SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ತಪ್ಪು ಸಂದೇಶಕ್ಕಾಗಿ ಮಾಧ್ಯಮಗಳಿಗೆ ಮದ್ರಾಸ್ ಹೈಕೋರ್ಟ್ ತರಾಟೆ


23 madras high court
ಮಹಾಬಲಿಪುರಂ: ಮೋದಿ-ಕ್ಸಿ ಭೇಟಿಯ ಫ್ಲೆಕ್ಸ್ ಬೋರ್ಡ್

ಚೆನ್ನೈ: ಮಹಾಬಲಿಪುರಂನಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಶೃಂಗಕ್ಕೆ ಸಂಬಂಧಿಸಿದಂತೆ ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಲು ತಾನು ಅನುಮತಿ ನೀಡಿದ್ದುದಾಗಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಮದ್ರಾಸ್ ಹೈಕೋರ್ಟ್ 2019 ಅಕ್ಟೋಬರ್ 23ರ ಬುಧವಾರ ನಿರಾಕರಿಸಿತು ಮತ್ತು ತಪ್ಪು ವರದಿಗಳಿಗಾಗಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿತು.

‘ನಾವು ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಲು ಅನುಮತಿ ಕೊಟ್ಟಿರಲಿಲ್ಲ. ನಿಯಮಾವಳಿಗಳನ್ನು ಪಾಲಿಸಿ ಎಂದಷ್ಟೇ ನಾವು ಹೇಳಿದ್ದೆವು. ಮಾಧ್ಯಮವು ಆದೇಶವನ್ನು ಸಮರ್ಪಕವಾಗಿ ಓದದೇ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ರವಾನಿಸಿತು. ಮುಂದಿನಬಾರಿ, ಕೋರ್ಟ್ ಆದೇಶಗಳನ್ನು ತಪ್ಪಾಗಿ ವರದಿ ಮಾಡಿದ್ದು ನಮ್ಮ ಗಮನಕ್ಕೆ ಬಂದಲ್ಲಿ ನ್ಯಾಯಾಂಗ ನಿಂದನೆಯ ಕಷ್ಟಕ್ಕೆ ಗುರಿಯಾಗಬೇಕಾದೀತು’ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

೬೦ಕಿಮೀ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಲು ಈ ತಿಂಗಳ ಆದಿಯಲ್ಲಿ ಹಸಿರು ನಿಶಾನೆ ತೋರಿದ್ದ ನ್ಯಾಯಮೂರ್ತಿ ಎಂ. ಸತ್ಯನಾರಾಯಣನ್ ಮತ್ತು ನ್ಯಾಯಮೂರ್ತಿ ಎನ್ ಶೇಷಸಾಯಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕದಂತೆ ತಾನು ನಿರ್ಬಧಿಸಿರುವುದು ಸರ್ಕಾರವನ್ನಲ್ಲ, ಕೇವಲ ರಾಜಕೀಯ ಪಕ್ಷಗಳನ್ನಾದ್ದರಿಂದ ನಿಜವಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿತ್ತು.

ಸರ್ಕಾರದ ಮನವಿಯನ್ನು ವಿರೋಧಿಸಿದ್ದ ಡಿಎಂಕೆಯು ಆಡಳಿತಾರೂಢ ಎಐಎಡಿಎಂಕೆಯು ’ಹಲವಾರು ಬ್ಯಾನರುಗಳನ್ನು ಹಾಕುವ’ ರಹಸ್ಯ ಕಾರ್‍ಯಸೂಚಿ ಇಟ್ಟುಕೊಂಡಿರುವಂತಿದೆ ಎಂದು ಆಪಾದಿಸಿತ್ತು.

‘ಬ್ಯಾನರ್ ಸಂಸ್ಕೃತಿ’ಯನ್ನು ನ್ಯಾಯಾಲಯವು ನಿಷೇಧಿಸಿದ ಬಳಿಕ, ರಾಜ್ಯಾದ್ಯಂತ ಬ್ಯಾನರುಗಳನ್ನು ಹಾಕಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಸರ್ಕಾರದ ಪರವಾಗಿ ಮುನಿಸಿಪಲ್ ಆಡಳಿತದ ಕಮೀಷನರ್  ಸಲ್ಲಿಸಿದ್ದ ಅರ್ಜಿಯು ಹೇಳಿತ್ತು.  ಕಳೆದ ತಿಂಗಳು ೨೩ರ ಹರೆಯದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಸಾವನ್ನಪ್ಪಿದ ಬಳಿಕ ನ್ಯಾಯಾಲಯವು ಬ್ಯಾನರ್ ಸಂಸ್ಕೃತಿ ವಿರುದ್ಧ ಹರಿಹಾಯ್ದಿತ್ತು.

ಇದಕ್ಕೆ ಮುನ್ನ ರಸ್ತೆ ಬದಿಗಳಲ್ಲಿ ಬ್ಯಾನರ್ ಅಳವಡಿಸುವುದನ್ನು ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್, ಮಹಿಳಾ ಟೆಕ್ಕಿಯ ಸಾವಿನ  ಹಿನ್ನೆಲೆಯಲ್ಲಿ ತಾನು ನೀಡಿದ್ದ ಆದೇಶವನ್ನು ಸರ್ಕಾರವು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

೨೩ರ ಹರೆಯದ ಮಹಿಳೆ ದ್ವಿಚ್ರಕ್ರವಾಹನದಲ್ಲಿ ಸವಾರಿ ಮಾಡುತ್ತಿದ್ದಾಗ ಅಕ್ರಮವಾಗಿ ಹಾಕಲಾಗಿದ್ದ ಬ್ಯಾನರ್ ಒಂದು ಆಕೆಯ ಮೇಲೆ ಬಿದ್ದು ಆಕೆ ಕೆಳಕ್ಕೆ ಬಿದ್ದಿದ್ದಳು. ಆಗ ಹಿಂದಿನಿಂದ ಬಂದ ಟ್ಯಾಂಕರ್ ಆಕೆಯ ಮೇಲೆಯೇ ಚಲಿಸಿತ್ತು. ಈ ಸಾವು ಚೆನ್ನೆಯಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಅದನ್ನು ಅನುಸರಿಸಿ ರಾಜಕೀಯ ಪಕ್ಷಗಳು ಭಿತ್ತಿ ಫಲಕ ಮತ್ತು ಬ್ಯಾನರ್ ಅಳವಡಿಸುವುದನ್ನು ನಿಲ್ಲಿಸುವಂತೆ ತಮ್ಮ ಕಾರ್‍ಯಕರ್ತರಿಗೆ ಸೂಚಿಸಿದ್ದವು.

ಘಟನೆಯ ಬಳಿಕ ತಮಿಳುನಾಡು ಸರ್ಕಾರ, ಚೆನ್ನೈ ಮುನಿಸಿಪಲ್ ಕಾರ್ಪೋರೇಷನ್ ಗೆ ಮಹಿಳೆಯ ಸಾವಿಗೆ ಕಾರಣವಾದ ಫ್ಲೆಕ್ಸ್ ಬೋರ್ಡ್‌ನ್ನು ಅಕ್ರಮವಾಗಿ ಹಾಕಿದ್ದನ್ನು ತಡೆಗಟ್ಟುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ ಆಜ್ಞಾಪಿಸಿತ್ತು.

ಬ್ಯಾನರ್ ಸಂಸ್ಕೃತಿಯ ಹಾವಳಿಯನ್ನು ಕಿತ್ತು ಹಾಕಲು ಕ್ರಮಗಳನ್ನು ಸೂಚಿಸಿ ವರದಿಯೊಂದನ್ನು ಸಲ್ಲಿಸಬೇಕು ಮತ್ತು ಮಹಿಳೆ ಸಾವನ್ನಪ್ಪಿದ ನಿರ್ದಿಷ್ಟ ಪ್ರಕರಣದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗೆ ತಿಳಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.

October 23, 2019 - Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Prime Minister, Spardha |

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ