SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

೩೭೦ನೇ ವಿಧಿ ರದ್ದು ಮೂಲಕ ಸರ್ದಾರ್ ಪಟೇಲ್ ಕನಸು ನನಸು: ಪ್ರಧಾನಿ ಮೋದಿ


31 pm modi at kevadiaಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುತ್ತಿದ್ದ ‘ಕೃತಕ’ ಗೋಡೆ ಇದೀಗ ನಾಶ

ನವದೆಹಲಿ/ ಕೇವಡಿಯಾ: ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದ ಇತರ ಭಾಗಳಿಂದ ಪ್ರತ್ಯೇಕಿಸುವ ’ಕೃತಕಗೋಡೆಯನ್ನು’ ಸೃಷ್ಟಿಸಿತ್ತು; ಆಗಸ್ಟ್ ೫ರಂದು ಅದನ್ನು ರದ್ದು ಪಡಿಸುವ ಮೂಲಕ ಸರ್ದಾರ್ ಪಟೇಲ್‌ಅವರು ಕಂಡಿದ್ದ ಭಾರತವನ್ನು ಏಕೀಕರಣ ಮಾಡುವ ಕನಸಿನ ಯೋಜನೆಯನ್ನು ಈಡೇರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಅಕ್ಟೋಬರ್ 31ರ ಗುರುವಾರ ಹೇಳಿದರು.

ಪ್ರಧಾನಿಯವರು ಗುಜರಾತಿನ ಕೇವಡಿಯಾದಲ್ಲಿ ಭಾರತದ ಮೊದಲ ಗೃಹ ಸಚಿವರ ೧೪೪ನೇ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸುವ ಸಲುವಾಗಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸರ್ದಾರ್ ಪಟೇಲರ ೧೪೪ನೇ ಜನ್ಮದಿನದಂದು ಪ್ರಧಾನಿ ಮೋದಿಯವರು ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಏಕತಾ ಪ್ರತಿಮೆಯನ್ನು ಕಳೆದ ವರ್ಷ ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ನಿರ್ಮಿಸಿ ಉದ್ಘಾಟಿಸಲಾಗಿತ್ತು.  ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವು ೨೦೧೪ರಿಂದೀಚೆಗೆ ಸರ್ದಾರ್ ಪಟೇಲ್‌ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ‘ರಾಜಕೀಯ ಸ್ಥಿರತೆಯ ಮತ್ತು ಅಭಿವೃದ್ಧಿಯ ಹೊಸ ಯುಗ’ ಉದಯಿಸಿದ್ದು, ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಮತು ಅಭಿವೃದ್ಧಿ ಮಂಡಳಿ (ಬಿಡಿಸಿ) ಚುನಾವಣೆಗಳು ಇತ್ತೀಚೆಗೆ ನಡೆದವು ಎಂದು ಮೋದಿ ಹೇಳಿದರು.

‘ಹೊಸ ಹೆದ್ದಾರಿಗಳು, ರೈಲ್ವೇ ಮಾರ್ಗಗಳು, ಹೊಸ ಆಸ್ಪತ್ರೆಗಳು, ಹೊಸ ಕಾಲೇಜುಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳ ಜನರನ್ನು ಹೊಸ ಎತ್ತರಕ್ಕೆ ಒಯ್ಯಲಿವೆ’ ಎಂದು ಪ್ರಧಾನಿ, ಒಂದೇ ಏಟಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಅಧಿಕೃತವಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮವು ಬುಧವಾರ ಮಧ್ಯರಾತ್ರಿ ಅನುಷ್ಠಾನಗೊಂಡ ಕೆಲವೇ ಗಂಟೆಗಳ ಬಳಿಕ ಹೇಳಿದರು.

೩೭೦ನೇ ವಿಧಿ ಇದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಲ್ಲಿ ೪೦,೦೦೦ಕ್ಕೂ ಹೆಚ್ಚು ಜನರು ಭಯೋತ್ಪಾದನೆಗೆ ಬಲಿಯಾಗಿ ಪ್ರಾಣತೆತ್ತಿದ್ದಾರೆ. ಮುಗ್ಧ ಜನರ ಇಂತಹ ಸಾವನ್ನು ರಾಷ್ಟ್ರ ಎಷ್ಟು ಸಮಯದವರೆಗೆ ನೋಡಬೇಕು? ಈಗ ಗೋಡೆಯನ್ನು ಕೆಡವಿ ಹಾಕಲಾಗಿದೆ ಮತ್ತು ಸರ್ದಾರ್ ಪಟೇಲರ ಕನಸು ನನಸಾಗಿದೆ’ ಎಂದು ೧೮೨ ಮೀಟರ್‌ಎತ್ತರದ ಏಕತಾ ಪ್ರತಿಮೆಯ ಬುಡದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನುಡಿದರು.

ಭಯೋತ್ಪಾದನೆಯ ಮಹಾದ್ವಾರ ಬಂದ್: ಅಮಿತ್ ಶಾ

ಸಂವಿಧಾನದ ೩೭೦ ಮತ್ತು ೩೫ಎ ವಿಧಿಗಳನ್ನು ರದ್ದು ಪಡಿಸುವ ಮೂಲಕ ದೇಶದಲ್ಲಿದ್ದ ಭಯೋತ್ಪಾದನೆಯ ಮಹಾದ್ವಾರಗಳನ್ನು ಪ್ರಧಾನಿ ಮೋದಿ ಮುಚ್ಚಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನವದೆಹಲಿಯಲ್ಲಿ ಹೇಳಿದರು.

ಭಾರತದ ಮೊತ್ತ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಮಿತ್ ಶಾ ಅವರು ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರ ರಾಜ್ಯವು ಹಿಂದಿನ ದಿನ ನಡುರಾತ್ರಿ ರದ್ದಾಗಿ, ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದ ಕೆಲವೇ ಗಂಟೆಗಳ ಬಳಿಕ  ಈ ಮಾತುಗಳನ್ನು ಹೇಳಿದ ಅಮಿತ್ ಶಾ ಅವರು ‘ಸ್ವಾತಂತ್ರ್ಯ ಲಭಿಸಿದ ಬಳಿಕ  ೫೫೦ ರಾಜಪ್ರಭುತ್ವದ ಪ್ರಾಂತ್ಯಗಳಾಗಿ ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ನಾವು ಇಂದು ನಕ್ಷೆಯಲ್ಲಿ ನೋಡುತ್ತಿರುವ ಸಂಯುಕ್ತ ಭಾರತ ಸೃಷ್ಟಿಯಾದದ್ದು ಕೇವಲ ಸರ್ದಾರ್ ಪಟೇಲರ ಪ್ರಯತ್ನಗಳ ಫಲವಾಗಿ’  ಎಂದು ಗೃಹ ಸಚಿವರು ಹೇಳಿದರು.

‘ಸರ್ದಾರ್ ಪಟೇಲ್ ಅವರು ೫೫೦ ಪ್ರಾಂತ್ಯಗಳನ್ನು ಒಗ್ಗೂಡಿಸಿ ಭಾರತದ ಏಕತೆಯನ್ನು ಸಾಧಿಸಿದರು. ಆದರೆ ಜಮ್ಮು ಮತ್ತು ಕಾಶ್ಮೀರವನ್ನು ದೇಶದಲ್ಲಿ ಸೇರ್ಪಡೆ ಮಾಡಲಾಗಲಿಲ್ಲ ಎಂಬ ವಿಷಾದ ಅವರದಾಗಿತ್ತು. ಜಮ್ಮು ಮತ್ತು ಕಾಶ್ಮೀರ ಭಾರತದಲ್ಲಿ ವಿಲೀನಗೊಂಡಿತು, ಆದರೆ ೩೭೦ ಮತ್ತು ೩೫ಎ ವಿಧಿಗಳಿಂದಾಗಿ ಅದು ನಮಗೆ ಸಮಸ್ಯೆಯಾಗಿ ಉಳಿಯಿತು’ ಎಂದು ಶಾ ಹೇಳಿದರು.

೭೦ ವರ್ಷಗಳ ಕಾಲ ಯಾರೊಬ್ಬರೂ ಈ ವಿಧಿಗಳ ಬಗ್ಗೆ ಯೋಚಿಸಲಿಲ್ಲ. ಆದರೆ ೨೦೧೯ರಲ್ಲಿ, ಜನರು ಅಧಿಕಾರದ ಸೂತ್ರವನ್ನು ಪ್ರಧಾನಿ ಮೋದಿಯವರಿಗೆ ಕೊಟ್ಟರು ಮತ್ತು ಆಗಸ್ಟ್ ೫ರಂದು ಸಂಸತ್ತು ೩೭೦ ಮತ್ತು ೩೫ಎ ವಿಧಿಗಳನ್ನು ರದ್ದು ಪಡಿಸಿ ಸರ್ದಾರ್ ಪಟೇಲ್ (ವಲ್ಲಭಭಾಯಿ ಪಟೇಲ್) ಅವರ ಕನಸನ್ನು ನನಸು ಮಾಡಿತು ಎಂದು ಗೃಹ ಸಚಿವರು ನುಡಿದರು.

ಮೋದಿ ಸರ್ಕಾರವು ೨೦೧೪ರಿಂದ ಅಕ್ಟೋಬರ್ ೩೧ನ್ನು ರಾಷ್ಟ್ರೀಯಏಕತಾ ದಿನವಾಗಿ ಆಚರಿಸುತ್ತಿದೆ. ಏಕತಾ ದಿನದ ಅಂಗವಾಗಿ ನವದೆಹಲಿಯಲ್ಲಿ ನಡೆಸಲಾದ ಬೃಹತ್ ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಮಾಜಿಯೋಧರು, ಹಿರಿಯ ನಾಗರಿಕರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರು. ಮೆರವಣಿಗೆಯು ಇಂಡಿಯಾಗೇಟಿನಲ್ಲಿರುವ ಅಮರ ಜವಾನ್ ಜ್ಯೋತಿಯಲ್ಲಿ ಸಮಾಪ್ತಿಗೊಂಡಿತು.

October 31, 2019 - Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Prime Minister, Spardha, World |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ