SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆ ದುರ್ಬಲಗೊಳಿಸಿದ್ದ ತೀರ್ಪು ರದ್ದು ಪಡಿಸಿದ ಸುಪ್ರೀಂ


01 sc st act supreme court
ನವದೆಹಲಿ
: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯ ವಿಧಿಗಳನ್ನು ವಸ್ತುಶಃ ದುರ್ಬಲಗೊಳಿಸಿದ್ದ ೨೦೧೮ ಮಾರ್ಚ್ ೨೦ರ ತನ್ನ ಆದೇಶವನ್ನು ಸುಪ್ರೀಂಕೋರ್ಟ್ 2019 ಅಕ್ಟೋಬರ್ 01ರ ಮಂಗಳವಾರ ಹಿಂತೆಗೆದುಕೊಂಡಿತು.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಂಆರ್ ಶಾ ಮತ್ತು ಬಿಆರ್ ಗವಾಯಿ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಹೋರಾಟ ರಾಷ್ಟ್ರದಲ್ಲಿ ಇನ್ನೂ ಮುಗಿದಿಲ್ಲ ಎಂದು ಹೇಳಿತು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜನರು ಈಗಲೂ ಅಸ್ಪೃಶ್ಯತೆ, ದೂಷಣೆ ಹಾಗೂ ಸಾಮಾಜಿಕ ಬಹಿಷ್ಕಾರದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪೀಠವು ಅಭಿಪ್ರಾಯಪಟ್ಟಿತು.

ಸಂವಿಧಾನವು ೧೫ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರಿಗೆ ರಕ್ಷಣೆಯನ್ನು ಒದಗಿಸುತ್ತದೆ. ಆದರೆ  ಸಾಮಾಜಿಕ ದೂಷಣೆ ಮತ್ತು ತಾರತಮ್ಯವನ್ನು ಅವರು ಇನ್ನೂ ಎದುರಿಸಬೇಕಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯ ದುರ್ಬಳಕೆ ಮತ್ತು  ತಪ್ಪು ಪ್ರಕರಣಗಳನ್ನು ಹೂಡುವ ಬಗ್ಗೆ ಪ್ರಸ್ತಾಪಿಸಿದ ಪೀಠವು ’ಇದು ಜಾತಿ ವ್ಯವಸ್ಥೆಯಿಂದ ಆದದ್ದಲ್ಲ, ಮಾನವ ವೈಫಲ್ಯದಿಂದ ಆದದ್ದು’ ಎಂದು ಹೇಳಿತು.

ಕಳೆದ ವರ್ಷ ಮಾರ್ಚ್ ೨೦ರಂದು ದ್ವಿಸದಸ್ಯ ಪೀಠವು ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಸೆಪ್ಟೆಂಬರ್ ೧೮ರ ವಿಚಾರಣೆ ಕಾಲದಲ್ಲಿ ಟೀಕಿಸಿ,  ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ತೀರ್ಪು ನೀಡಬಹುದೇ ಎಂದು ಪ್ರಶ್ನಿಸಿತ್ತು.

ಕಾನೂನಿನ ವಿಧಿಗಳಿಗೆ ಸಂಬಂಧಿಸಿದಂತೆ  ’ಸಮಾನತೆ ತರುವ ಸಲುವಾಗಿ’ ತಾನು ಕೆಲವು ನಿರ್ದೇಶನಗಳನ್ನು ನೀಡಬಹುದು ಎಂಬ ಇಂಗಿತ ವ್ಯಕ್ತ ಪಡಿಸಿದ್ದ ಪೀಠ, ’ಸ್ವಾತಂತ್ರ್ಯ ಲಭಿಸಿದ ೭೦ಕ್ಕೂ ಹೆಚ್ಚು ವರ್ಷಗಳ ಬಳಿಕವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರು ತಾರತಮ್ಯ ಮತ್ತು ಅಸ್ಪೃಶ್ಯತೆಗಳಿಗೆ ಗುರಿಯಾಗುತ್ತಿದ್ದಾರೆ’ ಎಂದು ಹೇಳಿತ್ತು.

ತೋಟಿಗಳ ಮೂಲಕ ಚರಂಡಿಗಳನ್ನು ಸ್ವಚ್ಛಗೊಳಿಸುವ ಸ್ಥಿತಿ ಮತ್ತು ಇಂತಹ ಕೆಲಸಗಳನ್ನು ಮಾಡುವಾಗ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜನರು ಸಾವನ್ನಪ್ಪುವ ಪರಿಸ್ಥಿತಿ ಬಗ್ಗೆ ಗಂಭೀರ ಅಭಿಪ್ರಾಯ ವ್ಯಕ್ತ ಪಡಿಸಿದ್ದ ಪೀಠ, ’ಜಗತ್ತಿನಲ್ಲಿ ಎಲ್ಲೂ ಜನರನ್ನು ’ಸಾಯಲು ಗ್ಯಾಸ್ ಚೇಂಬರುಗಳಿಗೆ’ ಕಳುಹಿಸುವ ಕ್ರಮ ಇಲ್ಲ’ ಎಂದು ಹೇಳಿತ್ತು.

‘ಇದು ಸಂವಿಧಾನದ ಆಶಯಕ್ಕೆ ವಿರುದ್ಧ. ಕೇವಲ ಕಾನೂನಿನ ದುರುಪಯೋಗವಾಗಿದೆ ಎಂಬ ಕಾರಣಕ್ಕೆ ಶಾಸನ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಆದೇಶ ನೀಡಬಹುದೇ? ಜಾತಿಯ ಆಧಾರದಲ್ಲಿ ನೀವು ಯಾರಾದರೂ ವ್ಯಕ್ತಿಯನ್ನು ಸಂಶಯಿಸಬಹುದೇ. ಸಾಮಾನ್ಯ ವರ್ಗದ ವ್ಯಕ್ತಿ ಕೂಡಾ ತಪ್ಪು ಎಫ್‌ಐಆರ್ ದಾಖಲಿಸಬಹುದು’ ಎಂದು ಪೀಠ ಹೇಳಿತ್ತು.

‘ಸ್ವಾತಂತ್ರ್ಯ ಲಭಿಸಿ ೭೦ಕ್ಕೂ ಹೆಚ್ಚು ವರ್ಷಗಳಾಗಿವೆ, ಆದರೂ ಸರ್ಕಾರಕ್ಕೆ ಪರಿಶಿಷ್ಟ ಜಾತಿ/ಪರಿಶಿಷ್ಟ ಜನರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅವರನ್ನು ಈಗಲೂ ತಾರತಮ್ಯ ಮತ್ತು ಅಸ್ಪೃಶ್ಯತೆಗೆ ಗುರಿಪಡಿಸಲಾಗುತ್ತಿದೆ’ ಎಂದು ಪೀಠವು ಕೇಂದ್ರದ ಪರವಾಗಿ ಹಾಜರಾಗಿದ್ದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ ಹೇಳಿತ್ತು.

ಆಪಾದನೆಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲು ಯೋಗ್ಯವೇ? ಅಥವಾ ಆರೋಪಗಳು ಸುಳ್ಳು ಹಾಗೂ ದುರುದ್ದೇಶಪೂರಿತವಾದವುಗಳೇ ಎಂಬುದಾಗಿ ಪರಿಶೀಲಿಸಲು ಡಿಎಸ್‌ಪಿ ಶ್ರೇಣಿಯ ಅಧಿಕಾರಿಯು ಪ್ರಾಥಮಿಕ ತನಿಖೆ ನಡೆಸಬಹುದು ಎಂಬುದಾಗಿ ೨೦೧೮ರಲ್ಲಿ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪನ್ನೂ ಪೀಠ ಟೀಕಿಸಿತ್ತು.

೨೦೧೮ರ ತೀರ್ಪು ಸಂವಿಧಾನಕ್ಕೆ ಪೂರಕವಾಗಿಲ್ಲ ಎಂದು ವೇಣುಗೋಪಾಲ್ ಅವರು ಹೇಳಿದ್ದರು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯಲ್ಲಿ ಇದ್ಧ ಬಂಧನ ಅವಕಾಶಕ್ಕೆ ಸಂಬಂಧಿಸಿದ ವಿಧಿಗಳನ್ನು ವಸ್ತುಶಃ ದುರ್ಬಲಗೊಳಿಸಿದ್ದ  ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ೧೩ ತಿಂಗಳುಗಳ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸೆಪ್ಟೆಂಬರ್ ೧೩ರಂದು ಪೀಠವು ಕೇಂದ್ರದ ಮನವಿ ಮೇರೆಗೆ ತ್ರಿಸದಸ್ಯ ಪೀಠಕ್ಕೆ ವಹಿಸಿತ್ತು.

ಸುಪ್ರೀಂಕೋರ್ಟ್ ೨೦೧೮ರ ಮಾರ್ಚ್ ೨೦ರಂದು ನೀಡಿದ್ದ ತೀರ್ಪು ದೇಶಾದ್ಯಂತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ವಿವಿಧ ಸಂಘಟನೆಗಳ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ತೀರ್ಪಿನ ಪರಿಣಾಮಗಳನ್ನು ತಟಸ್ಥಗೊಳಿಸಲು ಸರ್ಕಾರವು ಸಂಸತ್ತಿನಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ, ೨೦೧೮ನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕಾಗಿ ಬಂದಿತ್ತು.

ಸದರಿ ತೀರ್ಪಿನಲ್ಲಿ ದ್ವಿಸದಸ್ಯ ಪೀಠವು ಕಠಿಣವಾದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಕಾಯ್ದೆಯನ್ನು ಸರ್ಕಾರಿ ನೌಕರರು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಯದ್ವಾತದ್ವ ದುರುಪಯೋಗ ಮಾಡಲಾಗುತ್ತಿದ್ದುದನ್ನು ಉಲ್ಲೇಖಿಸಿತ್ತು ಮತ್ತು ಕಾನೂನಿನ ಅಡಿಯಲ್ಲಿ ದೂರು ದಾಖಲಾದ ತತ್ ಕ್ಷಣವೇ ಬಂಧಿಸಬೇಕಾಗಿಲ್ಲ ಎಂದು ಹೇಳಿತ್ತು.  ಹಲವಾರು ಸಂದರ್ಭಗಳಲ್ಲಿ ಮುಗ್ಧ ನಾಗರಿಕರನ್ನು ಆರೋಪಿಗಳಾಗಿ ಹೆಸರಿಸಲಾಗುತ್ತದೆ ಮತ್ತು ಸರ್ಕಾರಿ ನೌಕರರನ್ನು ತಮ್ಮ ಕರ್ತವ್ಯ ನಿರ್ವಹಿಸದಂತೆ ತಡೆಯಲಾಗುತ್ತದೆ. ಇದು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ರೂಪಿಸುವಾಗ ಎಂದಿಗೂ ಶಾಸನ ಸಭೆಯ ಉದ್ದೇಶವಾಗಿರಲಿಲ್ಲ ಎಂದು ಪೀಠ ಹೇಳಿತ್ತು.

ಮೇಲ್ನೋಟಕ್ಕೆ ಆರೋಪ ಸಾಬೀತಾಗುವಂತೆ ಇಲ್ಲದೇ ಇದ್ದಲ್ಲಿ, ಬಂಧನದ ವಿರುದ್ಧ ಜಾಮೀನು ನೀಡದೇ ಇರುವುದಕ್ಕೆ ಯಾವದೇ ನಿಷೇಧವೂ ಇಲ್ಲ ಎಂದು ಹೇಳಿದ್ದ ತೀರ್ಪು, ಈ ಹಿನ್ನೆಲೆಯಲ್ಲಿ ಆರೋಪದ ಸಾಚಾತನ ಬಗ್ಗೆ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲಿಸ್ ಶ್ರೇಣಿಯ ಅಧಿಕಾರಿಯ ಪ್ರಾಥಮಿಕ ತನಿಖೆ ಹಾಗೂ ಅನುಮೋದನೆಯ ಬಳಿಕ ಮಾತ್ರವೇ ಕಾಯ್ದೆಯ ಅಡಿಯಲ್ಲಿ ಆರೋಪಿಯನ್ನು ಬಂಧಿಸಬಹುದು ಎಂದು ಹೇಳಿತ್ತು.

October 1, 2019 - Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, News, Politics, Spardha, supreme court | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ