SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪಿ ಚಿದಂಬರಂ ಜಾಮೀನು ಅರ್ಜಿ: ದೆಹಲಿ ಹೈಕೋರ್ಟ್ ತಿರಸ್ಕಾರ


೪೦ ದಿನವಾದರೂ ಸಿಗಲಿಲ್ಲ ನಿರಾಳತೆ

30 p chidambaramನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್  2019 ಸೆಪ್ಟೆಂಬರ್ 30ರ ಸೋಮವಾರ ತಿರಸ್ಕರಿಸಿತು.

೭೪ರ ಹರೆಯದ ಚಿದಂಬರಂ ಅವರನ್ನು ಕೇಂದ್ರೀಯ ತನಿಖಾ ದಳವು ೪೦ ದಿನಗಳ ಹಿಂದೆ ರಾಷ್ಟ್ರೀಯ ರಾಜಧಾನಿ ದೆಹಲಿಯ ಅವರ ಜೋರ್ ಬಾಗ್ ನಿವಾಸದಲ್ಲಿ ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. ಸುಮಾರು ೧೪ ದಿನಗಳ ಕಾಲ ಸಿಬಿಐ ವಶದಲ್ಲಿ ತನಿಖೆ ನಡೆಸಿದ ಬಳಿಕ ಅವರನ್ನು ತಿಹಾರ್ ಸೆರೆಮನೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಕಳೆದ ೨೫ ದಿನಗಳಿಂದ ಚಿದಂಬರಂ ಅವರು ತಿಹಾರ್ ಸೆರೆಮನೆಯಲ್ಲಿ ಇದ್ದಾರೆ.

ಚಿದಂಬರಂ ಬಿಡುಗಡೆಯ ವಿರುದ್ಧ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಚಿದಂಬರಂ ಅವರು ವಿದೇಶಕ್ಕೆ ಹಾರುವ ಅಪಾಯವಿದೆ  ಎಂದು ಹೇಳಿದರು. ಚಿದಂಬರಂ ಅವರು ಗಂಭೀರವಾದ ಅಪರಾಧದಲ್ಲಿ ಆರೋಪಿಯಾಗಿರುವ ಕಾರಣ ಮತ್ತು ಶಿಕ್ಷೆಗೆ ಗುರಿಯಾಗಬಹುದಾದ ಕಾರಣ ಅವರು ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಗಳಿವೆ. ವಿದೇಶದಲ್ಲಿ ಅನಿರ್ದಿಷ್ಟ ಕಾಲ ಬದುಕುವಷ್ಟು ಹಣ ಅವರ ಬಳಿ ಇದೆ ಎಂದು ಮೆಹ್ತ ವಾದಿಸಿದರು.

ನ್ಯಾಯಮೂರ್ತಿ ಸುರೇಶ ಕುಮಾರ್ ಕೈಟ್ ಅವರು ತಮ್ಮ ತೀರ್ಪಿನಲ್ಲಿ ಈ ವಾದವನ್ನು ಅಂಗೀಕರಿಸಲಿಲ್ಲ. ’ಚಿದಂಬರಂ ಅವರು ಪರಾರಿಯಾಗಬಹುದಾದ ಅಪಾಯವಿದೆ ಎಂಬುದಕ್ಕೆ ಅಥವಾ ಅವರು ಸಾಕ್ಷ್ಯಾಧಾರದಲ್ಲಿ ಕೈಯಾಡಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಆದರೆ ಕಾಂಗ್ರೆಸ್ ನಾಯಕ ಸಂಸತ್ ಸದಸ್ಯರಾಗಿದ್ದು ಪ್ರಭಾವಶಾಲಿಯಾದ ವ್ಯಕ್ತಿಯಾಗಿದ್ದಾರೆ’ ಎಂದು ನ್ಯಾಯಮೂರ್ತಿ ಹೇಳಿದರು.

‘ತನಿಖೆಯು ಮುಂದುವರೆದ ಹಂತದಲ್ಲಿದೆ. ಈ ಹಂತದಲ್ಲಿ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬುದನ್ನು ತಳ್ಳಿಹಾಕಲಾಗದು’ ಎಂದು ನ್ಯಾಯಮೂರ್ತಿ ನುಡಿದರು.

ಐಎನ್‌ಎಕ್ಸ್ ಮೀಡಿಯಾ ಕಂಪೆನಿಗೆ ೨೦೦೭ರಲ್ಲಿ ೩೦೫ ಕೋಟಿ ರೂಪಾಯಿಗಳಷ್ಟು ಮೊತ್ತದ ವಿದೇಶೀ ಹೂಡಿಕೆ ಸ್ವೀಕರಿಸಲು ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯ ಒಪ್ಪಿಗೆ ದೊರಕಿಸಿಕೊಡುವಲ್ಲಿ ನಡೆದ ಅಕ್ರಮ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಆಗ ಚಿದಂಬರಂ ಅವರು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರದಲಿ ವಿತ್ತ ಸಚಿವರಾಗಿದ್ದರು.

ಹೈಕೋರ್ಟ್ ನ್ಯಾಯಮೂರ್ತಿ ಸುರೇಶ ಕುಮಾರ್ ಕೈಟ್ ಅವರ ಮುಂದೆ ನಡೆದ ವಿಚಾರಣಾ ಕಲಾಪದಲ್ಲಿ ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಪ್ರತಿನಿಧಿಸಿದ ಮೆಹ್ತ, ’ಐಎನ್‌ಎಕ್ಸ್ ಮೀಡಿಯಾ ಸಮೂಹದ ಸಹ ಸಂಸ್ಥಾಪಕರಾದ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಅವರು ೨೦೦೭-೦೮ರಲ್ಲಿ ಚಿದಂಬರಂ ಅವರನ್ನು ಭೇಟಿ ಮಾಡಿದ್ದಕ್ಕೆ ಮತ್ತು ಮಾಜಿ ಸಚಿವರು ತಮ್ಮ ಪುತ್ರನ ವ್ಯವಹಾರ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವಂತೆ ಅವರಿಗೆ ಸೂಚಿಸಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳು ಇವೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಚಿದಂಬರಂ ವಿರುದ್ಧದ ಸಿಬಿಐ ಪ್ರಕರಣದಲ್ಲಿ ಪ್ರಮುಖವಾಗಿರುವ ಈ ಆಪಾದನೆಯನ್ನು ಕಾಂಗ್ರೆಸ್ ನಾಯಕರೂ, ಚಿದಂಬರಂ ವಕೀಲರ ತಂಡದ ಮುಖ್ಯಸ್ಥರೂ ಆದ ಕಪಿಲ್ ಸಿಬಲ್  ನಿರಾಕರಿಸಿದ್ದಾರೆ. ಚಿದಂಬರಂ ಅವರು ಎಂದೂ ಇಂದ್ರಾಣಿ ಮುಖರ್ಜಿಯನ್ನು ಭೇಟಿ ಮಾಡಿಯೇ ಇಲ್ಲ ಎಂದು ಸಿಬಲ್ ನ್ಯಾಯಾಲಯಕ್ಕೆ ಕಳೆದವಾರ ತಿಳಿಸಿದ್ದರು.

ಏನಿದ್ದರೂ, ಐಎನ್‌ಎಕ್ಸ್ ಮೀಡಿಯಾ ಸಮೂಹದ ಪ್ರತಿನಿಧಿಗಳು ಮತ್ತು ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಸಂಸ್ಥೆಗಳ ಮಧ್ಯೆ ದೊಡ್ಡ ಪ್ರಮಾಣದಲ್ಲಿ ಮಿಂಚಂಚೆಗಳು (ಇ-ಮೇಲ್) ಹರಿದಾಡಿರುವುದಕ್ಕೆ ಸಿಬಿಐ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಸಿಬಿಐ ಪ್ರತಿಪಾದಿಸಿತ್ತು.

October 1, 2019 - Posted by | ಭಾರತ, ರಾಷ್ಟ್ರೀಯ, Flash News, India, Nation, News, Politics, Prime Minister, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ