SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವಿಸ್ ಆಯ್ಕೆ


30 devendra fadnavis
ಸರ್ಕಾರ ರಚನೆಯತ್ತ ಮೊದಲ ಹೆಜ್ಜೆ, ಶಿವಸೇನೆ ಜೊತೆ ಮಾತುಕತೆಗೆ ಗಡುವು

ಮುಂಬೈ: ಮಹಾರಾಷ್ಟ್ರದ ಪಕ್ಷ ಶಾಸಕಾಗ ನಾಯಕರಾಗಿ ದೇವೇಂದ್ರ ಫಡ್ನವಿಸ್ ಅವರನ್ನು ಪುನರಾಯ್ಕೆ ಮಾಡುವುದರೊಂದಿಗೆ 2019 ಅಕ್ಟೊಬರ್ 30ರ ಬುಧವಾರ ಭಾರತೀಯ ಜನತಾ ಪಕ್ಷವು ಸರ್ಕಾರ ರಚನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿತು. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಫಡ್ನವಿಸ್ ಅವರು ಶಿವಸೇನೆ ಜೊತೆಗೆ ೨-೩ ದಿನಗಳಲ್ಲಿ ಮಾತುಕತೆ ಪೂರ್ಣಗೊಳಿಸುವುದಾಗಿ ಪ್ರಕಟಿಸಿದರು.

ಬಿಜೆಪಿಯ ಎಲ್ಲ ೧೦೫ ಮಂದಿ ಶಾಸಕರೂ ದಕ್ಷಿಣ ಮುಂಬೈಯ ವಿಧಾನಭವನದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಹಾಜರಿದ್ದರು. ಕೇಂದ್ರ ಸಚಿವ ನರೇಂದ್ರ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ ರೈ ಖನ್ನಾ ಅವರು ಕೇಂದ್ರ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಮ್ಮ ಮೇಲೆ ವಿಶ್ವಾಸ ಇಟ್ಟದ್ದಕ್ಕಾಗಿ ಮತ್ತು ರಾಜ್ಯದ ಸೇವೆ ಸಲ್ಲಿಸಲು ಇನ್ನೊಂದು ಅವಕಾಶ ನೀಡಿದ್ದಕ್ಕಾಗಿ ಫಡ್ನವಿಸ್ ಅವರು ಶಾಸಕರಿಗೆ ಧನ್ಯವಾದ ಅರ್ಪಿಸಿದರು. ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೂ ಈ ಸಂದರ್ಭದಲ್ಲಿ ಫಡ್ನವಿಸ್ ಧನ್ಯವಾದ ಸಲ್ಲಿಸಿದರು. ಮಹಾರಾಷ್ಟ್ರದಲ್ಲಿ ಜನಾದೇಶ ಲಭಿಸಿರುವುದು ’ಮಹಾ ಮೈತ್ರಿ’ಗೆ, ಆದ್ದರಿಂದ ಎರಡು-ಮೂರು ದಿನಗಳಲ್ಲಿ ಶಿವಸೇನೆಯ ಜೊತೆಗೆ ಮಾತುಕತೆ ಪೂರ್ಣಗೊಳಿಸಲಾಗುವುದು ಎಂದು ಅವರು ನುಡಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಫಡ್ನವಿಸ್ ಹೆಸರನ್ನು ಸೂಚಿಸಿದರು. ಪಕ್ಷದ ಹಿರಿಯ ನಾಯಕ ಸುಧೀರ್ ಮುಗಂತಿವಾರ್, ಹರಿಬಾಬು ಬಗಡೆ, ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಮಂಗಲೋರಾಭಟ್  ಲೋಧಾ ಅವರು ಅದನ್ನು ಅನುಮೋದಿಸಿದರು.

ಚುನಾವಣಾ ಫಲಿತಾಂಶ ಬಂದ ದಿನದಿಂದಲೇ ಶಿವಸೇನೆಯು ಬಿಜೆಪಿಯ ಜೊತೆಗೆ ೫೦-೫೦ ಅಧಿಕಾರ ಹಂಚಿಕೆ ಸೂತ್ರದ ಅನುಷ್ಠಾನಕ್ಕಾಗಿ ಪಟ್ಟು ಹಿಡಿದಿದ್ದು  ಉಭಯ ಪಕ್ಷಗಳೂ ಮುಖ್ಯಮಂತ್ರಿ ಸ್ಥಾನವನ್ನೂ ತಲಾ ಎರಡೂವರೆ ವರ್ಷಗಳಂತೆ ಹಂಚಿಕೊಳ್ಳಬೇಕು ಎಂದು ಆಗ್ರಹಿಸುತ್ತಿದೆ.

‘ಬಿಜೆಪಿಯು ಎಂದೂ ೫೦-೫೦ ಸೂತ್ರವನ್ನು ಒಪ್ಪಿಲ್ಲ ಮತ್ತು ತಾವು ಐದು ವರ್ಷಗಳ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿರುವುದಾಗಿ’ ಹೇಳುವ ಮೂಲಕ ಫಡ್ನವಿಸ್ ಅವರು ಮಂಗಳವಾರ ತಮ್ಮ ನಿಲುವನ್ನು ಬಿಗಿಗೊಳಿಸಿದ್ದರು.

ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣಾ ಸಮರದ ಕಾಲದಲ್ಲಿ ಬಿಜೆಪಿ ಮತ್ತು ಶಿವಸೇನೆ ಜಂಟಿ ಹೋರಾಟಕ್ಕಾಗಿ ಮೈತ್ರಿ ಮಾಡಿಕೊಳ್ಳುವಾಗ ಸ್ಥಾನ ಹಂಚಿಕೆ ಸೂತ್ರವನ್ನು ಒಪ್ಪಿಕೊಳ್ಳಲಾಗಿತ್ತು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪ್ರತಿಪಾದಿಸಿದ್ದರು.

ಫಡ್ನವಿಸ್ ಹೇಳಿಕೆಯ ಬಳಿಕ ಮಂಗಳವಾರ ಸಂಜೆ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ಜೊತೆಗೆ ನಡೆಸಲು ಉದ್ದೇಶಿಸಲಾಗಿದ್ದ ಸಭೆಯನ್ನು ಠಾಕ್ರೆ ರದ್ದು ಪಡಿಸಿದ್ದರು. ಫಡ್ನವಿಸ್ ಅವರ ಹೇಳಿಕೆಯ ಬಳಿಕ ಮಾತುಕತೆಯಾಡಲು ಯಾವ ವಿಚಾರವೂ ಉಳಿದಿಲ್ಲ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದರು.

ಮಿತ್ರ ಪಕ್ಷ ಬಿಜೆಪಿಯ ವಿರುದ್ಧ ನಿರಂತರ ದಾಳಿ ನಡೆಸುತ್ತಿದ್ದ ರಾವತ್ ಅವರು ’ಏನಾಗುತ್ತದೋ ಅದು ಆಗುತ್ತದೆ, ಅದು ಮಹಾರಾಷ್ಟ್ರದ ಹಣೆಬರಹ’  ಎಂದು ಬುಧವಾರ ಹೇಳಿಕೆ ನೀಡಿದ್ದರು.

‘ಬುಧವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಭೆ ನಡೆಯಲಿದೆ. ನನಗೆ ಬಿಜೆಪಿ ಸಭೆಯ ಬಗ್ಗೆ ಗೊತ್ತಿಲ್ಲ. ಆದರೆ ಈದಿನ ಶಿವಸೇನೆಯು ತನ್ನ ಶಾಸಕರ ಜೊತೆಗೆ ಯಾವುದೇ ಸಭೆಯನ್ನೂ ಇಟ್ಟುಕೊಂಡಿಲ್ಲ.  ಪಕ್ಷದ ಸಭೆ ಮತ್ತು ಅದರ ಶಾಸಕಾಂಗ ಪಕ್ಷ ನಾಯಕನ ಆಯ್ಕೆಗೆ ಎಲ್ಲರೂ ಕರೆ ನೀಡಬೇಕು’ ಎಂದು ರಾವತ್ ಅವರನ್ನು ಉಲ್ಲೇಖಿಸಿ ಬುಧವಾರ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.

ಈ ಮಧ್ಯೆ, ಸಚಿವರ ಸಂಖ್ಯೆ ಬಗ್ಗೆ ಉಭಯ ಪಕ್ಷಗಳ ಮಧ್ಯೆ ಅನೌಪಚಾರಿಕ ಮಾತುಕತೆ ಆರಂಭವಾಗಿದೆ ಎಂದು ಬಿಜೆಪಿ ಮತ್ತು ಶಿವಸೇನಾ ಶಿಬಿರಗಳ ಒಳಗಿನ ಮೂಲಗಳು ಮಾಹಿತಿ ನೀಡಿದವು.

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಬಿಜೆಪಿಯ ದೃಢವಾಗಿ ನಿಂತಿದೆ. ಆದ್ದರಿಂದ ಈಗ ಶಿವಸೇನೆಯು ಸರ್ಕಾರದಲ್ಲಿ ಸಮಾನ ಸಂಖ್ಯೆಯ ಸಚಿವ ಹುದ್ದೆಗಳು ಮತ್ತು ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿದೆ ಎಂದು ವಿದ್ಯಮಾನಗಳ ಬಗ್ಗೆ ಅರಿವು ಹೊಂದಿರುವ ಸೇನಾ ನಾಯಕರೊಬ್ಬರು ಹೇಳಿದರು.

ಬಿಜೆಪಿ ಮತ್ತು ಶಿವಸೇನೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವಾಗಿ ಹೋರಾಡಿವೆ. ೨೮೮ ಸದಸ್ಯಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ೧೦೫ ಸ್ಥಾನಗಳನ್ನು ಗೆದರೆ, ಶಿವಸೇನೆಯು ೫೬ ಸ್ಥಾನಗಳನ್ನು ಗೆದ್ದಿತ್ತು.

October 30, 2019 - Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ