SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮುಗಿಯದ ಹಗ್ಗ-ಜಗ್ಗಾಟ, ಕಾಂಗ್ರೆಸ್, ಎನ್‌ಸಿಪಿ ಜೊತೆಗೂ ಶಿವಸೇನೆ ಮಾತುಕತೆ


31 shivsena legislature parte meetಶಾಸಕರ ನಾಯಕರಾಗಿ ಏಕನಾಥ ಶಿಂಧೆ ಆಯ್ಕೆ, ಸರ್ಕಾರ ರಚನೆಗೆ ಫಡ್ನವಿಸ್ ಸಿದ್ಧತೆ

ನವದೆಹಲಿ/ ಮುಂಬೈ: ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಕೇಸರಿ ಮೈತ್ರಿಕೂಟದ ಬಿಕ್ಕಟ್ಟು ಬಗೆಹರಿಯದೇ ಇದ್ದರೂ, ನವೆಂಬರ್ ೪-೫ರ ವೇಳೆಗೆ ವಾಂಖೇಡೆ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಬಿಜೆಪಿ ಸಿದ್ಧತೆ ಆರಂಭಿಸಿತು. ಆದರೆ ಶಿವಸೇನೆ- ಬಿಜೆಪಿ ಮಧ್ಯೆ ಹಗ್ಗ ಜಗ್ಗಾಟ ಮುಂದುವರೆದಿದ್ದು, ಸೇನೆಯು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂ ಮಾತುಕತೆ ನಡೆಸಿತು.ಶಿವಸೇನೆಯ ಸಂಜಯ ರಾವತ್ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ಶಿವಸೇನೆಯು ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಕುರಿತ ತನ್ನ ಪಟ್ಟನ್ನು ಸಡಿಲಿಸಿದೆ ಎಂಬ ವರದಿಗಳ ಮಧ್ಯೆಯೇ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ’ಶಿವ ಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಶಾಸಕರ ಸಭೆಯಲ್ಲಿ ಘೋಷಿಸುವ ಮೂಲಕ ತಾನಿನ್ನೂ ಪಟ್ಟು ಸಡಿಲಿಸಿಲ್ಲ ಎಂದು ಸುಳಿವು ನೀಡಿದರು.

ಪಕ್ಷವು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಇನ್ನೂ ಮಾತುಕತೆ ನಡೆಸುತ್ತಿದೆ ಮತ್ತು ಶಿವಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸಿದೆ. ನಾವು ಯಾವುದಕ್ಕೆ ಬದ್ಧರಾಗಿದ್ದೇವೋ ಅದನ್ನೇ ಕೇಳುತ್ತಿದ್ದೇವೆ’ ಎಂದು ಠಾಕ್ರೆ ಹೇಳಿದರು.

೫೦:೫೦ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಬಿಜೆಪಿ ಭರವಸೆ ಕೊಟ್ಟಿಲ್ಲ ಎಂಬುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿರುವುದಕ್ಕೆ ಭ್ರಮನಿರಸನ ವ್ಯಕ್ತ ಪಡಿಸಿದ ಉದ್ಧವ್ ’ಅಮಿತ್ ಶಾ ಮತ್ತು ತಮ್ಮ ಮಧ್ಯೆ ಯಾವುದಕ್ಕೆ ಬದ್ಧತೆ ವ್ಯಕ್ತ ಪಡಿಸಲಾಗಿತ್ತು ಎಂದು ಫಡ್ನವಿಸ್ ಅವರು ಮೊದಲು ಸ್ಪಷ್ಟ ಪಡಿಸಿಕೊಳ್ಳಲಿ’ ಎಂದು ಹೇಳಿದರು.

ಅಧಿಕಾರದ ಹಗ್ಗ ಜಗ್ಗಾಟದ ನಡುವೆಯೇ ಫಡ್ನವಿಸ್ ಅವರು ಈದಿನ ಹಲವಾರು ಪಕ್ಷಗಳ ಶಾಸಕರು ಮತ್ತು ಪಕ್ಷೇತರ ಶಾಸಕರ ಜೊತೆ ಸಭೆ ನಡೆಸಿ ವಿವಿಧ ವಿಷಯಗಳನ್ನು ಚರ್ಚಿಸಿದರು. ಎಲ್ಲ ಶಾಸಕರೂ ಫಡ್ನವಿಸ್ ನಾಯಕತ್ವಕ್ಕೆ ದೃಢ ಬೆಂಬಲ ವ್ಯಕ್ತ ಪಡಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಈ ಮಧ್ಯೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಈದಿನ ನಡೆದ ಮೊದಲ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವಸೇನಾ ಶಾಸಕರು ರಾಜ್ಯ ಸಚಿವ ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದರು.

ಬಿಜೆಪಿ-ಶಿವಸೇನಾ ಮೈತ್ರಿ ಸರ್ಕಾರದಿಂದ ಸಧ್ಯಕ್ಕೆ ೨೯ರ ಹರೆಯದ ಠಾಕ್ರೆ ಕುಡಿ ಹೊರಗುಳಿಯಬೇಕು ಎಂಬ ಸೂತ್ರಕ್ಕೆ ಆದಿತ್ಯ ಠಾಕ್ರೆ ಮತ್ತು ಅವರ ತಂದೆ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತೀರ್‍ಮಾನಿಸಿದ ಬಳಿಕ ಸೇನಾ ಶಾಸಕರು ಶಿಂಧೆ ಅವರನ್ನು ತಮ್ಮ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಿದರು.

ಠಾಕ್ರೆ ಕುಟುಂಬದಿಂದ ಮೊತ್ತ ಮೊದಲಿಗರಾಗಿ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸುತ್ತಿರುವ ಆದಿತ್ಯ ಠಾಕ್ರೆ ಅವರು ತಾವು ಸಧ್ಯಕ್ಕೆ ಸರ್ಕಾರದ ಭಾಗವಾಗಿ ಇರಲು ಬಯಸುವುದಿಲ್ಲ ಎಂಬುದಾಗಿ ಪಕ್ಷ ನಾಯಕರಿಗೆ ಹೇಳಿದ್ದು ಅದಕ್ಕೆ  ಉದ್ಧವ್ ಠಾಕ್ರೆ ಒಪ್ಪಿದ್ದಾರೆ ಎಂದು ಹಿರಿಯ ಸೇನಾ ನಾಯಕರು ಹೇಳಿದರು.

’ಆದಿತ್ಯ ಅವರು ಸರ್ಕಾರಕ್ಕೆ ಸೇರ್ಪಡೆಯಾಗುವ ಮುನ್ನ ಒಂದು ಅಥವಾ ಎರಡು ವರ್ಷಗಳ ಕಾಲ ಶಾಸಕಾಂಗ ಕಲಾಪಗಳನ್ನು  ಮತ್ತು ಆಡಳಿತದ ಪ್ರಕ್ರಿಯೆಯನ್ನು ಕಲಿತುಕೊಳ್ಳಬೇಕು ಎಂಬುದು ಉದ್ಧವ್ ಜಿ ಅವರ ಅಭಿಪ್ರಾಯವಾಗಿದೆ’ ಎಂದು ಹಿರಿಯ ಸೇನಾ ನಾಯಕ ನುಡಿದರು.

ಆದಿತ್ಯ ಠಾಕ್ರೆ ಅವರು ಸರ್ಕಾರ ಸೇರ್ಪಡೆಯಿಂದ ಹಿಂದೆ ಸರಿದಿರುವ ಕಾರಣ ಪಕ್ಷದ ಇಬ್ಬರು ಹಿರಿಯರು ಹಾಗೂ ಹಾಲಿ ಸರ್ಕಾರದಲ್ಲಿ ಸಚಿವರಾಗಿರುವ ಏಕನಾಥ ಶಿಂಧೆ ಅಥವಾ ಸುಭಾಶ್ ದೇಸಾಯಿ ಅವರಲ್ಲಿ ಯಾರಾದರೂ ಒಬ್ಬರು ಸರ್ಕಾರವನ್ನು ಸೇರಬಹುದು ಎಂದು ಉದ್ಧವ್ ಅವರು ನಿರೀಕ್ಷಿಸಿದರು.

ಆದಿತ್ಯ ಠಾಕ್ರೆ ಅವರ ನಿರ್ಧಾರವು ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜೊತೆಗಿನ ನೂತನ ಸರ್ಕಾರದಲ್ಲಿ ಸಚಿವ ಸ್ಥಾನಗಳಿಗಾಗಿ ನಡಸುವ ಸೇನಾ ಮಾತುಕತೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಪುತ್ರ ಆದಿತ್ಯ ಬಿಜೆಪಿ-ಶಿವಸೇನಾ ಸರ್ಕಾರದಲ್ಲಿ ಸಧ್ಯಕ್ಕೆ ಪಾಲ್ಗೊಳ್ಳದ ಕಾರಣ ಉಪಮುಖ್ಯಮಂತ್ರಿ ಸ್ಥಾನವನ್ನು ಉದ್ಧವ್ ಅವರು ಈಗ ಬಯಸದೇ ಇರಬಹುದು ಎಂದು ಹಿರಿಯ ಸೇನಾ ನಾಯಕ ನುಡಿದರು.

ಎರಡು ಮಿತ್ರ ಪಕ್ಷಗಳ  ಮಧ್ಯೆ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಮಾತುಕತೆ ನಡೆದಿದ್ದು, ಬಿಜೆಪಿಯು ಶಿವಸೇನೆಗೆ ೨೦೧೪ರ ಸರ್ಕಾರದಲ್ಲಿ ನೀಡಲಾಗಿದ್ದ ೧೩ ಸ್ಥಾನಗಳಲ್ಲದೆ ಎರಡು ಅಥವಾ ಮೂರು ಸ್ಥಾನಗಳನ್ನು ಮಂತ್ರಿಮಂಡಲದಲ್ಲಿ ನೀಡುವ ಇಂಗಿತ ವ್ಯಕ್ತ ಪಡಿಸಿದೆ. ಶಿವಸೇನೆಯು ಉಪಮುಖ್ಯಮಂತ್ರಿ ಸ್ಥಾನವನ್ನು ಬಯಸದೇ ಇದ್ದರೆ ಇನ್ನೂ ಒಂದು ಸಂಪುಟ ಸ್ಥಾನವನ್ನು ನೀಡಬಹುದು. ಆದರೆ ಸೇನೆಯು ಇನ್ನೂ ಹೆಚ್ಚಿನ ಸ್ಥಾನಗಳನ್ನು ಬಯಸುತ್ತಿದೆ.

ಹೊರಹೋಗುತ್ತಿರುವ ಸರ್ಕಾರದಲ್ಲಿ ಬಿಜೆಪಿಯ ೨೭ ಸಚಿವರನ್ನು ಹೊಂದಿದರೆ, ಶಿವಸೇನೆಯು ೧೩ ಮತ್ತು ಇತರ ಸಣ್ಣ ಮಿತ್ರ ಪಕ್ಷಗಳು ೩ ಮಂತ್ರಿಗಳನ್ನು ಹೊಂದಿದ್ದವು.

ಮುಖ್ಯಮಂತ್ರಿ ಸ್ಥಾನವು ಮಾತುಕತೆಯ ವಿಷಯವೇಅಲ್ಲ ಎಂಬುದಾಗಿ ಬಿಜೆಪಿ ಸ್ಪಷ್ಟ ಪಡಿಸಿದೆ. ಅದೇ ರೀತಿ ಗೃಹ, ಹಣಕಾಸು, ಕಂದಾಯ ಮತ್ತು ನಗರಾಭಿವೃದ್ಧಿ ಖಾತೆಗಳಂತಹ ಮಹತ್ವದ ಖಾತೆಗಳೂ ಮಾತುಕತೆಯ ವಿಷಯವಲ್ಲ ಎಂದು ಬಿಜೆಪಿ ಸ್ಪಷ್ಟ ಪಡಿಸಿದೆ.

ವಸತಿ, ಕೃಷಿ ಇಲಾಖೆಗಳು ಸೇರಿದಂತೆ ಇತರ ಖಾತೆಗಳನ್ನು ಸೇನೆಗೆ ಕೊಡಲು ಬಿಜೆಪಿ ಮುಂದೆ ಬಂದಿದೆ.

ಮಾತುಕತೆಗಳು ಸಂಪುಟದ ರೂಪವನ್ನು ಸ್ಪಷ್ಟಗೊಳಿಸಬಹುದು ಮತ್ತು ಮುಂದಿನ ವಾರದ ಆದಿಯಲ್ಲಿ ನೂತನ ಸರ್ಕಾರ ರಚನೆಯಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ೨೪ರಂದು ಮತಗಳ ಎಣಿಕೆಯ ಬಳಿಕ ಕೇಸರಿ ಮೈತ್ರಿಕೂಟ ಪುನರಾಯ್ಕೆಗೊಂಡ ಬಳಿಕ ಉಭಯ ಪಕ್ಷಗಳು ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತೀವ್ರ ತಿಕ್ಕಾಟ ನಡೆಸಿವೆ.

೨೮೮ ಸದಸ್ಯ ಬಲದ ವಿಧಾನಸಭೆಯಲಿ ಬಿಜೆಪಿಯು ೧೦೫ ಸ್ಥಾನಗಳನ್ನು ಗೆದ್ದಿದ್ದರೆ, ಶಿವಸೇನೆಯು ೫೬ ಸ್ಥಾನಗಳನ್ನು ಗೆದ್ದಿದೆ. ವಿರೋಧಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು ೫೪ ಸ್ಥಾನಗಳನ್ನು ಗೆದ್ದಿದ್ದರೆ ಅದರ ಮಿತ್ರ ಪಕ್ಷ ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿದೆ. ಉಭಯ ಮೈತ್ರಿಕೂಟಗಳಲ್ಲೂ ಇರುವ ಪಕ್ಷೇತರರು ಮತ್ತು ಸಣ್ಣಪಕ್ಷಗಳು ಒಟ್ಠಾಗಿ ೨೯ ಸ್ಥಾನಬಲ ಹೊಂದಿವೆ.

ಲೋಕಸಭಾ ಚುನಾವಣೆಗೆ ಮುನ್ನ ಫೆಬ್ರುವರಿಯಲ್ಲಿ ನಿರ್ಧರಿಸಲಾಗಿದ್ದ ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಆಧಾರದಲ್ಲಿ ಮಾತುಕತೆ ನಡೆಯಬೇಕು ಎಂದು ಸೇನೆಯು ಪಟ್ಟು ಹಿಡಿಯಲು ಆರಂಭಿಸುವುದರೊಂದಿಗೆ ಸರ್ಕಾರ ರಚನೆ ಪ್ರಕ್ರಿಯೆ ನಿಧಾನಗೊಂಡಿದೆ.

ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಯಾವುದೇ ನಿರ್ಧರವೂ ಆಗಿಲ್ಲ ಎಂಬುದಾಗಿ ಹೇಳಿ, ಅದನ್ನು ಹಂಚಿಕೊಳ್ಳುವ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ.

ನಿರೀಕ್ಷೆಯಿಂತೆಯೇ, ಶಿವಸೇನೆಯು ತನ್ನ ಪಟ್ಟನ್ನು ಸಡಿಲಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್ ಬಲ್ ಹೇಳಿದ್ದಾರೆ. ’ಶಿವಸೇನೆಯ ತನ್ನ ಸದಸ್ಯರ ಸ್ಥೈರ್‍ಯವನ್ನು ಬಲಪಡಿಸುವ ಸಲುವಾಗಿ ಬಿಗಿಭಾಷೆಯನ್ನು ಪ್ರಯೋಗಿಸುತ್ತಿದೆ. ಆದರೆ ಬಿಜೆಪಿ ತನ್ನ ನಿಲುವನ್ನು ಬಿಗಿಗೊಳಿಸಿದ ಬಳಿಕ ಅಂತಿಮವಾಗಿ ತನ್ನ ನಿಲುವನ್ನು ಮೆದುಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ. ಪಕ್ಷವು ಕಳೆದ ಐದು ವರ್ಷಗಳಿಂದ ಹೀಗೆಯೇ ಮಾಡುತ್ತಾ ಬಂದಿದೆ’ ಎಂದು ಪ್ರಕಾಶ್ ಬಲ್ ಹೇಳಿದರು.

October 31, 2019 - Posted by | ರಾಷ್ಟ್ರೀಯ, ವಿಶ್ವ/ ಜಗತ್ತು, Flash News, India, Nation, News, Politics, Spardha | , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ