SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಡಿಕೆಶಿಗೆ ಸದ್ಯಕ್ಕಿಲ್ಲ ಜಾಮೀನು, ದೆಹಲಿ ಹೈಕೋರ್ಟ್ ವಿಚಾರಣೆ ಅ.೧೭ಕ್ಕೆ ಮುಂದೂಡಿಕೆ


15 dk shivakumar
ಅ.೨೫ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದ ವಿಶೇಷ ನ್ಯಾಯಾಲಯ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಿಹಾರ್ ಸೆರೆಮನೆಯಲ್ಲಿ ಇರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್  ಅವರು ಜಾಮೀನು ಕೋರಿ ದೆಹಲಿ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಅಕ್ಟೋಬರ್ ೧೭ಕ್ಕೆ ಮುಂದೂಡಿಕೆಯಾಗಿದ್ದು, ವಿಶೇಷ ಜಾರಿ ನಿರ್ದೇಶನಾಲಯ ನ್ಯಾಯಾಲಯವೂ ಶಿವಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೨೫ರವರೆಗೆ ವಿಸ್ತರಿಸಿದೆ.

ಹೀಗಾಗಿ ಡಿಕೆ ಶಿವಕುಮಾರ್ ಅವರಿಗೆ 2019 ಅಕ್ಟೋಬರ್ 15ರ ಮಂಗಳವಾರವೂ ನ್ಯಾಯಾಲಯಗಳಲ್ಲಿ ಯಾವುದೇ ನಿರಾಳತೆ ಲಭಿಸಲಿಲ್ಲ.

ದೆಹಲಿ ಹೈಕೋರ್ಟಿನಲ್ಲಿ ಮಂಗಳವಾರ ಜಾಮೀನು ಕೋರಿಕೆ  ಅರ್ಜಿಗೆ ಸಂಬಂಧಿಸಿದಂತೆ ಶಿವಕುಮಾರ್ ಪರ ವಕೀಲರ ವಾದ ಮಂಡನೆ ಮುಕ್ತಾಯಗೊಂಡಿದ್ದು, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ ೧೭ಕ್ಕೆ ಮುಂದೂಡಿತು.

ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಲಯವು ಡಿಕೆಶಿ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೨೫ರವರೆಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರಕರಣ ತೀವ್ರ ಕುತೂಹಲ ಕೆರಳಿಸಿತ್ತು.

ದೆಹಲಿ ಹೈಕೋರ್ಟಿನಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆ ವೇಳೆ ಕಾಂಗ್ರೆಸ್ ನಾಯಕನ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ’ಡಿಕೆ ಶಿವಕುಮಾರ್ ೭ ಬಾರಿ ಶಾಸಕರಾಗಿದ್ದವರು. ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಅವರನ್ನು ಬಂಧಿಸುವುದಕ್ಕೂ ಮುನ್ನ ೪ ದಿನಗಳ ಕಾಲ ೩೫ ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿದೆ. ಬಳಿಕ ೪೫ ದಿನಗಳ ಕಾಲ ಕಸ್ಟಡಿಯಲ್ಲಿ ಇಡಲಾಗಿದೆ. ಇದು ಬಂಧಿಸುವಂತಹ ಪ್ರಕರಣವೇ ಅಲ್ಲ’ ಎಂದು ವಾದ ಮಂಡಿಸಿದರು.

ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ ಶಿವಕುಮಾರ್ ಅವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿತ್ತು ಎಂದೂ ಅವರು ವಾದಿಸಿದರು.

ಆದಾಯ ತೆರಿಗೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ೧೨೦ಬಿ ಶೆಡ್ಯೂಲಿನ ಅಡಿಯಲ್ಲಿ ಪ್ರಕರಣ ದಾಖಲಿಸಲು ಬರುವುದಿಲ್ಲ. ಆದಾಯ ತೆರಿಗೆ (ಐಟಿ) ಕಾಯ್ದೆಯಡಿಯಲ್ಲೂ ಅನವಶ್ಯಕವಾಗಿ ವಶಕ್ಕೆ ತೆಗೆದುಕೊಳ್ಳುವಂತಿಲ್ಲ’ ಎಂದು ಅಭಿಷೇಕ್ ಮನು ಸಿಂಘ್ವಿ ದೆಹಲಿ ಹೈಕೋರ್ಟಿನಲ್ಲಿ ವಾದ ಮಂಡಿಸಿದರು.

ದೆಹಲಿ ಹೈಕೋರ್ಟಿನಲ್ಲಿ ಮಧ್ಯಾಹ್ನ ೩.೩೦ಕ್ಕೆ ಆರಂಭವಾಗಬೇಕಿದ್ದ ಅರ್ಜಿಯ ವಿಚಾರಣೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರ್ಟಿಗೆ ಹಾಜರಾಗದ ಹಿನ್ನೆಲೆಯಲ್ಲಿ ಕೆಲ ಕಾಲ ಮುಂದೂಡಿಕೆಯಾಗಿತ್ತು. ಬಳಿಕ ಕಾಂಗ್ರೆಸ್ ನಾಯಕನ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಬದಲಿಗೆ ಕೆಲ ಕಾಲ ಸಿದ್ಧಾರ್ಥ ಲೂತ್ರ ವಾದ ಮಂಡಿಸಿದರು. ಸೋಮವಾರವೇ ನಡೆಯಬೇಕಿದ್ದ ಜಾಮೀನು ಅರ್ಜಿ ವಿಚಾರಣೆ ಸಹ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ಮುಂದೂಡಿಕೆಯಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ನ್ಯಾಯಾಲಯಕ್ಕೆ ಆಗಮಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಶಿವಕುಮಾರ್ ಪರ ವಾದ ಮಂಡಿಸಿದರು.

ಜಾಮೀನು ಅರ್ಜಿ ವಿಚಾರಣೆಯನ್ನು ನಾಲ್ಕು ದಿನ ಮುಂದೂಡುವಂತೆ 2019 ಅಕ್ಟೋಬರ್ 14ರ ಸೋಮವಾರ ಶಿವಕುಮಾರ್ ಪರ ವಕೀಲರು ಮಾಡಿಕೊಂಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಯವರು ಕೇವಲ ಒಂದು ದಿನ ಮಾತ್ರ ಮುಂದೂಡಿ, ಮಂಗಳವಾರವೇ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಬೇಕು ಮತ್ತು ಗುರುವಾರ ಮತ್ತು ಶುಕ್ರವಾರ ಇ.ಡಿ ಪರ ವಕೀಲರು ವಾದ ಮಂಡಿಸಬೇಕು ಎಂದು ನಿರ್ದೇಶಿಸಿದ್ದರು.

ನ್ಯಾಯಾಂಗ ಬಂಧನ ವಿಸ್ತರಣೆ: ಈ ಮಧ್ಯೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಮಂಗಳವಾರ ವಿಶೇಷ ನ್ಯಾಯಾಲಯವು ಅಕ್ಟೋಬರ್ ೨೫ರವರೆಗೆ ವಿಸ್ತರಿಸಿತು.

ಡಿಕೆ ಶಿವಕುಮಾರ್ ನ್ಯಾಯಾಂಗ ಬಂಧನ ಮಂಗಳವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರೋಸ್ ಅವೆನ್ಯೂ ಕೋರ್ಟ್‌ಗೆ ಅವರನ್ನು ಹಾಜರುಪಡಿಸಿದ್ದರು.

ತಿಹಾರ್ ಜೈಲಿನ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಇ.ಡಿ. ಪರ ವಕೀಲರು ಮನವಿ ಮಾಡಿಕೊಂಡರು. ನ್ಯಾಯಾಧೀಶರು ಅಕ್ಟೋಬರ್ ೨೫ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ನೀಡಿದರು.

October 15, 2019 - Posted by | ಆರ್ಥಿಕ, ಕರ್ನಾಟಕ, ಭಾರತ, ರಾಜ್ಯ, ರಾಷ್ಟ್ರೀಯ, Commerce, Finance, Flash News, General Knowledge, India, Nation, News, Politics, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ