SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಸಿಎಂ ಹುದ್ದೆ: ಲಿಖಿತ ಭರವಸೆ ಶಿವಸೇನೆ ಪಟ್ಟು, ‘ಮಹಾ’ಸರ್ಕಾರ ರಚನೆ ಇನ್ನೂ ಕಗ್ಗಂಟು


26 uddhav with mlasಬಿಜೆಪಿ ಶಾಸಕಾಂಗ ಪಕ್ಷದ ಸಭೆ ಅಕ್ಟೋಬರ್ ೩೦ಕ್ಕೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸರಳ ಬಹುಮತ ಪಡೆದಿದ್ದರೂ, ಶಿವಸೇನೆಯು ೫೦:೫೦ ಸೂತ್ರದಂತೆ ಅಧಿಕಾರ ಹಂಚಿಕೆಗೆ ಬಿಗಿಪಟ್ಟು ಹಿಡಿದ ಪರಿಣಾಮವಾಗಿ ಸರ್ಕಾರ ರಚನೆ 2019 ಅಕ್ಟೋಬರ್ 26ರ  ಶನಿವಾರವೂ ಕಗ್ಗಂಟಾಗಿಯೇ ಮುಂದುವರೆಯಿತು. ಈ ಮಧ್ಯೆ ಬಿಜೆಪಿಯು ಶಾಸಕಾಂಗ ಪಕ್ಷದ ಸಭೆಯನ್ನು ದೀಪಾವಳಿ ಹಬ್ಬ ಮುಗಿದ ಬಳಿಕ ಅಕ್ಟೋಬರ್ ೩೦ರಂದು ನಡೆಸಲು ತೀರ್ಮಾನಿಸಿತು. ಹೀಗಾಗಿ ’ಮಹಾಸರ್ಕಾರ ರಚನೆ’ಯ ಕಗ್ಗಂಟು ಇನ್ನೂ ೪ ದಿನ ವಿಸ್ತರಿಸಿದಂತಾಯಿತು.

೫೦:೫೦ ಸೂತ್ರದ ಪ್ರಕಾರ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಬಗ್ಗೆ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯಬೇಕು ಎಂದು ಶಿವಸೇನಾ ಶಾಸಕರು 2019 ಅಕ್ಟೋಬರ್ 26ರ  ಶನಿವಾರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಗ್ರಹಿಸಿದರು. ಆದರೆ ಅಂತಿಮ ನಿರ್ಧಾರವನ್ನು ಠಾಕ್ರೆ ಅವರಿಗೆ ವಹಿಸಿದರು.

ಶಿವಸೇನೆಯ ಕೆಲವು ಶಾಸಕರು ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಬೇಕು ಎಂಬ ಪ್ರಸ್ತಾಪವನ್ನು ಬೆಂಬಲಿಸಿದರು, ಆದಾಗ್ಯೂ ಸರ್ಕಾರ ರಚನೆ ಕುರಿತ ಅಂತಿಮ ನಿರ್ಧಾರವನ್ನು ಉದ್ಧವ್ ಠಾಕ್ರೆಯವರಿಗೆ ಬಿಟ್ಟರು ಎಂದು ವರದಿಗಳು ತಿಳಿಸಿದವು.

ಚುನಾವಣೆಯಲ್ಲಿ ಗೆದ್ದಿರುವ ೫೬ ಮಂದಿ ಶಿವಸೇನಾ ಶಾಸಕರು ಶನಿವಾರ ಮುಂಬೈಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಅವರ ಮಾತೋಶ್ರೀ ನಿವಾಸದಲ್ಲಿ ಭೇಟಿ ಮಾಡಿದರು ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರದ ಸಮಾನ ಹಂಚಿಕೆ  ಒಪ್ಪಂದವನ್ನು ಗೌರವಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯುವಂತೆ ಆಗ್ರಹಿಸಿದರು. ಈ ವರ್ಷ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಕಾಲದಲ್ಲಿ ಮೈತ್ರಿಕೂಟವು ಒಪ್ಪಿಕೊಳ್ಳಲಾಗಿತ್ತು ಎನ್ನಲಾಗಿರುವ ’ಮಹಾರಾಷ್ಟ್ರದಲ್ಲಿ ಅಧಿಕಾರದ ಸಮಾನ ಹಂಚಿಕೆ ಒಪ್ಪಂದ’ಕ್ಕೆ ಬದ್ಧವಾಗುವಂತೆ ಬಿಜೆಪಿಯನ್ನು ಆಗ್ರಹಿಸಬೇಕು ಎಂದು ಅವರು ಹೇಳಿದರು.

ಬಿಜೆಪಿಯು ಒಪ್ಪಂದವನ್ನು ಗೌರವಿಸದೆ, ಅಕ್ಟೋಬರ್ ೨೧ರಂದು ನಡೆದ ಚುನಾವಣೆಯಲ್ಲಿ ವಿಧಾನಸಭೆಯ ೨೮೮ ಸ್ಥಾನಗಳ ಪೈಕಿ ಹೆಚ್ಚಿನ ಸ್ಥಾನಗಳಿಗೆ ಸ್ಪರ್ಧಿಸಿ, ಶಿವಸೇನೆಗೆ ಕೇವಲ ೧೨೪ ಸ್ಥಾನಗಳನ್ನು ಹೋರಾಟಕ್ಕಾಗಿ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯಬೇಕಾದ ಅಗತ್ಯ ಬಂದಿದೆ ಎಂದು ಸೇನಾ ಸಂಸತ್ ಸದಸ್ಯರು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಥಾಣೆಯ ಓವಾಲ-ಮಜಿವಾಡದ ಪಕ್ಷದ ಶಾಸಕ ಪ್ರತಾಪ್ ಸರ್ನಾಯಕ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಸಮಾನವಾಗಿ ಹಂಚಿಕೊಳ್ಳುವ ಬಗ್ಗೆ ಬಿಜೆಪಿ ಲಿಖಿತ ಭರವಸೆ ನೀಡದ ಹೊರತು ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗುವುದಿಲ್ಲ ಎಂದು ನುಡಿದರು.

‘ಅಂತಿಮ ನಿರ್ಧಾರ ಕೈಗೊಳ್ಳಲು ಉದ್ಧವ್ ಜಿ ಅವರಿಗೆ ಪೂರ್ಣ ಅಧಿಕಾರ ನೀಡಲು ಎಲ್ಲ ಶಾಸಕರು ನಿರ್ಧರಿಸಿದರು. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವುದು ಸೇರಿದಂತೆ ೫೦:೫೦ ಅಧಿಕಾರ ಹಂಚಿಕೆ ಒಪ್ಪಂದವನ್ನು ಬಿಜೆಪಿಯ ವರಿಷ್ಠ ನಾಯಕತ್ವವು ಗೌರವಿಸಬೇಕು ಎಂದು ಸಭೆ ನಿರ್ಧರಿಸಿತು. ನಾವು ಬಿಜೆಪಿಯಿಂದ ಲಿಖಿತ ಭರವಸೆಯನ್ನು ಬಯಸುತ್ತೇವೆ’ ಎಂದು ಸರ್ನಾಯಕ್ ಹೇಳಿದರು.

ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕು ಎಂಬುದಾಗಿ ನಾವು ಬಯಸಿದ್ದರೂ, ಉನ್ನತ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಗುಹಗರ್ ಶಾಸಕ ಭಾಸ್ಕರ ಜಾಧವ್ ಹೇಳಿದರು.

ಶಿವಸೇನೆಯು ತಾನು ಸ್ಪರ್ಧಿಸಿದ್ದ ೧೨೪ ಸ್ಥಾನಗಳ ಪೈಕಿ ೫೬ ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯು ತಾನು ಸ್ಪರ್ಧಿಸಿದ್ದ ೧೬೪ ಸ್ಥಾನಗಳ ಪೈಕಿ ೧೦೫ ಸ್ಥಾನಗಳನ್ನು ಜಯಿಸಿದೆ.

ಸುದ್ದಿ ಸಂಸ್ಥೆಯ ವರದಿ ಪ್ರಕಾರ ಪಕ್ಷದ ಕೆಲವು ಶಾಸಕರು ಉದ್ಧವ್ ಠಾಕ್ರೆಯ ಅವರ ಪುತ್ರ ಆದಿತ್ಯ ಠಾಕ್ರೆಯವರು ಮುಖ್ಯಮಂತ್ರಿಯಾಗುವುದನ್ನು ತಾವು ಬಯಸಿರುವುದಾಗಿ ಹೇಳಿದರು.

‘ಆದಿತ್ಯ ಠಾಕ್ರೆ ಅವರು ಮುಂದಿನ ಮುಖ್ಯಮಂತ್ರಿಯಾಗುವುದನ್ನು ನಾವು ನೋಡಬಯಸಿದ್ದೇವೆ. ಆದರೆ ಉದ್ಧವ್ ಜಿ ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಪ್ರತಾಪ್ ಸರ್ನಾಯಕ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯು ವರದಿ ಮಾಡಿತು.

ಆದಿತ್ಯ ಠಾಕ್ರೆ ಅವರು ಠಾಕ್ರೆ ಕುಟುಂಬದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಮೊತ್ತ ಮೊದಲ ವ್ಯಕ್ತಿಯಾಗಿದ್ದು, ಚುನಾವಣೆಗೆ ಮುಂಚೆ ಉಪ ಮುಖ್ಯಮಂತ್ರಿ ಸ್ಥಾನದ ಸಂಭಾವ್ಯ ಅಭ್ಯರ್ಥಿ ಎಂಬುದಾಗಿ ಚುನಾವಣೆಗೆ ಮುನ್ನ ವ್ಯಾಪಕವಾಗಿ ಭಾವಿಸಲಾಗಿತ್ತು.

ಶಿವಸೇನೆಯು ತಮ್ಮನ್ನು ಸಂಪರ್ಕಿಸಿದರೆ ಮುಖ್ಯಮಂತ್ರಿ ಹುದ್ದೆಗೆ ಅವರ ಹಕ್ಕು ಪ್ರತಿಪಾದನೆಯನ್ನು  ಪಕ್ಷದ ವರಿಷ್ಠ ಮಂಡಳಿಯು ಪರಿಗಣಿಸುವುದು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರೊಬ್ಬರು ಶನಿವಾರ ಹೇಳುವ ಮೂಲಕ ಚುನಾವಣಾ ನಂತರದ ಬೆಳವಣಿಗೆಗಳಿಗೆ ಹೊಸ ಆಯಾಮ ನೀಡಿದ್ದರು.

‘ನಮಗೆ ವಿರೋಧ ಪಕ್ಷದ ಪಾತ್ರವನ್ನು ವಹಿಸಲಾಗಿದೆ ಮತ್ತು ನಾವು ಅದನ್ನು ಮಾಡುತ್ತೇವೆ. ಆದರೆ, ಏನಾದರೂ ಪರ್‍ಯಾಯ ಬಗ್ಗೆ ಚರ್ಚಿಸಬೇಕಾಗಿದ್ದರೆ, ಆಗ ಶಿವಸೇನೆಯು ನಮ್ಮ ಬಳಿಗೆ ಬರಬೇಕು. ಇಲ್ಲಿಯವರೆಗೆ ಅವರು ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ವಿಜಯ್ ವಡೆಟ್ಟಿವಾರ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಮಹಾರಾಷ್ಟ್ರ ಬಿಜೆಪಿಯು ತನ್ನ ಸದನ ನಾಯಕನ ಆಯ್ಕೆಗಾಗಿ, ತನ್ನ ನೂತನ ಚುನಾಯಿತ ಶಾಸಕರ ಸಭೆಯನ್ನು ದೀಪಾವಳಿ ಹಬ್ಬದ ಬಳಿಕ ಅಕ್ಟೋಬರ್ ೩೦ಕ್ಕೆ ಸಮಾವೇಶಗೊಳಿಸಿದೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಕಾಂತ  ಪಾಟೀಲ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.

October 26, 2019 - Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ