SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

೧೪ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ


20 karnataka local body elections
ನವಂಬರ್ ೧೨ ರಂದು ಮತದಾನ, ೧೪ಕ್ಕೆ ಫಲಿತಾಂಶ

ಬೆಂಗಳೂರು: ಮಂಗಳೂರು ಹಾಗೂ ದಾವಣಗೆರೆ ಮಹಾನಗರ ಪಾಲಿಕೆ, ಆರು ನಗರ ಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯತ್ ಸೇರಿದಂತೆ ಒಟ್ಟು ೧೪ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ  2019 ಅಕ್ಟೋಬರ್ 20ರ ಭಾನುವಾರ ಘೋಷಿಸಿತು. ಇದರ ಜೊತೆಗೆ ಒಂದು ಜಿಲ್ಲಾ ಪಂಚಾಯತ್ ಹಾಗೂ ನಾಲ್ಕು ತಾಲೂಕು ಪಂಚಾಯತ್ ಸದಸ್ಯ ಸ್ಥಾನಗಳಿಗೂ ಚುನಾವಣಾ ದಿನಾಂಕವನ್ನು ಆಯೋಗ ಪ್ರಕಟಿಸಿತು.

ನವಂಬರ್ ೧೨ ಕ್ಕೆ ರಾಮನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ ಹಾಗೂ ಬಳ್ಳಾರಿಯ ೧೪ ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದೆ.

ಅಕ್ಟೋಬರ್ ೨೪ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ ೩೧ ಕೊನೆಯ ದಿನವಾಗಿರುತ್ತದೆ. ನವಂಬರ್ ೦೨ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ನವಂಬರ್ ೦೪ ಕೊನೆಯ ದಿನವಾಗಿರುತ್ತದೆ. ನವಂಬರ್ ೧೨ರಂದು ಅಗತ್ಯವಿರುವ ಕಡೆಗಳಲ್ಲಿ ಮತದಾನ ನಡೆಯಲಿದೆ. ಮರುಮತದಾನ ಅಗತ್ಯವಿರುವ ಕಡೆಗಳಲ್ಲಿ ನವಂಬರ್ ೧೩ರಂದು ಮತದಾನ ನಡೆಯಲಿದೆ. ನವಂಬರ್ ೧೪ರ ಗುರುವಾರದಂದು ಆಯಾ ತಾಲೂಕುಗಳ ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ನಡೆಯಲಿದ್ದು ಅದೇ ದಿನ ಫಲಿತಾಂಶವೂ ಪ್ರಕಟಗೊಳ್ಳಲಿದೆ.

ಚಾಮರಾಜನಗರ ಜಿಲ್ಲಾ ಪಂಚಾಯತ್ ಸೇರಿದಂತೆ ಚಾಮರಾಜನಗರ, ಉಡುಪಿ, ಗದಗ ಹಾಗೂ ಕೊಪ್ಪಳ ತಾಲೂಕು ಪಂಚಾಯತ್ ಹಾಗೂ ಗ್ರಾಮಪಂಚಾಯತುಗಳಲ್ಲಿ ತೆರವುಗೊಂಡಿರುವ ೨೧೩ ಸದಸ್ಯ ಸ್ಥಾನಗಳಿಗೂ ಚುನಾವಣೆ ನಡೆಯಲಿದ್ದು ಅಕ್ಟೋಬರ್ ೩೧ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನವಂಬರ್ ೧೨ ರಂದು ಮತದಾನ ನಡೆಯಲಿದ್ದು ೧೪ ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ ೨೦ ರಿಂದಲೇ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿಸಂಹಿತೆ ಜಾರಿಗೊಳಿಸಲಾಗಿದ್ದು, ಇದು ನವಂಬರ್ ೧೪ರವರೆಗೆ ಜಾರಿಯಲ್ಲಿರುತ್ತದೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಖರ್ಚು ಮಿತಿಯನ್ನು ಆಯೋಗ ವಿಧಿಸಿದ್ದು, ಮಹಾನಗರ ಪಾಲಿಕೆಗೆ ೩ ಲಕ್ಷ, ನಗರ ಸಭೆ ೨ ಲಕ್ಷ, ಪುರಸಭೆ ೧.೩೦ ಲಕ್ಷ ಹಾಗೂ ಪಟ್ಟಣ ಪಂಚಾಯತ್ ೧ ಲಕ್ಷ ವೆಚ್ಚ ಮಿತಿಯನ್ನು ಚುನಾವಣಾ ಆಯೋಗ ವಿಧಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು ೬೦ ವಾರ್ಡ್‌ಗಳೂ ಸೇರಿದಂತೆ ೨ ಮಹಾನಗರ ಪಾಲಿಕೆಗಳ ಒಟ್ಟು ೧೦೫ ಸ್ಥಾನಗಳು, ೬ ನಗರಸಭೆಗಳ ಒಟ್ಟು ೧೯೪ ವಾರ್ಡ್‌ಗಳು, ೩ ಪುರಸಭೆಗಳ ಒಟ್ಟು ೬೯ ವಾರ್ಡ್‌ಗಳು ಮತ್ತು ೩ ಪಟ್ಟಣ ಪಂಚಾಯತಿಗಳ ಒಟ್ಟು ೫೦ ವಾರ್ಡ್‌ಗಳು ಸೇರಿದಂತೆ ಒಟ್ಟಾರೆಯಾಗಿ ೧೪ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು ೪೧೮ ವಾರ್ಡ್‌ಗಳ ಸ್ಥಳೀಯ ಜನಪ್ರತಿನಿಧಿಗಳ ಆಯ್ಕೆಗಾಗಿ  ಈ ಚುನಾವಣೆ ನಡೆಯುತ್ತಿದೆ. ಇವುಗಳ ಜೊತೆಯಲ್ಲಿ ೫ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಸಹ ನಡೆಯಲಿದೆ.

ಈ ಎಲ್ಲಾ ವಾರ್ಡ್ ಗಳಲ್ಲಿನ ಒಟ್ಟು ೧೩೮೮ ಮತಗಟ್ಟೆಗಳಲ್ಲಿ ೧೩,೦೪,೬೧೪ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಯಾವೆಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ?

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು ೬೦ ವಾರ್ಡ್‌ಗಳು, ರಾಮನಗರ ಜಿಲ್ಲೆಯ ಕನಕಪುರ ನಗರಸಭೆಯ ಒಟ್ಟು ೩೧ ವಾರ್ಡ್‌ಗಳು, ಮಾಗಡಿ ಪುರಸಭೆಯ ೨೩ ವಾರ್ಡ್‌ಗಳು, ದಾವಣಗೆರೆ ಜಿಲ್ಲೆಯ ದಾವಣಗೆರೆ ಮಹಾನಗರ ಪಾಲಿಕೆಯ ೪೫ ವಾರ್ಡ್‌ಗಳು, ಕೋಲಾರ ಜಿಲ್ಲೆಯ ಕೋಲಾರ ನಗರಸಭೆಯ ೩೫ ವಾರ್ಡ್‌ಗಳು, ಮುಳಬಾಗಿಲು ನಗರಸಭೆಯ ೩೧ ವಾರ್ಡ್‌ಗಳು, ಕೆ.ಜಿ.ಎಫ್. (ರಾಬರ್ಟ್‌ಸನ್ ಪೇಟ್) ನಗರ ಸಭೆಯ ೩೫ ವಾರ್ಡ್‌ಗಳು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಸಭೆಯ ೩೧ ವಾರ್ಡ್‌ಗಳು, ಚಿಂತಾಮಣಿ ನಗರಸಭೆಯ ೩೧ ವಾರ್ಡ್‌ಗಳು, ಶಿವಮೊಗ್ಗ ಜಿಲ್ಲೆಯ ಜೋಗ್ – ಕಾರ್ಗಲ್ ಪಟ್ಟಣ ಪಂಚಾಯತ್ ೧೧ ವಾರ್ಡ್‌ಗಳು, ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆಯ ೨೩ ವಾರ್ಡ್‌ಗಳು, ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯತಿಯ ೧೯ ವಾರ್ಡ್‌ಗಳು, ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆಯ ೨೩ ವಾರ್ಡ್‌ಗಳು, ಕೂಡ್ಲಿಗಿ ಪಟ್ಟಣ ಪಂಚಾಯತಿಯ ೨೦ ವಾರ್ಡ್‌ಗಳಿಗೆ ಈ ಚುನಾವಣೆ ನಡೆಯಲಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಪುರಸಭೆ, ಚಾಮರಾಜನಗರದ ಕೊಳ್ಳೇನಾಲ ನಗರಸಭೆ, ವಿಜಯಪುರದ ಚಡಚಣ ಪಟ್ಟಣ ಪಂಚಾಯತಿ, ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಮತ್ತು ಕಲಬುರಗಿಯ ಚಿತ್ತಾಪುರ ಪುರಸಭೆ ತಲಾ ಒಂದು ವಾರ್ಡ್‌ಗಳಲ್ಲಿಯೂ ಉಪಚುನಾವಣೆ ಇದೇ ಸಂದರ್ಭದಲ್ಲಿ ನಡೆಯಲಿದೆ. ಈ ಎಲ್ಲಾ ಐದು ವಾರ್ಡ್‌ಗಳಲ್ಲಿನ ಹಾಲೀ ಸದಸ್ಯರ ನಿಧನದಿಂದ ಈ ಸ್ಥಾನಗಳು ತೆರವಾಗಿತ್ತು.

ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರಿಗೆ ನೋಟಾ ಚಲಾವಣೆಗೆ ಅವಕಾಶವಿದೆ. ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರವನ್ನು ಮುದ್ರಿಸಲು ಕ್ರಮಕೈಗೊಳ್ಳಲಾಗಿದೆ.

ರಾಜಕೀಯ ಪಕ್ಷಗಳ ಬ್ಯಾನರ್, ಕಟೌಟ್ ತೆರವುಗೊಳಿಸಲು ಸೂಚನೆ

ಮಂಗಳೂರು ಮಹಾನಗರಪಾಲಿಕೆಗೆ ಚುನಾವಣೆ ಘೋಷಣೆಯಾಗಿದ್ದು, ನಗರಪಾಲಿಕೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ತತ್ ಕ್ಷಣದಿಂದಲೇ ಜಾರಿಗೆ ಬಂದಿದೆ. ಹಾಗಾಗಿ ನಗರದ ಎಲ್ಲಾ ವಾರ್ಡುಗಳಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ಮುಖಂಡರ ಚಿತ್ರ ಇರುವ  ಎಲ್ಲಾ ರೀತಿಯ ಕಟೌಟ್, ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಗಳನ್ನು ಸಂಬಂಧಪಟ್ಟವರು ಕೂಡಲೇ ತೆರವುಗೊಳಿಸುವಂತೆ ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಸೂಚಿಸಿದರು.

October 20, 2019 - Posted by | ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ, ರಾಷ್ಟ್ರೀಯ, Flash News, General Knowledge, News, Politics, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ