SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ: ಡಿಕೆಶಿ ಜಾಮೀನು ಅರ್ಜಿ, ಆದೇಶ ಕಾಯ್ದಿರಿಸಿದ ದೆಹಲಿ ಹೈಕೋರ್ಟ್


17 dk shivakumar
ನವದೆಹಲಿ
:  ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ರಾಜ್ಯದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ಕುರಿತ ಆದೇಶವನ್ನು ದೆಹಲಿ ಹೈಕೋರ್ಟ್  2019 ಅಕ್ಟೋಬರ್ 17ರ ಗುರುವಾರ ಕಾಯ್ದಿರಿಸಿತು.

ಉಭಯ ಕಡೆಯ ವಕೀಲರಿಂದ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ಅವರು ಜಾಮೀನು ಅರ್ಜಿ ಕುರಿತ ತೀರ್ಪನ್ನು ಕಾಯ್ದಿರಿಸಿದರು.

ಶಿವಕುಮಾರ್ ಅವರ ಜಾಮೀನು ಕೋರಿಕೆ ಅರ್ಜಿ ಮೇಲೆ ನಡೆದ ವಿಚಾರಣೆಯಲ್ಲಿ ಜಾರಿ ನಿರ್ದೇನಾಲಯದ (ಇಡಿ) ಪರವಾಗಿ ವಾದ ಮಂಡಿಸಿದ ವಕೀಲ ಕೆ.ಎಂ ನಟರಾಜ್ ಅವರು ಈ ಪ್ರಕರಣ ಗಂಭೀರವಾದುದಾಗಿದ್ದು, ಜಾಮೀನು ಸಿಕ್ಕಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಪ್ರಕರಣ ಗಂಭೀರವಾಗಿದೆ, ಶಿವಕುಮಾರ್ ಅವರು ಅಕ್ರಮ ಆಸ್ತಿ ಗಳಿಕೆಯಲ್ಲಿ ವಿಶ್ವದಾಖಲೆ ಮಾಡಿದ್ದಾರೆ ಎಂದು ವಾದ ಮಂಡಿಸಿದ ನಟರಾಜ್, ಪ್ರಕರಣದ ಹಲವು ಆಯಾಮಗಳ ಕುರಿತಾದ ವಿವರಗಳನ್ನು ನ್ಯಾಯಮೂರ್ತಿಗಳ ಮುಂದೆ ತೆರೆದಿಟ್ಟರು. ಇದು ದೇಶದ ಆರ್ಥಿಕತೆಗೆ ಹೊಡೆತ ನೀಡಿದ ಪ್ರಕರಣವಾಗಿದ್ದು ಇದರಲ್ಲಿ ಆಳವಾದ ಷಡ್ಯಂತ್ರ ನಡೆದಿದೆ ಎಂದು ಅವರು ಹೇಳಿದರು.

ಪಿಎಂಎಲ್‌ಎ ಪ್ರಕರಣದಲ್ಲಿ ಬಂಧಿತನಾಗಿದ್ದ ಹಸನ್ ಅಲಿ ಖಾನ್ ಪ್ರಕರಣವನ್ನು ಉಲ್ಲೇಖಿಸಿದ ಇಡಿ ಪರ ವಕೀಲರು ’ಪಿಎಂಎಎಲ್ ಕಾಯಿದೆಯಡಿಯಲ್ಲಿ ಹಸನ್ ಅಲಿಗೆ ಜಾಮೀನು ನಿರಾಕರಣೆ ಮಾಡಲಾಗಿದೆ. ಇದೇ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿರುವ ಪಿ. ಚಿದಂಬರಂ ಅವರಿಗೂ ಜಾಮೀನು ನಿರಾಕರಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರಿಗೂ ಜಾಮೀನು ನೀಡಬಾರದು’ ಎಂದು ಮನವಿ ಮಾಡಿದರು.

ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಡಿಕೆಶಿ ಬಳಿ ೩೦೦ ಕಡೆಗಳಲ್ಲಿ ಆಸ್ತಿ ಇರುವುದು ಪತ್ತೆಯಾಗಿದೆ. ಆದರೆ ಇದಕ್ಕೆ ಸೂಕ್ತವಾದ ದಾಖಲೆಗಳು ಇಲ್ಲ. ಕೃಷಿಯಿಂದ ಆಸ್ತಿ ಸಂಪಾದನೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಕೃಷಿಯಿಂದ ಇಷ್ಟು ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ವಕೀಲರು, ಕಳೆದ ೨೦ ವರ್ಷಗಳಲ್ಲಿ ಕೃಷಿಯಿಂದ ಗಳಿಕೆಯಾದ ಆದಾಯ ೧.೩೭ ಕೋಟಿ ಮಾತ್ರ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಶಿವಕುಮಾರ್  ಬಳಿ ಇರುವ ಕೋಟಿ ಕೋಟಿ ಹಣಕ್ಕೆ ದಾಖಲೆಗಳು ಇಲ್ಲ. ತನಿಖೆ ಸಂದರ್ಭದಲ್ಲಿ ಕೋಟಿ ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ . ದಾಳಿಯ ಸಂದರ್ಭದಲ್ಲಿ ಡಿಕೆಶಿ ಬಳಿ ನಿಷೇಧಿಸಲಾಗಿದ್ದ  ಹಾಗೂ ಹೊಸ ನೋಟುಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಹಣದ ವರ್ಗಾವಣೆ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದೆ. ಯಾವುದೇ ಮೂಲ ಇಲ್ಲದೆ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಹೇಳಿದ ವಕೀಲ ನಟರಾಜ್, ಸಾಕ್ಷಗಳನ್ನು ತಿರುಚುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ಕೋರಿದರು.

ಡಿಕೆ ಶಿವಕುಮಾರ್ ಪರವಾಗಿ ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ  ಅವರು ಜಾಮೀನು ನೀಡುವಂತೆ ಮನವಿ ಮಾಡಿದರು.

ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ಪೀಠದ ಮುಂದೆ ವಿಚಾರಣೆ ಆರಂಭವಾದಾಗ ಡಿಕೆ ಶಿವಕುಮಾರ್ ಪರ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಹಾಜರಿದ್ದರು. ಆದರೆ, ಇ.ಡಿ. ಪರ ವಕೀಲರಾದ ಕೆ.ಎಂ. ನಟರಾಜ್ ವಾದ ಮಂಡನೆಗೆ ಬಂದಿರಲಿಲ್ಲ. ಆಗ ಕಿರಿಯ ವಕೀಲರು, ನಮ್ಮ ಹಿರಿಯ ವಕೀಲರಾದ ಕೆ.ಎಂ. ನಟರಾಜ್, ಅಮಿತ್ ಮಹಾಜನ್ ಅವರು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ಇದ್ದಾರೆ. ಹೀಗಾಗಿ ಅವರು ಬಂದಿಲ್ಲ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.

ಇದರಿಂದ ಸಿಟ್ಟಾದ ನ್ಯಾಯಮೂರ್ತಿಗಳು, ನ್ಯಾಯಾಲಯವನ್ನು ನಿಮ್ಮಿಷ್ಟ ಬಂದಂತೆ ಪರಿಗಣಿಸಬೇಡಿ. ಈಗಾಗಲೇ ಸಾಕಷ್ಟು ಸಮಯ ಕೊಟ್ಟಿದ್ದೇವೆ. ಹೇಳಿದ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಿಲ್ಲ ಎಂದರೆ ಹೇಗೆ. ಕೋರ್ಟ್ ಜೊತೆ ಆಟ ಆಡಬೇಡಿ. ೩.೩೦ಕ್ಕೆ ಸಮಯ ನಿಗದಿ ಮಾಡಿದ್ದರೂ ಏಕೆ ಬರಲಿಲ್ಲ? ಎಂದು ತರಾಟೆಗೆ ತೆಗೆದುಕೊಂಡು, ಎರಡು ದಿನದಲ್ಲಿ ಲಿಖಿತ ರೂಪದಲ್ಲಿ ವಾದ ಸಲ್ಲಿಸಲು ಇ.ಡಿ.ಗೆ ನೋಟಿಸ್ ನೀಡಿ, ತೀರ್ಪನ್ನು ಕಾಯ್ದಿರಿಸಿದರು.

ಇದಾದ ಬಳಿಕ  ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಪರ ವಕೀಲ ನಟರಾಜ್ ಆಗಮಿಸಿದರು. ವಾದ ಮಂಡನೆ ಮಾಡುವುದಾಗಿ ನ್ಯಾಯಮೂರ್ತಿಗೆ ನ್ಯಾಯಾಲಯ ಸಿಬ್ಬಂದಿ ಮೂಲಕ ಹೇಳಿಕಳುಹಿಸಿದರು. ಆಗ ಉಭಯ ಕಡೆಯ ವಕೀಲರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಮಾತನಾಡಿದ ನ್ಯಾಯಮೂರ್ತಿಯವರು ಮತ್ತೆ ವಿಚಾರಣೆ ಮುಂದುವರೆಸಲು ಒಪ್ಪಿಗೆ ಸೂಚಿಸಿದರು.

ವಿಚಾರಣೆ ಆರಂಭವಾದಾಗ ನಟರಾಜ್ ಅವರು ನ್ಯಾಯಾಲಯ ಮತ್ತು ಪ್ರತಿವಾದಿಯ ಕ್ಷಮೆ ಕೇಳಿ, ವಾದ ಮಂಡನೆ ಆರಂಭಿಸಿದರು.

ಆದಾಯ ತೆರಿಗೆ ಇಲಾಖೆ ನೀಡಿದ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ವಿಚಾರಣೆ ಮಾಡುತ್ತಿದೆ. ಡಿಕೆಶಿ ಅವರಿಗೆ ಸೇರಿದ ೮.೫೯ ಕೋಟಿ ರೂ. ಸಿಕ್ಕಿದೆ. ದೆಹಲಿಯ ೩ ಜಾಗದಲ್ಲಿ ೮.೫೯ ಕೋಟಿ ಸಿಕ್ಕಿದೆ. ಈ ಹಣದ ಬಗ್ಗೆ ಡಿಕೆಶಿ ಬಳಿ ಮಾಹಿತಿ ಇಲ್ಲ. ಐಟಿ ದೂರಿನ ಮೇಲೆ ಇಡಿ ತನಿಖೆ ಮಾಡುತ್ತಿದೆ ಎಂದು ಹೇಳಿದರು.

ಹಣ ಸಿಕ್ಕಿದ ಬಗ್ಗೆ ತನಿಖಾಧಿಕಾರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಶಿವಕುಮಾರ್ ಅವರು ಈ ಬಗ್ಗೆ ಸಮರ್ಪಕ ಉತ್ತರ ನೀಡಿಲ್ಲ. ಈ ಹಣ ಫ್ಲಾಟ್ ಮಾಲೀಕ ಶರ್ಮಾರದ್ದಾ? ಡಿಕೆಶಿ ಅವರಿಗೆ ಸೇರಿದ್ದಾ? ಎಂಬುದನ್ನು ತಿಳಿಯಬೇಕಾಗಿದೆ. ಇದು ತೆರಿಗೆ ವಂಚನೆ ಪ್ರಕರಣ ಮಾತ್ರವಲ್ಲ. ಸಚಿವರಾಗಿದ್ದರಿಂದ ಬೇರೇನೋ ನಡೆದಿರಬೇಕು. ೧೯೮೯ರಿಂದಲೇ ಶಾಸಕರಾಗಿರುವ ಶಿವಕುಮಾರ್ ಅವರು ಏನಾದರೂ ವ್ಯವಹಾರ ಮಾಡಿರಬೇಕು ಎಂದು ಕೆ.ಎಂ.ನಟರಾಜ್ ವಾದಿಸಿದರು.

ಈವರೆಗೆ ೧೨ ಮಂದಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಲಾಗಿದೆ. ಯಾರನ್ನೂ ಆರೋಪಿ ಅಂತ ಮಾಡಿಲ್ಲ. ಡಿಕೆ ಶಿವಕುಮಾರ್ ಹೇಳಿಕೆ ದಾಖಲಿಸಿಕೊಂಡ ಬಳಿಕವೇ ಬಂಧನ ಮಾಡಲಾಗಿದೆ. ೧೨ ಅಲ್ಲ ೧೪ ಜನರಿಗೆ ಸಮನ್ಸ್ ನೀಡಿ ವಿಚಾರಣೆ ಮಾಡುತ್ತಿದ್ದೇವೆ. ಡಿಕೆಶಿ, ಆಪ್ತರ ೩೧೭ ಬ್ಯಾಂಕ್ ಖಾತೆಗಳಿವೆ. ಅಷ್ಟೂ ಖಾತೆಗಳಿಂದ ಹಣ ವರ್ಗಾವಣೆ ಆಗಿದೆ. ಇದು ಅಕ್ರಮ ಹಣ ವರ್ಗಾವಣೆ ಎಂದು ನಟರಾಜ್ ವಿವರಿಸಿದರು.

ಶಿವಕುಮಾರ್ ಅವರು ಕೆಲವು ಆಸ್ತಿಗಳನ್ನು ಹೊಂದಿದ್ದಾರೆ. ಶಿವಕುಮಾರ್ ೨೪, ಸುರೇಶ್ ೨೭, ತಾಯಿ ಬಳಿ ೩೮ ಆಸ್ತಿ ಇದೆ. ಎಲ್ಲಕ್ಕೂ ಕೃಷಿಯೇ ಆದಾಯದ ಮೂಲ ಅಂತಿದ್ದಾರೆ. ಸುರೇಶ್ ಅವರು ಆಯೋಗದ ಮುಂದೆಯೂ ಘೋಷಿಸಿಕೊಂಡಿದ್ದಾರೆ. ಗೌರಮ್ಮ ಅವರಿಗೆ ೩೮ ಆಸ್ತಿ ಹೇಗೆ ಬಂತೆಂದೇ ಗೊತ್ತಿಲ್ಲ. ಶಿವಕುಮಾರ್ ಕೂಡ ೨೪ ಆಸ್ತಿ ಬಗ್ಗೆ ಘೋಷಿಸಿದ್ದಾರೆ. ಆಯೋಗ, ಐಟಿಯಲ್ಲಿ ಘೋಷಿಸಿಕೊಂಡಿದ್ದಾರೆ. ತಂದೆಯಿಂದ ಆಸ್ತಿ ಬಂತು ಎನ್ನುತ್ತಿದ್ದಾರೆ. ಆದರೆ ಅದಕ್ಕೆ ಯಾವುದೇ ಪುರಾವೆಗಳಿಲ್ಲ. ವಿಷಯ ಇರುವುದು ’ಆದಾಯದ ಮೂಲ’ದಲ್ಲಿ. ಬಹುತೇಕ ಆಸ್ತಿ ಹಣ ಕೊಟ್ಟು ಖರೀದಿಸಿದ್ದಾರೆ. ಡಿಕೆಶಿ ಮಗಳು ಈಗಷ್ಟೇ ಪದವಿ ಮುಗಿಸಿದ್ದಾರೆ. ಆಕೆ ಹೆಸರಿನಲ್ಲಿ ೧೦೮ ಕೋಟಿ ಇದೆ. ಅದರಲ್ಲಿ ಆಕೆಗೆ ೮೦ ಕೋಟಿ ಸಾಲ ಇದೆ. ೪೦ ಕೋಟಿ ರೂ. ಬ್ಯಾಂಕ್ ಸಾಲ ಇದೆ. ೪೦ ಕೋಟಿ ಅನಾಮಿಕ ಮೂಲದಿಂದ ಸಾಲ ಎನ್ನಲಾಗಿದೆ. ಸಾಲ ಕೊಟ್ಟವರ ಬಗ್ಗೆ ಮಾಹಿತಿಯೇ ಇಲ್ಲ. ಅವರ ಹೆಸರುಗಳು ಗೊತ್ತಿಲ್ಲ  ಎಂದು  ನಟರಾಜ್ ಹೇಳಿದರು.

ಒಟ್ಟು ಆ ಕುಟುಂಬದಲ್ಲಿ ೩೦೦ ಆಸ್ತಿಗಳಿವೆ. ಮೊದಲು ಕೃಷಿ ಆದಾಯ ಎಂದು ಹೇಳಿದರು. ಆದರೆ ಬೇರೆ ಆಸ್ತಿಗಳು ಬಂದಿದ್ದು ಹೇಗೆ? ಇಷ್ಟು ಆದಾಯದಿಂದ ಇಷ್ಟು ಆಸ್ತಿ ಸಾಧ್ಯವಿಲ್ಲ ಎಂದು ಅವರು ನುಡಿದರು.

ಬಳಿಕ ಇಡಿ ಅಧಿಕಾರಿಗಳಾದ ಮೋನಿಕಾ ಶರ್ಮಾ ಮತ್ತು ಸೌರಬ್ ಮೆಹ್ತಾ ಅವರು ನ್ಯಾಯಮೂರ್ತಿಯವರಿಗೆ ಗೌಪ್ಯವಾಗಿ ಶಿವಕುಮಾರ್ ಅವರ ಒಟ್ಟಾರೆ ಆಸ್ತಿಗಳ ನಕ್ಷೆ ತೋರಿಸಿ, ಸುಮಾರು ೭ ನಿಮಿಷಗಳ ಕಾಲ ವಿವರಣೆ ನೀಡಿದರು.

ಬಳಿಕ ವಾದ ಆರಂಭಿಸಿದ ಸಿಂಘ್ವಿ, ಕರ್ನಾಟಕದಲ್ಲಿ ಶಾಸಕರ ಖರೀದಿ ನಡೆಯುತ್ತಿತ್ತು. ಡಿಕೆ ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಶಾಸಕರ ಖರೀದಿ ತಡೆದರು. ಪಕ್ಷದ ಪರವಾಗಿ ಬಂಡೆಯಂತೆ ನಿಂತಿದ್ದರು. ಹಾಗಾಗಿ ಡಿಕೆಶಿ ಮೇಲೆ ಆರೋಪ ಮಾಡಲಾಗುತ್ತಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಬರೆದವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ಕೆ.ಎಂ. ನಟರಾಜ್ ಕೂಡ ಇದನ್ನು ಒಪ್ಪುತ್ತಾರೆ. ಈ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಬರೆದ ಇಡಿ ಬಗ್ಗೆ ಸಿಂಘ್ವಿ ವ್ಯಂಗ್ಯ ಮಾಡಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಜಾಮೀನು ಅರ್ಜಿ ತೀರ್ಪನ್ನು ಕಾಯ್ದಿರಿಸಿದರು.

October 17, 2019 - Posted by | ಆರ್ಥಿಕ, ಕರ್ನಾಟಕ, ಭಾರತ, ರಾಜ್ಯ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Spardha |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ