SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

೫.೪ ಲಕ್ಷ ಹಣತೆಗಳ ಬೆಳಕಿನಲ್ಲಿ ಅಯೋಧ್ಯೆ ಝಗಮಗ, ಹೊಸ ವಿಶ್ವದಾಖಲೆ ಸೃಷ್ಟಿ


This slideshow requires JavaScript.

ದೀಪೋತ್ಸವಕ್ಕೆ ಸಾಕ್ಷಿಯಾದ ಸಿಎಂ ಯೋಗಿ ಆದಿತ್ಯನಾಥ್

ನವದೆಹಲಿ/ ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿನ ’ರಾಮ್ ಕಿ ಪೈದಿ’2019 ಅಕ್ಟೋಬರ್ 26ರ  ಶನಿವಾರ ಬೆಳಕಿನ ಹಬ್ಬವಾದ ’ದೀಪೋತ್ಸವ’ದಲ್ಲಿ ೫ ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳ ದೀಪಗಳ ಬೆಳಕಿನಲ್ಲಿ ಝಗಮಗಿಸಿತು. ಇದರೊಂದಿಗೆ ಹೊಸ ವಿಶ್ವದಾಖಲೆಯೂ ಸೃಷ್ಟಿಯಾಯಿತು.

ರಾಜ್ಯದ ಬಿಜೆಪಿ ಸರ್ಕಾರವು ಆಯೋಜಿಸಿದ ದೀಪೋತ್ಸವದ ಅಂಗವಾಗಿ ಅಯೋಧ್ಯೆಯನ್ನು ಝಗಮಗಿಸುವಂತೆ ಮಾಡಿದ ಈ ಸಂಭ್ರಮಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಕ್ಷಿಯಾದರು.

ಈ ವರ್ಷದ ದೀಪೋತ್ಸವದಲ್ಲಿ ಫಿಜಿಯ ಸಚಿವೆ ವೀಣಾ ಭಟ್ನಾಗರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮೊದಲ ಹಣತೆಯನ್ನು ಬೆಳಗಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ರಾಜ್ಯ ಸರ್ಕಾರದ ಹಲವಾರು ಸಚಿವರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಲಕ್ಷ ದೀಪೋತ್ಸವ’ವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ರಾಮ್ ಕಿ ಪೈದಿಯಲ್ಲಿ ಜಮಾಯಿಸಿದ್ದರು.

ಭಾರತೀಯ ಮೂಲದವರಾದ ಫಿಜಿಯ ಮಹಿಳೆಯರು, ಮಕ್ಕಳು ಮತ್ತು ದಾರಿದ್ರ್ಯ ನಿವಾರಣಾ ಸಹಾಯಕ ಸಚಿವೆ ವೀಣಾ ಭಟ್ನಾಗರ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶುಕ್ರವಾರ ಸಂಜೆಯೇ ಲಕ್ನೋ ತಲುಪಿದ್ದರು. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದರು.

೨೦೧೭ರ ಮಾರ್ಚ್ ತಿಂಗಳಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದ ೭ ತಿಂಗಳ ಬಳಿಕ, ಯೋಗಿ ಆದಿತ್ಯನಾಥ್ ಸರ್ಕಾರವು ೨೦೧೭ರ ಅಕ್ಟೋಬರಿನಲ್ಲಿ ಮೊತ್ತ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಆಚರಿಸಿತ್ತು. ಕಳೆದ ವರ್ಷವೂ ದೀಪೋತ್ಸವ ನಡೆದಿತ್ತು. ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜುಂಗ್-ಸೂಕ್ ಅವರು ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಳೆದ ವರ್ಷ ೩೦೦,೧೫೨ ಹಣತೆಗಳನ್ನು ಬೆಳಗುವ ಮೂಲಕ ವಿಶ್ವದಾಖಲೆ ಸ್ಥಾಪಿಸಲಾಗಿತ್ತು. ಈ ವರ್ಷ ಈ ದಾಖಲೆಯನ್ನು ಮುರಿದು ಹೊಸ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸುವ ಸಲುವಾಗಿ ಜಿಲ್ಲಾ ಆಡಳಿತವು ೫,೫೧,೦೦೦ ಮಣ್ಣಿನ ಹಣತೆಗಳನ್ನು ಬೆಳಗುವ ಕಾರ್‍ಯಕ್ರಮ ಹಮ್ಮಿಕೊಂಡಿತ್ತು.

ಯೋಜನೆಯ ಪ್ರಕಾರ ರಾಮ್ ಕಿ ಪೈದಿಯಲ್ಲಿ ಸುಮಾರು ೪ ಲಕ್ಷ ಮತ್ತು ದೇಗುಲ ನಗರಿಯ ಇತರ ಕಡೆಗಳಲ್ಲಿ ಉಳಿದ ಹಣತೆಗಳನ್ನು ಬೆಳಗಲಾಯಿತು.

ದೀಪೋತ್ಸವವನ್ನು ದಾಖಲಿಸಿಕೊಳ್ಳಲು ಗಿನ್ನೆಸ್ ವಿಶ್ವದಾಖಲೆಯ ತಂಡವೊಂದು ಕೂಡಾ ಅಯೋಧ್ಯೆಗೆ ಆಗಮಿಸಿತ್ತು.

ಹಣತೆಗಳನ್ನು ಬೆಳಗುವುದಕ್ಕೆ ಮುನ್ನ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಶ್ರೀರಾಮನ ಟ್ಯಾಬ್ಲೋ ಮೆರವಣಿಗೆಯನ್ನೂ ನಡೆಸಲಾಯಿತು.

ಮಧ್ಯಪ್ರದೇಶ, ಜಾರ್ಖಂಡ್ ಮತ್ತು ರಾಜಸ್ಥಾನದಂತಹ ವಿವಿಧ ರಾಜ್ಯಗಳ ಕಲಾವಿದರು ದೀಪೋತ್ಸವಕ್ಕಾಗಿ ಶ್ರೀರಾಮ, ಶ್ರೀಕೃಷ್ಣ ಮತ್ತು ಹನುಮಾನ್ ವೇಷಗಳನ್ನು ಧರಿಸಿ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳ ಮೂಲಕ ಸಂಭ್ರಮಕ್ಕೆ ಕಳೆಗಟ್ಟಿದರು.

‘ಇಲ್ಲಿಗೆ ಬಂದಿರುವುದಕ್ಕೆ ಅತ್ಯಂತ ಖುಷಿಯಾಗುತ್ತಿದೆ. ಇದೊಂದು ಮಹಾನ್ ಅನುಭವ. ನಮಗೆ ಇಲ್ಲಿ ಹಲವಾರು ಮಂದಿಯನ್ನು ವಿವಿಧ ರಾಜ್ಯಗಳ ಕಲಾವಿದರನ್ನು ಭೇಟಿ ಮಾಡಲು ಸಾಧ್ಯವಾಯಿತು’ ಎಂದು ಕಲಾವಿದರೊಬ್ಬರು ಸುದ್ದಿ ಸಂಸ್ಥೆಯ ಬಳಿ ಮಾತನಾಡುತ್ತಾ ಹೇಳಿದರು.

ಅಮೋಘ ದೀಪೋತ್ಸವ ಸಂಭ್ರಮಕ್ಕಾಗಿ ಪ್ರದೇಶದ ನಿವಾಸಿಗಳಲ್ಲದೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸಿದ್ದರು.

‘ನಾವು ಇಲ್ಲಿಗೆ ಮಧ್ಯಪ್ರದೇಶದ ನೇಪಾನಗರದಿಂದ ಬಂದಿದ್ದೇವೆ. ದೀಪೋತ್ಸವದಲ್ಲಿ ಪಾಲ್ಗೊಂಡಿರುವುದು ನಮ್ಮಗೆ ಗೌರವದ ಸಂಗತಿಯಾಗಿದೆ. ನಾವು ಇಲ್ಲಿ ಭಗೋರಿಯಾ ಜಾನಪದ ನೃತ್ಯವನ್ನು ಪ್ರದರ್ಶಿಸುತ್ತಿದ್ದೇವೆ’ ಎಂದು ನೇಪಾನಗರ ಮೂಲಕ ನೃತ್ಯ ತಂಡದ ಅಧ್ಯಕ್ಷ ಮುಖೇಶ ದರ್ಬಾರ್ ಹೇಳಿದರು.

ಅಯೋಧ್ಯೆಯಲ್ಲಿ ಮೂರು ದಿನಗಳ ದೀಪೋತ್ಸವ ಸಂಭ್ರಮ ಗುರುವಾರ ಆರಂಭವಾಗಿತ್ತು. ಎರಡನೇ ದಿನ ಗುಪ್ತರ ಘಾಟ್ ಮತ್ತು ಭಜನಾಸ್ಥಳದಲ್ಲಿ ಹಲವಾರು ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂಡೋನೇಷ್ಯ ಮತ್ತು ನೇಪಾಳದ ಕಲಾವಿದರು ರಾಮಲೀಲಾ ಪ್ರದರ್ಶಿಸಿದರು.

ಬಿಹಾರದ ಜಾನಪದ ಗೀತೆಗಳೂ ಮತ್ತು ಛತ್ತಿಸ್ ಗಢದ ಜಾನಪದ ನೃತ್ಯ ಎರಡನೇ ದಿನದ ಪ್ರಮುಖ ಆಕರ್ಷಣೆಗಳಾಗಿದ್ದವು.

ದೀಪಾವಳಿಯ ದಿನವಾದ ಭಾನುವಾರ ರಾಮಕೋಟ್ ಪ್ರದೇಶದಲ್ಲಿನ ಎಲ್ಲ ದೇವಾಲಯಗಳು ಮತ್ತು ರಾಮಜನ್ಮಭೂಮಿ-ಬಾಬರಿ ಮಸೀದಿ ಆವರಣದ ಸುತ್ತಮುತ್ತಣ ಮನೆಗಳಲ್ಲಿ ಸಂತರು ೧,೫೦,೦೦ ಹಣತೆಗಳನ್ನು ಬೆಳಗಲಿದ್ದಾರೆ.

ರಾಮ ಜನ್ಮಭೂಮಿ ನ್ಯಾಸವು ವಿವಾದಿತ ನಿವೇಶನ ಮತ್ತು ಸುತ್ತಮುತ್ತಣ ಜಾಗದಲ್ಲಿ ದೀಪಾವಳಿಯಂದು ಹಣತೆ ಬೆಳಗಲು ಅನುಮತಿ ನೀಡುವಂತೆ ಫೈಜಾಬಾದ್ ವಿಭಾಗದ ಡಿವಿಷನಲ್ ಕಮೀಷನರ್ ಅವರ ಬಳಿ ಅನುಮತಿ ಕೋರಿತ್ತು. ಆದರೆ ಅದಕ್ಕೆ ಅನುಮತಿ ನಿರಾಕರಿಸಲಾಗಿತ್ತು.

October 26, 2019 - Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, culture, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು | , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ