SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ದೀಪಾವಳಿ ದಿನ ಲಂಡನ್ನಿನಲ್ಲಿ ಭಾರತ ವಿರೋಧಿ ಪ್ರತಿಭಟನೆ


23 johnson-modi
ಬ್ರಿಟಿಷ್ ಸರ್ಕಾರಕ್ಕೆ ಭಾರತದ ಪತ್ರ, ಭದ್ರತೆಗೆ ಆಗ್ರಹ

ನವದೆಹಲಿ: ಅಕ್ಟೋಬರ್ ೨೭ರ ಭಾನುವಾರ ’ದೀಪಾವಳಿ’ ದಿನದಂದು ಲಂಡನ್ನಿನಲ್ಲಿ ಜಮ್ಮ ಮತ್ತು ಕಾಶ್ಮೀರದ ವಿಷಯವಾಗಿ ನಡೆಸಲು ಉದ್ದೇಶಿಸಲಾಗಿರುವ ಭಾರತ ವಿರೋಧಿ ಪ್ರತಿಭಟನೆ ಬಗ್ಗೆ ಬ್ರಿಟಿಷ್ ಸರ್ಕಾರದ ಗಮನ ಸೆಳೆದು 2019 ಅಕ್ಟೋಬರ್ 23ರ ಬುಧವಾರ ಭಾರತವು ಪತ್ರ ಬರೆಯಿತು ಮತ್ತು ಲಂಡನ್ನಿನಲ್ಲಿ ಇರುವ ಭಾರತದ ರಾಯಭಾರಿ ಕಚೇರಿ ಮತ್ತು ಸಿಬ್ಬಂದಿಗೆ ಭದ್ರತೆ ಒದಗಿಸುವಂತೆ ಆಗ್ರಹಿಸಿತು.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡಿನಲ್ಲಿ ಭಾರತ ವಿರೋಧಿ ಭಾವನೆಗಳನ್ನು ಹುಟು ಹಾಕಲು ನಡೆಯುತ್ತಿರುವ ಯತ್ನಗಳ ಬಗ್ಗೆ ಮತ್ತು ಲಂಡನ್ನಿನ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಕಳವಳ ವ್ಯಕ್ತ ಪಡಿಸಿ ಭಾರತವು ಲಂಡನ್ನಿನ ರಾಜತಾಂತ್ರಿಕ ಕಚೇರಿಯ ಮೂಲಕ ಇಂಗ್ಲೆಂಡ್ ಸರ್ಕಾರಕ್ಕೆ ರಾಜತಾಂತ್ರಿಕ ಪತ್ರವನ್ನು ರವಾನಿಸಿತು.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪರ ಗುಂಪುಗಳು ಲಂಡನ್ನಿನ ಭಾರತೀಯ ರಾಯಭಾರ ಕಚೇರಿಯ ಮುಂದೆ ಆಗಸ್ಟ್ ೧೫ ಮತ್ತು ಸೆಪ್ಟೆಂಬರ್ ೩ರಂದು ಪ್ರತಿಭಟನೆಗಳನ್ನು ನಡೆಸಿದ್ದವು. ಆಗಸ್ಟ್ ೧೫ರಂದು ಭಾರತದ ರಾಯಭಾರ ಕಚೇರಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಹಾಳುಗೆಡಹುವ ಉದ್ದೇಶದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಜೊತೆಗೆ ಆಗಸ್ಟ್ ೨೦ರಂದು ನಡೆಸಿದ ದೂರವಾಣಿ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದರು.

ಲಂಡನ್ನಿನ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿ ಭಾರೀ ಗುಂಪೊಂದರಿಂದ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯದ ಬಗ್ಗೆ ಮೋದಿ ಪ್ರಸ್ತಾಪಿಸಿದ್ದು, ಜಾನ್ಸನ್ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು ಮತ್ತು ಹೈಕಮೀಷನ್, ಸಿಬ್ಬಂದಿ ಮತ್ತು ಸಂದರ್ಶಕರಿಗೆ ಭದ್ರತೆ ಹಾಗೂ ಸುರಕ್ಷತೆ ಒದಿಗುಸ ಬಗ್ಗೆ ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ ಎಂದು ಭಾರತದ ಕಡೆಯಿಂದ ಬಿಡುಗಡೆ ಮಾಡಲಾದ ಮಾಹಿತಿ ತಿಳಿಸಿತ್ತು.

ಆದಾಗ್ಯೂ,  ಆ ಬಳಿಕ ಸೆಪ್ಟೆಂಬರ್ ೩ರಂದು ನಡೆದ ಪ್ರತಿಭಟನೆ ಇನ್ನಷ್ಟು  ಅಸಹ್ಯಕರ ತಿರುವು ಪಡೆದಿತ್ತು. ಪ್ರತಿಭಟನಕಾರರು ರಾಯಭಾರ ಕಚೇರಿಯ ಆವರಣದ ಸಮೀಪದವರೆಗೂ ಬಂದದ್ದಲ್ಲದೆ ಟೊಮ್ಯಾಟೋ, ಕೋಳಿ ಮೊಟ್ಟೆ ಎಸೆದು, ಕಿಟಕಿ ಗಾಜುಗಳನ್ನೂ ಪುಡಿ ಮಾಡಿದ್ದರು.

ಘಟನೆ ಬಗ್ಗೆ ಇಂಗ್ಲೆಂಡಿನ ಭಾರತೀಯ ಹೈಕಮೀಷನ್ ಟ್ವೀಟ್ ಮಾಡಿದಾಗ ಲಂಡನ್ ಮೇಯರ್ ಸಾದಿಖ್ ಖಾನ್ ದಾಳಿಯನ್ನು ಖಂಡಿಸಿದರು. ಆದರೆ ಪೊಲೀಸರು ಪ್ರತಿಭಟನಕಾರರನ್ನು  ಹೈಕಮೀಷನ್‌ನಿಂದ ಸಾಕಷ್ಟು ದೂರದಲ್ಲಿಯೇ ತಡೆಯಲು ವಿಫಲರಾದದ್ದು ಹೇಗೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಈ ಮಧ್ಯೆ, ವಿಷಯವು ಇಂಗ್ಲೆಂಡಿನ ಸಂಸತ್ತಿನಲ್ಲೂ ಬುಧವಾರ ಪ್ರತಿಧ್ವನಿಸಿದ್ದು ಹ್ಯಾರೋ ಪೂರ್ವದ ಸಂಸತ್ ಸದಸ್ಯರ ಬಾಬ್ ಬ್ಲಾಕ್‌ಮ್ಯಾನ್ ಅವರು ಭಾನುವಾರಕ್ಕೆ ನಿಗದಿಯಾಗಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳು ಏನು ಎಂದು ಪ್ರಶ್ನಿಸಿದರು.

ಹಿಂಸಾಚಾರಕ್ಕೆ ತಿರುಗುವ ಯಾವುದೇ ಪ್ರತಿಭಟನೆಯನ್ನು ಪ್ರಧಾನಿ ಜಾನ್ಸನ್ ಖಂಡಿಸಿ, ’ಇದನ್ನುಅಂಗೀಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ವಿಷಯವನ್ನು ಪೊಲೀಸರ ಬಳಿ ಪ್ರಸ್ತಾಪಿಸುವರು ಎಂದು ಪ್ರಧಾನಿ ಭರವಸೆ ನೀಡಿದರು.

October 23, 2019 - Posted by | ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Politics, Prime Minister, Spardha | , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ