SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಗೋಪಾಲ್ ಕಾಂಡಾಗೆ ವಿರೋಧ: ದುಷ್ಯಂತ ಚೌಟಾಲ ಕಡೆಗೆ ಬಿಜೆಪಿ ಒಲವು?


25 dushyantchuatalaandgopalkanda
ನವದೆಹಲಿ:
ಹರಿಯಾಣದಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿಗೆ ಭೇಷರತ್ ಬೆಂಬಲ ಘೋಷಿಸಿದ್ದ ವಿವಾದಾತ್ಮಕ ಶಾಸಕ ಗೋಪಾಲ್ ಕಾಂಡಾ ಬೆಂಬಲ ಪಡೆಯಲು ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಂಡಾ ಅವರನ್ನು ಬದಿಗಿಟ್ಟು ೧೦ ಶಾಸಕರನ್ನು ಹೊಂದಿರುವ ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ಪಕ್ಷದ (ಜೆಪಿಪಿ) ಜೊತೆಗೆ ಮೈತ್ರಿಯನ್ನು ಪ್ರಕಟಿಸಬಹುದು ಎಂದು ಸುದ್ದಿ ಮೂಲಗಳು ತಿಳಿಸಿದವು.

ಹರಿಯಾಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣದ ಸೂಚನೆ ಸಿಗುತ್ತಿದ್ದಂತೆಯೇ ಗೋಪಾಲ್ ಕಾಂಡಾ ಮತ್ತು ಇನ್ನೊಬ್ಬ ಪಕ್ಷೇತರ ಶಾಸಕ  ಜೊತೆಗೆ ಬಿಜೆಪಿ ಸಂಸದರೊಬ್ಬರ ಜೊತೆಗೆ ದೆಹಲಿಗೆ ವಿಮಾನದಲ್ಲಿ ತೆರಳಿ ಬಿಜೆಪಿ ವರಿಷ್ಠರ ಜೊತೆಗೆ ಮಾತುಕತೆ ನಡೆಸಿದ್ದರು. ಉನ್ನತ ನಾಯಕರ ಜೊತೆಗಿನ ಮಾತುಕತೆಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಳ್ಳುತ್ತಿದ್ದಂತೆಯೇ, ಗೋಪಾಲ್ ಕಾಂಡಾ ಬೆಂಬಲ ಪಡೆಯುವ ಬಗ್ಗೆ ವಿರೋಧಿ ಕಾಂಗ್ರೆಸ್ ಮಾತ್ರವಲ್ಲದೆ ಪಕ್ಷದ ಒಳಗೂ ವಿರೋಧ ವ್ಯಕ್ತವಾಗತೊಡಗಿತ್ತು.

2019 ಅಕ್ಟೋಬರ್ 25ರ ಶುಕ್ರವಾರ ಬೆಳಗ್ಗೆ ಕಾಂಡಾ ಅವರು ತಮ್ಮ ಕುಟುಂಬವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಗೆ ಆಳವಾದ ಸಂಪರ್ಕವನ್ನು ಹೊಂದಿದೆ ಎಂದು ಹೇಳಿದ್ದಲ್ಲದೆ, ಇತರ ಏಳು ಪಕ್ಷೇತರ ಶಾಸಕರೂ ಬಿಜೆಪಿಗೆ ಭೇಷರತ್ ಬೆಂಬಲ ನೀಡುವರು ಎಂದು ಪ್ರಕಟಿಸಿದ್ದರು.

ಏನಿದ್ದರೂ, ಅವರ ಹೇಳಿಕೆಗಳ ಬಗ್ಗೆ ಬಿಜೆಪಿ ಮೌನ ತಾಳಿತ್ತು. ಬಿಜೆಪಿ ಎಂದಿಗೂ ಅವರ ಬೆಂಬಲ ಕೋರಿರಲಿಲ್ಲ ಮತ್ತು ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರೂ ಈ ವಿಚಾರದಲ್ಲಿ ಒಲವು ಹೊಂದಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ. ಕಾಂಡಾ ಬೆಂಬಲದ ಅಗತ್ಯವಿಲ್ಲ, ಅವರ ಹೊರತಾಗಿಯೂ ಪಕ್ಷಕ್ಕೆ ಇತರ ೭ ಮಂದಿ ಪಕ್ಷೇತರ ಶಾಸಕರ ಬೆಂಬಲ ಇದೆ ಎಂದು ಮೂಲಗಳು ಹೇಳಿದವು.

ಭೂಪೀಂದರ್ ಹೂಡಾ ಸರ್ಕಾರದಲ್ಲಿ ಸಚಿವರಾಗಿದ್ದ ಗೋಪಾಲ್ ಕಾಂಡಾ ಅವರು ತಮಗೆ ಕಿರುಕುಳ ನೀಡಿರುವುದಾಗಿ ಗಗನಸಖಿ ಗೀತಿಕಾ ಶರ್ಮಾ ಅವರು ತಮ್ಮ ಆತ್ಮಹತ್ಯಾ ಟಿಪ್ಪಣಿಯಲ್ಲಿ ಬರೆದಿಟ್ಟಿದ್ದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಅಲ್ಲದೆ ಒಂದು ವರ್ಷ ಕಾಲ ಬಂಧನಕ್ಕೂ ಒಳಗಾಗಿದ್ದರು. ಕಾಂಡಾ ವಿರುದ್ಧ ಬಿಜೆಪಿ ದೊಡ್ಡ ಪ್ರಮಾಣದ ಚಳವಳಿಯನ್ನೇ ಹೂಡಿತ್ತು.

ಇದೀಗ ಕಾಂಡಾ ಬೆಂಬಲದ ಸುದ್ದಿಗಳು ಹರಡುತ್ತಿದ್ದಂತೆಯೇ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಟ್ವೀಟ್ ಮೂಲಕ ಕಾಂಡಾ ಬೆಂಬಲ ಪಡೆಯುವುದನ್ನು ವಿರೋಧಿಸಿದ್ದರು. ಕಾಂಗ್ರೆಸ್ ಕೂಡಾ ಟ್ವೀಟ್ ಮಾಡಿ ಬಿಜೆಪಿಯನ್ನು ಟೀಕಿಸಿತು. ’ಕಾಂಡಾ ಅವರು ಅತ್ಯಾಚಾರ ಮತ್ತು ಕೊಲೆ ಆರೋಪಿಯಾಗಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಈಗ ಎಲ್ಲಿಗೆ ಹೋಯಿತು? ಇದು ನಾಚಿಕೆಗೇಡು. ಬಿಜೆಪಿಯನ್ನು ಬೆಂಬಲಿಸಿದ್ದರಿಂದ ಅವರು ಪರಿಶುದ್ಧಿ ಹೊಂದಿದರೇ?’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿತ್ತು.

ಈ ಮಧ್ಯೆ, ಜೆಜೆಪಿ ನಾಯಕ ದುಷ್ಯಂತ ಚೌಟಾಲ ಅವರು ’ಬಿಜೆಪಿ, ಕಾಂಗ್ರೆಸ್ ಸೇರಿ ಯಾವ ಪಕ್ಷವೂ ತನಗೆ ಅಸ್ಪೃಶ್ಯವಲ್ಲ, ನಮ್ಮ ಪ್ರಣಾಳಿಕೆಯ ಕಾರ್ಯಕ್ರಮ ಬೆಂಬಲಿಸುವವರಿಗೆ ನಮ್ಮ ಬೆಂಬಲವಿದೆ’ ಎಂದು ಹೇಳಿದ್ದರು.

October 25, 2019 - Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ