SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಯೋಧ್ಯಾ ಪ್ರಕರಣ: ವಿಚಾರಣೆ ಅಂತ್ಯ, ತೀರ್ಪು ಕಾದಿರಿಸಿದ ಸುಪ್ರೀಂ


16 ayodhya
೪೦ ದಿನಗಳ ವಿಚಾರಣೆ ಕೊನೆಯ ದಿನ ಹೈಡ್ರಾಮ, ನ.೧೭ಕ್ಕೆ ಮುನ್ನ ತೀರ್ಪು ಸಂಭವ

ನವದೆಹಲಿ: ರಾಜಕೀಯವಾಗಿ ಅತ್ಯಂತ  ಸೂಕ್ಷ್ಮವಾಗಿರುವ ಅಯೋಧ್ಯೆಯ ರಾಮ ಜನ್ಮ ಭೂಮಿ- ಬಾಬರಿ ಮಸೀದಿ ಭೂವಿವಾದ ಪ್ರಕರಣದಲ್ಲಿ ಉಭಯ  ಕಡೆಯ ವಕೀಲರ ವಾದ-ಪ್ರತಿವಾದಗಳು 2019 ಅಕ್ಟೋಬರ್ 16ರ ಬುಧವಾರ ಮುಕ್ತಾಯಗೊಂಡಿದ್ದು, ಸತತ ೪೦ ದಿನಗಳಿಂದ ವಾದ-ಪ್ರತಿವಾದ ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠವು ಅತ್ಯಂತ ಕುತೂಹಲಕರವಾದ ತನ್ನ ತೀರ್ಪನ್ನು ಕಾಯ್ದಿರಿಸಿತು.

ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ವೈವಿ ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಅಬ್ದುಲ್ ನಜೀರ್ ಅವರನ್ನೂ ಒಳಗೊಂಡಿರುವ ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ದಶಕಗಳಿಂದ ಕಗ್ಗಂಟಾಗಿ ಉಳಿದಿದ್ದ ಅಯೋಧ್ಯೆಯ ಭೂವಿವಾದ ಪ್ರಕರಣದ ೧೪ಕ್ಕೂ ಹೆಚ್ಚು ಮೇಲ್ಮನವಿಗಳ ವಿಚಾರಣೆಯನ್ನು ಸಂಜೆ ೪.೩೦ ಗಂಟೆಗೆ ಮುಕ್ತಾಯಗೊಳಿಸಿ, ತೀರ್ಪನ್ನು ಕಾಯ್ದಿರಿಸಿರುವುದಾಗಿ ಪ್ರಕಟಿಸಿತು.

ಈದಿನ  ಸಂಜೆ ೫ ಗಂಟೆಯ ಒಳಗಾಗಿ ವಾದ-ಪ್ರತಿವಾದ ಮುಗಿಸಲು ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್  ಪ್ರಕರಣದ ವಾದಗಳ ಲಿಖಿತ ಸಾರಾಂಶವನ್ನು ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ನೀಡಿತು.  ಸಿಜೆಐ ರಂಜನ್ ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಅದಕ್ಕೆ ಮುನ್ನವೇ ತೀರ್ಪು ಹೊರಬೀಳುವ ನಿರೀಕ್ಷೆ ಇದೆ.

ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರಿಂಕೋರ್ಟ್ ಸಂವಿಧಾನ ಪೀಠವು ನಡೆಸಿತ್ತು. ಅಯೋಧ್ಯೆಯಲ್ಲಿ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವೂ ಇದ್ದ ನಿವೇಶನ ಸೇರಿದಂತೆ ೨.೭೭ ಎಕರೆ ವಿವಾದಿತ ಭೂಮಿಯನ್ನು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ೨:೧ ಬಹುಮತದ ಆದೇಶವನ್ನು  ನೀಡಿತ್ತು.

ಈದಿನ  ವಾದ, ಪ್ರತಿವಾದಕ್ಕೆ ಉಭಯ ಪಕ್ಷಗಳ ವಕೀಲರಿಗೂ ಸಂಜೆ ೫ಗಂಟೆಯವರೆಗೆ ಸಿಜೆಐ ಗಡುವು ನೀಡಿದ್ದರು. ಅದರಂತೆಯೇ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ವಿಚಾರಣೆ ಅಂತ್ಯಗೊಂಡಿದ್ದು, ೧೩೪ ವರ್ಷಗಳಷ್ಟು ಹಳೆಯ ವಿವಾದದ ಅಂತಿಮ ತೀರ್ಪನ್ನು ಸಿಜೆಐ ಗೋಗೊಯಿ ನಿವೃತ್ತಿಗೂ ಮುನ್ನ ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿತು.

ಕಳೆದ ೪೦ ದಿನಗಳಿಂದ ನಡೆದ ಅಯೋಧ್ಯಾ ಪ್ರಕರಣದ ವಿಚಾರಣೆಯು ಚರಿತ್ರೆಯಲ್ಲಿ ಅತೀ ದೀರ್ಘಕಾಲದ ವಿಚಾರಣೆಯ ಎರಡನೇ ಪ್ರಕರಣವಾಗಿದೆ. ಈ ಹಿಂದೆ ೧೯೭೨ಲ್ಲಿ ಕೇಶವಾನಂದ ಭಾರತಿ ಪ್ರಕರಣದ ವಿಚಾರಣೆಯನ್ನು ೧೩ ನ್ಯಾಯಾಧೀಶರಿದ್ದ ಸಂವಿಧಾನ ಪೀಠವು ೬೮ ದಿನಗಳ ಕಾಲ ನಡೆಸಿತ್ತು. ನಂತರ ಸಂಸತ್ತಿನ ಅಧಿಕಾರಗಳ ಬಗ್ಗೆ ಚಾರಿತ್ರಿಕ ತೀರ್ಪು ನೀಡಿತ್ತು.

ಸೆಪ್ಟೆಂಬರ್ ೬ರಂದು ಆರಂಭಗೊಂಡಿದ್ದ ಅಯೋಧ್ಯಾ ಪ್ರಕರಣದ ದೈನಂದಿನ ವಿಚಾರಣೆಯನ್ನು ಅಕ್ಟೋಬರ್ ೧೭ ಮುಕ್ತಾಯಗೊಳಿಸಲು ನಿರ್ಧರಿಸಿದ್ದ ಪೀಠವು ಅದನ್ನು ಇನ್ನೂ ಒಂದು ದಿನ ಮುಂಚಿತವಾಗಿ ಮುಗಿಸುವುದಾಗಿ ಹೇಳಿತ್ತು. ಇದರಂತೆ ಕೊನೆಯ ವಿಚಾರಣೆಯನ್ನು ಪೀಠವು ಈದಿನ ಪೂರ್ಣಗೊಳಿಸಿತು.

ಚರಿತ್ರಾರ್ಹ ಅಯೋಧ್ಯಾ ಪ್ರಕರಣದ ವಿಚಾರಣೆಯ ಕೊನೆಯ ದಿನ ಹೈಡ್ರಾಮ ನಡೆದು, ಒಂದು ಹಂತದಲ್ಲಿ ಮುಸ್ಲಿಮರ ಪರ ವಕೀಲರು ರಾಮಜನ್ಮಭೂಮಿ ನಕ್ಷೆಯನ್ನು ಹರಿದು ಹಾಕಿದ ಘಟನೆ ಘಟಿಸಿತು. ಈ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಮುಖ್ಯ ನ್ಯಾಯಮೂರ್ತಿ ಗೊಗೋಯಿ ಅವರು ಶಿಷ್ಟಾಚಾರಗಳ ಪಾಲನೆ ಆಗದೇ ಇದ್ದಲ್ಲಿ ತಾವು ಸ್ಥಾನದಿಂದ ಎದ್ದು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಇನ್ನೊಂದು ಹಂತದಲ್ಲಿ ರಾಮಲಲ್ಲಾ ಪರ ವಕೀಲರು ವಾದ ಮಂಡನೆಗೆ ಇನ್ನಷ್ಟು ಕಾಲಾವಕಾಶ ಕೋರಿದಾಗ, ಒಪ್ಪದ ಮುಖ್ಯ ನ್ಯಾಯಮೂರ್ತಿಯವರು ಈದಿನವೇ ವಿಚಾರಣೆ ಅಂತ್ಯಗೊಳ್ಳುತ್ತದೆ ಮತ್ತು ನವೆಂಬರ್ ೧೭ಕ್ಕೆ ತೀರ್ಪು ಹೊರಬೀಳುತ್ತದೆ ಎಂದು ಹೇಳಿದರು.

ನಾಟಕೀಯ ಬೆಳವಣಿಗೆಯಲ್ಲಿ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ಅವರು ನ್ಯಾಯಾಲಯದಲ್ಲಿ  ರಾಮಜನ್ಮಭೂಮಿ ನಕ್ಷೆಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಮ್ ವಕ್ಫ್ ಮಂಡಳಿಯ  ಪರ ವಕೀಲರಾಗಿ ವಾದ ಮಂಡಿಸಲು ರಾಜೀವ್ ಧವನ್ ಕೋರ್ಟಿಗೆ ಹಾಜರಾಗಿದ್ದರು. ಈ ಮಧ್ಯೆ ಅಖಿಲ ಭಾರತ ಹಿಂದೂ ಮಹಾಸಭಾದ ವಕೀಲರಾದ ವಿಕಾಸ್ ಸಿಂಗ್ ಅವರು ಕುನಾಲ್ ಕಿಶೋರ್ ಪ್ರಕಟಣೆಯ ಪುಸ್ತಕದಲ್ಲಿರುವ ರಾಮಜನ್ಮಭೂಮಿ ನಕ್ಷೆಯನ್ನು ಪುರಾವೆಯನ್ನಾಗಿ ಕೋರ್ಟ್ ಗೆ ಸಲ್ಲಿಸಲು ಮುಂದಾದರು.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಸ್ಥಾನ ಇತ್ತು ಎಂಬುದಕ್ಕೆ ಪುರಾವೆಯಾಗಿ ವಿಕಾಸ್ ಸಿಂಗ್ ಅವರು ನಕ್ಷೆಯನ್ನು ನೀಡಿದರು. ಆಗ ಏಕಾಏಕಿ ಮುಸ್ಲಿಮ್ ಸಂಘಟನೆ ಪರ ವಕೀಲ ರಾಜೀವ್ ಧವನ್ ಅವರು ನಕ್ಷೆಯನ್ನು ಹರಿದು ಹಾಕಿದರು.

ಸುಪ್ರೀಂಕೋರ್ಟ್ ಈ ಪುಸ್ತಕದಲ್ಲಿರುವ ನಕ್ಷೆಯನ್ನು ಪುರಾವೆಯನ್ನಾಗಿ ನಂಬಬಾರದು ಎಂದು ವಕೀಲ ರಾಜೀವ್ ಧವನ್ ಅವರು ವಿನಂತಿಸಿಕೊಂಡರು. ನಿಮಗೆ ಈಗ ಏನು ಬೇಕಾಗಿದೆ ಎಂದು ಧವನ್ ಅವರನ್ನು ಪ್ರಶ್ನಿಸಿದ ಸಿಜೆಐ ರಂಜನ್ ಗೋಗೊಯಿ ’ನೀವು ಮತ್ತೆ ಇದನ್ನು ಹರಿಯುತ್ತೀರಾ?’ ಎಂದು ಅಸಮಾಧಾನದಿಂದ ಪ್ರಶ್ನಿಸಿದರು.

ನೀವು (ಧವನ್) ಶಿಷ್ಟಾಚಾರವನ್ನು ಹಾಳುಗೆಡುವುತ್ತಿದ್ದೀರಿ. ಶಿಷ್ಟಾಚಾರ ಪಾಲಿಸದೇ ಹೋದರೆ ಮತ್ತು ಇದೇ ರೀತಿಯಲ್ಲಿ ಪ್ರಕ್ರಿಯೆ ಮುಂದುವರಿದರೆ ನಾವು ನಮ್ಮ ಸ್ಥಾನದಿಂದ ಎದ್ದು ಹೋಗಬೇಕಾಗುತ್ತದೆ ಎಂದೂ ಸಿಜೆಐ ಎಚ್ಚರಿಕೆ ನೀಡಿದರು.

ಹಿಂದೂ ಕಕ್ಷಿದಾರರ ಪರ ವಕೀಲ ಸಿ.ಎಸ್. ವೈದ್ಯನಾಥನ್ ಅವರು ಕೊನೆಯ ದಿನವೂ ಸುನ್ನಿ ವಕ್ಫ್ ಮಂಡಳಿ ಈಗಾಗಲೇ ಸಲ್ಲಿಸಿದ ಸಾಕ್ಷ್ಯಾಧಾರದ ವಿರುದ್ಧ ಪ್ರಬಲ ವಾದ ಮಂಡಿಸಿದರು.

ಉಭಯ ಕಡೆಗಳ ವಾದ -ಪ್ರತಿವಾದ ಆಲಿಸಿದ ಪಂಚ ಸದಸ್ಯ ಪೀಠವು ೪೦ ದಿನಗಳ ವಿಚಾರಣೆ ಮುಕ್ತಾಯಗೊಂಡಿದೆ. ತಮ್ಮ ವಾದದ ಲಿಖಿತ ಸಾರಾಂಶವನ್ನು ಸಲ್ಲಿಸಲು ಕಕ್ಷಿದಾರರಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಪ್ರಕಟಿಸಿತು.

ಕೊನೆಯ ವಿಚಾರಣೆಯ ಕೊನೆಯ ದಿನವಾದ ಬುಧವಾರ ಈ ಹಿಂದೆ ಸುಪ್ರೀಂಕೋರ್ಟಿನಿಂದ ನೇಮಕಗೊಂಡಿದ್ದ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಬ್ರಾಹಿಂ ಕಲೀಫುಲ್ಲ ಅಧ್ಯಕ್ಷತೆಯ ತ್ರಿಸದಸ್ಯ ಸಮಿತಿಯು ತನ್ನ ಸಂಧಾನಯತ್ನಗಳ ದಾಖಲೆಯನ್ನು ಪೀಠಕ್ಕೆ ಸಲ್ಲಿಸಿತು. ಖ್ಯಾತ  ಸಂಧಾನಕಾರ ಶ್ರೀರಾಮ್ ಪಂಚು, ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಈ ಸಮಿತಿಯ ಸದಸ್ಯರಾಗಿದ್ದರು.

ಪ್ರಕರಣದ ಇತಿಹಾಸ

೧೫೨೮ – ಮೊಘಲ್ ಸಾಮ್ರಾಟ್ ಬಾಬರನ ಕಮಾಂಡರ್ ಮಿರ್ ಬಾಕಿಯಿಂದ ಅಯೋಧ್ಯೆಯಲ್ಲಿ ಬಾಬರ್ರಿ ಮಸೀದಿ ನಿರ್ಮಾಣ.

೧೮೮೫ – ವಿವಾದಗ್ರಸ್ತ ರಾಮಜನ್ಮಭೂಮಿ- ಬಾಬರಿ ಮಸೀದಿ ಹೊರಗಿನ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಅವಕಾಶ ಕೋರಿ ಮಹಾಂತ ರಘುಬೀರ್ ದಾಸ್ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ, ಅದು ತಿರಸ್ಕೃತ.

೧೯೪೯ – ವಿವಾದಗ್ರಸ್ತ ಮಸೀದಿಯ ಕೇಂದ್ರ ಗುಮ್ಮಟದೊಳಗೆ ರಾಮಲಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ.

೧೯೫೦- ರಾಮ ಲಲ್ಲಾ ವಿಗ್ರಹಗಳ ಪೂಜೆಗೆ ಅನುಮತಿ ನೀಡುವಂತೆ ಕೋರಿ ಗೋಪಾಲ್ ಸಿಮ್ಲಾ ವಿಶಾರದ್ ಅವರಿಂದ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ. ಪರಮಹಂಸ ರಾಮಚಂದ್ರ ದಾಸ್ ಅವರಿಂದಲೂ ಅಂತಹದ್ದೇ ಅರ್ಜಿ ಸಲ್ಲಿಕೆ.

೧೯೫೯- ಜಾಗದ ಸ್ವಾಧೀನ ಕೋರಿ ನಿರ್ಮೋಹಿ ಅಖಾರದಿಂದ ಅರ್ಜಿ.

೧೯೮೧- ಸುನ್ನಿ ವಕ್ಫ್ ಮಂಡಳಿಯಿಂದಲೂ ಜಾಗದ ಒಡೆತನಕ್ಕಾಗಿ ಮನವಿ.

೧೯೮೬ – ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಸ್ಥಳೀಯ ನ್ಯಾಯಾಲಯದ ಆದೇಶ.

೧೯೮೯- ವಿವಾದಗ್ರಸ್ತ ಜಾಗದ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಅಲಹಬಾದ್ ಹೈಕೋರ್ಟ್ ಆದೇಶ.

೧೯೯೨- ಡಿಸೆಂಬರ್ ೬ರಂದು ಕರಸೇವಕರಿಂದ ಬಾಬರೀ ಮಸೀದಿ ಧ್ವಂಸ .

೧೯೯೩- ವಿವಾದಿತ ಜಾಗವನ್ನು ಕೇಂದ್ರ ಸ್ವಾಧೀನ ಪಡಿಸಿಕೊಳ್ಳುವುದಕ್ಕಾಗಿ ಅಯೋಧ್ಯೆ ನಿರ್ದಿಷ್ಟ ಪ್ರದೇಶದ ಸ್ವಾಧೀನ ಕಾಯ್ದೆ  ಅಂಗೀಕಾರ. ಇದರ ವಿರುದ್ಧ ಇಸ್ಮಾಯಿಲ್ ಫಾರೂಕಿ ಸೇರಿದಂತೆ ಹಲವರಿಂದ ತಕರಾರು ಅರ್ಜಿ.

೨೦೦೨ – ಜಾಗದ ಒಡೆತನ ಯಾರಿಗೆ ಸೇರಿದ್ದು ಎನ್ನುವ ವ್ಯಾಜ್ಯ ಕುರಿತು ಅಲಹಾಬಾದ್ ಹೈಕೋರ್ಟ್ ವಿಚಾರಣೆ ಆರಂಭ.

೨೦೧೦ – ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ್ ಲಲ್ಲಾ ಮೂರು ವಾರಸುದಾರರಿಗೆ ವಿವಾದಿತ ಜಾಗದ ಸಮಾನ ಹಂಚಿಕೆ ಮಾಡಿ ಅಲಹಾಬಾದ್ ಹೈಕೋರ್ಟ್ ತೀರ್ಪು.

೨೦೧೧- ಅಯೋಧ್ಯೆ ಭೂ ವಿವಾದ ಕುರಿತ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ.

೨೦೧೭ – ಪರಸ್ಪರ ಸಂಧಾನ ಸಮ್ಮತಿ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಲು ಸಿಜೆಐ ಜೆ.ಎಸ್ ಖೇಹರ್ ಸಲಹೆ.

೨೦೧೭ – ಅಲಹಾಬಾದ್ ಹೈಕೋರ್ಟ್‌ನ ೧೯೯೪ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ರಚನೆ.

೨೦೧೮ – ತನ್ನ ೧೯೯೪ರ ತೀರ್ಪಿನ ಮರು ಪರಿಶೀಲನೆ ಕೋರಿದ ಅರ್ಜಿಗಳ ವಿಚಾರಣೆಯನ್ನು ೫ ಸದಸ್ಯರ ವಿಸ್ತೃತ ಪೀಠಕ್ಕೆ ಒಪ್ಪಿಸಲು ಕೋರಿ ರಾಜೀವ್ ಧವನ್ ಅವರಿಂದ ಅರ್ಜಿ.

೨೦೧೮- ಸೆ. ೨೭ – ವಿಸ್ತೃತ ಪೀಠಕ್ಕೆ ಒಪ್ಪಿಸಲು ನಿರಾಕರಿಸಿ ಸುಪ್ರೀಂಕೋರ್ಟ್ ತೀರ್ಪು.

October 16, 2019 - Posted by | ಅಯೋಧ್ಯೆ, ಭಾರತ, ಸುಪ್ರೀಂಕೋರ್ಟ್, culture, Flash News, General Knowledge, Nation, News, Spardha, supreme court, Temples, Temples, ದೇವಾಲಯಗಳು | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ