SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ದೆಹಲಿ ಅನಧಿಕೃತ ಕಾಲೋನಿಗಳ ೪೦ ಲಕ್ಷ ಮಂದಿಗೆ ಮಾಲೀಕತ್ವ ಹಕ್ಕು: ಕೇಂದ್ರ ನಿರ್ಧಾರ


23 modi deli sites
ನವದೆಹಲಿ:
ರಾಷ್ಟ್ರದ ರಾಜಧಾನಿ ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ ವಾಸವಾಗಿರುವ ೪೦ ಲಕ್ಷ ಮಂದಿಗೆ ಈ ಕಾಲೋನಿಗಳ ತಮ್ಮ ಮನೆಗಳ ಮೇಲಿನ ಮಾಲೀಕತ್ವ ಹಕ್ಕು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ  2019 ಅಕ್ಟೋಬರ್ 23ರ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಿರ್ಧರಿಸಿತು.

ಈ ಅನಧಿಕೃತ ಕಾಲೋನಿಗಳಲ್ಲಿನ ಮನೆಗಳು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರಲಿ ಅಥವಾ ಖಾಸಗಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರಲಿ ಅವುಗಳ ಮೇಲಿನ ಮಾಲೀಕತ್ವ ಹಕ್ಕು ಅಂತಹ ಮನೆಗಳಲ್ಲಿ ವಾಸವಾಗಿರುವವರಿಗೆ ಲಭಿಸಲಿದೆ ಎಂದು ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದರು.

ಸೈನಿಕ್ ಫಾಮ್ಸ್, ಮಹೇಂದ್ರು ಎನ್ ಕ್ಲೇವ್ ಮತ್ತು ಅನಂತರಾಮ್ ಡೈರಿಗಳಂತಹ ೬೭ ಶ್ರೀಮಂತ ಆದರೆ ಅನಧಿಕೃತ ಕಾಲೋನಿಗಳು ಮಾತ್ರ ಸರ್ಕಾರದ ನಿರ್ಣಯಕ್ಕೆ ಅಪವಾದವಾಗಿವೆ. ಅಂದರೆ ಈ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವ ಹಕ್ಕು ಲಭಿಸುವುದಿಲ್ಲ.

‘ಬುಧವಾರದ ಸಚಿವ ಸಂಪುಟ ಸಭೆಗೆ ಅತ್ಯಂತ ದೊಡ್ಡ ನಿರ್ಣಯ ಇದು. ಈ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವದ ಹಕ್ಕು ನೀಡುವ ಈ ನಿರ್ಣಯ ಚಾರಿತ್ರಿಕ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಬಣ್ಣಿಸಿದರು. ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಅವರು ನಿರ್ಣಯವನ್ನು ’ದೂರ ದೃಷ್ಟಿಯ ಕ್ರಾಂತಿಕಾರಿ ನಿರ್ಣಯ’ ಎಂದು ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೂಡಾ ಈ ವರ್ಷ ಜುಲೈ ತಿಂಗಳಲ್ಲಿ ಈ ಕಾಲೋನಿಗಳಲ್ಲಿ  ವಾಸವಾಗಿರುವ ಜನರಿಗೆ ಮಾಲೀಕತ್ವ ಹಕ್ಕು ನೀಡುವ ಪ್ರಸ್ತಾವವನ್ನು ಪ್ರಕಟಿಸಿದ್ದರು. ಆಮ್ ಆದ್ಮಿ ಪಕ್ಷಕ್ಕೆ ಈ ವಿಚಾರದಲ್ಲಿ  ಕೇಂದ್ರ ಸರ್ಕಾರದ ಸಮ್ಮತಿ ಲಭಿಸಿದೆ ಎಂದು ಕೇಜ್ರಿವಾಲ್ ಅವರು ಆಗ ಪ್ರಕಟಿಸಿದ್ದರು.

ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಕೆಲವು ತಿಂಗಳುಗಳಷ್ಟು ಮುಂಚಿತವಾಗಿ ದೆಹಲಿಯಲ್ಲಿನ ಈ ೧,೭೯೭ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವ ಹಕ್ಕು ನೀಡುವ ವಿಚಾರದ ಮೇಲೆ ಬೆಳಕು ಬಿದ್ದಿದೆ.

ಆಮ್ ಆದ್ಮಿ ಪಕ್ಷ ಅಥವಾ ಆಪ್ (ಎಎಪಿ) ಸರ್ಕಾರ ತನ್ನ ಕಾಲೆಳೆಯುತ್ತಿದೆ ಎಂಬುದಾಗಿ ಹೇಳುವ ಮೂಲಕ ಹರದೀಪ್ ಪುರಿ ಅವರು ಅರವಿಂದ ಕೇಜ್ರಿವಾಲ್ ಸರ್ಕಾರದ ವಿರುದ್ಧ ಬುಧವಾರ ಹರಿಹಾಯ್ದರು.

‘ಈ ಕಾಲೋನಿಗಳನ್ನು ಗುರುತಿಸುವ ವಿಚಾರವನ್ನು ಮುಂದಕ್ಕೆ ಒಯ್ಯಬೇಕಾದ್ದು ನಿಮ್ಮ ಜವಾಬ್ದಾರಿಯಾಗಿದೆ ಎಂಬುದಾಗಿ ಸೂಚಿಸುವ ಮೂಲಕ ದೆಹಲಿ ಮುಖ್ಯಮಂತ್ರಿಯನ್ನು ಪ್ರೋತ್ಸಾಹಿಸಲು ನಾನು ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ನಗರದ ಸರ್ಕಾರವು ಈ ಕಾಲೋನಿಗಳ ಗಡಿ ಗುರುತಿಸುವ ಕೆಲಸ ನಿರ್ವಹಿಸಲು ಸಂಸ್ಥೆಯೊಂದನ್ನು ಕೂಡಾ ಆಯ್ಕೆ ಮಾಡಲಿಲ್ಲ’ ಎಂದು ಪುರಿ ದೂರಿದರು.

‘೨೦೦೮ರಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ರೂಪಿಸಿದ್ದ ನಿಯಮಾವಳಿಗಳ ಪ್ರಕಾರ ಸಕ್ರಮೀಕರಣಕ್ಕೆ ಈ ಕಾಲೋನಿಗಳ ಗಡಿ ಗುರುತಿಸುವ ಪ್ರಕಿಯೆಯೇ ಆರಂಭಿಕ ಹಂತ’ ಎಂದು ಕೇಂದ್ರ ಸಚಿವ ಹೇಳಿದರು.

‘ದೆಹಲಿ ಸರ್ಕಾರವು ನಿಯಮಾವಳಿಗಳನ್ನು ಪ್ರಕಟಿಸಿದ ೧೧ ವರ್ಷಗಳ ಬಳಿಕ ಕೂಡಾ ಈ ಕಾಲೋನಿಗಳ ಗಡಿ ಗುರುತಿಸುವ ಪ್ರಕ್ರಿಯೆ ಆರಂಭಿಸಿಲ್ಲ, ಬದಲಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ೨೦೨೧ರವರೆಗೆ ಕಾಲಾವಕಾಶ ಕೋರಿದೆ’ ಎಂದು ಅವರು ನುಡಿದರು.

ಹೀಗಾಗಿ ಈ ಹಂತದಲ್ಲಿ ಮಧ್ಯಪ್ರವೇಶಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿತು ಎಂದು ಪುರಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕೇಂದ್ರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ವಾಗತಿಸಿದರು.

ಅನಧಿಕೃತ ಕಾಲೋನಿಗಳ ಸಕ್ರಮೀಕರಣ ಮತ್ತು ಮಾಲೀಕತ್ವ ಹಕ್ಕು ನೀಡುವ ವಿಚಾರವು ನಗರದ ರಾಜಕಾರಣದಲ್ಲಿ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ವಿಷಯವಾಗಿದೆ. ಈ ಕಾಲೋನಿಗಳಲ್ಲಿ ದೆಹಲಿಯ ಜನಸಂಖ್ಯೆಯ ಮೂರನೇ ಒಂದರಷ್ಟು  ಜನರು ವಾಸವಾಗಿದ್ದು, ಅಷ್ಟೂ ಮಂದಿಗೆ ಮತದಾನದ ಹಕ್ಕಿದೆ.

‘ಪ್ಲಾಟಿನ ಗಾತ್ರ ಮತ್ತು ವಾಸಿಸುವಷ್ಟು ಸ್ಥಳದ (ಕಾರ್ಪೆಟ್ ಏರಿಯಾ) ಆಧಾರದಲ್ಲಿ ಸಾಂಕೇತಿಕ ಶುಲ್ಕವನ್ನು ಪಡೆದು ಮಾಲೀಕತ್ವ ಹಕ್ಕು ನೀಡಲಾಗುವುದು’ ಎಂದು ಸಚಿವರು ಹೇಳಿದರು.

ಸರ್ಕಾರಿ ಭೂಮಿಯಲ್ಲಿನ ಕಾಲೋನಿಗಳಿಗೆ ಅನಧಿಕೃತ ಕಾಲೋನಿಗಳನ್ನು ಸುತ್ತುವರಿದಿರುವ ವಸತಿ ಪ್ರದೇಶದ  ಸ್ಥಳಗಳಲ್ಲಿನ ಗರಿಷ್ಠ ವರ್ಗದ ದರದ ಶೇಕಡಾ ೦.೫ (೧೦೦ ಚದರ ಮೀಟರುಗಳಿಗಿಂತ ಕಡಿಮೆ ಸ್ಥಳಕ್ಕೆ), ಶೇಕಡಾ ೧ (೧೦೦-೨೫೦ ಚದರ ಮೀಟರುಗಳು), ಶೇಕಡಾ ೨.೫ (೨೫೦ ಚದರ ಮೀಟರುಗಳಿಗಿಂತ ಹೆಚ್ಚಿನ ಸ್ಥಳ) ಶುಲ್ಕ ಪಡೆಯಲಾಗುವುದು. ಖಾಸಗಿ ಭೂಮಿಯಲ್ಲಿನ ಕಾಲೋನಿಗಳಿಗೆ ಸರ್ಕಾರಿ ಭೂಮಿಯಲ್ಲಿ ವಿಧಿಸಲಾಗುವ ದರದ ಅರ್ಧದಷ್ಟು ಶುಲ್ಕ ವಿಧಿಸಲಾಗುವುದು.

ಕೊಳಚೆಗೇರಿಗಳನ್ನು ಹೊರತು ಪಡಿಸಿ, ಬೆಳವಣಿಗೆ ಹೊಂದಿರುವ ಈ ಅನಧಿಕೃತ ಕಾಲೋನಿಗಳು ಶುಲ್ಕಪಾವತಿಗೆ ಸಿದ್ಧರಿರುವ ಜನರಿಗೆ ವಸತಿ ವ್ಯವಸ್ಥೆ ಒದಗಿಸುವಲ್ಲಿನ ವೈಫಲ್ಯದ ಪರಿಣಾಮವಾಗಿದೆ. ಈ ಹಿಂದೆಯೂ ಬಹುತೇಕ ಚುನಾವಣೆಗಳು ಹತ್ತಿರ ಬಂದಾಗ ಅನಧಿಕೃತ ಕಾಲೋನಿಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಕಟಣೆಗಳು, ನಿರ್ಣಯಗಳು ಹೊರಬಿದ್ದಿದ್ದವು.

October 23, 2019 - Posted by | ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Prime Minister, Spardha | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ