SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ

11 kadri gopalnath
ಬೆಂಗಳೂರು
: ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ (70) ವಯೋಸಹಜ ಅನಾರೋಗ್ಯದಿಂದ 2019 ಅಕ್ಟೋಬರ್ 11ರ ಶುಕ್ರವಾರ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕದ್ರಿಯವರು ಮಂಗಳೂರು  ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು.  ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.

ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು, ಅದಕ್ಕೆ ಭಾರತೀಯ ಸಂಗೀತವನ್ನು ಕರಗತ ಮಾಡಿಸಿದವರಲ್ಲಿ ಕದ್ರಿ ಗೋಪಾಲನಾಥರು ಪ್ರಮುಖರು.

ಬಾಲ್ಯದಿಂದಲೂ ಸಂಗೀತದಲ್ಲಿ ಒಲವು ಬೆಳೆಸಿಕೊಂಡ ಅವರಿಗೆ ತಂದೆಯೇ ಗುರುವಾಗಿದ್ದರು.

ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಅರಸಿಬಂದಿದ್ದವು.

ಕದ್ರಿ ಗೋಪಾಲನಾಥ್ ಅವರ ಬಗ್ಗೆ ಇನ್ನಷ್ಟು ಮಾಹಿತಿ:

ಕದ್ರಿ ಗೋಪಾಲನಾಥ್ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೊಫೋನ್ ವಾದಕರು. ಸ್ಯಾಕ್ಸೊಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದವರಾಗಿದ್ದಾರೆ.

ಜೀವನ:

ಗೋಪಾಲನಾಥ್‌ರವರು 1950ರ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ ಗ್ರಾಮದ ಮಿತ್ತಕೆರೆ ಎಂಬಲ್ಲಿ ಜನಿಸಿದರು. ತಂದೆ ತನಿಯಪ್ಪನವರು ನಾಗಸ್ವರ ವಿದ್ವಾಂಸರಾಗಿದ್ದರಿಂದ ಸಂಗೀತವೆಂಬುದು ಗೋಪಾಲನಾಥರ ದಿನಚರಿಯಾಗಿತ್ತು. ತಾಯಿ ಗಂಗಮ್ಮನವರು.

ಕದ್ರಿ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣವನ್ನು ಪಡೆದರು. ಆದರೆ ಅವರ ಬದುಕಿಗೆ ತೆರೆದದ್ದು ಮತ್ತೊಂದು ಬಾಗಿಲು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್ ಸೆಟ್ನೊಂದಿಗೆ ಸ್ಯಾಕ್ಸಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿದ್ಯತೆಗೆ ಮನಸೋತು ಸ್ಯಾಕ್ಸಫೋನಿನಲ್ಲಿಯೇ ಪ್ರಾವೀಣ್ಯತೆ ಸಂಪಾದಿಸಬೇಕೆಂಬ ದೃಢ ನಿರ್ಧಾರ ಕೈಗೊಂಡರು. ಇದಕ್ಕಾಗಿ ಅವರು ನಡೆಸಿದ ನಿರಂತರ ತಪಸ್ಸು ಇಪ್ಪತ್ತು ವರ್ಷಗಳದ್ದು. ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಅವರು ಸ್ಯಾಕ್ಸಫೋನ್ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವುದನ್ನು ಕಲಿತರು. ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಗೋಪಾಲನಾಥರು ಕರ್ನಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸಿದರು.

ಗುರು ಅನುಗ್ರಹ:

ಮುಂದೆ ಕದ್ರಿ ಗೋಪಾಲನಾಥರು ಮದ್ರಾಸಿನ ಟಿ. ವಿ. ಗೋಪಾಲಕೃಷ್ಣನ್ ಅವರ ಸಂಪರ್ಕಕ್ಕೆ ಬಂದರು. ಗೋಪಾಲನಾಥರಲ್ಲಿದ್ದ ಅಗಾಧ ಪ್ರತಿಭೆಯನ್ನು ಗಮನಿಸಿದ ಗೋಪಾಲಕೃಷ್ಣನ್ ಅವರು ಕದ್ರಿ ಗೋಪಾಲನಾಥರು ಒಬ್ಬ ಅಂತರರಾಷ್ಟ್ರೀಯ ಪ್ರತಿಭೆಯಾಗಿ ರೂಪುಗೊಳ್ಳಲು ನೀರೆರೆದರು. ಗೋಪಾಲನಾಥರು ತಮ್ಮ ಗುರುಗಳ ಅನುಗ್ರಹವೇ ತಮ್ಮ ಎಲ್ಲಾ ಸಾಧನೆಗಳ ಹಿಂದಿರುವ ಶಕ್ತಿ ಎಂದು ಭಕ್ತಿಯಿಂದ ಸ್ಮರಿಸುತ್ತಾರೆ.

ವಿಶ್ವದಾದ್ಯಂತ ಕಛೇರಿಗಳು:

ಗೋಪಾಲನಾಥರ ಪ್ರಥಮ ಕಾರ್ಯಕ್ರಮ ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್ನಲ್ಲಿ ನಡೆಯಿತು. ಅದು ಅವರಿಗೆ ಎಲ್ಲೆಡೆಯಿಂದ ಪ್ರಸಿದ್ಧಿ ತಂದಿತು. ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರೆಂದು ಪರಿಗಣಿತರಾದ ಗೋಪಾಲನಾಥರ ಕಚೇರಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೇ ಅಲ್ಲದೆ ಉತ್ತರ ಭಾರತದ ಪ್ರತಿಷ್ಟಿತ ಉತ್ಸವ- ವೇದಿಕೆಗಳಲ್ಲಿ, ಬಿಬಿಸಿಯ ಆಹ್ವಾನದ ಮೇರೆಗೆ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ, ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಲಂಡನ್‌ನ ಪ್ರೊಮೆನಾಡೊ, ಪ್ಯಾರಿಸ್‌ನ ಹೈಲ್ ಫೆಸ್ಟಿವಲ್ ಮುಂತಾದ ವಿಶ್ವ ಉತ್ಸವ-ವೇದಿಕೆಗಳಲ್ಲಿ ಕದ್ರಿಯವರ ಸ್ಯಾಕ್ಸೋಫೋನ್ ಮೊಳಗಿದೆ. ಯೂರೋಪ್, ಸ್ವಿಜರ್‌ಲ್ಯಾಂಡ್, ಯುನೈಟೆಡ್ ಕಿಂಗ್ಡಂ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪೂರ್, ಬಹರೇನ್, ಕ್ವೆಟಾರ್, ಮಸ್ಕಟ್, ಮಲೇಷಿಯಾ, ಶ್ರೀಲಂಕಾ ಹೀಗೆ ಅವರು ವಿಶ್ವದಾದ್ಯಂತ ಯಶಸ್ವಿ ಕಚೇರಿಗಳನ್ನು ನಿರಂತರವಾಗಿ ನಡೆಸಿಕೊಡುತ್ತಾಬಂದಿದ್ದಾರೆ.

ಸ್ಯಾಕ್ಸೊಫೋನ್ಗೆ ಮತ್ತೊಂದು ಹೆಸರು:

ಕದ್ರಿಯವರ ವಾದನ ಸದಾ ಕಾವಿನಿಂದ ಕೂಡಿರುವಂಥದು. ಅವರ ಕಛೇರಿ ಮೊದಲಿನಿಂದ ಕೊನೆಯವರೆಗೂ ರಂಜನೀಯ; ಸುನಾದದ ಅಲೆ! ಚೇತೋಹಾರಿ ವಿನಿಕೆ. ತನಿಯಾಗಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್‌ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಸ್, ಫ್ಯೂಷನ್ ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಕಚೇರಿಗಳಲ್ಲಷ್ಟೇ ಆಲ್ಲದೆ, ಅನೇಕ ವೈಶಿಷ್ಟ್ಯಪೂರ್ಣ ಆಲ್ಬಂಗಳಲ್ಲಿ ಸಹಾ ಅವರ ಸಂಗೀತ ಶ್ರೋತೃ-ಅಭಿಮಾನಿಗಳನ್ನು ತಣಿಸುತ್ತಿದೆ. ಇಂದು ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನ್‌ಗೆ ಶಾಸ್ತ್ರೀಯ ಸಂಗೀತದ ವೇದಿಕೆಯ ಮೇಲೆ ಒಂದು ಗೌರವಾನ್ವಿತ ಸ್ಥಾನ ದೊರಕಿರುವುದು ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಿಟ್ಟಿನಲ್ಲಿ ಸ್ಯಾಕ್ಸೊಫೋನ್ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್. ಭಾರತದಲ್ಲಿ ಮತ್ತು ಹೊರಗೆ ಅನೇಕ ‘ಸಂಗೀತ-ಕಛೇರಿ’ಗಳನ್ನು ನಡೆಸುತ್ತಾ ಬಂದಿರುವ ‘ಕದ್ರಿ ಗೋಪಾಲನಾಥ್’ ಸ್ಯಾಕ್ಸೊಫೋನ್ ಚಕ್ರವರ್ತಿ ಎಂದೇ ಹೆಸರಾಗಿದ್ದಾರೆ.

ಕಾರ್ಗಿಲ್ ಯುದ್ಧ ಸಂತ್ರಸ್ತರಿಗೆ ಕೊಡುಗೆ:

ಚೆನ್ನೈನ ನಾರದ ಗಾನಸಭಾದಲ್ಲಿ ೪00 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಗೋಪಾಲನಾಥರು ಸಮರ್ಪಿಸಿದವರು.

October 14, 2019 Posted by | Award, ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ಭಾರತ, ಮಂಗಳೂರು, ರಾಜ್ಯ, ವಿಶ್ವ/ ಜಗತ್ತು, culture, Dakshina Kannada District, Entertrainment, Flash News, General Knowledge, India, Nation, News, Spardha, World | , , , | Leave a comment

ಚೀನೀ ಅಧ್ಯಕ್ಷ ಕ್ಷಿ ಜಿನ್‌ಪಿಂಗ್, ಪ್ರಧಾನಿ ಮೋದಿ ಅನೌಪಚಾರಿಕ ಶೃಂಗಕ್ಕೆ ಚಾಲನೆ

11 Narendra-Modi-with-Xi-Jinping-
ಮಹಾಬಲಿಪುರಂ ದೇಗುಲ ಸಮುಚ್ಛಯದಲ್ಲಿ ಸುತ್ತಾಟ

ಮಹಾಬಲಿಪುರಂ: ತಮಿಳುನಾಡಿನ ಮಹಾಬಲಿಪುರಂನ ೮ನೇ ಶತಮಾನದಷ್ಟು ಹಿಂದಿನ ದೇವಾಲಯ ಸಮುಚ್ಛಯದಲ್ಲಿ ಸುತ್ತಾಟ ನಡೆಸುವುದರೊಂದಿಗೆ ಚೀನೀ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅನೌಪಚಾರಿಕ ಶೃಂಗಸಭೆಗೆ  2019 ಅಕ್ಟೋಬರ್ 11ರ ಶುಕ್ರವಾರ ಚಾಲನೆ ನೀಡಿದರು.

ಪ್ರಧಾನಿ ಮೋದಿಯವರು ತಮಿಳುನಾಡಿನ ಪಾರಂಪರಿಕ ಉಡುಪಾದ ಬಿಳಿ ಅಂಗಿ (ಶರ್ಟ್) ಮತ್ತು ವೇಷ್ಠಿ ಹಾಗೂ ಹೆಗಲಿನ ಮೇಲೆ ಅಂಗವಸ್ತ್ರ ಧರಿಸಿದ್ದರೆ, ಕ್ಷಿ ಅವರು ಬಿಳಿ ಶರ್ಟ್ ಮತ್ತು ಕರಿಯ ಪ್ಯಾಂಟ್ ಧರಿಸಿ ಸಂಜೆ ೫ ಗಂಟೆಯಿಂದ ಸುಮಾರು ೪೫ ನಿಮಿಷಗಳ ಕಾಲ ದೇವಾಲಯ ಸಮುಚ್ಛಯದಲ್ಲಿ ಸುತ್ತಾಡಿದರು. ಚಾರಿತ್ರಿಕ ದೇಗುಲ ಸುತ್ತಾಟಕ್ಕೆ  ಮುನ್ನ ಉಭಯ ನಾಯಕರು ಹಸ್ತಲಾಘವ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು.

ಇದಕ್ಕೆ ಮುನ್ನ  ಪ್ರಧಾನಿ ಮೋದಿ ಅವರ ಜೊತೆಗೆ ಅನೌಪಚಾರಿಕ ಶೃಂಗಕ್ಕಾಗಿ ಆಗಮಿಸಿದ ಚೀನೀ ಅಧ್ಯಕ್ಷರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ಅನೌಪಚಾರಿಕ ಶೃಂಗಸಭೆಯಲ್ಲಿ ಕಾಶ್ಮೀರ ವಿಷಯದಲ್ಲಿ ಬಿಗಡಾಯಿಸಿರುವ ಬಾಂಧವ್ಯವನ್ನು ಮತ್ತು ಸಮತೋಲನಕ್ಕೆ ತರುವ ಯತ್ನ ನಡೆಯುವ ಸಾಧ್ಯತೆಗಳಿವ ಎಂದು ನಿರೀಕ್ಷಿಸಲಾಗಿದೆ.

ದೇಗುಲ ಸಮುಚ್ಛಯದಲ್ಲಿ ಮೋದಿ ಮತ್ತು ಕ್ಷಿ ಅವರು ಅರ್ಜುನನ ತಪಸ್ಸು, ಪಂಚರಥ ಮತ್ತು ಕರಾವಳಿ ದೇಗುಲ (ಶೋರ್ ಟೆಂಪಲ್) – ಈ ಮೂರು ತಾಣಗಳಿಗೆ ಭಾಷಾಂತರಕಾರರು ಮತ್ತು ಭಾರತೀಯ ಪ್ರಾಕ್ತನ ಸಮೀಕ್ಷೆಯ ತಜ್ಞರೊಬ್ಬರನ್ನು ಮಾತ್ರ ತಮ್ಮ ಜೊತೆಗೆ ಇರಿಸಿಕೊಂಡು ಸುತ್ತಾಡಿದರು. ಭಾರತೀಯ ಪ್ರಾಕ್ತನ ಸಮೀಕ್ಷೆಗೆ ತಜ್ಞರು ಜಾಗತಿಕ ಪರಂಪರೆ ತಾಣದ ವಿವರಗಳನ್ನು ಉಭಯ ನಾಯಕರಿಗೆ ವಿವರಿಸಿದರು.

ಶುಕ್ರವಾರ ಮತ್ತು ಶನಿವಾರ ನಡೆಯಲಿರುವ ಎರಡು ದಿನಗಳ ಅನೌಪಚಾರಿಕ ಶೃಂಗಸಭೆಯಲ್ಲಿ ಉಭಯ ನಾಯಕರು ಒಟ್ಟು ೬ ಗಂಟೆಗಳ ಕಾಲವನ್ನು ಕಳೆಯಲಿದ್ದು, ದೇಗುಲ ಸಮುಚ್ಛಯ ಸುತ್ತಾಟವು ಅನೌಪಚಾರಿಕ ಮಾತುಕತೆಗಳಿಗೆ ಮೊತ್ತ ಮೊದಲ ಅತ್ಯುತ್ತಮ ಅವಕಾಶವನ್ನು ಒದಗಿಸಿತು. ದೇವಾಲಯದಲ್ಲಿ ೪೫ ನಿಮಿಷಗಳನ್ನು ಕಳೆದ ಅವರು ಕಲಾಕ್ಷೇತ್ರ ನಿಗಮವು ನೀಡಿದ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಸಹಿತವಾದ ೨೦ ನಿಮಿಷಗಳ ಸಾಂಸ್ಕೃತಿಕ ಕಾರ್‍ಯಕ್ರಮವನ್ನು ವೀಕ್ಷಿಸಿದರು.

ಸಾಂಸ್ಕೃತಿಕ ಕಾರ್‍ಯಕ್ರಮದ ಬಳಿಕ ಪ್ರಧಾನಿ ಮೋದಿ ಆತಿಥ್ಯದ ಖಾಸಗಿ ಭೋಜನಕೂಟವನ್ನು ಕರಾವಳಿ ದೇಗುಲ ಸಮುಚ್ಛಯದಲ್ಲಿ ಹಾಕಲಾದ ವಿಶಾಲ ಶಾಮಿಯಾನದ ಅಡಿಯಲ್ಲಿ ಅವರು ಸವಿದರು. ಭೋಜನಕೂಟದಲ್ಲಿ ಪ್ರಧಾನಿ ಮೋದಿ ಮತ್ತು ಕ್ಷಿ ಅವರು ಭಾಷಾಂತರಕಾರರೊಂದಿಗೆ ಮೇಜಿನ ಮುಂದೆ ಅಭಿಮುಖವಾಗಿ ಕುಳಿತುಕೊಂಡರೆ, ಅವರ ನಿಯೋಗದ ಎಂಟು ಸದಸ್ಯರು ಇತರ ಮೇಜುಗಳಲ್ಲಿ ಕುಳಿತುಕೊಂಡರು. ಸ್ಥಳೀಯ ಪಾಕಪದ್ಧತಿಯ ಶಾಕಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ತಯಾರಿಸಲಾಗಿತ್ತು.

ಪ್ರಧಾನಿ ಮೋದಿ ಮತ್ತು ಕ್ಷಿ ನಡುವಣ ಎರಡನೇ ಅನೌಪಚಾರಿಕ ಶೃಂಗ ಸಭೆಯು ವುಹಾನ್ ಅನೌಪಚಾರಿಕ ಶೃಂಗಸಭೆಯಿಂದ ಹೊರಬಂದ ಆಯಕಟ್ಟಿನ ಮಾರ್ಗದರ್ಶನದ ಅಡಿಯ ಸಂದೇಶಕ್ಕೆ ಉನ್ನತ ನಾಯಕರಿಂದ ಹೊಸ ದಿಕ್ಕು ಲಭಿಸಬಹುದು ಎಂದು ಉನ್ನತ ಮೂಲಗಳು ಹೇಳಿದವು.

‘ಉಭಯ ನಾಯಕರೂ ಅನೌಪಚಾರಿಕ ಮಾತುಕತೆಯನ್ನು ಇಷ್ಟ ಪಟ್ಟಿದ್ದಾರೆ ಮತ್ತು ಉಭಯರಿಗೂ ತಾವು ಈ ಬಾಂಧವ್ಯದ ಮೇಲೆ ಸಾಕಷ್ಟು ಸವಾರಿ ಮಾಡಬಹುದು ಎಂಬುದರ ಅರಿವಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ನುಡಿದರು.

ಉಭಯ ಕಡೆಗಳ ನಡುವಣ ಇತ್ತೀಚಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ವುಹಾನ್ ಅನೌಪಚಾರಿಕ ಶೃಂಗದ ಬಳಿಕ ಒಟ್ಟಾರೆ ಬಾಂಧವ್ಯಗಳು ಪ್ರೌಢರೂಪ ತಳೆದು ವಿಕಸನಗೊಂಡಿವೆ ಮತ್ತು ಶೃಂಗಸಭೆಯ ನಿರ್ಣಯಗಳಲ್ಲಿ ಅವು ಪ್ರತಿಫಲಿಸಿವೆ ಎಂದು ಮೂಲಗಳು ಹೇಳಿದವು.

ಈ ಅನೌಪಚಾರಿಕ ಶೃಂಗಸಭೆಯನ್ನು ಜೂನ್ ತಿಂಗಳಲ್ಲಿ ನಡೆಸಲು ಯೋಜಿಸಲಾಗಿತ್ತು, ಆದರೆ ಅದು ಈಗ ಕಾಶ್ಮೀರ ವಿಷಯದಲ್ಲಿ ಚೀನಾವು ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಕೋಪ-ತಾಪಗಳ ವಿನಿಮಯದ ಹಿನ್ನೆಲೆಯಲ್ಲಿ ಈಗ ನಡೆದಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗಿನ ಕ್ಷಿ ಅವರ ಮಾತುಕತೆ ಯಾರ ಗಮನಕ್ಕೂ ಬಾರದೆ ಹೋಗಿಲ್ಲ. ಮಾತುಕತೆಯ ಬಳಿಕ ಚೀನೀ ನಾಯಕ ಕಾಶ್ಮೀರ ಪರಿಸ್ಥಿತಿಯನ್ನು ಚೀನಾವು ನಿಕಟವಾಗಿ ಪರಿಶೀಲಿಸುತ್ತಿದೆ ಮತ್ತು ತನ್ನ  ಆಂತರಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತಿರುವ ಪಾಕಿಸ್ತಾನವನ್ನು ಬೆಂಬಲಿಸುವುದು ಎಂಬುದಾಗಿ ಹೇಳಿದ್ದು ಭಾರತದ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಕಾಶ್ಮೀರದ ಬೆಳವಣಿಗೆಗಳು ದೇಶದ ಆಂತರಿಕ ವಿಷಯವಾಗಿದ್ದು, ಇತರ ರಾಷ್ಟ್ರಗಳು ತನ್ನ ಆಂತರಿಕ ವ್ಯವಹಾರಗಳ ಬಗ್ಗೆ ಟೀಕಿಸುವುದನ್ನು ಭಾರತವು ನಿರೀಕ್ಷಿಸುವುದಿಲ್ಲ ಎಂದು ಭಾರತವು ಚೀನಾಕ್ಕೆ ಎಚ್ಚರಿಕೆ ನೀಡಿ ನೆನಪಿಸಿತ್ತು.

ಈ ಬೆಳವಣಿಗೆಗಳ ನಡುವೆಯೇ ಚೆನ್ನೈಗೆ ಆಗಮಿಸಿದ ಕ್ಷಿ ಅವರನ್ನು ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ, ಮುಖ್ಯಮಂತ್ರಿ  ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಅವರು ಸ್ವಾಗತಿಸಿದ್ದರು.

ತಮಿಳುನಾಡಿಗೆ ಕೆಲವು ಗಂಟೆಗಳ ಮುನ್ನ ಆಗಮಿಸಿದ ಪ್ರಧಾನಿ ಮೋದಿಯವರು ಚೆನ್ನೈಯಿಂದ ೧೫ ಕಿಮೀಗಿಂತ ಸ್ವಲ್ಪ ಹೆಚ್ಚು ದೂರದಲ್ಲಿರುವ ಮಾಮಲ್ಲಪುರಂಗೆ (ಮಹಾಬಲಿಪುರಂ) ಹೆಲಿಕಾಪ್ಟರಿನಲ್ಲಿ ಆಗಮಿಸಿದರು ಮತ್ತು ದೇಶಕ್ಕೆ ಭೇಟಿ ನೀಡುತ್ತಿರುವ ಗಣ್ಯ ನಾಯಕನನ್ನು ಸಂಜೆ ೫ ಗಂಟೆಗೆ ಸ್ವಾಗತಿಸಿದರು.

ಇಂಗ್ಲಿಷ್, ತಮಿಳು ಮತ್ತು ಮಂದಾರಿನ್ – ಈ ಮೂರು ಭಾಷೆಗಳಲ್ಲಿ ಕ್ಷಿ ಅವರನ್ನು ಸ್ವಾಗತಿಸಿ ಟ್ವೀಟ್ ಮಾಡಿದ ಮೋದಿ ಅವರು ’ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಅವರಿಗೆ ತಮಿಳುನಾಡು ಆತಿಥ್ಯ ನೀಡುತ್ತಿದೆ ಎಂಬುದು ಸಂತಸದ ವಿಷಯ. ಈ ಅನೌಪಚಾರಿಕ ಶೃಂಗವು ಭಾರತ ಮತ್ತು ಚೀನಾ ನಡುವಣ ಬಾಂಧವ್ಯಗಳನ್ನು ಇನ್ನಷ್ಟು ಬಲ ಪಡಿಸಲಿ’ ಎಂದು ಬರೆದರು.

ವಿಮಾನ ನಿಲ್ದಾಣದಿಂದ ಮಾಮಲ್ಲಪುರಂ ಕರಾವಳಿ ಪಟ್ಟಣಕ್ಕೆ ತೆರಳುವ ಮುನ್ನ ಕ್ಷಿ ಅವರು ನೇರವಾಗಿ ಚೆನ್ನೈ ಐಟಿಸಿ ಹೋಟೆಲಿಗೆ ತೆರಳಿದರು. ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯ ತಾಣವಾಗಿರುವ ಮಾಮಲ್ಲಪುರಂ ಚೀನಾದ ಫ್ಯುಜಿಯನ್ ಪ್ರಾಂತದ ಜೊತೆಗೆ ಸಂಪರ್ಕಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಅನೌಪಚಾರಿಕ ಶೃಂಗಸಭೆಗೆ ಮಾಮಲ್ಲಪುರಂನ್ನು ಸ್ವತಃ ಮೋದಿಯವರೇ ಆಯ್ಕೆ ಮಾಡಿದ್ದರು ಎಂದು ಅಧಿಕಾರಿಗಳು ನುಡಿದರು.

ಚೆನ್ನೈ ಭೇಟಿಯು ಮೋದಿ ಮತ್ತು ಕ್ಷಿ ನಡುವಣ ಅನೌಪಚಾರಿಕ ಶೃಂಗಸಭೆಯ ಎರಡನೇ ಆವೃತ್ತಿಯಾಗಿದೆ. ಮೊದಲ ಅನೌಪಚಾರಿಕ ಶೃಂಗಸಭೆಯು ಚೀನಾದ ಸುಂದರವಾದ ಲೇಕ್ ಸಿಟಿ ವುಹಾನ್‌ನಲ್ಲಿ ೨೦೧೮ರ ಏಪ್ರಿಲ್‌ನಲ್ಲಿ ನಡೆದಿತ್ತು.

ಡೊಕ್ಲಾಮ್‌ನಲ್ಲಿ ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾಗಿ ಘರ್ಷಿಸಿದ ಪರಿಣಾಮವಾಗಿ ಬಾಂಧವ್ಯ ಪಾತಾಳಕ್ಕೆ ಕುಸಿದ ೭೩ ದಿನಗಳ ಬಳಿಕ ವುಹಾನ್ ಅನೌಪಚಾರಿಕ ಶೃಂಗಸಭೆ ನಡೆದಿತ್ತು.

October 14, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Politics, Prime Minister, Spardha, Temples, World | , , | Leave a comment

ಕಾಂಗ್ರೆಸ್  ಒಳಜಗಳ ’ಆಯುಧ ಪೂಜೆ’ಯಿಂದ ಬಹಿರಂಗ: ರಾಜನಾಥ್ ಸಿಂಗ್

11 rajanath singh shastra puja 2
ರಕ್ಷಣಾ ಸಚಿವರಿಗೆ ಪಾಕ್ ಸೇನಾ ವಕ್ತಾರ ಅಸಿಫ್ ಗಫೂರ್ ಬೆಂಬಲ!

ನವದೆಹಲಿ: ಫ್ರಾನ್ಸಿನಲ್ಲಿ ಡಸಾಲ್ಟ್ ಏವಿಯೇಷನ್ ಸಂಸ್ಥೆಯಿಂದ ತಾವು ಸ್ವೀಕರಿಸಿದ ಮೊದಲ ರಫೇಲ್ ಯುದ್ಧ ವಿಮಾನಕ್ಕೆ  ’ಆಯುಧಪೂಜೆ’ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವರ್ತನೆ ಬಗ್ಗೆ  ಭಾರೀ ವಾಗ್ವಾದ ನಡೆದಿದೆ. ಈ ವಾಗ್ವಾದದ ನಡುವೆಯೇ ಭಾರತಕ್ಕೆ ವಾಪಸಾಗಿರುವ ರಕ್ಷಣಾ ಸಚಿವರು ಟೀಕೆಗಳಿಗೆ ಪ್ರತ್ರಿಕ್ರಿಯಿಸಿ ’ನಾನು ಸೂಕ್ತ ಎಂಬುದಾಗಿ ಏನನ್ನು ನಂಬಿದ್ದೇನೋ ಅದನ್ನು ಮಾಡಿದ್ದೇನೆ’ ಎಂದು ಸಮರ್ಥಿಸಿದ್ದಾರೆ.

’ಯಾರಾದರೂ ಒಬ್ಬರು ಪೂಜೆ ಮಾಡುವುದನ್ನು ಯಾರಾದರೂ ಆಕ್ಷೇಪಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ’ ಎಂದು ಅವರು ನುಡಿದರು.

ರಾಜನಾಥ್ ಸಿಂಗ್ ಅವರು ಪ್ರಾನ್ಸಿನ ಮೆರಿಗ್ನಾಕ್‌ನಲ್ಲಿ ವಿಜಯದಶಮಿಯ ದಿನ ೩೬ ಯುದ್ಧ ವಿಮಾನಗಳ ಪೈಕಿ ಮೊದಲನೆಯ ವಿಮಾನವನ್ನು ಸ್ವೀಕರಿಸಿದ್ದರು. ಸಿಂಗ್ ಅವರು ವಿಮಾನಕ್ಕೆ ಓಂ ತಿಲಕವನ್ನು ಹಚ್ಚಿ ಹೂ, ತೆಂಗಿನಕಾಯಿ ಸಮರ್ಪಿಸಿ  ಆಯುಧ ಪೂಜೆ ನೆರವೇರಿಸಿ ಬಳಿಕ ೩೫ ನಿಮಿಷಗಳ ಕಾಲ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಿಂಗ್ ಅವರ ಪೂಜೆಯನ್ನು ’ತಮಾಷೆ’ ಎಂಬುದಾಗಿ ಲೇವಡಿ ಮಾಡಿದ್ದರು. ಮಹಾರಾಷ್ಟ್ರ ಚುನಾವಣೆಯ ಹಿನ್ನೆಲೆಯಲ್ಲಿ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ರಫೇಲ್ ಆಯುಧ ಪೂಜೆಯ ಬಗ್ಗೆ ವ್ಯಂಗ್ಯವಾಡಿದ್ದರು ಮತ್ತು ತಮ್ಮ ಹೊಸ ಟ್ರಕ್‌ಗಳಿಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಕಟ್ಟಿ ಅವು ವಾಹನವನ್ನು ದುಷ್ಟರ ದೃಷ್ಟಿಯಿಂದ ರಕ್ಷಿಸುತ್ತವೆ ಎಂಬುದಾಗಿ ನಂಬುವ ಟ್ರಕ್ ಚಾಲಕರಿಗೆ ಕೇಂದ್ರ ಸಚಿವರನ್ನು ಹೋಲಿಸಿದ್ದರು.

ತಮ್ಮ ಬಗ್ಗೆ ಬಂದಿರುವ ಹಲವಾರು ಟೀಕೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಮೃದು ಮಾತಿನ ಸಚಿವರು ’ಯಾವುದು ಸೂಕ್ತ     ಎಂಬುದಾಗಿ ನಾನು ನಂಬಿದ್ದೇನೋ ಅದನ್ನೇ ನಾನು ಮಾಡಿದ್ದೇನೆ. ಇದು ನಮ್ಮ ನಂಬಿಕೆ… ಮಹಾನ್ ಶಕ್ತಿಯೊಂದು ಇದೆ ಎಂದು ನಾನು ಬಾಲ್ಯದಿಂದಲೂ ನಂಬಿಕೊಂಡು ಬಂದಿದ್ದೇನೆ’ ಎಂದು ಹೇಳುವ ಮೂಲಕ ತಮ್ಮ ವರ್ತನೆಯನ್ನು ಬಲವಾಗಿ ಸಮರ್ಥಿಸಿದರು.

’ಬೇರೆ ನಂಬಿಕೆಯ ಯಾರಾದರೂ ಮುಸ್ಲಿಮರು ಅಥವಾ ಕ್ರೈಸ್ತರು ಅವರ ಧರ್ಮಕ್ಕೆ ಅನುಗುಣವಾಗಿ ಪೂಜೆ ಮಾಡಿದ್ದರೆ ನಾನು ಅದನ್ನು ಖಂಡಿತವಾಗಿ ಆಕ್ಷೇಪಿಸುತ್ತಿರಲಿಲ್ಲ’ ಎಂದೂ ರಾಜನಾಥ್ ಸಿಂಗ್ ಅವರು ವಿವರಿಸಿದರು.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಬಗ್ಗೆ  ಮೊದಲಿಗೆ ಮಾಡಿದ ಟೀಕೆ ಬಗ್ಗೆ ಬಳಿಕ ಸ್ಪಷ್ಟನೆ ನೀಡಿದರಾದರೂ, ಅದು ಪ್ರಶ್ನಾತೀತವಾಗಿ ಉಳಿಯಲಿಲ್ಲ. ಗೃಹ ಸಚಿವ ಅಮಿತ್ ಶಾ ಅವರು ರಾಜನಾಥ್ ಸಿಂಗ್ ಅವರ ರಕ್ಷಣೆಗೆ ಧಾವಿಸಿ ಕಾಂಗ್ರೆಸ್ ವಿರುದ್ಧ ಪ್ರತಿದಾಳಿ ನಡೆಸಿದರು. ಕಾಂಗ್ರೆಸ್ಸಿನಲ್ಲಿ ಇರುವ ಎಲ್ಲರೂ ನಾಸ್ತಿಕರಲ್ಲ ಎಂಬುದಾಗಿ ಹೇಳುವ ಮೂಲಕ ಪಕ್ಷದ ನಾಯಕ ಸಂಜಯ್ ನಿರುಪಮ್ ಅವರೂ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹರಿಹಾಯ್ದಿದ್ದರು.

ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿದ ರಾಜನಾಥ್ ಸಿಂಗ್ ಪೂಜೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಏಕತೆ ಇದೆ ಎಂದ ನಾನು ನಂಬುವುದಿಲ್ಲ ಎಂದೂ ಹೇಳಿದರು.

ವಿಶೇಷವೆಂದರೆ ರಾಜನಾಥ್ ಸಿಂಗ್ ಅವರಿಗೆ ಅನಿರೀಕ್ಷಿತ ವಲಯದಿಂದಲೂ ಬೆಂಬಲ ಲಭಿಸಿತು, ಪಾಕಿಸ್ತಾನದ ಸೇನಾ ವಕ್ತಾರ ಅಸಿಫ್ ಗಫೂರ್ ಅವರು ರಾಜನಾಥ್ ಸಿಂಗ್ ಅವರನ್ನು ಬೆಂಬಲಿಸಿದರು.

ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ ಮೇಜರ್ ಜನರಲ್ ಅಸಿಫ್ ಗಫೂರ್ ಅವರು ’ಧರ್ಮದ ವಿಷಯವಾದ್ದರಿಂದ ಅದರಲ್ಲಿ ತಪ್ಪೇನೂ ಇಲ್ಲ ಎಂದು ಬರೆದರು. ’ಅದು ಕೇವಲ ಯಂತ್ರವೆಂಬ ವಿಷಯವಷ್ಟೇ ಮುಖ್ಯವಲ್ಲ, ಅದರ ಸಾಮರ್ಥ್ಯ, ಮತ್ತು ಆ ಯಂತ್ರವನ್ನು ನಿಭಾಯಿಸುವವರ ಅನುರಾಗ ಹಾಗೂ ನಿರ್ಧಾರ ಮುಖ್ಯವಾಗುತ್ತದೆ. ನಮ್ಮ ಪಿಎಫ್ ಶಹೀನ್‌ಗಳ ಬಗೆಗೆ ನನಗೂ ಅಷ್ಟೇ ಹೆಮ್ಮೆ ಇದೆ’ ಎಂದು ಅಸಿಫ್ ಗಫೂರ್ ಗುರುವಾರ ಟ್ವೀಟ್ ಮಾಡಿದ್ದರು.

October 14, 2019 Posted by | ಆರ್ಥಿಕ, ತಂತ್ರಜ್ಞಾನ, ಭಾರತ, ರಾಷ್ಟ್ರೀಯ, ವಿಮಾನ, Finance, Flash News, General Knowledge, India, Nation, News, Spardha, World | , , , | Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ