SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ, ತುಟ್ಟಿ ಭತ್ಯೆ ಶೇ.೫ರಷ್ಟು ಏರಿಕೆ


09 diwali
ಕೇಂದ್ರ ಸಂಪುಟದ ತೀರ್ಮಾನ

ನವದೆಹಲಿ: ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇಕಡಾ ೧೨ರಿಂದ ಶೇಕಡಾ ೧೭ಕ್ಕೆ  ಅಂದರೆ ಶೇಕಡಾ ೫ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು 2019 ಅಕ್ಟೋಬರ್ 09ರ ಬುಧವಾರ ನಿರ್ಧರಿಸಿತು.

ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಈ ವಿಚಾರವನ್ನು ಪ್ರಕಟಿಸಿದರು. ಸದರಿ ಕ್ರಮದಿಂದ ೫೦ ಲಕ್ಷ ನೌಕರರು ಮತ್ತು ೬೨ ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಅವರು ನುಡಿದರು.

ಸಚಿವ ಸಂಪುಟ ನಿರ್ಧಾರದಿಂದ ಕಳೆದ ವರ್ಷ ಶೇಕಡಾ ೧೨ರಷ್ಟಿದ್ದ ತುಟ್ಟಿಭತ್ಯೆ ಈಗ ಶೇಕಡಾ ೧೭ಕ್ಕೆ ಏರುವುದು. ಇದು ನೌಕರರಿಗೆ ದೀಪಾವಳಿ ಕೊಡುಗೆ. ಈ ಪ್ರಸ್ತಾಪದಿಂದ ಸರ್ಕಾರದ ಬೊಕ್ಕಸಕ್ಕೆ ಒಟ್ಟು ೧೬,೦೦೦ ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಸಚಿವರು ತಿಳಿಸಿದರು.

ತುಟ್ಟಿ ಭತ್ಯೆಯು ಜೀವನ ವೆಚ್ಚ ಏರಿಕೆಗಾಗಿ ನೌಕರರು, ಸಾರ್ವಜನಿಕ ರಂಗದ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರವು ಒದಗಿಸುವ ಹೊಂದಾಣಿಕೆ ಭತ್ಯೆಯಾಗಿದೆ. ಹಣದುಬ್ಬರದ ಪರಿಣಾಮವನ್ನು ಕಡಿಮೆಗೊಳಿಸಲು ಮೂಲ ವೇತನದ ಪ್ರತಿಶತವಾಗಿ ಇದನ್ನು ಲೆಕ್ಕಹಾಕಲಾಗುತ್ತದೆ.

ಸರ್ಕಾರದ ಕ್ರಮವು ವೇತನ ವರ್ಗ ಮತ್ತು ಸರ್ಕಾರಿ ನೌಕರರಿಗೆ ನಿರಾಳತೆ ಒದಗಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆರ್ಥಿಕ ಹಿನ್ನಡೆಯ ಹಿನ್ನೆಲೆಯಲ್ಲಿ ವಿವಿಧ ರಂಗಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ನಿವಾರಿಸುವ ಕ್ರಮಗಳು ಮುಂದುವರೆಯಲಿವೆ ಎಂದು ಜಾವಡೆಕರ್ ಹೇಳಿದರು.

ಆಧಾರ್ ಜೋಡಣೆ ಗಡುವು ವಿಸ್ತರಣೆ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ೨೦೧೯ ಆಗಸ್ಟ್ ೩೧ರ ಬಳಿಕ ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನು ಬಿಡುಗಡೆ ಮಾಡುವ ಸಲುವಾಗಿ ಕಡ್ಡಾಯ ಆಧಾರ್ ಜೋಡಣೆಗೆ ನೀಡಲಾಗಿದ್ದ ಗಡುವನ್ನು ನವೆಂಬರ್ ೩೦ರವರೆಗೆ ವಿಸ್ತರಿಸಲೂ ಸಂಪುಟ ನಿರ್ಧರಿಸಿದೆ ಎಂದು ಸಚಿವರು ಹೇಳಿದರು.

ಹಿಂಗಾರು (ಚಳಿಗಾಲದ) ಬಿತ್ತನೆಗೆ ಮುನ್ನ ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಆಧಾರ್ ಕಡ್ಡಾಯ ಜೋಡಣೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದು ಸಚಿವರು ಹೇಳಿದರು.

೭ ಕೋಟಿಗೂ ಹೆಚ್ಚು ರೈತರಿಗೆ ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ಅನುಕೂಲ ಲಭಿಸಿದೆ. ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ರೈತನಿಗೂ ಒಟ್ಟು ೬೦೦೦ ರೂಪಾಯಿಗಳನ್ನು ತಲಾ ೨೦೦೦ ರೂಪಾಯಿಗಳಂತೆ ಮೂರು ಸಮಾನ ಕಂತುಗಳಲ್ಲಿ  ಒದಗಿಸಲಾಗುವುದು.

ಜಮ್ಮು – ಕಾಶ್ಮೀರ ನಿರ್ವಸಿತರಿಗೆ ಪರಿಹಾರ: ವಸತಿ ಕಳೆದು ಜಮ್ಮು ಮತ್ತು ಕಾಶ್ಮೀರದ ಹೊರತಾಗಿ ಇತರ ಪ್ರದೇಶಗಳಲ್ಲಿ ನೆಲೆಸಿ, ಇತ್ತೀಚೆಗೆ ರಾಜ್ಯಕ್ಕೆ ವಾಪಸಾಗಿರುವ ೫೩೦೦ ನಿರ್ವಸಿತ ಕುಟುಂಬಗಳಿಗೆ ಕೂಡಾ ತಲಾ ೫.೫ ಲಕ್ಷ ರೂಪಾಯಿಗಳನ್ನು ಒದಗಿಸಲು ಸಭೆ ನಿರ್ಧರಿಸಿತು. ಇದು ನೆಲೆ ಕಳೆದುಕೊಂಡ ಈ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಎಂದು ಜಾವಡೆಕರ್ ನುಡಿದರು.

ಇದು ಐತಿಹಾಸಿಕ ತಪ್ಪನ್ನು ಸರಿಪಡಿಸುವ ಕ್ರಮ ಎಂದು ಸಚಿವರು ವರ್ಣಿಸಿದರು.

October 9, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, ಲೋಕಸಭೆ, ವಿಶ್ವ/ ಜಗತ್ತು, culture, Festival, Finance, Flash News, General Knowledge, India, Nation, News, Spardha, World |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ