇ ಸಂಖ್ಯೆಯ ಭಯೋತ್ಪಾದಕರು ಹತರಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ರಾವತ್ ಹೇಳಿದರು.

ಭಾರೀ ಸಂಖ್ಯೆಯ ಭಯೋತ್ಪಾದಕರು ತೀವ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯನ್ನು ಅನುಸರಿಸಿ ಪಾಕ್ ಆಕ್ರಮಿತ ಪ್ರದೇಶದ ನೀಲಂ ಕಣಿವೆಯ ಜುರಾ, ಅತ್ಮುಗಂ, ಕುಂಡಲಸಾಹಿ ಮತ್ತು ಇತರ ಕಡೆಗಳಲ್ಲಿನ ಉಗ್ರ ಶಿಬಿರಗಳನ್ನು ಗುರಿಯಾಗಿಟ್ಟು ಸೇನೆ ಫಿರಂಗಿ ದಾಳಿ ನಡೆಸಿತು ಎಂದು ಅವರು ನುಡಿದರು.

ಇದಕ್ಕೆ ಮುನ್ನ ಪಾಕಿಸ್ತಾನವು ಭಾನುವಾರ ಕದನವಿರಾಮ ಉಲ್ಲಂಘಿಸಿತ್ತು. ಇದರಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದರೆ, ಇಬ್ಬರು ಯೋಧರು ಹುತಾತ್ಮರಾಗಿದ್ದರು ಮತ್ತು ಇತರ ಮೂವರು ನಾಗರಿಕರು ಗಾಯಗೊಂಡಿದ್ದರು. ಇದನ್ನು ಅನುಸರಿಸಿ ಭಾರತದ ಸೇನೆ ಪ್ರತೀಕಾರದ ಕಾರ್‍ಯಾಚರಣೆಗೆ ಇಳಿಯಿತು.

ಕೆಲವು ಪ್ರದೇಶಗಳಲ್ಲಿ ಗುಂಡಿನದಾಳಿ ಆರಂಭಿಸಿದ ಭಾರತ ಸ್ವಲ್ಪವೇ ಹೊತ್ತಿನಲ್ಲಿ ಪಾಕಿಸ್ತಾನವು ಮೊದಲು ಕದನವಿರಾಮ ಉಲ್ಲಂಘನೆ ಮಾಡಿದ ತಂಗ್‌ಧರ್ ವಿಭಾಗದಲ್ಲಿ ತನ್ನ ದಾಳಿಯನ್ನು ಗಡಿಯಾಚೆಗೂ ವಿಸ್ತರಿಸಿತು.

ಶನಿವಾರ ಸಂಜೆ ನಡೆದ ಕದನವಿರಾಮ ಉಲ್ಲಂಘನೆಯ ಬಳಿಕ ಭಾರತೀಯ ಸೇನೆಯು  ಪಾಕಿಸ್ತಾನಕ್ಕೆ ಪ್ರಬಲ ಪ್ರತಿಕ್ರಿಯೆ ನೀಡಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಲು ಭಾರತವು ಕೈಗೊಂಡ ತೀರ್ಮಾನಕ್ಕೆ  ವಿರುದ್ಧವಾಗಿ ಪ್ರತಿಕ್ರಿಯಿಸುತ್ತಿರುವ ಪಾಕಿಸ್ತಾನ ಶಿಬಿರಗಳಲ್ಲಿ ಜಮಾಯಿಸಿದ ಭಯೋತ್ಪಾದಕರನ್ನು ತನ್ನ ಸೇನೆಯ ಬೆಂಬಲದೊಂದಿಗೆ ಭಾರತಕ್ಕೆ ನುಸುಳಿಸಲು ಯತ್ನ ನಡೆಸಿತ್ತು ಎಂದು ಹೇಳಲಾಯಿತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಜೊತೆಗೆ ತಂಗ್‌ಧರ್ ವಿಭಾಗದಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದರು.

ರಕ್ಷಣಾ ಸಚಿವರು ಪರಿಸ್ಥಿತಿ ಬಗ್ಗೆ ವೈಯಕ್ತಿಕ ನಿಗಾ ಇರಿಸಿದ್ದು, ತಮಗೆ ನಿರಂತರ ಮಾಹಿತಿ ಒದಗಿಸುವಂತೆ ಸೇನಾ ಮುಖ್ಯಸ್ಥರನ್ನು ಕೋರಿದ್ದಾರೆ ಎಂದು ಮೂಲಗಳು ಹೇಳಿದವು.

ಈ ವರ್ಷ ಸೆಪ್ಟೆಂಬರವರೆಗೆ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿ ಕನಿಷ್ಠ ೨೦೦೦ ಸಲ ಕದನ ವಿರಾಮ ಉಲ್ಲಂಘನೆ ಮಾಡಿ ಹಲವಾರು ನಾಗರಿಕರು ಮತ್ತು ಯೋಧರನ್ನು ಬಲಿ ಪಡೆದದ್ದಲ್ಲದೆ, ಹಲವರನ್ನು ಗಾಯಗೊಳಿಸಿತ್ತು.

೨೦೦೩ ಕದನವಿರಾಮ ತಿಳುವಳಿಕೆಗೆ ಬದ್ಧವಾಗುವಂತೆ ಮತ್ತು ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಶಾಂತತೆಯನ್ನು ಕಾಯ್ದುಕೊಳ್ಳಲು ಸೇನೆಗೆ ಸೂಚಿಸುವಂತೆ ಭಾರತವು ಪಾಕಿಸ್ತಾನಕ್ಕೆ ಪದೇ ಪದೇ ಆಗ್ರಹಿಸಿತ್ತು.

ಪಾಕ್ ಕುತುಂತ್ರ ಬಯಲು:  ಈ ಮಧ್ಯೆ, ಪಾಕ್ ಸೇನೆಯ ಮತ್ತೊಂದು ಮಹಾ ಕುತಂತ್ರ ಬಯಲಾಯಿತು.  ಭಾರತ ಮತ್ತು ಪಾಕ್ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ ಸೇನೆ, ನಾಗರಿಕರನ್ನೇ ತನ್ನ ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಹಾನಿ ಮಾಡಲು ಹಂಚಿಕೆ ಹೂಡಿದೆ ಎಂದು ವರದಿಗಳು ತಿಳಿಸಿದವು.

ಈದಿನ ಬೆಳಗ್ಗೆ  ಕುಪ್ವಾರದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನ, ಭಾರತೀಯ ನಾಗರಿಕನೊಬ್ಬನನ್ನು ಹತ್ಯೆಗೈದಿತ್ತು. ಮೂವರು ನಾಗರಿಕರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಗಡಿಯಾಚೆಯಿಂದ ಪಾಕಿಸ್ತಾನ ಸೇನೆ ಭಾರೀ ಪ್ರಮಾಣದ ಶೆಲ್ ದಾಳಿ ನಡೆಸಿತು. ಅದೂ ಕೂಡಾ ಜನ ವಸತಿ ಪ್ರದೇಶಗಳ ಮೇಲೇ ಪಾಕಿಸ್ತಾನದ ಶೆಲ್‌ಗಳು ತೂರಿಬಂದವು. ಭಾರತ ಮತ್ತು ಪಾಕ್ ಗಡಿಯಲ್ಲಿರುವ ಮನ್ಯಾರಿ ಎಂಬ ಗ್ರಾಮದಲ್ಲಿ ಈ ದಾಳಿ ನಡೆದಿದ್ದು, ಮನ್ಯಾರಿ ಗ್ರಾಮ ಕತುವಾ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಹಿಂದಿನ ದಿನ ತಡರಾತ್ರಿ ಹಾಗೂ ಈದಿನ ಮುಂಜಾನೆವರೆಗೂ ನಡೆದ ದಾಳಿಯಲ್ಲಿ ಮನೆಯೊಂದು ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಅಕ್ಕಿ ಗೋದಾಮು ಕೂಡಾ ಹಾಳಾಯಿತು. ೨ ವಾಹನಗಳು, ದನದ ಕೊಟ್ಟಿಗೆ ನಾಶವಾಗಿದ್ದು ೧೯ ದನಗಳು ಸಾವನ್ನಪ್ಪಿದ್ದವು.

ಪಾಕಿಸಾನಿ ಸೇನೆ ನಾಗರಿಕರನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದರಿಂದ ಇಲ್ಲಿನ ಜನರ ರಕ್ಷಣೆ ಭಾರತೀಯ ಸೇನೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪಾಕಿಸ್ತಾನಿ ಸೇನೆಯ ನಿರಂತರ ದಾಳಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ, ಸೇನೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು.

ಪಾಕಿಸ್ತಾನ ಸೇನೆ ಜನ ವಸತಿ ಪ್ರದೇಶಗಳನ್ನೇ ಗುರಿಯಾಗಿಸಿ ದಾಳಿ ನಡೆಸುವ ಹಿನ್ನೆಲೆಯಲ್ಲಿ ಸ್ಥಳೀಯರು ಬಂಕರುಗಳಲ್ಲಿ ರಕ್ಷಣೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಜೆ ೭ ಗಂಟೆಗೆ ಆರಂಭವಾಗುವ ಗುಂಡಿನ ದಾಳಿ ಮರುದಿನ ಬೆಳಗಿನ ಜಾವದವರೆಗೂ ನಿರಂತರವಾಗಿ ನಡೆಯುತ್ತಿರುತ್ತದೆ. ನಮಗೆ ನಮ್ಮ ಮಕ್ಕಳ ಜೀವ ರಕ್ಷಣೆಯೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸ್ಥಳೀಯರು. ಪ್ರಧಾನಿ ಮೋದಿ ಅವರು ವಿಚಾರದಲ್ಲಿ ಕೂಡಲೇ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.

October 20, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Spardha, Terror, World | | Leave a comment

ಇದು ವಿಶ್ವದ ಅತ್ಯಂತ ಹಳೆಯ ನೈಸರ್ಗಿಕ ಮುತ್ತು..!

20 oldest pearl of world (1)
ಅಬುಧಾಬಿ:
ವಿಶ್ವದ ಅತ್ಯಂತ ಹಳೆಯದು ಎಂದು ಪ್ರಾಕ್ತನತಜ್ಞರು ಅಭಿಪ್ರಾಯಪಟ್ಟಿರುವ, ೮,೦೦೦ ವರ್ಷಗಳಷ್ಟು ಹಳೆಯದಾದ ’ನೈಸರ್ಗಿಕ ಮುತ್ತು’ ಅಬುಧಾಬಿಯಲ್ಲಿ ಪತ್ತೆಯಾಗಿದ್ದು ಅದನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದು ಅಧಿಕಾರಿಗಳು 2019 ಅಕ್ಟೋಬರ್ 20ರ ಭಾನುವಾರ ಇಲ್ಲಿ ತಿಳಿಸಿದರು.

ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿಯಾದ ಮರಾವಾ ದ್ವೀಪದಲ್ಲಿ ಉತ್ಖನನ ಮಾಡುವಾಗ ಕೋಣೆಯೊಂದರ ನೆಲದಡಿಯಲ್ಲಿ ಈ ನೈಸರ್ಗಿಕ ಮುತ್ತು ಪತ್ತೆಯಾಗಿದ್ದು, ಇದು ದೇಶದಲ್ಲಿ ಕಂಡುಬರುವ ಆರಂಭಿಕ ವಾಸ್ತುಶಿಲ್ಪವನ್ನು ಬೆಳಕಿಗೆ ತಂದಿತು.

“ಮುತ್ತು ಬಂದಿರುವ ಪದರಗಳು ನವಶಿಲಾಯುಗದ ಅವಧಿಯಲ್ಲಿ ಕ್ರಿ.ಪೂ ೫೮೦೦-೫೬೦೦ರಷ್ಟು ಇಂಗಾಲವನ್ನು ಹೊಂದಿವೆ” ಎಂದು ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ತಿಳಿಸಿತು.

“ಅಬುಧಾಬಿಯಲ್ಲಿ ವಿಶ್ವದ ಅತ್ಯಂತ ಹಳೆಯ ಮುತ್ತುಗಳ ಪತ್ತೆಯು ನಮ್ಮ ಇತ್ತೀಚಿನ ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸವು ಆಳವಾದ ಬೇರುಗಳನ್ನು ಹೊಂದಿದ್ದು ಅದು ಇತಿಹಾಸಪೂರ್ವದ ಉದಯದವರೆಗೆ ವಿಸ್ತರಿಸಿದೆ ಎಂಬುದನ್ನು ಸಾಬೀತು ಪಡಿಸಿದೆ” ಎಂದು ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷ ಮೊಹಮ್ಮದ್ ಅಲ್-ಮುಬಾರಕ್ ಹೇಳಿದರು.

ನವಶಿಲಾಯುಗದ ಕಲ್ಲಿನ ರಚನೆಗಳಿಂದ ಕೂಡಿದ ಮರಾವಾ ತಾಣದ ಉತ್ಖನನವು ಪಿಂಗಾಣಿ, ಶೆಲ್ ಮತ್ತು ಕಲ್ಲಿನಿಂದ ಮಾಡಿದ ಮಣಿಗಳು ಮತ್ತು ಫ್ಲಿಂಟ್ ಬಾಣದ ಮೊನೆಗಳನ್ನು ಸಹ ಪತ್ತೆ ಹಚ್ಚಿತು.

“ಅಬುಧಾಬಿ ಮುತ್ತನ್ನು (ಅಬುಧಾಬಿ ಪರ್ಲ್) ಪ್ರಸಿದ್ಧ ಪ್ಯಾರಿಸ್ ಮ್ಯೂಸಿಯಂನ ಹೊರಠಾಣೆ ಲೌವ್ರೆ ಅಬುಧಾಬಿಯಲ್ಲಿ ಮೊದಲ ಬಾರಿಗೆ “೧೦,೦೦೦ ವರ್ಷಗಳ ಐಷಾರಾಮಿ” ಪ್ರದರ್ಶನದಲ್ಲಿ 2019 ಅಕ್ಟೋಬರ್ ೩೦ ರಂದು ತೆರೆಯಲಾಗುವುದು.

ಪಿಂಗಾಣಿ ಮತ್ತು ಇತರ ಸರಕುಗಳಿಗೆ ಬದಲಾಗಿ ಮುತ್ತುಗಳನ್ನು ಮೆಸೊಪಟ್ಯಾಮಿಯಾ – ಪ್ರಾಚೀನ ಇರಾಕಿನೊಂದಿಗೆ  ವ್ಯಾಪಾರ ಮಾಡಲಾಗುತ್ತಿತ್ತು ಮತ್ತು ಅವುಗಳನ್ನು ಆಭರಣವಾಗಿಯೂ ಧರಿಸಲಾಗುತ್ತಿತ್ತು ಎಂದು ಎಮಿರೇಟ್ ತಜ್ಞರು ಅಭಿಪ್ರಾಯಪಟ್ಟರು.

“ಈ ಪ್ರದೇಶದ ಮೂಲಕ ಪ್ರಯಾಣಿಸಿದ ವೆನೆಷಿಯನ್ ಆಭರಣ ವ್ಯಾಪಾರಿ ಗ್ಯಾಸ್ಪರೋ ಬಾಲ್ಬಿ, ಅಬುಧಾಬಿಯ ಕರಾವಳಿಯ ದ್ವೀಪಗಳನ್ನು ಮುತ್ತುಗಳ ಮೂಲವೆಂದು ೧೬ನೇ ಶತಮಾನದಲ್ಲಿ ಉಲ್ಲೇಖಿಸಿದ್ದ’ ಎಂದು ಸಂಸ್ಕೃತಿ ಇಲಾಖೆ ತಿಳಿಸಿತು.

ಮುತ್ತು ಉದ್ಯಮವು ಒಂದು ಕಾಲದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನ ಆರ್ಥಿಕತೆಗೆ ಆಧಾರವಾಗಿತ್ತು, ಆದರೆ ೧೯೩೦ರ ದಶಕದಲ್ಲಿ ಜಪಾನಿನ ಸುಸಂಸ್ಕೃತ ಮುತ್ತುಗಳ ಆಗಮನ ಮತ್ತು ಜಾಗತಿಕ ಆರ್ಥಿಕತೆಯನ್ನು ನಡುಗಿಸಿದ ಘರ್ಷಣೆಗಳಿಂದಾಗಿ ಎಮಿರೇಟ್ಸ್‌ನ ಮುತ್ತಿನ ವ್ಯಾಪಾರವು ಕುಸಿಯಿತು.

ಬಳಿಕ ಮುತ್ತು ಉದ್ಯಮದ ಬದಲಿಗೆ ಕೊಲ್ಲಿ ರಾಷ್ಟ್ರಗಳು ತೈಲ ಉದ್ಯಮದತ್ತ ಮುಖ ಮಾಡಿದ್ದು, ತೈಲವು ಇಂದಿಗೂ ಅವುಗಳ ಆರ್ಥಿಕತೆಯಲ್ಲಿ ಪ್ರಾಬಲ್ಯ ಹೊಂದಿದೆ.

October 20, 2019 Posted by | ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, News, Politics, Spardha | | Leave a comment

ಕಮಲೇಶ್ ತಿವಾರಿ ಹತ್ಯೆ: ಸ್ವೀಟ್ ಬಾಕ್ಸ್‌ಗಳು, ಕೇಸರಿ ಕುರ್ತಾ ಹಂತಕರ ಜಾಡು ತೋರಿಸಿದವು!

20 kamlesh-tiwari-murder-case sweet box
ದುಬೈಯಿಂದ ೨ ತಿಂಗಳ ಹಿಂದೆ ಮರಳಿದ್ದ ಸಂಚುಕೋರ

ಅಹ್ಮದಾಬಾದ್:  ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಹಿಂದೂ ಸಂಘಟನೆಯ ನಾಯಕ ಕಮಲೇಶ್ ತಿವಾರಿ ಹತ್ಯೆಯ ಮುಖ್ಯ ಸಂಚುಕೋರರಲ್ಲಿ ಒಬ್ಬ ಎರಡು ತಿಂಗಳುಗಳ ಹಿಂದಿನವರೆಗೂ ದುಬೈಯಲ್ಲಿ ಕಂಪ್ಯೂಟರ್ ಆಪರೇಟರ್ ಅಗಿ ಕೆಲಸ ಮಾಡುತ್ತಿದ್ದ ಮತ್ತು ಕುಟುಂಬದ ವಿವಾಹ ಸಮಾರಂಭ ಒಂದಕ್ಕಾಗಿ ಗುಜರಾತಿನ ಸೂರತ್ತಿಗೆ ಹಿಂತಿರುಗಿದ್ದ. ಆತ ಮತ್ತು ಸಂಗಡಿಗರು ಖರೀದಿಸಿದ್ದ ಸಿಹಿ ತಿಂಡಿಗಳ ’ಬಾಕ್ಸ್’ ಅವರ ಬಂಧನಕ್ಕೆ ದಾರಿ ಸುಗಮಗೊಳಿಸಿತು ಎಂಬುದು ಬೆಳಕಿಗೆ ಬಂದಿತು.

೨೩ರ ಹರೆಯದ ಸೂರತ್ ನಗರದ ಲಿಂಬಾಯತ್ ಪ್ರದೇಶದ ಝಿಲ್ಲಾನಿ ಮಂಜಿಲ್ ನಿವಾಸಿ ರಶೀದ್ ಪಠಾಣ್ ಮತ್ತು ಆತನ ನೆರೆಹೊರೆ ವ್ಯಕ್ತಿ ಮೌಲಾನಾ ಸಲೀಂ ಶೇಖ್ (೨೪) ಈ ಇಬ್ಬರನ್ನೂ  2019 ಅಕ್ಟೋಬರ್ 19ರ ಶನಿವಾರ ಅಹ್ಮದಾಬಾದಿನಲ್ಲಿ ಬಂಧಿಸಲಾಗಿದ್ದು, ಅಹ್ಮದಾಬಾದಿಗೆ ಕರೆ ತರಲಾಯಿತು.

ಶೇಖ್‌ನನ್ನು ಇತರ ನಾಲ್ವರ ಜೊತೆಗೆ ಕಮಲೇಶ್ ತಿವಾರಿ ೨೦೧೫ರಲ್ಲಿ ಮಾಡಿದ್ದ ಮುಸ್ಲಿಮರ ವಿರುದ್ಧದ ದ್ವೇಷ ಭಾಷಣದ ವಿಡಿಯೋ ತೋರಿಸಿ ತೀವ್ರಗಾಮಿಯನ್ನಾಗಿ ಪರಿವರ್ತನೆ ಮಾಡಲಾಗಿತ್ತು ಎಂದು ಕೊಲೆ ಪ್ರಕರಣದ ಬಗ್ಗೆ ವಿವರಗಳನ್ನು ನೀಡುತ್ತಾ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಒಪಿ ಸಿಂಗ್ ತಿಳಿಸಿದರು.

ಸಿಂಗ್ ಅವರ ಪ್ರಕಾರ ರಶೀದ್ ಕೊಲೆಯ ಯೋಜನೆಯನ್ನು ರೂಪಿಸಿದ್ದರೆ, ಫೈಝಾನ್ ಸೂರತ್ ನಗರದ ಅಂಗಡಿಯಿಂದ ಸಿಹಿತಿಂಡಿಗಳನ್ನು ಖರೀದಿಸಿದ್ದ.

ಇವರಿಬ್ಬರ ಬಂಧನದಿಂದ ಕೊಲೆ ಸಂಚು ಸೂರತ್ ನಗರದಲ್ಲೇ ರಶೀದ್ ದುಬೈಯಿಂದ ವಾಪಸಾದ ಬೆನ್ನಲ್ಲೇ ರೂಪುಗೊಂಡಿತ್ತು ಎಂಬುದು ಬೆಳಕಿಗೆ ಬಂದಿದೆ ಎಂದು ಸೂರತ್ ಪೊಲೀಸ್ ಇಲಾಖೆಯ ಅಪರಾಧ ಶಾಖೆಯ ಹಿರಿಯ ಅಧಿಕಾರಿ ನುಡಿದರು.

ಹಿಂದೂ ಸಮಾಜ ಪಾರ್ಟಿಯ ಸ್ಥಾಪಕ ತಿವಾರಿಯನ್ನು ಅವರ ಲಕ್ನೋದ ಖುರ್ಷೀದ್ ಬಾಗ್ ಪ್ರದೇಶದ ಮನೆಯೊಳಗೆ ಹತ್ಯೆಗೈದ ರಶೀದ್ ಸಹೋದರ ಪಠಾಣ್ ಮೊಯಿನುದ್ದೀನ್ ಅಹ್ಮದ್ ಮತ್ತು ಶೇಖ್ ಅಶ್ಫಾಖ್ ಹುಸೈನ್ ಅವರನ್ನು ಇನ್ನೂ ಬಂಧಿಸಬೇಕಾಗಿದೆ.

ಶುಕ್ರವಾರ ರಾತ್ರಿ ೧ ಗಂಟೆಗೆ ಕಮಲೇಶ್ ತಿವಾರಿ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಸೂರತ್ ಅಪರಾಧ ಶಾಖೆ ಮತ್ತು ಗುಜರಾತ್ ಪೊಲೀಸ್ ಭಯೋತ್ಪಾದನೆ ನಿಗ್ರಹ ದಳವು ೭ ಮಂದಿಯನ್ನು ವಶಕ್ಕೆ ಪಡೆದಿದ್ದವು.

‘ಏಳು ಮಂದಿಯನ್ನು ಶುಕ್ರವಾರ ತಡರಾತ್ರಿಯಲ್ಲಿ ಸೂರತ್ ನಗರದಲ್ಲಿ ನಡೆದ ಕಾರ್‍ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಯಿತು. ಅವರನ್ನು ತನಿಖೆಗೆ ಗುರಿಪಡಿಸಿದ ಬಳಿಕ ಅವರ ಪೈಕಿ ಮೂವರನ್ನು ಶನಿವಾರ ಬಂಧಿಸಿ ಅಹ್ಮದಾಬಾದಿಗೆ ಕರೆದೊಯ್ಯಲಾಯಿತು’ ಎಂದು ಹಿರಿಯ ಅಧಿಕಾರಿ ನುಡಿದರು.

ಸೂರತ್ ನಗರದ ಅಂಗಡಿಯೊಂದರ ಸಿಹಿ ತಿಂಡಿಯ ಪೊಟ್ಟಣಗಳು ಲಕ್ನೋದಲ್ಲಿ ಅಪರಾಧ ಘಟಿಸಿದ ಸ್ಥಳದಲ್ಲಿ ಕಂಡು ಬಂದದ್ದು ಪೊಲೀಸರ ತನಿಖೆಯನ್ನು ಚುರುಕುಗೊಳಿಸಿತ್ತು. ಕೇಸರಿ ಕುರ್ತಾ ಧರಿಸಿದ್ದ ಇಬ್ಬರು ಹಂತಕರು ಸಿಹಿ ತಿಂಡಿಯ ಪೊಟ್ಟಣ ಒಯ್ಯುವುದು ತಿವಾರಿ ಮನೆಯ ಹೊರಗೆ ಇರಿಸಲಾಗಿದ್ದ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿತ್ತು.

ನಾಡ ನಿರ್ಮಿತ ಗನ್ ಮತ್ತು ಚೂರಿ ಸೇರಿದಂತೆ ಶಸ್ತ್ರಗಳನ್ನು ಒಯ್ಯಲು ಸಿಹಿ ತಿಂಡಿಯ ಪೊಟ್ಟಣಗಳನ್ನು ಬಳಸಲಾಗಿತ್ತು. ಈ ಪೊಟ್ಟಣಗಳು ಸೂರತ್ ನಗರದ ಉಧ್ನಾ ಪ್ರದೇಶದ ಧರ್ತಿ ಫರ್‍ಸಾನ್ ಅಂಗಡಿಯಿಂದ ತಂದ ಪೊಟ್ಟಣಗಳಾಗಿದ್ದವು.

‘ಮೂರೂ ಮಂದಿ ಸಿಹಿ ಖರೀದಿಸಲು ಬಂದಿದ್ದರು ಮತ್ತು ಸಿಹಿ ತಿಂಡಿಯ ಪೊಟ್ಟಣಗಳನ್ನು ಬಳಿಕ ಶಸ್ತ್ರಾಸ್ರ್ರಗಳನ್ನು ಅಡಗಿಸಿ ಇಟ್ಟುಕೊಳ್ಳಲು ಬಳಸಿದ್ದರು ಎಂಬುದನ್ನು ಸಿಸಿಟಿವಿ ವಿಡಿಯೋ ದೃಶ್ಯಾವಳಿ ಖಚಿತ ಪಡಿಸಿತು. ನಮಗೆ ಬಿಲ್ ಪ್ರತಿ ಕೂಡಾ ಲಭಿಸಿದೆ’ ಎಂದು ಸೂರತ್ ನಗರದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಹಿರಿಯ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಅಪರಾಧ) ದಿನೇಶ್ ಪುರಿ ಅವರು ಸೂರತ್ ನಗರದಲ್ಲಿ ಬಂಧಿಸಲಾದ ಮೂವರು ಸಂಚುಕೋರರನ್ನು ವಶಕ್ಕೆ ಪಡೆಯಲು ತೆರಳಿದ್ದಾರೆ ಎಂದು ಲಕ್ನೋದ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್ ಎಸ್ ಪಿ) ಕಲೈನಿಧಿ ನೈಥಾನಿ ನುಡಿದರು.

ಸ್ಥಳೀಯ  ನ್ಯಾಯಾಲಯದಲ್ಲಿ ಟ್ರಾನ್ಸಿಟ್ ರಿಮಾಂಡ್ ಆದೇಶ ಪಡೆದ ಬಳಿಕ ಅವರನ್ನು ಲಕ್ನೋಗೆ ಕರೆತರಲಾಗುವುದು.

ಸೂರತ್ ನಗರದಲ್ಲಿ ಶೇಖ್ ಅಶ್ಫಾಖ್ ಹುಸೈನ್ ಮತ್ತು ಪಠಾಣ್ ಮೊಯಿನುದ್ದೀನ್ ಅಹ್ಮದ್ ಧರಿಸಿದ್ದ ರಕ್ತಸಿಕ್ತ ಕುರ್ತಾಗಳು ಕೂಡಾ ಲಭಿಸಿವೆ ಎಂದು ಲಕ್ನೋದಲ್ಲಿ ಪೊಲೀಸರು ಭಾನುವಾರ ತಿಳಿಸಿದರು.

ಲಕ್ನೋದ ಲಾಲ್ ಬಾಗ್ ಪ್ರದೇಶದಲ್ಲಿನ ಖಾಲ್ಸಾ ಇನ್ ಹೋಟೆಲ್‌ನಲ್ಲಿ ಶೋಧದ ಬಳಿಕ ಕೇಸರಿ ಬಣ್ಣದ ಕುರ್ತಾಗಳು, ಒಂದು ಬ್ಯಾಗ್, ಟವೆಲ್‌ಗಳು ಮತ್ತು ಇತರ ವಸ್ತುಗಳು ಲಭಿಸಿವೆ ಎಂದು ಅಧಿಕಾರಿಗಳು ನುಡಿದರು.

ಬಂಧಿತರ ಕುಟುಂಬದ ಬೇರುಗಳು ಉತ್ತರ ಪ್ರದೇಶದಲ್ಲಿ ಇದ್ದರೂ, ಅವರು ಎರಡು ದಶಕಗಳಿಂತಲೂ ಹೆಚ್ಚು ಕಾಲದಿಂದ ಸೂರತ್ ನಗರದಲ್ಲಿ ವಾಸವಾಗಿದ್ದರು.

October 20, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha | | Leave a comment

೧೪ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ

20 karnataka local body elections
ನವಂಬರ್ ೧೨ ರಂದು ಮತದಾನ, ೧೪ಕ್ಕೆ ಫಲಿತಾಂಶ

ಬೆಂಗಳೂರು: ಮಂಗಳೂರು ಹಾಗೂ ದಾವಣಗೆರೆ ಮಹಾನಗರ ಪಾಲಿಕೆ, ಆರು ನಗರ ಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯತ್ ಸೇರಿದಂತೆ ಒಟ್ಟು ೧೪ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ  2019 ಅಕ್ಟೋಬರ್ 20ರ ಭಾನುವಾರ ಘೋಷಿಸಿತು. ಇದರ ಜೊತೆಗೆ ಒಂದು ಜಿಲ್ಲಾ ಪಂಚಾಯತ್ ಹಾಗೂ ನಾಲ್ಕು ತಾಲೂಕು ಪಂಚಾಯತ್ ಸದಸ್ಯ ಸ್ಥಾನಗಳಿಗೂ ಚುನಾವಣಾ ದಿನಾಂಕವನ್ನು ಆಯೋಗ ಪ್ರಕಟಿಸಿತು.

ನವಂಬರ್ ೧೨ ಕ್ಕೆ ರಾಮನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ ಹಾಗೂ ಬಳ್ಳಾರಿಯ ೧೪ ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದೆ.

ಅಕ್ಟೋಬರ್ ೨೪ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ ೩೧ ಕೊನೆಯ ದಿನವಾಗಿರುತ್ತದೆ. ನವಂಬರ್ ೦೨ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ನವಂಬರ್ ೦೪ ಕೊನೆಯ ದಿನವಾಗಿರುತ್ತದೆ. ನವಂಬರ್ ೧೨ರಂದು ಅಗತ್ಯವಿರುವ ಕಡೆಗಳಲ್ಲಿ ಮತದಾನ ನಡೆಯಲಿದೆ. ಮರುಮತದಾನ ಅಗತ್ಯವಿರುವ ಕಡೆಗಳಲ್ಲಿ ನವಂಬರ್ ೧೩ರಂದು ಮತದಾನ ನಡೆಯಲಿದೆ. ನವಂಬರ್ ೧೪ರ ಗುರುವಾರದಂದು ಆಯಾ ತಾಲೂಕುಗಳ ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ನಡೆಯಲಿದ್ದು ಅದೇ ದಿನ ಫಲಿತಾಂಶವೂ ಪ್ರಕಟಗೊಳ್ಳಲಿದೆ.

ಚಾಮರಾಜನಗರ ಜಿಲ್ಲಾ ಪಂಚಾಯತ್ ಸೇರಿದಂತೆ ಚಾಮರಾಜನಗರ, ಉಡುಪಿ, ಗದಗ ಹಾಗೂ ಕೊಪ್ಪಳ ತಾಲೂಕು ಪಂಚಾಯತ್ ಹಾಗೂ ಗ್ರಾಮಪಂಚಾಯತುಗಳಲ್ಲಿ ತೆರವುಗೊಂಡಿರುವ ೨೧೩ ಸದಸ್ಯ ಸ್ಥಾನಗಳಿಗೂ ಚುನಾವಣೆ ನಡೆಯಲಿದ್ದು ಅಕ್ಟೋಬರ್ ೩೧ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನವಂಬರ್ ೧೨ ರಂದು ಮತದಾನ ನಡೆಯಲಿದ್ದು ೧೪ ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ ೨೦ ರಿಂದಲೇ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿಸಂಹಿತೆ ಜಾರಿಗೊಳಿಸಲಾಗಿದ್ದು, ಇದು ನವಂಬರ್ ೧೪ರವರೆಗೆ ಜಾರಿಯಲ್ಲಿರುತ್ತದೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಖರ್ಚು ಮಿತಿಯನ್ನು ಆಯೋಗ ವಿಧಿಸಿದ್ದು, ಮಹಾನಗರ ಪಾಲಿಕೆಗೆ ೩ ಲಕ್ಷ, ನಗರ ಸಭೆ ೨ ಲಕ್ಷ, ಪುರಸಭೆ ೧.೩೦ ಲಕ್ಷ ಹಾಗೂ ಪಟ್ಟಣ ಪಂಚಾಯತ್ ೧ ಲಕ್ಷ ವೆಚ್ಚ ಮಿತಿಯನ್ನು ಚುನಾವಣಾ ಆಯೋಗ ವಿಧಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು ೬೦ ವಾರ್ಡ್‌ಗಳೂ ಸೇರಿದಂತೆ ೨ ಮಹಾನಗರ ಪಾಲಿಕೆಗಳ ಒಟ್ಟು ೧೦೫ ಸ್ಥಾನಗಳು, ೬ ನಗರಸಭೆಗಳ ಒಟ್ಟು ೧೯೪ ವಾರ್ಡ್‌ಗಳು, ೩ ಪುರಸಭೆಗಳ ಒಟ್ಟು ೬೯ ವಾರ್ಡ್‌ಗಳು ಮತ್ತು ೩ ಪಟ್ಟಣ ಪಂಚಾಯತಿಗಳ ಒಟ್ಟು ೫೦ ವಾರ್ಡ್‌ಗಳು ಸೇರಿದಂತೆ ಒಟ್ಟಾರೆಯಾಗಿ ೧೪ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು ೪೧೮ ವಾರ್ಡ್‌ಗಳ ಸ್ಥಳೀಯ ಜನಪ್ರತಿನಿಧಿಗಳ ಆಯ್ಕೆಗಾಗಿ  ಈ ಚುನಾವಣೆ ನಡೆಯುತ್ತಿದೆ. ಇವುಗಳ ಜೊತೆಯಲ್ಲಿ ೫ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಸಹ ನಡೆಯಲಿದೆ.

ಈ ಎಲ್ಲಾ ವಾರ್ಡ್ ಗಳಲ್ಲಿನ ಒಟ್ಟು ೧೩೮೮ ಮತಗಟ್ಟೆಗಳಲ್ಲಿ ೧೩,೦೪,೬೧೪ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಯಾವೆಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ?

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು ೬೦ ವಾರ್ಡ್‌ಗಳು, ರಾಮನಗರ ಜಿಲ್ಲೆಯ ಕನಕಪುರ ನಗರಸಭೆಯ ಒಟ್ಟು ೩೧ ವಾರ್ಡ್‌ಗಳು, ಮಾಗಡಿ ಪುರಸಭೆಯ ೨೩ ವಾರ್ಡ್‌ಗಳು, ದಾವಣಗೆರೆ ಜಿಲ್ಲೆಯ ದಾವಣಗೆರೆ ಮಹಾನಗರ ಪಾಲಿಕೆಯ ೪೫ ವಾರ್ಡ್‌ಗಳು, ಕೋಲಾರ ಜಿಲ್ಲೆಯ ಕೋಲಾರ ನಗರಸಭೆಯ ೩೫ ವಾರ್ಡ್‌ಗಳು, ಮುಳಬಾಗಿಲು ನಗರಸಭೆಯ ೩೧ ವಾರ್ಡ್‌ಗಳು, ಕೆ.ಜಿ.ಎಫ್. (ರಾಬರ್ಟ್‌ಸನ್ ಪೇಟ್) ನಗರ ಸಭೆಯ ೩೫ ವಾರ್ಡ್‌ಗಳು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಸಭೆಯ ೩೧ ವಾರ್ಡ್‌ಗಳು, ಚಿಂತಾಮಣಿ ನಗರಸಭೆಯ ೩೧ ವಾರ್ಡ್‌ಗಳು, ಶಿವಮೊಗ್ಗ ಜಿಲ್ಲೆಯ ಜೋಗ್ – ಕಾರ್ಗಲ್ ಪಟ್ಟಣ ಪಂಚಾಯತ್ ೧೧ ವಾರ್ಡ್‌ಗಳು, ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆಯ ೨೩ ವಾರ್ಡ್‌ಗಳು, ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯತಿಯ ೧೯ ವಾರ್ಡ್‌ಗಳು, ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆಯ ೨೩ ವಾರ್ಡ್‌ಗಳು, ಕೂಡ್ಲಿಗಿ ಪಟ್ಟಣ ಪಂಚಾಯತಿಯ ೨೦ ವಾರ್ಡ್‌ಗಳಿಗೆ ಈ ಚುನಾವಣೆ ನಡೆಯಲಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಪುರಸಭೆ, ಚಾಮರಾಜನಗರದ ಕೊಳ್ಳೇನಾಲ ನಗರಸಭೆ, ವಿಜಯಪುರದ ಚಡಚಣ ಪಟ್ಟಣ ಪಂಚಾಯತಿ, ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಮತ್ತು ಕಲಬುರಗಿಯ ಚಿತ್ತಾಪುರ ಪುರಸಭೆ ತಲಾ ಒಂದು ವಾರ್ಡ್‌ಗಳಲ್ಲಿಯೂ ಉಪಚುನಾವಣೆ ಇದೇ ಸಂದರ್ಭದಲ್ಲಿ ನಡೆಯಲಿದೆ. ಈ ಎಲ್ಲಾ ಐದು ವಾರ್ಡ್‌ಗಳಲ್ಲಿನ ಹಾಲೀ ಸದಸ್ಯರ ನಿಧನದಿಂದ ಈ ಸ್ಥಾನಗಳು ತೆರವಾಗಿತ್ತು.

ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರಿಗೆ ನೋಟಾ ಚಲಾವಣೆಗೆ ಅವಕಾಶವಿದೆ. ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರವನ್ನು ಮುದ್ರಿಸಲು ಕ್ರಮಕೈಗೊಳ್ಳಲಾಗಿದೆ.

ರಾಜಕೀಯ ಪಕ್ಷಗಳ ಬ್ಯಾನರ್, ಕಟೌಟ್ ತೆರವುಗೊಳಿಸಲು ಸೂಚನೆ

ಮಂಗಳೂರು ಮಹಾನಗರಪಾಲಿಕೆಗೆ ಚುನಾವಣೆ ಘೋಷಣೆಯಾಗಿದ್ದು, ನಗರಪಾಲಿಕೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ತತ್ ಕ್ಷಣದಿಂದಲೇ ಜಾರಿಗೆ ಬಂದಿದೆ. ಹಾಗಾಗಿ ನಗರದ ಎಲ್ಲಾ ವಾರ್ಡುಗಳಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ಮುಖಂಡರ ಚಿತ್ರ ಇರುವ  ಎಲ್ಲಾ ರೀತಿಯ ಕಟೌಟ್, ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಗಳನ್ನು ಸಂಬಂಧಪಟ್ಟವರು ಕೂಡಲೇ ತೆರವುಗೊಳಿಸುವಂತೆ ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಸೂಚಿಸಿದರು.

October 20, 2019 Posted by | ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ, ರಾಷ್ಟ್ರೀಯ, Flash News, General Knowledge, News, Politics, Spardha | , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ