SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಚಿದಂಬರಂ ಬಂಧನ: ಜಾರಿ ನಿರ್ದೇಶನಾಲಯಕ್ಕೆ ಕೋರ್ಟ್ ಅಸ್ತು


15 Chidambaram
ಬಹಿರಂಗವಾಗಿ ಅಲ್ಲ, ತಿಹಾರ್ ಜೈಲಿನಲ್ಲಿ ಪ್ರಶ್ನಿಸಿ, ಬಳಿಕ ಬಂಧನಕ್ಕೆ ಒಪ್ಪಿಗೆ

ನವದೆಹಲಿ: ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ತಿಹಾರ್ ಸೆರೆಮನೆಯಲ್ಲಿ ಒಂದು ಸುತ್ತು ಪ್ರಶ್ನಿಸಿದ ಬಳಿಕ ಬೇಕಿದ್ದರೆ ಬಂಧಿಸಬಹುದು ಮತ್ತು ವಶಕ್ಕೆ ಪಡೆದುಕೊಳ್ಳಬಹುದು ಎಂದು ದೆಹಲಿಯ ವಿಶೇಷ ನ್ಯಾಯಾಲಯವು 2019 ಅಕ್ಟೋಬರ್ 15ರ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿತು.

ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆಗಸ್ಟ್ ೨೧ರಂದು ಸಿಬಿಐಯಿಂದ ಬಂಧಿತರಾಗಿದ್ದ ಚಿದಂಬರಂ ಅವರು ಈಗಾಗಲೇ ರಾಜಧಾನಿ ದೆಹಲಿಯ ತಿಹಾರ್ ಕೇಂದ್ರೀಯ ಸೆರೆಮನೆಯಲ್ಲಿ ೪೦ ದಿನಗಳನ್ನು ಕಳೆದಿದ್ದಾರೆ.

ಜಾರಿ ನಿರ್ದೇಶನಾಲಯವು  ಈದಿನ  ನ್ಯಾಯಾಲಯದಲ್ಲಿ ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಬಂಧಿಸಲು ಮತ್ತು ತನಿಖೆಗೆ ಗುರಿಪಡಿಸಲು ಅನುಮತಿ ನೀಡುವಂತೆ ಕೋರಿತು.

ವಿಶೇಷ ಸಿಬಿಐ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಜಾರಿ ನಿರ್ದೇಶನಾಲಯದ ಎರಡೂ ಬೇಡಿಕೆಯನ್ನು ಒಪ್ಪಿದರು, ಆದರೆ  ’ಉಲ್ಟಾ ರೂಪದಲ್ಲಿ’.

‘ಸಂಸ್ಥೆಯು ಮೊದಲು ಅವರನ್ನು ತನಿಖೆಗೆ ಗುರಿ ಪಡಿಸಬೇಕು. ಒಮ್ಮೆ ಪ್ರಶ್ನಿಸಿದ ಬಳಿಕ ಬೇಕಿದ್ದರೆ ಅವರನ್ನು ಬಂಧಿಸಬಹುದು’ ಎಂದು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ತತ್ ಕ್ಷಣವೇ ಚಿದಂಬರಂ ಅವರನ್ನು ತತ್ ಕ್ಷಣವೇ ನ್ಯಾಯಾಲಯ ಸಮುಚ್ಚಯದ  ಪಕ್ಕದ ಕೊಠಡಿಯಲ್ಲಿ ೨೦ ನಿಮಿಷಗಳ ಕಾಲ ಪ್ರಶ್ನಿಸಬಹುದು ಎಂಬ ಸಲಹೆ ಮುಂದಿಟ್ಟರು.

‘ಅಷ್ಟೊಂದು ತರಾತುರಿ ಏಕೆ?’ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಸಾಲಿಸಿಟರ್ ಜನರಲ್ ಅವರ ಮನವಿಯನ್ನು ದೃಢವಾಗಿ ತಳ್ಳಿಹಾಕಿದರು.

‘ಸಂಸ್ಥೆಯು ಆರೋಪಿಯ ಘನತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು, ಅವರ ಘನತೆಗೆ ಚ್ಯುತಿ ಉಂಟಾಗಬಾರಾದು. ಸಾರ್ವಜನಿಕರ ಎದುರಲ್ಲಿ ಬಂಧಿಸುವುದು ತರವಲ್ಲ’ ಎಂದು ಹೇಳಿದ ಕುಹರ್ ಅವರು ತಿಹಾರ್ ಸೆರೆಮನೆಯಲ್ಲಿ ಪ್ರಶ್ನಿಸಿ, ಬಳಿಕ ಅಗತ್ಯವಿದ್ದಲ್ಲಿ ಬಂಧಿಸಲು ಅನುಮತಿ ನೀಡಿದರು.

ಚಿದಂಬರಂ ಬಂಧನದ ಅಗತ್ಯ ಏನು ಎಂಬುದಾಗಿ ವಿವರಿಸುವಂತೆ ನ್ಯಾಯಾಲಯ  ನೀಡಿದ ಆದೇಶದ ಪ್ರಕಾರ, ನ್ಯಾಯಾಲಯಕ್ಕೆ ವಿವರಣೆ ನೀಡಿದ ಜಾರಿ ನಿರ್ದೇಶನಾಲಯವು ತನ್ನ ಅಧಿಕಾರಿಗಳು  2019 ಅಕ್ಟೋಬರ್ 16ರ ಬುಧವಾರ ತಿಹಾರ್ ಸೆರೆಮನೆಗೆ ಹೋಗಿ ಚಿದಂಬರಂ ಅವರನ್ನು ಪ್ರಶ್ನಿಸುವರು ಮತ್ತು  ಬಳಿಕ ಬಂಧಿಸುವರು ಎಂದು ತಿಳಿಸಿತು.

ಕೇಂದ್ರೀಯ ತನಿಖಾ ದಳವು (ಸಿಬಿಐ) ತನಿಖೆ ನಡೆಸುತ್ತಿರುವ ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ.

ಚಿದಂಬರಂ ಅವರನ್ನು ಬಂಧಿಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡುವಂತೆ ಕೋರಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು  ಅಗತ್ಯ ಬಿದ್ದಲ್ಲಿ ಚಿದಂಬರಂ ಅವರನ್ನು ವಶದಲ್ಲಿ ಇಟ್ಟುಕೊಂಡು ತನಿಖೆ ನಡೆಸಬಹುದೆಂದು ಸ್ವತಃ ಸುಪ್ರೀಂಕೋರ್ಟ್ ಉಲ್ಲೇಖಿಸಿದೆ ಎಂದು ಹೇಳಿದರು.

ಚಿದಂಬರಂ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅದನ್ನು ತೀವ್ರವಾಗಿ ವಿರೋಧಿಸಿದರು. ಸಿಬಿಐ ಈಗಾಗಲೇ ಅವರನ್ನು ವಶಕ್ಕೆ ಪಡೆದಿದೆ ಮತ್ತು ಅದೇ ಅಪರಾಧಕ್ಕಾಗಿ ಅವರನ್ನು ಬಂಧಿಸಲು ಜಾರಿ ನಿರ್ದೇಶನಾಲಯಕ್ಕೆ ಯಾವುದೇ ನೆಲೆಯೂ ಇಲ್ಲ ಎಂದು ಸಿಬಲ್ ವಾದಿಸಿದರು.

ಮೊದಲ ಮಾಹಿತಿ ವರದಿಯನ್ನು (ಎಫ್‌ಐಆರ್) ಸಿಬಿಐ ದಾಖಲಿಸಿದೆ ಮತ್ತು ಇಸಿಐಆರ್‌ನ್ನು ಜಾರಿ ನಿರ್ದೇಶನಾಲಯವು (ಇಡಿ)  ಅದೇ ಹಣದ ವಹಿವಾಟಿಗೆ ಸಂಬಂಧಿಸಿದಂತೆ ದಾಖಲಿಸಿದೆ. ಅಪರಾಧಗಳು ಬೇರೆಯಾಗಿದ್ದರೂ ವಹಿವಾಟು ಒಂದೇ ಆಗಿರುವವರೆಗೂ ೧೫ ದಿನಗಳಿಗಿಂತ ಹೆಚ್ಚು ರಿಮಾಂಡ್ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.

ಪಾವತಿ ಮತ್ತು ವಿದೇಶೀ ಕಂಪೆನಿಗಳ ಬಗ್ಗೆ ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಈಗಾಗಲೇ ಕೋರಿದೆ. ಇದೇ ವಿಚಾರದಲಿ ಈಗ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇಡಿ) ಬಯಸುತ್ತಿದೆ ಎಂದು ಅವರು ವಾದಿಸಿದರು.

ಹಣ ವರ್ಗಾವಣೆ ಪ್ರತ್ಯೇಕ ಅಪರಾಧ ಎಂದು ಹೇಳಿದ ಮೆಹ್ತ ಚಿದಂಬರಂ ಅವರನ್ನು ಬಂಧಿಸಲು ಮತ್ತು ವಶಕ್ಕೆ ಪಡೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು.

ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಅವರು ಸ್ಥಾಪಿಸಿದ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಗೆ ೨೦೦೭ರಲ್ಲಿ ೩೦೫ ಕೋಟಿ ರೂಪಾಯಿಗಳಷ್ಟು ವಿದೇಶೀ ಹಣ ಪಡೆಯಲು ವಿದೇಶೀ ಹೂಡಿಕೆ ಅಭಿವೃದ್ದಿ ಮಂಡಳಿಯ ಅನುಮತಿ ಪಡೆಯುವಲ್ಲಿ ಅಕ್ರಮಗಳು ನಡೆದಿವೆ ಎಂದು ಸಿಬಿಐ ಆಪಾದಿಸಿದೆ. ಆಗ ಚಿದಂಬರಂ ಅವರು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು.

ವಿತ್ತ ಸಚಿವರ ಪುತ್ರ ಕಾರ್ತಿ ಚಿದಂಬರಂ ಅವರು ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯ ಅನುಮೋದನೆ ಪಡೆಯುವಲ್ಲಿ ಸಹಕರಿಸಿದ್ದರು ಎಂಬುದು ಸಿಬಿಐ ಆರೋಪವಾಗಿತ್ತು.

ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಸಿಬಿಐ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರಿಗೆ ವಿಧಿಸಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿತ್ತು.

ಸಿಬಿಐ ದಾಖಲಿಸಿದ್ದ ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಚಿದಂಬರಂ ಅವರನ್ನು ಅಕ್ಟೋಬರ್ ೧೭ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ವಿಶೇಷ ನ್ಯಾಯಾಲಯವು ಅಕ್ಟೋಬರ್ ೩ರಂದು ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೧೭ರವರೆಗೆ ವಿಸ್ತರಿಸಿತ್ತು.

೭೪ರ ಹರೆಯದ ಕಾಂಗ್ರೆಸ್ ನಾಯಕ ಸಿಬಿಐ ತನ್ನ ತನಿಖೆಯನ್ನು ಮುಗಿಸಿದ ಬಳಿಕ ಸೆಪ್ಟೆಂಬರ್ ೫ರಿಂದ ತಿಹಾರ್ ಸೆರೆಮನೆಯಲ್ಲಿದ್ದಾರೆ. ಆಗಸ್ಟ್ ೨೧ರಂದು ಅವರನ್ನು ಮೊತ್ತ ಮೊದಲಿಗೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

October 15, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, Commerce, Finance, Flash News, General Knowledge, India, Nation, News, Politics, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ