SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಹೈದರಾಬಾದ್ ನಿಜಾಮನ ಸಂಪತ್ತಿನ ಪ್ರಕರಣ: ಭಾರತಕ್ಕೆ ಗೆಲುವು


02 hyderabad nizam uk court
ಲಂಡನ್ (ಇಂಗ್ಲೆಂಡ್):
 ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವ ವಿಚಾರ ಸೇರಿದಂತೆ ಕೆಲವು ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ಪಾಕಿಸ್ತಾನದ ವಿರುದ್ಧ ಭಾರತ ಮತ್ತೊಂದು ಐತಿಹಾಸಿಕ ಗೆಲುವು ಸಾಧಿಸಿತು.

ಹೈದರಾಬಾದ್ ನಿಜಾಮನಿಗೆ ಸೇರಿದ್ದ ಸಂಪತ್ತಿನ (ಅಂದಾಜು 35 ಮಿಲಿಯನ್ ಬ್ರಿಟಿಷ್ ಪೌಂಡ್) ಬಗೆಗಿನ  ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿ, ಭಾರತದ ನಿಲುವನ್ನು ಇಂಗ್ಲೆಂಡ್ ಹೈಕೋರ್ಟ್  (ಯುಕೆ ಹೈಕೋರ್ಟ್)  2019 ಅಕ್ಟೋಬರ್  02ರ ಬುಧವಾರ ಎತ್ತಿಹಿಡಿಯಿತು.

ಏನಿದು ಪ್ರಕರಣ?

ಹೈದರಾಬಾದ್ ನಿಜಾಮನಿಗೆ  ಸೇರಿದ್ದ ಬರೋಬ್ಬರಿ 35 ಮಿಲಿಯನ್ (ಬ್ರಿಟಿಷ್ ಪೌಂಡ್ಸ್) ನಷ್ಟು ಸಂಪತ್ತು ತನಗೆ ಸೇರಬೇಕೆಂದು ಪಾಕಿಸ್ತಾನ ವಾದಿಸಿದ್ದ 70 ವರ್ಷಗಳಷ್ಟು ಹಳೆಯ ಪ್ರಕರಣ ಇದು.

ಹೈದರಾಬಾದ್ ನಿಜಾಮನಿಗೆ ಸೇರಿದ್ದ ಸಂಪತ್ತಿನ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ಯುಕೆ ಕೋರ್ಟ್ ತೀರ್ಪು ನೀಡಿತು. ಲಂಡನ್ ನ ವೆಸ್ಟ್ ಮಿನಿಸ್ಟರ್ ಬ್ಯಾಂಕ್ ನಲ್ಲಿರುವ ನಿಜಾಮನಿಗೆ  ಸೇರಿದ ಸಂಪತ್ತು ತನಗೆ ಸೇರಿದ್ದು ಎಂದು ಪಾಕಿಸ್ತಾನ ಇಂಗ್ಲೆಂಡ್  ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಆದರೆ ಹೈದರಾಬಾದ್ ನಿಜಾಮನ ಸಂಪತ್ತು ಭಾರತಕ್ಕೆ ಸೇರಿದ್ದು ಎಂದು ಇಂಗ್ಲೆಂಡ್ ಕೋರ್ಟ್ ತೀರ್ಪು ನೀಡುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿತು.

ಹೈದರಾಬಾದಿನ 7ನೇ ನಿಜಾಮ 1948ರಲ್ಲಿ ಒಂದು ಮಿಲಿಯನ್ ಪೌಂಡ್ ಹಣವನ್ನು ಲಂಡನ್ ಬ್ಯಾಂಕ್ ಗೆ ವರ್ಗಾಯಿಸಿದ್ದರು. ಇದರ ಮೌಲ್ಯ ಈಗ 35 ಮಿಲಿಯನ್ ಪೌಂಡ್. ಈ ಐತಿಹಾಸಿಕ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು.

7ನೇ ನಿಜಾಮನ ಮೊಮ್ಮಕ್ಕಳಾದ ಪ್ರಸ್ತುತ ಟರ್ಕಿ ನಿವಾಸಿಗಳಾಗಿರುವ ಮುಕರ್ರಮ್ ಜಾ ಮತ್ತು ಮುಫಾಖಂ ಜಾ ಒಂದು ಕಡೆಯಾದರೆ, ಮತ್ತೊಂದು ಕಡೆ ಭಾರತ, ಪಾಕಿಸ್ತಾನದ ನಡುವೆ ಹಣಕ್ಕಾಗಿ ಕಾನೂನು ಸಮರ ನಡೆದಿತ್ತು. 1948ರಲ್ಲಿ ಹೈದರಬಾದ್ ಗೆ ಶಸ್ತ್ರಾಸ್ತ್ರ ಕಳುಹಿಸಿದ್ದಕ್ಕೆ ಪಾವತಿಸಿದ ಹಣವಾಗಿದ್ದು, ಅದು ತನಗೆ ಸೇರಬೇಕಾಗಿದೆ ಎಂದು ಪಾಕಿಸ್ತಾನ ವಾದ ಮಂಡಿಸಿತ್ತು.

ಅಂದು ಹೈದರಾಬಾದಿನ  7ನೇ ನಿಜಾಮ ಲಂಡನ್ನಿನನ್ಲಿದ್ದ ಪಾಕಿಸ್ತಾನದ ರಾಯಭಾರಿ ಹಬೀಬ್ ಇಬ್ರಾಹಿಂ ರಹೀಮತೊಲ್ಲಾ ಹೆಸರಿಗೆ ಒಂದು ಮಿಲಿಯನ್ ಪೌಂಡ್ ಹಣವನ್ನು ವರ್ಗಾಯಿಸಿದ್ದರು. ಇದನ್ನು ಸುರಕ್ಷತೆಯ ದೃಷ್ಟಿಯಿಂದ ಈ ಹಣವನ್ನು ನನ್ನ ಹೆಸರನ್ನು ದಾಖಲಿಸಿ ಬ್ಯಾಂಕ್ ನಲ್ಲಿ ಇರಿಸಬೇಕೆಂದು ನಿಜಾಮ ಹೇಳಿದ್ದರು. ಈ ಹಣ ಲಂಡನ್ನಿನ  ವೆಸ್ಟ್ ಮಿನಿಸ್ಟರ್ ಬ್ಯಾಂಕ್ ನಲ್ಲಿ ಇದ್ದು ಇದೀಗ ಏಳು ದಶಕಗಳೇ ಕಳೆದಿದೆ.

ಈ ಕುರಿತು ತಲೆದೋರಿದ ವಿವಾದಕ್ಕೆ ಯುಕೆ ಹೈಕೋರ್ಟ್ ಜಡ್ಜ್ ಮರ್ಕ್ಯೂಸ್ ಸ್ಮಿತ್ 166 ಪುಟಗಳ ದೀರ್ಘ ತೀರ್ಪಿನಲ್ಲಿ, ಭಾರತದ ಆಪರೇಶನ್ ಪೋಲೋ ಹಾಗೂ ಆ ಬಳಿಕ ನಡೆದ ಬೆಳವಣಿಗೆ ಮತ್ತು ಲಂಡನ್ ನಲ್ಲಿರುವ ನಿಜಾಮನ ಹಣ ಭಾರತಕ್ಕೆ ಸೇರಿದ್ದು ಎಂದು ರಾಷ್ಟ್ರಪತಿ ಹಕ್ಕು ಮಂಡಿಸಿರುವ ಬಗ್ಗೆ ಉಲ್ಲೇಖಿಸಿತು.

ಹೈದರಾಬಾದ್ 7ನೇ ನಿಜಾಮ ಅಂದು ಭಾರತದೊಳಕ್ಕೆ ವಿಲೀನವಾಗಲು ನಿರಾಕರಿಸಿದ್ದು ಮತ್ತು ಈ ಹಣವನ್ನು ಶಸ್ತ್ರಾಸ್ತ್ರ ಖರೀದಿಸಲು ವರ್ಗಾಯಿಸಿದ್ದು ಎಂದು ಒಪ್ಪಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಶಸ್ತ್ರಾಸ್ತ್ರ ಖರೀದಿಗಾಗಿ ಪಾಕಿಸ್ತಾನಕ್ಕೆ ನೀಡಿದ ಪರಿಹಾರದ ಹಣ ಎಂಬುದನ್ನೂ ಒಪ್ಪಲು ಅಸಾಧ್ಯ ಎಂದು ತೀರ್ಪು ಹೇಳಿತು.

ನಿಜಾಮನ ಸಂಪತ್ತು ತಮಗೆ ಸೇರಬೇಕೆಂದು ವಾದಿಸುತ್ತಿರುವ ನಮ್ಮ ಕಕ್ಷಿದಾರರು ಈ ವಿವಾದ ತಲೆಎತ್ತಿದ್ದ ಸಂದರ್ಭದಲ್ಲಿ ಚಿಕ್ಕ ಮಕ್ಕಳಾಗಿದ್ದರು. ಈಗ ಅವರಿಗೆ 80 ವರ್ಷ. ಆ ನಿಟ್ಟಿನಲ್ಲಿ ಈ ವಿವಾದ ಅವರ ಜೀವಿತಾವಧಿಯಲ್ಲೇ ಬಗೆಹರಿದಿರುವುದು ದೊಡ್ಡ ನಿರಾಳತೆ ಸಿಕ್ಕಂತಾಗಿದೆ ಎಂದು ಯುಕೆ ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿತು.

ಅಲ್ಲದೇ ನಿಜಾಮನ ಸಂಪತ್ತು ಭಾರತಕ್ಕೆ ಸೇರಿಲ್ಲ ಎಂಬ ಪಾಕಿಸ್ತಾನದ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿತು. ಹೈದರಾಬಾದನ್ನು ಭಾರತ ವಶಪಡಿಸಿಕೊಂಡಿರುವುದು ಕಾನೂನು ಬಾಹಿರ ಎಂಬ ವಾದವನ್ನೂ ಕೋರ್ಟ್ ತಿರಸ್ಕರಿಸಿತು.

October 3, 2019 - Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Finance, Flash News, General Knowledge, India, News, Pakistan, Politics, Spardha, World | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ