SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮೋದಿ ಸರ್ಕಾರದಿಂದ ಆರ್ಥಿಕತೆ ನಾಶ, ಐದಾರು ತಿಂಗಳಲ್ಲಿ ಸ್ಥಿತಿ ಇನ್ನಷ್ಟು ನಿಕೃಷ್ಟ


13 rahul gandhi
ಮಹಾರಾಷ್ಟ್ರ ಚುನಾವಣಾ ಸಭೆಯಲ್ಲಿ ರಾಹುಲ್ ಗಾಂಧಿ ಟೀಕಾ ಪ್ರಹಾರ

ಮುಂಬೈ: ನರೇಂದ್ರ ಮೋದಿ ಸರ್ಕಾರವು ಭಾರತದ ಆರ್ಥಿಕತೆಯನ್ನು ನಾಶಪಡಿಸುತ್ತಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ಅಕ್ಟೋಬರ್ 13ರ ಭಾನುವಾರ ಆಪಾದಿಸಿದರು.

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ’ಭಾರತದ ಆರ್ಥಿಕತೆಯನ್ನು ಮೋದಿ ಸರ್ಕಾರ ನಾಶ ಪಡಿಸುತ್ತಿದೆ. ಮುಂದಿನ ೫-೬ ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ. ಆದರೆ ನೈಜ ವಿಷಯಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ಮತ್ತು ಅದರ ನಾಯಕ ಮೋದಿ ೩೭೦ನೇ ವಿಧಿ ಮತ್ತು ಚಂದ್ರಯಾನದಂತಹ ವಿಷಯ ಪ್ರಸ್ತಾಪಿಸುತ್ತಾ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ’ ಎಂದು ಹೇಳಿದರು.

ಭವಿಷ್ಯದಲ್ಲಿ ರಾಷ್ಟ್ರದ ಆರ್ಥಿಕ ಸ್ಥಿತಿ ಇನ್ನಷ್ಟು ನಿಕೃಷ್ಟಗೊಳ್ಳಲಿದ್ದು ಅತ್ಯಂತ ಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದು ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಎಚ್ಚರಿಸಿದರು.

‘ಸಮಸ್ಯೆ ಈಗಷ್ಟೇ ಶುರುವಾಗಿದೆ. ಭಾರತದ ಆರ್ಥಿಕತೆಯನ್ನು ಸುಧಾರಿಸಲು ಕಾಂಗ್ರೆಸ್ ಪಕ್ಷ ಮತ್ತು ಮನಮೋಹನ್ ಸಿಂಗ್ ಅವರಿಗೆ ಹಲವು ವರ್ಷಗಳು ಬೇಕಾಗಿದ್ದವು. ಅದನ್ನು ಈಗ ನಾಶ ಪಡಿಸಲಾಗಿದೆ. ಈ ಸಮಸ್ಯೆ ಬಗ್ಗೆ ಅವರು ಒಂದಕ್ಷರವನ್ನೂ ಉಸುರುವುದಿಲ್ಲ, ಬದಲಿಗೆ ನಿಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸುತ್ತಾರೆ’ ಎಂದು ಮಹಾರಾಷ್ಟ್ರದಲ್ಲಿ ಅಕ್ಟೋಬರ್ ೨೧ರ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡುತ್ತಾ ರಾಹುಲ್ ಗಾಂಧಿ ನುಡಿದರು.

ಆರ್ಥಿಕತೆ ಕುಂಠಿತಗೊಂಡದ್ದನ್ನು ಅನುಸರಿಸಿ, ಭಾರತದ ಪ್ರಗತಿ ದರವನ್ನು ವಿಶ್ವಬ್ಯಾಂಕ್ ೨೦೧೮-೨೦೧೯ರ ಸಾಲಿನಲ್ಲಿ  ಶೇಕಡಾ ೬.೯ ರ ಬದಲಿಗೆ ಶೇಕಡಾ ೬ಕ್ಕೆ ನಿಗದಿ ಪಡಿಸಿತ್ತು. ಇದಾದ ಒಂದು ದಿನದ ಬಳಿಕ  ರಾಹುಲ್ ಗಾಂಂಧಿಯವರು ಮೋದಿ ಸರ್ಕಾರದ ವಿರುದ್ಧ ತಮ್ಮ ಟೀಕಾಸ್ತ್ರವನ್ನು ಎಸೆದರು.

ಚಂದ್ರಯಾನದ ವಿಚಾರದಲ್ಲೂ ಪ್ರಧಾನಿ ಮೋದಿ ಅವರನ್ನು ಟೀಕಿಸಿದ ರಾಹುಲ್, ತನ್ನ ಸಾಮರ್ಥ್ಯ ವರ್ಧನೆಗೆ ಇಸ್ರೋ ಹಲವು ವರ್ಷಗಳನ್ನು ತೆಗೆದುಕೊಂಡಿತ್ತು, ಆದರೆ ಈಗ ಬೇರೆಯವರು ಅದರ ಕೆಲಸದ ಲಾಭವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

‘ಯುವಕರು ಕೆಲಸಗಳನ್ನು ಕೇಳಿದಾಗ, ಸರ್ಕಾರವು ಅವರಿಗೆ ಚಂದ್ರನನ್ನು ನೋಡುವಂತೆ ಹೇಳುತ್ತದೆ’ ಎಂದು ಅವರು ಲೇವಡಿ ಮಾಡಿದರು.

ಕಳೆದ ವರ್ಷ ಡೊಕ್ಲಾಮ್‌ನಲಿ ಚೀನೀ ಸೇನೆಯು ಅತಿಕ್ರಮಣ ನಡೆಸಿದ್ದು ಏಕೆ ಎಂಬುದಾಗಿ ಪ್ರಧಾನಿ ಮೋದಿಯವರು ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಏಕೆ ಪ್ರಶ್ನಿಸಲಿಲ್ಲ ಎಂದು ರಾಹುಲ್ ಕೇಳಿದರು.

ರಾಹುಲ್ ಗಾಂಧಿಯವರು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿಯುವರು ಎಂಬ ಊಹಾಪೋಹಗಳು ಹರಡಿದ್ದವು. ಅದರೆ ರಾಹುಲ್ ಗಾಂಧಿಯವರು ಅಕ್ಟೋಬರ್ ೧೩ರಂದು ಮುಂಬೈಯಲ್ಲಿ ಚುನಾವಣಾ ಪ್ರಚಾರ ನಡೆಸುವರು ಎಂದು ಪಕ್ಷದ ನಾಯಕರು ಬುಧವಾರ ದೃಢ ಪಡಿಸಿದ್ದರು.

ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರ ಸಭೆಗಿಂತ ಕೆಲವು ಗಂಟೆಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜಲಗಾಂವ್‌ನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದರು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ಪುನಃ ತರುವಂತೆ ವಿರೋಧ ಪಕ್ಷಗಳಿಗೆ ಸವಾಲು ಹಾಕಿದ್ದರು.

ಮೋದಿಯವರು ದೇಶದ ಆರ್ಥಿಕತೆ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರಲಿಲ್ಲ.

October 14, 2019 - Posted by | ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Prime Minister, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ