SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮುಂಬೈಯ ಬಹುತೇಕ ಭಾಗ ೨೦೫೦ ರ ವೇಳೆಗೆ ಸಮುದ್ರಕ್ಕೆ ಆಪೋಶನ?


30 mumbai-Artboard
ವಿಶ್ವದ ಹಲವು ದೊಡ್ಡ ಕರಾವಳಿ ನಗರಗಳೂ ಅಪಾಯದಲ್ಲಿ; ಉಪಗ್ರಹ
ಮಾಹಿತಿ ಆಧಾರಿತ ಹೊಸ ಸಂಶೋಧನಾ ವರದಿಯ ಎಚ್ಚರಿಕೆ

ನ್ಯೂಯಾರ್ಕ್:  ಹೊಸ ಸಂಶೋಧನೆಗಳ ಪ್ರಕಾರ, ಏರುತ್ತಿರುವ ಸಮುದ್ರಗಳು ೨೦೫೦ ರ ವೇಳೆಗೆ ಮುಂಬೈ ಸೇರಿದಂತೆ ವಿಶ್ವದ ಕೆಲವು ದೊಡ್ಡ ಕರಾವಳಿ ನಗರಗಳನ್ನು ಆಪೋಶನ ತೆಗೆದುಕೊಂಡು ಹಿಂದೆ ಯೋಚಿಸಿದ್ದುದಕ್ಕಿಂತ ಮೂರು ಪಟ್ಟು ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಅಪಾಯವಿದೆ ಎಂದು ಹೊಸ ಸಂಶೋಧನಾ ವರದಿಯೊಂದು ಎಚ್ಚರಿಕೆ ನೀಡಿತು.

ನಿಯತಕಾಲಿಕ ಒಂದರಲ್ಲಿ 2019 ಅಕ್ಟೋಬರ್ 29ರ ಮಂಗಳವಾರ ಪ್ರಕಟವಾದ ಸಂಶೋಧನಾ ಪ್ರಬಂಧದ ಲೇಖಕರು ಹಿಂದಿನ ಕಲ್ಪಿತ ಅಂಕಿಸಂಖ್ಯೆಗಳ ಬದಲಿಗೆ ಉಪಗ್ರಹ ಮಾಹಿತಿಯನ್ನು ಆಧರಿಸಿ ಭೂ ಎತ್ತರವನ್ನು ಲೆಕ್ಕಾಚಾರ ಮಾಡುವ ಹೆಚ್ಚು ನಿಖರವಾದ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದು, ವಿಶಾಲ ಪ್ರದೇಶಗಳಲ್ಲಿ ಸಮುದ್ರ ಮಟ್ಟಏರಿಕೆಯ ಪರಿಣಾಮಗಳನ್ನು ಅಂದಾಜು ಮಾಡುವ ಪ್ರಮಾಣಿತ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ವರದಿ ಹೇಳಿತು.

ಹೊಸ ಸಂಶೋಧನೆಯ ಪ್ರಕಾರ ಸುಮಾರು ೧೫೦ ಮಿಲಿಯನ್ (೧೫ ಕೋಟಿ) ಜನರು ಈಗ ವಾಸಿಸುತ್ತಿರುವ ಭೂಪ್ರದೇಶವು ಪ್ರಸ್ತುತ ಶತಮಾನದ ಮಧ್ಯಾವಧಿಯ ವೇಳೆಗೆ ಹೆಚ್ಚಿನ ಉಬ್ಬರವಿಳಿತದ ರೇಖೆಗಿಂತ ಕೆಳಗಿರುತ್ತದೆ. ಅಂದರೆ ಅಷ್ಟೂ ಮಂದಿ ನೀರಿನಡಿ ಮುಳುಗಡೆಯಾಗುವ ಪ್ರದೇಶದಲ್ಲಿ ವಾಸವಾಗಿದ್ದಾರೆ ಎಂದು ವರದಿ ಹೇಳಿತು.

ದಕ್ಷಿಣ ವಿಯೆಟ್ನಾಂ ಸಂಪೂರ್ಣ ಕಣ್ಮರೆ: ವಿಯೆಟ್ನಾಂನಲ್ಲಿ ಸುಮಾರು ೨೦ ದಶಲಕ್ಷಕ್ಕೂ (೨ ಕೋಟಿ) ಹೆಚ್ಚು ಜನರು, ಅಂದರೆ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನರು ಮುಳುಗಡೆ ವ್ಯಾಪ್ತಿಯಲ್ಲಿರುವ ಭೂಮಿಯಲ್ಲಿ ವಾಸಿಸುತ್ತಿದ್ದಾರೆ.

ನ್ಯೂಜೆರ್ಸಿ ಮೂಲದ ’ಕ್ಲೈಮೇಟ್ ಸೆಂಟ್ರಲ್’ ಎಂಬ ವಿಜ್ಞಾನ ಸಂಸ್ಥೆಯ ‘ನೇಚರ್ ಕಮ್ಯುನಿಕೇಷನ್ಸ್ ಜರ್ನಲ್’ ಪ್ರಕಟಿಸಿರುವ ಈ ಸಂಶೋಧನೆಯ ಪ್ರಕಾರ, ವಿಯೆಟ್ನಾಮಿನ ಆರ್ಥಿಕ ಕೇಂದ್ರವಾದ ಹೋ ಚಿ ಮಿನ್ಹ್ ನಗರ ಬಹುಪಾಲು ಕಣ್ಮರೆಯಾಗುತ್ತದೆ. ಭವಿಷ್ಯದ ಜನಸಂಖ್ಯೆಯ ಬೆಳವಣಿಗೆ ಅಥವಾ ಕರಾವಳಿ ಸವೆತಕ್ಕೆ ಕಳೆದುಹೋಗುವ ಭೂಮಿಯ ವಿವರಗಳನ್ನು ಈ ವರದಿ ನೀಡಿಲ್ಲ.

ಉಪಗ್ರಹಗಳನ್ನು ಬಳಸುವ ಪ್ರಮಾಣಿತ ಎತ್ತರದ ಮಾಪನಗಳು ನಿಜವಾದ ನೆಲದ ಮಟ್ಟವನ್ನು ಮರಗಳು ಅಥವಾ ಕಟ್ಟಡಗಳ ಮೇಲ್ಭಾಗದಿಂದ ಪ್ರತ್ಯೇಕಿಸಲು ಹೆಣಗಾಡುತ್ತವೆ ಈ ಕಾರಣಕ್ಕಾಗಿ ತಾವು ಮತ್ತು ಕ್ಲೈಮೇಟ್ ಸೆಂಟ್ರಲ್‌ನ  ಮುಖ್ಯಕಾರ್ಯನಿರ್ವಾಹಕ ಬೆಂಜಮಿನ್ ಸ್ಟ್ರಾಸ್‌ಕೃತಕ ಲೆಕ್ಕಾಚಾರದ ತಪ್ಪಿನ ಪ್ರಮಾಣವನ್ನು ನಿರ್ಧರಿಸಲು ಮತ್ತು ಅದನ್ನು ಸರಿಪಡಿಸಲು  ಬುದ್ಧಿಮತ್ತೆಯನ್ನು ಬಳಸಿರುವುದಾಗಿ ಎಂದು ಹವಾಮಾನ ಕೇಂದ್ರದ ಸಂಶೋಧಕ ಮತ್ತು ಸಂಶೋಧನಾ ಪ್ರಬಂಧದ ಲೇಖಕರಲ್ಲಿ ಒಬ್ಬರಾದ ಸ್ಕಾಟ್ ಎ. ಕುಲ್ಪ್ ಹೇಳಿದರು.

ಥೈಲ್ಯಾಂಡಿನಲ್ಲಿ  ಶೇಕಡಾ ೧೦ ಕ್ಕಿಂತ ಹೆಚ್ಚು ಜನರು  ೨೦೫೦ ರ ಹೊತ್ತಿಗೆ ಮುಳುಗಡೆಯಾಗುವ  ಭೂಮಿಯಲ್ಲಿ ಪ್ರಸ್ತುತ ವಾಸಿಸುತ್ತಿದ್ದಾರೆ, ಹಿಂದಿನ ಅಂದಾಜಿನ  ಪ್ರಕಾರ ಕೇವಲ ಶೇಕಡಾ ೧ರಷ್ಟು ಜನರು ಮಾತ್ರ ಮುಳುಗಡೆ ಪ್ರದೇಶದಲ್ಲಿ ಇದ್ದಾರೆ ಎಂದು ಭಾವಿಸಲಾಗಿತ್ತು. ದೇಶದ ರಾಜಕೀಯ ಮತ್ತು ವಾಣಿಜ್ಯ ರಾಜಧಾನಿ ಬ್ಯಾಂಕಾಕ್ ವಿಶೇಷವಾಗಿ ಈ ಅಪಾಯದ ವ್ಯಾಪ್ತಿಯಲ್ಲಿದೆ.

ಹವಾಮಾನ ಬದಲಾವಣೆಯು ನಗರಗಳ ಮೇಲೆ ಅನೇಕ ವಿಧಗಳಲ್ಲಿ ಒತ್ತಡವನ್ನುಂಟು ಮಾಡುತ್ತದೆ ಎಂದು ಬ್ಯಾಂಕಾಕ್ ನಿವಾಸಿ ಮತ್ತು ವಿಶ್ವಸಂಸ್ಥೆಯ ವಿಪತ್ತು ಅಪಾಯ ಇಳಿಕೆ ಅಧಿಕಾರಿ ಲೊರೆಟ್ಟಾ ಹೈಬರ್ ಗಿರಾರ್ಡೆಟ್ ಹೇಳಿದರು.  ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹೆಚ್ಚಿನ ಸ್ಥಳಗಳು ಪ್ರವಾಹಗಳಿಗೆ ಬಲಿಯಾಗುತ್ತಿವೆ. ಇದು ಬಡರೈತರನ್ನು ಅವರ ನೆಲದಿಂದ ಹೊರದಬ್ಬಿ ಅವರು ನಗರಗಳಲ್ಲಿ ಕೆಲಸ ಅರಸುವಂತೆ ಮಾಡುತ್ತದೆ.

‘ಇದೊಂದು  ಭೀಕರ ಸೂತ್ರವಾಗಿದೆ’ ಎಂದು ಲೊರೆಟ್ಟಾ ನುಡಿದರು.

ಏಷ್ಯಾದ ಪ್ರಮುಖ ಆರ್ಥಿಕ ಯಂತ್ರಗಳಲ್ಲಿ ಒಂದಾದ ಶಾಂಘೈಯಲ್ಲಿ, ನಗರದ ಹೃದಯಭಾಗ ಮತ್ತು ಅದರ ಸುತ್ತುಮತ್ತಲಿನ ಇತರ  ಅನೇಕ ನಗರಗಳನ್ನು ನೀರು ಆಪೋಶನ ತೆಗೆದುಕೊಳ್ಳುವ ಅಪಾಯವಿದೆ.

ಅಧ್ಯಯನದ  ಅಂಕಿಸಂಖ್ಯೆಗಳು  ಆ ಪ್ರದೇಶಗಳ ಅಂತ್ಯವನ್ನು ಉಚ್ಚರಿಸಬೇಕಾಗಿಲ್ಲ.  ಹೊಸ ದತ್ತಾಂಶವು ೧೧೦ ದಶಲಕ್ಷ ಜನರು ಈಗಾಗಲೇ ಹೆಚ್ಚಿನ ಉಬ್ಬರವಿಳಿತದ ರೇಖೆಯ ಕೆಳಗಿರುವ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತೋರಿಸುತ್ತಿದೆ,  ಇದು ಸಮುದ್ರ ತಡೆಗೋಡೆಯಂತ ರಕ್ಷಣಾತ್ಮಕ ಕ್ರಮಗಳ ಅಗತ್ಯವನ್ನು ಸೂಚಿಸುತ್ತದೆ. ಅಂತಹ ರಕ್ಷಣಾತ್ಮಕ ಕ್ರಮಗಳಿಗಾಗಿ ಈ  ನಗರಗಳು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಬೇಕು, ಮತು ಅವರು ಅದನ್ನು ಅತ್ಯಂತ ತ್ವರಿತವಾಗಿ ಮಾಡಬೇಕು ಎಂದು ಸ್ಟ್ರಾಸ್ ಸಲಹೆ ಮಾಡಿದರು.

ಆದರೆ ಆ ಹೂಡಿಕೆಗಳು ಕೂಡಾ ಎಷ್ಟರ ಮಟ್ಟಿಗೆ ಉಪಯುಕ್ತವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ನುಡಿದ ಅವರು ೨೦೦೫ ರಲಿ ಕತ್ರಿನಾ ಚಂಡಮಾರುತ ಬೀಸಿದಾಗ ಸಮುದ್ರ ಮಟ್ಟಕ್ಕಿಂತ ಕೆಳಗಿದ್ದ  ನ್ಯೂಓರ್ಲಿಯನ್ಸ್ ನಗರವು  ನಾಶವಾದುದನ್ನು ಸ್ಟ್ರಾಸ್ ಉದಾಹರಿಸಿದರು. ಅಲ್ಲಿ ಸಾಕಷ್ಟು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೂ ವಿನಾಶ ತಪ್ಪಿಸಲಾಗಲಿಲ್ಲ ಎಂದು ಅವರು ನುಡಿದರು .

ಮುಂಬೈ ಮುಳುಗಡೆ ಭೀತಿ:  ಹೊಸ ಅಧ್ಯಯನದ ಪ್ರಕಾರ ಭಾರತದ ವಾಣಿಜ್ಯ ರಾಜಧಾನಿ ಮತ್ತು ವಿಶ್ವದ ಅತಿದೊಡ್ಡ ನಗರಗಳಲ್ಲಿ ಒಂದಾದ ಮುಂಬೈಯ ಹೆಚ್ಚಿನ ಭಾಗವು ನಾಶವಾಗುವ ಅಪಾಯದಲ್ಲಿದೆ.  ಒಂದು ಕಾಲದಲ್ಲಿ ದ್ವೀಪಗಳ ಸರಣಿಯಾಗಿದ್ದ ನಗರದ ಐತಿಹಾಸಿಕ  ಕೆಳಪಟ್ಟಣ ವಿಶೇಷವಾಗಿ ದುರ್ಬಲ ಸ್ಥಳವಾಗಿದೆ.

ಒಟ್ಟಾರೆಯಾಗಿ, ಹೆಚ್ಚಿನ ನಾಗರಿಕರು ಆಂತರಿಕವಾಗಿ ಸ್ಥಳಾಂತರಗೊಳ್ಳಲು ದೇಶಗಳು ಈಗ ತಯಾರಿ ಪ್ರಾರಂಭಿಸಬೇಕು ಎಂದು ಸಂಶೋಧನೆ ತೋರಿಸುತ್ತದೆ  ಎಂದು ವಲಸೆ ಮತ್ತು ಅಭಿವೃದ್ಧಿಯ ಬಗ್ಗೆ ಕ್ರಮಗಳನ್ನು ಸಂಘಟಿಸುವ ಅಂತರ ಸರ್ಕಾರೀ  ಗುಂಪಿನ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್‌ನ ಡೀನಾ ಅಯೋನೆಸ್ಕೊ ಹೇಳಿದ್ದಾರೆ.

‘ನಾವು ಎಚ್ಚರಿಕೆಯ ಗಂಟೆಗಳನ್ನು ರಿಂಗಣಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅಯೋನೆಸ್ಕೊ ಹೇಳಿದರು. ’ಅದು ಬರುತ್ತಿದೆ ಎಂದು ನಮಗೆ ತಿಳಿದಿದೆ. ಈ ಪ್ರಮಾಣದಲ್ಲಿ ಜನರು ಸ್ಥಳಾಂತರ ಮಾಡಬೇಕಾಗಿ ಬಂದಿರುವ ಆಧುನಿಕ ಪೂರ್ವನಿದರ್ಶನಗಳಿಲ್ಲ’  ಎಂದು ಅವರು ಹೇಳಿದರು.

ಸಾಂಸ್ಕೃತಿಕ ಪರಂಪರೆಯ ಕಣ್ಮರೆಯು ತನ್ನದೇ ಆದ ಮಾದರಿಯ ವಿನಾಶವನ್ನು ತರಬಹುದು. ಕ್ರಿ.ಪೂ ೩೩೦ ರ ಸುಮಾರಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಸ್ಥಾಪಿಸಿದ ಈಜಿಪ್ಟಿನ ಅಲೆಕ್ಸಾಂಡ್ರಿಯಾ ಏರುತ್ತಿರುವ ಕಡಲ ನೀರಿನಲ್ಲಿ ಕಳೆದುಹೋಗಬಹುದು.

ಇತರ ಸ್ಥಳಗಳಲ್ಲಿ, ಏರುತ್ತಿರುವ ಸಮುದ್ರಗಳಿಂದ ಉಂಟಾಗುವ ವಲಸೆ ಪ್ರಾದೇಶಿಕ ಘರ್ಷಣೆಯನ್ನು ಪ್ರಚೋದಿಸಬಹುದು ಅಥವಾ ವಲಸೆ ಘರ್ಷಣೆಗಳನ್ನು ಉಲ್ಬಣಗೊಳಿಸಬಹುದು.

ಇರಾಕಿನ ಎರಡನೇ ಅತಿದೊಡ್ಡ ನಗರವಾದ ಬಸ್ರಾ ೨೦೫೦ ರ ಹೊತ್ತಿಗೆ ಬಹುತೇಕ ನೀರೊಳಗಿರಬಹುದು. ಅದು ಸಂಭವಿಸಿದಲ್ಲಿ, ಪರಿಣಾಮಗಳು ಇರಾಕಿನ ಗಡಿಯಾಚೆಯಲ್ಲೂ ಪ್ರತಿಫಲಿಸಬಹುದು ಎಂದು ಇರಾಕ್ ಸಮರಕಾಲದಲ್ಲಿ ಅಮೆರಿಕದ ಕೇಂದ್ರ ಕಮಾಂಡ್ ಮುಖ್ಯಸ್ಥರಾಗಿದ್ದ ಮೆರೈನ್ ಕಾರ್ಪ್ಸ್‌ನ ನಿವೃತ್ತ ಲೆಫ್ಟಿನೆಂಟ್ ಜನರಲ್ ಜಾನ್ ಕ್ಯಾಸ್ಟೆಲ್ಲಾವ್ ಹೇಳಿದರು.

ಏರುತ್ತಿರುವ ಸಮುದ್ರದ ನೀರಿಗೆ ನಷ್ಟವಾಗುವ ಭೂಮಿಯ ಪ್ರಮಾಣ ಇನ್ನಷ್ಟು ಹೆಚ್ಚಿದರೆ ಈ ಪ್ರದೇಶದಲ್ಲಿ ಮತ್ತಷ್ಟು ಸಾಮಾಜಿಕ ಮತು ರಾಜಕೀಯ ಅಸ್ಥಿರತೆ ಉಂಟಾಗಬಹುದು. ಸಶಸ್ತ್ರ ಸಂಘರ್ಷ ಮತ್ತು ಭಯೋತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಈಗ ಹವಾಮಾನ ಮತ್ತು ಭದ್ರತಾ ಕೇಂದ್ರದ ಸಲಹಾ ಮಂಡಳಿಯಲ್ಲಿರುವ ಕ್ಯಾಸ್ಟೆಲ್ಲಾವ್ ನುಡಿದರು.

‘ಆದ್ದರಿಂದ ಇದು ಪರಿಸರ ಸಮಸ್ಯೆಗಿಂತ ಹೆಚ್ಚು ಆತಂಕಕಾರಿಯಾದ ವಿಷಯ ಮತ್ತು ಮಾನವೀಯ ಭದ್ರತೆ ಹಾಗೂ ಸಂಭವನೀಯ ಸೇನಾ ಸಮಸ್ಯೆ ಕೂಡಾ’ ಎಂದು ಎಂದು ಅವರು ಹೇಳಿದರು.

October 30, 2019 - Posted by | ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, World | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ