SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂಗೆ ಸುಪ್ರೀಂ ಜಾಮೀನು


22 chidambaram bail
ಸಿಬಿಐ ವಾದ ತಿರಸ್ಕರಿಸಿದ ನ್ಯಾಯಾಲಯ, ಇಡಿ ಬಂಧನ ಮುಂದುವರಿಕೆ

ನವದೆಹಲಿ: ಕೇಂದ್ರೀಯ ತನಿಖಾ ದಳವು (ಸಿಬಿಐ) ತನಿಖೆ ನಡೆಸಿರುವ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ  ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ 2019 ಅಕ್ಟೋಬರ್ 22ರ ಮಂಗಳವಾರ ಶರತ್ತಿನ ಜಾಮೀನು ಮಂಜೂರು ಮಾಡಿತು. ೬೧ ದಿನಗಳ ಹಿಂದೆ ಆಗಸ್ಟ್ ೨೧ರಂದು ಸಿಬಿಐಯಿಂದ ಬಂಧಿತರಾದ ೭೪ರ ಹರೆಯದ ಕಾಂಗ್ರೆಸ್ ನಾಯಕನಿಗೆ ಇದರೊಂದಿಗೆ ಅಲ್ಪ ನಿರಾಳತೆ ಲಭಿಸಿದಂತಾಯಿತು.

ಏನಿದ್ದರೂ, ಚಿದಂಬರಂ ಅವರು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸೆರೆಮನೆಯಿಂದ ಹೊರಕ್ಕೆ ಬರುವಂತಿಲ್ಲ. ಜಾರಿ ನಿರ್ದೇಶನಾಲಯವು (ಇಡಿ) ಕೂಡಾ ಐಎನ್‌ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಬಂಧಿಸಿ ತನ್ನ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದು, ಅಕ್ಟೋಬರ್ ೨೪ರವರೆಗೆ ತನ್ನ ವಶದಲ್ಲಿ ಇಟ್ಟುಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯವು ಅನುಮತಿ ನೀಡಿತ್ತು.

ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ದ್ವಿಸದಸ್ಯ ಸುಪ್ರೀಂಕೋರ್ಟ್ ಪೀಠವು ಮಾಜಿ ಗೃಹ ಹಾಗೂ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟಿನ ಸೆಪ್ಟೆಂಬರ್ ೩೦ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ, ಒಂದು ಲಕ್ಷ ರೂಪಾಯಿಗಳ ಜಾಮೀನು ಬಾಂಡ್ ಮತ್ತು ಎರಡು ಖಾತರಿಗಳನ್ನು ಒದಗಿಸುವಂತೆ ಚಿದಂಬರಂ ಅವರಿಗೆ ನಿರ್ದೇಶನ ನೀಡಿತು. ಅವರು ತಮ್ಮ ಪಾಸ್ ಪೋರ್ಟ್‌ನ್ನು ಇನ್ನೂ ನ್ಯಾಯಾಲಯಕ್ಕೆ ಒಪ್ಪಿಸಿಲ್ಲವಾದರೆ ಅದನ್ನು ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಸುಪ್ರೀಂಪೀಠವು ಸೂಚಿಸಿತು.

ಮಾಜಿ ಸಚಿವ ಚಿದಂಬರಂ ಅವರು ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ನೆಲೆಯಲ್ಲಿ ಜಾಮೀನು ನಿರಾಕರಿಸಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಪೀಠವು ಮೇಲ್ಮನವಿ ವಿಚಾರಣೆ ಬಳಿಕ ತಳ್ಳಿಹಾಕಿತು.

ಬೇರೆ ಯಾವುದೇ ಪ್ರಕರಣದಲ್ಲಿ ಬಂಧಿಸಿಲ್ಲವಾದರೆ ಚಿದಂಬರಂ ಅವರನ್ನು ಅಧಿಕಾರಿಗಳು ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿ ಆರ್. ಭಾನುಮತಿ ಹೇಳಿದರು.

ಪ್ರಸ್ತುತ ಜಾರಿ ನಿರ್ದೇಶನಾಲಯದ ವಶದಲ್ಲಿ ಇರುವ ಮಾಜಿ ಸಚಿವರನ್ನು ತನಿಖಾ ಸಂಸ್ಥೆಯು ಈ ತಿಂಗಳ ಆದಿಯಲ್ಲಿ, ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರ ಪ್ರಕರಣದ ಮೇಲ್ಮನವಿಯು ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರುವುದಕ್ಕೆ ಸ್ವಲ್ಪ ಮುನ್ನ ಬಂಧಿಸಿತ್ತು.

ಐಎನ್‌ಎಕ್ಸ್ ಮೀಡಿಯಾ ಸಮೂಹಕ್ಕೆ ೩೦೫ ಕೋಟಿ ರೂಪಾಯಿಗಳ ವಿದೇಶೀ ಹೂಡಿಕೆ ಪಡೆಯಲು ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯು (ಎಫ್‌ಐಪಿಬಿ) ನೀಡಿದ್ದ ಅನುಮತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಆ ಅವಧಿಯಲ್ಲಿ ಚಿದಂಬರಂ ಅವರು ವಿತ್ತ ಸಚಿವರಾಗಿದ್ದರು.

ಪಿ. ಚಿದಂಬರಂ ಅವರು ತಮ್ಮ ಕಚೇರಿಯಲ್ಲಿ ಐಎನ್‌ಎಕ್ಸ್ ಮೀಡಿಯಾದ ಸಹ ಸಂಸ್ಥಾಪಕರಾದ ಇಂದ್ರಾಣಿ ಮುಖರ್ಜಿಯಾ ಮತ್ತು ಪ್ರತಿಮ್ (ಪೀಟರ್) ಮುಖರ್ಜಿಯಾ ಅವರನ್ನು ೨೦೦೭ರ ಏಪ್ರಿಲ್/ ಮೇ ಅವಧಿಯಲ್ಲಿ ಭೇಟಿ ಮಾಡಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್) ಆಪಾದಿಸಿದೆ. ಈ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ’ಸಾಗರದಾಚೆಯ ಪಾವತಿಗೆ ಸಂಬಂಧಿಸಿದಂತೆ ಅಕ್ರಮ ಹಣ ಪಾವತಿ ಮಾಡುವಂತೆ (ಮತು)  ಮತ್ತು ತಮ್ಮ ಪುತ್ರನ ವ್ಯಾಪಾರ ಹಿತಾಸಕ್ತಿಗಳನ್ನು ನೋಡಿಕೊಳ್ಳುವಂತೆ ಅವರಿಗೆ ಸೂಚಿಸಿದರು’ ಎಂದು ಸಿಬಿಐ ಆಪಾದಿಸಿದೆ. ಚಿದಂಬರಂ ಅವರು ಈ ಆರೋಪವನ್ನು ತಳ್ಳಿಹಾಕಿ, ಇಂತಹ ಸಭೆ ನಡೆದೇ ಇಲ್ಲ ಎಂದು ನಿರಾಕರಿಸಿದ್ದರು.

ಸಿಬಿಐ ಆಕ್ಷೇಪಕ್ಕೆ ನಕಾರ: ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಿದ ತನ್ನ ಆದೇಶದಲ್ಲಿ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ದ್ವಿಸದಸ್ಯ ಪೀಠವು, ೭೪ರ ಹರೆಯದ ಕಾಂಗ್ರೆಸ್ ನಾಯಕ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಅಥವಾ ರಾಷ್ಟ್ರ ಬಿಟ್ಟು ವಿದೇಶಕ್ಕೆ ಹಾರಬಹುದು ಎಂಬುದಾಗಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಮುಂದಿಟ್ಟ ವಾದವನ್ನು ತಿರಸ್ಕರಿಸಿತು.

ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರ ಬಳಸಿದ ’ವಿದೇಶಕ್ಕೆ ಹಾರಬಹುದಾದ ಅಪಾಯ’ ಇಲ್ಲ ಎಂಬುದಾಗಿ ಹೇಳಿದ ನ್ಯಾಯಮೂರ್ತಿ ಆರ್. ಭಾನುಮತಿ ಅವರು ‘ವಿಧಿಸಲಾಗಿರುವ ಶರತ್ತುಗಳ ಹಿನ್ನೆಲೆಯಲ್ಲಿ ಅವರು ’ತನಿಖೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಇಲ್ಲ’ ಎಂದು ಹೇಳಿದರು.

ಮೇಲ್ಮನವಿದಾರರು ತಮ್ಮ ಪಾಸ್ ಪೋರ್ಟನ್ನು ಒಪ್ಪಿಸಿರುವಾಗ ಮತ್ತು ಅವರ ವಿರುದ್ಧ ’ಲುಕ್ ಔಟ್ ನೋಟಿಸ್’ ಜಾರಿಯಾಗಿರುವಾಗ  ಅವರು ವಿದೇಶಕ್ಕೆ ಪರಾರಿಯಾಗುವ ಅಪಾಯ ಇಲ್ಲ ಎಂಬುದಾಗಿ ಮೇಲ್ಮನವಿದಾರರ ಪರವಾಗಿ ಹಾಜರಾದ ಹಿರಿಯ ವಕೀಲರು ಸಲ್ಲಿಸಿದ ಅಹವಾಲಿನಲ್ಲಿ ಅರ್ಹತೆ ಇದೆ ಎಂಬುದನ್ನು ನಾವು ಗಮನಿಸಿದ್ದೇವೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿತು.

ಕೆಲವು ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿಯಾಗಿರುವ ಹಿನ್ನೆಲೆಯಲ್ಲಿ, ಆರ್ಥಿಕ ಅಪರಾಧಿಗಳು ’ಪರಾರಿಯಾಗುವ ಸಾಧ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ಅಂತಹವರ ಜೊತೆಗೆ ವ್ಯವಹರಿಸಬೇಕಾಗುತ್ತದೆಎಂಬ ತುಷಾರ ಮೆಹ್ತ ಅವರ ವಾದವನ್ನು ಅಂಗೀಕರಿಸಲು ತನಗೆ ಸಾಧ್ಯವಾಗುತ್ತಿಲ್ಲ’ ಎಂದು ನ್ಯಾಯಾಲಯ ಹೇಳಿತು.

ಹಿರಿಯ ವಕೀಲರು ಹಾಗೂ ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ಆರ್ಶದೀಪ್ ಸಿಂಗ್ ಜೊತೆಗೆ ಚಿದಂಬರಂ ಅವರನ್ನು ಪ್ರತಿನಿಧಿಸಿದ್ದರು.

ಸಿಬಿಐ ದಾಖಲಿಸಿರುವ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲಿ ತಮ್ಮ ತಂದೆಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದಕ್ಕೆ ಪ್ರತಿಕ್ರಿಯಿಸಿರುವ ಕಾರ್ತಿ ಚಿದಂಬರಂ ಅವರು ಲ್ಯಾಟಿನ್ ಭಾಷೆಯಲ್ಲಿ ’ವೆರಿಟಾಸ್ ವಲೆಬಿಟ್, ಎಟಸಿ ಲೆಂಟೆ’ ಅಂದರೆ ’ತಡವಾಗಿಯಾದರೂ ಸತ್ಯವು ಜಯಿಸುತ್ತದೆ’ ಟ್ವೀಟ್ ಮಾಡಿದರು.

ಸುಮಾರು ೨೫ ಮಂದಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಮಾಜಿ ಗೃಹ ಹಾಗೂ ವಿತ್ತ ಸಚಿವರನ್ನು ಬಂಧನದಲ್ಲಿಯೇ ಇರಿಸಿಕೊಳ್ಳಬೇಕಾದ ಅಗತ್ಯ ಇದೆ ಎಂಬ ಸಿಬಿಐ ವಾದವನ್ನು ಕೂಡಾ ಸುಪ್ರೀಂಕೋರ್ಟ್ ತಿರಸ್ಕರಿಸಿತು. ಇದು ಸಿಬಿಐ ಮುಂದಿಟ್ಟಿರುವ ಕೊನೆ ಕ್ಷಣದ ವಾದ ಎಂದು ನ್ಯಾಯಮೂರ್ತಿ ತಮ್ಮ ತೀರ್ಪಿನಲ್ಲಿ ಬಣ್ಣಿಸಿದರು.

‘ಸಿಬಿಐ ನ್ಯಾಯಾಲಯಗಳಲ್ಲಿ ಆರು ರಿಮಾಂಡ್ ಅರ್ಜಿಗಳನ್ನು ಸಲ್ಲಿಸಿದೆ, ಆದರೆ ಯಾವುದರಲ್ಲೂ ಚಿದಂಬರಂ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಸೊಲ್ಲು ಕೂಡಾ ಇಲ್ಲ’ ಎಂದು ಸುಪ್ರೀಂಕೋರ್ಟ್ ಬೊಟ್ಟು ಮಾಡಿತು.

ಚಿದಂಬರಂ ಅವರ ಜಾಮೀನು ಕೋರಿಕೆ ಅರ್ಜಿಯನ್ನು ಸೆಪ್ಟೆಂಬರ್ ೩೦ರಂದು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಕಾಂಗ್ರೆಸ್ ನಾಯಕ ದೇಶದಿಂದ ಪರಾರಿಯಾಗಬಹುದು ಎಂಬ ವಾದವನ್ನು ತಿರಸ್ಕರಿಸಿತ್ತು. ಆದರೆ ಚಿದಂಬರಂ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬ ವಾದವನ್ನು ಎತ್ತಿ ಹಿಡಿದಿತ್ತು.

ಹೈಕೋರ್ಟ್ ತೀರ್ಪು ಆರೋಪಗಳ ಸ್ವರೂಪ ಮತ್ತು ಅರ್ಹತೆ ಬಗ್ಗೆ ಮುಖ್ಯವಾಗಿ ಗಮನ ಕೇಂದ್ರೀಕರಿಸಿದೆ, ಆದರೆ ಜಾಮೀನು ಮಂಜೂರು ಮಾಡಲು ಅಥವಾ ನಿರಾಕರಿಸಲು ಅನುಸರಿಸಬೇಕಾದ ತತ್ವಗಳನ್ನು ಗಮನದಲ್ಲಿ ಇಟ್ಟುಕೊಂಡಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

October 22, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Commerce, Finance, Flash News, General Knowledge, India, Nation, News, Politics, Spardha, supreme court | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ