SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪಶ್ಚಿಮ ಬಂಗಾಳದಲ್ಲೂ ಎನ್.ಆರ್.ಸಿ. ಅನುಷ್ಠಾನ: ದೀದಿ ನಾಡಿನಲ್ಲಿ ಅಮಿತ್ ಶಾ ಘೋಷಣೆ


01 amit shah kolkata
ಕೋಲ್ಕತ:
ಅಸ್ಸಾಮಿನಲ್ಲಿ ಅನುಷ್ಠಾನಗೊಳಿಸಿರುವ ರೀತಿಯಲ್ಲೇ ಪಶ್ಚಿಮ ಬಂಗಾಳದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಜಾರಿ ಮಾಡಲಾಗುವುದು ಮತ್ತು ಪ್ರತಿಯೊಬ್ಬ ಅಕ್ರಮ ವಲಸಿಗನನ್ನೂ ದೇಶದಿಂದ ಹೊರಕ್ಕೆ ಅಟ್ಟಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು  2019 ಅಕ್ಟೋಬರ್ 01ರ ಮಂಗಳವಾರ  ಕೋಲ್ಕತದಲ್ಲಿ ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರಚಂಡ ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರಿದ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ಗೃಹಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಶ್ಚಿಮ ಬಂಗಾಳಕ್ಕೆ ಇದೇ ಮೊದಲ ಭೇಟಿ ನೀಡಿರುವ ಅಮಿತ್ ಶಾ, ಕೋಲ್ಕತದ ನೇತಾಜಿ ಕ್ರೀಡಾಂಗಣದಲ್ಲಿ ಎನ್‌ಆರ್‌ಸಿ ಜಾಗರಣ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.

ಪಶ್ಚಿಮಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪ್ರತಿಯೊಬ್ಬ ವಲಸಿಗರನ್ನು ಹೊರಹಾಕಲಾಗುವುದು ಎಂದು ಶಾ ಹೇಳಿದರು. ಆದರೆ ರಾಜ್ಯದಲ್ಲಿ ಎನ್.ಆರ್.ಸಿ.ಯನ್ನು ಜಾರಿಗೊಳಿಸುವ ಮೊದಲು ಹಿಂದೂ, ಸಿಖ್, ಜೈನ್ ಮತ್ತು ಬೌದ್ಧ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂಬ ಮಾಹಿತಿಯನ್ನೂ ಸಹ ಅಮಿತ್ ಶಾ ಇದೇ ಸಂದರ್ಭದಲ್ಲಿ ನೀಡಿದರು.

ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಎನ್.ಆರ್.ಸಿ. ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ, ಆದರೆ ಪ್ರತಿಯೊಬ್ಬ ಅಕ್ರಮ ವಲಸಿಗನನ್ನೂ ಈ ದೇಶದಿಂದ ಹೊರಹಾಕಲಾಗುವುದು ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತಿದ್ದೇನೆ ಎಂದು ಅಮಿತ್ ಶಾ ಘೋಷಿಸಿದರು.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರ್ಕಾರ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದ ಮಮತಾ ಬ್ಯಾನರ್ಜಿ ಅವರು ಅಕ್ರಮ ವಲಸಿಗರ ಗಡೀಪಾರಿಗೆ ಆಗ್ರಹಿಸಿದ್ದರು ಎಂಬ ವಿಚಾರವನ್ನು ಅಮಿತ್ ಶಾ ನೆನಪಿಸಿಕೊಂಡರು.

‘ನಾನಿವತ್ತು ನಿಮಗೆ ಭರವಸೆಯನ್ನು ನೀಡುತ್ತಿದ್ದೇನೆ, ಕೇಂದ್ರ ಸರ್ಕಾರ ನಿಮ್ಮನ್ನು ಈ ದೇಶದಿಂದ ಹೊರ ಹಾಕುವುದಿಲ್ಲ. ಈ ರೀತಿಯ ಯಾವುದೇ ಗಾಳಿಸುದ್ದಿಗಳನ್ನು ನಂಬಬೇಡಿ’ ಎಂದು ಅಮಿತ್ ಶಾ ಅವರು ಹಿಂದೂ, ಸಿಖ್, ಜೈನ್, ಬೌದ್ಧ ಹಾಗೂ ಕ್ರಿಶ್ಚಿಯನ್ ನಿರಾಶ್ರಿತರಿಗೆ ಅಭಯ ನೀಡಿದರು.

ಎನ್.ಆರ್.ಸಿ.ಯನ್ನು ಅಸ್ಸಾಮಿನಲ್ಲಿ ಜಾರಿಗೊಳಿಸಿದ ಬಳಿಕ ಕೇಂದ್ರ ಸರ್ಕಾರವು ಇದನ್ನು ಪಶ್ಚಿಮಬಂಗಾಳದ ಅಕ್ರಮ ವಲಸಿಗರ ವಿರುದ್ಧ ಬಳಸಲಿದೆ ಎಂಬ ಸುದ್ದಿಗಳಿಂದ ಪಶ್ಚಿಮ ಬಂಗಾಲದ ಜನರು ಗಾಬರಿಗೊಳಗಾಗಿದ್ದಾರೆ ಮತ್ತು ಈ ವಿಚಾರವಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರದ ನಡುವೆ ಕೆಲಸಮಯಗಳಿಂದ ತಿಕ್ಕಾಟ ನಡೆಯುತ್ತಲೇ ಇದೆ.

ಬಾಂಗ್ಲಾದೇಶದಿಂದ ಲಕ್ಷಾಂತರ ಜನರು ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಅಂದಾಜು ಇದೆ. ಇವರಲ್ಲಿ ಬಹುತೇಕರು ಅಸ್ಸಾಮ್ ಮತ್ತು ಪಶ್ಚಿಮ ಬಂಗಾಳದಲ್ಲಿ ನೆಲಸಿದ್ದಾರೆ. ದೇಶದ ವಿವಿಧೆಡೆಯೂ ಇವರು ಪಸರಿಸಿದ್ದಾರೆ. ಕರ್ನಾಟಕದಲ್ಲೂ ಇವರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಅಕ್ರಮ ಬಾಂಗ್ಲಾದೇಶೀ ವಲಸಿಗರು ದೇಶದ್ರೋಹಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆಂಬ ಆರೋಪಗಳೂ ಇವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶೀ ವಲಸಿಗರ ಸಮಸ್ಯೆಯು ಹಲವು ಕಡೆ ಚುನಾವಣಾ ಚರ್ಚೆಯ ವಿಷಯವಾಗಿದೆ.

October 1, 2019 - Posted by | ಪ್ರಧಾನಿ, ರಾಷ್ಟ್ರೀಯ, Flash News, General Knowledge, India, Nation, News, Prime Minister, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ