SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಭ್ರಷ್ಟರನ್ನು ಮಟ್ಟಹಾಕಿದ್ದ ನ್ಯಾಯಮೂರ್ತಿ ಎನ್.ವೆಂಕಟಾಚಲ ನಿಧನ


30 justice n venkatachala
ಬೆಂಗಳೂರು
: ಭ್ರಷ್ಟರನ್ನು ಮಟ್ಟ ಹಾಕುವಲ್ಲಿ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಜನಪರವಾಗಿ ಬಳಸಿ, ‘ಲೋಕಾಯುಕ್ತರು ಹೀಗೂ ಕೆಲಸ ಮಾಡಬಹುದು’ ಎಂದು ಸಾಧಿಸಿ ತೋರಿಸಿದ್ದ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಅವರು 2019 ಅಕ್ಟೋಬರ್ 30ರ (90) ಬುಧವಾರ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಅಗಲಿದರು..

ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ನಂತರವೇ ಸರ್ಕಾರಿ ಅಧಿಕಾರಿಗಳಲ್ಲಿ ಲೋಕಾಯುಕ್ತ ಭಯವನ್ನು ಉಂಟು ಮಾಡಿತು. ಲೋಕಾಯುಕ್ತ ಸಂಸ್ಥೆಯಿಂದ ತಮ್ಮ ನೋವುಗಳಿಗೆ ಪರಿಹಾರ ಸಿಗುತ್ತದೆ ಎಂಬ ಭಾವನೆ ಜನರಲ್ಲಿಯೂ ಬಂದಿತ್ತು.

‘ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರ ಹಿಂಭಾಗದ  ಲಕ್ಷ್ಮಿ ದೇವಾಲಯದ ಬಳಿಯ ತಮ್ಮ ನಿವಾಸದಲ್ಲಿದ್ದ ಅವರಿಗೆ ಬೆಳಿಗ್ಗೆ 5.45ಕ್ಕೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಒಬ್ಬ ಪುತ್ರ ಮತ್ತು ಪುತ್ರಿ ಸದ್ಯ ಅಮೆರಿಕದಲ್ಲಿದ್ದು ಅವರು ಬಂದ ನಂತರ 2019 ಅಕ್ಟೋಬರ್ 31ರ ಗುರುವಾರ ಅಂತ್ಯಕ್ರಿಯೆ ‌ನಡೆಯಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿದವು.

ಹೆಂಡತಿ ಅನುಶ್ರೀಯಾ, ಪುತ್ರರಾದ ಶೇಷಾಚಲ, ವೇದಾಚಲ (ಇಬ್ಬರೂ ವಕೀಲರು) ಮತ್ತು ಅರ್ಜುನಾಚಲ (ಸಾಫ್ಟ್‌ವೇರ್ ಡೆವಲಪರ್) ಮತ್ತು ಮಗಳು ಅರುಣಾಚಲ (ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರು) ಇದ್ದಾರೆ. ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೊಮ್ಮಗ ವರುಣ್ ತಿಳಿಸಿದರು.

ಪರಿಚಯ: ನಂಜೇಗೌಡ ವೆಂಕಟಾಚಲ ಅವರು ಜುಲೈ 3, 1930ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮಿಟ್ಟೂರಿನ ಕೃಷಿ ಕುಟುಂಬದಲ್ಲಿ ಜನಿಸಿದರು‌.

ಮುಳಬಾಗಿಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪೂರೈಸಿದರು. ಕೋಲಾರದಲ್ಲಿ ಪ್ರೌಢಶಾಲೆ ಮತ್ತು ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಮತ್ತು ಕಾನೂನು ಪದವಿ ಪಡೆದರು.

ಸನ್ನದು: ಮೈಸೂರು (ಈಗ ಕರ್ನಾಟಕ) ಹೈಕೋರ್ಟಿನಲ್ಲಿ ನವೆಂಬರ್ 16, 1965ರಂದು ವಕೀಲರಾಗಿ ಸನ್ನದು ನೋಂದಣಿ ಮಾಡಿಸಿದರು.

ವೃತ್ತಿ ಜೀವನ: ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಸಿವಿಲ್, ಕ್ರಿಮಿನಲ್ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಹೆಚ್ಚಿನ ಪರಿಣತಿ ಪಡೆದುಕೊಂಡರು. 1963ರಿಂದ 1973ರವರೆಗೆ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿದ್ದರು‌. 1973ರಿಂದ 1977ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸಲಹೆಗಾರರೂ ಆಗಿದ್ದರು.

ಹೈಕೋರ್ಟ್ ನ್ಯಾಯಮೂರ್ತಿ: ನವೆಂಬರ್ 28, 1977ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 1992ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಸುಪ್ರೀಂಕೋರ್ಟ್‌ಗೆ ಪದೋನ್ನತಿ: ಜುಲೈ 1, 1992ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿ, ಜುಲೈ 2, 1995ರಂದು ನಿವೃತ್ತರಾದರು.

ಕರ್ನಾಟಕ ಲೋಕಾಯುಕ್ತ: ಜುಲೈ 2, 2001ರಂದು ಕರ್ನಾಟಕ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಅವರು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಈ ಕಾರಣಕ್ಕಾಗಿಯೇ ಜನಮಾನಸದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದರು. ಇವರ ಕಾರ್ಯಶೈಲಿಯ ಕುರಿತಂತೆ ‘ಲಂಚ ಸಾಮ್ರಾಜ್ಯ’ ಎಂಬ ಚಲನಚಿತ್ರವನ್ನೂ ನಿರ್ಮಿಸಲಾಗಿತ್ತು.

‘ಬ್ರಿಟನ್‌ನಲ್ಲಿ ಅನುಸರಿಸುತ್ತಿರುವ ಭ್ರಷ್ಟಾಚಾರ ತಡೆ ಕಾನೂನನ್ನು ಭಾರತದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ಮಾತ್ರ ಪ್ರಧಾನಿ ಕಚೇರಿಯಿಂದ ಹಿಡಿದು ಕೆಳಹಂತದವರೆಗಿನ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸಾಧ್ಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಆಗಾಗ ಹೇಳುತ್ತಿದ್ದರು.

`ಬ್ರಿಟನ್‌ನಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗುವ ಪ್ರಧಾನಿಯನ್ನೂ ಸ್ವತಂತ್ರ ತನಿಖಾ ಸಂಸ್ಥೆಗಳು ತನಿಖೆಗೊಳಪಡಿಸಲು ಅವಕಾಶವಿದೆ. ಅಲ್ಲದೆ, ಪ್ರತ್ಯೇಕ ನ್ಯಾಯಾಲಯಗಳು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸುತ್ತವೆ. ಇದರಿಂದ ಯಾರ ವಿರುದ್ಧವೇ ಆಗಲಿ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಈ ಕಾನೂನಿನ ಪ್ರಕಾರ ಲಂಚ ಸ್ವೀಕಾರಕ್ಕೆ ಪ್ರಚೋದಿಸುವುದು, ಆಹ್ವಾನಿಸುವುದು ಹಾಗೂ ಲಂಚ ಸ್ವೀಕರಿಸುವುದು ಕೂಡ ಅಪರಾಧ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ತಡೆಗೆ ಇಂತಹ ಕಾನೂನು ಸಹಕಾರಿಯಾಗಲಿದೆ’ ಎಂಬುದು ಅವರ ನಿಲುವಾಗಿತ್ತು.

October 30, 2019 - Posted by | ಕರ್ನಾಟಕ, ಬೆಂಗಳೂರು, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, Spardha |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ