SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಯೋಧ್ಯೆ ವಿವಾದ: ಸಂಧಾನದ ಮಾತು ನಿರಾಕರಿಸಿದ ಮುಸ್ಲಿಮ್ ಕಕ್ಷಿದಾರರು


Drama in SC, 'can't continue', CJI snaps at final Ayodhya hearing
ನವದೆಹಲಿ:
ಅಯೋಧ್ಯೆಯ ವಿವಾದಿತ ಭೂ ಪ್ರದೇಶದ ಒಡೆತನವನ್ನು ಹಿಂದೂ ಸಂಘಟನೆಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಹೊರತುಪಡಿಸಿ ಇತರ ಮುಸ್ಲಿಮ್  ಕಕ್ಷಿದಾರರು 2019 ಅಕ್ಟೋಬರ್ 18ರ ಶುಕ್ರವಾರ ಸ್ಪಷ್ಟ ಪಡಿಸಿದರು.

ಸುನ್ನಿ ವಕ್ಫ್ ಮಂಡಳಿಯು ಸಂಧಾನ ಸಮಿತಿ ಮೂಲಕ ವಿವಾದಿತ ಸ್ಥಳದ ಮೇಲಿನ ಹಕ್ಕು ಪ್ರತಿಪಾದನೆಯಿಂದ ಹಿಂದೆ ಸರಿಯುವ ಪ್ರಸ್ತಾಪವನ್ನು  ಸಲ್ಲಿಸಿದೆ ಎಂಬ ವರದಿಗಳ ಬೆನ್ನಲ್ಲೇ ಮುಸ್ಲಿಮ್ ಕಕ್ಷಿದಾರರ ಪರ ವಾದಿಸುತ್ತಿರುವ ವಕೀಲ ಇಜಾಜ್‌ ಮಕ್ಬೂಲ್‌ ಈ ಸ್ಪಷ್ಟೀಕರಣ ನೀಡಿದರು.

‘ಸುನ್ನಿ ವಕ್ಫ್ ಮಂಡಳಿ ಈ ಪ್ರಸ್ತಾವ ಮಂಡಿಸಿರಬಹುದು, ನಾವಂತೂ ಸಂಧಾನ ಸಮಿತಿ ಮುಂದೆ ಇಂತಹ ಯಾವುದೇ ಪ್ರಸ್ತಾವ ಇರಿಸಿಲ್ಲ. ವಿವಾದ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಲಿ ಎಂಬುದು ನಮ್ಮ ಸ್ಪಷ್ಟ ನಿಲುವು’ ಎಂದೂ ಇಜಾಜ್‌ ತಿಳಿಸಿದರು.

ಸಂಧಾನ ಸಮಿತಿಯ ಮುಂದೆ ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ನಮ್ಮ ನಿಲುವುಗಳನ್ನು ಸಲ್ಲಿಸಲಾಗಿದೆ. ವಿವಾದಿತ ಸ್ಥಳದ ಮೇಲಿನ ಹಕ್ಕು ಪ್ರತಿಪಾದನೆಯಿಂದ ಸುನ್ನಿ ವಕ್ಫ್ ಬೋರ್ಡ್‌ ಹಿಂದೆ ಸರಿಯಲು ನಾಲ್ಕು ಷರತ್ತುಗಳನ್ನು ಮುಂದಿಟ್ಟಿದೆ ಎಂಬ ವರದಿಗಳು ನಮಗೆ ಅಚ್ಚರಿ ತರಿಸಿವೆ. ಈ ಪ್ರಸ್ತಾವನೆಯನ್ನು ಸುನ್ನಿ ವಕ್ಫ್ ಬೋರ್ಡ್‌ ಬಿಟ್ಟರೆ ಬೇರೆಲ್ಲಾ ಮುಸ್ಲಿಮ್ ಕಕ್ಷಿದಾರರು ವಿರೋಧಿಸಿದ್ದಾರೆ ಎಂದೂ ವಕೀಲ ಇಜಾಜ್‌ ಮಕ್ಬೂಲ್‌ ಹೇಳಿದರು.

ಅಲ್ಲದೆ ಇಂತಹದ್ದೊಂದು ಸೋರಿಕೆಯ ಹಿಂದೆ ನಿರ್ಮೋಹಿ ಅಖಾರದ ಕೈವಾಡವಿದೆ ಎಂದೂ ಅವರು ಆರೋಪಿಸಿದರು. ಮುಸ್ಲಿಮ್ ಕಕ್ಷಿದಾರರಲ್ಲಿ ಪ್ರಮುಖರಾಗಿರುವ ಎಂ. ಸಿದ್ದಿಕಿ ಪರವಾಗಿ ಮಕ್ಬೂಲ್‌ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಅಕ್ಟೋಬರ್‌ 16ರಂದು ವಿಚಾರಣೆ ಪೂರ್ಣಗೊಳಿಸಿದ್ದು, ಇದಕ್ಕೂ ಮೊದಲೇ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ ಕಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಂಧಾನ ಸಮಿತಿ ತನ್ನ ವರದಿ ಸಲ್ಲಿಸಿತ್ತು. ಯಾವೆಲ್ಲ ವಿಚಾರಗಳನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ತಮ್ಮ ಬೇಡಿಕೆ ಏನು ಎಂಬ ಬಗ್ಗೆ ಲಿಖಿತ ಟಿಪ್ಪಣಿ ಸಲ್ಲಿಸಲು ಕಕ್ಷಿದಾರರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ಪೀಠವು ಮೂರು ದಿನಗಳ ಕಾಲಾವಕಾಶವನ್ನೂ ನೀಡಿತ್ತು.

ಸಂಧಾನ ಸಮಿತಿಯು ಮೊಹರಾದ ಲಕೋಟೆಯಲ್ಲಿ ಸಂವಿಧಾನ ಪೀಠಕ್ಕೆ ಈ ಹಿಂದೆಯೇ ಸಲ್ಲಿಸಿದ ವರದಿಯಲ್ಲಿ ಮುಸ್ಲಿಮ್ ಹಾಗೂ ಹಿಂದೂ ಕಕ್ಷಿದಾರರು ಅಯೋಧ್ಯಾ ವಿವಾದ ಸೌಹಾರ್ದಯುತವಾಗಿ ಇತ್ಯರ್ಥವಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು.

ಸುನ್ನಿ ವಕ್ಫ್ ಮಂಡಳಿ, ನಿರ್ವಾಣಿ ಅಖಾರ, ನಿರ್ಮೋಹಿ ಅಖಾರ,ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ ಸಂಧಾನದ ಪರವಾಗಿವೆ ಎಂದೂ ಸಮಿತಿ ವರದಿಯಲ್ಲಿ ತಿಳಿಸಿದೆ ಎನ್ನಲಾಗಿತ್ತು. ಜಾಗದ ಒಡೆತನವನ್ನು ಹಿಂದೂಗಳಿಗೆ ಬಿಟ್ಟುಕೊಡುವುದು ಸೂಕ್ತ ಎಂದು ಶಿಯಾ ವಕ್ಫ್ ಮಂಡಳಿ ಬಹಿರಂಗವಾಗಿಯೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು.

October 18, 2019 - Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸುಪ್ರೀಂಕೋರ್ಟ್, Flash News, General Knowledge, India, Nation, News, Politics, Spardha, supreme court, Temples, Temples, ದೇವಾಲಯಗಳು | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ