SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಜೆಜೆಪಿ+ ಪಕ್ಷೇತರರ ಬೆಂಬಲ: ಮರಳಿ ಅಧಿಕಾರಕ್ಕೆ ಏರಲು ಖಟ್ಟರ್ ಸಜ್ಜು


25 amith shah khattar dushyant choutala
ಬಿಜೆಪಿಯಿಂದ ಮುಖ್ಯಮಂತ್ರಿ, ಜೆಜೆಪಿಯಿಂದ ಉಪಮುಖ್ಯಮಂತ್ರಿ: ಅಮಿತ್ ಶಾ ಘೋಷಣೆ

ನವದೆಹಲಿ: 90 ಸದಸ್ಯಬಲದ ಹರಿಯಾಣ ವಿಧಾನಸಭೆಯಲ್ಲಿ 10 ಸದಸ್ಯರನ್ನು ಹೊಂದಿರುವ ಜನನಾಯಕ ಜನತಾ ಪಕ್ಷ (ಜೆಜೆಪಿ)  ಹಾಗೂ 7 ಮಂದಿ ಪಕ್ಷೇತರರ ಬೆಂಬಲದೊಂದಿಗೆ ಎರಡನೇ ಅವಧಿಗೆ ಹರಿಯಾಣದ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕ ಮನೋಹರಲಾಲ್ ಖಟ್ಟರ್  2019 ಅಕ್ಟೋಬರ್ 25ರ ಶುಕ್ರವಾರ ಸಜ್ಜಾದರು.

ಜೆಜೆಪಿ ನಾಯಕ ದುಷ್ಯಂತ ಚೌಟಾಲ ಜೊತೆಗೆ ಮೈತ್ರಿ ಸಾಧಿಸಿರುವ ವಿಷಯವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ದುಷ್ಯಂತ ಚೌಟಾಲ ಜೊತೆಗೇ ಪತ್ರಿಕಾಗೋಷ್ಠಿ ನಡೆಸಿದ ಶಾ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಹಾಗೂ ಪ್ರಾದೇಶಿಕ ಪಕ್ಷದಿಂದ  ಉಪ ಮುಖ್ಯಮಂತ್ರಿ ಇರುತ್ತಾರೆ ಎಂದು ಘೋಷಿಸಿದರು.

ಇದಕ್ಕೆ ಮುನ್ನ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಶಾಸಕ ಅಭಯ್ ಚೌಟಾಲ, ಹರಿಯಾಣ ಲೋಕಹಿತ ಪಕ್ಷದ (ಎಚ್‌ಎಲ್‌ಪಿ) ಶಾಸಕ ಗೋಪಾಲ್ ಕಾಂಡ ಮತ್ತು ೭ ಮಂದಿ ಪಕ್ಷೇತರರ ಬೆಂಬಲದೊಂದಿಗೆ ಮತ್ತೆ ಹರಿಯಾಣದ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕ ಮನೋಹರ ಲಾಲ್ ಖಟ್ಟರ್ ಸಜ್ಜಾಗಿದ್ದರು.

ಇದೇ ವೇಳೆಗೆ ತಮ್ಮ ಜನನಾಯಕ ಜನತಾ ಪಕ್ಷದ (ಜೆಜೆಪಿ) ನೂತನ ಶಾಸಕರ ಸಭೆ ನಡೆಸಿದ ಬಳಿಕ ’ಈಗಲೂ ಸ್ಥಿರ ಸರ್ಕಾರದ ಕೀಲಿ ಕೈ ಇರುವುದು ನಮ್ಮ ಕೈಯಲ್ಲೇ’ ಎಂಬುದಾಗಿ ಘೋಷಿಸಿರುವ ಜೆಜೆಪಿ ನಾಯಕ ದುಷ್ಯಂತ ಚೌಟಾಲ, ಚುನಾವಣೆಗೆ ಮುನ್ನ ನಾವು ಮುಂದಿಟ್ಟಿರುವ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಬೇಡಿಕೆ ಒಪ್ಪುವ ಯಾವುದೇ ಪಕ್ಷಕ್ಕೆ ನಮ್ಮ ಬೆಂಬಲ ಇದೆ’ ಎಂದು ಪ್ರಕಟಿಸಿದರು. ಬಳಿಕ ನಡೆದ ಬೆಳವಣಿಗೆಗಳಲ್ಲಿ ದುಷ್ಯಂತ ಚೌಟಾಲ ಬಿಜೆಪಿ ಜೊತೆಗೆ ಕೈಜೋಡಿಸುವ ನಿರ್ಧಾರ ಕೈಗೊಂಡರು.

ದೆಹಲಿಯಲ್ಲಿ ಪಕ್ಷದ ವರಿಷ್ಠ ನಾಯಕರ ಜೊತೆ ಶುಕ್ರವಾರ ಸಮಾಲೋಚನೆ ನಡೆಸಿರುವ ಮನೋಹರ ಲಾಲ್ ಖಟ್ಟರ್ ಅವರು ಬೆಂಬಲ ನೀಡಲು ಮುಂದೆ ಬಂದಿರುವ ೭ ಮಂದಿ ಶಾಸಕರು ಮತ್ತು ಪಕ್ಷದ ನಾಯಕತ್ವದ ಜೊತೆಗೆ ಜಂಟಿ ಮಾತುಕತೆಗಳನ್ನು ನಡೆಸಿ ಚಂಡೀಗಢದಲ್ಲಿ ಶನಿವಾರ ಹಕ್ಕು ಮಂಡನೆಗೆ ಬೇಕಾದ ವಿಧಿ ವಿಧಾನಗಳನ್ನು ಪೂರೈಸಿದರು.

೯೦ ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ೪೦ ಸ್ಥಾನಗಳನ್ನು ಗೆದ್ದಿದ್ದು ಸರಳ ಬಹುಮತಕ್ಕೆ ೬ ಸ್ಥಾನಗಳ ಕೊರತೆ ಅನುಭವಿಸಿತ್ತು.

‘ಶಾಸಕಾಂಗ ಪಕ್ಷದ ಸಭೆ ಶನಿವಾರ ನಡೆಯಲಿದೆ’ ಎಂದು ಖಟ್ಟರ್, ಬಿಜೆಪಿಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಮತ್ತು ಏಳು ಮಂದಿ ಪಕ್ಷೇತರ ಶಾಸಕರ ಜಂಟಿ ಸಭೆಯ ಬಳಿಕ ಅನಿಲ್ ಜೈನ್ ಹೇಳಿದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಚಂಡೀಗಢಕ್ಕೆ ಕೇಂದ್ರದ ವೀಕ್ಷಕರಾಗಿ ತೆರಳಲಿದ್ದಾರೆ.

ಚುನಾವಣೆಯಲ್ಲಿ ಗೆದ್ದಿರುವ ಪಕ್ಷೇತರ ಸದಸ್ಯರಾದ ಸೊಂಬೀರ್ ಸಂಗ್ವಾನ್ (ದಾದ್ರಿ), ಬಲರಾಜ್ ಕುಂಡು (ಮೆಹಮ್), ಧರಮ್ ಪಾಲ್ ಗೊಂಡರ್ (ನಿಲೋಖೇರಿ), ನೈನ್ ಪಾಲ್ ರಾವತ್ (ಪ್ರಿಥ್ಲಾ) ಮತ್ತು ರಣಧೀರ ಗೊಲ್ಲೆನ್ (ಪುಂಡ್ರಿ) ಅವರ ಬಿಜೆಪಿ ಬಂಡುಕೋರರಾಗಿದ್ದು ತಮಗೆ ಟಿಕೆಟ್ ಕೊಡದೇ ಇದ್ದುದಕ್ಕಾಗಿ ಮುನಿಸಿಕೊಂಡು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದರು. ಮಾಜಿ ಉಪಪ್ರಧಾನಿ ದೇವಿಲಾಲ್ ಅವರ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಒಪಿ ಚೌಟಾಲ ಅವರ ಕಿರಿಯ ಸಹೋದರ ರಣಜಿತ್ ಸಿಂಗ್ ಮತ್ತು ಬಾದಶಾಪುರದ ರಾಕೇಶ್ ದೌಲತಾಬಾದ್ ಇವರು ಬೆಂಬಲ ನೀಡಿರುವ ಉಳಿದ ಇಬ್ಬರು ಶಾಸಕರು. ಎಲ್ಲ ಏಳೂ ಮಂದಿ ಶಾಸಕರೂ ತಮ್ಮ ಬೆಂಬಲ ಪತ್ರವನ್ನು ಶುಕ್ರವಾರ ನೀಡಿದರು.

ದಾದ್ರಿಯ ಪಕ್ಷೇತರ ಶಾಸಕ ಸೊಂಬೀರ್ ಸಂಗ್ವಾನ್ ಅವರು ತಾವು ಶುಕ್ರವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದು ’ನಾನು ಬಿಜೆಪಿಗೆ ನನ್ನ ಬೆಂಬಲ ನೀಡುತ್ತೇನೆ’ ಎಂದು ಮಾಧ್ಯಮ ಒಂದರ ಬಳಿ ಇದಕ್ಕೆ ಮುನ್ನ ಹೇಳಿದ್ದರು.

ಬಹುತೇಕ ಎಲ್ಲ ಪಕ್ಷೇತರರೂ ಬಿಜೆಪಿಗೆ ಬೆಂಬಲ ನೀಡುವರು ಎಂದು ಕಾಂಡಾ ಮತ್ತು ಬಿಜೆಪಿ ಕಾರ್‍ಯಾಧ್ಯಕ್ಷ ಜೆಪಿ ನಡ್ಡಾ ಸಭೆಗೆ ವ್ಯವಸ್ಥೆ ಮಾಡಿದ ಸಿರ್ಸಾ ಸಂಸದರಾದ ಸುನೀತಾ ದುಗ್ಗಲ್ ನುಡಿದರು.

‘ಪಕ್ಷೇತರರಲ್ಲಿ ಐವರು ಬಿಜೆಪಿ ಬಂಡುಕೋರರು. ಕಾಂಡಾ ಮತ್ತು ರಣಜಿತ್ ಸಿಂಗ್ ಅವರೂ ಬೆಂಬಲ ನೀಡುತ್ತಿದ್ದಾರೆ. ಅವರೆಲ್ಲರೂ ಭೇಷರತ್ ಬೆಂಬಲಕ್ಕೆ ಬದ್ಧರಾಗಿದ್ದಾರೆ’ ಎಂದು ದುಗ್ಗಲ್ ಹೇಳಿದ್ದರು.

ತಾನು ಮತ್ತು ಇತರ ಕೆಲವು ಪಕ್ಷೇತರರು ಬಿಜೆಪಿಗೆ ಬೆಂಬಲ ವ್ಯಕ್ತ ಪಡಿಸಲು ಒಲವು ಹೊಂದಿರುವುದಾಗಿ ಗೋಪಾಲ್ ಕಾಂಡಾ ತಿಳಿಸಿದ್ದರು. ಐಎನ್‌ಎಲ್‌ಡಿ ಶಾಸಕ ಅಭಯ್ ಚೌಟಾಲ ಅವರೂ ಬಿಜೆಪಿಗೆ ಬೆಂಬಲ ನೀಡುವುದೇ ಅತ್ಯಂತ ಯೋಗ್ಯವಾದ ಮಾರ್ಗ ಎಂದು ಹೇಳಿದರು. ’ತಾತ್ವಿಕವಾಗಿ ನಾನು ಕಾಂಗ್ರೆಸ್ ಜೊತೆ ಸೇರಲಾರೆ’ ಎಂದು ಅವರು ನುಡಿದರು.

ಗೋಪಾಲ್ ಕಾಂಡಾ, ಅಭಯ್ ಚೌಟಾಲಾ ಮತ್ತು ೭ ಮಂದಿ ಪಕ್ಷೇತರರ ಲಭಿಸಿದಲ್ಲಿ ಬಿಜೆಪಿಗೆ ದುಷ್ಯಂತ ಚೌಟಾಲ ನೇತ್ವತ್ವದ ಜೆಜೆಪಿ ಬೆಂಬಲದ ಅಗತ್ಯ ಬೀಳಲಾರದು. ಆದಾಗ್ಯೂ, ಜೆಜೆಪಿಯ ೧೦ ಶಾಸಕರ ಬೆಂಬಲ ಪಡೆಯುವುದು ಬಿಜೆಪಿಗೆ ಅಪ್ರಿಯವೇನೂ ಅಲ್ಲ. ಜೆಜೆಪಿಯ ಬೆಂಬಲ ಲಭಿಸಿದಲ್ಲಿ ಸರ್ಕಾರ ಇನ್ನಷ್ಟು ದೃಢವಾಗಬಲ್ಲುದು. ದುಷ್ಯಂತ ಚೌಟಾಲ ಅವರ ಪಕ್ಷದ ಬೆಂಬಲವನ್ನು ಬಿಜೆಪಿ ಶರತ್ತಿಗೆ ಒಳಪಟ್ಟು ಪಡೆಯಲು ಪಕ್ಷ ಮುಕ್ತವಾಗಿದೆ, ಆದರೆ ಜೆಜೆಪಿ ತನ್ನ ಶರತ್ತುಗಳನ್ನು ಹೇರಲು ಪಕ್ಷವು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ದೆಹಲಿಯಲ್ಲಿ ಮಾಧ್ಯಮ ಒಂದಕ್ಕೆ ತಿಳಿಸಿದ್ದರು.

ಈ ಮಧ್ಯೆ, ಜನನಾಯಕ ಜನತಾ ಪಕ್ಷದ (ಜೆಜೆಪಿ) ೧೦ ಮಂದಿ ಶಾಸಕರ ಜೊತೆ ಸಭೆ ನಡೆಸಿದ ಬಳಿಕ ಪಕ್ಷದ ನಾಯಕ ದುಷ್ಯಂತ ಚೌಟಾಲ ಅವರು ಸಭೆಯ ಬಳಿಕ ’ಯಾವ ಪಕ್ಷವೂ ನಮಗೆ ಅಸ್ಪೃಶ್ಯವಲ್ಲ, ಸ್ಥಿರ ಸರ್ಕಾರ ಕೀಲಿ ಕೈ ನಮ್ಮ ಕೈಯಲ್ಲೇ ಇದೆ. ಚುನಾವಣೆಗೆ ಮುನ್ನ ನಾವು ಬಿಡುಗಡೆ ಮಾಡಿದ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಬೇಡಿಕೆಗಳನ್ನು ಬೆಂಬಲಿಸುವ ಪಕ್ಷಕ್ಕೆ ನಮ್ಮ ಬೆಂಬಲ ಇದೆ’ ಎಂದು ಘೋಷಿಸಿದ್ದರು.

ಜೆಜೆಪಿಯು ರಾಜ್ಯದಲ್ಲಿ ಸ್ಥಳೀಯ ಯುವಕರಿಗೆ ಶೇಕಡಾ ೭೫ರಷ್ಟು ಉದ್ಯೋಗಳನ್ನು ಮೀಸಲು ಇಡುವ ಮತ್ತು ಹಿರಿಯರಿಗೆ ಪಿಂಚಣಿ ಒದಗಿಸುವ ಭರವಸೆಯನ್ನು ನೀಡಿತ್ತು. ಈ ಬೇಡಿಕೆ ಬೆಂಬಲಿಸುವವರಿಗೆ ನಮ್ಮ ಬೆಂಬಲ ಎಂದು ಚೌಟಾಲ ಹೇಳಿದ್ದರು.

‘ಕೆಲವರು ಕಾಂಗ್ರೆಸ್ಸನ್ನು ಬೆಂಬಲಿಸಲು, ಇತರ ಕೆಲವರು ಬಿಜೆಪಿಯನ್ನು ಬೆಂಬಲಿಸಲು ಸಲಹೆ ಮಾಡಿದ್ದಾರೆ. ಆದರೆ ನಮಗೆ ಯಾವ ಪಕ್ಷವೂ ಅಸ್ಪೃಶ್ಯವಲ್ಲ, ನಮ್ಮ ಪ್ರಣಾಳಿಕೆಯ ಬೇಡಿಕೆಗಳನ್ನು ಯಾರು ಬೆಂಬಲಿಸುತ್ತಾರೋ ಅವರಿಗೆ ನಮ್ಮ ಬೆಂಬಲವಿದೆ. ಹೊರಗಿನಿಂದ ಬೆಂಬಲ ನೀಡುವ ಆಸಕ್ತಿ ನಮಗಿಲ್ಲ’ ಎಂದು ದುಷ್ಯಂತ ಚೌಟಾಲ ತಿಳಿಸಿದ್ದರು.

ಈ ಮಧ್ಯೆ ಹರಿಯಾಣ ಲೋಕಹಿತ ಪಕ್ಷದ ಗೋಪಾಲ ಕಾಂಡಾ ಅವರು ಬಿಜೆಪಿಗೆ ಬೆಂಬಲ ನೀಡಿದರೂ ಅದನ್ನು ಪಡೆಯಬಾರದು ಎಂದು ಪಕ್ಷದ ಹಿರಿಯ ನಾಯಕಿ ಉಮಾಭಾರತಿ ಪಕ್ಷದ ನಾಯಕತ್ವವನ್ನು ಆಗ್ರಹಿಸಿದ್ದರು. ಎಂಡಿಎಲ್ ಆರ್ ಏರ್ ಲೈನ್ಸ್‌ನ ಗಗನಸಖಿಯೊಬ್ಬರು ಬರೆದಿಟ್ಟ ಆತ್ಮಹತ್ಯಾ ಟಿಪ್ಪಣಿಯ ಹಿನ್ನೆಲೆಯಲ್ಲಿ ಕಾಂಡಾ ಅವರ ರಾಜಕೀಯ ಅಧಃಪತನವಾಗಿದೆ ಎಂದು ಅವರು ಹೇಳಿದ್ದಾರೆ. ಗೋಪಾಲ್ ಕಾಂಡಾ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಆರೋಪವಿದೆ. ಒಂದು ವರ್ಷದ ಒಳಗಾಗಿ ನಾಟಕೀಯವಾಗಿ ಅತ್ಯಾಚಾರ ಆರೋಪವನ್ನು ಕೈಬಿಡಲಾಗಿತ್ತು ಮತ್ತು ಮಹಿಳೆಯ ತಾಯಿ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಂಡಾ ಬೆಂಬಲ ಪಡೆಯುವುದನ್ನು ಕಾಂಗ್ರೆಸ್ ಪಕ್ಷ ಕೂಡಾ ಲೇವಡಿ ಮಾಡಿತ್ತು.

October 25, 2019 - Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ