SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮಹಾರಾಷ್ಟ್ರ: ಉದ್ಧವ್ ಠಾಕ್ರೆ ಜೊತೆ ಅಮಿತ್ ಶಾ ಸಂಧಾನ


25 amith sha uddhavಬಿಜೆಪಿ ಜೊತೆ ಮೈತ್ರಿ ಮುರಿದರೆ ಸೇನೆಗೆ ಬೆಂಬಲ, ಕಾಂಗ್ರೆಸ್ ಇಂಗಿತ

ನವದೆಹಲಿ/ ಮುಂಬೈ: ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ೨೪ ಗಂಟೆಗಳು ಕಳೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಹೂರ್ತ ಕೂಡಿ ಬಂದಿಲ್ಲ. ಅಧಿಕಾರ ಹಂಚಿಕೆಯಲ್ಲಿ ೫೦:೫೦ ಸೂತ್ರಕ್ಕಾಗಿ ಪಟ್ಟು ಹಿಡಿದಿರುವ ಮಿತ್ರ ಪಕ್ಷ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆಗೆ ಸಂಧಾನ ಮಾತುಕತೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮುಂದಾಗಿದ್ದು, ಬಿಜೆಪಿಯ ಸಖ್ಯ ಮುರಿದರೆ ಶಿವಸೇನೆಗೆ ಬೆಂಬಲ ನೀಡುವ ಇಂಗಿತವನ್ನು ಕಾಂಗ್ರೆಸ್ ವ್ಯಕ್ತ ಪಡಿಸಿದೆ. ಇದರೊಂದಿಗೆ ಮಹಾರಾಷ್ಟ್ರದ ರಾಜಕೀಯ 2019 ಅಕ್ಟೋಬರ್ 25ರ ಶುಕ್ರವಾರ ಹೊಸ ’ತಿರುವು’ (ಟ್ವಿಸ್ಟ್) ಪಡೆಯಿತು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸರಳ ಬಹುಮತ ಪಡೆದಿದ್ದರೂ, ಬಿಜೆಪಿಯ ಗಮನಾರ್ಹ ಸಂಖ್ಯೆಯಲ್ಲಿ  ಸ್ಥಾನಗಳನ್ನು ಕಳೆದುಕೊಂಡಿರುವುದರ ಲಾಭ ಪಡೆದಿರುವ ಶಿವಸೇನಾ ಮುಖ್ಯಸ್ಥರು ಗುರುವಾರವೇ ’ತರಾತುರಿಯಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡುವುದಿಲ್ಲ. ಸರ್ಕಾರ ರಚನೆಗೆ ಮುನ್ನ ಬಿಜೆಪಿಯ ದೆಹಲಿ ವರಿಷ್ಠರ ಜೊತೆಗೆ ಮಾತುಕತೆ ನಡೆಸಬೇಕಾಗಿದೆ’ ಎಂದು ಹೇಳುವ ಮೂಲಕ ಮಿತ್ರ ಪಕ್ಷಕ್ಕೆ ಸಂದೇಶ ರವಾನಿಸಿದ್ದರು.

ಈ ಮಧ್ಯೆ, ಬಿಜೆಪಿ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪಕ್ಷವು ಹಲವಾರು ಪಕ್ಷೇತರ ಶಾಸಕರ ಜೊತೆಗೆ ಸಂಪರ್ಕದಲ್ಲಿ ಇರುವುದಾಗಿ ಪ್ರಕಟಿಸಿದ್ದರು.

ಬಿಜೆಪಿ ಸಂಸದೀಯ ಮಂಡಳಿಯು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಜೊತೆಗೆ ಮೈತ್ರಿ ಸರ್ಕಾರದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಲು ಈದಿನ ಅಧಿಕಾರ ನೀಡಿತು. ಹೀಗಾಗಿ ಉದ್ಧವ್ ಠಾಕ್ರೆ ಜೊತೆಗೆ ಅಮಿತ್ ಶಾ ಸಂಧಾನ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿದವು.

ಈ ಮಧ್ಯೆ, ಹೊಸ ಬೆಳವಣಿಗೆಯೊಂದರಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿ ಚುನಾವಣೆಯಲ್ಲಿ ಸೆಣಸಿದ ಶಿವಸೇನೆಯ ಜೊತೆಗೆ ಕೈಜೋಡಿಸಲು ತಾನು ಮುಕ್ತ ಎಂಬ ಇಂಗಿತವನ್ನು ಕಾಂಗ್ರೆಸ್ ಪಕ್ಷವು ವ್ಯಕ್ತ ಪಡಿಸಿತು.

ಶಿವಸೇನೆಯು ಬಿಜೆಪಿ ಜೊತೆಗಿನ ಮೈತ್ರಿ ಮುರಿಯುವ ಧೈರ್‍ಯ ತೋರಿದರೆ, ಉದ್ಧವ್ ಠಾಕ್ರೆ ಅವರ ಸಂಘಟನೆಯ ಜೊತೆಗೆ ಕೈಜೋಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆಗೆ ತಾನು ಮುಕ್ತ ಎಂಬುದಾಗಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್  ಹೇಳಿಕೆ ನೀಡಿದರು.

‘ನಾನು ಅದಕ್ಕೆ ಮುಕ್ತವಾಗಿದ್ದೇನೆ. ಶಿವಸೇನೆಯು ಪ್ರಸ್ತಾಪ ಕಳುಹಿಸಿದರೆ, ನಾನು ಅದನ್ನು ಪಕ್ಷದ ದೆಹಲಿ ವರಿಷ್ಠರ ಜೊತೆಗೆ ಚರ್ಚಿಸುವೆ’ ಎಂದು ಥೋರಟ್  ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಾ ಹೇಳಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನೆಯ ಅಭ್ಯರ್ಥಿಯನ್ನು ಅಂಗೀಕರಿಸಲು ಕೂಡಾ ಪಕ್ಷವು ಬಯಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದವು.

ಮಿತ್ರ ಪಕ್ಷ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಿಲುವಿನ ಬಗೆಗಿನ ಪ್ರಶ್ನೆಗಳನ್ನು  ಉತ್ತರಿಸಲು ಥೋರಟ್ ನಿರಾಕರಿಸಿದರು. ಥೋರಟ್ ಅವರು ಮುಂದಿನ ತಂತ್ರಗಾರಿಕೆ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಬಾರಾಮತಿಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ.

‘ರಾಜ್ಯದಲ್ಲಿ ಸಂಖ್ಯಾ ಆಟ ಹೇಗಿದೆ ಎಂದರೆ ಎಲ್ಲ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ನಿರ್ಧರಿಸಿದರೆ, ಅವುಗಳು ಸರ್ಕಾರ ರಚಿಸಲು ಸಾಧ್ಯವಿದೆ, ಆದರೆ ಅವರೆಲ್ಲರೂ ಒಂದಾದರೆ ಮಾತ್ರ’ ಎಂದು ಅಪರಿಚಿತರಾಗಿ ಉಳಿಯಬಯಸಿದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.

ಪ್ರಸ್ತುತ ೧೦ ಮಂದಿ ಪಕ್ಷೇತರರು ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿ ಇದ್ದಾರೆ. ಒಂಬತ್ತು ಮಂದಿ ಬಂಡುಕೋರ ವಿಜೇತರು ತನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ಶಿವಸೇನೆ ಪ್ರತಿಪಾದಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್‌ಸಿಪಿ) ೫೪ ಸ್ಥಾನಗಳನ್ನು ಗೆದ್ದಿದೆ. ಶಿವಸೇನೆಯು ೫೬ ಸ್ಥಾನಗಳನ್ನು ಗೆದ್ದಿದೆ. ೧೦೫ ಸ್ಥಾನಗಳೊಂದಿಗೆ ಬಿಜೆಪಿ ಮುಂಚೂಣಿಯಲ್ಲಿದೆ.

ಈ ಮಧ್ಯೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ೧೫ ಮಂದಿ ಬಂಡುಕೋರ ಶಾಸಕರು ಕೇಸರಿ ಪಕ್ಷದ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಗುರುವಾರ ಹೊರಬರುತ್ತಿದ್ದಂತೆಯೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚನೆ ಸುಲಭವಲ್ಲ ಎಂಬ ಸಂದೇಶವನ್ನು ರವಾನಿಸಿದ್ದರು.

ಮಹಾರಾಷ್ಟ್ರ ಚುನಾವಣೆಗಳಲ್ಲಿ ಕಿರಿಯ ಪಾಲುದಾರನಾಗಲು ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ಶಿವಸೇನಾ ಮುಖ್ಯಸ್ಥ, ಸರ್ಕಾರ ರಚನೆಯ ವಿಚಾರದಲ್ಲಿ ತನ್ನ ನಡೆಯನ್ನು ಶಿವಸೇನೆ ಒಪ್ಪಿಕೊಳ್ಳುತ್ತದೆ ಎಂದು ಬಿಜೆಪಿ ತೀರ್ಮಾನಿಸಬೇಕಾಗಿಲ್ಲ, ಇದು ಚರ್ಚಿಸಬೇಕಾದ ವಿಷಯ ಎಂದು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದರು.

ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಉದ್ಧವ್, ಫೆಬ್ರುವರಿಯಲ್ಲಿ ಉಭಯ ಪಕ್ಷಗಳೂ ೫೦:೫೦ ಅಧಿಕಾರ ಹಂಚಿಕೆಯನ್ನು ಒಪ್ಪಿಕೊಂಡಿದ್ದವು ಎಂಬ ವಿಚಾರನ್ನು ನಿರ್ದಿಷ್ಟವಾಗಿ ನೆನಪಿಸಿದ್ದರು. ಆದರೆ ಹಲವಾರು ಬಾರಿ ಇದನ್ನೂ ನೆನಪಿಸಿದರೂ ಬಿಜೆಪಿ ತನ್ನ ವಚನವನ್ನು ಪಾಲಿಸದೆ ೧೬೪ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಶಿವಸೇನೆ ೧೨೪ ಅಭ್ಯರ್ಥಿಗಳನ್ನೂ ಮಾತ್ರ ಕಣಕ್ಕೆ ಇಳಿಸಿತ್ತು.

ಬಿಜೆಪಿಯು ೧೦೫ ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಉದಯಿಸಿದ್ದರೂ, ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನೆಯನ್ನು ಸರ್ಕಾರ ರಚನೆಗಾಗಿ ನೆಚ್ಚಿಕೊಳ್ಳಲೇಬೇಕಾಗಿದೆ. ಈ ಅವಕಾಶವನ್ನು ಠಾಕ್ರೆ ಅತ್ಯಂತ ಕ್ಷಿಪ್ರವಾಗಿ ಬಳಸಿಕೊಂಡಿದ್ದರು.

‘ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಅತ್ಯಂತ ಮಹತ್ವದ ಪ್ರಶ್ನೆ’ ಎಂದು ಉದ್ಧವ್ ಠಾಕ್ರೆ ಹೇಳಿದ್ದರು.

ಲೋಕಸಭಾ ಚುನಾವಣೆಗೆ ಮುನ್ನ ೫೦:೫೦ ಸೂತ್ರವನ್ನು ಒಪ್ಪಿಕೊಳ್ಳಲಾಗಿತ್ತು ಎಂಬುದು ನೆನಪಿಟ್ಟುಕೊಳ್ಳಬೇಕು. ಇದರ ಪ್ರಕಾರ ಸ್ಥಾನ ಹಂಚಿಕೆ ಸೂತ್ರ ೧೪೪:೧೪೪. ಬಿಜೆಪಿಯ ಚಂದ್ರಕಾಂತ ಪಾಟೀಲ್ ಅವರು ಶಿವಸೇನೆಯ ತನ್ನ ಸ್ಥಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಕೆಲವು ಸ್ಥಾನಗಳಿಗೆ ಒಪ್ಪಿಕೊಂಡಿದ್ದೆ. ಆದರೆ ಈಗ ಅವರು ಅಡಚಣೆಗಳನ್ನು ಎದುರಿಸಲು ಹೋಗುವುದಾದಲ್ಲಿ ನಾನು ಅವರನ್ನು ಅರ್ಥ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಏಕೆಂದರೆ ನನಗೆ ನನ್ನ ಪಕ್ಷವನ್ನು ಮುನ್ನಡೆಸಬೇಕಾಗಿದೆ ಎಂದು ಠಾಕ್ರೆ ಹೇಳಿದ್ದರು.

October 25, 2019 - Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ