SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅ.29ರ ಮಂಗಳವಾರ ಜಮ್ಮು- ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿ


28 modi-euಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣ ಸಿಗಲಿದೆ: ಪ್ರಧಾನಿ ಮೋದಿ

ನವದೆಹಲಿ: ಐರೋಪ್ಯ ಸಂಸತ್ತಿನ ಸಂಸತ್ ಸದಸ್ಯರ ತಂಡವೊಂದಕ್ಕೆ  2019 ಅಕ್ಟೋಬರ್ 29ರ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, 2019 ಅಕ್ಟೋಬರ್ 28ರ ಸೋಮವಾರ ತಂಡದ ಸದಸ್ಯರ ಜೊತೆ ಸಂವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಈ ಭೇಟಿಯು ಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣವನ್ನು ತಂಡಕ್ಕೆ ನೀಡಲಿದೆ’ ಎಂದು ಹೇಳಿದರು.

‘ಭಯೋತ್ಪಾದನೆಗೆ ಬೆಂಬಲ ನೀಡುವವರು ಅಥವಾ ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿರುವವರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ’ ಪ್ರಧಾನಿ ಈ ಸಂದರ್ಭದಲ್ಲಿ ಕರೆ ನೀಡಿದರು.

‘ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ಇರಬೇಕು’ ಎಂದು ಪ್ರಧಾನಿ ಭಾರತಕ್ಕೆ ಪ್ರವಾಸ ಬಂದಿರುವ ಐರೋಪ್ಯ ಒಕ್ಕೂಟದ ಶಾಸನಕರ್ತರ ಜೊತೆ ಮಾತನಾಡುತ್ತಾ ಹೇಳಿದರು.

ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಲಿರುವ ಐರೋಪ್ಯ ಸಂಸತ್ತಿನ ಸದಸ್ಯರ ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ಮಂಗಳವಾರ ಭೇಟಿ ನೀಡಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊತ್ತ ಮೊದಲ ಶಾಸನಕರ್ತರ ತಂಡ ಇದಾಗಿದೆ.

‘ಈ ಭೇಟಿಯು ನಿಮಗೆ ರಾಜ್ಯದ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಈ ಮೂರು ಪ್ರದೇಶಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯವನ್ನು ಚೆನ್ನಾಗಿ ಅರ್ಥ ಮಾಡಿಸಲಿದೆ ಮತ್ತು ಈ ಪ್ರದೇಶದಲ್ಲಿನ ಅಭಿವೃದ್ಧಿ ಮತ್ತು ಆಡಳಿತದ ಆದ್ಯತೆಗಳ ಬಗ್ಗೆ ಸ್ಪಷ್ಟ ಚಿತ್ರವನ್ನು ನೀಡಲಿದೆ’ ಎಂದು ಪ್ರಧಾನಿ ಮೋದಿ ತಂಡಕ್ಕೆ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿಂತೆ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮದ ಸಂದರ್ಭವನ್ನು ಕೂಡಾ ಪ್ರಧಾನಿ ಮೋದಿ ಐರೋಪ್ಯ ಸಂಸದರ ತಂಡಕ್ಕೆ ತಿಳಿಸಿದರು ಎಂದು ಹೇಳಲಾಗಿದೆ.  ಐರೋಪ್ಯ ಒಕ್ಕೂಟದ ಶಾಸನಕರ್ತರ ತಂಡವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸೂಚ್ಯವಾಗಿ ಹೇಳಿದ ವಿಚಾರವನ್ನು ದೋವಲ್ ಅವರು ವಿಷದವಾಗಿ ತಿಳಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಐರೋಪ್ಯ ಸಂಸತ್ತಿನಲ್ಲಿ ಈಸ್ಟ್ ಮಿಡ್‌ಲ್ಯಾಂಡನ್ನು  ಪ್ರತಿನಿಧಿಸುವ ಬಿಲ್ ನ್ಯೂಟನ್ ಡನ್ ಅವರು ’ತಂಡವು ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದೆ’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದರು.

‘ಪ್ರಧಾನಿಯವರು ನಮಗೆ ಅಲ್ಲಿನ ವಿಷಯದ ಬಗ್ಗೆ (೩೭೦ನೇ ವಿಧಿ ರದ್ದು) ವಿವರಿಸಿದರು. ಆದರೆ ಆ ನೆಲ ನಿಜವಾಗಿ  ಹೇಗಿದೆ ಎಂಬುದಾಗಿ ನೋಡಲು ಮತ್ತು ಕೆಲವು ಜನರ ಜೊತೆಗೆ ಮಾತನಾಡಲು ನಾನು ಬಯಸಿದ್ದೇನೆ. ನಾವೆಲ್ಲರೂ ಬಯಸಿರುವುದು ಸಹಜ ಸ್ಥಿತಿ ಮತ್ತು ಪ್ರತಿಯೊಬ್ಬರಿಗೂ ಶಾಂತಿ’ ಎಂದು ಅವರು ನುಡಿದರು.

ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಿರುವ ಭೇಟಿಯನ್ನು ಉಲ್ಲೇಖಿಸಿರುವ ಪ್ರಧಾನ ಮಂತ್ರಿಯವರ ಕಚೇರಿಯ ಹೇಳಿಕೆಯು, ತಮ್ಮ ಅವಧಿಯ ಆರಂಭದಲ್ಲೇ ಭಾರತಕ್ಕೆ ಭೇಟಿ ನೀಡುವ ಮೂಲಕ ಭಾರತದ ಜೊತೆಗಿನ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಮಹತ್ವ ನೀಡಿರುವ ತಂಡದ ಕ್ರಮವನ್ನು ಶ್ಲಾಘಿಸಿದೆ.

‘ಐರೋಪ್ಯ ಒಕ್ಕೂಟದ ಜೊತೆಗಿನ ಭಾರತದ ಬಾಂಧವ್ಯವು ಪ್ರಜಾತಾಂತ್ರಿಕ ಮೌಲ್ಯಗಳ ಬಗೆಗೆ ಹಂಚಿಕೊಳ್ಳಲಾಗಿರುವ ಹಿತಾಸಕ್ತಿಗಳು ಮತ್ತು ಸಮಾನ ಬದ್ಧತೆಯನ್ನು  ಆಧರಿಸಿರುವಂತಹುದು’ ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ವಾಸ್ತವ ಸ್ಥಿತಿ ಅರಿಯಲು ಅಲ್ಲಿಗೆ ಭೇಟಿ ನೀಡಲಿರುವ ೨೮ ಮಂದಿ ಸದಸ್ಯರನ್ನು ಒಳಗೊಂಡ ಯೂರೋಪ್ ಒಕ್ಕೂಟದ ತಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ರದ್ದಾದ ನಂತರ ಉದ್ಭವಿಸಿರುವ ಬೆಳವಣಿಗೆಗಳ ಕುರಿತು ಚರ್ಚಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದವು.

ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ತಜ್ಞರ ಒಂದು ಗುಂಪು ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದಾದ ನಂತರ ಉದ್ಭವಿಸಿರುವ ಸಮಸ್ಯೆಗಳ ಕುರಿತು ಕಾಳಜಿ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ನಂತರ ಯೂರೋಪಿಯನ್ ರಾಷ್ಟ್ರಗಳ ಈ ತಂಡ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಈ ಸಂಬಂಧ ಅಮೆರಿಕಾದ ರಾಜ್ಯ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳಿಗೆ ರಕ್ಷಣೆ ಹಾಗೂ ಗೌರವ ನೀಡಬೇಕು, ಇಂಟರ್ ನೆಟ್ ಮತ್ತು ಮೊಬೈಲ್ ನೆಟ್ ವರ್ಕ್ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿ ಎಂದು ಹೇಳಿದ್ದರು.

ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನ ಮಾನ ರದ್ದಾದ ಸಂದರ್ಭದಿಂದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನದಲ್ಲಿ ಇರಿಸಿದ್ದು, ರಾಜಕೀಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳನ್ನು ವಶಕ್ಕೆ ತೆಗೆದುಕೊಂಡಿರುವುದರ ಕುರಿತು ಕಾಳಜಿ ವ್ಯಕ್ತಪಡಿಸುವುದು ನಮ್ಮ ಕರ್ತವ್ಯ ಎಂದೂ ಅವರು ಹೇಳಿದ್ದರು.

ಸುಬ್ರಮಣಿಯನ್ ಸ್ವಾಮಿ ವಿರೋಧ: ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ ’ಇದು ಅನೈತಿಕ’ ಎಂಬುದಾಗಿ ಖಂಡಿಸಿ, ತತ್ ಕ್ಷಣ ಅದನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.

‘ಈ ಕ್ರಮವು ರಾಷ್ಟ್ರದ ನೀತಿಯ ವಿಕೃತಿಯಾಗಿದೆ. ಐರೋಪ್ಯ ಒಕ್ಕೂಟದ ಸಂಸದರಿಗೆ ಖಾಸಗಿಯಾಗಿ (ಐರೋಪ್ಯ ಒಕ್ಕೂಟದ ಅಧಿಕೃತ ನಿಯೋಗವಲ್ಲ) ಭೇಟಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವ್ಯವಸ್ಥೆ ಮಾಡಿದ್ದು ನನಗೆ ಅಚ್ಚರಿ ಉಂಟು ಮಾಡಿದೆ. ಇದು ರಾಷ್ಟ್ರೀಯ ನೀತಿಯ ವಿಕೃತಿ. ಇದು ಅನೈತಿಕವಾದ್ದರಿಂದ ಸರ್ಕಾರ ತತ್ ಕ್ಷಣ ಇದನ್ನು ರದ್ದು ಪಡಿಸಬೇಕು’ ಎಂದು ಸ್ವಾಮಿ ಟ್ವೀಟ್ ಮಾಡಿದರು.

October 28, 2019 - Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Prime Minister, Spardha, Terror, World |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ